-  ರಾಘವೇಂದ್ರ ಅಡಿಗ ಎಚ್ಚೆನ್.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿ ಸಂಖ್ಯೆ 14 ಪ್ರದೋಷ್ ರಾವ್ ಮಾಫಿ ಸಾಕ್ಷಿಯಾಗಿ ಹೇಳಿಕೆ ದಾಖಲಿಸುವ ದಿನಾಂಕ ನಿಗದಿಯಾಗಿದೆ. ಸೆಪ್ಟೆಂಬರ್ 28ರಂದು ನ್ಯಾಯಾಲಯಕ್ಕೆ ಹಾಜರಾಗಿ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವಂತೆ 59ನೇ ಸಿಸಿಹೆಚ್ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ನ್ಯಾಯಾಧೀಶೆ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರ ಆದೇಶದಂತೆ ಮುಂದಿನ ಸೋಮವಾರ ಪ್ರದೋಷ್ ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ.

ಪ್ರದೋಷ್ ರಾವ್ ಅವರನ್ನು ಪ್ರಕರಣದಲ್ಲಿ ಅಪ್ರೂವರ್ ಆಗಿ ಪರಿಗಣಿಸಲು 59ನೇ ಸಿಸಿಹೆಚ್ ನ್ಯಾಯಾಲಯ ಸೆಪ್ಟೆಂಬರ್ 16ರಂದು ಅನುಮತಿ ನೀಡಿತ್ತು. ಪ್ರಕರಣದ ಸಂಚು, ರೇಣುಕಾಸ್ವಾಮಿ ಹತ್ಯೆ ಹಾಗೂ ಸಾಕ್ಷ್ಯ ವಿಲೇವಾರಿಗೆ ಸಂಬಂಧಿಸಿದಂತೆ ಸಂಪೂರ್ಣ ಮತ್ತು ಸತ್ಯವಾದ ಮಾಹಿತಿಯನ್ನು ನೀಡುವುದಾಗಿ ಪ್ರದೋಷ್ ಅರ್ಜಿಯಲ್ಲಿ ತಿಳಿಸಿದ್ದರು. ವಿಚಾರಣಾ ನ್ಯಾಯಾಲಯದ ಈ ನಿರ್ಧಾರವನ್ನು ಪ್ರಶ್ನಿಸಿ ದರ್ಶನ್ ಪರವಾಗಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸೆಪ್ಟೆಂಬರ್ 23ರಂದು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.

ಹೈಕೋರ್ಟ್, ಸಹ ಆರೋಪಿಗಳಿಗೆ ಅಪ್ರೂವರ್ ಅರ್ಜಿಯನ್ನು ವಿರೋಧಿಸುವ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದು, ಪ್ರದೋಷ್ ಸಾಕ್ಷ್ಯ ನೀಡುವ ಸಂದರ್ಭದಲ್ಲಿ ದರ್ಶನ್ ಸೇರಿದಂತೆ ಆರೋಪಿಗಳಿಗೆ ಕಾನೂನುಬದ್ಧವಾಗಿ ಅವರನ್ನು ಕ್ರಾಸ್ ಎಕ್ಸಾಮಿನ್ ಮಾಡುವ ಅವಕಾಶವಿದೆ ಎಂದು ತಿಳಿಸಿದೆ. ಹೀಗಾಗಿ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಇದಕ್ಕೂ ಮುನ್ನ ಪ್ರದೋಷ್ ಅಪ್ರೂವರ್ ಆಗುವ ವಿಚಾರಕ್ಕೆ ಸಂಬಂಧಿಸಿದಂತೆ ದರ್ಶನ್ ಪರ ಹಲವು ಆಕ್ಷೇಪಗಳು ನ್ಯಾಯಾಲಯದ ಮುಂದೆ ಬಂದಿದ್ದವು. ಜೈಲಿನಿಂದ ಮೊಬೈಲ್ ಬಳಕೆ ಹಾಗೂ ಕುಟುಂಬ ಸದಸ್ಯರೊಂದಿಗೆ ಮಾತನಾಡಿರುವ ವಿಚಾರವನ್ನೂ ದರ್ಶನ್ ಪರ ವಕೀಲರು ಪ್ರಶ್ನಿಸಿದ್ದರು. ಆದರೆ ಪ್ರದೋಷ್, ಜೈಲು ಅಧಿಕಾರಿಗಳು ಒದಗಿಸಿದ ವ್ಯವಸ್ಥೆಯ ಮೂಲಕ ಪತ್ನಿಯೊಂದಿಗೆ ಮಾತನಾಡಿದ್ದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದರು.

ಇಂದಿನ ವಿಚಾರಣೆಯಲ್ಲೂ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಪ್ರಕರಣದ ವಿಚಾರಣೆಗೆ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ. ಆದರೆ ಪ್ರಕರಣವನ್ನು ಮತ್ತಷ್ಟು ಮುಂದೂಡುವ ಮನವಿಗೆ ನ್ಯಾಯಾಲಯ ಒಪ್ಪಿಗೆ ನೀಡಿಲ್ಲ ಎಂಬುದು ವರದಿಯಾಗಿದೆ.

ಪ್ರದೋಷ್ ಅವರ ಹೇಳಿಕೆ ಪ್ರಕರಣದ ತನಿಖೆ ಮತ್ತು ವಿಚಾರಣೆಯಲ್ಲಿ ಮಹತ್ವ ಪಡೆಯುವ ಸಾಧ್ಯತೆಯಿದೆ. ಅವರು ಸಲ್ಲಿಸಿದ್ದ ಅರ್ಜಿಯಲ್ಲಿ ಪ್ರಕರಣದ ಸಂಚು, ರೇಣುಕಾಸ್ವಾಮಿ ಅವರನ್ನು ಅಪಹರಿಸಿದ ಸಂದರ್ಭ, ಹತ್ಯೆ ಹಾಗೂ ಮೃತದೇಹ ವಿಲೇವಾರಿ ಸೇರಿದಂತೆ ಸಹ ಆರೋಪಿಗಳ ಪಾತ್ರದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದಾಗಿ ಹೇಳಿದ್ದರು.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ ಹಲವು ಆರೋಪಿಗಳ ವಿರುದ್ಧ ವಿಚಾರಣೆ ನಡೆಯುತ್ತಿದೆ. ಇದೀಗ ಸೆಪ್ಟೆಂಬರ್ 28ರಂದು ಪ್ರದೋಷ್ ನೀಡಲಿರುವ ಹೇಳಿಕೆಯತ್ತ ಪ್ರಕರಣದ ಮುಂದಿನ ಕಾನೂನು ಪ್ರಕ್ರಿಯೆಯ ಗಮನ ನೆಟ್ಟಿದೆ. ಆದರೆ ಅವರ ಹೇಳಿಕೆಯಲ್ಲಿ ಏನು ದಾಖಲಾಗಲಿದೆ ಎಂಬುದು ನ್ಯಾಯಾಲಯದಲ್ಲಿ ಹೇಳಿಕೆ ದಾಖಲಾದ ಬಳಿಕವಷ್ಟೇ ಸ್ಪಷ್ಟವಾಗಲಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ