`ವಿಕ್ರಾಂತ್ ರೋಣ‘ ಚಿತ್ರದಿಂದ ಕಂಬ್ಯಾಕ್ ಆಗಿರುವ ಬೆಡಗಿ ನೀತಾ ಅಶೋಕ್, ಬಹಳಷ್ಟು ಭಿನ್ನವಾಗಿರುವ ಈ ಚೆಲುವೆ ಎಲ್ಲವರಂಥಲ್ಲ. ಕಿರುತೆರೆಯಿಂದ ಹಿರಿತೆರೆಗೆ ಹಾರಿದ ಈ ನಟಿ, ತನ್ನ ಬಗ್ಗೆ ಹೇಳಿದ ಮಾತುಗಳೇನು…..?
ಕಣ್ಬಿಟ್ಟರೆ ಮನಮೋಹಕ, ಕಣ್ಮುಚ್ಚಿದರೆ ಮಾದಕ, ನಕ್ಕರೆ ನಗುವಿನ ಒಡತಿ, ಅತ್ತರೆ ಆ ಪಾತ್ರಕ್ಕೆ ಬೆಳಗಬೇಕು ಆರತಿ. ಕೆಂಗುಲಾಬಿಯ ಆ ತುಟಿಗಳಿಗೆ ಕಳಶವಿಟ್ಟಂತಿರುವ ದಂತಪಂಕ್ತಿ. ಅವಳ ಸೌಂದರ್ಯ ವರ್ಣನೆಗೆ ಪದಗಳೇ ಸಾಲದು. ಅಷ್ಟರಮಟ್ಟಿಗೆ ಬ್ಯೂಟಿ ಎನ್ನುವ ಬಳಪದಲ್ಲೇ ತಿದ್ದಿ ತೀಡಿದಂತಿರುವ ಚೆಲುವೆಯೇ ನಟಿ ನೀತಾ ಅಶೋಕ್.
ಒಬ್ಬ ನಟಿಗೆ ಏನು ಬೇಕೊ ಅದೆಲ್ಲವನ್ನೂ ಮೈಗೂಡಿಸಿಕೊಂಡಿರುವ ನೀತಾ ಅಶೋಕ್, ಸಖತ್ ಚ್ಯೂಸಿ. ತಾವು ಅಭಿನಯಿಸುವ ಪಾತ್ರಕ್ಕೆ ನ್ಯಾಯ ಒದಗಿಸುವ ಗುಣ ಇವರದ್ದು. ಹಾಗಂತ ಎಲ್ಲಾ ಪಾತ್ರಗಳನ್ನೂ ಒಪ್ಪಿಕೊಳ್ಳುವುದಿಲ್ಲ. ಜನರು ಒಪ್ಪಿಕೊಳ್ಳುವಂತಹ ಪಾತ್ರ ಬಂದರೆ ಬಿಡೋದಿಲ್ಲ. ಅಷ್ಟರಮಟ್ಟಿಗೆ ಸೃಜನಶೀಲತೆಯ ಅಭಿನೇತ್ರಿ ನೀತಾ ಎಂದರೂ ತಪ್ಪಾಗಲಿಕ್ಕಿಲ್ಲ.
ಕರುನಾಡಿನ ಮನೆ ಮನೆಯಲ್ಲೂ ನೀತಾ ತುಂಬಾನೇ ಪ್ರಸಿದ್ಧಿ. ಈಗ ಮತ್ತೆ ಕಿರುತೆರೆಗೆ ಕಂಬ್ಯಾಕ್ ಆಗುತ್ತಿದ್ದಾರೆ. ಸ್ಟಾರ್ ನಟಿಯಾಗಿ ನೀತಾ ಮಿಂಚುವ `ವಿಕ್ರಾಂತ್ ರೋಣ’ ಚಿತ್ರದ ನಾಯಕಿ ನೀತಾ. ಈಕೆ ಕನ್ನಡ ಕಿರುತೆರೆಯಲ್ಲಿ ಮಿಂಚಿ ಕೆಲವು ಕಾಲ ಮರೆಯಾಗಿದ್ದರು. `ವಿಕ್ರಾಂತ್ ರೋಣ’ ಚಿತ್ರದಲ್ಲಿ ಅಪರ್ಣಾ ಬಲ್ಲಾಳ್ ಪಾತ್ರ ನಿರ್ವಹಿಸಿದ್ದು, ನಿರೂಪ್ ಭಂಡಾರಿಗೆ ಜೋಡಿಯಾಗಿ ನಟಿಸಿದ್ದರು. ಕಿರುತೆರೆಯಿಂದ ನೇರವಾಗಿ ಸ್ಟಾರ್ ನಟನ ಜೊತೆಗೆ ತೆರೆ ಹಂಚಿಕೊಂಡ ಈ ನಟಿ, ಈ ಹಿಂದೆ ಕಿರುತೆರೆಯಲ್ಲಿ ಮೂಡಿ ಬಂದ `ಯಶೋದೆ, ನಾ ನಿನ್ನ ಬಿಡಲಾರೆ, ನೀಲಾಂಬರಿ’ ಧಾರಾವಾಹಿಗಳಲ್ಲಿ ನಟಿಸಿದ್ದರು.
ಹಿಂದಿಯ `ಆಶಾಯೇ’ ಎಂಬ ಸರಣಿಯಲ್ಲೂ ಕಾಣಿಸಿಕೊಂಡಿದ್ದರು. `ಕಿನ್ನರಿ’ ಧಾರಾವಾಹಿಯಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. `ಜಬರ್ದಸ್ತ್ ಶಂಕರ’ ಎನ್ನುವ ತುಳು ಸಿನಿಮಾದಲ್ಲೂ ಮಿಂಚಿದ್ದರು.

ಯಶೋದೆ ಪಾತ್ರದ ಖ್ಯಾತಿ
ನೀತಾ ಎನ್ನುವುದಕ್ಕಿಂತ ಯಶೋದೆ ಎಂದರೆ ಕಿರುತೆರೆ ಪ್ರೇಕ್ಷಕರಿಗೆ ಸುಲಭವಾಗಿ ಆಕೆಯ ಪರಿಚಯ ಸಿಗುತ್ತದೆ. ಹೌದು, ದಶಕಗಳ ಹಿಂದೆ ಈ ಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ `ಯಶೋದೆ’ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದ ನಟಿ ನೀತಾ, ಇದೀಗ `ನಾ ನಿನ್ನ ಬಿಡಲಾರೆ’ ಧಾರಾವಾಹಿಯ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಆರು ವರ್ಷಗಳ ನಂತರ ಕಿರುತೆರೆ ನಟನೆಗೆ ಹಿಂದಿರುಗಿದ್ದಾರೆ.
ಕನ್ನಡಿಗರ ನೆಚ್ಚಿನ ಕುಂದಾಪುರದ `ಯಶೋದೆ’ ಮೂಲತಃ ಉಡುಪಿಯವರಾದ ನೀತಾ ಹುಟ್ಟಿದ್ದು, ಕುಂದಾಪುರ ಬಳಿಯ ಕೋಟಾ ಎಂಬ ಹಳ್ಳಿಯಲ್ಲಿ. ಇವರ ತಂದೆ ಅಶೋಕ್ ಹೆರ್ಲೆ ಬ್ಯಾಂಕ್ ಉದ್ಯೋಗಿ ಹಾಗೂ ತಾಯಿ ಗೀತಾ ಅಶೋಕ್ ಗೃಹಿಣಿ.
ನೀತಾ ಓದಿ ಬೆಳೆದಿದ್ದೆಲ್ಲಾ ಉಡುಪಿ, ಮಂಗಳೂರು, ದೆಹಲಿ ಹಾಗೂ ಬೆಂಗಳೂರಿನಲ್ಲಿ. ಎಂ.ಬಿ.ಎ ಓದಿದ ಬಳಿಕ ಕ್ಯಾಂಪಸ್ ಸೆಲೆಕ್ಷನ್ ನಲ್ಲೇ ಉದ್ಯೋಗ ಗಿಟ್ಟಿಸಿಕೊಂಡಿದ್ದರು. ಫೇಸ್ ಬುಕ್ ಮುಖಾಂತರ ನಟನೆಯ ಅವಕಾಶ ದೊರೆತು, `ಯಶೋದೆ’ ಧಾರಾವಾಹಿಯಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದರು.

ಕೌಟುಂಬಿಕದಿಂದ ಹಾರರ್ ಗೆ
ಕಲರ್ಸ್ ಕನ್ನಡ (ಹಿಂದಿನ ಈ ಟಿವಿ) ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ `ಯಶೋದೆ’ ಧಾರಾವಾಹಿಯಲ್ಲಿ ಯಶೋದಾ ಪಾತ್ರದ ಮೂಲಕ ಜನಮನ ಗೆದ್ದ ಈ ನಟಿ, ಮುದ್ದು ಮುಖದ ಮುಗ್ಧ ಮನಸ್ಸಿನ `ಯಶೋದೆ’ ಧಾರಾವಾಹಿಯುದ್ದಕ್ಕೂ ಉಡುಪಿಯ ಗಲ್ಲಿ ಗಲ್ಲಿ ಸುತ್ತಿ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿದ್ದರು.
`ನೀಲಾಂಬರಿ’ ಎಂಬ ಹಾರರ್ ಧಾರಾವಾಹಿಯಲ್ಲಿಯೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ನೀತಾ, ತಮ್ಮ ಸಹಜ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನಗೆದ್ದರು. ಕಿಚ್ಚ ಸುದೀಪ್ ರ `ವಿಕ್ರಾಂತ್ ರೋಣ’ ಸಿನಿಮಾದಲ್ಲಿ ಅಪರ್ಣಾ ಬಲ್ಲಾಳ್ ಅಲಿಯಾಸ್ ಪನ್ನಾ ಆಗಿ ಅಭಿನಯಿಸಿದ್ದ ನೀತಾ, 11ನೇ ಸೈಮ ಅವಾರ್ಡ್ಸ್ ನಲ್ಲಿ ಉತ್ತಮ ನಾಯಕ ನಟಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಅಂದ ಹಾಗೆ ನೀತಾರ ಹಿರಿತೆರೆ ಪಯಣ ಶುರುವಾಗಿದ್ದು ಕೋಸ್ಟಲ್ ವುಡ್ ನಿಂದ. ತುಳು ಸಿನಿಮಾ `ಜಬರ್ ದಸ್ತ್ ಶಂಕರ’ದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಅಭಿಮಾನಿಗಳ `ಒಲವಿನ ನಿಲ್ದಾಣ’ ಬ್ರೇಕ್ ಸಿಕ್ಕಾಗಲೇ ಮದುವೆಯಾದ ಬೆಡಗಿ ಸದಾ ಕ್ರಿಯಾತ್ಮಕವಾಗಿ ಚಿಂತಿಸುವ ನೀತಾ, ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡರು. ಬಿಡುವಿನ ವೇಳೆಯಲ್ಲಿ ನೀತಾ ಪೇಂಟಿಂಗ್ ಮಾಡುತ್ತಾರಂತೆ. ಇನ್ನು `ವಿಕ್ರಾಂತ್ ರೋಣ’ ಚಿತ್ರದ ಬಳಿಕಾ ನೀತಾ ನಿಶ್ಚಿತಾರ್ಥ ಮಾಡಿಕೊಂಡು ಶಾಕ್ ಕೊಟ್ಟಿದ್ದರು. ಕಿರುತೆರೆ ಬಳಿಕ ಸಿನಿಮಾದಲ್ಲೂ ದೊಡ್ಡ ಬ್ರೇಕ್ ಸಿಕ್ಕಿತ್ತು. ಇನ್ನೇನು ಹೆಚ್ಚೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವಾಗಲೇ ನಿಶ್ಚಿತಾರ್ಥ ಮಾಡಿಕೊಂಡು ಅಚ್ಚರಿ ಮೂಡಿಸಿದ್ದರು.
ಮತ್ತೆ ಕಿರುತೆರೆಗೆ ಎಂಟ್ರಿಕೊಟ್ಟ ನೀತಾ, ನಟನೆಗೆ ಮರಳಿದ್ದರು. ಕಲರ್ಸ್ ಕನ್ನಡದ ಧಾರಾವಾಹಿಯೊಂದರರಲ್ಲಿ ನೀತಾ ಕಾಣಿಸಿಕೊಂಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. `ಒಲವಿನ ನಿಲ್ದಾಣ’ ಧಾರಾವಾಹಿಯಲ್ಲಿ ನೀತಾ ಕಾಣಿಸಿಕೊಂಡಿದ್ದಾರೆ. ತಾರಿಣಿಯ ಗೆಳತಿ `ಯಶೋದೆ’ ಪಾತ್ರದ ಮೂಲಕ ನೀತಾ ಎಂಟ್ರಿ ಕೊಟ್ಟಿದ್ದರು.

ಸ್ಯಾಂಡಲ್ ವುಡ್ ಗೆ ಎಂಟ್ರಿ
ಕಿರುತೆರೆಯಲ್ಲಿ ನಟಿಸಿದ ಬಹಳ ವರ್ಷಗಳ ಬಳಿಕ ಇದ್ದಕ್ಕಿದ್ದ ಹಾಗೆ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಂಡ ನೀತಾ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರು. ಸಿನಿಮಾ ಕ್ಷೇತ್ರದಲ್ಲಿ ಹಲವು ಪ್ರಾಜೆಕ್ಟ್ ಗಳನ್ನು ಮಾಡಿ ಅಭಿಮಾನಿಗಳನ್ನು ರಂಜಿಸುತ್ತಾರೆ ಎಂದು ನಿರೀಕ್ಷಿಸುವಾಗಲೇ ಮದುವೆಯಾಗಿ ಬಣ್ಣದ ಲೋಕಕ್ಕೆ ವಿದಾಯ ಹೇಳಿದರು ಎಂದು ಭಾವಿಸಲಾಗಿತ್ತು. ಆದರೆ, ಈಗ ಮತ್ತೆ ಕಿರುತೆರೆಗೆ ಎಂಟ್ರಿ ಕೊಡುವ ಮೂಲಕ ನೀತಾ ಅಭಿಮಾನಿಗಳ ಊಹೆ ಸುಳ್ಳಾಗಿಸಿ ನಟನೆ ಮುಂದುವರಿಸಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಪ್ರಸ್ತುತ ಝೀ ವಾಹಿನಿಯ `ನಾ ನಿನ್ನ ಬಿಡಲಾರೆ’ ಎಂಬ ಧಾರಾವಾಹಿಯಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೌದು ಹಾರರ್‌ಧಾರಾವಾಹಿ `ನಾ ನಿನ್ನ ಬಿಡಲಾರೆ’ ಕಥೆಯಲ್ಲಿ ತಾಯಿ ಪಾತ್ರದಲ್ಲಿ ನಟಿಸುತ್ತಿರುವ ನೀತಾ, ಒಂದು ವಿಭಿನ್ನ ಕಥೆಯನ್ನು ಹೇಳ ಹೊರಟಿದ್ದಾರೆ.
ಮನಬಿಚ್ಚಿ ಮಾತನಾಡಿದ ನಟಿ
ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಯಲ್ಲಿ ನೀತಾ, ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ನೀತಾ, ಹಲವು ವರ್ಷಗಳ ನಂತರ ಕಿರುತೆರೆಗೆ ಒಂದೊಳ್ಳೆ ಪಾತ್ರದ ಮೂಲಕ ಕಂಬ್ಯಾಕ್ ಮಾಡುತ್ತಿರುವುದಂತೂ ಖುಷಿಯ ವಿಚಾರ. ಈ ಕುರಿತು ನೀತಾ, `ಗೃಹಶೋಭಾ’ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ.

ಕಿರುತೆರೆಯಿಂದ ಬೆಳ್ಳಿತೆರೆಗೆ
“ಹಿರಿತೆರೆಗೆ ಬರುವ ಮುನ್ನ ಕಿರುತೆರೆಯಲ್ಲಿ ಒಂದೇ ರೀತಿಯ ಪಾತ್ರ ಇರುತ್ತಿದ್ದವು. ಒಂದು ರೀತಿಯಲ್ಲಿ ಅಳುಮೂಂಜಿ ಪಾತ್ರ ಎನ್ನಬಹುದು. ಪ್ರೇಕ್ಷಕರಿಂದ ಮನೆಮಗಳು ಎನಿಸಿಕೊಂಡಿದ್ದೆ. ಆದರೆ, ಅದು ವಿಭಿನ್ನ ಅನಿಸಲಿಲ್ಲ. ಹಾಗಾಗಿ ಹೊಸದಾಗಿ, ಭಿನ್ನವಾಗಿ ಏನಾದರೂ ಮಾಡಬೇಕೆಂಬ ತುಡಿತ ಹೆಚ್ಚಾಗತೊಡಗಿತು. ಮತ್ತೆ ಮತ್ತೆ ಅಂತಹದೇ ಪಾತ್ರಗಳು ಬರುತ್ತಿದ್ದವು.
“ಸದ್ಯಕ್ಕೆ ಒಂದು ಬ್ರೇಕ್ ತೆಗೆದುಕೊಳ್ಳೋಣ ಎನಿಸಿತು. ಏನಾದರೂ ವಿಭಿನ್ನವಾಗಿ, ಆಸಕ್ತಿದಾಯಕವಾಗಿರುವುದು ದೊರೆತರೆ ತೆಗೆದುಕೊಳ್ಳೋಣ ಎನಿಸಲು ಶುರುವಾಯಿತು. ಆ ಸಮಯದಲ್ಲಿ ವಿಕ್ರಾಂತ್ ರೋಣ ಸಿನಿಮಾದಲ್ಲಿ ನಟಿಸುವ ಅವಕಾಶ ಒದಗಿ ಬಂದಿತು.”

ಸಿನಿಮಾ ಎಲ್ಲವನ್ನೂ ಕಲಿಸಿತು
“ಹಿರಿತೆರೆಯಲ್ಲಿ ಇಂಥ ಪ್ರಾಜೆಕ್ಟ್ ಮಾಡಲು ಅವಕಾಶ ದೊರೆತದ್ದು ಖುಷಿ ತಂದುಕೊಟ್ಟಿತು. 3 ವರ್ಷ ಅದರಲ್ಲಿ ಕೆಲಸ ಮಾಡಿದೆ. ಅಲ್ಲಿ ಬಹಳಷ್ಟು ಕಲಿಯಲು ಅವಕಾಶ ದೊರೆಯಿತು. ಕಿರುತೆರೆ, ಹಿರಿತೆರೆ ಎರಡು ಬಹಳ ವಿಭಿನ್ನವಾಗಿರುತ್ತವೆ. ಕಿರುತೆರೆಯಲ್ಲಿ ಒಂದೇ ದಿನದಲ್ಲಿ 10-12 ಸೀನ್ ಮಾಡಿದ್ರೆ, ಹಿರಿತೆರೆಯಲ್ಲಿ ಒಂದು ದಿನಕ್ಕೆ ಒಂದೇ ಸೀನ್ ಮಾಡುತ್ತೇವೆ. ಅಲ್ಲಿ ರಿಲ್ಯಾಕ್ಸ್ ಟೈಮ್ ಜಾಸ್ತಿ ಇದ್ದು, ಕಲಿಯುವುದು ಬಹಳಷ್ಟಿರುತ್ತದೆ.
“ಈಗ ಕಿರುತೆರೆಯೂ ಹಿಂದಿನಂತಿಲ್ಲ. ಇದೀಗ ಬಹಳಷ್ಟು ಬದಲಾವಣೆಗಳಾಗಿವೆ, ಅಪ್ ಡೇಟ್ ಆಗಿದೆ. ಹಿರಿತೆರೆಗೆ ಮೂರು ವರ್ಷ ಕೊಟ್ಟಾದ ನಂತರ ವೈಯಕ್ತಿಕ ಬದುಕಿಗೆ ಸಮಯ ನೀಡಬೇಕು ಎನಿಸಿತು. ಆ ಸಮಯದಲ್ಲಿ ವಿವಾಹ ಆಯ್ತು.
“ಒಂದು ವರ್ಷ ಆ ಮನೆಗೆ ಹೊಂದಿಕೊಳ್ಳಲು, ಅಲ್ಲಿನ ಜನರೊಂದಿಗೆ ಬೆರೆಯಲು ಅನುಕೂಲಾಯಿತು. ಒಂದು ವರ್ಷದ ನಂತರ ಏನು ಮಾಡಬೇಕು ಎಂದು ಯೋಚಿಸಿದೆ, ನನಗೆ ಜನರೊಂದಿಗೆ ಇರಬೇಕು, ಶೂಟಿಂಗ್ ಹೋಗಬೇಕು ಎಂಬ ಹಂಬಲ ಬಹಳಷ್ಟಿತ್ತು. ಇವೆಲ್ಲ ಸೇರಿ ಮತ್ತೆ ನಾನು ಕಿರುತೆರೆಗೆ ಬರುವಂತಾಯಿತು.”
“ವಿಕ್ರಾಂತ್ ರೋಣಾ ನಂತರ ಹಲವಾರು ಆಫರ್ ಗಳು ಬಂದವು. ಆದರೆ, ಆ ಲೆವೆಲ್ ಮಹಿಳಾ ಪ್ರಧಾನವಾದ ರೋಲ್ ಗಳು ಯಾವುದಾದರೂ ಸಿಗಬಹುದಾ ಎಂದು ನೋಡುತ್ತಿದ್ದೆ. ಒಂದು ಹತ್ತು ನಿಮಿಷದ ಪಾತ್ರವಾದರೂ ಅದು ನೆನಪಿರಬಹುದಾದಂಥ ಪಾತ್ರ ನಿರ್ವಹಿಸಬೇಕು ಎನ್ನುವ ಮನಸ್ಸಿತ್ತು.”
ಝೀ ಟಿವಿ ಅಂದ್ರೆ ಕ್ವಾಲಿಟಿ, ಕಾನ್ಛಿಡೆನ್ಸ್!
“ನಿತ್ಯ ನಾನು ಕೆಲಸ ಮಾಡಬೇಕು, ಜನರಿಗೆ ಕಾಣಿಸಿಕೊಳ್ಳಬೇಕು ಎಂಬ ತುಡಿತ ಹೆಚ್ಚಾಯಿತು. ಈಗ ಮತ್ತೆ ನನಗೆ ಸೀರಿಯಲ್ ನಲ್ಲಿ ಅವಕಾಶ ಬಂದಾಗ, ಮೊದಲಿನಂತಹ ಪಾತ್ರವಾಗಿದ್ದರೂ, ಇದು ಸೂಪರ್ ನ್ಯಾಚುರಲ್ ಪವರ್. ಆತ್ಮದ ಕಥೆ ಹೇಗೆ ನಡೆಯುತ್ತೆ ಇತ್ಯಾದಿ….
“ಹೀಗೆ ಪಾತ್ರ ಒಂದು ರೀತಿಯಲ್ಲಿ ವಿಭಿನ್ನ ಎನಿಸಿತು. ಈಗ ಟಿವಿ ಸೀರಿಯಲ್ ಗಳು ಒಂದು ರೀತಿಯಲ್ಲಿ ನೆಕ್ಸ್ಟ್ ಲೆವೆಲ್ ನಲ್ಲಿವೆ. ಎಲ್ಲಾ ಓಟಿಟಿಗೆ ಹೋಗುತ್ತಿದ್ದಾರೆ. ಇದು ಒಂದು ಒಳ್ಳೆಯ ಅವಕಾಶ, ಝೀಯೊಂದಿಗೆ ಕೆಲಸ ಮಾಡುವುದು ಬಹಳ ಖುಷಿಯಾಯ್ತು. “10 ವರ್ಷ ಆದ್ರೂ ಕೂಡಾ ಈಗಲೂ ನನ್ನನ್ನು ಲೀಡ್ ರೋಲ್ ಗೆ ತೆಗೆದುಕೊಳ್ಳುತ್ತಿರುವುದು ನೋಡಿದರೆ ನಿಜವಾಗ್ಲೂ ನಾನು ಇನ್ನೂ ಚೆನ್ನಾಗಿ ಮಾಡ್ತಿದ್ದೀನಿ ಅಂತ, ನನಗೆ ಕಾನ್ಛಿಡೆನ್ಸ್ ಬಂತು. ಬ್ರೇಕ್ ಆದ್ಮೇಲೇ ನಾನು ಬಂದಿರೋದು, ನಿಜವಾಗಿಯೂ ನಾನು ಮತ್ತೆ ನಮ್ಮ ಮನೆಗೆ ವಾಪಸ್ ಬಂದಿದ್ದೇನೆ ಎನಿಸುತ್ತಿದೆ. ಝೀ ಟಿವಿಯವರು ಕ್ವಾಲಿಟಿ ನಮ್ಮದು ಹೀಗೆ ಇರಬೇಕು ಎಂದು ಮಾಡಿದ್ದಾರೆ, ಏನೋ ಹೊಸದನ್ನು ಮಾಡಿದ್ದಾರೆ.
“ಸಿನಿಮಾದ ಎರಡು ಆಫರ್ ಗಳು ಇವೆ. ಇಂಪಾರ್ಟೆಂಟ್ ಪಾತ್ರಗಳು ಬಂದಾಗ ಮಾಡುತ್ತೇನೆ. ಆದರೆ ಮೊದಲ ಪ್ರಯಾರಿಟಿ ಕೊಡೋದು, `ನಾ ನಿನ್ನ ಬಿಡಲಾರೆ’ ಧಾರಾವಾಹಿಗೆ ಮಾತ್ರ.

ಬ್ರೇಕ್ ಮುಗಿದ ನಂತರ
“ನಾನು ಬ್ರೇಕ್ ತೆಗೆದುಕೊಂಡಿದ್ದಕ್ಕೆ ಯಾವುದೇ ಪಶ್ಟಾತ್ತಾಪ ಇಲ್ಲ. ದಿನಾ ಶೂಟಿಂಗ್ ಮಿಸ್ ಮಾಡ್ಕೊಂಡೆ ಅನಿಸುತ್ತಿತ್ತು. ಚಿಕ್ಕ ಸ್ಕ್ರೀನ್ ಇರಲಿ, ದೊಡ್ಡ ಸ್ಕ್ರೀನ್ ಇರಲಿ ನನಗೆ ಪ್ರಮುಖ ಪಾತ್ರ ದೊರೆತರೆ, ಭಿನ್ನವಾಗಿ ಏನಾದರೂ ಮಾಡಲು ಸಿಗುತ್ತಿದೆ ಅಂತಾದ್ರೆ, ನಾನು ಯಾವುದರಲ್ಲಾದರೂ ಮಾಡಲು ತಯಾರಿದ್ದೇನೆ. ಪಾತ್ರ ಮಾತ್ರ ನನಗೆ ಮುಖ್ಯ. ನಾನು ಹೇಗೆ ಅದನ್ನು ನಿಭಾಯಿಸುತ್ತೇನೆ ಅನ್ನೋದು ಮುಖ್ಯ.”
ಹಿರಿತೆರೆಯಲ್ಲಿ ಕೆಲವು ಕಾಲ ಮಿಂಚಿ, ಅವಕಾಶ ದೊರಕದೆ ಡಿಪ್ರೆಶನ್ ಅಥಾವ ಮತ್ಯಾವುದೋ ಅಡ್ಡದಾರಿ ಹಿಡಿಯುವ ಬೆಡಗಿಯರ ಕುರಿತು ಮಾತನಾಡಿದ ನೀತಾ, “ನಿಮಗೆ ಯಾವ ಜಾಗದಲ್ಲಿ ಖುಷಿ ಇಲ್ಲವೋ ನೀ ಅಲ್ಲಿ ಇರಲೇಬೇಡಿ. ನಿಮಗೆ ಯಾವ ಜಾಗದಲ್ಲಿ ಖುಶಿ ಸಿಗುತ್ತೋ ಅಲ್ಲಿ ನೀವು ನಿಮ್ಮ ವೃತ್ತಿಯನ್ನು ಮುಂದುರಿಸಿ. ಪೀಸ್ ಆಫ್ ಮೈಂಡ್ ಬಹಳ ಮುಖ್ಯ. ದುಡ್ಡು ಬಂದೇ ಬರುತ್ತೆ. ನೀವು ಮಾಡಿದ ಕೆಲಸ ಖುಷಿ ಕೊಡಲಿಲ್ಲ ಅಂದ್ರೆ ಅದು ಯಾವುದಕ್ಕೂ ಪ್ರಯೋಜನಕ್ಕೆ ಬರುದಿಲ್ಲ. ನೀವು ಹಿಡಿದ ದಾರಿ ನಿಮಗೆ ತೃಪ್ತಿ, ನೆಮ್ಮದಿ, ಖುಷಿ ಕೊಡುತ್ತದೋ ಅಂತಹ ವೃತ್ತಿಯನ್ನು ನೀವೇ ಆಯ್ಕೆ ಮಾಡಿಕೊಳ್ಳಿ.
“ದೊರೆತ ಅವಕಾಶವನ್ನು ಶ್ರದ್ಧೆ ಭಕ್ತಿಯಿಂದ ಮಾಡಿದರೆ ಪ್ರತಿಫಲ ದೊರೆಯುತ್ತದೆ. ನೀವು ಎಲ್ಲಿಂದ ಬಂದಿರಿ, ಹೇಗೆ ಬಂದಿರಿ ಎಂಬ ಬಂದ ದಾರಿಯನ್ನು ಯಾವತ್ತೂ ಮರೆಯಬೇಡಿ. ನಿಮಗೆ ಯಾವುದು ನೆಮ್ಮದಿ ಕೊಡುತ್ತೋ, ಅ್ಲೀ ಹೋಗಿ. ಮನಸ್ಸು ಖುಷಿಯಾಗಿದ್ದರೆ, ದಾರಿ ತನ್ನಿಂದ ತಾನೇ ಕಾಣುತ್ತದೆ,” ಎನ್ನುತ್ತಾರೆ ನೀತಾ ಅಶೋಕ್.
– ಸುನೀತಾ ಬಿ.ಎಂ.





