ಆತ್ಮ ಶುದ್ಧಿಯ ದಿವ್ಯ ಮಾರ್ಗ:

ಉತ್ತಮ ತಪಸ್ಸು

‘ದಶಲಕ್ಷಣ ಪರ್ವ’ದಲ್ಲಿ ಏಳನೇ ದಿನಕ್ಕೆ ವಿಶೇಷ ಸ್ಥಾನವಿದೆ. ಈ ದಿನ ವನ್ನು ನಾವು ‘ ಉತ್ತಮ ತಪಸ್ಸು’ ಎಂದು ಆಚರಿಸುತ್ತೇವೆ.

ತಪಸ್ಸಿನ ನಿಜವಾದ ಅರ್ಥ :  ಸಾಮಾನ್ಯವಾಗಿ ತಪಸ್ಸು ಎಂದ ಕೂಡಲೇ ಕೇವಲ ಉಪವಾಸ ಮಾಡುವುದು ಎಂಬ ಭಾವನೆ ಜನರಲ್ಲಿದೆ. ಆದರೆ ಜೈನ ಧರ್ಮದಲ್ಲಿ ತಪಸ್ಸಿನ ನಿಜವಾದ ಅರ್ಥ ನಮ್ಮ ಮನಸ್ಸಿನಲ್ಲಿರುವ ಕೋಪ, ಅಹಂಕಾರ, ಕಪಟ ಮತ್ತು ಲೋಭದಂತಹ ಕೆಟ್ಟ ಸ್ವಭಾವಗಳನ್ನು ಹತೋಟಿಯಲ್ಲಿಟ್ಟುಕೊಂಡು ಆತ್ಮವನ್ನು ಶುದ್ಧ ಮಾಡುವುದೇ ನಿಜವಾದ ತಪಸ್ಸಾಗಿದೆ.

ಒಂದು ಉದಾಹರಣೆ : ಇದನ್ನು ಅರ್ಥಮಾಡಿಕೊಳ್ಳಲು ಒಂದು ಸುಂದರವಾದ ಉದಾಹರಣೆ ಇಲ್ಲಿದೆ. ಕಚ್ಚಾ ಚಿನ್ನವನ್ನು ಬೆಂಕಿಯಲ್ಲಿ ಕರಗಿಸಿದಾಗ ಅದರಲ್ಲಿರುವ ಕಲ್ಮಶಗಳೆಲ್ಲಾ ಹೊರಹೋಗಿ, ಕೇವಲ ಶುದ್ಧವಾದ ಚಿನ್ನ ಮಾತ್ರ ಉಳಿಯುತ್ತದೆ. ಅದೇ ರೀತಿ, ತಪಸ್ಸಿನ ಅಗ್ನಿಯಿಂದ ನಮ್ಮ ಆತ್ಮಕ್ಕೆ ಅಂಟಿಕೊಂಡಿರುವ ಕರ್ಮಗಳೆಂಬ ಕೊಳೆ ಕರಗಿಹೋಗುತ್ತದೆ (ಇದನ್ನೇ ‘ನಿರ್ಜರೆ’ ಎನ್ನುತ್ತಾರೆ). ಇದರಿಂದ ನಮ್ಮ ಆತ್ಮದ ಅಸಲಿ ತೇಜಸ್ಸು ಹೊರಹೊಮ್ಮುತ್ತದೆ.

ಎರಡು ವಿಧಗಳ ತಪ

ಈ ತಪಸ್ಸನ್ನು ನಮ್ಮ ಹಿರಿಯರು ಎರಡು ಮುಖ್ಯ ವಿಧಗಳಾಗಿ ವಿಂಗಡಿಸಿದ್ದಾರೆ. ಮೊದಲನೆಯದು, ದೇಹಕ್ಕೆ ಸಂಬಂಧಿಸಿದ ಬಾಹ್ಯ ತಪಸ್ಸು. ಇದರಲ್ಲಿ ಉಪವಾಸ ಮಾಡುವುದು, ಹಸಿವಿಗಿಂತ ಕಡಿಮೆ ತಿನ್ನುವುದು, ರುಚಿಯ ಆಸೆಯನ್ನು ಬಿಡುವುದು ಮತ್ತು ಏಕಾಂತದಲ್ಲಿ ಇರುವುದರ ಮೂಲಕ ದೇಹದ ಇಂದ್ರಿಯಗಳನ್ನು ನಿಗ್ರಹಿಸಲಾಗುತ್ತದೆ.

IMG-20260922-WA0020

ಎರಡನೆಯದು, ಮನಸ್ಸಿಗೆ ಸಂಬಂಧಿಸಿದ ಆಂತರಿಕ ತಪಸ್ಸು. ಇದರಲ್ಲಿ ನಮ್ಮ ತಪ್ಪುಗಳಿಗೆ ಪಶ್ಚಾತ್ತಾಪಪಡುವುದು, ಎಲ್ಲರೊಂದಿಗೆ ವಿನಯದಿಂದ ನಡೆದುಕೊಳ್ಳುವುದು, ಗುರು-ಹಿರಿಯರ ಸೇವೆ ಮಾಡುವುದು, ಒಳ್ಳೆಯ ಧರ್ಮ ಗ್ರಂಥಗಳನ್ನು ಓದುವುದು, ಭೌತಿಕ ವಸ್ತುಗಳ ಮೇಲಿನ ಮಮಕಾರ ಅಥವಾ ಮೋಹವನ್ನು ಬಿಡುವುದು ಮತ್ತು ಮನಸ್ಸನ್ನು ಶಾಂತವಾಗಿಟ್ಟು ಕೊಳ್ಳುವ ಧ್ಯಾನ ಮಾಡುವುದು ಸೇರಿವೆ.

ಒಟ್ಟಾರೆ ಹೇಳಬೇಕೆಂದರೆ, ದಶಲಕ್ಷಣ ಪರ್ವದ ಏಳನೇ ದಿನವು ನಮ್ಮಲ್ಲಿರುವ ಅನಾವಶ್ಯಕ ಆಸೆ-ಆಕಾಂಕ್ಷೆಗಳನ್ನು ಕರಗಿಸಿ, ಅಂತರಂಗದ ಬೆಳಕನ್ನು ಹೆಚ್ಚಿಸಿಕೊಳ್ಳಲು ನಮಗೆ ಸದಾ ಪ್ರೇರಣೆಯಾಗಬೇಕು.

ತಪಸ್ಸು ಎಂದರೆ ಜೀವನದಲ್ಲಿ ಸದ್ಗುಣಗಳನ್ನು ಅಳವಡಿಸಿಕೊಂಡು ನಡೆಸುವ ಶಿಸ್ತುಬದ್ಧ ಮತ್ತು ಪವಿತ್ರ ಜೀವನಶೈಲಿ.

ಯಾವುದೇ ಪ್ರತಿಫಲವನ್ನು ಅಥವಾ ಪ್ರಶಂಸೆಯನ್ನು ಬಯಸದೆ ಮಾಡುವ ಒಳ್ಳೆಯ ಕೆಲಸವು ಅತ್ಯಂತ ಶಕ್ತಿಶಾಲಿಯಾದ ತಪಸ್ಸಾಗುತ್ತದೆ. ಅಲ್ಲಿ ಅಹಂಕಾರವಿರುವುದಿಲ್ಲ, ಕೇವಲ ಸಮರ್ಪಣಾ ಭಾವವಿರುತ್ತದೆ.

ಪ್ರಸ್ತುತಿ: ಅಶೋಕ ಚಿಕ್ಕಪರಪ್ಪಾ

ಪತ್ರಕರ್ತ – ಅನುವಾದಕ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ