ನನ್ನಾಕೆಯ ಕಪಾಟಿನೊಳಗೆ
ಸೀರೆಗಳೆಲ್ಲ ಉಸಿರುಗಟ್ಟಿ ನರಳುತ್ತಿದ್ದವು;
ಮೊನ್ನೆ ಮತ್ತೊಂದು ಹೊಸತನ್ನಿಡಲು
ಬಾಗಿಲು ತೆರೆದಿದ್ದೇ ತಡ,
ಒಂದಷ್ಟು ಸೀರೆಗಳು ದಬದಬನೆ ಬಿದ್ದು
ಅವಳ ಕಾಲ ಮೇಲೆ ಗೋಳಿಟ್ಟವು!

“ಅಕ್ಕಾ, ನಿಲ್ಲಿಸು ಹೊಸ ಸೀರೆಗಳ ಖರೀದಿ
ಇಲ್ಲವೇ ಮಾಡಿಸು ದೊಡ್ಡದೊಂದು ಕಪಾಟು;
ಒಬ್ಬರ ಮೇಲೊಬ್ಬರು ಬಿದ್ದು ನಲುಗಿದ್ದೇವೆ
ಕತ್ತಲಲ್ಲಿ ಬಣ್ಣವನ್ನೇ ಕಾಣದೆ ಅಳುತ್ತಿದ್ದೇವೆ,
ಹೃದಯವಂತ ಯಜಮಾನಿಯ ಮೇಲಿರುವ
ಪ್ರೀತಿಯೇ ನಮ್ಮ ಪಾಲಿನ ದೊಡ್ಡ ಸಂಕಷ್ಟ!

ವರ್ಷಗಳಾದರೂ ನಮ್ಮತ್ತ ತಿರುಗಿ ನೋಡದೆ
ಹೊಸದಕ್ಕೆ ಮಾತ್ರವೇ ಮಣೆ ಹಾಕಿ
ಹಳಬರನ್ನು ಮರೆತೆಯಲ್ಲ, ಇದು ನ್ಯಾಯವೇ!
ನಾವು ಮಾಡಿದ ಪಾಪವಾದರೂ ಏನು?
ನಿನ್ನ ಮೈಮೇಲೆ ಒಮ್ಮೆ ಅರಳಿದರೆ ಸಾಕು
ನಮ್ಮ ಜೀವಕ್ಕೂ ನವ ಚೈತನ್ಯ ಬಂದೀತು!
ಈ ಹಂಬಲ ತಪ್ಪೇ? ನೀನೇ ಒಮ್ಮೆ ಯೋಚಿಸು.

ರವಿಕೆ ಹೊಲಿಯಲು
ಮೈಯ ಭಾಗವನ್ನೇ ತ್ಯಾಗ ಮಾಡಿದೆವು
ಅಂಚು, ಫಾಲ್ಸ್‌ಗಾಗಿ ನೋವನ್ನೂ ಸಹಿಸಿದೆವು;
ನೈಟಿ ಹಾಕಿದಾಗ ಹೋಗಲಿ ಎಂದುಕೊಂಡೆವು
ಚೂಡಿದಾರ್ ತೊಟ್ಟಾಗ ಸುಮ್ಮನಿದ್ದೆವು
ಜೀನ್ಸ್ ಕಂಡಾಗ ನಕ್ಕು ಆನಂದಿಸಿದೆವು!
ನಿನ್ನ ಯೌವನದ ಸಂಭ್ರಮ ಕಂಡಿದ್ದೇವೆ
ಪ್ರೇಮದ ಪಿಸುಮಾತಿಗೂ ಸಾಕ್ಷಿಯಾಗಿದ್ದೇವೆ;
ನಿನ್ನ ಕಣ್ಣೀರ ಹೀರಿದ, ನಗುವಿಗೆ ಮೆರಗಾದ
ನಿನ್ನ ಮಕ್ಕಳಿಗೆ ಮಡಿಲಾದ
ಸೆಕೆಗೆ ಗಾಳಿ ಬೀಸಿದ, ಬಿಸಿಲಿಗೆ ನೆರಳಾದ
ನಮ್ಮನ್ನು ಮರೆತರೆ ಹೇಗೆ, ಅಕ್ಕಾ?
ಭಾವನ ಬೀರುವನ್ನೊಮ್ಮೆ ಕಂಡರೆ
ನಮಗೆ ಮತ್ಸರ ಹುಟ್ಟುತ್ತದೆ,
ಅದೆಷ್ಟು ಜಾಗ ಇನ್ನೂ ಖಾಲಿಯಿದೆ
ಆರಾಮವಾಗಿ ಹರುಷ ಪಡಲು,
ಅಲ್ಲಿ ಯಾವ ಉಡುಪು ತಬ್ಬಲಿಯಲ್ಲ
ಒಬ್ಬರ ತರುವಾಯ ಒಬ್ಬರು
ಗರಿಗರಿಯಾಗಿ ಮೈಮೇಲೆ ನಲಿಯುವರಲ್ಲ!
ನಾವು ಬರೀ ಸೀರೆಗಳಲ್ಲ , ಅಕ್ಕಾ!
ನಿನ್ನ ನೆನಪುಗಳ ಬಣ್ಣದ ಅಧ್ಯಾಯಗಳು;
ಸದ್ಯಕ್ಕೆ ನಮ್ಮ ಬೇಡಿಕೆ ಇಷ್ಟೇ,
ಸಾಧ್ಯವಾದರೆ ಈ ಶಾಪಿಂಗ್ ನಿಲ್ಲಿಸು
ಇಲ್ಲವೇ ಹೊಸದೊಂದು ಕಪಾಟು ಮಾಡಿಸು,
ಜೊತೆಗೆ ದಿನಕ್ಕೊಮ್ಮೆಯಾದರೂ
ನಮ್ಮಲ್ಲೊಬ್ಬಳನ್ನು ಪ್ರೀತಿಯಿಂದ ಉಟ್ಟು
ನಮ್ಮ ಬದುಕನ್ನೂ ಸ್ವಲ್ಪ ಉದ್ಧರಿಸು.
ಸತ್ಯರಂಗಸುತ





