ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರವನ್ನು ಪರಿಷ್ಕರಿಸಿ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಶುಕ್ರವಾರ ಆದೇಶ ಹೊರಡಿಸಿದೆ. ರಾಜ್ಯ ಸಚಿವ ಸಂಪುಟ ಸಭೆಯ ನಿರ್ಧಾರದಂತೆ ಪರಿಷ್ಕೃತ ದರಗಳು ನವೆಂಬರ್ 1ರಿಂದಲೇ ಜಾರಿಗೆ ಬರಲಿವೆ.
ಹೊಸ ದರದ ಪ್ರಕಾರ, ಅರ್ಧ ಲೀಟರ್ ಮೊಸರಿನ ಬೆಲೆ 28 ರೂ.ನಿಂದ 34 ರೂ.ಗೆ ಏರಿಕೆಯಾಗಿದ್ದರೆ, ಒಂದು ಲೀಟರ್ ಮೊಸರಿನ ದರ 54 ರೂ.ನಿಂದ 68 ರೂ.ಗೆ ಹೆಚ್ಚಳವಾಗಿದೆ. ಅಂದರೆ, ಅರ್ಧ ಲೀಟರ್ ಮೊಸರಿಗೆ 6 ರೂ. ಹಾಗೂ ಒಂದು ಲೀಟರ್ ಮೊಸರಿಗೆ 14 ರೂ. ಹೆಚ್ಚುವರಿಯಾಗಿ ಹಣ ಪಾವತಿಸಬೇಕಾಗುತ್ತದೆ.
ಇದಲ್ಲದೆ ವಿವಿಧ ಮಾದರಿಯ ಹಾಲಿನ ದರದಲ್ಲಿಯೂ ಏರಿಕೆ ಮಾಡಲಾಗಿದೆ. ಟೋನ್ಡ್ ಹಾಲಿನ ಬೆಲೆ 46 ರೂ.ನಿಂದ 54 ರೂ.ಗೆ, ಹೋಮೋಜಿನೈಸ್ಡ್ ಟೋನ್ಡ್ ಹಾಲಿನ ದರ 47 ರೂ.ನಿಂದ 56 ರೂ.ಗೆ ಹೆಚ್ಚಿಸಲಾಗಿದೆ.
ಹೋಮೋಜಿನೈಸ್ಡ್ ಹಸುವಿನ ಹಾಲಿನ ಬೆಲೆ 50 ರೂ.ನಿಂದ 58 ರೂ.ಗೆ ಏರಿಕೆಯಾಗಿದ್ದರೆ, ಸ್ಪೆಷಲ್ ಟೋನ್ಡ್ ಹಾಲು ಮತ್ತು ಶುಭಂ ಹಾಲಿನ ದರ ತಲಾ 52 ರೂ.ನಿಂದ 64 ರೂ.ಗೆ ಹೆಚ್ಚಳವಾಗಿದೆ. ಹೋಮೋಜಿನೈಸ್ಡ್ ಶುಭಂ ಹಾಲಿನ ಬೆಲೆ 53 ರೂ.ನಿಂದ 65 ರೂ.ಗೆ ಏರಿಕೆಯಾಗಿದೆ.
ರಾಜ್ಯದ ಲಕ್ಷಾಂತರ ಹೈನುಗಾರ ರೈತರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕೆ ಎಂ ಎಫ್ಗೆ ರಾಜ್ಯದಲ್ಲಿ ಸುಮಾರು 26.89 ಲಕ್ಷ ಹೈನುಗಾರ ರೈತ ಸದಸ್ಯರಿದ್ದು, ಅವರಲ್ಲಿ ಸುಮಾರು 8.9 ಲಕ್ಷ ರೈತರು ಪ್ರತಿದಿನ ಸಹಕಾರ ಸಂಘಗಳಿಗೆ ಹಾಲು ಪೂರೈಸುತ್ತಿದ್ದಾರೆ. ಹಾಲು ಉತ್ಪಾದಕರಿಗೆ ಪ್ರತಿದಿನ ಸರಾಸರಿ 28.60 ಕೋಟಿ ರೂ. ಪಾವತಿಸಲಾಗುತ್ತಿದೆ ಎಂದು ಕೆಎಂಎಫ್ ತಿಳಿಸಿದೆ.
ಈ ವರ್ಷ ಸಕಾಲದಲ್ಲಿ ಉತ್ತಮ ಮಳೆಯಾಗದ ಹಿನ್ನೆಲೆಯಲ್ಲಿ ನೀರು ಮತ್ತು ಮೇವು ಕೊರತೆ ಉಂಟಾಗಿ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಪಶುಗಳ ನಿರ್ವಹಣೆ, ಔಷಧೋಪಚಾರ ಹಾಗೂ ಮೇವು ಪೂರೈಕೆಗೆ ರೈತರು ಹೆಚ್ಚಿನ ಹಣ ವೆಚ್ಚ ಮಾಡಬೇಕಾಗಿದೆ. ಹೀಗಾಗಿ ಹೈನುಗಾರಿಕೆಯನ್ನು ಮುಂದುವರಿಸುವುದು ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಹಾಲು ಖರೀದಿ ದರವನ್ನು ಪ್ರತಿ ಲೀಟರ್ಗೆ ಕನಿಷ್ಠ 10ರಿಂದ 12 ರೂ. ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.
ಹೈನುಗಾರ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಸೂಕ್ತ ಪ್ರೋತ್ಸಾಹ ನೀಡುವ ಹಾಗೂ ಹೈನುಗಾರಿಕೆ ಕ್ಷೇತ್ರವನ್ನು ಸುಸ್ಥಿರವಾಗಿ ಬೆಳೆಸುವ ಉದ್ದೇಶದಿಂದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದೆ. ಅದರಂತೆ ನಂದಿನಿ ಟೋನ್ಡ್ ಹಾಲಿನ ಮಾರಾಟ ದರವನ್ನು ಪ್ರತಿ ಲೀಟರ್ಗೆ 8 ರೂ. ಹೆಚ್ಚಿಸಲು ಮತ್ತು ಪರಿಷ್ಕೃತ ಮೊತ್ತದಲ್ಲಿ 7 ರೂ.ಗಳನ್ನು ಹಾಲು ಉತ್ಪಾದಕರಿಗೆ ವರ್ಗಾಯಿಸಲು ಸೂಚಿಸಲಾಗಿದೆ ಎಂದು ಕೆಎಂಎಫ್ ಪ್ರಕಟಣೆಯಲ್ಲಿ ತಿಳಿಸಿದೆ.





