ಕಥೆ – ಸುಮಾ ಶ್ರೀನಾಥ್‌

ಅವಿಭಕ್ತ ಕುಟುಂಬ ಎಂಬುದು ಜೇನುಗೂಡಿನಂತೆ. ಹಾಲು ತುಂಬಿದ ಬಟ್ಟಲಿಗೆ ಸಕ್ಕರೆಯಾಗಿ ಸೊಸೆ ಅಂಥ ಕುಟುಂಬಕ್ಕೆ  ಒಬ್ಬಳಾಗಿ ಬೆರೆಯಬೇಕು ಎಂಬುದನ್ನು ಸಾಧಿಕಾ ಸ್ವತಃ ತಾನಾಗಿ ತಿಳಿದುಕೊಂಡಿದ್ದು ಹೇಗೆ…..?

“ದುಡುಕಿ ನಿರ್ಧಾರ ತಗೋಬೇಡ ಸಾಧಿಕಾ. ಎಷ್ಟೋ ಜನ ಪ್ರೇಮಿಗಳಿಗೆ ಪ್ರೀತಿಸಿದ್ರೂ ಮದುವೆ ಆಗೋ ಭಾಗ್ಯ ಸಿಗಲ್ಲ. ನಮಗೆ ಆ ಅದೃಷ್ಟ ಒದಗಿ ಬಂದಿದೆ. ನಮ್ಮಿಬ್ಬರ ಜಾತಿಯೂ ಒಂದೇ. ನಿಮ್ಮ ಮನೆಯಲ್ಲಿ ಒಪ್ಪಿದ್ದಾರೆ. ನಮ್ಮ ಮನೆಯವರೂ ಒಪ್ಕೋತಾರೆ, ನಾನು ಒಪ್ಪಿಸ್ತೀನಿ. ನಮ್ಮದು ಜಾಯಿಂಟ್‌ ಫ್ಯಾಮಿಲಿ ಎಂಬ ಒಂದೇ ಕಾರಣ ಇಟ್ಟುಕೊಂಡು ಮದುವೆ ಬೇಡ ಅನ್ಬೇಡ,” ಸುಮಿತ್‌ಬಹಳ ಬೇಸರದಲ್ಲಿ ಹೇಳಿದ.

ಕಳೆದ ಒಂದು ವಾರದಿಂದ ಇದೇ ಗೋಳು. ಸಾಧಿಕಾಳನ್ನು ಮದುವೆಗೆ ಒಪ್ಪಿಸಲು ಸುಮಿತ್‌ ಸತತ ಪ್ರಯತ್ನ ಮಾಡುತ್ತಲೇ ಇದ್ದ. ಇಬ್ಬರೂ ಬೆಂಗಳೂರಿನ ಹೆಸರಾಂತ ಐ.ಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಐದು ವರ್ಷದಿಂದ ಒಬ್ಬರನ್ನೊಬ್ಬರು ಪ್ರೀತಿಸಿ ಇದೀಗ ಮದುವೆ ಆಗುವ ನಿರ್ಧಾರ ಮಾಡಿದ್ದರು. ಮದುವೆಯಾಗಲು ಸಾಧಿಕಾ ಹಾಕಿದ್ದ ಒಂದು ಕಂಡೀಶನ್‌ ಸುಮಿತ್‌ ನ ನೆಮ್ಮದಿಯನ್ನು ಕೆಡಿಸಿತ್ತು.

ಸುಮಿತ್‌ ನದ್ದು ತುಂಬು ಕುಟುಂಬ. ಬೆಂಗಳೂರಿನ ಒಂದು ದೊಡ್ಡ ಮನೆಯಲ್ಲಿ ಅನ ಅಜ್ಜ, ಅಜ್ಜಿ, ಅಪ್ಪ, ಅಮ್ಮ, ತಂಗಿ, ಮೂರು ಜನ ಚಿಕ್ಕಪ್ಪ ಚಿಕ್ಕಮ್ಮಂದಿರು, ಅವರ ಮಕ್ಕಳು ಎಲ್ಲರೂ ಒಟ್ಟಿಗೆ ಇದ್ದರು. ಯಾವುದೇ ಕಾರಣಕ್ಕೂ ತಾವ್ಯಾರೂ ಬೇರೆ ಮನೆ ಮಾಡಿಕೊಂಡು ಹೋಗದೆ ಎಲ್ಲರೂ ಒಂದೇ ಸೂರಿನಡಿ ಒಗ್ಗಟ್ಟಾಗಿ ಬಾಳಬೇಕೆಂಬುದು ಅವರೆಲ್ಲರ ನಿಲುವು, ನಿರ್ಧಾರವಾಗಿತ್ತು.

ಸುಮಿತ್‌ ಗೆ ಕೂಡ ಅವರೊಂದಿಗೆ ಒಟ್ಟಿಗೆ ಇರುವುದೇ ಇಷ್ಟವಿತ್ತು. ಆದರೆ ಸಾಧಿಕಾಳ ತಾಯಿ ತಂದೆಗೆ ಒಬ್ಬಳೇ ಮಗಳು. ಯಾವತ್ತೋ ಒಮ್ಮೆ ಸಂಬಂಧಿಕರ ಕಾರ್ಯಕ್ರಮಗಳಲ್ಲಿ ಮಾತ್ರ ಕುಟುಂಬದವರು, ಸಂಬಂಧಿಕರು ಭೇಟಿಯಾಗುತ್ತಿದ್ದರು. ಅವರು ಯಾರೊಂದಿಗೂ ಅಷ್ಟೊಂದು ಉತ್ತಮ ಒಡನಾಟವಿರಲಿಲ್ಲ.

ಸಾಧಿಕಾಳ ಅಪ್ಪ ಅಮ್ಮ ಇಬ್ಬರೂ ಬ್ಯಾಂಕ್‌ ಉದ್ಯೋಗಿಗಳು. ಹಾಗೇ ಅವಳಿಗೆ ಒಬ್ಬಳೇ ಇದ್ದು ಅಭ್ಯಾಸ. ಜನಜಂಗುಳಿ ಎಂದರೆ ಅವಳಿಗೆ ತಲೆನೋವು. ಮನೆ ತುಂಬಾ ಜನರಿರುವ ಸುಮಿತ್‌ ನ ಮನೆಯಲ್ಲಿ ಅವನನ್ನು ಮದುವೆಯಾಗಿ ಶಾಶ್ವತವಾಗಿ ಇದ್ದು ಬಿಡುವುದನ್ನು ಅವಳಿಗೆ ಊಹಿಸುವುದೂ ಕಷ್ಟವಾಗಿತ್ತು.

“ಸುಮಿತ್‌ ಪ್ಲೀಸ್‌ ಅರ್ಥ ಮಾಡ್ಕೋ…. ನಂಗೆ ಪ್ರೈವೆಸಿ ಬೇಕು. ಮದುವೆ ಆಗಿ ತನ್ನ ಗಂಡನ ಜೊತೆ ಪ್ರೈವೆಸಿ ಬಯಸೋದು ಪ್ರತಿ ಹೆಣ್ಣಿನ ಕನಸು. ಅದಕ್ಕೆ ನಾನು ಹೊರತಾಗಿಲ್ಲ. ನನಗೆ ನಾನು, ನೀನು ಇಬ್ಬರೇ ಒಂದು ಮನೆಯಲ್ಲಿ ಯಾರ ಕಿರಿಕಿರಿನೂ ಇಲ್ಲದೆ, ಲವ್ ಬರ್ಡ್ಸ್ ತರಹ ಹಾಯಾಗಿರಬೇಕೆಂಬ ಆಸೆ. ನೀನ್ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲ….?

“ನಾನೇನು ನಿನ್ನವರನ್ನೆಲ್ಲಾ ಬಿಟ್ಟು ಬಂದುಬಿಡು ಅಂದಿಲ್ಲ ತಾನೇ? ವೀಕ್‌ ಎಂಡ್ಸ್ ನಲ್ಲಿ ನಿಮ್ಮ ಮನೆಗೆ ಹೋಗಿ ಬರೋಣ. ಪ್ಲೀಸ್ ನಾನು ಹೇಳುವುದನ್ನು ಕೇಳು. ನನ್ನ ಡ್ಯಾಡಿಗೆ ಹೇಳಿ ಒಂದು ಒಳ್ಳೆಯ ಫ್ಲಾಟ್‌ ತೆಗೆಸಿ ಕೊಡೋಕೆ ಹೇಳ್ತೀನಿ. ಅಲ್ಲೇ ನಾವು ಖುಷಿಯಾಗಿರಬಹುದು.”

ಸಾಧಿಕಾ ಮೊಂಡು ಮನಸ್ಸಿನ ಹುಡುಗಿ. ಅವಳು ಹಠ ಸಾಧಿಸುತ್ತಲೇ ಇದ್ದಳು.

“ನಿನಗೆ ಹೇಳಿ ಹೇಳಿ ಸಾಕಾಯ್ತು. ನಿನಗೊಬ್ಬಳಿಗಾಗಿ ನನ್ನ ಇಡೀ ಫ್ಯಾಮಿಲಿ ಬಿಟ್ಟುಬರಬೇಕಾ ಚಿನ್ನಾ….? ಇದು ಸ್ವಾರ್ಥ ಅನ್ನಿಸಲ್ವಾ ನಿಂಗೆ….? ನಾನು ಬೇರೆ ಹೋದರೆ ನನ್ನ ಮನೆಯವರಿಗೆ ಎಷ್ಟು ನೋವಾಗುತ್ತೆ ಅಂತ ನಿಂಗೆ ಊಹಿಸಲಿಕ್ಕೂ ಸಾಧ್ಯವಿಲ್ಲ ಪುಟ್ಟಾ…. ಪ್ಲೀಸ್‌ ನನ್ನ ಮಾತು ಕೇಳು. ನೀನು ಬಂದು ನೋಡು. ನನ್ನ ಮನೆಯವರು ನಿಂಗೆ ತುಂಬಾ ಇಷ್ಟ ಆಗ್ತಾರೆ. ಅವರೆಲ್ಲಾ ತುಂಬಾ ಪ್ರೀತಿ ಮತ್ತು ಕಾಳಜಿ ತೋರಿಸ್ತಾರೆ ಕಣೇ…..”

ಅವನ ಮಾತನ್ನು ಅಲ್ಲಿಗೇ ನಿಲ್ಲಿಸಿದ ಸಾಧಿಕಾ, “ಸಾಕು ಸುಮಿತ್‌…… ನಿಂದು ಅದೇ ರಾಗ ಅದೇ ಹಾಡು, ಒಂದು ವಾರದಿಂದ ಕೇಳಿಸಿಕೊಂಡು ಸಾಕಾಗೋಯ್ತು. ಅದನ್ನೇ ಮತ್ತೆ ಮತ್ತೆ ಹೇಳ್ಬೇಡ ಸುಮಿತ್‌. ನನಗೋಸ್ಕರ ಇಷ್ಟೂ ಮಾಡೊಕ್ಕಾಗಲ್ವಾ ನಿಂಗೆ. ನಿಜವಾಗ್ಲೂ ನೀನು ನನ್ನನ್ನು ಲವ್ ಮಾಡ್ತಾ ಇದ್ರೆ ನನ್ನ ಮಾತು ಒಪ್ಪುತ್ತಿದ್ದೆ . ನಿಂಗೆ ನಿಂದೇ ಹಠ,” ಸಾಧಿಕಾಳ ಸಹನೆಯ ಕಟ್ಟೆ ಒಡೆದಿತ್ತು.

“ಸರಿ ಹಾಗಿದ್ರೆ ನೀನು ನನ್ನ ಮಾತಿಗೆ ಬೆಲೆ ಕೊಡಲ್ಲ ಅಂತಾದ್ರೆ ನಾನ್ಯಾಕೆ ನಿನ್ನ ಮಾತು ಕೇಳ್ಬೇಕು….? ಓಕೆ ಜಸ್ಟ್ ಲೀವ್ ‌ಇಟ್‌. ನಿನ್ನ ಮನೆಯಲ್ಲಿರಲು ಒಪ್ಪಿಕೊಳ್ಳೋ ಹುಡುಗಿ ನೋಡಿ ಮದುವೆ ಆಗು. ನೆವರ್‌ ಟಾಕ್‌ ಟು ಮಿ ಅಗೈನ್‌. ನಾನು ಕೂಡ ನನ್ನ ದಾರಿ ನೋಡ್ಕೋತೀನಿ,” ಎಂದು ಕಡ್ಡಿ ಮುರಿದಂತೆ ಅವಳು ಹೇಳಿಬಿಟ್ಟಳು.

ಸುಮಿತ್‌ ಗೆ ಹೃದಯ ಬಿರಿದ ನೋವು. ಸಾಧಿಕಾಳನ್ನು ಬಹಳವಾಗಿ ಪ್ರೀತಿಸಿದ್ದ. ಅವಳನ್ನು ಮರೆತು ಇನ್ಯಾರದ್ದೋ ಕುತ್ತಿಗೆಗೆ ತಾಳಿ ಕಟ್ಟೋದು ಸಾಧ್ಯವಾಗದ ಮಾತು. ಆದರೆ ಮನೆಯನ್ನು ಬಿಟ್ಟು ತನ್ನವರಿಂದ ದೂರ ಆಗುವುದು ಕೂಡ ಅವನಿಂದ ಅಸಾಧ್ಯ. ಕೊನೆಗೆ ಒಂದು ನಿರ್ಧಾರಕ್ಕೆ ಬಂದ.

“ಓ.ಕೆ. ನೋಡು. ನನ್ನ ಹತ್ರ ಒಂದು ಪ್ಲಾನ್‌ ಇದೆ. ಹಾಗೆ ಮಾಡೋಣ. ಒಂದೈದು ದಿನ ನನ್ನ ಮನೆಯಲ್ಲಿ ಬಂದು ಸ್ವಾತಿ ಜೊತೆ ಇರು. ಮನೆಯಲ್ಲಿ ನನ್ನ ಫ್ರೆಂಡ್ಸ್ ಅಂತ ಹೇಳ್ತೀನಿ. ಆಗ ನಿಂಗೆ ನನ್ನ ಮನೆ ಹೇಗೆ, ನನ್ನ ಫ್ಯಾಮಿಲಿಯವರು ಹೇಗೆ ಅಂತ ಎಲ್ಲ ತಿಳಿಯುತ್ತೆ. ಆಮೇಲೆ ಮದುವೆ ಬಗ್ಗೆ ಅಂತಿಮ ನಿರ್ಧಾರ ತಗೋ. ಆದರೆ ಒಂದು ಮಾತು ನೆನಪಿಟ್ಟುಕೊ ಚಿನ್ನಾ…..

“ನಿನ್ನ ನಿರ್ಧಾರದಲ್ಲಿ ಪುನಃ ನೀನು ಬೇರೆ ಮನೆ ಮಾಡಿಕೊಂಡು ಇರೋದಕ್ಕೆ ಹೇಳಿದ್ರೆ ಅದಕ್ಕೆ ನಾನು ಸುತರಾಂ ಒಪ್ಪಲ್ಲ. ಐದು ವರ್ಷದ ಹಿಂದೆ ಪರಿಚಯ ಆಗಿರೋ ನಿನಗೋಸ್ಕರ 25 ವರ್ಷದಿಂದ ನನ್ನನ್ನು ಬೆಳೆಸಿ ನನ್ನ ಕಷ್ಟ ಸುಖಗಳನ್ನು ಹಂಚಿಕೊಂಡ ಈ ಕುಟುಂಬದವರನ್ನು ಬಿಟ್ಟು ಬರಲಾರೆ. ನೀನು ನನ್ನ ಜೀವ ಕಣೆ. ನೀನು ನನ್ನನ್ನು ಬಿಟ್ಟುಹೋದರೆ ಅದು ಹೇಗೆ ಬದುಕಿರ್ತೀನೋ ಗೊತ್ತಿಲ್ಲ. ಹಾಗೆಯೇ ನನ್ನ ಕುಟುಂಬ ನನ್ನ ಉಸಿರು. ಉಸಿರಿಲ್ಲದೆ ಬದುಕಲು ಸಾಧ್ಯವಾ ಹೇಳು?” ಎಂದು ಹೇಳಿದನು ಮತ್ತೆ ಮಾತು ಮುಂದುವರಿಸಲು ಸಾಧ್ಯವಾಗದೇ ಸುಮ್ಮನಾದ.

ಸಾಧಿಕಾಳಿಗೂ ಅವನ ಉಪಾಯ ಸೂಕ್ತ ಅನ್ನಿಸಿತು. ಮೈಸೂರಿನಲ್ಲಿ ಗೆಳತಿಯ ಮದುವೆಗೆ ಹೋಗಲಿದೆ ಎಂದು ಮನೆಯಲ್ಲಿ ಸುಳ್ಳು ಹೇಳಿ ಅವಳ ಫ್ರೆಂಡ್‌ ಸ್ವಾತಿ ಜೊತೆ ಸುಮಿತ್‌ ನ ಮನೆಗೆ ಹೋದಳು.

ರತ್ನಪುಂಜ ನಿಲಯ ಎಂದು ಬರೆದಿದ್ದ ದೊಡ್ಡದಾದ ಒಂದು ಮನೆಯ ಮುಂದೆ ಕಾರ್‌ ಬಂದು ನಿಂತಿತು. ಆಗ ಇನ್ನೂ ಬೆಳಗ್ಗೆ 7 ಗಂಟೆ. ಸ್ವಾತಿ, ಸಾಧಿಕಾ ಇಬ್ಬರೂ ಗೇಟ್‌ ತೆರೆದು ಒಳಗೆ ನಡೆದರು. ಮನೆಯ ಮುಂದೆ ದೊಡ್ಡದಾದ ಚುಕ್ಕಿ ರಂಗೋಲಿ. ಅಕ್ಕಪಕ್ಕ ಹೂವಿನ ಗಿಡಗಳು. ತುಳಸಿ ಕಟ್ಟೆಯ ಪಕ್ಕದಲ್ಲಿ ಒಣ ಹಾಕಿದ್ದ ಹಪ್ಪಳ, ಸಂಡಿಗೆ, ಮೆಣಸು ಎಲ್ಲ ಹಳ್ಳಿಮನೆಯ ಸೊಗಡನ್ನು ನೆನಪಿಸಿದವು.

ಕೆಲಸದಾಳು ಸೋಮಪ್ಪ ಅವರಿಬ್ಬರ ಕೈಯಿಂದ ಬ್ಯಾಗ್‌ ತೆಗೆದುಕೊಂಡು ಅವರನ್ನು ಒಳಗೆ ಕರೆದುಕೊಂಡು ಹೋದ. ಸುಮಿತ್ ಅವರಿಬ್ಬರನ್ನು ಎಲ್ಲರಿಗೂ ಪರಿಚಯಿಸಿ ಮೇಲಿನ ಮಹಡಿಯ ಕೋಣೆಗೆ ಕರೆದುಕೊಂಡು ಹೋದ. ಹೆಚ್ಚಿನ ಆಡಂಬರಗಳೇನೂ ಇಲ್ಲದ ಚೊಕ್ಕದಾದ ಒಪ್ಪಾದ ಮನೆಯಾಗಿತ್ತು ರತ್ನಪುಂಜ. ಸ್ನಾನ ಮುಗಿಸಿ ಸಾಧಿಕಾ ಮತ್ತು ಸ್ವಾತಿ ಇಬ್ಬರೂ ಕೆಳಗೆ ಬಂದರು. ಆಗಲೇ ಕೆಳಗೆ ತಿಂಡಿ ತಿನ್ನಲು ಮನೆಯವರೆಲ್ಲರೂ ಕುಳಿತಿದ್ದರು. ಸುಮಿತ್‌ ನ ತಾಯಿ ಸಿಂಧೂರಾ ಎಲ್ಲರಿಗೂ ಇಡ್ಲಿ ಬಡಿಸುತ್ತಿದ್ದರು. ಅವನ ಚಿಕ್ಕಮ್ಮ ಶ್ವೇತಾ ಚಟ್ನಿ ಬಡಿಸುತ್ತಿದ್ದರೆ, ಇನ್ನೊಬ್ಬರು ಚಿಕ್ಕಮ್ಮ ಶ್ರೀದೇವಿ ಸಾಂಬಾರ್‌ ಬಡಿಸುತ್ತಿದ್ದರು. ಮತ್ತೊಬ್ಬ ಚಿಕ್ಕಮ್ಮ ವೈಶಾಲಿ ಎಲ್ಲರ ಲೋಟಕ್ಕೂ ಟೀ ಹಾಕುತ್ತಿದ್ದರು. ಸುಮಿತ್‌ ನ ತಂಗಿ ಶಮಿತಾ ಬೇಕಾದರಿಗೆ ಉಪ್ಪಿನಕಾಯಿ ಮತ್ತು ಮೊಸರು ಬಡಿಸುತ್ತಿದ್ದಳು.

ಸ್ವಾತಿ, ಸಾಧಿಕಾ ಇಬ್ಬರೂ ಅವರಿಗಾಗಿ ಹಾಕಿದ್ದ ತಟ್ಟೆಯ ಮುಂದೆ ಕುಳಿತು ತಿಂಡಿ ತಿನ್ನಲಾರಂಭಿಸಿದರು. ಡೈನಿಂಗ್‌ ಟೇಬಲ್ ಮೇಲೆಯೇ ತಿಂದು ಅಭ್ಯಾಸವಾಗಿ ಹೋಗಿದ್ದ ಸಾಧಿಕಾಗೆ ನೆಲದಲ್ಲಿ ಕುಳಿತು ತಿನ್ನುವುದು ಹಿಂಸೆ ಎನಿಸಿದರೂ ಅತ್ಯಂತ ರುಚಿಕರವಾದ ತಿಂಡಿ ತಿನ್ನುವಾಗ ಮನಸ್ಸಿಗೆ ಖುಷಿಯಾಗಿತ್ತು. ಅದೂ ಮನೆಯವರೆಲ್ಲರೂ ಒಟ್ಟಿಗೆ ಕುಳಿತು ತಿನ್ನುವಾಗ ಏನೋ ಒಂಥರಾ ಮದುವೆ ಮನೆಯ ಸಂಭ್ರಮ ಇದ್ದ ಹಾಗೆ ಅನಿಸಿತು.

ತಿಂಡಿ ತಿಂದು ಮುಗಿಸಿ ಸುಮಿತ್‌ ಆಫೀಸ್‌ಗೆ ಹೊರಟುಹೋದ. ವೀಕ್‌ ಎಂಡ್‌ ರಜೆ ಇದ್ದರೂ ಕೆಲಸ ಪೆಂಡಿಂಗ್‌ ಇದೆ ಎಂದು ಹೋಗಲು ನಿರ್ಧರಿಸಿದ್ದ. ಅವನ ತಂಗಿ ಶಮಿತಾ ಡಿಗ್ರಿ ಕಲಿಯುತ್ತಿದ್ದಳು. ಸ್ವಾತಿ ಮತ್ತು ಸಾಧಿಕಾ ಬಂದಿದ್ದಾರೆಂದು ಅವಳು ಆ ದಿನ ಕಾಲೇಜಿಗೆ ರಜೆ ಹಾಕಿದ್ದಳು. ಅವರಿಬ್ಬರಿಗೂ ಮನೆಯನ್ನು ತೋರಿಸಿ, ಮನೆಯ ಹಿಂದೆ ಮುಂದೆ ಇದ್ದ ಪುಟ್ಟ ಕೈ ತೋಟವನ್ನು ತೋರಿಸಿ ಕರೆದುಕೊಂಡು ಬಂದಳು. ಮೊದಲ ಬಾರಿ ಭೇಟಿ ಆಗಿದ್ದರೂ ಚೆನ್ನಾಗಿ ಬೆರೆತು ಮಾತನಾಡುವ ಶಮಿತಾ ಸಾಧಿಕಾಳಿಗೆ ಬಹಳ ಹಿಡಿಸಿದಳು.

ಮನೆಯ ಮಕ್ಕಳನ್ನು ಸಮಿತ್‌ ನ ಚಿಕ್ಕಪ್ಪ ಕಾರಿನಲ್ಲಿ ಶಾಲೆಗೆ ಕರೆದುಕೊಂಡು ಹೋದರು. ಸ್ವಾತಿ, ಸಾಧಿಕಾ ಇಬ್ಬರೂ ಹಾಲ್ ‌ನಲ್ಲಿ ಕುಳಿತುಕೊಂಡಿರುವಾಗ ಮನೆಯ ಹೆಂಗಸರು ಅಡುಗೆಮನೆಯಲ್ಲಿ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡ ಸಾಧಿಕಾ ಅಡುಗೆಮನೆಗೆ ಹೋದಳು. ಅವರೆಲ್ಲರೂ ಅಡುಗೆ ಮಾಡುತ್ತಿರುದನ್ನು ಕಂಡ ಸಾಧಿಕಾ, “ನಾನೂ ಸ್ವಲ್ಪ ಹೆಲ್ಪ್ ಮಾಡ್ಲಾ…..?” ಎಂದು ಕೇಳಿದಳು.

“ಬೇಡಮ್ಮ…. ನಾವು ನಾಲ್ಕು ಜನ ಇದ್ದೀವಿ. ಅರ್ಧ ಗಂಟೆಯಲ್ಲಿ ಅಡುಗೆ ಕೆಲಸ ಮುಗಿಯುತ್ತೆ. ನಿನಗೆ ಬೋರ್‌ ಆಗೋ ಹಾಗಿದ್ರೆ ಈ ಏಲಕ್ಕಿ ಸಿಪ್ಪೆ ತೆಗೆದುಕೊಡು,” ಎಂದರು ಸುಮಿತ್ ನ ಅಮ್ಮ ಸಿಂಧೂರಾ.

keshvi-story2

ಸಾಧಿಕಾ ಏಲಕ್ಕಿ ಸಿಪ್ಪೆ ತೆಗೆಯುತ್ತಾ ಅವರ ಮಾತನ್ನೆಲ್ಲಾ ಕೇಳಿಸಿಕೊಳ್ಳುತ್ತಿದ್ದಳು. ಸುಮಿತ್‌ ನ ಚಿಕ್ಕಮ್ಮ ವೈಶಾಲಿ ಕಾಲೇಜೊಂದರಲ್ಲಿ ಲೆಕ್ಚರರ್‌. ಅಂದು ರಜೆ ಹಾಕಿದ್ದರು. ಅವರು ಮಧ್ಯಾಹ್ನದ ಊಟ, ಸಂಜೆಯ ತಿಂಡಿ, ರಾತ್ರಿಯ ಊಟದ ಮೆನು ಬಗ್ಗೆ ಚರ್ಚಿಸುವುದು ಮಾತ್ರವಲ್ಲದೆ, ಈ ಸಲ ದೀಪಾವಳಿ ಹಬ್ಬವನ್ನು ಹೇಗೆ ಆಚರಿಸೋದು ಎಂಬುದರ ಬಗ್ಗೆಯೂ ಮಾತುಕತೆ ನಡೆದಿತ್ತು.

ಅವರ ಮಾತನ್ನು ಕೇಳಿಸಿಕೊಳ್ಳುತ್ತಿದ್ದ ಸಾಧಿಕಾಗೆ ಸಮಯ ಹೋದದ್ದೇ ಗೊತ್ತಾಗ್ಲಿಲ್ಲ. ಅಷ್ಟರಲ್ಲಿ ಸುಮಿತ್‌ ನ ಅಜ್ಜಿ ವೇದಮ್ಮ ಪುಟ್ಟ ಮಗು ಆಶ್ಲೇಶನನ್ನು ತಂದು ವೈಶಾಲಿಗೆ ಕೊಡುತ್ತಾ, “ವೈಶೂ ಏಳು…. ತಗೋ ಮಗುನ್ನ ನೋಡ್ಕೋ…. ನಾನು ತರಕಾರಿ ಹೆಚ್ತೀನಿ,” ಎಂದರು.

“ಮಗುನಾ ನಂಗೆ ಕೊಡಿ ಅಜ್ಜಿ. ನಾನು ನೋಡ್ಕೋತೀನಿ,” ಎಂದು ಸಾಧಿಕಾ ಮಗುವನ್ನೆತ್ತಿಕೊಂಡು ಹೊರ ನಡೆದಳು. ಸ್ವಾತಿ ಜೊತೆ ಕೂಡಿ ಮಗುವನ್ನು ಆಟವಾಡಿಸುತ್ತಿರುವಾಗ ಆಶ್ಲೇಶನ ಅಕ್ಕ ಆಶ್ರಿತಾ ಸಾಧಿಕಾಳ ಬಳಿ ಬಂದು ತನ್ನ ಡ್ರಾಯಿಂಗ್‌ ಬುಕ್ ಕೊಟ್ಟು ಚಿತ್ರ ಬಿಡಿಸಲು ಕಲಿಸಿಕೊಡುವಂತೆ ಕೇಳಿದಳು.

ಸಾಧಿಕಾ ಅವಳಿಗೆ ಚಿತ್ರ ಬಿಡಿಸಿ, ಬಣ್ಣ ತುಂಬುವುದನ್ನು ಕಲಿಸಿಕೊಟ್ಟಳು. ಆಶ್ರಿತಾ ತಾನು ಬಿಡಿಸಿ, ಬಣ್ಣ ತುಂಬಿದ ಚಿತ್ರವನ್ನು ಎಲ್ಲರಿಗೂ ತೋರಿಸಿ ಸಂಭ್ರಮಿಸಿದಳು.

ಮಧ್ಯಾಹ್ನ ಊಟದ ತಯಾರಿ ಮುಗಿದಿತ್ತು. ಅನ್ನ, ಟೊಮೇಟೊ ಸಾರು, ಸಾಂಬಾರ್‌, ಪಲ್ಯ, ಹಪ್ಪಳ, ಹೆಸರುಬೇಳೆ ಪಾಯಸ. ಗಡದ್ದಾದ ಊಟ ಉಂಡು ಸಾಧಿಕಾಗೆ ತುಸು ಹೊತ್ತು ಮಲಗೋಣ ಅಂತ ಅನಿಸಿತು. ಸಂಜೆ ಸ್ವಾತಿ ಮತ್ತು ಸಾಧಿಕಾ ಇಬ್ಬರೂ ತಮ್ಮ ರೂಮಿನಿಂದ ಕೆಳಗಿಳಿದು ಬಂದಾಗ ಬಿಸಿ ಬಿಸಿ ನೀರುಳ್ಳಿ ಪಕೋಡ ಮತ್ತು ಟೀ ರೆಡಿ ಇತ್ತು.

ಗರಿಗರಿ ಪಕೋಡ ತಿನ್ನುತ್ತಿರುವಾಗ ಸಾಧಿಕಾ, `ಯಾವತ್ತೂ ಹೋಟೆಲ್ ನಲ್ಲೇ ಸಂಜೆ ತಿಂದು ಮನೆಗೆ ಹೋಗುತ್ತಿದ್ದಳು. ಯಾಕಂದ್ರೆ ಮನೆಯಲ್ಲಿ ಅಮ್ಮ ಅಪ್ಪ ಬರೋದು ಲೇಟ್‌. ಬೆಂಗಳೂರಿನ ಟ್ರಾಫಿಕ್‌ ನಿಂದಾಗಿ ಅವರು ಮನೆಗೆ ಬರುತ್ತಿದ್ದುದೇ ತುಂಬಾ ಲೇಟಾಗುತ್ತಿತ್ತು. ಅಮ್ಮನಿಗೆ ಮನೆಯಲ್ಲಿ ಹೆಲ್ಪ್ ಮಾಡೋರು ಯಾರೂ ಇಲ್ಲ. ಬಗೆ ಬಗೆಯ ತಿಂಡಿ ಮಾಡೋ ಆಸಕ್ತಿ ಇದ್ದರೂ ಸಹನೆ ಇಲ್ಲ. ಮಾಡಲು ಅವರಿಗೆ ಟೈಮ್ ಸಹ ಇರಲಿಲ್ಲ. ಆದರೆ ಇಲ್ಲಿ ಹೆಂಗಸರು ಕೂಡಿ ಒಗ್ಗಟ್ಟಿನಲ್ಲಿ ಅಡುಗೆ ಮಾಡುತ್ತಿರುವುದನ್ನು ನೋಡಿದಾಗ, ಅಡುಗೆ ಕೆಲಸ ಎಷ್ಟು ಸುಲಭವಾಗಿ ಹೋಯ್ತು,’ ಎಂದು ಯೋಚಿಸಿದಳು.

ಸಂಜೆ 4.30ಕ್ಕೆ ಶಾಲೆಗೆ ಹೋದ ಮಕ್ಕಳು ಮನೆಗೆ ವಾಪಸ್‌ ಬಂದರು. ಬಂದವರೇ ಕೈಕಾಲು ಮುಖ ತೊಳೆದು, ತಿಂಡಿ ತಿಂದು, ಮನೆಯ ಮುಂದೆ ಅಂಗಳದಲ್ಲಿ ಲಗೋರಿ ಆಟ ಶುರು ಮಾಡಿದರು. ಸಾಧಿಕಾಳಿಗೆ ಆಶ್ಚರ್ಯ. ಬೆಂಗಳೂರಿನಲ್ಲಿ ಕ್ರಿಕೆಟ್‌, ಶೆಟಲ್ ಕಾಕ್‌, ಮೊಬೈಲ್ ‌ಗೇಮ್ ಬಿಟ್ಟರೆ ಬೇರೆ ಯಾವುದೂ ನೋಡಲು ಸಿಗಲ್ಲ.

ಕಣ್ಣಾಮುಚ್ಚಾಲೆ, ಕುಂಟೆಬಿಲ್ಲೆ ಹೀಗೆ ಒಂದರ ಮೇಲೊಂದರಂತೆ ಆಟಗಳನ್ನು ಆಡುತ್ತಿದ್ದ ಮಕ್ಕಳನ್ನು ಅವಳು ನೋಡುತ್ತ ಅವಳಿಗೆ ಖುಷಿಯಾಯಿತು. ಸ್ವಾತಿಗೂ ಕೂಡ ಈ ಮನೆಯ ವಾತಾವರಣ ಬಹಳವಾಗಿ ಹಿಡಿಸಿತ್ತು.

“ಸಾಧಿಕಾ, ನಾವು ನಮ್ಮ ಬಾಲ್ಯವನ್ನು ಹೀಗೆ ಎಂಜಾಯ್‌ ಮಾಡಲಿಲ್ಲ ಅಲ್ವಾ….?” ಎಂದು ಕೇಳಿದಳು.

“……” ಸಾಧಿಕಾಳ ಮೌನವೇ `ಹೌದು’ ಎಂಬ ಉತ್ತರ ನೀಡಿತ್ತು.

ಶ್ವೇತಾ ಚಿಕ್ಕಮ್ಮ ಬಂದು ಮಕ್ಕಳನ್ನೆಲ್ಲಾ ಒಳಗೆ ಕರೆದರು. ಮಕ್ಕಳು ಕೈಕಾಲು ತೊಳೆದುಕೊಂಡು ದೇವರ ಕೋಣೆಯಲ್ಲಿ ಕುಳಿತರು. ಮನೆಯ ಹಿರಿಕಿರಿಯರು ಎಲ್ಲರೂ ಕೂಡಿ ಭಜನೆ ಮಾಡಿ ಹಾಡಿದರು. ಸಾಧಿಕಾ ಕೂಡ ಅವರೊಂದಿಗೆ ಹಾಡಿದಳು.

ಭಜನೆ ಮುಗಿದ ಬಳಿಕ ವೈಶಾಲಿ ಮಕ್ಕಳನ್ನೆಲ್ಲಾ ಕೂಡಿಸಿ ಹೋಮ್ ವರ್ಕ್‌ ಮಾಡಿಸಿ, ಓದಿಸಿದರು. ರಾತ್ರಿ 8 ಗಂಟೆಗೆ ಸುಮಿತ್ ಮನೆಗೆ ಬಂದ. ಸಾಧಿಕಾ ಮಕ್ಕಳೊಂದಿಗೆ ಲೂಡೋ ಆಡುತ್ತಿರುವುದನ್ನು ನೋಡಿ ಅವನಿಗೆ ಬಹಳ ಸಂತೋಷವಾಯಿತು. 8.30ಕ್ಕೆ ಸರಿಯಾಗಿ ರಾತ್ರಿಯ ಊಟ. ಎಲ್ಲ ಸಮಯಕ್ಕೆ ಸರಿಯಾಗಿ ಕ್ರಮ ಪ್ರಕಾರ ನಡೆಯುತ್ತಿತ್ತು.

ತನ್ನ ಮನೆಯಲ್ಲಿ ತಾನು ಊಟನ್ನು ಬಟ್ಟಲಿಗೆ ಹಾಕಿಕೊಂಡು ಟಿ.ವಿ ನೋಡಿಕೊಂಡು ತಿನ್ನುವುದನ್ನು ಸಾಧಿಕಾ ನೆನಪಿಸಿಕೊಂಡಳು. ಊಟ ಹೊಟ್ಟೆಗೆ ಹೋಗುತ್ತಿತ್ತು ಅಷ್ಟೇ. ಊಟವನ್ನು ಎಂಜಾಯ್‌ ಮಾಡುತ್ತಿರಲಿಲ್ಲ. ಇಲ್ಲಿ ಎಲ್ಲರೊಂದಿಗೆ ಕುಳಿತು ಊಟ ಮಾಡೋ ಮಜಾನೇ ಬೇರೆ.

ರಾತ್ರಿ ಮನೆಯ ಗಂಡಸರೆಲ್ಲರೂ ಹಾಲ್ ‌ನಲ್ಲಿ ಕುಳಿತು ನ್ಯೂಸ್‌ ಬಗ್ಗೆ ಹಾಗೂ ಇತರ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರು. ಸುಮಿತ್‌ ಕೂಡ ಅವರೊಂದಿಗೆ ಕುಳಿತಿದ್ದ. ಹೆಂಗಸರು ಒಟ್ಟಿಗೆ ಕುಳಿತು ಇನ್ನೇನೋ ಮಾತನಾಡಿಕೊಳ್ಳುತ್ತಿದ್ದರು. ಮನೆಯ ಮಕ್ಕಳೆಲ್ಲರೂ ವೇದಮ್ಮ ಅಜ್ಜಿ ಜೊತೆ ಕುಳಿತು ಅಜ್ಜಿ ಕಥೆ ಕೇಳುತ್ತಿದ್ದರು.

ರಾತ್ರಿ 9.30ಕ್ಕೆ ಶ್ರೀದೇವಿ ಮಕ್ಕಳನ್ನೆಲ್ಲಾ ಎಬ್ಬಿಸಿ ಮಲಗಲು ಕಳುಹಿಸಿದರು. ಹತ್ತು ಗಂಟೆಗೆ ಮನೆಯವರೆಲ್ಲರೂ ತಂತಮ್ಮ ರೂಮಿಗೆ ಸೇರಿಯಾಗಿತ್ತು.

ಸಾಧಿಕಾ ಒಂದು ವಿಚಾರವನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದ್ದಳು. ಇಡೀ ದಿನದಲ್ಲಿ ಮಕ್ಕಳಾಗಲಿ, ದೊಡ್ಡವರಾಗಲಿ ಯಾರೂ ಕೂಡಾ ಅನಗತ್ಯವಾಗಿ ಮೊಬೈಲ್ ‌ಹಿಡಿದುಕೊಂಡು ಕುಳಿತುಕೊಂಡಿರಲಿಲ್ಲ. ಫೋನ್‌ ಕಾಲ್ ‌ಬಂದಾಗಷ್ಟೇ ಮಾತನಾಡಿ ಸುಮ್ಮನಾಗುತ್ತಿದ್ದರು.

ರೂಮಿಗೆ ಬಂದು ಮಲಗಿದ ಸಾಧಿಕಾಳಿಗೆ ನಿದ್ದೆ ಹತ್ತಲಿಲ್ಲ. ಸುಮಿತ್‌ ನ ಕಾಲ್ ಬಂತು, “ಹಾಯ್‌ ಚಿನ್ನಾ….. ಏನು ಇವತ್ತು ಇಡೀ ದಿನ ನೀನು ನಂಗೆ ಒಂದು ಮೆಸೇಜ್‌, ಕಾಲ್ ಮಾಡಲೇ ಇಲ್ಲ…..? ಬೆಳಗ್ಗೆಯಿಂದ ನಿಂಗೆ ಮೆಸೇಜ್‌ ಮಾಡ್ತಾನೇ ಇದ್ದೀನಿ, ಕಾಲ್ ಕೂಡ ಮಾಡಿದ್ದೆ. ನೀನು ರಿಪ್ಲೈ ಮಾಡಲೇ ಇಲ್ಲ….” ಎಂದ.

aprajita-story1

`ಹೌದಲ್ವಾ…..’ ಎನಿಸಿತು ಸಾಧಿಕಾಳಿಗೆ. ಬೆಳಗ್ಗೆಯಿಂದ ರಾತ್ರಿವರೆಗೂ ಎಲ್ಲರೊಂದಿಗೂ ಮಾತನಾಡುತ್ತಾ ಮೊಬೈಲ್ ‌ಸಂಗತಿನೇ ಮರೆತುಹೋಗಿತ್ತು. ಮೊಬೈಲ್ ‌ಬೇಕೆನ್ನಿಸಲಿಲ್ಲ, ನೆನಪೂ ಆಗಿರಲಿಲ್ಲ.

“ಹೌದು ಸುಮಿತ್‌, ಸ್ವಲ್ಪ ಬ್ಯುಸಿ ಇದ್ದೆ,” ಎಂದಳು.

“ಬೋರ್‌ ಆಯ್ತಾ ಚಿನ್ನಾ…. ಇಲ್ಲಿ ಏನಾದ್ರೂ ತೊಂದ್ರೆ ಆಯ್ತಾ…..?” ಅನುಮಾನದಿಂದ ವಿಚಾರಿಸಿದ.

“ಇಲ್ಲಪ್ಪಾ…. ಖುಷಿ ಆಗ್ತಾ ಇದೆ. ಇಲ್ಲಿ ಎಲ್ಲರೂ ಫ್ರೆಂಡ್ಲಿಯಾಗಿದಾರೆ,” ಎಂದಳು.

ಸ್ವಲ್ಪ ಹೊತ್ತು ಸುಮಿತ್‌ ನೊಂದಿಗೆ ಮಾತನಾಡಿ ಕಾಲ್ ಕಟ್‌ ಮಾಡಿದ ಮೇಲೆ, `ಮನೆಯಲ್ಲಿ ಫ್ಯಾಮಿಲಿಯವರು ಎಲ್ಲರೂ ಮಾತನಾಡಲು ಸಿಗುವಾಗ, ಫೇಸ್‌ ಬುಕ್‌, ವಾಟ್ಸ್ ಆ್ಯಪ್‌ ನಲ್ಲಿ ಸಿಕ್ಕಸಿಕ್ಕವರ ಜೊತೆಗೆಲ್ಲಾ ಚಾಟ್‌ ಮಾಡೋ ಅಗತ್ಯವೇ ಇಲ್ಲ ಅ್ವಾ…..? ವೀಕ್‌ಎಂಡ್‌ ಕಳೆಯೋದು ಅಂದ್ರೆ ಯಾವಾಗಲೂ ದೊಡ್ಡ ತಲೆನೋವು. ಆದರೆ ಇಲ್ಲಿ ದಿನ ಹೋಗಿದ್ದೇ ಗೊತ್ತಾಗಲಿಲ್ಲ…..’ ಎಂದು ಸಾಧಿಕಾ ಯೋಚಿಸಿದಳು.

ಮರುದಿನ ಭಾನುವಾರ. ಇಡೀ ಕುಟುಂಬ ಶಿವನಸಮುದ್ರಕ್ಕೆ ಪಿಕ್ನಿಕ್‌ ಗೆ ಹೊರಟಿತ್ತು. ಪಿಕ್ನಿಕ್‌ ನಲ್ಲಿ ಬಹಳ ಎಂಜಾಯ್‌ ಮಾಡಿದ ಸಾಧಿಕಾಗೆ ಫ್ಯಾಮಿಲಿ ಪಿಕ್ನಿಕ್‌ ನ ರುಚಿ ಏನು ಎಂಬುದರ ಅರಿವಾಗಿತ್ತು. ಅವರೆಲ್ಲರೊಂದಿಗೆ ತೆಗೆದುಕೊಂಡ ಫೋಟೋಗಳನ್ನು ವಾಟ್ಸ್ ಆ್ಯಪ್‌ ಸ್ಟೇಟಸ್‌ ನಲ್ಲಿ ಹಾಕಿದಾಗ ಎಲ್ಲರೂ `ಕ್ಯೂಟ್‌ ಫ್ಯಾಮಿಲಿ ಪಿಕ್‌,’ ಎಂದು ಕಮೆಂಟ್‌ ಹಾಕಿದ್ದರು. ಸಾಧಿಕಾಳಿಗೂ ಅದು ಸತ್ಯ ಎನಿಸಿತು.

ಸೋಮವಾರ ಶಮಿತಾ ಕಾಲೇಜಿಗೆ ಹೋದಳು. ವೈಶಾಲಿ ಕೂಡ ಕೆಲಸಕ್ಕೆ ಹೋದರು. ಅವರ ಮಗುವನ್ನು ನೋಡಿಕೊಳ್ಳಲು ಮನೆಯಲ್ಲಿ ಬೇಕಾದಷ್ಟು ಜನರಿದ್ದ ಕಾರಣ ಮಗುವನ್ನು ಬೇಬಿ ಸಿಟ್ಟಿಂಗ್‌ ನಲ್ಲಿ ಬಿಡುವ ಕೆಲಸವಿರಲಿಲ್ಲ. ತಮಗೂ ಮಗುವಾದರೆ, ನಾನು ಕೆಲಸಕ್ಕೆ ಹೋದರೆ ಮಗುವನ್ನು ನೋಡಿಕೊಳ್ಳಲು ಮನೆಯಲ್ಲಿ ಇವರೆಲ್ಲರೂ ಇದ್ದಾರೆ ಎಂಬ ಯೋಚನೆ ಬಂದು ಸಾಧಿಕಾ ಮನನಲ್ಲೇ ನಕ್ಕಳು. ಅವಳು ಚಿಕ್ಕವಳಿದ್ದಾಗ ಶಾಲೆಗೆ ರಜೆ ಇದ್ದರೆ ಅಪ್ಪ ಅಮ್ಮ ಅವಳನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಬ್ಯಾಂಕ್‌ ಗೆ ಹೋಗುತ್ತಿದ್ದುದು ನೆನಪಾಗಿ ಬೇಸರಗೊಂಡಳು.

ಆ ದಿನ ಮಗು ಆಶ್ಲೇಶ್‌ ಗೆ ಹುಷಾರಿರಲಿಲ್ಲ. ಎಲ್ಲರೂ ಅವನನ್ನು ಎತ್ತಿಕೊಂಡು ಸಮಾಧಾನ ಪಡಿಸುತ್ತಿದ್ದರು.

“ಯಾರೂ ವೈಶಾಲಿಗೆ ಫೋನ್‌ ಮಾಡಿ ಮಗೂಗೆ ಹುಷಾರಿಲ್ಲ ಅಂತ ಹೇಳ್ಬೇಡಿ. ಅವಳು ಸುಮ್ಮನೆ ಗಾಬರಿ ಆಗ್ತಾಳೆ,” ಎಂದು ವೇದಮ್ಮಜ್ಜಿ ಎಲ್ಲರಿಗೂ ಸೂಚನೆ ನೀಡಿದರು. ಜೊತೆಗೆ ಮನೆ ಮದ್ದು ಮಾಡಿ ಮಗುವಿಗೆ ಕುಡಿಸಿದರು. ಅಂತೂ ಮಗು ಸ್ವಲ್ಪ ಗೆಲುವಾಯಿತು.

ಸಾಧಿಕಾ ಸುಮಿತ್‌ ಮನೆಗೆ ಬಂದು 4 ದಿನ ಕಳೆದಿದ್ದವು. ದೀಪಾವಳಿ ಹಬ್ಬಕ್ಕೆ ಮನೆಗೆ ಬರಬೇಕೆಂದು ಅವಳಮ್ಮನ ಅಪ್ಪಣೆಯಾಗಿತ್ತು. ಆದರೆ ಯಾಕೋ ದೀಪಾವಳಿ ಹಬ್ಬಕ್ಕೆ ಸುಮಿತ್‌ ನ ಮನೆಯಲ್ಲೇ ಉಳಿದುಕೊಳ್ಳುವ ಆಸೆಯಾಗಿ, ಮನೆಗೆ ಫೋನ್‌ ಮಾಡಿ ನಾನು ಬರುವುದು 4-5 ದಿನ ಲೇಟ್‌ ಆಗಬಹುದು ಎಂದು ತಿಳಿಸಿದಳು.

ದೀಪಾವಳಿ ಹಬ್ಬಕ್ಕೆ ಮನೆಯವರೆಲ್ಲರೂ ಜವಳಿ ಅಂಗಡಿಗೆ ಹೋಗಿ ಹೊಸ ಬಟ್ಟೆ ಖರೀದಿಸಿದರು. ಸ್ವಾತಿ ಮತ್ತು ಸಾಧಿಕಾರಿಗೂ ಸೀರೆ ಮತ್ತು ಡಿಸೈನರ್‌ ಬ್ಲೌಸ್‌ ತೆಗೆಸಿಕೊಟ್ಟರು.

“ನಮ್ಮ ಮನೆಗೆ ಹಬ್ಬದ ಸಮಯದಲ್ಲಿ ಅತಿಥಿಗಳಾಗಿ ಬಂದು ನಮ್ಮ ಮನೆಯ ಹುಡುಗಿಯರಂತೆ ನಮ್ಮೊಂದಿಗೆ ಬೆರೆತ ನೀವೂ ಕೂಡ ಹೊಸ ಬಟ್ಟೆ ಹಾಕಿಕೊಳ್ಳಬೇಕು,” ಎಂದಿದ್ದರು ಶ್ರೀದೇವಿ ಚಿಕ್ಕಮ್ಮ.

ದೀಪಾವಳಿಯ ಎಲ್ಲಾ ವಿಧಿವಿಧಾನಗಳನ್ನು ಕುಟುಂಬದವರೆಲ್ಲರೂ ಸೇರಿ ಬಹಳ ಅಚ್ಚುಕಟ್ಟಾಗಿ ನೆರವೇರಿಸುತ್ತಿದ್ದರು. ದೀಪಾವಳಿಗೆಂದೇ ಮನೆಯ ಹೆಂಗಸರೆಲ್ಲರೂ ಸೇರಿ ಮನೆಯ ಮುಂದೆ ವಿಶೇಷವಾದ ರಂಗೋಲಿ ಬಿಡಿಸಿದ್ದರು. ಸಾಧಿಕಾ, ಸ್ವಾತಿ ಕೂಡ ಅವರೊಂದಿಗೆ ಕೈಜೋಡಿಸಿದ್ದರು. ಜೊತೆಗೆ ಅವರೊಂದಿಗೆ ಸೇರಿ ಮನೆಯನ್ನು ಅಲಂಕರಿಸಿದರು. ಗಂಡಸರೆಲ್ಲ ಕೂಡಿ ಒಂದು ಬಹು ದೊಡ್ಡ ಗೂಡು ದೀಪ ತಯಾರಿಸಿ ಮನೆ ಮುಂದೆ ತೂಗು ಹಾಕಿದರು.

ರಾತ್ರಿ ಮಕ್ಕಳೊಂದಿಗೆ ಸೇರಿ ಸಾಧಿಕಾ, ಸ್ವಾತಿ, ಸುಮಿತ್‌, ಶಮಿತಾ ಎಲ್ಲರೂ ಪಟಾಕಿ ಸಿಡಿಸಿದರು. ಎಲ್ಲರೂ ಸೇರಿ ಹಣತೆ ದೀಪವನ್ನು ಮನೆಯ ಒಳಗೂ, ಹೊರಗೂ ಬೆಳಗಿಸಿದರು. ಒಟ್ಟಿನಲ್ಲಿ ರತ್ನಪುಂಜ ನಿಲಯ ದೀಪಾವಳಿಯಂದು ದೀಪದಿಂದ ಹೊಳೆಯುವ ಅಸಲಿ ರತ್ನ ಪುಂಜದಂತೆಯೇ ಕಂಗೊಳಿಸುತ್ತಿತ್ತು.

ಹಬ್ಬದಡಿಗೆಯ ರಸದೌತಣವನ್ನು ಸವಿದ ಸಾಧಿಕಾ ಮತ್ತು ಸ್ವಾತಿಗೆ ನಿಜವಾದ ಹಬ್ಬದಾಚರಣೆ ಎಂದರೆ ಇದೇ ಎನಿಸಿತು. ದೀಪಾವಳಿ ಮುಗಿದಿತ್ತು. ಮರುದಿನ ಸ್ವಾತಿ ಮತ್ತು ಸಾಧಿಕಾ ಅವರವರ ಮನೆಗೆ ಹೊರಡಲು ನಿರ್ಧರಿಸಿದರು. ಇಬ್ಬರೂ ಅಲ್ಲಿಗೆ ಬಂದು ಒಂದು ವಾರ ಆಯ್ತು ಅಂತ ಅನಿಸಲೇ ಇಲ್ಲ. ರತ್ನಪುಂಜದಲ್ಲಿ ಅಷ್ಟು ಸಂತೋಷ ಸಿಕ್ಕಿತ್ತು. ವಾಪಸ್ಸು ಹೋಗಬೇಕೆಂದರೆ ಯಾಕೋ ಬೇಸರ ಎನಿಸಿತು.

ಮರುದಿನ ಬೆಳಗ್ಗೆ ಸ್ವಾತಿ ಅಡುಗೆಮನೆಗೆ ಹೋಗಿ ಸುಮಿತ್‌ ನ ತಾಯಿ ಸಿಂಧೂರಾರ ಕಿವಿಯಲ್ಲಿ ಏನೋ ಹೇಳಿದಳು. ಅವರು ಕೋಣೆಗೆ ಹೋದಾಗ ಸಾಧಿಕಾ ಮಂಚದಲ್ಲಿ ಮಲಗಿಕೊಂಡು ತಡೆಯಲಾರದ ಹೊಟ್ಟೆನೋವಿನಿಂದ ನರಳುತ್ತಿದ್ದಳು. ಸಿಂಧೂರಾ ಅವಳ ಬಳಿ ಕುಳಿತು ಕಾಳಜಿಯಿಂದ ವಿಚಾರಿಸಿದರು.

“ಪ್ರತೀ ತಿಂಗಳೂ ಇವಳಿಗೆ ಇದೇ ಸಮಸ್ಯೆ. ಆ ಎರಡು ಮೂರು ದಿನ ತಡೆಯಲಾರದ ನೋವಿನಿಂದ ಒದ್ದಾಡುತ್ತಾಳೆ,” ಎಂದು ಸ್ವಾತಿ ಹೇಳಿದಳು.

ಸುಮಿತ್‌ ಸಾಧಿಕಾಳನ್ನು ಮಾತನಾಡಿಸಲು ಅಲ್ಲಿಗೆ ಬಂದವನು ಅವಳು ಅಳುತ್ತಿರುವುದನ್ನು ನೋಡಿ ಗಾಬರಿಯಾದ.

“ಸುಮಿತ್‌ ನೀನು ಹೋಗು ಇಲ್ಲಿಂದ. ಇದು ಹೆಣ್ಣುಮಕ್ಕಳ ವಿಷಯ ನಾನು ನೋಡಿಕೊಳ್ತೀನಿ,” ಎಂದು ಹೇಳಿ ಸಿಂಧೂರಾ ಅವನನ್ನು ಹೊರಗೆ ಕಳುಹಿಸಿದರು.

ಶ್ವೇತಾ ಚಿಕ್ಕಮ್ಮನನ್ನು ಕರೆದು, ಜೀರಿಗೆ ಕಷಾಯ, ಬಾರ್ಲಿ ನೀರು ಮಾಡಿ ತರಲು ಹೇಳಿದರು. ಸ್ವತಃ ತಾವೇ ಅದನ್ನು ಸಾಧಿಕಾಗೆ ಕುಡಿಸಿದರು. ಇಂತಹ ಸಮಯದಲ್ಲಿ ಹೇಗೆ ಆರೋಗ್ಯ ನೋಡಿಕೊಳ್ಳಬೇಕೆಂದು ಟಿಪ್ಸ್ ಹೇಳಿದರು. ಅವಳಿಗೆ ನಿದ್ದೆ ಬರುವ ತನಕ ಅವಳ ತಲೆ ನೇವರಿಸುತ್ತಿದ್ದರು. ಸಿಂಧೂರಾರ ಪ್ರೀತಿ ಕಾಳಜಿ ಕಂಡು ಸಾಧಿಕಾಗೆ ಅಮ್ಮನ ನೆನಪಾಗಿ ಬಹಳ ಅತ್ತಳು.

“ಪುಟ್ಟಾ, ಅಮ್ಮನ ನೆನಪಾಗ್ತಾ ಇದೆ ಅಲ್ವಾ….? ಅಳಬೇಡ. ಈಗ ಮಲ್ಕೋ…. ನೋವು ಕಡಿಮೆ ಆದಮೇಲೆ ಅಮ್ಮನ ಹತ್ರ ಕಾಲ್ ‌ಮಾಡಿ ಮಾತನಾಡು. ಇವತ್ತು ಪ್ರಯಾಣ ಬೇಡ. ನಾಳೆ ಅಥವಾ ನಾಡಿದ್ದು ಹೊರಡುವಿರಂತೆ,” ಎಂದರು ಸಿಂಧೂರಾ.

ಅವಳು ಮಲಗಿ ಮಧ್ಯಾಹ್ನ ಎದ್ದಾಗ ನೋವು ಬಹಳ ಕಡಿಮೆಯಾಗಿತ್ತು. ಸಿಂಧೂರಾ ಅವಳನ್ನು ಕೆಳಗೆ ಬರಲು ಬಿಡದೆ ತಾವೇ ಸ್ವತಃ ಊಟ ತೆಗೆದುಕೊಂಡು ಹೋಗಿ ಕೊಟ್ಟರು.

ಆ ದಿನ ರಾತ್ರಿ ಸಾಧಿಕಾ ಒಬ್ಬಂಟಿಯಾಗಿ ಇರಬಯಸಿ ಮನೆಯ ಟೆರೇಸ್‌ ಮೇಲೆ ಹೋಗಿ ಕುಳಿತಳು. ಅಲ್ಲಿಗೆ ಸುಮಿತ್‌ ಬಂದ. “ಚಿನ್ನಾ, ಹೇಗಿದ್ದೀಯಾ….? ಆರಾಮಿದ್ಯಾ ತಾನೇ….? ನಿನಗೆ ಪ್ರೈವೇಸಿ ಇಲ್ಲದೆ ಈ ಮನೆಯಲ್ಲಿ ಹಿಂಸೆ ಅನಿಸುತ್ತಿದೆಯಾ…?” ಕಕ್ಕುಲತೆಯಿಂದ ವಿಚಾರಿಸಿದ.

“ಇಲ್ಲಾ ಸುಮಿತ್‌, ಸ್ವಲ್ಪ ವೀಕ್‌ ನೆಸ್‌ ಇದೆ ಅಷ್ಟೆ. ಇಲ್ಲಿ ಪ್ರೈವೆಸಿ ಬೇಕು ಅಂತ ನನಗೆ ಅನಿಸೋದೆ ಇಲ್ಲ. ಮನಸ್ಸಿಗೆ ತುಂಬಾ ಖುಷಿ ಇದೆ,” ಎಂದಳು.

“ನಂಗೆ ಪ್ರೈವೆಸಿ ಬೇಕು. ಎಷ್ಟು ದಿನ ಆಯ್ತು ನಿನ್ನೊಂದಿಗೆ ಸರಿಯಾಗಿ ಮಾತಾಡದೆ,” ಎಂದು ಅವಳ ಕೈ ಹಿಡಿದು, “ನಿನ್ನೆ ದೀಪಾವಳಿ ದಿನ ಆ ನೀಲಿ ಬಣ್ಣದ ರೇಷ್ಮೆ ಸೀರೆಯಲ್ಲಿ ಎಷ್ಟು ಚೆಂದ ಕಾಣ್ತಾ ಇದ್ದೆ ಗೊತ್ತಾ…..? ಯಾವಾಗ ಒಮ್ಮೆ ನಿನ್ನನ್ನು ಅಪ್ಪಿ ಹಿಡ್ಕೋತೀನೋ ಅಂತ ಅನಿಸಿತ್ತು ನಂಗೆ,” ಎಂದು ಅವಳ ತುಟಿಯ ಬಳಿ ತನ್ನ ತುಟಿ ತಂದ.

“ಹ್ಞೂಂ….. ಇದೆಲ್ಲಾ ಇಲ್ಲವಲ್ಲ…… ಬೆಡ್‌ ರೂಮ್ ಒಳಗೆ. ಅದು ಕೂಡ ಮದುವೆಯಾದ ಮೇಲೆ. ಈಗ ಅಲ್ಲ….” ಎಂದವಳೇ ಅವನಿಂದ ತಪ್ಪಿಸಿಕೊಂಡು ಎದ್ದು ಹೋದಳು.

ಮರುದಿನ ಸ್ವಾತಿ ಮತ್ತು ಸಾಧಿಕಾ ವಾಪಾಸು ಮನೆಗೆ ಹೊರಟರು. ಸುಮಿತ್‌ ಅವರಿಬ್ಬರನ್ನು ತಾನೇ ಸ್ವತಃ ಹೋಗಿ ಬಿಟ್ಟು ಬರುವೆನೆಂದು ತಿಳಿಸಿದ್ದ. ಮಹಡಿ ಮೇಲಿನಿಂದ ಕೆಳಗಿಳಿದು ಬರುವಾಗ, ಎದುರಿಗೆ ಕಾಣುತ್ತಿದ್ದ ಗೋಡೆಯ ಮೇಲಿನ ದೊಡ್ಡದಾದ ಆ ಕುಟುಂಬ ಫ್ಯಾಮಿಲಿ ಫೋಟೋ ನೋಡಿದಳು.

“ಸುಮಿತ್‌ ಆ ಫೋಟೋದಲ್ಲಿ ನಾನೊಬ್ಬಳೇ ಮಿಸ್ಸಿಂಗ್‌. ಮುಂದಿನ ದೀಪಾವಳಿ ಫ್ಯಾಮಿಲಿ ಫೋಟೋದಲ್ಲಿ ನಾನೂ ಕೂಡ ಇರ್ತೀನಿ. ಈ ರತ್ನಪುಂಜ ನಿಲಯದಲ್ಲಿರುವ ಎಲ್ಲರೂ ಅಮೂಲ್ಯವಾದ ರತ್ನಗಳು. ನಿಮ್ಮ ರತ್ನಪುಂಜದಲ್ಲಿ ನಾನೂ ಒಂದು ರತ್ನವಾಗಿ ಕೂಡಿಕೊಳ್ಳುವ ಆಸೆ ನನಗಿದೆ. ಸಾಮರಸ್ಯವೇ ಜೀವನ ಅನ್ನೋದನ್ನು ತೋರಿಸಿಕೊಟ್ಟ ನಿನಗೂ, ನಿನ್ನ ಫ್ಯಾಮಿಲಿಗೂ ತುಂಬಾ ಥ್ಯಾಂಕ್ಸ್ ಸುಮಿತ್‌,” ಎಂದಳು.

ಇದನ್ನು ಕೇಳಿ ಸುಮಿತ್‌ ನ ಕಣ್ಣುಗಳಲ್ಲಿ ಹೊಸ ಕನಸುಗಳ ಮಿಂಚು ಹೊಳೆಯುತ್ತಿತ್ತು. ಸುಮಿತ್‌ ಅವಳ ಕೈ ಹಿಡಿದು, “ಥ್ಯಾಂಕ್ಯೂ ಸೋ ಮಚ್‌ ಸಾಧಿಕಾ…. ಐ ಲವ್ ಯೂ….” ಎಂದ.

ಸಾಧಿಕಾ ಮನೆಯ ಹಿರಿಯರೆಲ್ಲರಿಗೂ ಕಾಲಿಗೆ ಬಿದ್ದು ನಮಸ್ಕರಿಸಿದಳು. ಮಕ್ಕಳೆಲ್ಲರಿಗೂ ಮುತ್ತಿಟ್ಟು, “ಆದಷ್ಟು ಬೇಗ ಪುನಃ ಬರ್ತೀನಿ,” ಎಂದು ಎಲ್ಲರಿಗೂ ಹೇಳುವಾಗ ಸುಮಿತ್‌ ನನ್ನು ನೋಡಿ ನಸುನಕ್ಕಳು.

ಸ್ವಾತಿ ಮತ್ತು ಸಾಧಿಕಾ ಇಬ್ಬರೂ ಕಾರ್‌ ಹತ್ತಿದರು. ಸುಮಿತ್‌ ಕಾರ್‌ ಸ್ಟಾರ್ಟ್‌ ಮಾಡಿದ. ದೂರ ದೂರ ಹೋಗುವವರೆಗೂ ಸಾಧಿಕಾ ಹಿಂದಿರುಗಿ ರತ್ನಪುಂಜ ನಿಲಯವನ್ನು ನೋಡುತ್ತಲೇ ತನ್ನ ಕಣ್ಣು ತುಂಬಿಕೊಂಡಳು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ