– ರಾಘವೇಂದ್ರ ಅಡಿಗ ಎಚ್ಚೆನ್.
ನಟ ದರ್ಶನ್ ಮತ್ತು ಅವರ ಕುಟುಂಬದ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿದ್ದ ನಟ ಧನ್ವೀರ್ ಗೌಡಗೆ ಇದೀಗ ನ್ಯಾಯಾಲಯದಿಂದ ನಿರ್ಬಂಧ ಎದುರಾಗಿದೆ. ಧನ್ವೀರ್ ತಮ್ಮ ವಿರುದ್ಧ ಅಥವಾ ತಮ್ಮ ಕುಟುಂಬದ ಸದಸ್ಯರ ವಿರುದ್ಧ ಯಾವುದೇ ಸಾರ್ವಜನಿಕ ಹೇಳಿಕೆ ನೀಡದಂತೆ ತಡೆಯಬೇಕು ಎಂದು ದರ್ಶನ್ ಸಲ್ಲಿಸಿದ್ದ ಅರ್ಜಿಗೆ ಬೆಂಗಳೂರು ಸೆಷನ್ಸ್ ನ್ಯಾಯಾಲಯ ಆದೇಶ ನೀಡಿದೆ.
ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ದರ್ಶನ್ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ಧನ್ವೀರ್ಗೆ ನಿರ್ಬಂಧ ವಿಧಿಸಿದೆ. ಈ ಮೂಲಕ ಜೈಲಿನಲ್ಲಿರುವ ದರ್ಶನ್ ಕಾನೂನು ಹೋರಾಟದ ಮೂಲಕ ಧನ್ವೀರ್ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.
ಇತ್ತೀಚೆಗೆ ಧನ್ವೀರ್ ಗೌಡ ಮತ್ತು ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ ಜಟಾಪಟಿ ತೀವ್ರ ಸ್ವರೂಪ ಪಡೆದುಕೊಂಡಿತ್ತು. ವಿವಿಧ ಮಾಧ್ಯಮಗಳಲ್ಲಿ ಮಾತನಾಡಿದ್ದ ಧನ್ವೀರ್, ವಿಜಯಲಕ್ಷ್ಮಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಒಂದು ಹಂತದಲ್ಲಿ ವಿಜಯಲಕ್ಷ್ಮಿ ಅವರನ್ನು ‘ಫೇಕ್’ ಎಂದೂ ಕರೆದಿದ್ದರು. ಈ ಹೇಳಿಕೆಗಳೇ ಇದೀಗ ಕಾನೂನು ಸಂಘರ್ಷಕ್ಕೆ ಕಾರಣವಾಗಿವೆ.
ಇನ್ನು ಧನ್ವೀರ್ ಮತ್ತು ವಿಜಯಲಕ್ಷ್ಮಿ ನಡುವಿನ ವಿವಾದಕ್ಕೆ 10 ಕೋಟಿ ರೂಪಾಯಿ ಹಣಕಾಸಿನ ವ್ಯವಹಾರವೇ ಮೂಲ ಕಾರಣ ಎನ್ನಲಾಗುತ್ತಿದೆ. ಈ ಸಂಬಂಧ ವಿಜಯಲಕ್ಷ್ಮಿ ಪರ ಇರುವವರು ಧನ್ವೀರ್ ವಿರುದ್ಧ ಆರ್ಆರ್ ನಗರ, ಬಸವೇಶ್ವರ ನಗರ ಮತ್ತು ಬ್ಯಾಟರಾಯನಪುರ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದಾರೆ.
ಈ ಪೈಕಿ ಆರ್ಆರ್ ನಗರ ಮತ್ತು ಬಸವೇಶ್ವರ ನಗರ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಎರಡು ಎಫ್ಐಆರ್ ದಾಖಲಾಗಿವೆ. ಇದೀಗ ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಬಳಿಕ ನ್ಯಾಯಾಲಯದಿಂದಲೂ ನಿರ್ಬಂಧ ಎದುರಾಗಿದ್ದು, ಧನ್ವೀರ್ ವಿರುದ್ಧದ ಕಾನೂನು ಸಂಘರ್ಷ ಮತ್ತೊಂದು ಹಂತಕ್ಕೆ ತಲುಪಿದೆ.





