– ರಾಘವೇಂದ್ರ ಅಡಿಗ ಎಚ್ಚೆನ್.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ 14ನೇ ಆರೋಪಿ ಪ್ರದೋಷ್ ರಾವ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ನಟ ದರ್ಶನ್ ಪರವಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಈ ಸಂಬಂಧ ರಿಟ್ ಅರ್ಜಿ ಸಲ್ಲಿಸಿದ್ದು, ಪ್ರದೋಷ್‌ಗೆ ಮಾಫಿ ನೀಡಿದ ಆದೇಶವನ್ನು ರದ್ದುಗೊಳಿಸುವಂತೆ ಮನವಿ ಮಾಡಲಾಗಿದೆ.
ಅರ್ಜಿಯಲ್ಲಿ ಪ್ರದೋಷ್ ಅವರು ದರ್ಶನ್ ಅವರ ವಿರೋಧಿಗಳ ಪ್ರಭಾವ ಹಾಗೂ ಚಿತಾವಣೆಗೆ ಒಳಗಾಗಿ ಸ್ವಾರ್ಥಕ್ಕಾಗಿ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಎರಡು ವರ್ಷಗಳಿಂದ ಯಾವುದೇ ಅರ್ಜಿ ಸಲ್ಲಿಸದೆ, ಇದೀಗ ಏಕಾಏಕಿ ಮಾಫಿ ಸಾಕ್ಷಿಯಾಗಲು ಮುಂದಾಗಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಜೈಲಿನಲ್ಲಿರುವ ಪ್ರದೋಷ್ ಅನಧಿಕೃತವಾಗಿ ಮೊಬೈಲ್ ಬಳಸಿ ಪತ್ನಿಯೊಂದಿಗೆ ಸಂಪರ್ಕದಲ್ಲಿದ್ದರು ಎಂಬ ಆರೋಪವನ್ನೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಎನ್‌ಸಿಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಲಾಗಿದೆ. ಇದೇ ಅನಧಿಕೃತ ಮೊಬೈಲ್ ಬಳಸಿ ಪ್ರಕರಣದ ಕುರಿತು ಮಾಫಿ ಸಾಕ್ಷಿಯಾಗುವ ಪ್ರಕ್ರಿಯೆ ನಡೆಸಿರುವ ಸಾಧ್ಯತೆಯ ಬಗ್ಗೆಯೂ ದರ್ಶನ್ ಪರ ಅರ್ಜಿಯಲ್ಲಿ ಅನುಮಾನ ವ್ಯಕ್ತಪಡಿಸಲಾಗಿದೆ.
ಈ ವಿಚಾರವಾಗಿ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ಮೆಮೊವನ್ನು ಪರಿಗಣಿಸದೆ ಮಾಫಿ ಸಾಕ್ಷಿ ಕುರಿತ ಆದೇಶ ಹೊರಡಿಸಲಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಹೀಗಾಗಿ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಲಾಗಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರದೋಷ್ ವಿರುದ್ಧ ಸಾಕ್ಷ್ಯ ನಾಶ ಹಾಗೂ ಹಣಕಾಸಿನ ವ್ಯವಹಾರಗಳಿಗೆ ನೆರವಾದ ಆರೋಪಗಳಿವೆ. ಅವರು ಪ್ರಕರಣದ ಕುರಿತು ಸಂಪೂರ್ಣ ಹಾಗೂ ಸತ್ಯವಾದ ಮಾಹಿತಿಯನ್ನು ಬಹಿರಂಗಪಡಿಸುವುದಾಗಿ ಹೇಳಿ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯವು ಷರತ್ತುಗಳೊಂದಿಗೆ ಅರ್ಜಿಯನ್ನು ಅಂಗೀಕರಿಸಿತ್ತು.
ಈ ಹಿಂದೆ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ್ದ ಕರ್ನಾಟಕ ಹೈಕೋರ್ಟ್, ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿದ ವಿಚಾರಣಾ ನ್ಯಾಯಾಲಯದ ಹಿಂದಿನ ಆದೇಶವನ್ನು ರದ್ದುಪಡಿಸಿ, ಕಾನೂನುಬದ್ಧ ಪ್ರಕ್ರಿಯೆ ಅನುಸರಿಸಿ ಹೊಸ ಆದೇಶ ಹೊರಡಿಸುವಂತೆ ಪ್ರಕರಣವನ್ನು ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಿತ್ತು





