– ರಾಘವೇಂದ್ರ ಅಡಿಗ ಎಚ್ಚೆನ್.

ಉಡುಪಿಯ ಬೈಂದೂರು ಮೂಲದ ಯುವ ಪ್ರತಿಭೆ ಶ್ರೀಷ ಇದೀಗ ‘ತರಂಗಾಂತರಂಗ’ ಚಿತ್ರದ ಮೂಲಕ ನಾಯಕ ನಟನಾಗಿ ಮತ್ತು ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ ಈ ಮುಖೇನ ಚಿತ್ರರಂಗಕ್ಕೆ ಹೊಸ ಭರವಸೆ ಮೂಡಿಸುತ್ತಿದ್ದಾರೆ.
ಚಿತ್ರದ ಚಿತ್ರೀಕರಣ ಆದಾಗಲೇ ಮುಗಿದಿದ್ದು ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಿತು. ಕನ್ನಡ ಚಲನಚಿತ್ರ ನಿರ್ದೇಶಕರ ಸಂಘ’ದ ಅಧ್ಯಕ್ಷ ಎನ್.ಆರ್.ಕೆ ವಿಶ್ವನಾಥ್ ಟೀಸರ್ ಬಿಡುಗಡೆ ಮಾಡಿ ಹೊಸ ತಂಡಕ್ಕೆ ಶುಭ ಕೋರಿದರು.

1001846283

“ತರಂಗಾಂತರಂಗ” ಚಿತ್ರದಲ್ಲಿ ನಟ ಪ್ರಮೋದ್ ಶೆಟ್ಟಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಯುವ ನಟ, ನಿರ್ದೇಶಕ ಶ್ರೀಷ ಮತ್ತು ಅವರ ತಂಡ ಸೇರಿಕೊಂಡು ಒಂದು ಒಳ್ಳೆಯ ಸಿನಿಮಾ ಮಾಡಿದ್ದಾರೆ. ನಾನು ಈ ಚಿತ್ರತಂಡದ ಭಾಗವಾಗಿರುವುದಕ್ಕೆ ಖುಷಿಯಿದೆ. ಯೂನಿಫಾರ್ಮ್ ಧರಿಸಿಕೊಂಡು ಈ ಸಿನಿಮಾದ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಚಿತ್ರತಂಡದ ಜೊತೆ ಕೆಲಸ ಮಾಡಿದ್ದು ಒಂದು ಒಳ್ಳೆಯ ಅನುಭವ’ ಎಂದು ಹೇಳಿದರು.

1001846278

ಕಾರ್ಯಕ್ರಮದಲ್ಲಿ ಮಾತನಾಡಿದ ನಾಯಕ ನಟ ನಿರ್ದೇಶಕ ಶ್ರೀಷ ‘ಇದೊಂದು ಪುನರ್ಜನ್ಮದ ಕಥೆ ಹೊಂದಿರುವ ಚಿತ್ರ. ನಾವು ದೇವರಿಗೆ ಕಟ್ಟಿಕೊಂಡ ಹರಕೆ ಅಥವಾ ಸೇವೆಗಳನ್ನು ತೀರಿಸಲು ವಿಫಲವಾದರೆ, ಅದರಿಂದ ಏನು ಆಗಬಹುದು ಎಂಬ ಕಥೆಯ ಎಳೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಹಿಸ್ಟರಿ, ಸಸ್ಪೆನ್ಸ್, ಥ್ರಿಲ್ಲರ್ ಶೈಲಿಯಲ್ಲಿ ಈ ಸಿನಿಮಾ ಮೂಡಿ ಬಂದಿದೆ. ಈ ಸಿನಿಮಾವನ್ನು ನಿರ್ದೇಶನ ಮಾಡಿ, ತೆರೆ ಮೇಲೆ ಒಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದೇನೆ. ನೋಡುಗರಿಗೆ ಈ ಸಿನಿಮಾ ಹೊಸ ಅನುಭವ ಕೊಡಲಿದೆ’ ಎಂದರು.

1001846279

ಇನ್ನು ನಟಿ ಚೆರಿಕಾ ಮೂರ್ತಿ, ಛಾಯಾಗ್ರಹಕ ವೆಂಕಟೇಶ್ ಸೇರಿದಂತೆ ಚಿತ್ರದ ಹಲವು ಕಲಾವಿದರು ಮತ್ತು ತಂತ್ರಜ್ಞರು ತಮ್ಮ ಅಭಿಪ್ರಾಯಗಳನ್ನು ಮಾಧ್ಯಮದವರ ಎದುರು ಹಂಚಿಕೊಂಡರು.

1001846285

“ತರಂಗಾಂತರಂಗ” ಚಿತ್ರದಲ್ಲಿ ಹಿರಿಯ ನಟರಾದ ರಮೇಶ್ ಪಂಡಿತ್, ಪ್ರಭಾಕರ ಕುಂದರ್, ಲಿಖಿತಾ ಶೆಟ್ಟಿ, ಮುರಳಿ ಮತ್ತಿತರರು ಇತರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿ ಮರೆಯಾದ ನಟರಾದ ದಿವಂಗತ ದಿನೇಶ್ ಮಂಗಳೂರು ಮತ್ತು ದಿವಂಗತ ರಾಕೇಶ್ ಪೂಜಾರಿ ಕೂಡ ಕೊನೆಯದಾಗಿ ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದು ವಿಶೇಷ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ