ರಿತನ್ಯಾ ವಿಜಯ್
ಕನ್ನಡ ಚಿತ್ರರಂಗಕ್ಕೆ ನವ ನಾಯಕಿಯಾಗಿ ಕಾಲಿಟ್ಟಿರುವ ರಿತನ್ಯಾ ವಿಜಯ್ ತಮ್ಮ ಕುರಿತು ಇಲ್ಲಿ ಏನು ಹೇಳಿದ್ದಾರೆ.....?
ನಟ ದುನಿಯಾ ವಿಜಯ್ ರ `ಲ್ಯಾಂಡ್ ಲಾರ್ಡ್' ಸಿನಿಮಾ ತೆರೆಗೆ ಬಂದು ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಈ ಚಿತ್ರದಲ್ಲಿ ರಚಿತಾ ರಾಮ್ ದುನಿಯಾ ವಿಜಯ್ ರ ಜೋಡಿಯಾಗಿದ್ದರೆ, ವಿಜಯ್ ಪುತ್ರಿ ರಿತನ್ಯಾ ವಿಜಯ್ ಸಹ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಪ್ಪನ ಜೊತೆಗೆ ಅಭಿನಯಿಸಿರೋ ಈ ಚಿತ್ರದಲ್ಲಿ ಕೂಡ ಅಪ್ಪ ವಿಜಯ್ ಗೆ ಮಗಳಾಗಿ ಭಾಗ್ಯಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಒಂದು ಕಡೆಗೆ ಹಳ್ಳಿಯ ಸಾಮಾನ್ಯ ಹೆಣ್ಣುಮಗಳ ರೀತಿ ಕಾಣಿಸುತ್ತಾರೆ. ಮತ್ತೊಂದು ಕಡೆ ಖಾಕಿ ಸಮವಸ್ತ್ರ ಧರಿಸಿ ಥೇಟ್ ಖಡಕ್ ಅಧಿಕಾರಿಯ ರೀತಿ ಕಾಣಿಸಿಕೊಂಡಿದ್ದಾರೆ. ಇದರೊಡನೆ ರಿತನ್ಯಾ `ಜವರ' ಸಿನಿಮಾ ಮೂಲಕ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಿದ್ದಾರೆ.
`ಲ್ಯಾಂಡ್ ವಾರ್ಡ್’ ಚಿತ್ರದಿಂದ ಎಂಟ್ರಿ `ಯಾ ಕುನ್ನಿ' ಸಿನಿಮಾ ಖ್ಯಾತಿಯ ನಿರ್ದೇಶಕ ಪ್ರದೀಪ್ ದಳವಾಯ್ ಸಾರಥ್ಯದಲ್ಲಿ, ಚಿದಾವೃಷ್ ರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರ `ಜವರ.' ಈ ಸಿನಿಮಾದ ಮುಹೂರ್ತ ಇತ್ತೀಚೆಗೆ ನೆರವೇರಿದ್ದು, ಚಿತ್ರೀಕರಣ ಭರದಿಂದ ಸಾಗಿದೆ. ಸಿನಿಮಾದಲ್ಲಿ `ಆಪರೇಶನ್ ಅಲಮೇಲಮ್ಮ' ಖ್ಯಾತಿಯ ರಿಷಿ ನಾಯಕ ನಟನಾಗಿ ಅಭಿನಯಿಸುತ್ತಿದ್ದರೆ, ಅವರಿಗೆ ನಾಯಕಿಯಾಗಿ ರಿತನ್ಯಾ ಅಭಿನಯಿಸುತ್ತಿದ್ದಾರೆ.
ಪ್ರತಿಭೆ ಜೊತೆಗೆ ತಂದೆಯ ಬೆಂಬಲ ಸಿಕ್ಕಿರುವ ರಿತನ್ಯಾ ಕನ್ನಡ ಚಿತ್ರರಂಗದ ಭವಿಷ್ಯದ ಪ್ರಮುಖ ನಟಿಯರಲ್ಲಿ ಒಬ್ಬರಾಗುವ ನಿರೀಕ್ಷೆ ಇದೆ, ಇಂತಹ ಅಪರೂಪದ ನಟಿಯ ಕಿರು ಪರಿಚಯ ಇಲ್ಲಿದೆ ರಿತನ್ಯಾಳ ಹಿನ್ನೆಲೆ ರಿತನ್ಯಾ ವಿಜಯ್ (ಮೋನಿಕಾ) ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ರ ಹಿರಿಯ ಪುತ್ರಿ. ನಟನೆಗೆ ಬೇಕಾದ ತರಬೇತಿಯನ್ನು ಮುಂಬೈನ ಅನುಪಮ್ ಖೇರ್ ನಟನಾ ತರಬೇತಿ ಶಾಲೆಯಲ್ಲಿ ಪಡೆದುಕೊಂಡಿದ್ದಾರೆ. ಆನಂತರ, ಬೆಂಗಳೂರಿನ ರಂಗತರಂಗ ರಂಗಭೂಮಿಯಲ್ಲಿ ಹಲವಾರು ನಾಟಕಗಳನ್ನೂ ಸಹ ಮಾಡಿದ್ದಾರೆ. ಸಿನಿಮಾ ನಟನೆಯನ್ನು ಧನಂಜಯ್ ಎನ್ನುವ ನೀನಾಸಂ ಶಿಕ್ಷಕರಿಂದ ಕಲಿತಿರುವ ಇವರು 2024ರಲ್ಲಿ ತಮ್ಮ ಹೆಸರನ್ನು ರಿತನ್ಯಾ ವಿಜಯ್ ಎಂದು ಬದಲಿಸಿಕೊಂಡರು.

ಮನೆಯಲ್ಲಿ ಸಿನಿಮಾ ವಾತಾವರಣ
ನಟ ದುನಿಯಾ ವಿಜಯ್ ಪುತ್ರಿಯಾಗಿರುವ ಕಾರಣ ಮನೆಯಲ್ಲಿ ಸಿನಿಮಾ ವಾತಾವರಣ ಸಹಜವಾಗಿತ್ತು. ತಂದೆಯ ಸಿನಿಮಾ ಪಯಣವನ್ನು ಕಂಡು ತಾವು ಸಹ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕೆಂದು ನಿರ್ಧಾರ ಮಾಡಿದ ರಿತನ್ಯಾ ಈ ಕ್ಷೇತ್ರಕ್ಕೆ ಕಾಲಿಟ್ಟರು.
ಸಿನಿಮಾಗೆ ಬರುವುದಕ್ಕೆ ಮುನ್ನ ವಿದ್ಯಾಭ್ಯಾಸ ಮುಗಿಸಿರಬೇಕು ಎನ್ನುವುದು ತಂದೆಯ ನಿರ್ಧಾರವಾಗಿತ್ತು. ಅಲ್ಲದೆ ಸಿನಿಮಾಗೆ ಬರಲು ಹೇಗಿರಬೇಕು, ಹೇಗಿರಬಾರದು, ವರ್ಕ್ ಔಟ್, ಡಯೆಟ್ ಎಲ್ಲಾ ನಿಯಮ ಹೇಗೆ ಪಾಲನೆ ಮಾಡಬೇಕು ಎನ್ನುವುದನ್ನೂ ರಿತನ್ಯಾಗೆ ತಂದೆಯೇ ಕಲಿಸಿದ್ದರು.

ಮೊದಲ ಚಿತ್ರದ ಅವಕಾಶ
ಮೊದಲ ಚಿತ್ರ `ಲ್ಯಾಂಡ್ ಲಾರ್ಡ್' ನಲ್ಲಿಯೇ ದೊಡ್ಡ ಸ್ಟಾರ್ ಕಾಸ್ಟ್ ಇದ್ದು ಪ್ರತಿಭಾವಂತರು, ಹಿರಿಯ ಕಲಾವಿದರೊಡನೆ ನಟಿಸುವ ಅವಕಾಶ ಸಿಕ್ಕಿದ್ದು ತನ್ನ ದೊಡ್ಡ ಅದೃಷ್ಟ ಎಂದು ರಿತನ್ಯಾ ಭಾವಿಸುತ್ತಾರೆ. ಈ ಸಿನಿಮಾದಲ್ಲಿ ಶಿಶಿರ, ರಾಜ್ ಬಿ ಶೆಟ್ಟಿ ಸರ್, ಗೋಪಾಲಕೃಷ್ಣ ದೇಶಪಾಂಡೆ ಸರ್, ಬಿ. ಸುರೇಶ್ ಸರ್, ಅಚ್ಯುತ್ ಕುಮಾರ್ ಸರ್, ಸಂಪತ್ ಸರ್ ಹೀಗೆ ದೊಡ್ಡ ತಾರಾಬಳಗವೇ ಇದೆ. ನನಗೊಂದು ಆ್ಯಕ್ಟಿಂಗ್ ಕ್ಲಾಸ್ ಗೆ ಹೋದ ಅನುಭವ. ನನಗೆ ಕಲಿಯಲು ಸಾಕಷ್ಟು ಅವಕಾಶ ಸಿಕ್ಕಿತು. ರಾಜ್ ಬಿ ಶೆಟ್ಟಿ ಜೊತೆ ನಟಿಸಿದ್ದೂ ಕೂಡಾ ನನ್ನ ಅದೃಷ್ಟ. `ಜವರ' ಸಿನಿಮಾದಲ್ಲಿ ರಂಗಾಯಣ ರಘು ಹಾಗೂ ಶೃತಿ ಅವರಂಥ ಹಿರಿಯ ಕಲಾವಿದರ ಜೊತೆ ತೆರೆ ಹಂಚಿಕೊಳ್ಳುತ್ತಿರೋದು ದೇವರ ಆಶೀರ್ವಾದ, ಎಂದು ಹೇಳುತ್ತಾರೆ.





