ಬದರಿನಾಥದಿಂದ ಡೆಹ್ರಾಡೂನ್‌ಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಪತನಗೊಂಡಿರುವ ಘಟನೆ ಶುಕ್ರವಾರ ನಡೆದಿದೆ. ಇದರಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರು ಮೂಲದ ಐವರು ಪ್ರಯಾಣಿಕರು ಹಾಗೂ ಓರ್ವ ಪೈಲಟ್ ಸಾವನ್ನಪ್ಪಿದ್ದಾರೆ.

ಬದರಿನಾಥದಿಂದ ಡೆಹ್ರಾಡೂನ್‌ಗೆ ತೆರಳುತ್ತಿದ್ದ ‘ಟ್ರಾನ್ಸ್ ಭಾರತ್ ಏವಿಯೇಷನ್’ (Trans Bharat Aviation) ಸಂಸ್ಥೆಯ ಹೆಲಿಕಾಪ್ಟರ್ ನಾಪತ್ತೆಯಾಗಿತ್ತು. ಇದು ಚಮೋಲಿ ಜಿಲ್ಲೆಯ ಜೋಶಿಮಠದ ಬಳಿ ಪತನಗೊಂಡಿದೆ ಎಂದು ವರದಿಯಾಗಿದೆ.

ಹೆಲಿಕಾಪ್ಟರ್ ಪತ್ತೆಗೆ ಭಾರತೀಯ ಸೇನೆ, ಜಿಲ್ಲಾಡಳಿತ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿವೆ.

ಸಿಸಿಬಿ ಇನ್ಸ್ ಪೆಕ್ಟರ್ ಅರುಣ್ ಸಾಲಂಕೆ ಸಾವು: ಮೃತ ಪ್ರಯಾಣಿಕರನ್ನು ಬೆಂಗಳೂರು ಮೂಲದ ಪ್ರತಾಪ, ಸಿಸಿಬಿ ಇನ್ಸ್ ಪೆಕ್ಟರ್ ಅರುಣ್ ಸಾಲಂಕೆ, ಶಂಕರ್ ಗೌಡ, ಸುಧೀರ್ ಕೆ. ಮತ್ತು ಎಚ್.ಎಸ್. ನಟರಾಜ ಎಂದು ಗುರುತಿಸಲಾಗಿದೆ. ಹೆಲಿಕಾಪ್ಟರ್ ಅನ್ನು ಕ್ಯಾಪ್ಟನ್ ಹಿಮಾಂಶು ಚಲಾಯಿಸುತ್ತಿದ್ದರು.ಬೆಂಗಳೂರಿನಲ್ಲಿ ವಾಸವಿದ್ದ ಇನ್ಸ್ ಪೆಕ್ಟರ್ ಅರುಣ್ ಸಾಲಂಕೆ, ವಕೀಲರಾದ ಸುಧೀರ್, ಶಂಕರ್ ಗೌಡ, ನಟರಾಜ್ ಅವರೊಂದಿಗೆ ಚಾರ್ ಧಾಮ್ ಪ್ರವಾಸಕ್ಕೆ ತೆರಳಿದ್ದರು ಎನ್ನಲಾಗಿದೆ. ಸಿಸಿಬಿ ಇನ್ಸ್ ಪೆಕ್ಟರ್ ಇಬ್ಬರು ಮಕ್ಕಳು, ಪತ್ನಿಯನ್ನು ಅಗಲಿದ್ದಾರೆ.

ಇನ್ನೂ ಘಟನೆ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಜೋಶಿಮಠದ ಸಮೀಪವಿರುವ ಹಾಥಿ ಪರ್ವತ ಪ್ರದೇಶದ ಚೈನ್ ಗ್ರಾಮದ ಬಳಿ ಹೆಲಿಕಾಪ್ಟರ್ ಪತನಗೊಂಡಿರುವ ದುರದೃಷ್ಟಕರ.

ಜಿಲ್ಲಾಡಳಿತ, ವಿಪತ್ತು ನಿರ್ವಹಣಾ ಇಲಾಖೆ ಮತ್ತು ಎಸ್‌ಡಿಆರ್‌ಎಫ್ (SDRF) ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ. ನಾನು ಈ ಸಂಪೂರ್ಣ ಘಟನೆಯ ಮೇಲೆ ನಿರಂತರ ನಿಗಾ ಇರಿಸಿದ್ದೇನೆ ಎಂದು ತಿಳಿಸಿದ್ದಾರೆ.

ಟ್ರಾನ್ಸ್ ಭಾರತ್ ಏವಿಯೇಷನ್ ಪ್ರೈ. ಲಿಮಿಟೆಡ್ ನಿರ್ವಹಿಸುತ್ತಿದ್ದ ಹೆಲಿಕಾಪ್ಟರ್, VT-HCX ಮಧ್ಯಾಹ್ನ 1.14 ರ ಸುಮಾರಿಗೆ ಟೇಕ್ ಆಫ್ ಆಗಿ ಜೋಶಿಮಠ ಕಣಿವೆಯ ಮೇಲೆ ಹಾರುವಾಗ ಸಂಪರ್ಕ ಕಳೆದುಕೊಂಡಿತು ಎಂದು ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರ (UCADA) ತಿಳಿಸಿದೆ.

ಹಿಮಪಾತದ ನಡುವೆ ಹೆಲಿಕಾಪ್ಟರ್ ಮಧ್ಯಾಹ್ನ 2.15 ರ ಸುಮಾರಿಗೆ ಬದರಿನಾಥದಿಂದ ಟೇಕ್ ಆಫ್ ಆಗಿ ಜೋಶಿಮಠಕ್ಕೆ ಹತ್ತಿರವಿರುವ ಹಾಥಿ ಪರ್ವತ ಪ್ರದೇಶದ ಬಳಿ ನಾಪತ್ತೆಯಾಗಿತ್ತು ಎಂದು ತಿಳಿದುಬಂದಿದೆ. ಹಾಥಿ ಪರ್ವತ ಬಳಿ ಸಂಭವನೀಯ ಅಪಘಾತದ ಬಗ್ಗೆ ಸೇನೆಯು ಚಮೋಲಿ ಜಿಲ್ಲಾ ಆಡಳಿತಕ್ಕೆ ಮಾಹಿತಿ ನೀಡಿದ ನಂತರ ನಂತರ ರಕ್ಷಣಾ ತಂಡಗಳನ್ನು ಕಳುಹಿಸಲಾಗಿದೆ.

ಹೆಲಿಕಾಪ್ಟರ್ ಪತನ ಪ್ರದೇಶದಲ್ಲಿ ಭಾರತೀಯ ಸೇನೆ, ಚಮೋಲಿ ಜಿಲ್ಲಾಡಳಿತ ಮತ್ತು SDRF ತಂಡಗಳನ್ನು ನಿಯೋಜಿಸಲಾಗಿದೆ.

ಹವಾಮಾನ ಇಲಾಖೆ ‘Yellow alert’ ನಡುವೆಯೂ ಟೇಕಾಫ್: ಚಾರ್‌ಧಾಮ್ ಯಾತ್ರೆ ಮುಗಿಸಿ ನೆಮ್ಮದಿಯಿಂದ ಮನೆಗೆ ಮರಳಬೇಕಿದ್ದ ಆರು ಮಂದಿಯ ಪಾಲಿಗೆ ಉತ್ತರಾಖಂಡದ ಆಕಾಶಯಾನವೇ ಕೊನೆಯ ಪ್ರಯಾಣವಾಗಿದೆ.

ಜೋಶಿಮಠದ ಬಳಿ ಹೆಲಿಕಾಪ್ಟರ್ ಪತನಗೊಂಡು ಬೆಂಗಳೂರಿನ ಆರು ಮಂದಿ ದುರಂತ ಸಾವಿಗೀಡಾಗಿದ್ದಾರೆ. ಆದರೆ, ಈ ದುರಂತಕ್ಕೂ ಮುನ್ನವೇ ಹವಾಮಾನ ಇಲಾಖೆ ಉತ್ತರಾಖಂಡದಾದ್ಯಂತ ಯಲ್ಲೋ ಅಲರ್ಟ್ ಘೋಷಿಸಿತ್ತು ಎಂದು ತಿಳಿದುಬಂದಿದೆ.

ಪ್ರತಿಕೂಲ ಹವಾಮಾನದ ನಡುವೆಯೂ ಹೆಲಿಕಾಪ್ಟರ್ ಹಾರಾಟಕ್ಕೆ ಅನುಮತಿ ನೀಡಿದ್ದು ಹೇಗೆ? ಮುನ್ನೆಚ್ಚರಿಕೆ ಇದ್ದರೂ ಈ ದುರಂತ ಸಂಭವಿಸಿದ್ದೇಕೆ ಎಂಬ ಪ್ರಶ್ನೆಗಳು ಇದೀಗ ಚರ್ಚೆಗೆ ಗ್ರಾಸವಾಗಿವೆ.

ಚಮೋಲಿ ಜಿಲ್ಲೆಯ ಜ್ಯೋತಿರ್ಮಠ ಪ್ರದೇಶದ ಚಾಯೀ ಗ್ರಾಮದ ಸಮೀಪವಿರುವ ಹಾಥಿ ಪಹಾಡ್‌ನ ಹಿಂಭಾಗದಲ್ಲಿ ಹೆಲಿಕಾಪ್ಟರ್ ಪತನಗೊಳ್ಳುವುದನ್ನು ಮೊದಲು ಗಮನಿಸಿದ ಸೇನಾ ಸಿಬ್ಬಂದಿ ತಕ್ಷಣ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ ಎಂದು ಚಮೋಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುರ್ಜೀತ್ ಸಿಂಗ್ ಪನ್ವಾರ್ ತಿಳಿಸಿದ್ದಾರೆ.

ಸೇನೆ, ಪೊಲೀಸರು, ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಮತ್ತು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ITBP) ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಆರು ಮಂದಿಯ ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಹವಾಮಾನ ತೀವ್ರವಾಗಿ ಹದಗೆಟ್ಟಿದ್ದು, ಮಳೆಯಾಗುತ್ತಿತ್ತು. ಹೆಲಿಕಾಪ್ಟರ್ ಪತನಗೊಂಡ ಸ್ಥಳ ದಟ್ಟ ಅರಣ್ಯ ಪ್ರದೇಶದಲ್ಲಿದೆ. ಹೆಲಿಕಾಪ್ಟರ್ ಸಂಪೂರ್ಣ ಸುಟ್ಟುಹೋಗಿದ್ದು, ಯಾರೂ ಬದುಕುಳಿದಿಲ್ಲ. ಮೃತದೇಹಗಳು ಸುಟ್ಟ ಸ್ಥಿತಿಯಲ್ಲಿವೆ. ಶನಿವಾರ ಅವುಗಳನ್ನು ಮರಣೋತ್ತರ ಪರೀಕ್ಷೆ ಮತ್ತು ಇತರ ಕಾನೂನು ಪ್ರಕ್ರಿಯೆಗಳಿಗಾಗಿ ಡೆಹ್ರಾಡೂನ್‌ಗೆ ಕೊಂಡೊಯ್ಯಲಾಗುವುದು ಎಂದು ತಿಳಿಸಿದ್ದಾರೆ.

ಈ ದುರಂತದ ಅಧಿಕೃತ ಮಾಹಿತಿಯನ್ನು ಕರ್ನಾಟಕ ಸರ್ಕಾರಕ್ಕೆ ಶುಕ್ರವಾರ ಸಂಜೆ ನೀಡಲಾಗಿದೆ. ಮೃತರ ಕೆಲವು ಕುಟುಂಬ ಸದಸ್ಯರು ಈಗಾಗಲೇ ಡೆಹ್ರಾಡೂನ್‌ಗೆ ತೆರಳಿದ್ದಾರೆ. ಉಳಿದವರೂ ಶೀಘ್ರದಲ್ಲೇ ಪ್ರಯಾಣ ಬೆಳೆಸಲಿದ್ದಾರೆ. ಮೃತದೇಹಗಳನ್ನು ಗುರುತಿಸುವಲ್ಲಿ ತೊಂದರೆಯಾದರೆ ಕುಟುಂಬ ಸದಸ್ಯರಿಂದ ಡಿಎನ್‌ಎ ಮಾದರಿಗಳನ್ನು ಪಡೆಯಲು ಮನವಿ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ