ಅಂಜಲಿ ಭಾರದ್ವಾಜ್‌ ಸೋಶಿಯಲ್ ಆ್ಯಕ್ಟಿವಿಸ್ಟ್ ಗರಿಮಾ ಪಂಕಜ್‌ ಮಾಹಿತಿ ಹಕ್ಕು ಕಾಯ್ದೆಯನ್ನು (RTI) ಉಳಿಸುವ ಹೋರಾಟದಲ್ಲಿ ಅಂಜಲಿ ನಿರ್ಭಯವಾಗಿ ನಿಂತಿರುವ ರೀತಿ ಮಹಿಳೆಯರಿಗೆ ಒಂದು ಮಾದರಿಯಾಗಿದೆ…..

ಭಾರತದಂತಹ ಧಾರ್ಮಿಕ ದೇಶದಲ್ಲಿ, ಮಹಿಳೆಯರ ಕೆಲಸ ಕೇವಲ ಮನೆಕುಟುಂಬವನ್ನು ನಿಭಾಯಿಸುವುದು, ಮನೆಯ ಪುರುಷ ಸದಸ್ಯರನ್ನು ದೇವರೆಂದು ಭಾವಿಸಿ ಅವರ ಆಜ್ಞೆಯನ್ನು ಪಾಲಿಸುವುದು ಮತ್ತು ಉಳಿದ ಸಮಯದಲ್ಲಿ ಪೂಜೆ ಪುನಸ್ಕಾರ, ಧಾರ್ಮಿಕ ಚಟುವಟಿಕೆಗಳು ಹಾಗೂ ಇತರರ ಆರೈಕೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಸೀಮಿತವಾಗಿದೆ. ಇಂತಹ ದೇಶದಲ್ಲಿ, ಒಬ್ಬ ಮಹಿಳೆ ಅಧಿಕಾರದಲ್ಲಿರುವ ಪುರುಷರನ್ನು ಪ್ರಶ್ನಿಸಿದರೆ ಮತ್ತು ಅವರ ಮನಬಂದಂತೆ ನಡೆಯುವ ಪ್ರವೃತ್ತಿಗೆ ಲಗಾಮು ಹಾಕಲು ಪ್ರಯತ್ನಿಸಿದರೆ, ಆ ಕೆಲಸ ಸುಲಭದ ಮಾತಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬಹುದು.

ನೋಯ್ಡಾದಲ್ಲಿ ವಾಸಿಸುವ, ಸರಳ ಸ್ವಭಾವದ 52 ವರ್ಷದ ಅಂಜಲಿ ಭಾರದ್ವಾಜ್‌ ರನ್ನು ನೋಡಿದರೆ, ಅವರು ಸಮಾಜದಲ್ಲಿ ಹರಡಿರುವ ಭ್ರಷ್ಟಾಚಾರದ ವಿರುದ್ಧ ಕೇವಲ ತಮ್ಮ ಧ್ವನಿಯನ್ನು ಎತ್ತಿದ್ದಷ್ಟೇ ಅಲ್ಲದೆ, ಇತರ ಅನೇಕ ಮಹಿಳೆಯರಲ್ಲಿ ಕೂಡ ಅನ್ಯಾಯದ ವಿರುದ್ಧ ಧ್ವನಿ ಎತ್ತು, ಆಡಳಿತ ನಡೆಸುವ ಅಧಿಕಾರಿಗಳನ್ನು ಪ್ರಶ್ನಿಸುವ ಮತ್ತು ಅವರಿಗೆ ಉತ್ತರಿಸುವಂತೆ ಒತ್ತಾಯಿಸುವ ಧೈರ್ಯವನ್ನು ತುಂಬಿದ್ದಾರೆ ಎಂಬುದನ್ನು ಸುಲಭವಾಗಿ ನಂಬಲು ಸಾಧ್ಯವಿಲ್ಲ.

ಅಂಜಲಿ 1999ರಿಂದ ಅಂದರೆ 25 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ್ಡ ಚಳುವಳಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ಅವರು ಮಾಹಿತಿ ಹಕ್ಕಿಗಾಗಿ ಜನರ ರಾಷ್ಟ್ರೀಯ ಅಭಿಯಾನ ಸಂಸ್ಥೆಯೊಂದಿಗೆ ಕೂಡ 20 ವರ್ಷಗಳಿಗೂ ಹೆಚ್ಚು ಕಾಲದಿಂದ ಕೆಲಸ ಮಾಡುತ್ತಿದ್ದಾರೆ. 2004 ರಿಂದ ಅವರು ಈ ಸಂಸ್ಥೆಯ ಕಾರ್ಯಕಾರಿ ಸಮಿತಿಯಲ್ಲಿದ್ದಾರೆ ಮತ್ತು ಪ್ರಸ್ತುತ ಸಹ ಸಂಚಾಲಕರಾಗಿದ್ದಾರೆ. ಇದು ಮಾಹಿತಿ ಹಕ್ಕಿನ ಮೇಲೆ ಕೆಲಸ ಮಾಡುವ ಜನರ ರಾಷ್ಟ್ರವ್ಯಾಪಿ ಅಭಿಯಾನವಾಗಿದೆ.

ಅಂಜಲಿ ಭಾರದ್ವಾಜ್‌ ಗೆ 2021ರಲ್ಲಿ ಅಮೆರಿಕಾದ ವಿದೇಶಾಂಗ ಇಲಾಖೆಯು `ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ಚಾಂಪಿಯನ್‌’ ಪ್ರಶಸ್ತಿ ನೀಡಿ ಗೌರವಿಸಿದೆ. ಅಲ್ಲದೆ, 2011ರಲ್ಲಿ ಲೇಡಿ ಶ್ರೀರಾಮ್ ಕಾಲೇಜಿನ `ಆನರ್‌ ರೋಲ್‌’ ಮತ್ತು 2009ರಲ್ಲಿ `ಅಶೋಕ ಫೆಲೋಶಿಪ್‌ ಫಾರ್‌ ಸೋಶಿಯಲ್ ಎಂಟರ್‌ ಪ್ರೆನರ್ಸ್‌’ ಗೌರವಗಳಿಗೂ ಅವರು ಪಾತ್ರರಾಗಿದ್ದಾರೆ.

ಸಾಮಾಜಿಕ ಕೆಲಸದಲ್ಲಿ ಆಸಕ್ತಿ : ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ಇವರ ಕಥೆ ದೆಹಲಿಯಲ್ಲಿ ಪ್ರಾರಂಭವಾಗುತ್ತದೆ. ಅವರು ಲೇಡಿ ಶ್ರೀರಾಮ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲೇ ಅವರಿಗೆ ಸಮಾಜ ಸೇವೆಯಲ್ಲಿ ಆಸಕ್ತಿಯಿತ್ತು. ತಮ್ಮ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ಇವರು ಬರವಣಿಗೆಯಲ್ಲಿಯೂ ಹೆಚ್ಚಿನ ಆಸಕ್ತಿ ಹೊಂದಿದ್ದರು. ಅವರ ತಾಯಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿದ್ದು, ತಂದೆ ಸಾಫ್ಟ್ ವೇರ್‌ ಎಂಜಿನಿಯರ್‌ ಆಗಿದ್ದರು. ಅವರು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರಾಗಿದ್ದರು.

ಕಾಲೇಜು ಶಿಕ್ಷಣದ ನಂತರ, ವಿಶ್ವ ಬ್ಯಾಂಕ್‌ ನಲ್ಲಿ ಬಡತನ ನಿರ್ಮೂಲನೆ ಮತ್ತು ಆರ್ಥಿಕ ನಿರ್ವಬಣಾ ವಿಭಾಗದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳು ಜನರಿಗಾಗಿ ಬಿಡುಗಡೆಯಾಗುತ್ತಿ, ಆದರೆ ಭ್ರಷ್ಟಾಚಾರದ ಕಾರಣದಿಂದಾಗಿ ಅವು ಜನರಿಗೆ ತಲುಪುದಿಲ್ಲ ಎಂಬುದು ಅಲ್ಲಿ ಅವರಿಗೆ ಮನವರಿಕೆಯಾಯಿತು. ಇದನ್ನು ನೋಡಿ ಅವರಿಗೆ ಬಹಳ ನೋವಾಯಿತು. ಈ ಭ್ರಷ್ಟಾಚಾರಕ್ಕೆ ಲಗಾಮು ಹಾಕಲು ಏನಾದರೂ ಮಾಡಲೇಬೇಕು ಎಂದು ಅವರು ಅಂದೇ ನಿರ್ಧರಿಸಿದರು.

ಅಂಜಲಿ ಆಕ್ಸ್ ಫರ್ಡ್‌ ವಿ.ವಿ.ಗೆ ವಿದ್ಯಾಭ್ಯಾಸಕ್ಕಾಗಿ ತೆರಳಿದರು. ಅಲ್ಲಿ ಅವರು `ಎನ್ವಿರಾನ್ಮೆಂಟ್‌ ಚೇಂಜಸ್‌ಮ್ಯಾನೇಜ್‌ ಮೆಂಟ್‌’ ವಿಷಯದ ಬಗ್ಗೆ ಅಭ್ಯಾಸ ಮಾಡಿದರು. ಭಾರತಕ್ಕೆ ಮರಳಿದ ನಂತರ ಕೆಲವು ದಿನಗಳ ಕಾಲ ವಿಶ್ವ ಬ್ಯಾಂಕ್‌ ನಲ್ಲಿ ಕೆಲಸ ಮಾಡಿದರು. ನಂತರ ವಿಶ್ವ ಬ್ಯಾಂಕ್‌ ಕೆಲಸವನ್ನು ತೊರೆದು ಅರವಿಂದ್‌ ಕೇಜ್ರಿವಾಲ್ ಮತ್ತು ಮನೀಶ್‌ ಸಿಸೋಡಿಯಾರೊಂದಿಗೆ ಸೇರಿ `ಪರಿವರ್ತನ್‌’ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ, ಭ್ರಷ್ಟಾಚಾರದ ವಿರುದ್ಧ `ಸೇ ನೋ ಟು ಬ್ರೈಬ್‌’ ಎಂಬ ಅಭಿಯಾನವನ್ನು ನಡೆಸಿದರು.

ಆದರೆ ಅಂಜಲಿಗೆ ಅವರ ಕೆಲಸದ ವಿಧಾನಗಳು ಭಿನ್ನವಾಗಿ ಕಂಡವು. ಆಗ ಅವರು ತಮ್ಮಂತೆಯೇ ಚಿಂತಿಸುವ ಇತರ ಮಹಿಳೆರೊಂದಿಗೆ ಸೇರಿ 2003ರಲ್ಲಿ `ಸತರ್ಕ್‌ ನಾಗರಿಕ್‌ ಸಂಘಟನ್‌’ನ್ನು ಪ್ರಾರಂಭಿಸಿದರು. ಮುಖ್ಯವಾಗಿ ಈ ಸಂಸ್ಥೆ ದಕ್ಷಿಣ ದೆಹಲಿ ಮತ್ತು ನೈಋತ್ಯ ದೆಹಲಿಯ 15ಕ್ಕೂ ಹೆಚ್ಚು ಕೊಳೆಗೇರಿಗಳಲ್ಲಿ ಕೆಲಸ ಮಾಡುತ್ತಿದೆ.

ಈ ಸಂಘಟನೆಯ ಕೆಲಸ ಕೊಳೆಗೇರಿಗಳಲ್ಲಿ ವಾಸಿಸುವ ಜನರು, ವಿಶೇಷವಾಗಿ ಮಹಿಳೆಯರ ಸಮಸ್ಯೆಗಳ ಮೇಲೆ ಕೆಲಸ ಮಾಡುವುದು ಮತ್ತು ಅವರಿಗೆ ಅವರ ಹಕ್ಕುಗಳನ್ನು ಕೊಡಿಸುವುದಾಗಿದೆ. ಕೊಳೆಗೇರಿಗಳಲ್ಲಿ ವಾಸಿಸುವ ಜನರು ಸರ್ಕಾರಿ ಸೌಲಭ್ಯಗಳ ಮೇಲೆ ಅತಿ ಹೆಚ್ಚು ಅವಲಂಬಿತರಾಗಿರುತ್ತಾರೆ. ಪಡಿತರ, ಪಿಂಚಣಿ, ನೀರು ಮತ್ತು ನೈರ್ಮಲ್ಯದಂತಹ ಸೌಲಭ್ಯಗಳ ಜೊತೆಗೆ ಶಾಲೆಗಳಲ್ಲಿ ಸರಿಯಾದ ಶಿಕ್ಷಣ ಸಿಗುವುದು ಮತ್ತು ಆಸ್ಪತ್ರೆಗಳಲ್ಲಿ ಸರಿಯಾದ ಔಷಧಿಗಳು ಲಭ್ಯವಾಗುವುದು ಇವೆಲ್ಲ ಸಾಧ್ಯವಾಗುವುದು ಭ್ರಷ್ಟಾಚಾರ ಇಲ್ಲದಿದ್ದಾಗ ಮಾತ್ರ. ಸಂಸ್ಥೆಗಳು ಸರಿಯಾಗಿ ಕೆಲಸ ಮಾಡಿದಾಗ ಮತ್ತು ಜನರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವಿದ್ದಾಗ ಮಾತ್ರ ಇದು ಸಾಧ್ಯವಾಗುತ್ತದೆ.

ಈ ಸಂಘಟನೆ ಕೇವಲ ಅಧಿಕಾರಿ

ಶಾಹಿಯ ಕೆಲಸದ ಮೇಲೆ ನಿಗಾ ಇಡುವುದಲ್ಲದೆ, ನಮ್ಮಿಂದ ಆಯ್ಕೆಯಾದ ಜನಪ್ರತಿನಿಧಿಗಳ ಕಾರ್ಯವೈಖರಿಯ ಮೇಲೆಯೂ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಅರ್ಜಿಗಳನ್ನು ಸಲ್ಲಿಸುವ ಮೂಲಕ ನಿಗಾ ಇಡುತ್ತದೆ. ಸಂಸದರು ಮತ್ತು ಶಾಸಕರು ಹೇಗೆ ಕೆಲಸ ಮಾಡಿದ್ದಾರೆ ಮತ್ತು ಅವರು ಎಂತಹ ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬ ಆಧಾರದ ಮೇಲೆ ಈ ಸಂಸ್ಥೆ ಅವರ ರಿಪೋರ್ಟ್ ಕಾರ್ಡ್‌ ಗಳನ್ನು ಸಿದ್ಧಪಡಿಸುತ್ತದೆ.

ನಾವು ಮಾಳವೀಯ ನಗರದಲ್ಲಿರುವ `ಸತರ್ಕ್‌ ನಾಗರಿಕ್‌ ಸಂಘಟನ್‌’ನ ಕಛೇರಿಯಲ್ಲಿ ಅಂಜಲಿಯವರೊಂದಿಗೆ ಕುಳಿತು ಮಾತನಾಡಿದೆ. ಅವರೊಂದಿಗೆ ನಡೆಸಿದ ಸಂಭಾಷಣೆಯ ಪ್ರಮುಖ ಅಂಶಗಳು ಇಲ್ಲಿವೆ :

ಭ್ರಷ್ಟಾಚಾರಕ್ಕೆ ಅಂಕುಶ : ಸರ್ಕಾರಿ ನೌಕರರು, ಅಧಿಕಾರಿಗಳು ಮತ್ತು ರಾಜಕಾರಣಿಗಳು ತೆರೆಮರೆಯಲ್ಲಿ ಕೆಲಸ ಮಾಡಿದಾಗ ಮಾತ್ರ ಭ್ರಷ್ಟಾಚಾರ ನಡೆಯುತ್ತದೆ ಎಂದು ಅಂಜಲಿ ಹೇಳುತ್ತಾರೆ. ಪ್ರಜಾಪ್ರಭುತ್ವದಲ್ಲಿ ಜನರು ಮತ ಹಾಕುವ ಮೂಲಕ ಸರ್ಕಾರವನ್ನು ರಚಿಸುತ್ತಾರೆ. ಜನರ ತೆರಿಗೆ ಹಣದಿಂದಲೇ ಸರ್ಕಾರ ನಡೆಯುತ್ತದೆ. ನಾವು ಬಾಲ್ಯದಿಂದಲೂ, `ಪ್ರಜಾಪ್ರಭುತ್ವ ಜನರಿಗಾಗಿ, ಜನರಿಂದ ಮತ್ತು ಜನರಿಗೋಸ್ಕರ ಇರುವಂಥದ್ದು’ ಎಂದು ಓದುತ್ತಾ ಬಂದಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರ ಜನರ ಹೆಸರಿನಲ್ಲಿ ಏನು ಕೆಲಸ ಮಾಡುತ್ತಿದೆ ಎಂಬ ಮಾಹಿತಿ ಜನರಿಗೆ ತಿಳಿಸುವುದು ಬಹಳ ಮುಖ್ಯ. ಆದರೆ ಯಾವಾಗ ಸರ್ಕಾರ ಇವೆಲ್ಲನ್ನೂ ಮರೆಮಾಚುತ್ತದೋ ಮತ್ತು ತೆರೆಮರೆಯಲ್ಲಿ ಕೆಲಸ ಮಾಡುತ್ತದೋ, ಆಗ ಭ್ರಷ್ಟಾಚಾರ ಹುಟ್ಟಿಕೊಳ್ಳುತ್ತದೆ.

ಮಾಹಿತಿ ಹಕ್ಕು ಕಾಯ್ದೆ 2005ರಲ್ಲಿ ಅಂಗೀಕಾರವಾಯಿತು ಮತ್ತು ದೇಶಾದ್ಯಂತ ಜಾರಿಗೆ ಬಂದಿತು. ನಾವು `ಸತರ್ಕ್‌ ನಾಗರಿಕ್‌ಸಂಘಟನ’ದಲ್ಲಿ ಕೆಲಸ ಪ್ರಾರಂಭಿಸಿದೆವು. ಮಹಿಳೆಯರಿಗೆ ಇದು ಅತ್ಯಂತ ಪ್ರಮುಖವಾದ ಕಾನೂನು ಎಂದು ತಿಳಿಸಿದೆ. `ನೀವು ಇದನ್ನು ಬಳಸಿ ಮತ್ತು ಸರ್ಕಾರದಿಂದ ಮಾಹಿತಿಯನ್ನು ಕೇಳಿ’ ಎಂದು ಅವರಿಗೆ ಹೇಳಿದೆ. ಆಗ ಮಹಿಳೆಯರು ಒಂದು ಸಮಸ್ಯೆಯನ್ನು ತಿಳಿಸಿದರು :

`ಪಡಿತರ ಅಂಗಡಿಯವನು, ಸರ್ಕಾರದಿಂದ ನಿಮ್ಮ ಹೆಸರಿಗೆ ಪಡಿತರ ಬಂದಿಲ್ಲ, ಆದ್ದರಿಂದ ನಾವು ನಿಮಗೆ ಪಡಿತರ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾನೆ,’ ಎಂದರು.

ಆಗ ದೆಹಲಿಯಲ್ಲಿ ಪಡಿತರ ವಿಷಯಕ್ಕೆ ಸಂಬಂಧಿಸಿದಂತೆ ಮೊದಲ RTI ಅರ್ಜಿಯನ್ನು ಸಲ್ಲಿಸಲಾಯಿತು. ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ ಇಬ್ಬರು ಮಹಿಳೆಯರು ಈ ಅರ್ಜಿಯನ್ನು ಹಾಕಿದರು. ಆ ಇಬ್ಬರು ಮಹಿಳೆಯರೆಂದರೆ ಜರೀನಾ ಬೇಗಂ ಮತ್ತು ಸುನೀತಾ ದೇವಿ. ಇವರು RTI ಅರ್ಜಿಯ ಮೂಲಕ ಮಾಳವೀಯ ನಗರ ಪ್ರದೇಶದ ಪಡಿತರ ಅಂಗಡಿಗಳ ದಾಖಲೆಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದರು. ಮಾಹಿತಿ ಹೊರಬಂದಾಗ, ಪ್ರತಿ ತಿಂಗಳು ಅಂಗಡಿಗಳಿಗೆ ಪಡಿತರ ತಲುಪುತ್ತಿರುವುದು ಸ್ಟಾಕ್‌ ರಿಜಿಸ್ಟರ್‌ ನಲ್ಲಿ  ಸ್ಪಷ್ಟವಾಗಿ ಕಂಡುಬಂತು.

ಮಾರಾಟದ ರಿಜಿಸ್ಟರ್‌ ನಲ್ಲಿ ಸಂಪೂರ್ಣ ವಂಚನೆ ಬಹಿರಂಗವಾಯಿತು. ಅದರಲ್ಲಿ ಎಲ್ಲಾ ಮಹಿಳೆಯರ ಹೆಸರುಗಳು ಇದ್ದವು. ಅವರಿಗೆ ಪೂರ್ಣ ಪ್ರಮಾಣದ ರೇಷನ್‌ ಸಿಗುತ್ತಿದೆ ಎಂದು ತೋರಿಸಲಾಗಿತ್ತು. ಆದರೆ ಆ ಹೆಸರುಗಳ ಮುಂದೆ ಒಬ್ಬನೇ ವ್ಯಕ್ತಿಯ ಹೆಬ್ಬೆರಳಿನ ಗುರುತನ್ನು ಪದೇ ಪದೇ ಒತ್ತಲಾಗಿತ್ತು. ಪಡಿತರ ಅಂಗಡಿಯವರು ಮಹಿಳೆಯರಿಗೆ ಸುಳ್ಳು ಹೇಳುತ್ತಿದ್ದಾರೆ ಎಂಬುದು ಸ್ಟಾಕ್‌ ರಿಜಿಸ್ಟರ್‌ ನಿಂದ ಸ್ಪಷ್ಟವಾಯಿತು. ಅವರ ಪಾಲಿನ ಪಡಿತರ ಬರುತ್ತಿತ್ತು, ಆದರೆ ಅಂಗಡಿಯವರು ಅಧಿಕಾರಿಗಳ ಜೊತೆ ಶಾಮೀಲಾಗಿ ಆ ಪಡಿತರನ್ನು ಬ್ಲಾಕ್‌ ಮಾರ್ಕೆಟ್‌ ನಲ್ಲಿ ಮಾರಾಟ ಮಾಡುತ್ತಿದ್ದರು.

ಈ ಮಾಹಿತಿ ಬೆಳಕಿಗೆ ಬಂದಾಗ, ತಮಗೆ ಮೊದಲ ಬಾರಿಗೆ ಭ್ರಷ್ಟಾಚಾರದ ಸಾಕ್ಷಿ ಸಿಕ್ಕಿದೆ ಎಂದು ಮಹಿಳೆಯರು ಹೇಳಿದರು. ನಂತರ ಅವರು `ಸತರ್ಕ್‌ ನಾಗರಿಕ್‌ ಸಂಘಟನೆ’ಯೊಂದಿಗೆ ಸೇರಿ ಹಲವಾರು ದೂರುಗಳನ್ನು ನೀಡಿದರು. ಆದರೆ ಆಹಾರ ಇಲಾಖೆಯ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಆನಂತರ ಒಂದು ಸಾರ್ವಜನಿಕ ವಿಚಾರಣೆಯನ್ನು ನಡೆಸಲಾಯಿತು. ಅಲ್ಲಿ ಎಲ್ಲಾ ಪಡಿತರ ಅಂಗಡಿ ಅಧಿಕಾರಿಗಳು, ಮಾಧ್ಯಮದವರು ಮತ್ತು ಪಡಿತರ ಅಂಗಡಿ ಮಾಲೀಕರನ್ನು ಆಹ್ವಾನಿಸಲಾಗಿತ್ತು. ಅಲ್ಲಿ ಮಹಿಳೆಯರು ಮಾಹಿತಿ ಹಕ್ಕು ಕಾಯ್ದೆಯಡಿ ತಮಗೆ ದೊರೆತ ಮಾಹಿತಿಯನ್ನು ಓದಿ ತಿಳಿಸಿದರು. ಮಾರಾಟ ಮತ್ತು ದಾಸ್ತಾನು ರಿಜಿಸ್ಟರ್‌ ಗಳ ಜೊತೆಗೆ ತಮ್ಮ ಪಡಿತರ ಕಾರ್ಡ್‌ ಗಳನ್ನು ತೋರಿಸಿ, ಈ ಎಲ್ಲಾ ಹರಗಣ ಹೇಗೆ ನಡೆಯುತ್ತಿತ್ತು ಎಂಬುದನ್ನು ಸಾಬೀತುಪಡಿಸಿದರು.

ಈ ಎಲ್ಲಾ ವಿಷಯಗಳು ಬೆಳಕಿಗೆ ಬಂದ ತಕ್ಷಣವೇ ಒಂದು ದೊಡ್ಡ ಬದಲಾವಣೆ ಕಂಡುಬಂತು. ಈ ಕಳ್ಳತನದಲ್ಲಿ ಭಾಗಿಯಾಗಿದ್ದ ಅಂಗಡಿಯವರು ಮತ್ತು ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಗಳು ಪ್ರಾರಂಭವಾದವು. ಇದರ ಜೊತೆಗೆ ಎಲ್ಲಾ ಮಹಿಳೆಯರಿಗೂ ಸಮಯಕ್ಕೆ ಸರಿಯಾಗಿ ಪೂರ್ಣ ಪ್ರಮಾಣದ ಪಡಿತರ ಸಿಗಲು ಆರಂಭವಾಯಿತು. ಏಕೆಂದರೆ, `ಮತ್ತೆ ಕಳ್ಳತನ ಮಾಡಿದರೆ ಮಹಿಳೆಯರು ಅದನ್ನು ಬಯಲಿಗೆಳೆಯುತ್ತಾರೆ ಮತ್ತು ತಮ್ಮ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ,’ ಎಂಬ ಭಯ ಭ್ರಷ್ಟರಲ್ಲಿ ಉಂಟಾಯಿತು.

ಮತ್ತೊಂದೆಡೆ ಮಹಿಳೆಯರಿಗೆ RTI ಶಕ್ತಿ ಏನೆಂಬುದು ಅರಿವಾಯಿತು. ಭ್ರಷ್ಟಾಚಾರ ನಡೆಯುತ್ತಿದ್ದರೆ, ಮಾಹಿತಿ ಪಡೆಯುವ ಮೂಲಕ ಅದನ್ನು ಹೇಗೆ ತಡೆಯಬಹುದು ಎಂಬುದು ಅವರಿಗೆ ಅರ್ಥವಾಯಿತು. ಈಗ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದು 20 ವರ್ಷಗಳು ಕಳೆದಿವೆ. ಇಡೀ ದೇಶದಲ್ಲಿ ಪ್ರತಿ ವರ್ಷ ಸುಮಾರು 60 ಲಕ್ಷ RTI ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ. ಜನರು ತಮ್ಮ ಮೂಲಭೂತ ಹಕ್ಕುಗಳಿಗಾಗಿ RTI ಅರ್ಜಿ ಸಲ್ಲಿಸಿ ಮಾಹಿತಿಯನ್ನು ಕೇಳುತ್ತಿದ್ದಾರೆ ಮತ್ತು ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುತ್ತಿದ್ದಾರೆ. ಇದರಿಂದ ಭ್ರಷ್ಟಾಚಾರ ಬಯಲಿಗೆ ಬರುತ್ತಿದೆ.

rti__2_

ವಿಸಿಲ್ ‌ಬ್ಲೋರ್‌ ರಕ್ಷಣೆಯ ಅಗತ್ಯ : ಅಂಜಲಿ ಹೀಗೆ ಹೇಳುತ್ತಾರೆ, `ನಮ್ಮ ದೇಶದ ಲಕ್ಷಾಂತರ ನಾಗರಿಕರು ತಮ್ಮ ಮೂಲಭೂತ ಹಕ್ಕುಗಳನ್ನು ಪಡೆದುಕೊಳ್ಳಲು ಪ್ರತಿ ವರ್ಷ ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸುತ್ತಿದ್ದಾರೆ. ಅದರ ಜೊತೆಗೆ ದೊಡ್ಡ ದೊಡ್ಡ ಹಗರಣಗಳನ್ನು ಬಯಲಿಗೆಳೆಯಲು ಸಹ ಮಾಹಿತಿ ಹಕ್ಕನ್ನು ಬಳಸಲಾಗಿದೆ. ಕಳೆದ 20 ವರ್ಷಗಳಲ್ಲಿ ಬೆಳಕಿಗೆ ಬಂದ ಯಾವುದೇ ದೊಡ್ಡ ಹಗರಣವನ್ನು ನೀವು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಅದು `ಆದರ್ಶ ಹಗರಣ’ವೇ ಇರಲಿ, ಅಲ್ಲಿ ಸೈನ್ಯದ ಸಿಬ್ಬಂದಿಗಳ ಕುಟುಂಬಗಳಿಗೆ ಮತ್ತು ಅವರ ವಿಧವೆಯರಿಗಾಗಿ ಮನೆಗಳನ್ನು ನಿರ್ಮಿಸಲಾಗಿತ್ತು. ಆದರೆ ಆ ಮನೆಗಳನ್ನು ರಾಜಕಾರಣಿಗಳು ಮತ್ತು ಹಿರಿಯ ಅಧಿಕಾರಿಗಳು ತಮಗೆ ಬೇಕಾದವರಿಗೆ ಹಂಚಿಕೆ ಮಾಡಿಕೊಂಡಿದ್ದರು. ಈ ಇಡೀ ಹಗರಣ RTI ಕಾಯ್ದೆಯ ಮೂಲಕವೇ ಬೆಳಕಿಗೆ ಬಂತು. ಅದೇ ರೀತಿ, ವೈದ್ಯಕೀಯ ಸೀಟುಗಳನ್ನು ಭರ್ತಿ ಮಾಡುವಲ್ಲಿ ನಡೆದ ಹಗರಣವನ್ನು ಬಯಲಿಗೆಳೆಯಲು ಸಹ ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಲಾಯಿತು. ಹಾಗೆಯೇ ಕಾಮನ್‌ ವೆಲ್ತ್ ‌ಗೇಮ್ಸ್ ಹಗರಣವನ್ನು ಹೊರತರಲು ಸಹ ಇದರ ಪ್ರಯೋಗ ಮಾಡಲಾಯಿತು.

‘ಅಂಜಲಿ ಪ್ರಕಾರ, RTI ಕಾಯ್ದೆಯು ಅತ್ಯಂತ ಶಕ್ತಿಶಾಲಿ ಹಾಗೂ ಅಧಿಕಾರದಲ್ಲಿರುವ ವ್ಯಕ್ತಿಗಳ ಹೊಣೆಗಾರಿಕೆಯನ್ನು ಖಚಿತಪಡಿಸುವಂತಹ ಒಂದು ಕಾನೂನಾಗಿದೆ. ಸಹಜವಾಗಿಯೇ ಅಧಿಕಾರದಲ್ಲಿರುವವರಿಗೆ ಈ ಕಾನೂನು ಎಳ್ಳಷ್ಟೂ ಇಷ್ಟವಿಲ್ಲ. ಆದ್ದರಿಂದ ಮಾಹಿತಿ ಕೇಳುವವರನ್ನು ಯಾವುದಾದರೂ ಒಂದು ರೀತಿಯಲ್ಲಿ ಮೌನವಾಗಿಸಲು ಅವರು ಸದಾ ಪ್ರಯತ್ನಿಸುತ್ತಿರುತ್ತಾರೆ. ಅವರ ಮೇಲೆ ದಾಳಿಗಳು ನಡೆಯುತ್ತವೆ, ಅವರಿಗೆ ಬೆದರಿಕೆಗಳನ್ನು ಹಾಕಲಾಗುತ್ತದೆ. ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿದ 100ಕ್ಕೂ ಹೆಚ್ಚು ಜನರನ್ನು ಇದುವರೆಗೆ ಹತ್ಯೆ ಮಾಡಲಾಗಿದೆ.

ಕಳೆದ 20 ವರ್ಷಗಳಲ್ಲಿ, ಅವರ ಮೇಲೆ ಹೇಗೆ ನಿರಂತರವಾಗಿ ದಾಳಿಗಳು ನಡೆಯುತ್ತಿವೆ ಎಂಬುದನ್ನು ನಾವು ನೋಡಿದ್ದೇವೆ, ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯನ್ನು ಎತ್ತಿ ತೋರಿಸುವ ವ್ಯಕ್ತಿಗಳ ರಕ್ಷಣೆಗಾಗಿ 2014ರಲ್ಲಿಯೇ ಒಂದು ಕಾನೂನು ಜಾರಿಗೆ ತರಾಯಿತು. ಅತ್ಯಂತ ಸುದೀರ್ಘ ಹೋರಾಟದ ನಂತರ ಆ ಕಾನೂನನ್ನು ಅಂಗೀಕರಿಸಲಾಯಿತು ಆದರೆ ಈಗ ನಾವು 2026ರಲ್ಲಿದ್ದೇವೆ. 1-2 ವರ್ಷಗಳ ನಂತರ ಆ ಕಾನೂನನ್ನು ಸರ್ಕಾರ ಇದುವರೆಗೆ  ಜಾರಿಗೆ ತಂದಿಲ್ಲ. ಅದಕ್ಕೆ ಸಂಬಂಧಿಸಿದ ನಿಮಯಗಳನ್ನು ರೂಪಿಸಿಲ್ಲ ಮತ್ತು ಅಧಿಸೂಚನೆಯನ್ನು ಹೊರಡಿಸಿಲ್ಲ. ಆದ್ದರಿಂದ, ಆ ಕಾನೂನು ಪ್ರಯೋಜನವಿಲ್ಲದೆ ಹಾಗೆಯೇ ಬಿದ್ದಿದೆ. ಕಾಗದದ ಮೇಲೆ ಕಾನೂನು ಇದೆಯಾದರೂ, ಯಾರಿಗೂ ಅದರ ರಕ್ಷಣೆ ಸಿಗುತ್ತಿಲ್ಲ. ಸರ್ಕಾರ ಕೂಡಲೇ ಈ ಕಾನೂನನ್ನು ಜಾರಿಗೆ ತರಬೇಕು.

ಸಿದ್ಧಾಂತ ಮತ್ತು ಪ್ರಾಯೋಗಿಕ ಕಲಿಕೆಯ ನಡುವಿನ ವ್ಯತ್ಯಾಸ : ಸೈದ್ಧಾಂತಿಕವಾಗಿ ನಾವು ಎಷ್ಟೇ ಓದಿದರೂ, ಆ ಸಿದ್ಧಾಂತಗಳಿಂದ ನಾವು ಒಂದು ಮಟ್ಟದ ತಿಳಿವಳಿಕೆಯನ್ನು ಮಾತ್ರ ಬೆಳೆಸಿಕೊಳ್ಳಬಹುದು. ಆದರೆ, ಒಂದು ಭದ್ರವಾದ ಬುನಾದಿ ಸಿಕ್ಕಿದೆ ಎಂದು ನನಗನ್ನಿಸುತ್ತದೆ. ನಾನು ಈವರೆಗೆ ಶಾಲೆ, ಕಾಲೇಜು ಅಥವಾ ಯಾವುದೇ ವಿ.ವಿ.ಯಂತಹ ಶಿಕ್ಷಣ ಸಂಸ್ಥೆಗಳಿಗೆ ಹೋಗಿರಬಹುದು, ಅದರ ತಳಮಟ್ಟದಲ್ಲಿ ಕೆಲಸ ಮಾಡುವುದರಿಂದ ಸಿಗುವ ಅನುಭವ ಮತ್ತು ತಿಳಿವಳಿಕೆ ತುಂಬಾ ವಿಭಿನ್ನವಾದುದು.’

ದೇಶದ ವಾಸ್ತವದ ಅರಿವಾಗುವುದು ನೀವು ತಳಮಟ್ಟದ ಜನರೊಂದಿಗೆ ಬೆರೆತು ಕೆಲಸ ಮಾಡಿದಾಗ ಮಾತ್ರ. `ಸತರ್ಕ್‌ ನಾಗರಿಕ್ ಸಂಘಟನ್‌’ನ ಕೆಲಸ ಸಂಪೂರ್ಣವಾಗಿ ತಳಮಟ್ಟಕ್ಕೆ ಸಂಬಂಧಿಸಿದ್ದು. ನಾವು ದೆಹಲಿಯ ಕೊಳೆಗೇರಿ ಪ್ರದೇಶಗಳಲ್ಲಿ ಕೆಲಸ ಮಾಡುತ್ತೇವೆ. ಜನರ ಸಮಸ್ಯೆಗಳು ಎಂತಹ ಎಂಬುದು ಅಲ್ಲಿ ನಮಗೆ ಅರ್ಥವಾಗುತ್ತದೆ. ನಾವೆಲ್ಲರೂ ಒಟ್ಟಾಗಿ ಕುಳಿತು ಚರ್ಚಿಸಿದಾಗ, ಅವರಿಗೆ ಯಾವುದು ಸರಿ, ಅವರಿಗೆ ಉತ್ತಮವಾದ ಪರಿಹಾರಗಳೇನು ಮತ್ತು ಯಾವ ರೀತಿಯ ನೀತಿನಿಯಮಗಳು ಅಥವಾ ಕಾನೂನುಗಳು ಉತ್ತಮವಾಗಿರುತ್ತವೆ ಎಂಬುದು ತಿಳಿಯುತ್ತದೆ. ತಿಳಿವಳಿಕೆಯು ತಳಮಟ್ಟದಿಂದ ಬಂದಾಗ ಮಾತ್ರ, ಯಾವುದೇ ನೀತಿ ಅಥವಾ ಕಾನೂನು ನಿಜವಾದ ಅರ್ಥದಲ್ಲಿ ಒಂದು ಉತ್ತಮ ರೂಪವನ್ನು ಪಡೆಯಲು ಸಾಧ್ಯವಾಗುತ್ತದೆ,’ ಎನ್ನುತ್ತಾರೆ ಅಂಜಲಿ.

`ನಾನು ಮಾಹಿತಿ ಹಕ್ಕು ಕಾಯಿದೆಯ ರಾಷ್ಟ್ರೀಯ ಅಭಿಯಾನದೊಂದಿಗೂ ಗುರುತಿಸಿಕೊಂಡಿದ್ದೇನೆ. ಈ ಅಭಿಯಾನದ ಮೂಲಕ ನಾವು ದೇಶದ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ನಾನು ಅದರ ಸಹಸಂಯೋಜಕಿಯಾಗಿದ್ದೇನೆ. ಇತ್ತೀಚೆಗಷ್ಟೇ ನಾನು ಭುವನೇಶ್ವರಕ್ಕೆ ಹೋಗಿದ್ದೆ, ಅಲ್ಲಿನ ಜನರ ಸಮಸ್ಯೆಗಳೇನು ಮತ್ತು ಮಾಹಿತಿ ಹಕ್ಕನ್ನು ಅಲ್ಲಿ ಹೇಗೆ ಬಳಸಿಕೊಳ್ಳಬಹುದು ಎಂಬ ಬಗ್ಗೆ ಅವರೊಂದಿಗೆ ಚರ್ಚೆ ನಡೆಸಿದೆ. ನಾವು ಬೇರೆ ಬೇರೆ ಸ್ಥಳಗಳಲ್ಲಿ ಕೆಲಸ ಮಾಡಿದಾಗ ನಮಗೆ ಅಲ್ಲಿನ ನೈಜ ಸಮಸ್ಯೆಗಳ ಅರಿವಾಗುತ್ತದೆ. ಯಾವ ವಿಷಯಗಳಲ್ಲಿ ಕೊರತೆಯಿದೆ? ಆಡಳಿತದಲ್ಲಿ ಎಲ್ಲಿ ತೊಂದರೆಗಳು ಉಂಟಾಗುತ್ತಿವೆ? ಮತ್ತು ಎಂತಹ ಕಾನೂನುಗಳು ಜನರಿಗೆ ನಿಜವಾಗಿಯೂ ಪ್ರಯೋಜನಕಾರಿ ಆಗಬಲ್ಲವು? ಎಂಬುದು ನಮಗೆ ಅರ್ಥವಾಗುತ್ತದೆ. ತಳಮಟ್ಟದ ವಾಸ್ತವದೊಂದಿಗೆ ಸಂಪರ್ಕದಲ್ಲಿರುವುದು ಬಹಳ ಮುಖ್ಯ. ಕೇವಲ ಸೈದ್ಧಾಂತಿಕ ಜ್ಞಾನದಿಂದ ನೀವು ವಿಷಯಗಳನ್ನು ಚೆನ್ನಾಗಿ ಬರೆಯಬಹುದು, ಆದರೆ ನಿಜವಾದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ನೀವು ಜನರನ್ನು ಭೇಟಿಯಾಗಲೇಬೇಕು.’

ಡಿಜಿಟಲ್ ಆಡಳಿತದಲ್ಲಿ RTI ಪಾತ್ರ : ದತ್ತಾಂಶವನ್ನು ಹೇಗೆ ಸಂಗ್ರಹಿಸಿಡಲಾಗಿದೆ ಎಂಬುದು ಮುಖ್ಯಲ್ಲ. ಅದು ಕಾಗದದ ದಾಖಲೆಗಳ ರೂಪದಲ್ಲಿರಬಹುದು. ನಮ್ಮ ದೇಶದಲ್ಲಿ ದಶಕಗಳ ಕಾಲ ಎಲ್ಲ ಕಾಗದದ ಮೇಲೆಯೇ ನಡೆಯುತ್ತಿತ್ತು ಅಥವಾ ಈಗಿನ ಕಂಪ್ಯೂಟರ್‌ ಗಳಲ್ಲಿ ಇವರು ಡಿಜಟಲ್ ರೂಪದಲ್ಲಿರಬಹುದು. ಜನರಿಗೆ ಮಾಹಿತಿ ಹಕ್ಕು ಎಂಬುದು ಅಷ್ಟೇ ಅನಿವಾರ್ಯವಾಗಿದೆ. ಏಕೆಂದರೆ ಜನರ ಬಳಿ ಮಾಹಿತಿ ಇಲ್ಲದಿರುವವರಿಗೆ, ಅವರು ಪ್ರಶ್ನೆಗಳನ್ನು ಕೇಳಲು ಸಾಧ್ಯವಿಲ್ಲ. ಅವರ ಕೈಗೆ ಮಾಹಿತಿ ಸಿಗದ ಹೊರತು, ಅವರು ಯಾವುದೇ ಸರ್ಕಾರವನ್ನು ಹೊಣೆಯಾಗಿಸಲು ಸಾಧ್ಯವಿಲ್ಲ.’

`ನನಗನ್ನಿಸುವಂತೆ, ಮಾಹಿತಿ ಹಕ್ಕು ಮತ್ತು ಪಾರದರ್ಶಕತೆಯ ಅಗತ್ಯ ಈಗ ಮೊದಲಿಗಿಂತಲೂ ಹೆಚ್ಚಾಗಿದೆ. ಏಕೆಂದರೆ, ಹಿಂದೆ ಎಲ್ಲಾ ಮಾಹಿತಿಗಳು ಕಾಗದದ ರೂಪದಲ್ಲಿದ್ದಾಗ, ಜನರು ನೇರವಾಗಿ ಹೋಗಿ ಮಾಹಿತಿಯನ್ನು ಕೇಳಬಹುದಾಗಿತ್ತು. ಉದಾಹರಣೆಗೆ, ಯಾರಾದರೂ ಆಸ್ಪತ್ರೆಗೆ ಹೋಗಿ ನಮಗೆ ದಾಖಲೆಗಳು ಬೇಕು ಎದು ಕೇಳಬಹುದಿತ್ತು. ಪಡಿತರ ಚೀಟಿ ಅಂಗಡಿಗೆ ಹೋಗಿ `ನಿಮ್ಮ ರಿಜಿಸ್ಟರ್‌ ತೋರಿಸಿ’ ಎಂದು ಕೇಳಬಹುದಿತ್ತು. ಶಾಲೆಗೆ ಹೋಗಿ ಹಾಜರಾತಿ ಪುಸ್ತಕನ್ನು ಕೇಳಬಹುದಿತ್ತು. ಆದರೆ ಈಗ ಜನರು ಈ ವಸ್ತುಗಳನ್ನು ಕೇಳಿದಾಗ, `ಇದೆಲ್ಲ ಕಂಪ್ಯೂಟರ್‌ ನಲ್ಲಿದೆ, ಇದನ್ನು ನಿಮಗೆ ಹೇಗೆ ತೋರಿಸುವುದು?’ ಎಂಬ ಉತ್ತರ ಅವರಿಗೆ ಸಿಗುತ್ತಿದೆ.’

`ಈಗ ನಡೆಯುತ್ತಿರುವ ಈ ಸಂಪೂರ್ಣ ಡಿಜಿಟಲೀಕರಣದ ಯುಗದಲ್ಲಿ, ಒಂದು ವಿಷಯವನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಿದೆ. ಅದೇನೆಂದರೆ, ಮಾಹಿತಿ ಪಡೆಯುವ ಜನರ ಹಕ್ಕು ಕಿಂಚಿತ್ತೂ ಕಡಿಮೆಯಾಗಿಲ್ಲ. ನಮ್ಮ ಸಂವಿಧಾನ ಅದೇ ಆಗಿದೆ ಮತ್ತು ನಮ್ಮ ಪ್ರಜಾಪ್ರಭುತ್ವ ಅದೇ ಆಗಿದೆ. ಜನರಿಗೆ ಮಾಹಿತಿ ಸಿಗುವುದು ಬಹಳ ಮುಖ್ಯ, ಅದರಲ್ಲೂ ವಿಶೇಷವಾಗಿ ಅವರು ಓದಿ ಅರ್ಥ ಮಾಡಿಕೊಳ್ಳುವಂತಹ ರೂಪದಲ್ಲಿ ಮಾಹಿತಿ ಸಿಗುವುದು ಅತ್ಯಗತ್ಯ. ನಾನು ನಿಮ್ಮೊಂದಿಗೆ ಒಂದು ಸಣ್ಣ ಅಂಕಿಅಂಶವನ್ನು ಹಂಚಿಕೊಳ್ಳುತ್ತೇನೆ. ಸರ್ಕಾರದ ದತ್ತಾಂಶದ ಪ್ರಕಾರ, ನಮ್ಮ ದೇಶದಲ್ಲಿ ಇಂದಿಗೂ ಕೇವಲ 33% ಮಹಿಳೆಯರು ಮಾತ್ರ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಇಂಟರ್‌ ನೆಟ್‌ ಬಳಸಿದ್ದಾರೆ.’

`ಅಂದರೆ, ನಮ್ಮ ದೇಶದ 67% ಕ್ಕಿಂತ ಹೆಚ್ಚು ಮಹಿಳೆಯರಿಗೆ ಇಂಟರ್‌ ನೆಟ್‌ ಹೇಗೆ ಕೆಲಸ ಮಾಡುತ್ತದೆ ಎಂಬ ಅರಿವೇ ಇಲ್ಲ. ಇಂಟರ್‌ ನೆಟ್‌ ನಲ್ಲಿರುವ ದತ್ತಾಂಶವನ್ನು ಪಡೆಯಲು ಅವರಿಗೆ ಸಾಧ್ಯವಾಗುತ್ತಿಲ್ಲ ಮತ್ತು ಅವರ ಬಳಿ ಕಂಪ್ಯೂಟರ್‌ ಗಳೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಒಂದು ವೇಳೆ ಸರ್ಕಾರ `ನಾವು ಎಲ್ಲಾ ದತ್ತಾಂಶಗಳನ್ನು ಕಂಪ್ಯೂಟರ್‌ ಗೆ ಅಪ್‌ ಲೋಡ್‌ ಮಾಡುತ್ತಿದ್ದೇವೆ,’ ಎಂದು ಹೇಳಿದರೆ, ಅದರರ್ಥ ಆ 67% ಮಹಿಳೆಯರಿಗೆ ಯಾವುದೇ ಮಾಹಿತಿಯೂ ತಲುಪುವುದಿಲ್ಲ ಎಂದೇ ಆಗುತ್ತದೆ.’

`ಮಾಹಿತಿ ಹಕ್ಕು ಅಭಿಯಾನದ ಒಂದು ದೊಡ್ಡ ಉದ್ದೇಶವೇನೆಂದರೆ ಮಾಹಿತಿಯು ಜನರಿಗೆ ಸುಲಭವಾಗಿ ಸಿಗುವಂತಿರಬೇಕು ಮತ್ತು ಅದು ಅವರು ಮಾತನಾಡುವ ಭಾಷೆಯಲ್ಲಿಯೇ ಇರಬೇಕು. ಒಂದು ವೇಳೆ ನೀವು ಅಪಾರ ಪ್ರಮಾಣದ ದತ್ತಾಂಶವನ್ನು ಇಂಟರ್‌ ನೆಟ್‌ ನಲ್ಲಿ ಕೇವಲ ಇಂಗ್ಲಿಷ್‌ ಭಾಷೆಯಲ್ಲಿ ಹಾಕಿದರೆ, ಇಂಗ್ಲಿಷ್‌ ತಿಳಿಯದ, ಇಂಟರ್‌ ನೆಟ್‌ ಬಳಸದ ಅಥವಾ ಕಂಪ್ಯೂಟರ್ ಇಲ್ಲದ ಜನರು ಆ ಮಾಹಿತಿಯಿಂದ ವಂಚಿತರಾಗುತ್ತಾರೆ. ನೀವು ಒಂದುವೇಳೆ ಆದಿವಾಸಿ ಅಥವಾ ಬುಡಕಟ್ಟು ಸಮುದಾಯಕ್ಕೆ ಯಾವುದೋ ಮಾಹಿತಿಯನ್ನು ನೀಡಬೇಕೆಂದಿದ್ದರೆ, ಅಲ್ಲಿಗೆ ಹೋಗಿ ಡೋಲು ಬಾರಿಸಿ ಜನರನ್ನು ಒಗ್ಗೂಡಿಸಿ, ಅವರದ್ದೇ ಭಾಷೆಯಲ್ಲಿ ಆ ವಿಷಯವನ್ನು ತಿಳಿಸಬೇಕಾಗ್ತುತದೆ. `ಇದು ಡಿಜಿಟಲ್ ಯುಗ, ಹಾಗಾಗಿ ನಾವು ಮಾಹಿತಿಯನ್ನು ಇಂಟರ್‌ ನೆಟ್‌ ನಲ್ಲಿ ಹಾಕಿದ್ದೇವೆ. ನೀವೇ ಹೋಗಿ ನೋಡಿಕೊಳ್ಳಿ,’ ಎನ್ನುವುದು ಸರಿಯಾದ ಕ್ರಮವಲ್ಲ.’

ಲೋಕಪಾಲ ಕಾನೂನು : ಅಂಜಲಿ ಹೇಳುತ್ತಾರೆ, `ಲೋಕಪಾಲ ಕಾನೂನು ಬಹಳ ಉತ್ತಮವಾಗಿದೆ. ಆದರೆ ಸರ್ಕಾರಗಳಿಗೆ ತಮ್ಮ ಭ್ರಷ್ಟಾಚಾರಕ್ಕೆ ಅಂಕುಶ ಬೀಳುವುದು ಇಷ್ಟವಿಲ್ಲ. ದೀರ್ಘಕಾಲದ ಮತ್ತು ವ್ಯಾಪಕವಾದ ಹೋರಾಟದ ನಂತರ 2014ರಲ್ಲಿ ಈ ಕಾನೂನು ಜಾರಿಗೆ ಬಂದಿತು. ಆದರೆ 2019ರವರೆಗೆ ಒಬ್ಬನೇ ಒಬ್ಬ ಲೋಕಪಾಲನ ನೇಮಕ ನಡೆಯಲಿಲ್ಲ. ಅಂದರೆ ಐದು ವರ್ಷಗಳ ಕಾಲ ಲೋಕಪಾಲ ಹುದ್ದೆಯನ್ನು ಖಾಲಿ ಇಡಲಾಗಿತ್ತು. ಕೊನೆಗೆ ಲೋಕಪಾಲರ ನೇಮಕಾತಿಯನ್ನು ಮಾಡಿದಾಗ, ಅದು ಎಷ್ಟರಮಟ್ಟಿಗೆ ಸರ್ಕಾರದ ಹಸ್ತಕ್ಷೇಪದಿಂದ ಕೂಡಿತ್ತೆಂದರೆ ಹೆಚ್ಚಿನ ನೇಮಕಾತಿಗಳನ್ನು ಸರ್ಕಾರವೇ ಮಾಡಿತು. ಇಂತಹ ಪರಿಸ್ಥಿತಿಯಲ್ಲಿ, ಇವರು ಸರ್ಕಾರದ ಒತ್ತಡಕ್ಕೆ ಮಣಿದು ಕೆಲಸ ಮಾಡಬಹುದು ಎಂಬ ಆತಂಕ ಜನರಲ್ಲಿ ಮೂಡುವುದು ಸಹಜ. ಈ ರೀತಿಯಾಗಿ, ಈ ಕಾನೂನಿನ ಜಾರಿ ಸರಿಯಾದ ರೀತಿಯಲ್ಲಿ ಆಗಲೇ ಇಲ್ಲ.’

RTI ಮತ್ತು ಮಹಿಳಾ ಸಶಕ್ತೀಕರಣ : ಅಂಜಲಿ ಹೇಳುತ್ತಾರೆ, `ನಮ್ಮ ದೇಶದಲ್ಲಿ ಪ್ರಶ್ನೆ ಕೇಳುವುದು ಸುಲಭವಲ್ಲ. ಅದರಲ್ಲೂ ಮಹಿಳೆಯರಿಗೆ ಇದು ಅತಿ ಹೆಚ್ಚು ಕಷ್ಟಕರಾಗಿದೆ. ಏಕೆಂದರೆ, ನೀವು ಒಬ್ಬ ಮಹಿಳೆಯಾಗಿ ಸರ್ಕಾರನ್ನು ಅಕೌಂಟೆಬಿಲಿಟಿ ಪ್ರಶ್ನಿಸಿದರೆ, `ಇದು ನಿನ್ನ ಕೆಲಸಲ್ಲ’ ಎಂದು ಜನರು ಭಾವಿಸುತ್ತಾರೆ. ನಮ್ಮ ಸಂಘಟನೆಯಲ್ಲಿ ಅಂತಹ ಅನೇಕ ಮಹಿಳೆಯರು ಜೊತೆಗೂಡಿದ್ದಾರೆ. ನಾನು ನಿಮಗೊಂದು ಉದಾಹರಣೆ ನೀಡುತ್ತೇನೆ. ಇಲ್ಲಿನ ಬೇಗಂಪುರ ಕೊಳೆಗೇರಿಯಲ್ಲಿ ನೀರು ಬರುತ್ತಿರಲಿಲ್ಲ. ಅದೊಂದು ದೊಡ್ಡ ಸಮಸ್ಯೆಯಾಗಿತ್ತು. ರಾತ್ರಿ 12 ಅಥವಾ 1 ಗಂಟೆಯ ಸಮಯದಲ್ಲಿ ಕೇವಲ ಒಂದು ಗಂಟೆ ಮಾತ್ರ ನೀರು ಬರುತ್ತಿತ್ತು. ಇದರಿಂದ ಜನರು ಬಹಳ ತೊಂದರೆ ಅನುಭವಿಸುತ್ತಿದ್ದರು.’

`ಮಹಿಳೆಯರು ಹಲವು ಬಾರಿ ಎಂ.ಎಲ್.ಎ ಬಳಿ ಹೋಗಿ, `ನಮಗೆ ನೀರಿನ ಸೌಲಭ್ಯ ಮಾಡಿಕೊಡಿ, ಪೈಪ್‌ ಲೈನ್‌ ಗಳನ್ನು ಅಳವಡಿಸಿಕೊಡಿ,’ ಎಂದು ಕೇಳಿಕೊಂಡರು. ಅದಕ್ಕೆ ಆ ಎಂ.ಎಲ್.ಎ , `ನನ್ನ ಬಳಿ ಹಣವಿಲ್ಲ,’ ಎಂದು ಉತ್ತರಿಸಿದರು. ಆಗ ಮಹಿಳೆಯರು RTI ಅರ್ಜಿ ಸಲ್ಲಿಸಿ, `ಇವರ ಬಳಿ ಯಾವುದೇ ನಿಧಿ ಇಲ್ಲವೇ?’ ಎಂದು ವಿಚಾರಿಸಿದಾಗ ಒಂದು ವಿಷಯ ತಿಳಿಯಿತು. ಅದೇನೆಂದರೆ, `ಎಂ.ಎಲ್.ಎ ಲಾಡ್ಸ್’ ಎಂಬ ಯೋಜನೆಯಡಿ ದೆಹಲಿಯ ಪ್ರತಿ ಎಂ.ಎಲ್.ಎಗೆ ಪ್ರತಿ ವರ್ಷ 5 ಕೋಟಿ ರೂಪಾಯಿ ಅನುದಾನ ಸಿಗುತ್ತದೆ ಎಂಬ ಸತ್ಯ ತಿಳಿದುಬಂತು.’

`ಆಗ ಒಬ್ಬ ಮಹಿಳೆ RTI ಅರ್ಜಿ ಸಲ್ಲಿಸಿ, `ನಮ್ಮ ಕ್ಷೇತ್ರದ ಎಂ.ಎಲ್.ಎ ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು ಹೇಗೆ ಖರ್ಚು ಮಾಡುತ್ತಿದ್ದಾರೆ?’ ಎಂದು ಪ್ರಶ್ನಿಸಿದರು. ಆದರೆ ಅವರಿಗೆ ಮಾಹಿತಿ ನೀಡುವ ಬದಲು, ಇಲಾಖೆಯವರು ವಿಶೇಷವಾಗಿ ಪತ್ರ ಬರೆದು ಅವರನ್ನು ಕರೆಸಿಕೊಂಡು  `ನೀವು ಈ ರೀತಿಯ ಪ್ರಶ್ನೆಗಳನ್ನು ಏಕೆ ಕೇಳುತ್ತಿದ್ದಿರಿ? ನಿಮ್ಮ ಕೆಲಸವೇನಿದ್ದರೂ ಮನೆಯಲ್ಲಿದ್ದುಕೊಂಡು ಕುಟುಂಬದವರ ಸೇವೆ ಮಾಡುವುದಾಗಿರಬೇಕು ಅಷ್ಟೇ.’

`ನೀನಿ ಎಂ.ಎವೇ.ಎಯವರನ್ನು ಯಾಕೆ ಪ್ರಶ್ನಿಸುತ್ತಿದ್ದೀರಿ? ಆ ಹಣ ಹೇಗೆ ಖರ್ಚಾಗುತ್ತಿದೆ ಎಂದು ತಿಳಿದುಕೊಂಡು ನೀವೇನು ಮಾಡುತ್ತೀರಿ?’ ಎಂದು ಅಧಿಕಾರಿಗಳು ಕೇಳಿದರು. ಅದಕ್ಕೆ ಆ ಮಹಿಳೆ ಹೀಗೆ ಉತ್ತರಿಸಿದರು : `ಇದು ನಮ್ಮದೇ ಹಣ. ಒಂದು ವೇಳೆ ನೀವು ನಮಗೆ ಮಾಹಿತಿ ನೀಡದಿದ್ದರೆ, ನಮ್ಮ ಹಿತದೃಷ್ಟಿಯಿಂದ ಅಥವಾ ನಮ್ಮ ಕೆಲಸಗಳಿಗಾಗಿ ಆ ಹಣ ಎಂದಿಗೂ ಖರ್ಚಾಗುವುದೇ ಇಲ್ಲ.’

`ಆ ಹಣ ಏನಾಯಿತು ಎಂದು ಮಹಿಳೆಯರು ಮತ್ತೆ RTI ಮೂಲಕ ಉತ್ತರ ಕೇಳಿದಾಗ, ಒಟ್ಟು ಹಣದ 80% ಭಾಗವನ್ನು ಕಾರಂಜಿಗಳನ್ನು ಅಳವಡಿಸಲು ಖರ್ಚು ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿತು. ತನಿಖೆ ನಡೆಸಿದಾಗ ಶಾಸಕರು ಮತ್ತು ಗುತ್ತಿಗೆದಾರರ ನಡುವೆ ಒಳಸಂಚು ಇರುವುದು ಬೆಳಕಿಗೆ ಬಂತು. ಅವರು ಒಂದು ಕಡೆ ಕಾರಂಜಿಗಳನ್ನು ಅಳವಡಿಸುವುದು, ನಂತರ ಅವುಗಳನ್ನು ಒಡೆಸಿ ಮತ್ತೊಂದು ಕಡೆ ಅಳವಡಿಸುತ್ತಿದ್ದರು. ಈ ಮೂಲಕ ಭಾರಿ ಪ್ರಮಾಣದ ಹಣ ಲೂಟಿಯಾಗುತ್ತಿತ್ತು. ಯಾವಾಗ ಈ ವಿಷಯ ಮಹಿಳೆಯರಿಗೆ ತಿಳಿಯಿತೋ, ಅವರು ಎಲ್ಲಾ ಮಾಹಿತಿಯೊಂದಿಗೆ ಎಂ.ಎಲ್.ಎ ಬಳಿ ಹೋಗಿ, `ನೀವು ನಮಗೆ ನಿಜ ಹೇಳುತ್ತಿರಲಿಲ್ಲ,’ ಎಂದು ನೇರವಾಗಿ ಪ್ರಶ್ನಿಸಿದರು.

`ಆದರೆ ಈಗ ನಮ್ಮ ಬಳಿ ಮಾಹಿತಿ ಇದೆ. ನಾವು ಇನ್ನು ಮುಂದೆ ನಿಮಗೆ ವೋಟು ಹಾಕುವುದಿಲ್ಲ,’ ಎಂದು ಮಹಿಳೆಯರು ಎಚ್ಚರಿಸಿದರು. ಆಗ ಎಂ.ಎಲ್.ಎ ತಕ್ಷಣವೇ ಆ ಕೊಳೆಗೇರಿಗೆ ಹೋಗಿ, ತೆಂಗಿನಕಾಯಿ ಒಡೆದು ಪೈಪ್‌ ಲೈನ್‌ ಅಳವಡಿಸುವ ಯೋಜನೆಯನ್ನು ಪ್ರಾರಂಭಿಸಿದರು. ಈಗ ನೀವು ಬೇಗಂಪುರಕ್ಕೆ ಹೋಗಿ ನೋಡಿದರೆ ಅಲ್ಲಿ ಪೈಪ್‌ ಲೈನ್‌ ಗಳನ್ನು ಅಳವಡಿಸಲಾಗಿದೆ, ಜನರ ಮನೆ ಮನೆಗೆ ನಲ್ಲಿಗಳು ಬಂದಿವೆ ಮತ್ತು ಮಹಿಳೆಯರಿಗೆ ಸೌಲಭ್ಯ ಸಿಕ್ಕಿದೆ. ಈ ಕಾನೂನು ಮಹಿಳೆಯರನ್ನು ಅಕ್ಷರಶಃ ಸಶಕ್ತಗೊಳಿಸಿದೆ.’ ಅವರಿಗೆ 30 ದಿನಗಳ ಒಳಗಾಗಿ ಮಾಹಿತಿ ಲಭ್ಯವಾಗುತ್ತದೆ, ಇದನ್ನು ಬಳಸಿಕೊಂಡು ಅವರು ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಬಹುದು.

ಹತಾಶೆ ಯಾವಾಗ ಉಂಟಾಗುತ್ತದೆ? : ಅಂಜಲಿ ದುಃಖದಿಂದ ಈ ಮಾತುಗಳನ್ನು ಹೇಳುತ್ತಾರೆ, `ಮಾಹಿತಿ ಹಕ್ಕು ಕಾಯಿದೆಯನ್ನೇ ದುರ್ಬಲಗೊಳಿಸಲು ಸರ್ಕಾರಗಳು ಪ್ರಯತ್ನಿಸುತ್ತಿವೆ. ಅದಕ್ಕೆ ತಿದ್ದುಪಡಿಗಳನ್ನು ತಯಾರಾಗುತ್ತಿದೆ. ಇದುವರೆಗೆ ಎರಡು ಬಾರಿ ಈ ಕಾನೂನನ್ನು ತಿದ್ದುಪಡಿ ಮಾಡಲಾಗಿದೆ. ಪ್ರತಿ ಬಾರಿಯೂ ಇದು ದೊಡ್ಡ ನಿರಾಶೆಯನ್ನು ಉಂಟು ಮಾಡುತ್ತದೆ. ಈ ಕಾನೂನಿಗೆ ತಿದ್ದುಪಡಿ ತರುವ ಮೂಲಕ ಸರ್ಕಾರ ಇದನ್ನು ದುರ್ಬಲಗೊಳಿಸುತ್ತಿದೆ. ಉದಾಹರಣೆಗೆ, ಮಾಹಿತಿ ಹಕ್ಕು ಕಾಯಿದೆಯನ್ನು ತಿದ್ದುಪಡಿ ಮಾಡುವಾಗ ಅದರಲ್ಲಿರುವ ಆಯುಕ್ತರ ಸಂಬಳ, ಸೇವಾ ಅವಧಿ ಮತ್ತು ಪಿಂಚಣಿ ಇವೆಲ್ಲವನ್ನೂ ಸರ್ಕಾರ ತನ್ನ ಕೈವಶ ಮಾಡಿಕೊಂಡಿದೆ. ಇದರಿಂದ ಅವರ ಸ್ವತಂತ್ರ ನಿರ್ಧಾರ ಕೈಗೊಳ್ಳುವ ಶಕ್ತಿ ಕುಂಠಿತಗೊಂಡಿದೆ. ಇದು ಈ ಕಾನೂನಿಗೆ ಬಿದ್ದ ದೊಡ್ಡ ಪೆಟ್ಟು, ಏಕೆಂದರೆ ನಮಗೆ ಮಾಹಿತಿ ಸಿಗದಿದ್ದಾಗ ನಾವು ಹೋಗುವುದೇ ಮಾಹಿತಿ ಆಯೋಗದ ಬಳಿ.’

`ಮಾಹಿತಿ ಆಯೋಗ ಸ್ವತಂತ್ರವಾಗಿರಬೇಕು, ಆಗ ಮಾತ್ರ ನಮಗೆ ಮಾಹಿತಿ ನೀಡುವಂತೆ ಅವರು ಸರ್ಕಾರವನ್ನು ಒತ್ತಾಯಿಸಲು ಸಾಧ್ಯವಾಗುತ್ತದೆ. 2019ರಲ್ಲಿ ತಿದ್ದುಪಡಿಯನ್ನು ತರಲಾಯಿತು ಮತ್ತು  ಮಾಹಿತಿ ಆಯುಕ್ತರ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸ ನಡೆಯಿತು. ಇದರಿಂದ ನಮಗೆಲ್ಲರಿಗೂ ಬಹಳ ಹತಾಶೆ ಉಂಟಾಗಿದೆ. ಏಕೆಂದರೆ ನಾವೆಲ್ಲರೂ ಸೇರಿ ಮಾಹಿತಿ ಹಕ್ಕು ಕಾಯಿದೆಗಾಗಿ ಹೋರಾಟ ನಡೆಸಿದ್ದೆವು ವಮತ್ತು ಅದರ ಕರಡನ್ನು ಸಿದ್ಧಪಡಿಸಿದ್ದೆವು. ಮಾಹಿತಿ ಆಯೋಗಗಳಿಗೆ ಅತ್ಯಂತ ಪ್ರಮುಖವಾದ ಸ್ಥಾನವನ್ನು ನೀಡಲಾಗಿತ್ತು.’

ಈಗಷ್ಟೇ 2023ರಲ್ಲಿ ಸರ್ಕಾರ ದತ್ತಾಂಶ ರಕ್ಷಣೆ ಕಾಯಿದೆಯ ಮೂಲಕ ಮತ್ತೊಮ್ಮೆ ಮಾಹಿತಿ ಹಕ್ಕು ಕಾಯಿದೆಯನ್ನು ತಿದ್ದುಪಡಿ ಮಾಡಿದೆ. ಈಗ ನೀವು ಯಾವುದೇ ರೀತಿಯ ಖಾಸಗಿ ಮಾಹಿತಿ ಅಥವಾ ವೈಯಕ್ತಿಕ ಮಾಹಿತಿಯನ್ನು ಕೇಳುವಂತಿಲ್ಲ. ಒಂದು ವೇಳೆ ಯಾರಾದರೂ ತಮ್ಮ ಮನೆಯ ಮುಂದಿನ ರಸ್ತೆ ಹಾಳಾದಾಗ, `ಈ ರಸ್ತೆಯನ್ನು ಯಾವ ಗುತ್ತಿಗೆದಾರ ನಿರ್ಮಿಸಿದ? ಯಾವ ಅಧಿಕಾರಿ ಈ ರಸ್ತೆಯನ್ನು ಪರಿಶೀಲಿಸಿ ಹಣ ಬಿಡುಗಡೆ ಮಾಡಿದರು?’ ಎಂದು RTI ಮೂಲಕ ಪ್ರಶ್ನಿಸಿದರೆ, ಅದನ್ನು ವೈಯಕ್ತಿಕ ಮಾಹಿತಿ ಎಂದು ಪರಿಗಣಿಸುವ ಅಪಾಯವಿದೆ. ಕೇವಲ ಒಂದು ಮಳೆಗೆ ರಸ್ತೆ ಕಿತ್ತು ಹೋದರೂ ಅದರ ವಿವರಗಳನ್ನು ಪಡೆಯುವುದು ಈಗ ಕಷ್ಟವಾಗಬಹುದು.

`ಈಗ ಒಂದು ವೇಳೆ ಜನರಿಗೆ ಯಾರು ಗುತ್ತಿಗೆದಾರ ಅಥವಾ ಅಧಿಕಾರಿ ಎಂದು ನಾವು ಹೇಳುವುದಿಲ್ಲ’ ಎಂದು ಹೇಳಿದರೆ, ಭ್ರಷ್ಟಾಚಾರದ ವಿರುದ್ಧ ಜನರು ಹೋರಾಡುವುದಾದರೂ ಹೇಗೆ? ಈ ರೀತಿಯಾಗಿ ಈ ಕಾನೂನನ್ನು ದುರ್ಬಲಗೊಳಿಸಲಾಗುತ್ತಿದೆ. ಇದನ್ನು ನೋಡಿದರೆ ಒಂದು ವಿಷಯ ಸ್ಪಷ್ಟವಾಗಿ ಅರ್ಥವಾಗುತ್ತದೆ. ಅದೇನೆಂದರೆ, ಸರ್ಕಾರ ಮಾಹಿತಿ ಹಕ್ಕು ಕಾಯಿದೆಗೆ ಹೆದರುತ್ತಿದೆ. ಏಕೆಂದರೆ, ಈ ಕಾಯಿದೆಯು ಜನರನ್ನು ಸಶಕ್ತಗೊಳಿಸುತ್ತದೆ.

ಅಂಜಲಿ ಭಾರದ್ವಾಜ್‌ ಭಾರತದ ಮಾಹಿತಿ ಹಕ್ಕು ಕಾಯ್ದೆ ಚಳುವಳಿಯ ಪ್ರಮುಖ ಮುಖಗಳಲ್ಲಿ ಒಬ್ಬರು. ಈ ಕಾನೂನಿನ ರಚನೆಯಿಂದ ಹಿಡಿದು ತಳಮಟ್ಟದಲ್ಲಿ ಇದನ್ನು ಸಾಮಾನ್ಯ ಜನರ ಅಸ್ತ್ರವನ್ನಾಗಿ ಮಾಡುವವರೆಗೆ ಅವರು ಶ್ರಮಿಸಿದ್ದಾರೆ. ಅವರು ಮಹಿಳೆಯರಿಗೆ ತಮ್ಮ ಧ್ವನಿಯನ್ನು ಎತ್ತುವ ಧೈರ್ಯ ತುಂಬಿದ ಒಬ್ಬ ವಿಶಿಷ್ಟ ವ್ಯಕ್ತಿತ್ವದ ಮಹಿಳೆ. ಮಹಿಳೆಯಾಗಿ ಇಂತಹ ಬೃಹತ್‌ಚಳುವಳಿಯನ್ನು ಮುನ್ನಡೆಸುತ್ತಿರುವುದು ಇತರ ಲಕ್ಷಾಂತರ ಮಹಿಳೆಯರಿಗೆ ಸ್ಛೂರ್ತಿದಾಯಕವಾಗಿದೆ!

ಮಹಿಳೆಯರ ಸಬಲೀಕರಣ!

ಅಂಜಲಿ ಹೇಳುತ್ತಾರೆ, `ನಮ್ಮ ದೇಶದಲ್ಲಿ ಮಹಿಳೆಯರಿಗೆ ಯಾವಾಗಲೂ ದೇವತೆಯ ಸ್ಥಾನ ನೀಡಲಾಗುತ್ತದೆ ಮತ್ತು ಮಹಿಳೆಯರು ಪೂಜನೀಯರು ಎಂದು ಹೇಳಲಾಗುತ್ತದೆ. ಆದರೆ ಪಿತೃಪ್ರಧಾನ ಚಿಂತನೆ ಇರುವ ನಮ್ಮ ಸಮಾಜದಲ್ಲಿ, ಮಹಿಳೆಯರು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ನಮಗೆ ತಿಳಿದಿದೆ. ದೇಶದ ಅತ್ಯಂತ ದುರ್ಬಲ ವರ್ಗ ಯಾವುದಾದರೂ ಇದ್ದರೆ, ಅದು ಯಾವುದೇ ಜಾತಿಯಾಗಿರಲಿ, ಅಲ್ಲಿ ನಾವು ಮಹಿಳೆಯರನ್ನೇ ಕಾಣುತ್ತೇವೆ.’

`ಮಹಿಳೆಯರ ಸಬಲೀಕರಣಕ್ಕಾಗಿ ಇನ್ನೂ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಮಾಹಿತಿ ಹಕ್ಕು ಕಾಯಿದೆಯು ಮಹಿಳೆಯರನ್ನು ಸಾಕಷ್ಟು ಸಶಕ್ತಗೊಳಿಸಿದೆ. `ಸತರ್ಕ್‌ ನಾಗರಿಕ ಯೋಜನೆ’ಯಲ್ಲಿ ಕೆಲಸ ಮಾಡುವಾಗ, ಕೇವಲ ಮಹಿಳೆಯರೊಂದಿಗ ಮಾತ್ರ ಕೆಲಸ ಮಾಡುತ್ತೇವೆ ಎಂದು ಹೇಳುವುದಿಲ್ಲ. ಆದರೆ ಹೆಚ್ಚಾಗಿ ನಮ್ಮ ಸಭೆಗಳಿಗೆ ಮಹಿಳೆಯರೇ ಬರುತ್ತಾರೆ. ಏಕೆಂದರೆ, ಭ್ರಷ್ಟಾಚಾರದ ಕಾರಣದಿಂದ ಮನೆಗೆ ಪಡಿತರ ಬರದಿದ್ದರೆ ಮಕ್ಕಳು ಹಸಿವಿನಿಂದ ಇರಬೇಕಾಗುತ್ತದೆ ಎಂಬುದು ಮಹಿಳೆಯರಿಗೆ ಅರ್ಥವಾಗುತ್ತದೆ. ಸಾರ್ವಜನಿಕ ಶೌಚಾಲಯಗಳು ಸರಿಯಾಗಿ ಕೆಲಸ ಮಾಡದಿದ್ದರೆ ನಮ್ಮ ಹೆಣ್ಣುಮಕ್ಕಳು ಎಲ್ಲಿಗೆ ಹೋಗಬೇಕು ಎಂಬುದು ಮಹಿಳೆಯರಿಗೆ ಅರ್ಥವಾಗುತ್ತದೆ. ಮಾಹಿತಿ ಪಡೆಯಲು ಮತ್ತು ಸರ್ಕಾರದಲ್ಲಿ ಭಾಗೀದಾರರಾಗಲು ಮಹಿಳೆಯರು ಅತ್ಯಂತ ಪ್ರಬಲ ರೀತಿಯಲ್ಲಿ ನಮ್ಮೊಂದಿಗೆ ಕೈ ಜೋಡಿಸುತ್ತಿದ್ದಾರೆ.’

`ಮಹಿಳೆಯರನ್ನು ಸಶಕ್ತಗೊಳಿಸುವ ಇನ್ನೂ ಹೆಚ್ಚಿನ ಕಾನೂನುಗಳು ಬರುವುದು ಬಹಳ ಅವಶ್ಯಕ. ಮಹಿಳೆಯರಿಗೆ ಪ್ರತಿ ಹಂತದಲ್ಲೂ ಮಾಹಿತಿ ಲಭ್ಯವಾಗಬೇಕು. ಅವರ ದೂರು ಮತ್ತು ಸಮಸ್ಯೆಗಳಿಗೆ ಸರಿಯಾದ ಪರಿಹಾರ ಸಿಗಬೇಕು. ಭ್ರಷ್ಟಾಚಾರ ನಿರ್ಮೂಲನೆಯಾದರೆ ಮಹಿಳೆಯರ ಅಭಿವೃದ್ಧಿ ಅತ್ಯಂತ ಸುಲಭ ಸಾಧ್ಯ. ಮಹಿಳೆಯರ ಪ್ರಾತಿನಿಧ್ಯ ಹೆಚ್ಚಿಸುವುದು ಇಂದಿನ ಅಗತ್ಯವಾಗಿದೆ. ನಮ್ಮ ಯಾವುದೇ ವ್ಯವಸ್ಥೆಯನ್ನು ನೋಡಿ ಅದು ನ್ಯಾಯಾಂಗವಿರಲಿ, ಸಂಸತ್ತು ಅಥವಾ ವಿಧಾನಸಭೆ ಇರಲಿ ಅಲ್ಲಿ ಮಹಿಳೆಯರ ಪೂರ್ಣ ಪ್ರಮಾಣದ ಪಾಲುದಾರಿಕೆ ಇಲ್ಲವೇ ಇಲ್ಲ. ಮಹಿಳೆಯರು ಜನಸಂಖ್ಯೆಯ ಅರ್ಧದಷ್ಟಿದ್ದಾರೆ ಎಂದ ಮೇಲೆ, ಅಧಿಕಾರವಿರುವ ಸ್ಥಾನಗಳಲ್ಲೂ ಅವರ ಅರ್ಧದಷ್ಟು ಪಾಲುದಾರಿಕೆ ಇರಲೇಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ, ನಾವು ಇಂದಿಗೂ ಮಹಿಳಾ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದೇವೆ.

`ಸ್ವಾತಂತ್ರ್ಯ ಸಂಗ್ರಾಮವೇ ಇರಲಿ ಅಥವಾ ಯಾವುದೇ ಕ್ಷೇತ್ರವಿರಲಿ, ಮಹಿಳೆಯರು ಎಲ್ಲೆಡೆ ತಮ್ಮ ಪಾಲುಗಾರಿಕೆಯನ್ನು ನೀಡಿದ್ದಾರೆ. ಪ್ರತಿ ಚಳುವಳಿಯಲ್ಲೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಆದರೆ ಇಂದು ಕೂಡ ಮಹಿಳೆಯರಿಗೆ ಸಮಾನ ಸ್ಥಾನಮಾನ ಸಿಗುವುದು ಬಹಳ ಕಷ್ಟಕರವಾಗಿದೆ. ಮಹಿಳೆಯರನ್ನು ನಿಜವಾಗಿಯೂ ಸಶಕ್ತಗೊಳಿಸಬೇಕೆಂದರೆ, ಅವರಿಗೆ ಸಮಾನತೆಯ ಗೌರವ ನೀಡುವುದು ಅತ್ಯಗತ್ಯ.’

RTI ಆಂದೋಲನದ ಸಂದರ್ಭದಲ್ಲಿ ಮಹಿಳಾ ಬೆಂಬಲಿಗರೊಂದಿಗೆ ಅಂಜಲಿ.

ಕಳೆದ 20 ವರ್ಷಗಳಲ್ಲಿ ಬೆಳಕಿಗೆ ಬಂದ ಯಾವುದೇ ದೊಡ್ಡ ಹಗರಣವನ್ನು ನೀವು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಅದು `ಆದರ್ಶ ಹಗರಣ’ವೇ ಇರಲಿ, ಅಲ್ಲಿ ಸೇನಾ ಸಿಬ್ಬಂದಿಗಳ ಕುಟುಂಬಗಳಿಗೆ ಮತ್ತು ಅವರ ವಿಧವೆಯರಿಗಾಗಿ ಮನೆಗಳನ್ನು ನಿರ್ಮಿಸಲಾಗಿತ್ತು. ಆದರೆ ಆ ಮನೆಗಳನ್ನು ರಾಜಕಾರಣಿಗಳು ಮತ್ತು ಹಿರಿಯ ಅಧಿಕಾರಿಗಳು ತಮಗೆ ಬೇಕಾದವರಿಗೆ ಹಂಚಿಕೆ ಮಾಡಿಕೊಂಡಿದ್ದರು. ಈ ಇಡೀ ಹಗರಣ RTI ಕಾಯ್ದೆಯ ಮೂಲಕವೇ ಬೆಳಕಿಗೆ ಬಂದಿತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ