93ನೇ ವರ್ಷಕ್ಕೆ ಕಾಲಿಟ್ಟ ಮುಂಬೈನ ‘ನವಸಾಚಾ ಗಣಪತಿ’ಯ ಇತಿಹಾಸ, ವೈಶಿಷ್ಟ್ಯ, ಹರಕೆ, ದರ್ಶನ, ವಿಸರ್ಜನೆ ಮತ್ತು ಸಾಮಾಜಿಕ ಸೇವೆಯ ಸಂಪೂರ್ಣ ಕಥೆ

ಮುಂಬೈ ಎಂದಾಕ್ಷಣ ನೆನಪಾಗುವ ಹಲವು ಸಂಗತಿಗಳಲ್ಲಿ ಗಣೇಶೋತ್ಸವವೂ ಒಂದು. ಗಣೇಶ ಚತುರ್ಥಿ ಬಂದರೆ ಇಡೀ ಮುಂಬೈ ನಗರವೇ ಬಣ್ಣ, ಬೆಳಕು, ಸಂಗೀತ, ಭಕ್ತಿ ಮತ್ತು ಜನಸಾಗರದಿಂದ ಕಂಗೊಳಿಸುತ್ತದೆ. ಆದರೆ ಈ ವೈಭವದ ನಡುವೆ ಒಂದು ಗಣಪತಿ ಮಾತ್ರ ಕೋಟ್ಯಂತರ ಜನರ ಭಕ್ತಿಯ ಕೇಂದ್ರವಾಗಿ ವಿಶಿಷ್ಟ ಸ್ಥಾನ ಪಡೆದಿದ್ದಾನೆ. ಅವರೇ ಲಾಲ್‌ಬಾಗ್‌ಚಾ ರಾಜಾ , ‘ಲಾಲ್‌ಬಾಗ್‌ನ ರಾಜ’.
ಇಂದು ಲಾಲ್‌ಬಾಗ್‌ಚಾ ರಾಜಾ ಎಂದರೆ ಭವ್ಯ ಮಂಟಪ, ಸಾವಿರಾರು ಭಕ್ತರ ಸರತಿ, ಗಣಪತಿ ಬಪ್ಪಾ ಮೋರಯಾ ಎಂಬ ಘೋಷಣೆ, ಗಣ್ಯರ ಭೇಟಿ ಮತ್ತು ಅದ್ಧೂರಿ ವಿಸರ್ಜನಾ ಮೆರವಣಿಗೆ ನೆನಪಾಗುತ್ತದೆ. ಆದರೆ ಈ ಪ್ರಸಿದ್ಧ ಗಣಪತಿಯ ಆರಂಭ ಮಾತ್ರ ಇಷ್ಟೊಂದು ವೈಭವದಿಂದ ಕೂಡಿರಲಿಲ್ಲ.
ಒಂದು ಮಾರುಕಟ್ಟೆ ಮುಚ್ಚಿಹೋಯಿತು. ಮೀನುಗಾರರು ಮತ್ತು ಸಣ್ಣ ವ್ಯಾಪಾರಿಗಳ ಬದುಕು ಸಂಕಷ್ಟಕ್ಕೆ ಸಿಲುಕಿತು. ಶಾಶ್ವತ ಮಾರುಕಟ್ಟೆಗಾಗಿ ಹರಕೆ ಮಾಡಲಾಯಿತು. ಹರಕೆ ಈಡೇರಿತು. ಅದರ ಕೃತಜ್ಞತೆಯಾಗಿ ಗಣಪತಿಯನ್ನು ಪ್ರತಿಷ್ಠಾಪಿಸಲಾಯಿತು. 1934ರಲ್ಲಿ ಆರಂಭವಾದ ಆ ಪರಂಪರೆ ಇಂದು 93ನೇ ವರ್ಷಕ್ಕೆ ಕಾಲಿಟ್ಟಿದೆ. 2026ರ ಲಾಲ್‌ಬಾಗ್‌ಚಾ ರಾಜಾ ಗಣೇಶೋತ್ಸವವು ಸೆಪ್ಟೆಂಬರ್ 14ರಿಂದ ಸೆಪ್ಟೆಂಬರ್ 25ರ ಅನಂತ ಚತುರ್ದಶಿಯವರೆಗೆ ನಡೆಯುತ್ತಿದೆ.
ಲಾಲ್‌ಬಾಗ್‌ಚಾ ರಾಜಾ ಎಂದರೆ ಯಾರು?

ಮುಂಬೈನ ಲಾಲ್‌ಬಾಗ್ ಪ್ರದೇಶದಲ್ಲಿ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಪ್ರತಿಷ್ಠಾಪಿಸಲಾಗುವ ಸಾರ್ವಜನಿಕ ಗಣಪತಿ ವಿಗ್ರಹವೇ ಲಾಲ್‌ಬಾಗ್‌ಚಾ ರಾಜಾ. ಇದು ಸಾಮಾನ್ಯವಾಗಿ ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣಪತಿಯಂತಲ್ಲ. ಇದು ಒಂದು ಸಾರ್ವಜನಿಕ ಗಣೇಶೋತ್ಸವ ಮಂಡಳಿಯ ಪರಂಪರೆಯ ಕೇಂದ್ರಬಿಂದು. ಇದರ ಅಧಿಕೃತ ಹೆಸರು Lalbaugcha Raja Sarvajanik Ganeshotsav Mandal. ಭಕ್ತರ ನಂಬಿಕೆಯಲ್ಲಿ ಲಾಲ್‌ಬಾಗ್‌ಚಾ ರಾಜಾ ‘ನವಸಾಚಾ ಗಣಪತಿ’—ಅಂದರೆ ಭಕ್ತರು ಹರಕೆ ಹೊತ್ತು ಪ್ರಾರ್ಥಿಸಿದರೆ ತಮ್ಮ ಮನೋಭಿಲಾಷೆ ಈಡೇರಿಸುತ್ತಾನೆ ಎಂಬ ನಂಬಿಕೆಗೆ ಪ್ರಸಿದ್ಧ. ಈ ನಂಬಿಕೆಯ ಮೂಲವೂ ಅದರ ಇತಿಹಾಸದಲ್ಲಿಯೇ ಅಡಗಿದೆ.
ಈ ಕಥೆಯ ಆರಂಭ 1932ರಲ್ಲಿ
ಇಂದು ಮುಂಬೈನ ಲಾಲ್‌ಬಾಗ್ ಅತ್ಯಂತ ಜನನಿಬಿಡ ಪ್ರದೇಶ. ಆದರೆ 1930ರ ದಶಕದಲ್ಲಿ ಇದು ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಮೀನುಗಾರರು ಮತ್ತು ಮಿಲ್ ಕಾರ್ಮಿಕರ ಬದುಕಿನೊಂದಿಗೆ ಆಳವಾಗಿ ಬೆಸೆದುಕೊಂಡ ಪ್ರದೇಶವಾಗಿತ್ತು. 1932ರಲ್ಲಿ ಪೆರು ಚಾವ್ಲ್ (Peru Chawl) ಬಳಿಯಿದ್ದ ಮಾರುಕಟ್ಟೆ ಮುಚ್ಚಲ್ಪಟ್ಟಿತು. ಅಲ್ಲಿ ಮೀನುಗಾರರು, ವ್ಯಾಪಾರಿಗಳು ಮತ್ತು ಸಣ್ಣ ಮಾರಾಟಗಾರರು ತಮ್ಮ ಜೀವನೋಪಾಯ ನಡೆಸುತ್ತಿದ್ದರು. ಮಾರುಕಟ್ಟೆ ಮುಚ್ಚಿದ ಪರಿಣಾಮ ಅವರಿಗೆ ತಮ್ಮ ವಸ್ತುಗಳನ್ನು ಮಾರಾಟ ಮಾಡಲು ಶಾಶ್ವತ ಸ್ಥಳವೇ ಇಲ್ಲದಂತಾಯಿತು. ವಿಶೇಷವಾಗಿ ಸ್ಥಳೀಯ ಕೋಳಿ ಮೀನುಗಾರ ಸಮುದಾಯ ಮತ್ತು ಇತರ ವ್ಯಾಪಾರಿಗಳ ಜೀವನೋಪಾಯಕ್ಕೆ ಇದು ದೊಡ್ಡ ಸಮಸ್ಯೆಯಾಯಿತು. ಅವರು ದೇವರ ಮೊರೆ ಹೋದರು.
ಮಾರುಕಟ್ಟೆ ಸಿಕ್ಕರೆ ಗಣಪತಿ ಪ್ರತಿಷ್ಠಾಪಿಸುತ್ತೇವೆ
ಸ್ಥಳೀಯ ಮೀನುಗಾರರು ಮತ್ತು ವ್ಯಾಪಾರಿಗಳು ಗಣೇಶನಿಗೆ ‘ನವಸ’—ಹರಕೆ ಮಾಡಿದರು. ತಮ್ಮ ವ್ಯಾಪಾರ ಮುಂದುವರಿಸಲು ಶಾಶ್ವತ ಮಾರುಕಟ್ಟೆ ನಿರ್ಮಾಣವಾಗಬೇಕು. ತಮ್ಮ ಬದುಕಿಗೆ ನೆಲೆ ಸಿಗಬೇಕು. ಆ ಆಶಯ ಈಡೇರಿದರೆ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದಾಗಿ ಹರಕೆ ಹೊತ್ತರು. ಇದು ಕೇವಲ ವೈಯಕ್ತಿಕ ಆಸೆಗಾಗಿ ಮಾಡಿದ ಹರಕೆಯಲ್ಲ. ಸಮುದಾಯದ ಬದುಕು ಮತ್ತು ಜೀವನೋಪಾಯಕ್ಕಾಗಿ ಮಾಡಿದ ಸಾಮೂಹಿಕ ಪ್ರಾರ್ಥನೆ.
ಸ್ಥಳೀಯ ಮುಖಂಡರು, ನಾಗರಿಕರು ಮತ್ತು ಸಂಬಂಧಪಟ್ಟವರ ಪ್ರಯತ್ನದಿಂದ ಮಾರುಕಟ್ಟೆಗಾಗಿ ಜಾಗ ದೊರೆಯಿತು. ಸ್ಥಳೀಯವಾಗಿ ಉಲ್ಲೇಖವಾಗುವ ಪ್ರಮುಖ ಹೆಸರುಗಳಲ್ಲಿ ಕುವರ್ಜೀ ಜೆಠಾಭಾಯಿ ಶಾ, ಡಾ. ವಿ.ಬಿ. ಕೋರ್ಗಾಂವ್ಕರ್, ನಖವಾ ಕೋಕಂ ಮಾಮಾ, ಭಾವುಸಾಹೇಬ್ ಶಿಂಧೆ, ಡಾ. ಯು.ಎ. ರಾವ್ ಮುಂತಾದವರು ಸೇರಿದ್ದಾರೆ. ಜಮೀನುದಾರ್ತಿ ರಾಜಾಬಾಯಿ ತಯ್ಯಬಾಲಿ ಅವರು ಮಾರುಕಟ್ಟೆ ನಿರ್ಮಾಣಕ್ಕೆ ಜಾಗ ನೀಡಲು ಒಪ್ಪಿಕೊಂಡರು ಎಂಬುದು ಪರಂಪರೆಯ ಇತಿಹಾಸದಲ್ಲಿ ದಾಖಲಾಗಿದೆ. ಅಂತಿಮವಾಗಿ ಅವರ ಬೇಡಿಕೆ ಈಡೇರಿತು.
1934: ಲಾಲ್‌ಬಾಗ್‌ಚಾ ರಾಜನ ಜನನ

ಹರಕೆ ಈಡೇರಿದ ಕೃತಜ್ಞತೆಯಾಗಿ 1934ರ ಸೆಪ್ಟೆಂಬರ್ 12ರಂದು ಸ್ಥಳೀಯ ಮೀನುಗಾರರು ಮತ್ತು ವ್ಯಾಪಾರಿಗಳು ಗಣಪತಿಯ ವಿಗ್ರಹವನ್ನು ಪ್ರತಿಷ್ಠಾಪಿಸಿದರು ಎಂದು ಮಂಡಳಿಯ ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. ಮೊದಲ ವಿಗ್ರಹಕ್ಕೆ ಮೀನುಗಾರರ ಸಾಂಪ್ರದಾಯಿಕ ಉಡುಪು ಮತ್ತು ರೂಪದ ಛಾಯೆ ನೀಡಲಾಗಿತ್ತು. ಆ ಸಮಯದಲ್ಲಿ ಇದು ಇಂದಿನಷ್ಟು ದೊಡ್ಡ ಉತ್ಸವವಾಗಿರಲಿಲ್ಲ. ಆದರೆ ಭಕ್ತರ ನಂಬಿಕೆ ಹೆಚ್ಚುತ್ತಾ ಹೋಯಿತು. ಹರಕೆ ಈಡೇರಿಸಿದ ಗಣಪತಿ ಎಂಬ ಭಾವನೆ ಜನರಲ್ಲಿ ಬಲವಾಗಿ ಬೇರೂರಿತು. ಹೀಗೆ ಅವರು ಕ್ರಮೇಣ ‘ನವಸಾಚಾ ಗಣಪತಿ’ ಎಂದು ಪ್ರಸಿದ್ಧರಾದರು. ನಂತರ ‘ಲಾಲ್‌ಬಾಗ್‌ಚಾ ರಾಜಾ’ ಎಂಬ ಹೆಸರು ಜನಪ್ರಿಯವಾಯಿತು.
ಕಾಂಬ್ಳಿ ಕುಟುಂಬದ ಕೈಚಳಕ
ಲಾಲ್‌ಬಾಗ್‌ಚಾ ರಾಜನ ಇಂದಿನ ವಿಶಿಷ್ಟ ರೂಪದ ಹಿಂದೆ ಮತ್ತೊಂದು ಆಸಕ್ತಿದಾಯಕ ಇತಿಹಾಸವಿದೆ. 1935ರಿಂದ ಕಾಂಬ್ಳಿ ಕುಟುಂಬವು ಲಾಲ್‌ಬಾಗ್‌ಚಾ ರಾಜನ ವಿಗ್ರಹ ನಿರ್ಮಾಣದೊಂದಿಗೆ ಸಂಬಂಧ ಹೊಂದಿದೆ. ಮಧುಸೂದನ್ ದೊಂಡುಜಿ ಕಾಂಬ್ಳಿ ಅವರು ಈ ಪರಂಪರೆಯನ್ನು ಆರಂಭಿಸಿದರು. ನಂತರ ಕುಟುಂಬದ ಮುಂದಿನ ತಲೆಮಾರುಗಳು ಅದನ್ನು ಮುಂದುವರಿಸಿದವು. ಹೀಗೆ ಸುಮಾರು ಮೂರು ತಲೆಮಾರುಗಳಿಂದ ಕಾಂಬ್ಳಿ ಕುಟುಂಬವು ಲಾಲ್‌ಬಾಗ್‌ಚಾ ರಾಜನ ವಿಶಿಷ್ಟ ಮುಖ, ಭಾವ ಮತ್ತು ರಾಜಸಿಕ ಭಂಗಿಯನ್ನು ಉಳಿಸಿಕೊಂಡಿದೆ.
ಲಾಲ್‌ಬಾಗ್‌ಚಾ ರಾಜನ ವಿಗ್ರಹದ ಅತ್ಯಂತ ಪ್ರಮುಖ ವೈಶಿಷ್ಟ್ಯವೇ ಅದರ ರಾಜನಂತಹ ಕುಳಿತ ಭಂಗಿ ಮತ್ತು ಮುಖಭಾವ. ಗಣಪತಿಯ ಕಣ್ಣುಗಳಲ್ಲಿ ಭಕ್ತರನ್ನು ನೋಡುತ್ತಿರುವಂತೆ ಕಾಣುವ ಭಾವ, ಸ್ವಲ್ಪ ತಲೆಯನ್ನು ಬಾಗಿಸಿಕೊಂಡಿರುವ ರಾಜಸಿಕ ಭಂಗಿ—ಇವೆಲ್ಲವೂ ಆ ವಿಗ್ರಹಕ್ಕೆ ಇತರ ಗಣಪತಿ ವಿಗ್ರಹಗಳಿಂದ ವಿಭಿನ್ನವಾದ ಗುರುತನ್ನು ನೀಡಿವೆ.
ಏಕೆ ನವಸಾಚಾ ಗಣಪತಿ?

ಮುಂಬೈಗೆ ಮಾತ್ರವಲ್ಲ, ದೇಶದ ವಿವಿಧ ಭಾಗಗಳಿಂದ ಭಕ್ತರು ಲಾಲ್‌ಬಾಗ್‌ಚಾ ರಾಜನ ದರ್ಶನಕ್ಕೆ ಬರುವುದು ಇದರ ಪ್ರಮುಖ ವೈಶಿಷ್ಟ್ಯ. ಭಕ್ತರು ವಿವಿಧ ಕಾರಣಗಳಿಗಾಗಿ ಹರಕೆ ಹೊರುತ್ತಾರೆ:
- ಆರೋಗ್ಯಕ್ಕಾಗಿ,
- ಉದ್ಯೋಗಕ್ಕಾಗಿ,
- ವಿವಾಹಕ್ಕಾಗಿ,
- ಸಂತಾನಕ್ಕಾಗಿ,
- ವ್ಯಾಪಾರ ಅಭಿವೃದ್ಧಿಗಾಗಿ,
- ಶಿಕ್ಷಣ ಮತ್ತು ಪರೀಕ್ಷೆಯಲ್ಲಿ ಯಶಸ್ಸಿಗಾಗಿ,
- ಕುಟುಂಬದ ಸಮಸ್ಯೆ ಪರಿಹಾರಕ್ಕಾಗಿ,
- ಜೀವನದಲ್ಲಿ ಹೊಸ ಆರಂಭಕ್ಕಾಗಿ.
ಹರಕೆ ಈಡೇರಿದ ನಂತರ ಮತ್ತೆ ಲಾಲ್‌ಬಾಗ್‌ಗೆ ಬಂದು ಕೃತಜ್ಞತೆ ಸಲ್ಲಿಸುವ ಸಂಪ್ರದಾಯವೂ ಇದೆ. ಇದರಿಂದಲೇ ನವಸಾಚಾ ಗಣಪತಿ ಎಂಬ ಹೆಸರು ಮತ್ತಷ್ಟು ಗಟ್ಟಿಯಾಗಿದೆ.
ದರ್ಶನಕ್ಕೂ ಎರಡು ವಿಭಿನ್ನ ಅನುಭವಗಳು
ಲಾಲ್‌ಬಾಗ್‌ಚಾ ರಾಜನ ದರ್ಶನಕ್ಕೆ ಬರುವ ಭಕ್ತರಿಗೆ ಸಾಮಾನ್ಯವಾಗಿ ಎರಡು ರೀತಿಯ ದರ್ಶನದ ವ್ಯವಸ್ಥೆ ಇರುತ್ತದೆ.
1. ಮುಖ ದರ್ಶನ : ಇದರಲ್ಲಿ ಭಕ್ತರು ದೂರದಿಂದಲೇ ಗಣಪತಿಯ ಮುಖವನ್ನು ದರ್ಶನ ಮಾಡುತ್ತಾರೆ.
2. ಚರಣ ಸ್ಪರ್ಶ ದರ್ಶನ : ಭಕ್ತರು ಗಣಪತಿಯ ಪಾದಗಳ ಬಳಿ ತೆರಳಿ ದರ್ಶನ ಪಡೆಯುವ ಅವಕಾಶವನ್ನು ಹೊಂದಿರುತ್ತಾರೆ.
ಹರಕೆ ಹೊತ್ತ ಭಕ್ತರಿಗೆ ಚರಣ ದರ್ಶನ ವಿಶೇಷ ಮಹತ್ವ ಹೊಂದಿದೆ. 2026ರ ಅಧಿಕೃತ ವೇಳಾಪಟ್ಟಿಯ ಪ್ರಕಾರ, ಸೆಪ್ಟೆಂಬರ್ 14ರಂದು ಬೆಳಿಗ್ಗೆ 6 ಗಂಟೆಯ ನಂತರ ಚರಣ ಸ್ಪರ್ಶ ದರ್ಶನ ಮತ್ತು ಮುಖ ದರ್ಶನದ ಸರತಿಗಳು ಆರಂಭಗೊಂಡವು. ಸೆಪ್ಟೆಂಬರ್ 24ರಂದು ವಿಸರ್ಜನಾ ಸಿದ್ಧತೆಗಾಗಿ ಚರಣ ಸ್ಪರ್ಶ ಸರತಿಯನ್ನು ಬೆಳಿಗ್ಗೆ 6 ಗಂಟೆಗೆ ಮತ್ತು ಮುಖ ದರ್ಶನ ಸರತಿಯನ್ನು ರಾತ್ರಿ 11:59ಕ್ಕೆ ಮುಚ್ಚಲಾಗುತ್ತದೆ ಎಂದು ಮಂಡಳಿ ತಿಳಿಸಿದೆ.
ಲಾಲ್‌ಬಾಗ್‌ಚಾ ರಾಜನ ದರ್ಶನಕ್ಕೆ ಏಕೆ ಇಷ್ಟೊಂದು ಜನ?
ಇ
ದರ ಹಿಂದೆ ಕೇವಲ ಧಾರ್ಮಿಕ ನಂಬಿಕೆ ಮಾತ್ರವಲ್ಲ. ಲಾಲ್‌ಬಾಗ್‌ಚಾ ರಾಜಾ ಮುಂಬೈನ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕಿನ ಒಂದು ಸಂಕೇತವಾಗಿ ಬೆಳೆದಿದ್ದಾನೆ. ಮೊದಲಿಗೆ ಮೀನುಗಾರರು ಮತ್ತು ಸಣ್ಣ ವ್ಯಾಪಾರಿಗಳ ಹರಕೆಯಿಂದ ಆರಂಭವಾದ ಈ ಉತ್ಸವ, ನಂತರ ಮಿಲ್ ಕಾರ್ಮಿಕರ ಪ್ರದೇಶದ ಸಾಮೂಹಿಕ ಆಚರಣೆಯಾಗಿ ಬೆಳೆದಿತು. ಕಾಲಕ್ರಮೇಣ ಮುಂಬೈನ ವಿವಿಧ ವರ್ಗಗಳ ಜನರು ಇದರಲ್ಲಿ ಭಾಗಿಯಾಗತೊಡಗಿದರು. ಇಂದು ದೇಶದ ವಿವಿಧ ಭಾಗಗಳಿಂದ ಜನರು ಇಲ್ಲಿಗೆ ಬರುತ್ತಾರೆ. ಪ್ರಸಿದ್ಧ ನಟರು, ಉದ್ಯಮಿಗಳು, ರಾಜಕಾರಣಿಗಳು, ಕ್ರೀಡಾಪಟುಗಳು ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯರೂ ದರ್ಶನ ಪಡೆಯುತ್ತಾರೆ. ಆದರೆ ಸಾಮಾನ್ಯ ಭಕ್ತರ ಪಾಲಿಗೆ ಲಾಲ್‌ಬಾಗ್‌ಚಾ ರಾಜನ ಮಹತ್ವವೇ ಬೇರೆ. ಸರತಿಯಲ್ಲಿ ನಿಂತಿರುವ ವ್ಯಕ್ತಿ ಕೋಟ್ಯಾಧಿಪತಿಯಾಗಿರಲಿ ಅಥವಾ ದಿನಗೂಲಿ ಕಾರ್ಮಿಕನಾಗಿರಲಿ—ಗಣಪತಿಯ ಮುಂದೆ ಎಲ್ಲರೂ ಭಕ್ತರೇ.
2026ರ ಗಣೇಶ ಚತುರ್ಥಿ ಸಂದರ್ಭದಲ್ಲಿ ಮುಂಬೈನ ಪ್ರಸಿದ್ಧ ಲಾಲ್‌ಬಾಗ್‌ಚಾ ರಾಜಾ ಸಾರ್ವಜನಿಕ ಗಣೇಶೋತ್ಸವ ಮಂಡಳಕ್ಕೆ ಚಿತ್ರರಂಗ, ಕ್ರೀಡಾ ಕ್ಷೇತ್ರ ಹಾಗೂ ಮನರಂಜನಾ ಲೋಕದ ಹಲವು ಗಣ್ಯರು ಭೇಟಿ ನೀಡಿ ಗಣಪತಿಯ ದರ್ಶನ ಪಡೆದು, ಪ್ರಾರ್ಥನೆ ಸಲ್ಲಿಸಿದರು. ಈ ಬಾರಿ ಲಾಲ್‌ಬಾಗ್‌ಚಾ ರಾಜಾ ಪಂಡಾಲ್‌ಗೆ ಗಣ್ಯರ ಭೇಟಿ ವಿಶೇಷ ಗಮನ ಸೆಳೆಯಿತು.
ಬಾಲಿವುಡ್ ಮತ್ತು ಮನರಂಜನಾ ಕ್ಷೇತ್ರದ ಗಣ್ಯರು
ಶಾರುಖ್ ಖಾನ್ ಅವರು ಪತ್ನಿ ಗೌರಿ ಖಾನ್ ಹಾಗೂ ಪುತ್ರಿ ಸುಹಾನಾ ಖಾನ್, ರಣವೀರ್ ಸಿಂಗ್, ಸಲ್ಮಾನ್ ಖಾನ್, ಸಂಜಯ್ ದತ್ ಮತ್ತು ಮಾನ್ಯತಾ ದತ್ ದಂಪತಿಗಳು, ರಾಜ್‌ಪಾಲ್ ಯಾದವ್, ಕಾರ್ತಿಕ್ ಆರ್ಯ, ತೇಶ್ ದೇಶಮುಖ್–ಜೆನೆಲಿಯಾ ದೇಶಮುಖ್, ಶಿಲ್ಪಾ ಶೆಟ್ಟಿ, ಸಿದ್ಧಾರ್ಥ್ ಮಲ್ಹೋತ್ರಾ–ಏಕ್ತಾ ಕಪೂರ್ ಸೇರಿದಂತೆ ಹಲವು ಚಿತ್ರರಂಗದ ಗಣ್ಯರು, ಅನನ್ಯಾ ಪಾಂಡೆ ಮತ್ತು ಚಂಕಿ ಪಾಂಡೆ ತಂದೆ-ಮಗಳಾಗಿ ಒಟ್ಟಿಗೆ ಆಗಮಿಸಿ ಗಣಪತಿಯ ದರ್ಶನ ಪಡೆದರು. ಗೋವಿಂದ, ನೀಲ್ ನಿತಿನ್ ಮುಖೇಶ್, ಪೃಥ್ವಿರಾಜ್ ಸುಕುಮಾರನ್, ಈಶಾ ಡಿಯೋಲ್ ಸೇರಿದಂತೆ ಹಲವು ಗಣ್ಯರೂ ವಿವಿಧ ದಿನಗಳಲ್ಲಿ ಲಾಲ್‌ಬಾಗ್‌ಚಾ ರಾಜಾ ಪಂಡಾಲ್‌ಗೆ ಭೇಟಿ ನೀಡಿದರು. ಕ್ರಿಕೆಟ್ ಕ್ಷೇತ್ರದಿಂದ ರೋಹಿತ್ ಶರ್ಮಾ ಅವರು ಪತ್ನಿ ರಿತಿಕಾ ಸಜ್ದೇಹ್ ಅವರೊಂದಿಗೆ ಲಾಲ್‌ಬಾಗ್‌ಚಾ ರಾಜಾ ದರ್ಶನಕ್ಕೆ ಆಗಮಿಸಿದರು
ಒಟ್ಟಿನಲ್ಲಿ, ಲಾಲ್‌ಬಾಗ್‌ಚಾ ರಾಜಾ ಪಂಡಾಲ್ ಗಣೇಶೋತ್ಸವದಲ್ಲಿ ಸಾಮಾನ್ಯ ಭಕ್ತರಿಂದ ಹಿಡಿದು ಚಿತ್ರರಂಗ, ಕ್ರೀಡೆ ಮತ್ತು ಮನರಂಜನಾ ಕ್ಷೇತ್ರದ ಗಣ್ಯರವರೆಗೆ ಎಲ್ಲರನ್ನೂ ಒಂದೇ ಭಕ್ತಿಯ ವಾತಾವರಣದಲ್ಲಿ ಸೆಳೆಯಿತು. ಗಣಪತಿಯ ಮೇಲಿನ ನಂಬಿಕೆ ಮತ್ತು ಮುಂಬೈನ ಗಣೇಶೋತ್ಸವದ ಸಾಂಸ್ಕೃತಿಕ ಮಹತ್ವವನ್ನು ಈ ಗಣ್ಯರ ಭೇಟಿಗಳು ಮತ್ತಷ್ಟು ಗಮನಾರ್ಹಗೊಳಿಸಿದವು.
ವಿಸರ್ಜನೆ, ಭಕ್ತಿಯ ಅಂತಿಮ ವೈಭವ
ಗಣೇಶೋತ್ಸವದ ಕೊನೆಯ ದಿನ ಅನಂತ ಚತುರ್ದಶಿ. ಆ ದಿನ ಲಾಲ್‌ಬಾಗ್‌ಚಾ ರಾಜನ ವಿಸರ್ಜನಾ ಮೆರವಣಿಗೆ ಮುಂಬೈನ ಅತ್ಯಂತ ಗಮನಾರ್ಹ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಒಂದಾಗುತ್ತದೆ. ವಿಶಾಲ ಜನಸಾಗರದ ನಡುವೆ ಗಣಪತಿಯ ಮೆರವಣಿಗೆ ಸಾಗುತ್ತದೆ.
ಗಣಪತಿ ಬಪ್ಪಾ ಮೋರಯಾ! ಮುಂದಿನ ವರ್ಷ ಬೇಗ ಬಾ!
ಎಂಬ ಘೋಷಣೆಗಳು ಮೊಳಗುತ್ತವೆ. ಮುಂಬೈನ ರಸ್ತೆಗಳಲ್ಲಿ ಸಾವಿರಾರು ಭಕ್ತರು ಸೇರುತ್ತಾರೆ. ಸಂಗೀತ, ಡೋಲು-ತಾಶಾ, ನೃತ್ಯ ಮತ್ತು ಭಕ್ತಿಗೀತೆಗಳ ನಡುವೆ ಗಣಪತಿಯ ಮೆರವಣಿಗೆ ಸಾಗುತ್ತದೆ. ಕೊನೆಗೆ ಗಣಪತಿಯನ್ನು ಗಿರ್ಗಾಂವ್ ಚೌಪಾಟಿ ಕಡೆಗೆ ಕರೆದೊಯ್ದು ಸಮುದ್ರದಲ್ಲಿ ವಿಸರ್ಜಿಸಲಾಗುತ್ತದೆ. ಲಾಲ್‌ಬಾಗ್‌ಚಾ ರಾಜನ ವಿಸರ್ಜನೆ ಮುಂಬೈನ ಪ್ರಸಿದ್ಧ ಗಣೇಶ ವಿಸರ್ಜನಾ ಮೆರವಣಿಗೆಗಳಲ್ಲಿ ಒಂದಾಗಿದೆ.
2020ರಲ್ಲಿ ಮುರಿದ 86 ವರ್ಷಗಳ ಪರಂಪರೆ
ಲಾಲ್‌ಬಾಗ್‌ಚಾ ರಾಜನ ಇತಿಹಾಸದಲ್ಲಿ 2020ನೇ ವರ್ಷ ವಿಶೇಷವಾಗಿ ನೆನಪಿನಲ್ಲಿ ಉಳಿಯುತ್ತದೆ. COVID-19 ಮಹಾಮಾರಿಯ ಹಿನ್ನೆಲೆಯಲ್ಲಿ 2020ರಲ್ಲಿ ಸಾಂಪ್ರದಾಯಿಕ ರೀತಿಯ ಗಣೇಶೋತ್ಸವವನ್ನು ಮಂಡಳಿ ರದ್ದುಗೊಳಿಸಿತ್ತು. ಅದರ ಬದಲಿಗೆ ಕೋವಿಡ್-19 ಕುರಿತು ಜಾಗೃತಿ ಮೂಡಿಸುವ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ನೆರವಾಗುವ ಚಟುವಟಿಕೆಗಳಿಗೆ ಒತ್ತು ನೀಡಲಾಯಿತು.
ಇದು ಸ್ಥಾಪನೆಯಾದ ನಂತರದ ಸುಮಾರು 86 ವರ್ಷಗಳಲ್ಲಿ ಮೊದಲ ಬಾರಿಗೆ ಸಾಂಪ್ರದಾಯಿಕ ಉತ್ಸವ ನಡೆಯದ ಸಂದರ್ಭವಾಗಿತ್ತು. ಇದು ಲಾಲ್‌ಬಾಗ್‌ಚಾ ರಾಜಾ ಕೇವಲ ಧಾರ್ಮಿಕ ಆಚರಣೆಯಲ್ಲದೆ, ಪರಿಸ್ಥಿತಿಗೆ ಅನುಗುಣವಾಗಿ ಸಾಮಾಜಿಕ ಹೊಣೆಗಾರಿಕೆಯನ್ನು ಸ್ವೀಕರಿಸಿದ ಒಂದು ಸಾರ್ವಜನಿಕ ಸಂಸ್ಥೆಯೂ ಹೌದು ಎಂಬುದನ್ನು ತೋರಿಸಿತು.
ಭಕ್ತಿಯ ಜೊತೆಗೆ ಸಾಮಾಜಿಕ ಸೇವೆ

ಇಂದಿನ ದೊಡ್ಡ ಸಾರ್ವಜನಿಕ ಗಣೇಶೋತ್ಸವಗಳ ಮತ್ತೊಂದು ಪ್ರಮುಖ ಅಂಶವೆಂದರೆ ಭಕ್ತರಿಂದ ಬರುವ ದೇಣಿಗೆ ಮತ್ತು ಕಾಣಿಕೆಗಳನ್ನು ಸಾಮಾಜಿಕ ಕಾರ್ಯಗಳಿಗೆ ಬಳಸುವುದು. ಇಂದಿಗೂ ಲಾಲ್‌ಬಾಗ್‌ಚಾ ರಾಜನಿಗೆ ಭಕ್ತರಿಂದ ದೊಡ್ಡ ಪ್ರಮಾಣದಲ್ಲಿ ನಗದು, ಚಿನ್ನ ಮತ್ತು ಬೆಳ್ಳಿಯ ಕಾಣಿಕೆಗಳು ಬರುತ್ತಿವೆ. ಸೆಪ್ಟೆಂಬರ್ 19ರ ವೇಳೆಗೆ ಐದು ದಿನಗಳಲ್ಲಿ ಸುಮಾರು ₹3.1 ಕೋಟಿ ನಗದು, 1.12 ಕೆ.ಜಿ. ಚಿನ್ನ ಮತ್ತು 19.75 ಕೆ.ಜಿ. ಬೆಳ್ಳಿ ಕಾಣಿಕೆ ಬಂದಿರುವುದಾಗಿ ವರದಿಯಾಗಿದೆ. ಮೊದಲ ಮೂರು ದಿನಗಳಲ್ಲೇ ಸುಮಾರು ₹3.18 ಕೋಟಿ ಮೌಲ್ಯದ ನಗದು, ಚಿನ್ನ ಮತ್ತು ಬೆಳ್ಳಿ ಕಾಣಿಕೆ ಬಂದಿತ್ತು ಎಂದು ಮತ್ತೊಂದು ವರದಿ ತಿಳಿಸಿದೆ. ಇಂತಹ ದೊಡ್ಡ ಪ್ರಮಾಣದ ದೇಣಿಗೆಗಳ ಲೆಕ್ಕಪತ್ರ, ಸಂಗ್ರಹ ಮತ್ತು ಬಳಕೆಯ ಬಗ್ಗೆ ಪಾರದರ್ಶಕತೆ ಬಹಳ ಮುಖ್ಯ. ವರದಿಗಳ ಪ್ರಕಾರ, ದೇಣಿಗೆ ಎಣಿಕೆ ಮತ್ತು ಪರಿಶೀಲನೆಯಲ್ಲಿ ಮಂಡಳಿಯ ಜೊತೆಗೆ ಬ್ಯಾಂಕ್ ಹಾಗೂ ಇತರ ಸಂಬಂಧಿತ ಸಂಸ್ಥೆಗಳ ಪ್ರತಿನಿಧಿಗಳೂ ಭಾಗವಹಿಸುತ್ತಾರೆ; ಸಂಗ್ರಹವನ್ನು ಸಾಮಾಜಿಕ ಚಟುವಟಿಕೆಗಳಿಗೆ ಬಳಸಲಾಗುತ್ತದೆ ಎಂದು ಮಂಡಳಿ ತಿಳಿಸಿದೆ.
ಲಾಲ್‌ಬಾಗ್‌ಚಾ ರಾಜನ ನಿಜವಾದ ವೈಶಿಷ್ಟ್ಯವೇನು?
ಲಾಲ್‌ಬಾಗ್‌ಚಾ ರಾಜನ ವೈಭವ ಕೇವಲ ಅದರ ಎತ್ತರದಲ್ಲಿಲ್ಲ. ಅದರ ಸೌಂದರ್ಯ ಕೇವಲ ಅಲಂಕಾರದಲ್ಲಿಲ್ಲ. ಅದರ ಜನಪ್ರಿಯತೆ ಕೇವಲ ಸೆಲೆಬ್ರಿಟಿಗಳ ಭೇಟಿಯಿಂದಲೂ ಬಂದಿಲ್ಲ. ಅದರ ಹಿಂದೆ ಸುಮಾರು ಒಂಬತ್ತು ದಶಕಗಳ ಸಮುದಾಯದ ನೆನಪು, ಜೀವನೋಪಾಯದ ಹೋರಾಟ, ಹರಕೆ, ನಂಬಿಕೆ ಮತ್ತು ಪರಂಪರೆ ಇದೆ. ಒಂದು ಕಾಲದಲ್ಲಿ ಮಾರುಕಟ್ಟೆಗಾಗಿ ಹೋರಾಡುತ್ತಿದ್ದ ಮೀನುಗಾರರು ಮತ್ತು ಸಣ್ಣ ವ್ಯಾಪಾರಿಗಳ ಬದುಕಿನೊಂದಿಗೆ ಬೆಸೆದುಕೊಂಡಿದ್ದ ಗಣಪತಿ, ಇಂದು ಭಾರತದ ಅತ್ಯಂತ ಪ್ರಸಿದ್ಧ ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಒಂದಾಗಿ ಬೆಳೆದಿದ್ದಾನೆ.
ಆದ್ದರಿಂದ ಲಾಲ್‌ಬಾಗ್‌ಚಾ ರಾಜನ ಕಥೆ ಕೇವಲ ಒಬ್ಬ ಪ್ರಸಿದ್ಧ ಗಣಪತಿಯ ಕಥೆ ಅಲ್ಲ. ಇದು
ಒಂದು ಸಮುದಾಯದ ಬದುಕಿನ ಕಥೆ.
ಒಂದು ಹರಕೆಯ ಕಥೆ.
ಒಂದು ಮಾರುಕಟ್ಟೆಯ ಕಥೆ.
ಒಂದು ನಗರದ ಬದಲಾವಣೆಯ ಕಥೆ.
ಮೂರು ತಲೆಮಾರುಗಳ ಶಿಲ್ಪಕಲೆಯ ಕಥೆ.
ಮತ್ತು ಕೋಟ್ಯಂತರ ಭಕ್ತರ ನಂಬಿಕೆಯ ಕಥೆ.
ಕೊನೆಯದಾಗಿ…
1934ರಲ್ಲಿ ಕೃತಜ್ಞತೆಯಿಂದ ಪ್ರತಿಷ್ಠಾಪಿಸಲ್ಪಟ್ಟ ಗಣಪತಿ ಇಂದು ಮುಂಬೈನ ಸಾಂಸ್ಕೃತಿಕ ಗುರುತಿನ ಒಂದು ಭಾಗವಾಗಿದ್ದಾನೆ. ಲಾಲ್‌ಬಾಗ್‌ಚಾ ರಾಜಾ ಎಂದರೆ ನಂಬಿಕೆ. ಲಾಲ್‌ಬಾಗ್‌ಚಾ ರಾಜಾ ಎಂದರೆ ಹರಕೆ. ಲಾಲ್‌ಬಾಗ್‌ಚಾ ರಾಜಾ ಎಂದರೆ ಸಮುದಾಯದ ಒಗ್ಗಟ್ಟು. ಲಾಲ್‌ಬಾಗ್‌ಚಾ ರಾಜಾ ಎಂದರೆ ಮುಂಬೈನ ಗಣೇಶೋತ್ಸವದ ವೈಭವ. ಪ್ರತಿ ವರ್ಷ ಭಕ್ತರು ಒಂದು ನಿರೀಕ್ಷೆಯೊಂದಿಗೆ ಬರುತ್ತಾರೆ. ಬಪ್ಪಾ, ನಮ್ಮ ನವಸ ಈಡೇರಿಸು. ಮತ್ತು ವಿಸರ್ಜನೆಯ ದಿನ ಅದೇ ಭಕ್ತರು ಕಣ್ಣೀರಿನಿಂದ ಹೇಳುತ್ತಾರೆ
ಗಣಪತಿ ಬಪ್ಪಾ ಮೋರಯಾ… ಮುಂದಿನ ವರ್ಷ ಬೇಗ ಬಾ! ಅದೇ ಲಾಲ್‌ಬಾಗ್‌ಚಾ ರಾಜನ ಶಕ್ತಿ.
ಗಣೇಶನ ಮೂರ್ತಿಯಷ್ಟೇ ವಿಸರ್ಜನೆಯಾಗುತ್ತದೆ ಆದರೆ ಅದರ ಮೇಲಿನ ನಂಬಿಕೆ ಮಾತ್ರಾ ನಿರಂತವಾಗಿ ನಮ್ಮಲ್ಲಿಯೇ ಇದ್ದು ಮತ್ತೆ ಮುಂದಿನ ವರ್ಷ ಹೊಸ ರೂಪದಲ್ಲಿ ಗಣೇಶ ಮರಳುವವರೆಗೂ ಕಾಯುತ್ತಲೇ ಇರುತ್ತದೆ ಅಲ್ವೇ?
ಏನಂತೀರೀ?
ನಿಮ್ಮವನೇ ಉಮಾಸುತ





