”ಕ್ಷಮಿಸಿ, ನಾವು ಭಜನೆ ಹಬ್ಬಗಳಿಗೆ ಬರುವ ಅರ್ಹತೆ ಇಲ್ಲ.. ಹೀಗೆ ಪಾರ್ಕ್ನಲ್ಲಿ ಕೂತು ಮನೆಗೆ ಹೋಗ್ತೀವಿ” ಎನ್ನುತ್ತಿದ್ದ ಮಾತುಗಳು ಕಿವಿಗೆ ಬಿದ್ದಾಗ, ಈ ಒರಟು ಗೊಡ್ಡು ಸಂಪ್ರದಾಯಕ್ಕೆ ಹೊಸ ರೂಪ ತೋರಿಸಬೇಕು ಎಂದು ಮುಂದೆ ಬಂದವರು ದಿ/ ಶ್ರೀಮತಿ ಮೀನಾಕ್ಷಮ್ಮನವರು.
ಕಾಡು ಹರಟೆ ದಿನಾ ಸಂಜೆ ಇದದ್ದೇ, ವಾರಕ್ಕೊಂದು ಒಂದು ದಿನವಾದರೂ ಕೆಲ ಕಾಲ ವಿಷ್ಣು ಸಹಸ್ರನಾಮ / ಲಲಿತಾ ಸಹಸ್ರನಾಮ ಹೇಳಿಕೊಂಡು ಮನಸ್ಸಿಗೆ ಬ್ರೇಕ್ ನೀಡೋಣ ಎಂದು ಶುರುವಾದದ್ದು ಕ್ರಮೇಣ ಒಂದು ಕಡೆ ಸೇರಿ, ಪೂಜೆಯ ನಂತರ ಯಾವ ಬೇಧ ಭಾವವಿಲ್ಲದೆ ಪ್ರತಿಯೊಬ್ಬ ಮಹಿಳೆಗೂ ಕುಂಕುಮ, ಪ್ರಸಾದ/ ತಾಂಬೂಲ ನೀಡಲೇಬೇಕು. ದೇವರ ಮುಂದೆ ಎಲ್ಲರೂ ಸಮಾನರೇ, ಎನ್ನುವುದು ಈ ಲಲಿತಾ ಭಜನಾ ಭಜನಾ ಮಂಡಳಿಯ ನಿಯಮವೇ ಆಗಿ ಎಲ್ಲರ ಮನಸೆಳೆಯಿತು.
ಎಷ್ಟೇ ಆದರೂ, ಹಿರಿಯ ತಲೆಮಾರುಗಳ ದಿಟ್ಟ ನಿಲುವು ಇಂತಹ ಸಾಮಾಜಿಕ ಕಳಕಳಿ , ಧೈರ್ಯ, ಸಮಾನತೆಯ ವ್ಯಾಪಕ ಆಲೋಚನೆಗಳು ಸಮಾಜದ ವಿಭಿನ್ನ ಸ್ಥಿತಿಗಳನ್ನು ಒಂದು ಗೂಡಿಸುತ್ತದೆ.

ಮುಂದೆ, ಸಣ್ಣ ಹಬ್ಬಗಳ ಆಚರಣೆಗೆ ಭಜನೆ ಮಾಡುವುದು ಅಭ್ಯಾಸವಾಯಿತು.
ಅದರಲ್ಲೂ, ನವರಾತ್ರಿಯ ಸಂದರ್ಭದಲ್ಲಿ ಬೊಂಬೆ ಕೂರಿಸಿ, ಸಾಂಗವಾಗಿ ದೇವೀ ಪೂಜೆ ಮಾಡುವುದು ಕಳೆದ ಹದಿನೈದು ವರ್ಷಗಳಿಂದ ರೂಢಿಯಲ್ಲಿದೆ.
ಈ ಬಾರಿ ನಮ್ಮ ಹೆಮ್ಮೆಯ ಸಮಾಜ ಸೇವಕಿ ಮಾತ್ರವಲ್ಲದೇ, ಅಪಾರ್ಟ್ಮೆಂಟ್ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ರೂಪಾ ನಾರಾಯಣ್ ಹಾಗೂ ಭಜನಾ ಮಂಡಳಿಯ ಪ್ರಮುಖರಾದ ಶ್ರೀಮತಿ ಗಾಯತ್ರಿ, ಉಮಾ, ಪದ್ಮಾ, ಭವಾನಿ, ಆರತಿ, ಗೌರಿ ಮತ್ತು ಇತರ ಸದಸ್ಯರು ಮತ್ತು ನಿವಾಸಿಗಳ ನಿಸ್ವಾರ್ಥ ಕೈಂಕರ್ಯದೊಂದಿಗೆ,

ಸಾಂಪ್ರದಾಯಿಕ ಪೂಜಾ ವಿಧಿ, ವಿಧಾನಗಳನ್ನು ಹಿರಿಯರಿಂದ ಕಿರಿಯ ಪೀಳಿಗೆಗೆ ಒಗ್ಗೂಡಿಸಿ ನಿರಂತರವಾಗಿ ಮುಂದುವರಿಸಿಕೊಂಡು ಬರುತ್ತಿದ್ದಾರೆ.
ದಸರಾ ಹಬ್ಬದ ಸಂಭ್ರಮಕ್ಕೆ ಅಪಾರ್ಟ್ಮೆಂಟ್ ನ ಕಮ್ಯೂನಿಟಿ ಹಾಲ್ ನಲ್ಲಿ ಉಚಿತವಾಗಿ 10 ದಿನಗಳ ಕಾರ್ಯಕ್ರಮಕ್ಕೆ ಅನುಮತಿ ಪಡೆದು, ಬೆಳಿಗ್ಗೆ ಮತ್ತು ಸಂಜೆ ಪಾರಾಯಣ, ಪೂಜೆ, ಪುನಸ್ಕಾರವನ್ನು ಶಕ್ತ್ಯಾನುಸಾರ ಯಾವುದೇ ಚಂದಾ ಎತ್ತದೆ, ಭಜನಾ ಮಂಡಳಿಯ ಸದಸ್ಯರೇ ವ್ಯವಸ್ಥಿತವಾಗಿ ಸಂಬಂಧಿತ ಕೆಲಸಗಳನ್ನು ವಹಿಸಿಕೊಂಡು, ನಿರ್ವಹಿಸುತ್ತಿದ್ದಾರೆ.

ಸರಸ್ವತಿ ಪೂಜೆ, ಗಳಂದು ವಿದ್ಯಾರ್ಥಿಗಳಿಂದ ವಿಶೇಷ ಪ್ರಾರ್ಥನೆ, ಕನ್ಯಾ ಪೂಜೆಯಂದು ಪುಟ್ಟ ಹೆಣ್ಣು ಮಕ್ಕಳಿಗೆ ಸಾಂಪ್ರದಾಯಿಕ ಉಪಚಾರ ದಸರೆಯ ಒಂದು ಭಾಗವಾಗಿದೆ.
ನವರಾತ್ರಿಗೆ ಸದಸ್ಯರು
ನವ ರಂಗುಗಳ ಉಡುಗೆಗಳಿಂದ ವಿಜೃಂಭಿಸಿ, ನಿತ್ಯ ಬೆಳಿಗ್ಗೆ – ಸಂಜೆ ವಿಶೇಷ ಭಜನೆ, ಗೀತ ಗಾಯ, ಪೂಜಾರತಿಯಲ್ಲಿ ಪಾಲ್ಗೊಳ್ಳುತ್ತಾರೆ. ನಂತರ ಪ್ರಸಾದ ವಿನಿಯೋಗದ ವ್ಯವಸ್ಥೆ ಇರುತ್ತದೆ.
ವಿಜಯ ದಶಮಿಯಂದು ನಮ್ಮ ಆವರಣದ ಒಳಗೆ ಇರುವ ಬನ್ನಿ ಮರಕ್ಕೆ ಪೂಜೆ ಸಲ್ಲಿಸುವಲ್ಲಿಗೆ ಸಂಪನ್ನವಾಗುತ್ತದೆ.
ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು
ಕಾವ್ಯ ಭಾರದ್ವಾಜ್.





