ಅಚ್ಚ ಶಾಸ್ತ್ರೀಯ ಕೂಚಿಪುಡಿಯ ನೃತ್ಯ ಶೈಲಿಯಲ್ಲಿ ಪಾರಂಗತೆಯಾಗಿ ದೇಶವಿದೇಶಗಳಲ್ಲಿ ತಮ್ಮ ಪ್ರತಿಭಾ ಪ್ರದರ್ಶನದಿಂದ ಅಪಾರ ಜನಮನ್ನಣೆ ಗಳಿಸಿರುವ ದೀಪಾರ ಸಾಧನೆಗಳ ಬಗ್ಗೆ ವಿವರವಾಗಿ ತಿಳಿಯೋಣವೇ…….?

ನಾಲ್ಕು ದಶಕಗಳಿಂದ ಎಡೆಬಿಡದೆ ಅಚ್ಚ ಶಾಸ್ತ್ರೀಯ ಕೂಚಿಪುಡಿಯ ನೃತ್ಯ ಶೈಲಿಯಲ್ಲಿ ಪರಿಶ್ರಮಿಸುತ್ತಿರುವ ಅಂತಾರಾಷ್ಟ್ರೀಯ ನೃತ್ಯ ಕಲಾವಿದೆ, ನೃತ್ಯ ಸಂಯೋಜಕಿ, ವಿಖ್ಯಾತ ನಾಟ್ಯಗುರು ದೀಪಾ ನಾಟ್ಯಗುರು ದೀಪಾ ನಾರಾಯಣನ್‌ ಅರ್ಥಾತ್‌ ದೀಪಾ ಶಶೀಂದ್ರನ್‌ ತಮ್ಮ ಅಸಂಖ್ಯ ನೃತ್ಯ ಪ್ರದರ್ಶನಗಳಿಂದ ಖ್ಯಾತರಾದರು. ತಮ್ಮ `ಕೂಚಿಪುಡಿ ಪರಂಪರಾ ಫೌಂಡೇಶನ್‌’ ಮೂಲಕ ವೇದಾಂತಂ ಲಕ್ಷ್ಮಿನಾರಾಯಣ ಶಾಸ್ತ್ರೀಯ ಚಿನ್ನ ಸತ್ಯಂ ಪರಂಪರೆಯ ನೃತ್ಯಾಭಿವೃದ್ಧಿಯ ಸಾಧನೆಯಲ್ಲಿ ನಿರತರಾದ ದೀಪಾ, ಪರಿಣಿತ ಅಭಿನಯ ಮನೋಜ್ಞ ನೃತ್ಯ ಪ್ರಸ್ತುತಿ ಅಪೂರ್ವ ನೃತ್ಯ ಸಂಯೋಜನೆಗಳಿಂದ ಕಲಾರಸಿಕರ ಗಮನ ಸೆಳೆದಿದ್ದಾರೆ.

43 ವರ್ಷಗಳು ಕೂಚಿಪುಡಿ ನೃತ್ಯಭ್ಯಾಸ ಮಾಡಿ ಪ್ರಬುದ್ಧತೆ ಸಾಧಿಸಿರುವ ಅತ್ಯಂತ ನೈಪುಣ್ಯತೆ ಪಡೆದ ಪ್ರತಿಭಾವಂತ ಸಾಧಕಿ ದೀಪಾ. ಶಂಕರಾಭರಣ ಚಲನಚಿತ್ರ ಖ್ಯಾತಿಯ ಮಂಜುಭಾರ್ಗವಿ ಅವರ ಪ್ರಧಾನಶಿಷ್ಯರಾಗಿ ಅವರಲ್ಲಿ 8 ವರ್ಷದ ಹುಡುಗಿ ನೃತ್ಯ ಕಲಿಯಲು ಆರಂಭಿಸಿ, ಅವರ ಮಾರ್ಗದರ್ಶನದಲ್ಲೇ ತನ್ನ `ರಂಗಪ್ರವೇಶ’ವನ್ನು ನೆರೀರಿಸಿಕೊಂಡು, ಸತತ ಮೂರು ದಶಕಗಳು ಅವರಲ್ಲಿ ನಾಟ್ಯ ಶಿಕ್ಷಣ ಪಡೆದು ಗುರು ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಅಗ್ಗಳಿಕೆ ಅವರದು.

ನೃತ್ಯಾಭ್ಯಾಸಕ್ಕೆ ನಾಂದಿ

ಮೂಲತಃ ದೀಪಾ, ಕೇರಳದವರಾದರೂ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದು, ಬದುಕು ಕಟ್ಟಿಕೊಂಡವರು. ಬಿ.ಇ.ಎಲ್ ಅಧಿಕಾರಿ ನಾರಾಯಣನ್‌ ನಾಯರ್‌ ಮತ್ತು ಶ್ರೀದೇವಿಯವರ ಮಗಳು. ಐದನೇ ವಯಸ್ಸಿಗೇ ಕಲಾಮಂಡಲಂ ಉಷಾ ದಾತಾರ್‌ ಮತ್ತು ಡಾ. ಸಾವಿತ್ರಿ ರಾಮಯ್ಯ ಅವರಲ್ಲಿ ಭರತನಾಟ್ಯ ಕಲಿತು 8ನೇ ವರ್ಷಕ್ಕೆ ಕೂಚಿಪುಡಿ ನೃತ್ಯಕೋವಿದೆ ಮಂಜುಭಾರ್ಗವಿಯವರ `ಪದ್ಮಾವತಿ ಕಲಾನಿಕೇತನ’ ಸೇರಿ ಅವರ ಮೊದಲ ಶಿಷ್ಯೆ ಎನಿಸಿಕೊಂಡರು.

ಯಾವುದಾದರೂ ಒಂದು ನೃತ್ಯ ಶೈಲಿಯನ್ನು ಅನುಸರಿಸು ಎಂಬ ಅವರ ಸಲಹೆಯಂತೆ ದೀಪಾ, ಕೂಚಿಪುಡಿಯನ್ನು ಆಯ್ದುಕೊಂಡರು. ತಮ್ಮ 12ನೇ ವಯಸ್ಸಿನಲ್ಲಿ ಮಂಜುಭಾರ್ಗವಿಯವರೊಂದಿಗೆ ದೇಶಾದ್ಯಂತ ಸಂಚರಿಸಿ ನೂರಾರು ಪ್ರದರ್ಶನ ನೀಡಿದರು. ಗುರುಗಳ ಗರಡಿಯಲ್ಲಿ ಚೆನ್ನಾಗಿ ನುರಿತ ದೀಪಾ, ತಮ್ಮ 16ನೇ ವಯಸ್ಸಿಗೇ, ಇಂದಿನ ಕೆಲವು ಕೂಚಿಪುಡಿ ಖ್ಯಾತ ಕಲಾವಿದೆಯರಿಗೆ, ಹಲವು ವರ್ಷಗಳು ತಾವು ನಾಟ್ಯ ಶಿಕ್ಷಣ ನೀಡಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ. ಇದುವರೆಗೂ ಒಬ್ಬರೇ ಗುರುಗಳಿಂದ ಶಿಕ್ಷಣ ಪಡೆದುದರಿಂದ ತಮ್ಮ ನೃತ್ಯಶೈಲಿ ಅಪ್ಪಟವಾಗಿ ಉಳಿದುಕೊಂಡು ಬಂದಿದೆ ಎನ್ನುವರು.

WhatsApp-Image-2025-12-30-at-22.01.16

ವೃತ್ತಿ ಪ್ರವೃತ್ತಿ

ಸತತವಾಗಿ ನೃತ್ಯ ಪ್ರದರ್ಶನಗಳನ್ನು ನೀಡುತ್ತಲೇ ದೀಪಾ, ಕಾನೂನು ಪದವೀಧರೆಯಾಗಿ, ಜೊತೆಗೆ ಪಿ.ಜಿ.ಡಿ ಮಾಡಿ ಸಾಫ್ಟ್ ವೇರ್‌ ಇಂಡಸ್ಟ್ರಿಯಲ್ಲಿ ಎಚ್‌.ಆರ್‌.ಡಿ ತಜ್ಞರಾಗಿ ಅನೇಕ ಕಾರ್ಪೋರೆಟ್‌ ಕಂಪನಿಗಳಲ್ಲಿ ಉದ್ಯೋಗ ನಿರ್ವಹಿಸಿದ್ದಾರೆ. ಈಗಾಗಲೇ ಉದ್ಯೋಗರಂಗದಲ್ಲಿ 25 ವರ್ಷಗಳ ಅನುಭವ ಗಳಿಸಿ, ಕೈತುಂಬಾ ಸಂಪಾದನೆಯಿದ್ದರೂ ನೃತ್ಯದ ಒಲವಿನಿಂದ ಉದ್ಯೋಗವನ್ನು ತ್ಯಜಿಸಿ, ತಮ್ಮ ಭವಿಷ್ಯವನ್ನು ಸಂಪೂರ್ಣ ನೃತ್ಯ ಸೇವೆಗೆ ಮುಡಿಪಾಗಿಟ್ಟಿರುವ ವೈಶಿಷ್ಟ್ಯ ಅವರದು. ಮದುವೆಯಾಗಿ ಮಕ್ಕಳಾದರೂ ದೀಪಾ, ನೃತ್ಯ ಕೈಂಕರ್ಯ ಬಿಡಲಿಲ್ಲ.

ಕೂಚಿಪುಡಿ ಪರಂಪರಾ ಫೌಂಡೇಶನ್‌

ತಮ್ಮದೇ ಆದ ಲಾಭರಹಿತ `ಕೂಚಿಪುಡಿ ಪರಂಪರಾ ಫೌಂಡೇಶನ್‌’ ಮೂಲಕ ಅನೇಕ  ವಿದ್ಯಾರ್ಥಿಗಳಿಗೆ ನೃತ್ಯ ಹೇಳಿಕೊಡುತ್ತ ಉತ್ತಮ ನಾಟ್ಯ ಗುರು ಎನಿಸಿಕೊಂಡಿದ್ದಾರೆ. ಲೆಂಪಟಿ ರವಿಶಂಕರ್‌ ಅವರಲ್ಲಿ ನೃತ್ಯ ಸಂಯೋಜನೆಯ ಬಗ್ಗೆ ಹೆಚ್ಚಿನ ಜ್ಞಾನ ಪಡೆದು, ಅನೇಕ ವಿಶಿಷ್ಟ ವಿಭಿನ್ನ ನೃತ್ಯ ರೂಪಕಗಳನ್ನು ನಿರ್ಮಿಸಿ ದೇಶಾದ್ಯಂತ ಪ್ರದರ್ಶನಗಳನ್ನು ನೀಡಿದ್ದಾರೆ.

ಮೈಸೂರು ದಸರಾ, ಹಂಪಿ, ಪಟ್ಟದಕಲ್ಲು, ರಸೋಲ್ಲಾಸ, ನೃತ್ಯಕುಂಜಲ್ ಮಹೋತ್ಸವಗಳು ಸೇರಿದಂತೆ ಅಸಂಖ್ಯಾತ ಪ್ರತಿಷ್ಠಿತ ನೃತ್ಯೋತ್ಸವಗಳಲ್ಲಿ ಪಾಲ್ಗೊಂಡಿರುವ ಅಗ್ಗಳಿಕೆ ಅವರದು.

ಅಂತಾರಾಷ್ಟ್ರಿಯ ನೃತ್ಯೋತ್ಸವ ಸಮಿತಿ

ಕೇರಳದಲ್ಲಿ  ಕ್ಯಾಲಿಕಟ್‌ ಮತ್ತು ನೆಲಂಬೂರು ಹಾಗೂ ಬೆಂಗಳೂರಿನ ಮೂರು ಶಾಖೆಗಳಲ್ಲಿ ನಾಟ್ಯ ಶಿಕ್ಷಣ ನೀಡುತ್ತಿರುವ ಇವರು,  ಅಂತಾರಾಷ್ಟ್ರೀಯ ಸಂಸ್ಥೆಯಾದ ಸ್ವಿಕಲ್ ಮಾಕೆ ಹಾಗೂ ಕೇಂದ್ರ ಸಂಸ್ಕೃತಿ ಸಚಿವಾಲಯದ ಅಂತಾರಾಷ್ಟ್ರಿಯ ನೃತ್ಯೋತ್ಸವ ಸಮಿತಿಯಲ್ಲಿ ಮಾನ್ಯತೆ ಪಡೆದಿರುವ ಕಲಾವಿದೆ.

WhatsApp-Image-2025-12-30-at-22.00.36-(1)

ಗ್ರೇಡೆಡ್‌ ಆರ್ಟಿಸ್ಟ್ ಆಗಿ ಖ್ಯಾತಿ

ದೂರದರ್ಶನದ ಗ್ರೇಡೆಡ್‌ ಆರ್ಟಿಸ್ಟ್ ಆಗಿರುವ ದೀಪಾ, ಉತ್ತರ ಅಮೆರಿಕಾದ ಹ್ಯೂಸ್ಟನ್‌ ನಲ್ಲಿ ನಡೆದ ಅಂತಾರಾಷ್ಟ್ರೀಯ ಮೊದಲ ಕೂಚಿಪುಡಿ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿ, ಪ್ರಬಂಧ ಮಂಡಿಸಿ, ಏಕವ್ಯಕ್ತಿ ಪ್ರದರ್ಶನ ನೀಡಿರುವುದು ವಿಶೇಷ. ಅಮೆರಿಕಾ ಸೇರಿದಂತೆ, ಅಬುದಾಬಿ, ಬೆಹರೆನ್‌, ದೋಹಾ ಮತ್ತು ದುಬೈಗಳಲ್ಲಿ ಅನೇಕ ಕಾರ್ಯಾಗಾರಗಳನ್ನು ನಡೆಸಿ, ಪ್ರಾತ್ಯಕ್ಷಿಕಾ ಉಪನ್ಯಾಸಗಳನ್ನೂ ನೀಡಿದ್ದಾರೆ.

ವೈವಿಧ್ಯಮಯ ನೃತ್ಯರೂಪಕಗಳು

ದ್ರೌಪದಿಯ ಬಗ್ಗೆ ವಿಭಿನ್ನ ಆಯಾಮದಲ್ಲಿ `ಅಗ್ನಿ ಜ್ಯೋತ್ನ್ಸಾ’ ನೃತ್ಯರೂಪಕ ತಯಾರಿಸಿ ಹಲವಾರು ಪ್ರದರ್ಶನಗಳನ್ನು ನೀಡಿ ಪ್ರಶಂಸೆ ಪಡೆದಿದ್ದಾರೆ. ಹಾಗೇ ಇವರ `ಪಂಚನಾಯಿಕಾಸ್‌’ ಮತ್ತು `ನದಿ’ ಕೂಡ ಇವರ ನೃತ್ಯ ಸಂಯೋಜನೆಯ ಪರಿಣಾಮಕಾರಿಯಾದ ನೃತ್ಯರೂಪಕಗಳು.

ಮುಖ್ಯಪಾತ್ರಗಳಲ್ಲಿ ಅಭಿನಯಿಸಿ, ತಮ್ಮ ನಟನಾ ಕೌಶಲ, ನೃತ್ಯ ಪ್ರತಿಭೆ ಮೆರೆಯುವ ದೀಪಾ, ಹೊಸ ಬಗೆಯ, ಪ್ರಯೋಗಗಳತ್ತ ಮುಖ ಮಾಡಿದರು. ಇವರ ಪರಿಕಲ್ಪನೆಯ `ನಂದನಾರ್‌’ ವಿಶಿಷ್ಟ ನೃತ್ಯರೂಪಕ, ವಿದೇಶ ಸೇರಿದಂತೆ ಈಗಾಗಲೇ 28 ಪ್ರದರ್ಶನಗಳನ್ನು ಕಂಡು ಬಹು ಜನಪ್ರಿಯ ಎನಿಸಿದೆ.

WhatsApp-Image-2025-12-30-at-22.00.40

ಅಂತಾರಾಷ್ಟ್ರೀಯ ಸಾಧನೆ

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನೃತ್ಯದ ಕಲಾ ಕೌಶಲ್ಯ ಮತ್ತು ತಜ್ಞತೆಯಲ್ಲಿ ಗುರುತಿಸಲ್ಪಟ್ಟಿರುವ ದೀಪಾ, ಕರ್ನಾಟಕ ಸರ್ಕಾರದ ಪಠ್ಯಪುಸ್ತಕ ಸಮಿತಿಯಲ್ಲಿ ಕೆಲಸ ಮಾಡಿದ್ದಾರೆ. ರೇವಾ ಯೂನಿವರ್ಸಿಟಿ ಪರ್ಫಾರ್ಮಿಂಗ್‌ ಆರ್ಟ್ಸ್ ನಲ್ಲಿ ಪಿ.ಜಿ. ಪರೀಕ್ಷಕರಾಗಿಯೂ ಕಾರ್ಯ ನಿರ್ವಹಿಸಿದ ಹಿರಿಮೆ ಇರದು.

ಪುರಸ್ಕಾರ ಗೌರವಗಳು

ಇವರ ಪ್ರತಿಭೆಗೆ ತಕ್ಕ ಪುರಸ್ಕಾರ ಗೌರವಗಳು ಇವರಿಗೆ ಸಾಕಷ್ಟು ಲಭಿಸಿವೆ. ಅವುಗಳಲ್ಲಿ ಮುಖ್ಯವಾದ ನೃತ್ಯ ಶಿರೋಮಣಿ, ನೃತ್ಯ ವಿಲಾಸಿನಿ, ಸತ್ಯಭಾಮ ಪ್ರಶಸ್ತಿ, ಯುವರಂಗದ ಅತ್ಯುತ್ತಮ ಕೂಚಿಪುಡಿ ಕಲಾವಿದೆ, ನಾಟ್ಯ ಕೌಸ್ತುಭ ಮುಂತಾದವು. ತಮ್ಮ ಕೂಚಿಪುಡಿ ಫೌಂಡೇಶನ್‌ ನಿಂದ ಕಳೆದ ಹಲವಾರು ವರ್ಷಗಳಿಂದ, ದೇಶದ ಪ್ರಸಿದ್ಧ ನೃತ್ಯಕಲಾವಿದರನ್ನು ಆಹ್ವಾನಿಸಿ, `ನಾಟ್ಯ ಪರಂಪರೆ’ ನೃತ್ಯೋತ್ಸವವನ್ನು ಯಶಸ್ವಿಯಾಗಿ ಆಚರಿಸುತ್ತಾ ಬಂದಿರುವುದು ಇವರ ಗರಿಮೆ.

ಸಮಾಜ ಸೇವಾ ಮನೋಭಾವ

ಇವರ ಕೊಡುಗೆಯನ್ನು ಫೆಡರೇಶನ್‌ ಆಫ್‌ ಕರ್ನಾಟಕ ಚೇಂಬರ್ಸ್‌ ಆಫ್‌ ಕಾಮರ್ಸ್‌ ಮತ್ತು ಇಂಡಸ್ಟ್ರಿ ಜೊತೆಗೆ, ಅನೇಕ ಶೈಕ್ಷಣಿಕ ಮತ್ತು ಕಲಾ ಸಂಸ್ಥೆಗಳು ಗುರುತಿಸಿದ್ದು, ಸಮಾಜ ಸೇವಾ ಮನೋಭಾವದ ದೀಪಾ, ರಾಜಾಮಹಲ್ ವಿಲಾಸ್‌ ರೋಟರಿ ಸಂಸ್ಥೆಯ ಅಧ್ಯಕ್ಷರಾಗಿ ಗಣನೀಯ ಸೇವೆ ಸಲ್ಲಿಸಿದ್ದು, ಪ್ರಸ್ತುತ ಇಂಡಿಯಾ ರೈಸಿಂಗ್‌ ರಿಸರ್ಚ್‌ಇನೋವೇಷನ್‌ ಫೌಂಡೇಶನ್‌ ಸಂಸ್ಥೆಯ ಉಪಾಧ್ಯಾಕ್ಷರಾಗಿ ಕಾರ್ಯನಿರತರಾಗಿದ್ದಾರೆ.

WhatsApp-Image-2025-12-30-at-22.01.13

ಕಲಾವಿದರ ಕುಟುಂಬ

ಖ್ಯಾತ ಟೆಕ್ಸ್ ಟೈಲ್ ‌ಕಂಪನಿಯಲ್ಲಿ ಹಿರಿಯ ಅಧಿಕಾರಿಯಾಗಿರುವ ಪತಿ ಶಶೀಂದ್ರನ್‌ ಕೂಡ ಸಂಗೀತ ಕಲಾವಿದರು, ಕೇರಳದ ಚಂಡೆವಾದನದಲ್ಲಿ ಆರಂಗೇಟ್ರಂ ಮಾಡಿದ್ದಾರೆ. ಮಗ ಶರದ್‌ ಕರ್ನಾಟಕ ಸಂಗೀತ ಮತ್ತು ವಯೋಲಿನ್‌ ಕಲಿತಿದ್ದು, ಮಗಳು ಸಂಜುಕ್ತ ಮೋಹನಿಯಾಟ್ಟಂ ಮತ್ತು ಕೂಚಿಪುಡಿ ನೃತ್ಯಾಭ್ಯಾಸ ಮಾಡಿ ಉತ್ತಮ ಕಲಾವಿದೆ ಎನಿಸಿಕೊಂಡಿದ್ದಾಳೆ. ಇಡೀ ಕುಟುಂಬ ಕಲಾ ಸಾಧಕರಾಗಿ, ಸಮಾಜ ಸೇವೆಯಲ್ಲಿ ಆಸಕ್ತರಾಗಿ ಆ ದಿಸೆಯಲ್ಲಿ ಮುನ್ನಡೆಯುತ್ತಿರುವುದು ದೀಪಾ ಅವರ ಅಸ್ಮಿತೆ.

– ವೈ.ಕೆ. ಸಂಧ್ಯಾ ಶರ್ಮ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ