ಜಾಗತಿಕ ಐಟಿ ದಿಕ್ಸೂಚಿ ಮೈಕ್ರೋಸಾಫ್ಟ್ ಕಂಪನಿಯು ತನ್ನ ಉದ್ಯೋಗಿಗಳಿಗೆ ದೊಡ್ಡ ಶಾಕ್ ನೀಡಿದೆ. ಭಾರತ, ಅಮೆರಿಕ, ಬ್ರಿಟನ್ ಮತ್ತು ಕೆನಡಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 60 ಸಾವಿರ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿರ್ಗಮನ ಯೋಜನೆ (VEO) ಯನ್ನು ಪ್ರಕಟಿಸಿದ್ದು, ಇದು ಕಂಪನಿಯ ಒಟ್ಟು ಜಾಗತಿಕ ಉದ್ಯೋಗಿಗಳಲ್ಲಿ ಸುಮಾರು ಶೇಕಡಾ 27 ರಷ್ಟಾಗಿದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮೂಲಸೌಕರ್ಯಗಳಲ್ಲಿ ಮೈಕ್ರೋಸಾಫ್ಟ್ ಬಿಲಿಯನ್ ಡಾಲರ್‌ಗಳಷ್ಟು ದೊಡ್ಡ ಮಟ್ಟದ ಹೂಡಿಕೆ ಮಾಡುತ್ತಿದ್ದು, ವೆಚ್ಚ ನಿರ್ವಹಣೆ, ಉದ್ಯೋಗಿಗಳನ್ನು ಮರುಹಂಚಿಕೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪನಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಆಮಿ ಕೋಲ್ಮನ್ ಆಂತರಿಕ ಇಮೇಲ್‌ನಲ್ಲಿ ತಿಳಿಸಿದ್ದಾರೆ.

ಕಂಪನಿಯಿಂದ ಹೊರಹೋಗಲು ನಿರ್ಧರಿಸುವ ಉದ್ಯೋಗಿಗಳಿಗೆ ಆರ್ಥಿಕ ನೆರವು ಹಾಗೂ ವೃತ್ತಿಜೀವನದ ಮುಂದಿನ ಹಂತಕ್ಕೆ ಅಗತ್ಯವಾದ ಮಾರ್ಗದರ್ಶನ ನೀಡುವುದಾಗಿ ಸಂಸ್ಥೆ ತನ್ನ ಬ್ಲಾಗ್‌ನಲ್ಲಿ ತಿಳಿಸಿದೆ.

ಭಾರತದಲ್ಲಿ ಮೈಕ್ರೋಸಾಫ್ಟ್ ಸುಮಾರು 23 ಸಾವಿರ ಉದ್ಯೋಗಿಗಳನ್ನು ಹೊಂದಿದೆ. ಆದರೆ, ಈ ಯೋಜನೆಯಡಿ ದೇಶದಲ್ಲಿ ಎಷ್ಟು ಮಂದಿ ಅರ್ಹರಾಗಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಜಾಗತಿಕವಾಗಿ ಸುಮಾರು 60 ಸಾವಿರ ಉದ್ಯೋಗಿಗಳು ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿದ್ದಾರೆ. ಭಾರತದಲ್ಲಿನ ಅರ್ಹ ಉದ್ಯೋಗಿಗಳು ಸ್ವಯಂಪ್ರೇರಿತ ನಿರ್ಗಮನದ ಪ್ರಸ್ತಾವವನ್ನು ಒಪ್ಪಿಕೊಳ್ಳಬೇಕೇ ಎಂಬುದನ್ನು ನಿರ್ಧರಿಸಲು ಡಿಸೆಂಬರ್ 1ರವರೆಗೆ ಕಾಲಾವಕಾಶ ನೀಡಲಾಗಿದೆ ಎನ್ನಲಾಗಿದೆ.

ಈ ಪ್ಯಾಕೇಜ್ ಸಾಮಾನ್ಯ ಸೇವಾ ಮುಕ್ತಾಯ ಪರಿಹಾರಕ್ಕೆ ಹೋಲಿಕೆಯಾಗಿದ್ದು, ಉದ್ಯೋಗಿಯು ಪೂರ್ಣಗೊಳಿಸಿದ ಪ್ರತಿ ಸೇವಾ ವರ್ಷಕ್ಕೆ ಒಂದು ತಿಂಗಳ ಮೂಲ ವೇತನ, ಆರೋಗ್ಯ ವಿಮೆ ಹಾಗೂ ವೃತ್ತಿ ಪರಿವರ್ತನೆಗೆ ಅಗತ್ಯವಾದ ನೆರವು ಒಳಗೊಂಡಿರುವುದಾಗಿ ತಿಳಿದುಬಂದಿದೆ.

ಮೈಕ್ರೋಸಾಫ್ಟ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಹಾಗೂ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಆಮಿ ಕೋಲ್ಮನ್ ತಮ್ಮ ಬ್ಲಾಗ್‌ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದು, ನಾಲ್ಕು ದೇಶಗಳಲ್ಲಿನ ಆಯ್ದ ತಂಡಗಳಲ್ಲಿ 70ನೇ ಹಂತ ಅಥವಾ ಅದಕ್ಕಿಂತ ಕೆಳಗಿನ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿರ್ಗಮನದ ಪ್ರಸ್ತಾವ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.

ಮೈಕ್ರೋಸಾಫ್ಟ್‌ನಲ್ಲಿ ಉದ್ಯೋಗಿಗಳ ಹುದ್ದೆ ಹಾಗೂ ಅನುಭವಗಳನ್ನು ಆಧರಿಸಿ ಆಂತರಿಕ ಉದ್ಯೋಗ ಶ್ರೇಣಿಗಳನ್ನು ನಿರ್ಧರಿಸಲಾಗುತ್ತದೆ. ಕಂಪನಿಯಿಂದ ಹೊರಗಿನ ಅವಕಾಶಗಳನ್ನು ಪರಿಗಣಿಸುತ್ತಿರುವ ಉದ್ಯೋಗಿಗಳಿಗೆ ಹೆಚ್ಚಿನ ಆಯ್ಕೆ ಮತ್ತು ಸ್ವಾತಂತ್ರ್ಯ ಒದಗಿಸುವುದು ಈ ಸೀಮಿತ ಅವಧಿಯ ಯೋಜನೆಯ ಉದ್ದೇಶವಾಗಿದೆ ಎಂದು ಕೋಲ್ಮನ್ ಹೇಳಿದ್ದಾರೆ.

ಭಾರತದಲ್ಲಿನ ಪ್ರತಿಭೆ ಹಾಗೂ ತಂತ್ರಜ್ಞಾನ ಪರಿಸರ ವ್ಯವಸ್ಥೆಯಲ್ಲಿ ಹೂಡಿಕೆ ಮುಂದುವರಿಸಿರುವುದಾಗಿ ಮೈಕ್ರೋಸಾಫ್ಟ್ ವಕ್ತಾರರು ತಿಳಿಸಿದ್ದು,  2025ರಿಂದ 2029ರ ಅವಧಿಯಲ್ಲಿ ಕ್ಲೌಡ್ ಮತ್ತು ಕೃತಕ ಬುದ್ಧಿಮತ್ತೆ ಮೂಲಸೌಕರ್ಯ, ಕೌಶಲ್ಯಾಭಿವೃದ್ಧಿ ಹಾಗೂ ಕಾರ್ಯಾಚರಣೆಗಳಿಗಾಗಿ ಭಾರತದಲ್ಲಿ 20.5 ಶತಕೋಟಿ ಡಾಲರ್ ಹೂಡಿಕೆ ಮಾಡುವ ಬದ್ಧತೆಯನ್ನು ಕಂಪನಿ ಹೊಂದಿದೆ. 2030ರ ವೇಳೆಗೆ ಭಾರತದ ಎರಡು ಕೋಟಿ ಜನರಿಗೆ ಕೃತಕ ಬುದ್ಧಿಮತ್ತೆಯ ಕೌಶಲ್ಯಗಳನ್ನು ಕಲಿಸುವ ಗುರಿಯನ್ನೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ಹಾದಿಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.

ಈ ಯೋಜನೆಯು ಅರ್ಹ ಉದ್ಯೋಗಿಗಳಿಗೆ ಅಗತ್ಯ ನೆರವಿನೊಂದಿಗೆ ಕಂಪನಿಯಿಂದ ಹೊರಹೋಗುವ ಅವಕಾಶ ನೀಡಲಿದೆ. ಜೊತೆಗೆ, ಬದಲಾಗುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ ಉದ್ಯೋಗಿಗಳ ಸಂಖ್ಯೆಯನ್ನು ಹೊಂದಿಸಿಕೊಳ್ಳಲು ಆಯ್ದ ವಿಭಾಗಗಳಿಗೆ ಸಹಕಾರಿಯಾಗಲಿದೆ ಎಂದು ವಿವರಿಸಿರುವ ಕೋಲ್ಮನ್​, ಕಂಪನಿಯ ಎಲ್ಲ ವಿಭಾಗಗಳಲ್ಲಿಯೂ ಈ ಯೋಜನೆಯನ್ನು ಒಂದೇ ರೀತಿಯಲ್ಲಿ ಜಾರಿಗೊಳಿಸುವುದಿಲ್ಲ ಎಂದಿದ್ದಾರೆ.

ಆಯಾ ವಿಭಾಗಗಳ ವ್ಯವಹಾರ ಆದ್ಯತೆಗಳು, ಗ್ರಾಹಕರಿಗೆ ನೀಡಿರುವ ಬದ್ಧತೆಗಳು ಹಾಗೂ ಉದ್ಯೋಗಿಗಳ ಅಗತ್ಯಗಳನ್ನು ಆಧರಿಸಿ ಯೋಜನೆಯ ಅನುಷ್ಠಾನ ನಿರ್ಧಾರವಾಗಲಿದೆ. ಯೋಜನೆಗೆ ಅರ್ಹರಾಗಿರುವ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿರ್ಗಮನದ ಪ್ರಸ್ತಾವದ ನಿಯಮಗಳು ಮತ್ತು ಷರತ್ತುಗಳನ್ನು ವಿವರಿಸುವ ಇ-ಮೇಲ್ ಕಳುಹಿಸಲಾಗುತ್ತದೆ ಎಂದು ಬ್ಲಾಗ್‌ನಲ್ಲಿ ತಿಳಿಸಲಾಗಿದೆ.

ಅಗತ್ಯವಿರುವ ಕಡೆಗಳಲ್ಲಿ ಉದ್ಯೋಗಿಗಳು ಹೊಸ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಹಾಗೂ ಕಂಪನಿಯೊಳಗಿನ ಇತರ ಉದ್ಯೋಗಾವಕಾಶಗಳನ್ನು ಅನ್ವೇಷಿಸಲು ಮೈಕ್ರೋಸಾಫ್ಟ್ ನೆರವು ಮುಂದುವರಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತಿಯೊಂದು ತಂಡ ಅಥವಾ ಉದ್ಯೋಗಿಗೂ ಒಂದೇ ರೀತಿಯ ಪರಿಹಾರ ಸೂಕ್ತವಾಗುವುದಿಲ್ಲ. ಬದಲಾಗುತ್ತಿರುವ ವ್ಯವಹಾರ ಅಗತ್ಯಗಳನ್ನು ಪೂರೈಸುವ ಜತೆಗೆ ಉದ್ಯೋಗಿಗಳು ಬೆಳವಣಿಗೆ ಸಾಧಿಸಲು ಮತ್ತು ತಮ್ಮ ಕೊಡುಗೆ ನೀಡಲು ಅವಕಾಶ ಕಲ್ಪಿಸುವ ಸಮತೋಲನವನ್ನು ಕಾಯ್ದುಕೊಳ್ಳಲು ಕಂಪನಿ ಪ್ರಯತ್ನಿಸಲಿದೆ ಎಂದು ಕೋಲ್ಮನ್ ಹೇಳಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ