ಕಥೆ – ಪದ್ಮಾ ಉಮೇಶ್‌

ಆಧುನಿಕ ಕಾಲದವಳಾದ ಮಾಧುರಿ, ತನ್ನನ್ನು ಸದಾ ಸುತ್ತಮುತ್ತಲಿನ ಹಿರಿಯರು, ಮನೆಯವರು ಎಲ್ಲರೊಂದಿಗೂ ಹೋಲಿಸಿಕೊಳ್ಳುತ್ತಾ, ಈಗಿನ ಕಾಲದವರಾದ ತಾವು ಎಲ್ಲದರಲ್ಲೂ ಏಕೆ ಉತ್ಸಾಹ ಕಳೆದುಕೊಂಡಿದ್ದೇವೆ ಎಂದು ಚಿಂತಿಸತೊಡಗಿದಳು. ಇದಕ್ಕೆ ಪರಿಹಾರವಿದೆಯೇ….?

ಮಾಧುರಿ ರೊಟ್ಟಿ ಬಡಿದು, ಹೆಂಚಿನ ಮೇಲೆ ಹಾಕುತ್ತಿದ್ದಾಗ ಅವಳ ಫೋನ್‌ ಹೊಡೆದುಕೊಂಡಿತು. ಸ್ಕ್ರೀನ್‌ ಮೇಲೆ ತಾಯಿಯ ಫೋಟೋ ನೋಡಿ ಮುಖದ ಮೇಲೆ ಮಂದಹಾಸ ಮೂಡಿತು. “ಗುಡ್‌ ಮಾರ್ನಿಂಗ್‌ ಮಮ್ಮಿ,” ಎಂದಳು.

“ಹೇಳಮ್ಮಾ ಗುಮ್ಮಿ…..” ಎಂದು ಆ ಕಡೆಯಿಂದ ನಗು ಹರಿದು ಬಂದಾಗ ಮಾಧುರಿಗೆ ಅಮೃತ ಸಿಂಚನವಾದಂತೆ ಅನಿಸಿತು. ಮಾಧುರಿ ತಾಯಿಯನ್ನು, `ಅಮ್ಮಾ….’ ಎಂದೇ ಕರೆಯುತ್ತಿದ್ದಳಾದರೂ ಬೆಳಗ್ಗೆ ಬರುವ ಫೋನ್‌ ನಲ್ಲಿ ಮಾತ್ರ ಪ್ರೀತಿಯಿಂದ ಮಮ್ಮಿ ಎಂದು ಸಂಬೋಧಿಸುತ್ತಿದ್ದಳು.

`ಮಾಧುರಿ ನನ್ನ ಕರ್ಚೀಫ್‌ ಎಲ್ಲಿ…..?’ ಎನ್ನುವ ಕೂಗು ಫೋನಿನಲ್ಲಿ ಹಿಂದಿನಿಂದ ಕೇಳಿಸಿದ್ದರಿಂದ, “ನಿನ್ನ ಗಂಡ ಇನ್ನೂ ಆಫೀಸಿಗೆ ಹೋಗಿಲ್ಲವೇನೋ…. ನಿನ್ನ ಗಂಡನ್ನ ಕಳಿಸಿ, ಟಿಫನ್‌ ಮುಗಿಸಿಕೋ, ಆಮೇಲೆ ಮಾಡ್ತೀನಿ,” ಎಂದು ಫೋನ್‌ ಇಟ್ಟರು.

ಅವರಿಗೆ ಏನಾದ್ರೂ ಹೇಳೋದು ಕೇಳೋದು ಇದ್ದರೇನೆ ಇಷ್ಟು ಬೆಳಗ್ಗೆ ಫೋನ್‌ ಮಾಡೋದು ಎಂದು ಮಾಧುರಿಗೆ ಗೊತ್ತಿತ್ತು. ಬಂಧುಬಳಗದ, ಅಣ್ಣತಮ್ಮ, ಅಕ್ಕಂದಿರ ಅಥವಾ ತಮ್ಮ ಸುತ್ತಮುತ್ತ ಇರುವವರ ಬಗ್ಗೆ ಯಾವುದಾದರೊಂದು ಹೊಸ ವಿಷಯ ಸಿಕ್ಕರೂ ಅದನ್ನು ಹೇಳುವವರೆಗೆ ಅವರಿಗೆ ಸಮಾಧಾನ ಇರುತ್ತಿರಲಿಲ್ಲ. ಹಾಗೆಯೇ ಮಾಧುರಿಗೆ ಸಂಬಂಧಪಟ್ಟ ವಿಚಾರ, ಅವಳ ಸುತ್ತಮುತ್ತಲಿನ ವಿಚಾರ ವಿನಿಮಯ ಮಾಡಿಕೊಂಡರೇನೇ ಅವರಿಗೆ ಸಮಾಧಾನ. ಮಾಧುರಿ ಪಕ್ಕದ ಮನೆಯ ಹುಡುಗಿಯ ಮದುವೆ ಫಿಕ್ಸ್ ಆಗಿತ್ತು. ಅದರ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಅಮ್ಮ ಕುತೂಹಲದಿಂದಿದ್ದಾರೆ ಎಂದು ಮಾಧುರಿಗೆ ಗೊತ್ತಿತ್ತು. ಗಂಡ ಆಫೀಸ್‌ ಗೆ ಹೋದ ನಂತರ ಟಿಫನ್‌ ಮಾಡುತ್ತಾ ಫೋನ್‌ ತೆಗೆದುಕೊಂಡು, ಅಮ್ಮನಿಗೆ ಕರೆ ಮಾಡಿದಳು.

ಫೋನ್‌ ಕರೆ ಸ್ವೀಕರಿಸಿದ ಮಾಧುರಿಯ ಅಮ್ಮ, “ಕಸ ಮುಸುರೆ ಮಾಡೋಕೆ ಕೆಲಸದವರು ಬರ್ತಾರೆ, ಬಟ್ಟೆ ಒಗೆಯೋಕೆ ವಾಷಿಂಗ್‌ ಮೆಷಿನ್‌ ಇದೆ, ಆದರೂ ಬೆಳಗ್ಗೆ 11 ಗಂಟೆ ಆದ್ರೂ ನಿನ್ನ ಕೆಲಸ ಮುಗಿಯೋಲ್ಲ. ಏನು ಕೆಲಸ ಮಾಡ್ತೀಯಾ ನೀನು. ನಾವು 7 ಗಂಟೆಗೆಲ್ಲಾ ಮನೆ ಬದುಕು ಮಾಡಿಕೊಂಡು ಹೊಲಕ್ಕೆ ಹೋಗ್ತಿದ್ವಿ….” ಎಂದರು.

“ನೀವು ರೊಟ್ಟಿ ಬಡಿದು, ಅನ್ನ ಬೇಳೆ ಮಾಡಿದರೆ ಮುಗೀತು. ನಮ್ಮ ಮನೇಲಿ ಹಾಗೆ ನಡೆಯುತ್ತಾ…. ನಿನ್ನ ಮೊಮ್ಮಗನಿಗೆ ಒಂದು ತಿಂಡಿ, ಬಾಕ್ಸ್ ಗೆ ರೈಸ್‌ ಐಟಂ, ನಿನ್ನ ಅಳಿಯ ರೈಸ್‌ ಐಟಂ ನನಗೆ ಬೇಡ. ಬೇರೆ ಏನಾದರೂ ಮಾಡು ಅಂತಾರೆ. ನನಗೆ ಕೆಲಸ ಮಾಡಿ ಮಾಡಿ ಸುಸ್ತು ಆಗುತ್ತೇ ಅಂದ್ರೆ…. ಇವರೂ ನಿನ್ನ ತರನೇ ಎಲ್ಲದಕ್ಕೂ ಕೆಲಸದವರು ಇದಾರೆ, ಬಟ್ಟೆಗೆ ಮೆಷಿನ್‌ ಇದೆ, ಮನೇಲಿ ಇನ್ನೇನು ಕೆಲಸ ಮಾಡ್ತೀಯಾ ಅಂತಾರೆ….! ಎಲ್ಲರೂ ನನ್ನನ್ನು ಏನು ಅಂದುಕೊಂಡಿದೀರಾ….” ಎಂದು ಮಾಧುರಿ ತುಸು ಏರು ದನಿಯಲ್ಲಿ ಕೇಳಿದಳು.

“ನೀನು ಮೊದಲೇ ಹಾಗೆಲ್ಲ ಯಾಕೆ ಅಭ್ಯಾಸ ಮಾಡಿಸೋಕೆ ಹೋದೆ. ನಿಂದೆ ತಪ್ಪು,” ಅರಾಮವಾಗಿ ಮಗಳ ಮೇಲೆ ಗೂಬೆ ಕೂರಿಸಿದರು. ನಂತರ, “ಅದೆಲ್ಲಾ ಬಿಡು…. ನಿಮ್ಮ ಪಕ್ಕದ ಮನೆ ಹುಡುಗಿಯ ಮದುವೆ ಫಿಕ್ಸ್ ಆಯ್ತಲ್ಲ ವರದಕ್ಷಿಣೆ ಏನು ಮಾತಾಡಿದ್ರು….? ಹುಡುಗನಿಗೆ ಅಕ್ಕತಂಗಿ, ಅಣ್ಣತಮ್ಮ, ಯಾರಾದರೂ ಇದಾರಾ….? ಅವರು ಏನು ಮಾಡ್ತಾರೆ….? ಮದುವೆ ಅವರು ಮಾಡ್ಕೋತಾರಾ…. ಇಲ್ಲಾ ಇವರು ಮಾಡಿಕೊಡಬೇಕಾ….? ಬಟ್ಟೆ ಎಲ್ಲಿ ತಗೋತಾರೆ….?” ಹೀಗೆ ಪ್ರಶ್ನೆಗಳ ಪಟ್ಟಿ ಹನುಮಂತನ ಬಾಲದ ತರ ಬೆಳೆಯುತ್ತಲೇ ಇತ್ತು.

ಅದಕ್ಕೆ ಮಾಧುರಿಯೇ ಪೂರ್ಣ ವಿರಾಮ ಇಟ್ಟು ಅಲ್ಪ ಸ್ವಲ್ಪ ಮಾಹಿತಿ ಕೊಟ್ಟು, “ಅಮ್ಮಾ …. ಇದೆಲ್ಲಾ ತಿಳ್ಕೊಂಡು ಏನು ಮಾಡ್ತೀಯಾ….? ನನಗೆ ಗಂಡ, ಮಕ್ಕಳದೆ ಕೇಳೋ ತಾಳ್ಮೆ ಇರಲ್ಲ….” ಎಂದಳು.

“ಈಗ್ಲೇ ಮುದಕೀರು ಮಾಡದಂಗ ಮಾಡ್ತೀರಿ…. ಯಾವುದೇ ಫಂಕ್ಷನ್‌ ಇದ್ರೂ ರೆಡಿಯಾಗಿ ಬರೋದು ಬೇಕಿರೊಲ್ಲಾ….. ಎಷ್ಟೇ ರೇಷ್ಮೆ ಸೀರೆ, ಬಂಗಾರದ ಒಡವಿ ಇದ್ರೂ ಕೂಡ, ಅದನ್ನ ಬೀರೊದಲ್ಲಿ ಬಚ್ಚಿಟ್ಟು ಡ್ರೆಸ್‌ ಇಳಾಕ್ಕೊಂಡು ಬರ್ತೀರಾ…. ಯಾವುದಕ್ಕೂ ಹುಮ್ಮಸ್ಸು ಇಲ್ಲ. ನಮ್ಮ ವಯಸ್ಸಿಗೆ ಬಂದರೆ ಗಂಡ, ಮಕ್ಕಳಿಗೆ ಅಡುಗೆ ಮಾಡಿ ಹಾಕ್ತಿರೋ ಇಲ್ವೋ…?” ಎಂದು ಫೋನ್‌ ಇಟ್ಟರು.

ತಾಯಿಯ ಮಾತಿನ ಬಗ್ಗೆ ವಿಮರ್ಶೆ ಮಾಡತೊಡಗಿದ ಮಾಧುರಿಗೆ ಉತ್ತರ ಸಿಗದೆ, ಕೆಲಸದ ಕಡೆ ಗಮನ ಕೊಟ್ಟಳು.

ಕೆಳಗಿನ ಪಕ್ಕದ ಮನೆಯಲ್ಲಿ ಒಂದು ಮರಾಠಿ ಕುಟುಂಬ ಇತ್ತು. ಆ ಮನೆಯಲ್ಲಿ 86ರ ಅಜ್ಜಿ, ಆಕೆಯ ಮಗಸೊಸೆ, ಮೊಮ್ಮಕ್ಕಳು, ಮರಿಮಕ್ಕಳು ಇದ್ದರು. ಅಜ್ಜಿಯ ಹುವ್ಮಸ್ಸು, ಉತ್ಸಾಹ ನೋಡಿ ಮಾಧುರಿಗೆ ಆಶ್ಚರ್ಯವಾಗುತ್ತಿತ್ತು. ಅವರ ಮನೆಗೆ ಕೆಲಸದರು ಬಂದರೆ ಕಾಂಪೌಂಡ್‌ ನಲ್ಲಿ ಹಾಜರಾತಿ ಹಾಕಿಬಿಡುತ್ತಿದ್ದರು. ಕೆಲಸದವರಿಗೆ ಸಂಕಟವೋ, ಸಂಕಟ. ಬಟ್ಟೆಗೆ ಸೋಪು ಹಚ್ಚದೆ ನೀರಲ್ಲಿ ಅದ್ದುವುದು, ಸಣ್ಣಪುಟ್ಟ ಚಮಚಗಳನ್ನು ತಮ್ಮ ಬ್ಯಾಗಿಗೆ ಸೇರಿಸಲು ಅವಕಾಶ ಆಗುತ್ತಿರಲಿಲ್ಲ. ಅವರಿಗೆ ಅಷ್ಟು ವಯಸ್ಸಾದರೂ ಕಣ್ಣಿನ ದೃಷ್ಟಿ ತೀಕ್ಷ್ಣವಾಗಿತ್ತು. ಅಲ್ಲದೆ ಅವರು ಬಟ್ಟೆಗೆ ಸೋಪು ಹಚ್ಚುವುದಿಲ್ಲ, ಪಾತ್ರೆಯನ್ನು ಸ್ವಚ್ಛವಾಗಿ ತೊಳೆಯುವುದಿಲ್ಲ ಎಂದು ಏನಾದರೂ ಒಂದು ಹೇಳುತ್ತಿದ್ದರಿಂದ ಅವರು ಅಜ್ಜಿಯ ಮೇಲೆ ಕಿಡಿ ಕಾರುತ್ತಿದ್ದರು.

ಅವರ ಸೊಸೆಯ ಮುಂದೆ, “ನಾಳೆಯಿಂದ ಬೇರೆ ಯಾರನ್ನಾದರೂ ನೋಡಿಕೊಳ್ಳಿ ಅಕ್ಕಾ….. ಈ ಅಜ್ಜಿ ಹೇಗೆ ಬಟ್ಟೆ, ಪಾತ್ರೆ ತೊಳೆದರೂ ಹೆಸರು ಇಡುತ್ತೆ. ನಾನು ಬರೋಲ್ಲ ಬರೇ ಕಿರಿಕಿರಿ ಮಾಡುತ್ತೆ….. ನಮಗೆ ನಿಮ್ಮದೊಂದು ಮನೆನೇನಾ ಇರೋದು…. ಇಲ್ಲೇ ಕೂತುಕಂಡು ಇರೋಕೆ ಆಗುತ್ತಾ….” ಎಂದಳು.

ಸೊಸೆಯ ಸುಡು ನೋಟ ಅಜ್ಜಿ ಕಡೆ ತಿರುಗುತ್ತಿತ್ತು. “ಅತ್ತೆ ನಿಮಗೆ ಎಷ್ಟು ಸರಿ ಹೇಳಿದೀನಿ…. ಕೆಲಸದವರೂ ಬಂದಾಗ ಹೊರಗೆ ಬರಬೇಡಿ, ಏನು ಹೇಳಬೇಡಿ ಅಂತ…. ನಾವಂತೂ ನಿಮ್ಮ ಮಕ್ಕಳು ಸೊಸೆಯಂದಿರು, ಮೊಮ್ಮಕ್ಕಳು ಅನಿಸ್ಕೋತೀವಿ. ಅವರಿಗೇನು ಕರ್ಮ,” ಎಂದು ಜೋರು ಬಾಯಿ ಮಾಡಿದಳು.

ಅಜ್ಜಿ ಪೆಚ್ಚುವೋರೆ ಹಾಕಿ ಮನೆಯೊಳಗೆ ಹೋದಾಗ ಮಾಧುರಿಗೆ ಆಕೆಯ ಸ್ಥಿತಿ ನೋಡಿ… `ಅಯ್ಯೋ ಪಾಪ ಎನಿಸಿತು. ನಮಗೆ ಆದ್ರೆ ಏನೂ ಮಾಡಬೇಡ ಅಂದರೆ ತೂಕಡಿಸೋರಿಗೆ ಹಾಸಿಗೆ ಹಾಸಿಕೊಟ್ಟ ಹಾಗೆ ಆ ಕಡೆ ನಾವು ತಲೆ ಕೂಡ ಹಾಕೋಲ್ಲ. ಆದರೆ ಪಾಪ ಈ ಅಜ್ಜಿ ಸುಮ್ನೆ ಬೈಸಿಕೊಂಡಿತಲ್ಲ…. ಇನ್ನು ಮುಂದೆ ಹೊರಗೆ ಬರೋದೆ ಇಲ್ವೇನೋ…’ ಇವರು ಇಷ್ಟು ಅಂದು ಆಡಿದ ಮೇಲೆ ಅಂತ ಬೇಜಾರು ಮಾಡಿಕೊಂಡಳು.

ಆದರೆ ಒಂದು ವಾರದ ನಂತರ ಏನೂ ನಡದೇ ಇಲ್ಲವೇನೊ ಎನ್ನುವಂತೆ ಅಜ್ಜಿ ಉತ್ಸಾಹದ ಚಿಲುಮೆಯಾಗಿ ಓಡಾಡಿತ್ತಲ್ಲದೆ, ಕೆಲಸದವರ ಬಳಿ ಮತ್ತೆ ಅದೇ ರಾಗ ತೆಗೆದಾಗ ಸೊಸೆ ತಲೆ ಚಚ್ಚಿಕೊಂಡಳು.

“ಅತ್ತೇ…. ಏನಾದ್ರೂ ಅನ್ನೋದಿದ್ರೆ ನಮಗಿ ಅನ್ನಿ…. ನೀವು ಎಲ್ಲರ ಹತ್ರ ಜಗಳ ಮಾಡಿ ಅವರು ಕೆಲಸ ಬಿಟ್ರೆ ನಮಗೆ ನಮ್ಮ ಸೊಸೆಯಂದಿರಿಗೆ ಮಾಡೋಕೆ ಆಗೋಲ್ಲ. ನೀವು ಮಾಡ್ತೀರಾ?”

“ನಾನೇ ಮಾಡ್ತೀನಿ ಬಿಡು ಹೇಗೂ ಅವರೂ ನೀರಲ್ಲಿ ಅದ್ದಿ ಇಡ್ತಾರೆ. ನಾನು ಅದೇ ಮಾಡ್ತೀನಿ. ನನ್ನ ಮಕ್ಕಳು, ಮೊಮ್ಮಕ್ಕಳ ದುಡ್ಡಾದರೂ ಉಳಿಯುತ್ತೆ,” ಅಂದಾಗ ಅವರ ಕಾಂಪೌಂಡ್‌ ನಲ್ಲಿ ನಡೆಯುತ್ತಿದ್ದ ಎಲ್ಲಾ ಡ್ರಾಮಾವನ್ನು ಮೇಲಿನಿಂದ ನೋಡುತ್ತಿದ್ದ ಮಾಧುರಿ ಬಿದ್ದು ಬಿದ್ದು ನಕ್ಕಳು. ಹಾಗೆ ಅಜ್ಜಿ ಮುಂದೆ ನಾವು ನಾಚಿಕೊಳ್ಳಬೇಕೆನಿಸಿತು.

ಮಾಧುರಿಯ ಮದುವೆಯಾಗಿ 10 ವರ್ಷವಾದರೂ ಅಜ್ಜಿಯ ಮನೆಯ ಕೆಲಸದವರು ಬದಲಾದರೆ ಹೊರತು ಅಜ್ಜಿಯಲ್ಲಿ ಮಾತ್ರ ಸ್ವಲ್ಪ ಬದಲಾವಣೆ ಆಗಿರಲಿಲ್ಲ. ಮಾಧುರಿ ಮದುವೆಯಾಗಿ ಬಂದ ನಂತರವೇ ಅವಳ ನಾದಿನಿಯರು ಮದುವೆಯಾಗಿ ಗಂಡನ ಮನೆ ಸೇರಿದ್ದರು. ಸದಾ ಮನೆಯ ಹೊರಗೆ ಕಾಲ ಕಳೆಯುತ್ತಿದ್ದ ಅಜ್ಜಿ, ಹೊರಗೆ ಹೋಗುತ್ತಿದ್ದ ಇವಳನ್ನು ತಮ್ಮ ಗೇಟಿನ ಬಳಿ ನೋಡಿ ಕರೆದು, ನಿಮ್ಮ ನಾದಿನಿಯರು ಆರಾಮವಾಗಿದಾರೆ. ಈಗ ಕಾಣಿಸೋದೆ ಇಲ್ಲ, ನಿಮ್ಮನೆಗೆ ಕರೆದು ಮಾಡ್ತೀಯಾ ಇಲ್ವಾ ಎಂದು ಅವಾಜ್‌ ಹಾಕಿದಾಗ ಮಾಧುರಿ ಹೈರಾಣಾಗಿ ಹೋದಳು.

ಇವರಲ್ಲಿ ಇರೋ ಉತ್ಸಾಹದಲ್ಲಿ 10% ಆದ್ರೂ ಇದ್ರೆ ನಮ್ಮ ಲೈಫ್‌ ಬ್ಯೂಟಿಫುಲ್ ಆಗಿರುತ್ತಿತ್ತೇನೋ ಎಂದುಕೊಂಡಳು. 96ನೇ ವರ್ಷದಲ್ಲಿ ಅಜ್ಜಿ ಸತ್ತಾಗ ಅವಳಿಗೆ ಪಿಚ್ಚೆನಿಸಿತು. ದಿನಾಲೂ ಕೆಲಸದವರು ಬಂದ ನಂತರ ಹೊರಗೆ ಬರುತ್ತಿದ್ದ ಅಜ್ಜಿಯನ್ನು ಅಭ್ಯಾಸ ಬಲದಂತೆ ಕಣ್ಣು ಹುಡುಕಿತು. ಅಲ್ಲಿ ಆ ಮನೆಯವರು ಯಾರೂ ಇರಲಿಲ್ಲ.

ಅಜ್ಜಿ ಹೇಳುವಂತೆ ಕೆಲಸದ ಹೆಂಗಸು ನೆನೆಸಿದ ಒಂದೆರಡು ಬಟ್ಟೆಗಳನ್ನು ಸೋಪು ಹಾಕದೆ ಹಾಗೆ ಅದ್ದಿದಾಗ ಇವಳಿಗೆ ಬೇಜಾರೆನಿಸಿತು. ಬೈದರೂ, ಹೋಗುವ ಕಾಲ ಹತ್ತಿರ ಬಂದರೂ, ಮನೆಯನ್ನು ತನ್ನದು ಎಂದು ಕಾಯುತ್ತಿತ್ತಲ್ಲ. ಅವರಂತೆ ವಯಸ್ಸಾದ ಕಾಲದಲ್ಲಿ ನಾವು ಹಾಗೆ ಇರಲು ಸಾಧ್ಯವೇ? ಎಂದು ಮನಸ್ಸಿನಲ್ಲೇ ಪ್ರಶ್ನಿಸಿಕೊಂಡಾಗ ಮನ ನೋ ನೆವರ್‌ ಎಂದಿತು.

ಸುಜಾತಾ ಆಂಟಿದು ಇನ್ನೊಂದು ರೀತಿಯ ಹುಮ್ಮಸ್ಸು. ಏರಿಯಾದಲ್ಲಿ ಇರುವ ಪಾರ್ಕ್‌ ಗೆ ದಿನಾಲೂ ತಪ್ಪದೆ ವಾಕಿಂಗ್‌ ಬರುವ ಅವರ ಮನೆಯ ಹತ್ತಿರವೇ ಇರುವ ಸುಜಾತಾ ಆಂಟಿ 1 ಗಂಟೆ ನಿಲ್ಲದೆ ವಾಕ್‌ ಮಾಡಿದಾಗ ಅವಳು, ಇವರ ಮುಂದೆ ಸೊನ್ನೆ ಎಂದುಕೊಂಡಳು. ಮಾಧುರಿ 30 ನಿಮಿಷ ವಾಕ್‌ ನಲ್ಲಿ ಅವರ ಜೊತೆ, ಇವರ ಜೊತೆ ನಿಂತು ಮಾತಾಡಿ ಮನೆಗೆ ಹೋಗಲು ನೋಡಿದಾಗ, ಇನ್ನೊಂದೆರಡು ಸುತ್ತು ಹಾಕು ಇಬ್ಬರು ಒಟ್ಟಿಗೆ ಹೋಗೋಣ. ನಂದು ಇನ್ನೂ ಎರಡು ಸುತ್ತು ಬಾಕಿ ಇದೆ ಎಂದಾಗ ಇವಳಿಗೆ ಉಗುಳು ನುಂಗುವಂತಾಯಿತು.

ಮೊದಲೇ ಕಾಲು ನೋಯ್ತಿತ್ತು. ಆದ್ದರಿಂದ ಆಂಟಿ ನಾನು ಕೂತಿರ್ತೀನಿ ನೀವು ಮಾಡಿ ಬನ್ನಿ ಎಂದಳು. ಅವಳ ಮಾವ ಕೂಡ ಒಂದು ತಾಸು ಟೆರೇಸ್‌ ಮೇಲೆ ತಪ್ಪದೆ ವಾಕ್‌ ಮಾಡುತ್ತಿದ್ದರೂ ಮಳೆ ಬಂದರೆ, ಚಳಿಯಿದ್ದರೆ ಮನೆಯಲ್ಲೇ ಬೆಡ್‌ ರೂಮ್ ಟು ಹಾಲ್ ವ‌ರೆಗೆ ಆದರೂ ಒಂದು ತಾಸು ವಾಕ್‌ ಮಾಡಲೇಬೇಕು ತಪ್ಪಿಸುತ್ತಿರಲಿಲ್ಲ. ಇನ್ನು ತಂದೆಯಂತೂ ಊರಿನಲ್ಲಿ ಇವರು ದೇವರ ಗುಡಿಗಳನ್ನೆಲ್ಲಾ ಸುತ್ತಿ ಬರುತ್ತಿದ್ದರು. ಇವರೆಲ್ಲರಿಗೂ ಇವರು ಹುಮ್ಮಸ್ಸು ನಮಗ್ಯಾಕಿಲ್ಲ ಎಂದು ಚಿಂತಿಸುತ್ತಾ ಕೂತಳು.

ಹೋಗೋಣಾ ಎಂದು ಸುಜಾತ ಆಂಟಿ ಎಚ್ಚರಿಸಿದಾಗ, ಹ್ಞೂಂ ಎಂದು ಎದ್ದು ನಿಂತಳು. ಮಾತಾಡುತ್ತಾ ಮನೆಗೆ ಬರುವಾಗ ಆಂಟಿ ನಿಮ್ಮ ಸೀರೆ ಚೆನ್ನಾಗಿದೆ ಎಂದಾಗ ಅಲ್ಲಿ ಮನೇಲೆ ಮಾರ್ತಾಳಲ್ಲ ಲಲಿತಾ ಅವರ ಮನೇಲಿ ತಂದಿದ್ದು ಇನ್ನೂ ಎಷ್ಟೊಂದು ಇದ್ದವು.

ನೀನು ತಗೋತೀಯಾ ಎಂದರೆ ಬೇಕಾದರೆ ಈಗ ಹೋಗೋಣಾ ಎಂದಾಗ ಅವಳು ಉತ್ಸಾಹ ನೋಡಿ ಸುಸ್ತು ಹೊಡೆದು ಹೋದಳು. ಅಯ್ಯೋ ಆಂಟಿ ಅಡುಗೆ ಮಾಡಬೇಕು, ಈಗ ಬೇಡ ಎಂದು ಅವರ ಮನೆ ಬಂದಿದ್ದರಿಂದ ಮುಂದೆ ನಡೆದಳು. ಅಳು ಏನೋ ಮಾತಾಡಲು ಒಂದು ವಿಷಯ ಬೇಕು ಎಂದು ಸುಮ್ಮನೆ ಹೇಳಿದ್ದರಿಂದ ಮರೆತು ಹೋಗಿದ್ದಳು. ಆದರೆ ಮಾರನೆ ದಿನ ಇವಳು ವಾಕಿಂಗ್‌ ಹೋಗಿಲ್ಲದ ಕಾರಣ ಅವರು ವಾಕಿಂಗ್‌ ಮುಗಿಸಿ ಕೆಳಗಿನಿಂದಲೇ ಮಾಧುರಿ ಎಂದು ಕೂಗು ಹಾಕಿದರೂ ಅವಳು ಹೊರಗೆ ಬಂದಾಗ ಹೋಗಿ ಬರೋಣ ಬಾ ಎಂದರು.

ಆಂಟಿ ಈಗ್ಲಾ ನಾನು ನೈಟೀಲಿ ಇದೀನಿ ಡ್ರೆಸ್‌ ಚೇಂಜ್‌ ಮಾಡಿ ಬರೋದರೊಳಗೆ ಲೇಟ್‌ ಆಗುತ್ತೆ ಅಲ್ಲದೆ, ದೂರ ಕೂಡ ಇದೆಯೆಂದರೆ, ದೂರ ಎಲ್ಲಿ ಆಯ್ತೆ ಇಲ್ಲೇ ಎರಡು ಹೆಜ್ಜೆ ಹೋದರೆ ಆಯ್ತು ಒಂದು ವೇಲು ಹಾಕಿಕೊಂಡು ಬಾ ಡ್ರೆಸ್‌ ಏನು ಚೇಂಜ್ ಮಾಡ್ತೀಯ ಎಂದರೂ ಅವರು ಮಹಾಲಕ್ಷ್ಮಿಯ ಹಾಗೆ ಲಕಲಕ ಹೊಳೆಯುತ್ತಿದ್ದರೆ ತಾನು ಕೊಳೆಯಾಗಿರೋ ನೈಟಿಲಿ ಎಣ್ಣೆ ಮೆತ್ತಿಕೊಂಡಿರೋ ಅವತಾರದಲ್ಲಿ ಹೋಗೋಕೆ ಆಗುತ್ತಾ ಡ್ರೆಸ್‌ ಚೇಂಜ್‌ ಮಾಡಿದರೂ ಅವರ ಲೆಕ್ಕದಲ್ಲಿ ಎರಡು ಹೆಜ್ಜೆಯಿರೊ 2-3 ಕಿ.ಮೀ ಹೋಗೋಕೆ ಆಗುತ್ತಾ, ಅವರಿಗೆ ಏನೋ ನೆಪ ಹೇಳಿ ಸಾಗಿ ಹಾಕೋದರಲ್ಲಿ ಇರೋ ಬುದ್ಧಿನೆಲ್ಲಾ ಖರ್ಚು ಮಾಡಿದಳು. ತಾಯಿ ತಂದೆ, ಮಾವ ಆ ಅಜ್ಜಿ, ಆಂಟಿ ಆ ಹಿರಿಯರಲ್ಲಿ ಒಂದೊಂದು ರೀತಿಯ ಹುಮ್ಮಸ್ಸು, ಉತ್ಸಾಹ ಈಗಿನ ಕಾಲದವರಾದ ನಮ್ಮಲ್ಲಿ ಏಕೆ ಇಲ್ಲ? ಕೆಮಿಕಲ್ ಆಹಾರದಿಂದಾಗಿಯೇ ಅಥವಾ ನಮ್ಮ ಸುತ್ತಮುತ್ತ ಇರುವವರಂತೆ ನಮಗೆ ಕಾರು ಇಲ್ಲ, ಬಂಗಲೆ ಇಲ್ಲ ಎಂಬ ಚಿಂತೆಯಿಂದಲೋ ನಮ್ಮ ಸಣ್ಣ ಪುಟ್ಟ ಆಸೆಗಳನ್ನು ಪೂರೈಸಿಕೊಳ್ಳದೆ ಅವರನ್ನು, ಇವರನ್ನು ನೋಡಿ ಕುದ್ದು ಆರೋಗ್ಯ ಕೆಡಿಸಿಕೊಳ್ಳುವುದರಿಂದಲೋ ವಯಸ್ಸಿಗೆ ಮೊದಲೇ ನಮಗೆ ಮುಪ್ಪು ಹರುಡುತ್ತಿದೆಯೇ ಎಂದು ಯೋಚಿಸುತ್ತಿರುವಾಗಲೇ, ಸುಜಾತಾ ಆಂಟಿ ಬಂದು ಹೊಸ ಸೀರೆಗಳು ಬಂದಿವೆಯಂತೆ ಫೋನ್‌ ಮಾಡಿದ್ದರೂ ಅವತ್ತು ನಿನಗೆ ಬರೋಕೆ ಆಗಲಿಲ್ವಲ್ಲಾ ಇವತ್ತು ಹೋಗಿಬರೋಣ ಸಂಜೆ ರೆಡಿಯಾಗಿರಬೇಕು ಏನು ನೆಪ ಹೇಳೊ ಹಾಗಿಲ್ಲ ನಾನು ಒಂದೈದು ಸೀರೆ ತಗೋಬೇಕು, ನಂಗೆ ಆರಿಸೋಕೆ ನೀನು ಸಹಾಯ ಮಾಡಬೇಕು. ನಿಂಗೆ ನಡೆಯೋಕೆ ಆಗಲ್ಲ ಅಂದ್ರೆ, ಆಟೋದಲ್ಲಿ ಹೋಗಿ ಬರೋಣವೆಂದಾಗ, ಅವಳಿಗೆ `ಹುಣಸೆ ಮರ ಮುಪ್ಪಾದರೆ ಹುಳಿ ಮುಪ್ಪೆ’ ಎಂಬ ಗಾದೆ ಮಾತು ನೆನಪಾಗಿ ಮುಖದಲ್ಲಿ ಮಂದಹಾಸ ಮೂಡಿತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ