ಸಿನಿಮಾ ಅಂದ್ರೆ ನಮ್ಮ ಜೀವನದ ಕೈಗನ್ನಡಿ. ಜೀವನದ ವಿವಿಧ ಘಟನಾವಳಿಗಳೇ ಸಿನಿಮಾಗೆ ಮೂಲ. ಈ ಜೀವನದಲ್ಲಿ ಯಾವಾಗ ಏನು ಘಟಿಸುತ್ತದೋ ಹೇಳಲಾಗದು. ಪ್ರತಿಯೊಬ್ಬರೂ ಸುರಕ್ಷಿತವಾಗಿ ತಮ್ಮ ಗುರಿ ಮುಟ್ಟಲು ಬಯಸುತ್ತಾರೆ. ಕೆಲವರಿಗೆ ಈ ಪಯಣದಲ್ಲಿ ಸುಖ ಸಿಕ್ಕರೆ, ಹಲವರಿಗೆ ದುಃಖ ತಪ್ಪಿದ್ದಲ್ಲ. ಹೀಗೆ ಜೀವನದ ವೈವಿಧ್ಯತೆ ತೋರಿಸುತ್ತಲೇ ಸಿನಿಮಾ ಜನಮಾನಸದಲ್ಲಿ ಯಶಸ್ವೀ ಎನಿಸುತ್ತದೆ. ಎಂದಿನಂತೆ ಈ ಸಲ ಓದುಗರಿಗೆ ಸಪ್ತ ಭಾಷೆಗಳ ಸಿನಿಮಾ ಕುರಿತು ಮಾಹಿತಿ ಇದೆ, ಓದಿ ನಿಮ್ಮ ಅಭಿಪ್ರಾಯ ತಿಳಿಸಿ!

06_Kannad-Movie_KD-The-Devil (1)

ಕನ್ನಡ :  KD : ದಿ ಡೆವಿಲ್

ಕನ್ನಡದ ` KD : ದಿ ಡೆವಿಲ್  ಯಶಸ್ವೀ ಎನಿಸಿದೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ರಿಲೀಸ್‌ ಆಗಬೇಕಿದ್ದ ಈ ಚಿತ್ರ, ಕೊನೆಯ ಕ್ಷಣದಲ್ಲಿ ಕನ್ನಡ ವರ್ಷನ್‌ ಮಾತ್ರ ರಿಲೀಸ್‌ ಆಗಿದೆ. 15 ದಿನಗಳ ನಂತರ ತೆಲುಗಿನಲ್ಲೂ ತೆರೆಕಂಡಿತು. ನಿರ್ದೇಶಕ ಜೋಗಿ ಪ್ರೇಮ್ ಹಾಗೂ ಧ್ರುವ ಸರ್ಜಾ ಕಾಂಬಿಯ ಈ ಚಿತ್ರ 100 ಕೋಟಿ ರೂ. ಬಜೆಟ್‌ ಮೀರಿದೆ. ` KD ‘ ಅಂದ್ರೆ ಇಲ್ಲಿ ವಿಲನ್‌ ಎಂದು ಭಾವಿಸಬಾರದು. ಆದರೆ ಚಿತ್ರದ ಪ್ರಕಾರ ಇದು ಕಾಳಿದಾಸ. 1980ರ ಕಾಲಘಟ್ಟದ ಚಿತ್ರವಿದು. ಆಗ ಬೆಂಗಳೂರಿನಲ್ಲಿ ಡಾಕ್‌ ದೇವ್ ‌ನದ್ದೇ ಹವಾ. ಈತನನ್ನು ಪೊಲೀಸರು ಮಟ್ಟಹಾಕದೇ ಹೋಗುತ್ತಾರೆ. ಶಾಲೆ ಮೇಷ್ಟ್ರು ಧರ್ಮ, ಅವನ ತಮ್ಮ ಕಾಳಿದಾಸ, ಸೀಮೆಎಣ್ಣೆ ಮಾರುತ್ತಿದ್ದವನು ಮುಂದೆ KD ಆದದ್ದು ಹೇಗೆ ಎಂಬುದೇ ಚಿತ್ರದ ಉಳಿದಾರ್ಧ. ಈ ಚಿತ್ರದಲ್ಲಿ ಧ್ರುವ ಜೊತೆ ರೀಷ್ಮಾ, ಶಿಲ್ಪಾ ಶೆಟ್ಟಿ, ಸಂಜಯ್‌ ದತ್ತ್, ರಮೇಶ್‌, ರವಿಚಂದ್ರನ್‌, ಪಿ. ರವಿಶಂಕರ್‌ ಸೇರಿದಂತೆ ದೊಡ್ಡ ತಾರಾಗಣವಿದೆ. ಈ ಚಿತ್ರಕ್ಕೆ ಸಂಗೀತ ನೀಡಿದರು ಅರ್ಜುನ್‌ ಜನ್ಯ. ಈ ಚಿತ್ರದ ಒಟ್ಟಾರೆ ಕಲೆಕ್ಷನ್‌ ಬಗ್ಗೆ KD ಪ್ರೊಡಕ್ಷನ್‌ ಯೂನಿಟ್‌ ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಒಟ್ಟಾರೆ ಕರ್ನಾಟಕದಾದ್ಯಂತ ಹಾಗೂ ತೆಲುಗು ವರ್ಷನ್‌ ಸೇರಿ ಭಾರಿ ಕಲೆಕ್ಷನ್ ಆಗಿದೆ.

02_Telugu-Movie_Thimmarajupalli-TV (1)

ತೆಲುಗು : ತಿಮ್ಮರಾಜುಪಲ್ಲಿ TV

ಇದೊಂದು ಅಪ್ಪಟ ಗ್ರಾಮೀಣ ಚಿತ್ರ. 80ರ ದಶಕದಲ್ಲಿ ಮೊದ ಮೊದಲು TV ನೋಡಿ ಪ್ರಭಾವಿತಗೊಂಡವರಿಗೆ ಈ ಚಿತ್ರ ಹೆಚ್ಚು ಆಪ್ತವಾಗುತ್ತದೆ. 1990ರ ಕಥಾಹಂದರ ಈ ಚಿತ್ರದಲ್ಲಿ ಮುಖ್ಯ ತಾರಾಗಣದ ಜೊತೆ ಸುಮಾರು 50ಕ್ಕೂ ಹೆಚ್ಚಿನ ಹಳ್ಳಿ ಪಾತ್ರಧಾರಿಗಳಿದ್ದಾರೆ. ರಾಯಲಸೀಮಾ ಜಿಲ್ಲೆಯ ತಿಮ್ಮರಾಜುಹಳ್ಳಿಯಲ್ಲಿ TV ವೀಕ್ಷಣೆಯೇ ಒಂದು ಸಂಭ್ರಮ! ಶಿವರಾತ್ರಿ ಹಬ್ಬದಂದು ಇಡೀ ಹಳ್ಳಿಯವರೆಲ್ಲ ಸೇರಿ ಅದರಲ್ಲಿ ಸಿನಿಮಾ ನೋಡುವುದು ದೊಡ್ಡ ಪ್ರೆಸ್ಟೀಜ್‌ ಆಗಿತ್ತು. ಹಳ್ಳಿಯವರು ಅದಕ್ಕಾಗಿ ಚಂದಾ ವಸೂಲಿ ಸಹ ಮಾಡುತ್ತಿದ್ದರು. ಆ ಊರಿನ ಪ್ರಮುಖ ರಾಜಪ್ಪ ಈ ಕ್ರಮ ಅನುಸರಿಸುವಾಗ, ಎಲ್ಲರೂ ಅವನ ಮನೆಗೆ TV ನೋಡಲು ಹೋಗುತ್ತಿದ್ದರು. ಹಾಗೆ ಆತನ ತಂಗಿ ಜೊತೆ ನಾಯಕನ ಪ್ರೇಮಾಂಕುರ. ಇದನ್ನು ವಿರೋಧಿಸುವ ರಾಜಪ್ಪನಿಗೆ, ನಾಯಕ TV ಇಲ್ಲವಾಗಿಸುತ್ತೇನೆ ಎಂದು ಸವಾಲೊಡ್ಡುತ್ತಾನೆ. ದುರಾದೃಷ್ಟಕ್ಕೆ ಮರುದಿನವೇ ಆ TV ಕಾಣೆಯಾಗುತ್ತದೆ! ಅದನ್ನು ಕದ್ದವರು ಯಾರು? ನಾಯಕ ನಿರ್ದೋಷಿ ಎಂದು ಸಾಬೀತಾಯಿತೇ? ಪ್ರೇಮಿಗಳು ಒಂದಾದರೆ ಎಂಬುದೇ ಚಿತ್ರದ ಉಳಿದಾರ್ಧ.

ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಹೀರೋ ಕಿರಣ್‌ ಅಬ್ಬಾರಂ (ನಿರ್ಮಾಪಕ ಸಹ), ಸಾಯಿ ತೇಜ್‌, ವೇದಾ ಜಲಂಧರ್‌, ಪ್ರದೀಪ್‌ ಶೆಟ್ಟಿ ಮುಂತಾದವರಿದ್ದಾರೆ. ಈ ಚಿತ್ರದ ನಿರ್ದೇಶಕರು ವಿ. ಮುನಿರಾಜು, ಸಂಗೀತ ಒದಗಿಸಿದವರು ವಂಶೀಕಾಂತ್‌.

03_Tamil-Movie_Kara (1)

ತಮಿಳು : ಕರ

ಈ ಚಿತ್ರ 1993ರ ಕಥಾಹಂದರ ಹೊಂದಿದೆ. ಕರಸಾಮಿ ಎಂಬ ಕಳ್ಳನ ಕಥೆ ಇದು. ಚೆನ್ನೈ ಮಹಾನಗರದಿಂದ ಬೇಸತ್ತು ತನ್ನ ಹಳ್ಳಿ ರಾಮನಾಥಪುರಕ್ಕೆ ಹಿಂತಿರುಗುವ ನಾಯಕ ಕರ, ಅಲ್ಲಿ ಹೋಟೆಲ್ ನಡೆಸುತ್ತಾನೆ. ಪತ್ನಿ ಸೆಲ್ವಿ ಸಹಕರಿಸುತ್ತಾಳೆ. ಈ ದಂಧೆಯಲ್ಲಿ ಲಾಸ್‌ ಆಗಿ ಅಪಾರ ಸಾಲಕ್ಕೆ ಸಿಲುಕುತ್ತಾನೆ. ತಂದೆ ಇದ್ದಬದ್ದ ಹೊಲಗದ್ದೆ ಮಾರಿ ಇವನಿಗೆ ಹಣ ಕೊಟ್ಟು, ವಾಪಸ್ಸು ಕೇಳಿದಾಗ ಬರಿಗೈ ದಾಸ ಕರ, ಸಾಲಗಾರನನ್ನಾಗಿಸಿದ ಬ್ಯಾಂಕನ್ನೇ ಕೊಳ್ಳೆ ಹೊಡೆಯಲು ಮುಂದಾಗುತ್ತಾನೆ. ಕೊನೆಯಲ್ಲಿ ಏನಾಯ್ತು ಎಂಬುದೇ ಚಿತ್ರದ ಉಳಿದಾರ್ಧ. ಮೊದಲು ಇಂಥ ನೆಗೆಟಿವ್ ಪಾತ್ರ ನಿರಾಕರಿಸಿದ್ದರೂ, ಧನುಷ್‌ ಕರನಾಗಿ ಗಮನ ಸೆಳೆಯುತ್ತಾರೆ. ಪೊಲೀಸ್‌ ಅಧಿಕಾರಿಯ ಖಡಕ್‌ ಪಾತ್ರ ಸ್ಮರಣೀಯ. ತಂದೆಯ ಪಾತ್ರ ನೆಪದಲ್ಲಿ ಉಳಿಯುತ್ತದೆ. ಬ್ಯಾಂಕಿನಿಂದ ತಪ್ಪಿಸಿಕೊಳ್ಳುವ ದೃಶ್ಯಗಳು ಬಹಳ ಥ್ರಿಲ್ಲಿಂಗ್‌ ಆಗಿವೆ. ಬಿಡುಗಡೆಯಾದ 10 ದಿನಗಳಲ್ಲೇ 52 ಕೋಟಿ ಬಾಚಿದ ಈ ಚಿತ್ರದ ನಿರ್ದೇಶಕರು ವಿಘ್ನೇಶ್‌ ರಾಜ. ಚಿತ್ರಕ್ಕೆ ಸಂಗೀತ ಒದಗಿಸಿದವರು ಜಿ.ವಿ. ಪ್ರಕಾಶ್‌ ಕುಮಾರ್‌. ಪ್ರಮುಖ ತಾರಾಗಣದಲ್ಲಿ ಧನುಷ್‌, ಮಮಿತಾ, ರವಿಕುಮಾರ್‌, ಸೂರಜ್‌ ವಿ., ಶ್ರೀಜಾ ರವಿ, ಜಯರಾಮ್ ಮತ್ತಿತರರು ಇದ್ದಾರೆ.

05_Malayalam-Movie_Patriot (1)

ಮಲೆಯಾಳಂ : ಪೇಟ್ರಿಯಾಟ್‌

ಈ ಪೊಲಿಟಿಕ್‌ ಸ್ಪೈ ಥ್ರಿಲ್ಲರ್‌ ಚಿತ್ರ ಹಲವು ದಶಕಗಳ ನಂತರ ಮಲೆಯಾಳದ ದಿಗ್ಗಜರಾದ ಮಮ್ಮುಟಿ ಹಾಗೂ ಮೋಹನ್‌ ಲಾಲ್ ‌ಒಟ್ಟಾಗಿ ನಟಿಸುವಂತೆ ಮಾಡಿದೆ. ರಾಜಕೀಯ, ರಾಷ್ಟ್ರೀಯ ಸುರಕ್ಷತೆ, ಕಣ್ಗಾವಲಿನಲ್ಲಿ ನಡೆಯುವ ಅಪರಾಧಗಳ ಸಂಗಮವೇ ಈ ಚಿತ್ರದ ಹೂರಣ. ಪ್ರಜಾಪ್ರಭುತ್ವಕ್ಕೆ ಭಂಗ ತರುವಂಥ ಕುತಂತ್ರ ನಡೆದಾಗ, ರಾಜಕೀಯ ಹಸ್ತಕ್ಷೇಪ, ಸಾಮಾನ್ಯ ನಾಗರಿಕರಿಗೆ ಎಂಥ ಮುಳು ತರಬಹುದೆಂಬ ಕುತೂಹಲಕರ ಅಂಶಗಳಿವೆ. ಮಮ್ಮುಟಿ ಇಲ್ಲಿ ಡೇನಿಯಲ್ ಜೇಮ್ಸ್ ಆದರೆ, ಮೋಹನ್‌ ಲಾಲ್ ಕರ್ನಲ್ ರಹೀಂ ನಾಯಕ್‌ ಆಗಿ ಪೈಪೋಟಿ ನೀಡುತ್ತಾರೆ. ಒಟ್ಟಾರೆ ಮಹತ್ವಾಕಾಂಕ್ಷೆಯ ಈ ಚಿತ್ರ ರಾಜಕೀಯ ಹಾಗೂ ಭಾವನಾತ್ಮಕತೆ ಎರಡನ್ನೂ ಬೆರೆಸಿ ಕಥೆ ಮುನ್ನಡೆಸುತ್ತದೆ.

ಈ ಚಿತ್ರದ ನಿರ್ದೇಶಕರು ಮಹೇಶ್‌ ನಾರಾಯಣನ್‌, ಸಂಗೀತ ಒದಗಿಸಿದವರು ಸುಶೀಲ್ ‌ಶ್ಯಾಮ್. ಪ್ರಮುಖ ತಾರಾಗಣದಲ್ಲಿ ಇಬ್ಬರು ದಿಗ್ಗಜರೊಂದಿಗೆ ರೇವತಿ, ಫಹಾದ್‌ ಫಾಸಿವ್‌, ಕೆ. ಬೋಬನ್‌, ನಯನತಾರಾ, ದರ್ಶನ್‌ ರಾಜೇಂದ್ರನ್‌, ರಾಜೀವ್ ‌ಮೆನನ್ ಮುಂತಾದವರಿದ್ದಾರೆ.

04_Gujarati-Movie_Dhabkaro (1)

ಗುಜರಾತಿ : ಧಬಕಾರೋ

ಇದೊಂದು ಅಪ್ಪಟ ಭಾವನಾತ್ಮಕ ಚಿತ್ರವಾಗಿದ್ದು, ಹೃದಯಸ್ಪರ್ಶಿ ಸನ್ನಿವೇಶಗಳಿಂದ ಕೂಡಿದೆ. ಸಶಕ್ತ ಅಭಿನಯ, ಗಟ್ಟಿ ಮೂಲಕಥೆ, ಪಕ್ವ ನಿರ್ದೇಶನ ಇದರ ಪ್ಲಸ್‌ ಪಾಯಿಂಟ್ಸ್. ಸಂಬಂಧಗಳಲ್ಲಿನ ಸಂಕೀರ್ಣತೆ, ಭಾವನಾತ್ಮಕ ಸಂಘರ್ಷ ಪಾತ್ರಗಳನ್ನು ಹಿಡಿದಿಡುತ್ತದೆ. ಸರಳ ನಿರೂಪಣೆಯೇ ಇಲ್ಲಿನ ಮುಖ್ಯ ಆಕರ್ಷಣೆ. ಅಪ್ಪಟ ಕೌಟುಂಬಿಕ ಕಥಾ ಹಂದರ, ಎಲ್ಲೂ ಮೆಲೋಡ್ರಾಮಾದಿಂದ ಬೋರ್‌ ಹೊಡೆಸದೆ, ಸುಗಮವಾಗಿ ಮುಂದುವರಿಯುತ್ತದೆ.

ಈ ಚಿತ್ರಕ್ಕೆ ಸಂಗೀತ ಒದಗಿಸಿದವರು ಮೇಹುಲ್ ಸುರ್ತಿ, ಕಥೆ ನಿರ್ದೇಶಕ ಅಭಿಷೇಕ್‌ ಶಾಹ್‌. ಪ್ರಮುಖ ತಾರಾಗಣದಲ್ಲಿ ದೇವೇನ್‌ಭೋಜಾನಿ, ಆರ್ಜ್‌ ತ್ರಿವೇದಿ, ಕುಮುದಾ ಮಿಶ್ರಾ, ತೇಜ್‌ ಪಂಚಸಾರಾ ಮುಂತಾದವರಿದ್ದಾರೆ.

01_Bengali-Movie_Fera (1)

ಬಂಗಾಳಿ : ಫೇರಾಕೇಲ

ಸ್ವಾರ್ಥ ಪರರಾಗಿ ತಮ್ಮನ್ನು ತಾವು ಪ್ರೀತಿಸಿಕೊಳ್ಳುತ್ತಾ, ಇತರರನ್ನು ನಿರ್ಲಕ್ಷಿಸಿದರೆ ಅಂಥ ವ್ಯಕ್ತಿ ನೆಮ್ಮದಿ ಕಂಡಾನೆಯೇ? ಇದರ ಬದಲು ಕುಟುಂಬದ ಎಲ್ಲರ ಜೊತೆಗೂಡಿ ಅವಿಭಕ್ತ ಪರಿವಾರವಾಗಿ, ಪರಸ್ಪರ ತ್ಯಾಗ, ವಾತ್ಸಲ್ಯ, ಒಗ್ಗಟ್ಟಿನಿಂದ ಇದ್ದಾಗ ಎಂಥ ಸಂತೃಪ್ತ ಜೀವನ ಅಲ್ಲವೇ? ಯಾಂತ್ರಿಕ ನಗರ ಜೀವನದ ಮಧ್ಯೆ ಭಾವನಾತ್ಮಕ ಸಂಬಂಧಗಳು ಕಣ್ಮರೆಯಾಗುತ್ತಿರುವ ಈ ಕಾಲದಲ್ಲಿ ಕೂಡು ಕುಟುಂಬದ ಹೃದಯಸ್ಪರ್ಶಿ ಸನ್ನಿವೇಶಗಳು ಕಂಬನಿ ಮಿಡಿಸುತ್ತವೆ.

ಈ ಚಿತ್ರಕ್ಕೆ ಸಂಗೀತ ಒದಗಿಸಿದವರು ರಣಜಾಯ್‌ ಭಟ್ಟಾಚಾರ್ಯ, ಕಥೆ ಚಿತ್ರಕಥೆ ನಿರ್ದೇಶನದಿಂದ ಪ್ರೀತಾ ಚಕ್ರವರ್ತಿ ಹೆಂಗಳೆಯರ ಮನ ಗೆದ್ದಿದ್ದಾರೆ. ಪ್ರಮುಖ ತಾರಾಗಣದಲ್ಲಿ ಸಂಜಯ್‌ ಮಿಶ್ರಾ, ಹೃತ್ವಿಕ್‌ ಚಕ್ರವರ್ತಿ, ಸೋಹ್ನಿ ಸರ್ಕಾರ್‌, ಪ್ರಿಯಾಂಕಾ ಸರ್ಕಾರ್‌, ಸುಬ್ರತಾ ದತ್ತಾ ಮುಂತಾದವರು.

07_Marathi-Movie_Punha-Ekada-Sade-Made-3 (1)

ಮರಾಠಿ : ಪುನ್ಹಾ ಏಕ್‌ ದಾ ಸಾಡೇ ಮಾಡೇ-3

ಸುಮಾರು 19 ವರ್ಷಗಳ ಹಿಂದೆ ಬಂದಿದ್ದ ಇದೇ ಚಿತ್ರದ ಪ್ರೀಕ್ವೆಲ್‌, ಪ್ರೇಕ್ಷಕರನ್ನು ನಕ್ಕು ನಲಿಸಿತ್ತು. ಪಾರ್ಟ್‌ ಆಗಿ ಈಗ ಬಂದಿರುವ ಈ ಚಿತ್ರ, ಕಾಮಿಡಿ ಟ್ರಾಕ್‌ ಜೊತೆ ಭಾವುಕತೆಯನ್ನೂ ಅಷ್ಟೇ ಅಚ್ಚುಕಟ್ಟಾಗಿ ಉಳಿಸಿಕೊಂಡಿದೆ. ಹಿಂದಿನ ಅದೇ ಸ್ಟಾರ್‌ ಗ್ಯಾಂಗ್ ಈಗಿನ ಯುವಜನತೆಯನ್ನು ಬಹಳ ನಗಿಸುತ್ತದೆ. ಹಿಂದಿನ ಸರಣಿಯ ಅದೇ ಜೋಡಿಯ ಕೆಮಿಸ್ಟಿ ಮುಂದುವರಿದಿದೆ. 4 ಮಂದಿ ಸಹೋದರರು ಗ್ಯಾರೇಜ್‌ ನಲ್ಲಿ ನಡೆಸು  ಗೋಲ್ ‌ಮಾಲ್ ‌ಇಲ್ಲಿನ ಹಾಸ್ಯಕ್ಕೆ ಹೂರಣ. `ನೋ ಲೇಡೀಸ್‌, ನೋ ಮ್ಯಾರೇಜ್‌’ ಇದರ ಮೂಲಮಂತ್ರ. ಆದರೆ ಕಾಮಿನಿ ಎಂಬ ಗ್ರಾಹಕಳು ಬಂದ ನಂತರ, ಇಲ್ಲಿ ನಾಲ್ವರ ನಡುವೆ ಏನೆಲ್ಲ ಕಕಮಕ ನಡೆಯಿತು ಎಂಬುದೇ ಚಿತ್ರದ ಉಳಿದಾರ್ಧ.

ಈ ಚಿತ್ರದ ನಿರ್ದೇಶಕರು ಅಂಕುಶ್‌ ಚೌಧರಿ, ಸಂಗೀತ ಒದಗಿಸಿದವರು ಗೌರವ್ ಛಾತಿ/ ಆದಿತ್ಯ ಬೇಡೇಕರ್‌. ಪ್ರಮುಖ ತಾರಾಗಣದಲ್ಲಿ ಅಶೋಕ್‌ ಶ್ರಾಫ್‌, ಮಕರಂದ್‌, ಭರತ್‌, ಸಿದ್ಧಾರ್ಥ, ರಿಂಕು, ಸಮೃದ್ಧಿ ಮುಂತಾದವರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ