ನಿನ್ನೆ  ಫೇಸ್‌ಬುಕ್ ಪುಟದಲ್ಲಿ ಮುಸ್ಲಿಂ ಬಾಂಧವರೊಬ್ಬರು (ಬಹುಶಃ ಮೊಹಮ್ಮದ್ ಎಂಬ ಹೆಸರಿನ ವ್ಯಕ್ತಿ) ಗಣೇಶ ಮೂರ್ತಿಯನ್ನು ಮನೆಗೆ ತರುವುದು ಏಕೆ ಮತ್ತು ನಂತರ ನೀರಿಗೆ ಬಿಸಾಡುವುದು ಏಕೆ..??

ಎಂದು ಒಂದಷ್ಟು ಗೊಂದಲ ಹಾಗೂ ಜಿಜ್ಞಾಸೆಯಿಂದ ಕೂಡಿದ ಪ್ರಶ್ನೆಯನ್ನು ಕೇಳಿದ್ದರು. ಅವರ ಆ ಸವಾಲಿಗೆ ನಮ್ಮ ಸನಾತನ ಸಂಪ್ರದಾಯದ ಹಿಂದಿರುವ ಸತ್ಯ, ಧರ್ಮಶಾಸ್ತ್ರ ಹಾಗೂ ಆಳವಾದ ಆಧ್ಯಾತ್ಮಿಕ ತತ್ತ್ವವನ್ನು ವಿವರಿಸಿ ಸತ್ಯವನ್ನು ತಿಳಿಸಬೇಕು ಎನ್ನುವ ಸದುದ್ದೇಶದಿಂದ ನನ್ನಗೆ ತಿಳಿದಿರುವ ಈ ಸುದೀರ್ಘ ಲೇಖನವನ್ನು ಬರೆದೆ.

ಒಂದು ವಿನಂತಿ:
ಈಗ ನೋಡಿದರೆ ಅವರ ಆ ಪೋಸ್ಟ್ ನನಗೆ ಕಾಣಿಸುತ್ತಿಲ್ಲ. ಒಂದು ವೇಳೆ ನಿಮ್ಮ ಫೇಸ್‌ಬುಕ್ ಗೋಡೆಯ ಮೇಲಾಗಲಿ ಅಥವಾ ಜಾಲತಾಣದಲ್ಲಾಗಲಿ ಆ ಪೋಸ್ಟ್ ಅಥವಾ ಆ ವ್ಯಕ್ತಿ ನಿಮಗೆ ಕಂಡುಬಂದರೆ, ದಯವಿಟ್ಟು ಈ ಲೇಖನವನ್ನು ಅವರಿಗೆ ಶೇರ್ ಮಾಡಿ ಅಥವಾ ಕಾಪಿ ಮಾಡಿ ತಲುಪಿಸಲು ಸಹಾಯ ಮಾಡಿ. ಪ್ರೀತಿ ಭಕ್ತಿ ಸತ್ಯ ಎಲ್ಲರಿಗೂ ತಲುಪಲಿ.

ಮಾನವ ಸಂಸ್ಕೃತಿಯಲ್ಲಿ ಸಂಕೇತಗಳು ಮತ್ತು ಪ್ರಕೃತಿಯ ನಡುವೆ ಅತ್ಯಂತ ಆಳವಾದ ಬಾಂಧವ್ಯವಿದೆ. ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಚಿಂತನೆ ಇಲ್ಲದ ರಾಕ್ಷಸ ಮನಸ್ಥಿತಿಗಳಿಗೆ ಈ ಸಂಕೇತಗಳ ಆಳ ಅರ್ಥವಾಗದಿರಬಹುದು.
ಹಿಂದು ಧರ್ಮದಲ್ಲಿ ಗಣೇಶ ಚತುರ್ಥಿಯಂದು ಮಣ್ಣಿನ ಮೂರ್ತಿಯನ್ನು ತಂದು, ಅತ್ಯಂತ ಭಯ-ಭಕ್ತಿ, ಕರುಣೆ ಹಾಗೂ ಭಾವನಾತ್ಮಕ ಶ್ರದ್ಧೆಯಿಂದ ಪೂಜಿಸಿ, ನಂತರ ಶಾಸ್ತ್ರೋಕ್ತವಾಗಿ ಜಲದಲ್ಲಿ ವಿಸರ್ಜಿಸುವ ಸುಂದರ ಸಂಪ್ರದಾಯವಿದೆ.

ಇಂದಿನ ಕಾಲಘಟ್ಟದಲ್ಲಿ ಕೆಲವು ಕಡೆ ಈ ಶ್ರದ್ಧೆಯು ನಶಿಸಿ, ಮೇಲ್ಸೇತುವೆಯಿಂದ ಮೂರ್ತಿಯನ್ನು ನೀರಿಗೆ ಬಿಸಾಡುವ ಯಾಂತ್ರಿಕ ನಡವಳಿಕೆಗಳೂ ಕಂಡುಬರುತ್ತಿವೆ. ಇಂತಹ ಅಸಂಸ್ಕೃತ ನಡವಳಿಕೆಯನ್ನು ಕಂಡಾಗ ಹೊರಗಿನವರಿಗೆ “ತಾವೇ ತಯಾರಿಸಿ ಅಥವಾ ಖರೀದಿಸಿ ಕೊನೆಗೆ ನೀರಿಗೆ ಬಿಸಾಡುವುದೇಕೆ?” ಎಂಬ ಅನುಮಾನ ಮೂಡುವುದು ತೀರ ಸಹಜ. ಆದರೆ, ನಿಜವಾದ ಸಾಂಪ್ರದಾಯಿಕ ಆಚರಣೆಯು ಕೇವಲ ಮೂರ್ತಿಯನ್ನು ಎಸೆಯುವ ಕ್ರಿಯೆಯಲ್ಲ; ಇದರ ಹಿಂದೆ ಸ್ಪಷ್ಟವಾದ ಧರ್ಮಶಾಸ್ತ್ರೀಯ ಪ್ರಮಾಣಗಳು ಹಾಗೂ ಸೃಷ್ಟಿಯ ನಿಯಮವನ್ನು ಸಾರುವ ಮಹೋನ್ನತ ಆಧ್ಯಾತ್ಮಿಕ ತತ್ತ್ವಗಳಿವೆ.

ಗಣೇಶ ಚತುರ್ಥಿ ವ್ರತ ಹಾಗೂ ಮೂರ್ತಿ ವಿಸರ್ಜನೆಯು ಕೇವಲ ಒಂದು ಜನಪದ ಆಚರಣೆಯಲ್ಲ, ಬದಲಿಗೆ ಧರ್ಮಶಾಸ್ತ್ರೋಕ್ತ ವಿಧಾನವಾಗಿದೆ:
ಧರ್ಮಶಾಸ್ತ್ರ ಗ್ರಂಥಗಳಲ್ಲಿ ಗಣೇಶ ಚತುರ್ಥಿಯ ವ್ರತ ವಿಧಾನವನ್ನು ಅತ್ಯಂತ ಸ್ಪಷ್ಟವಾಗಿ ನಿಯಮಿಸಲಾಗಿದೆ. ಇದರಲ್ಲಿ “ಮೃನ್ಮಯಿ ಮೂರ್ತಿ” ಮಣ್ಣಿನಿಂದ ಮಾಡಿದ ಮೂರ್ತಿಯನ್ನೇ ಸ್ಥಾಪಿಸಿ, ಪೂಜಿಸಿ, ವ್ರತಾಂಗವಾಗಿ ವಿಸರ್ಜಿಸಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಮುದ್ಗಲ ಪುರಾಣ ಮತ್ತು ಗಣೇಶ ಪುರಾಣಗಳಲ್ಲಿ ಗಣೇಶನ ನಾನಾ ಲೀಲೆಗಳು ಹಾಗೂ ಚತುರ್ಥಿ ವ್ರತದ ಪೂಜಾ ಮಹತ್ವ, ಸೃಷ್ಟಿಯ ಮೂಲಶಕ್ತಿಯನ್ನು ಪೂಜಿಸುವ ಕ್ರಮಗಳ ವಿವರಣೆಯಿದೆ.

ಸನಾತನ ಹಿಂದು ಧರ್ಮದಲ್ಲಿ ಮೂರ್ತಿಯನ್ನೇ ಅಂತಿಮ ದೇವರು ಎಂದು ಭಾವಿಸುವುದಿಲ್ಲ. ಮೂರ್ತಿಯು ಭಗವಂತನನ್ನು ತಲುಪಲು ಒಂದು ಮಾಧ್ಯಮವಷ್ಟೇ.
“ಮಣ್ಣಿನಿಂದ ಬಂದದ್ದು ಮಣ್ಣಿಗೇ ಸೇರಬೇಕು” ಎಂಬುದು ಪ್ರಕೃತಿಯ ಶಾಶ್ವತ ನಿಯಮ. ನಮ್ಮ ಶರೀರವೂ ಸೇರಿದಂತೆ ಈ ಪ್ರಪಂಚದ ಸಮಸ್ತ ವಸ್ತುಗಳು ಪಂಚಭೂತಗಳಿಂದ (ಪೃಥ್ವಿ, ನೀರು, ಬೆಂಕಿ, ವಾಯು, ಆಕಾಶ) ನಿರ್ಮಿತವಾಗಿವೆ. ಮಣ್ಣಿನಿಂದ ಮಾಡಿದ ಮೂರ್ತಿಯು ಸೃಷ್ಟಿ (ಜನನ), ಸ್ಥಿತಿ (ಜೀವನ) ಮತ್ತು ಲಯದ (ಮರಣ/ವಿಸರ್ಜನೆ) ಸಂಕೇತವಾಗಿದೆ.
ಮೂರ್ತಿಯು ಪೂಜೆಗೆ ಒಂದು ಸಾಧನ. ಪೂಜೆಯ ಸಮಯದಲ್ಲಿ ‘ಪ್ರಾಣಪ್ರತಿಷ್ಠೆ’ಯ ಮಂತ್ರಗಳ ಮೂಲಕ ಆ ಭಗವಂತನ ದಿವ್ಯ ಶಕ್ತಿಯನ್ನು ಮಣ್ಣಿನ ಮೂರ್ತಿಯಲ್ಲಿ ಆವಾಹಿಸಿ, ಸನ್ನಿಹಿತಗೊಳಿಸಿ ಧೂಪ-ದೀಪ-ನೈವೇದ್ಯಗಳಿಂದ ಪೂಜಿಸಲಾಗುತ್ತದೆ. ಪೂಜೆ ಮುಗಿದ ನಂತರ ‘ಉತ್ತರ ಪೂಜೆ’ ಮಾಡಿ, ಆ ಶಕ್ತಿಯನ್ನು ಪುನಃ ನಿರಾಕಾರ ಭಗವಂತನಲ್ಲಿ ಪ್ರಾರ್ಥಿಸಿ ಕಳುಹಿಸಲಾಗುತ್ತದೆ (ವಿಸರ್ಜನೆ). ತದನಂತರ ಭೌತಿಕ ರೂಪವಾದ ಮಣ್ಣಿನ ಮೂರ್ತಿಯನ್ನು ನೀರಿನಲ್ಲಿ ಕರಗಿಸಲಾಗುತ್ತದೆ.

ವಿಸರ್ಜನೆ ಎಂಬುದು ಎಸೆದುಬಿಡುವ ಕ್ರಿಯೆಯಲ್ಲ; ಅದು ಪ್ರಕೃತಿಯಿಂದ ಪಡೆದದ್ದನ್ನು ಅತ್ಯಂತ ನಮ್ರತೆಯಿಂದ ಪ್ರಕೃತಿಗೇ ಮರಳಿಸುವ ಕೃತಜ್ಞತಾ ಸಮರ್ಪಣೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ಮಣ್ಣಿನ ಮೂರ್ತಿಯನ್ನು ಜಲದಲ್ಲಿ ವಿಲೀನಗೊಳಿಸುವುದನ್ನು ಯಾವುದೇ ಕಾರಣಕ್ಕೂ ‘ಬಿಸಾಡುವುದು’ ಎಂದು ಕರೆಯಲು ಸಾಧ್ಯವಿಲ್ಲ. ಅಲ್ಲಿ ಅನುರಣಿಸುವ ಮಂತ್ರಘೋಷಗಳು, ಕಣ್ಣಂಚಿನಲ್ಲಿ ತೇವಗೊಳ್ಳುವ ಭಕ್ತಿಯ ಹನಿಗಳು ಮತ್ತು ಹೃದಯಾಳದಿಂದ ಹೊಮ್ಮುವ ಪ್ರಾರ್ಥನೆಗಳು ರೂಪದ ಹಿಂದಿರುವ ಅರೂಪದ ಶಕ್ತಿಗೆ ಸಲ್ಲಿಸುವ ಅತ್ಯುನ್ನತ ಗೌರವ. ಮಣ್ಣಿನಿಂದ ಜೀವ ತಳೆದ ಆ ಮಂಗಳಮೂರ್ತಿ, ಪೂಜೆಯ ನಂತರ ಪ್ರಕೃತಿಯ ಜಲರಾಶಿಯಲ್ಲಿ ಕರಗಿ ಮತ್ತೆ ಈ ಬ್ರಹ್ಮಾಂಡದ ಶಕ್ತಿಯಲ್ಲೇ ವಿಲೀನವಾಗುತ್ತದೆ. ಇದು ಹುಟ್ಟು, ಬಾಳು ಮತ್ತು ಲಯದ ನಿರಂತರ ಚಕ್ರವನ್ನು ನೆನಪಿಸುವ ಪರಮ ಸತ್ಯ.
ಆದರೆ, ಇವತ್ತಿನ ಕಾಲಘಟ್ಟದತ್ತ ಒಮ್ಮೆ ಕಣ್ಣಾಡಿಸಿದರೆ ಎಂಥವರಿಗೂ ಮನಸ್ಸಿನಲ್ಲಿ ಅಸ್ಪಷ್ಟ ಖೇದವೊಂದು ಆವರಿಸುತ್ತದೆ. ಯಾಂತ್ರಿಕ ಬದುಕಿನ ಧಾವಂತದಲ್ಲಿ ಕಾಲಕ್ರಮೇಣ ಜನರ ಮನಸ್ಸಿನಲ್ಲಿ ದೇವರ ಮೇಲಿನ ನಂಬಿಕೆ ಮತ್ತು ಆಚಾರಗಳ ಹಿಂದಿನ ಭಾವನಾತ್ಮಕ ಸತ್ವ ನಶಿಸಿಹೋಗುತ್ತಿದೆ. ಆಚರಣೆಯ ಹಿಂದಿನ ಧಾರ್ಮಿಕ ಶ್ರದ್ಧೆಗಿಂತ, ಕೊನೆಯಲ್ಲಿ ಅದನ್ನು ನೆರವೇರಿಸುವ ವೈಭವ ಅಥವಾ ಅಜ್ಞಾನದ ನಡವಳಿಕೆಗಳೇ ಎದ್ದು ಕಾಣುವಂತಾಗಿದೆ. ಆಳವಾದ ತತ್ತ್ವ ಅರಿಯದೆ ಕೇವಲ ಭೌತಿಕ ಆಡಂಬರಕ್ಕೆ ಸೋತಾಗ, ಭಕ್ತಿಯ ವಿಸರ್ಜನೆಯೂ ಕೆಲವೊಮ್ಮೆ ಜಡ ಪ್ರದರ್ಶನದಂತೆ ಗೋಚರಿಸುವುದು ಆಧುನಿಕತೆಯ ದೊಡ್ಡ ದುರಂತ.
ಇನ್ನೊಂದೆಡೆ, ನಮ್ಮ ನಾಡಿನಲ್ಲಿ ಸಂಸ್ಕೃತಿಯ ಬಲವರ್ಧನೆಗೆ ಸಿಗಬೇಕಾದ ಭದ್ರವಾದ ನೆಲೆಗಟ್ಟು ಕಳೆದುಹೋಗುತ್ತಿದೆ. ಪೀಳಿಗೆಯಿಂದ ಪೀಳಿಗೆಗೆ ಈ ಆಳವಾದ ಧಾರ್ಮಿಕ ಸಂಸ್ಕಾರ, ಅದರ ಹಿಂದಿನ ವಿಜ್ಞಾನ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ತಿಳಿಸಿಹೇಳುವ, ಉತ್ತೇಜಿಸುವ ಮೂಲ ವ್ಯವಸ್ಥೆಗಳು ಇಂದು ದುರ್ಬಲಗೊಂಡಿವೆ. ಸರಕಾರಗಳಾಗಲಿ ಅಥವಾ ಆಧುನಿಕ ಶಿಕ್ಷಣ ಕ್ರಮವಾಗಲಿ ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸುವಲ್ಲಿ ತೋರುತ್ತಿರುವ ಉದಾ hisೀನತೆ, ಯುವಪೀಳಿಗೆಯನ್ನು ತನ್ನದೇ ಪರಂಪರೆಯಿಂದ ದೂರ ತಳ್ಳುತ್ತಿದೆ. ಮೂಲ ತತ್ತ್ವ ತಿಳಿಯದಿದ್ದಾಗ ಆಚರಣೆಗಳು ನಿರರ್ಥಕ ಎನಿಸುವುದು ಸಹಜ.
ಆದ್ದರಿಂದ, ಗಣೇಶನ ವಿಸರ್ಜನೆ ಎಂದರೆ ಕೇವಲ ಮೂರ್ತಿಯನ್ನು ನೀರಲ್ಲಿ ಕರಗಿಸುವುದಷ್ಟೇ ಅಲ್ಲ; ನಮ್ಮೊಳಗಿನ ಅಹಂಕಾರವನ್ನು ಕರಗಿಸಿ, ಸಂಸ್ಕೃತಿಯ ಅರಿವನ್ನು ಮರಳಿ ದಗ ದಗಿಸುವ ಪ್ರಕ್ರಿಯೆಯಾಗಬೇಕು. ಜಲದಲ್ಲಿ ವಿಲೀನವಾಗುವ ಪ್ರತಿ ಮಣ್ಣಿನ ಕಣವೂ ನಮಗೆ ನೆನಪಿಸುವುದು ಒಂದೇ— ಭಕ್ತಿಯ ಮೂಲಸತ್ವ ಹಾಗೂ ಸಾಂಸ್ಕೃತಿಕ ಪ್ರಜ್ಞೆಯನ್ನು ಉಳಿಸಿಕೊಂಡಾಗ ಮಾತ್ರವೇ ಯಾವುದೇ ಸಮಾಜ ಆಂತರಿಕವಾಗಿ ಜೀವಂತವಾಗಿರಲು ಸಾಧ್ಯ.

ಹಿಂದು ದರ್ಶನದ ಪ್ರಕಾರ ಭಗವಂತನು ಸಾಕಾರ (ರೂಪವಿರುವವನು) ಮತ್ತು ನಿರಾಕಾರ (ರೂಪವಿಲ್ಲದವನು, ಅರೂಪಿಯು) ಎರಡೂ ಆಗಿದ್ದಾನೆ.
• ಸಾಕಾರ ಪೂಜೆ: ಆರಂಭಿಕ ಹಂತದಲ್ಲಿ ಮನಸ್ಸನ್ನು ಏಕಾಗ್ರಗೊಳಿಸಲು, ಪ್ರೀತಿ ಮತ್ತು ಭಕ್ತಿಯನ್ನು ಅರ್ಪಿಸಲು ಒಂದು ರೂಪದ (ಸಾಕಾರ) ಅಗತ್ಯವಿರುತ್ತದೆ.
• ನಿರಾಕಾರದ ಅರಿವು: ವಿಸರ್ಜನೆಯು ನಮಗೆ ಬಹುದೊಡ್ಡ ಸತ್ಯವನ್ನು ಕಲಿಸುತ್ತದೆ — “ರೂಪ ತಾತ್ಕಾಲಿಕ, ಭಗವಂತನ ಶಕ್ತಿ ಶಾಶ್ವತ ಹಾಗೂ ಸರ್ವವ್ಯಾಪಿ (ನಿರಾಕಾರ)”.
• ಕೇವಲ ಭೌತಿಕ ರೂಪ ಅಥವಾ ವಸ್ತುವಿಗೆ ಅಂಟಿಕೊಳ್ಳದೆ, ‘ದೇವರು ಎಲ್ಲೆಡೆ ಇದ್ದಾನೆ’ ಎಂಬ ಪರಮ ಸತ್ಯವನ್ನು ಅರಿಯುವುದು ಮತ್ತು ತ್ಯಾಗ ಮನೋಭಾವವನ್ನು ಬೆಳೆಸಿಕೊಳ್ಳುವುದೇ ಈ ವಿಸರ್ಜನೆಯ ಮುಖ್ಯ ಸಂದೇಶ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ