– ರಾಘವೇಂದ್ರ ಅಡಿಗ ಎಚ್ಚೆನ್.
‘ಶಂಕರ ನೀ ಭಯಂಕರ..’ ಹಾಡಿನೊಂದಿಗೆ ರಾಜ್ಯದ ಜಿಲ್ಲೆ ಜಿಲ್ಲೆಗಳನ್ನು ಸುತ್ತಾಡುತ್ತ ಸದ್ದು ಮಾಡುತ್ತಿರುವ ಶೈನ್ ಶೆಟ್ಟಿಯ ಶಂಕರಾಭರಣ ಬಸ್ ಈಗ ಟ್ರೈಲರ್ ಹೊತ್ತು ಬಂದಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸುಮಂತ್ ಭಟ್ ನಿರ್ದೇಶನದ, ಶೈನ್ ಶೆಟ್ಟಿ ನಟನೆಯ ಶಂಕರಾಭರಣ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಈಗಾಗಲೇ ಟೀಸರ್ ಮತ್ತು ಹಾಡುಗಳ ಮೂಲಕ ಭಾರಿ ಕುತೂಹಲ ಮೂಡಿಸಿದ್ದ ಶಂಕರಾಭರಣ ಸದ್ಯ ರಿಲೀಸ್ ಆಗಿರುವ ಟ್ರೈಲರ್ ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ಈ ಸಿನಿಮಾದಲ್ಲಿ ಶೈನ್ ಶೆಟ್ಟಿ ಶಂಕರಾಭರಣ ಬಸ್ನ ಡ್ರೈವರ್ ಆಗಿ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ನಿರ್ದೇಶಕ ಸುಮಂತ್ ಭಟ್ ಮೊದಲ ಬಾರಿಗೆ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾಗೆ ಆಕ್ಷನ್ ಕಟ್ ಹೇಳುವ ಮೂಲಕ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲು ಸಜ್ಜಾಗಿದ್ದಾರೆ.

ಈ ಸಿನಿಮಾದಲ್ಲಿ ಪಾತ್ರಗಳು ಎಷ್ಟು ಮುಖ್ಯವೋ ಹಾಗೆ ಶಂಕರಾಭರಣ ಬಸ್ಗೂ ಅಷ್ಟೆ ಪ್ರಾಮುಖ್ಯತೆ ಇದೆ. ಸದ್ಯ ರಿಲೀಸ್ ಆಗಿರುವ ಆಗಿರುವ ಟ್ರೈಲರ್ ನೊಡುತ್ತಿದ್ದರೆ ಇದೊಂದು ಹಾರರ್ ಥ್ರಿಲ್ಲರ್ ಸಿನಿಮಾ ಎನ್ನುವುದು ಗೊತ್ತಾಗುತ್ತಿದೆ. ಸಂಪತ್ ಕುಮಾರ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕರಾವಳಿ ಮತ್ತು ಮಲೆನಾಡಿ ಭಾಗಗಳಲ್ಲಿ ಖಾಸಗಿ ಬಸ್ಗಳ ಪ್ರಾಬಲ್ಯ ಇನ್ನು ಇದೆ. ಈ ಸಿನಿಮಾದ ಕಥೆ ಕೂಡ ಕರಾವಳಿ ಭಾಗದ ಸುತ್ತ ಮುತ್ತವೇ ಸಾಗುತ್ತೆ. ಸಾಲ ಮಾಡಿ ಬಸ್ ಕೊಂಡುಕೊಳ್ಳುವ ಖಾಸಗಿ ಬಸ್ ಓನರ್ಗಳ ಕಷ್ಟಗಳು, ಡ್ರೈವರ್ ಆಗಿ ಏನೆಲ್ಲ ಕಷ್ಟಗಳನ್ನುಎದುರಿಸಬೇಕಾಗುತ್ತೆ ಎನ್ನುವುದರ ಜೊತೆಗೆ ಹಾರರ್ ಟಚ್ ಅನ್ನು ನೀಡಲಾಗಿದೆ.
ಸಂಪೂರ್ಣ ಸಿನಿಮಾ ಕರಾವಳಿ ಭಾಗದ ಸುತ್ತಮುತ್ತವೆ ಚಿತ್ರೀಕರಣ ಮಾಡಲಾಗಿದೆ. ಇನ್ನು ವಿಶೇಷ ಎಂದರೆ ಈ ಸಿನಿಮಾಗೆ ಶೈನ್ ಶೆಟ್ಟಿ ಹೀರೋ ಮಾತ್ರವಲ್ಲದೆ ಈ ಸಿನಿಮಾದ ಕಥೆ ಕೂಡ ಅವರದ್ದೆ. ತಮ್ಮ ಜೀವನದಲ್ಲಿ ಹಾಗೂ ತಮ್ಮ ಸುತ್ತಮುತ್ತ ನೋಡಿದ ಒಂದಷ್ಟು ಅನುಭವವಗಳನ್ನೂ ಸೇರಿಸಿ ಈ ಸಿನಿಮಾದ ಕಥೆ ರಚಿಸಿದ್ದಾರೆ. ಶೈನ್ ಕಥೆಗೆ ಅಷ್ಟೆ ಸುಂದರವಾಗಿ ದೃಶ್ಯ ರೂಪ ಕೊಟ್ಟಿದ್ದಾರೆ ನಿರ್ದೇಶಕ ಸುಮಂತ್ ಭಟ್.

ಶಂಕರಾಭರಣ ಸಿನಿಮಾ ಮೂಲಕ ಶೈನ್ ಹೀರೋ ಆಗಿ ತೆರೆಮೇಲೆ ಮಿಂಚಲು ರೆಡಿಯಾಗಿದ್ದಾರೆ. ಜೊತೆಗೆ ಶೈನ್ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಹೌದು ಶಂಕರಾಭರಣ ಸಿನಿಮಾ ಮೂಲಕ ಶೈನ್ ನಿರ್ಮಾಪಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ರಂಗಸ್ಥಳ ಸ್ಟುಡಿಯೋ ಬ್ಯಾನರ್ ನಡಿ ದಿವಾಕರ್ ಶೆಟ್ಟಿ ಹಾಗೂ ಶೈನ್ ಶೆಟ್ಟಿ ಇಬ್ಬರೂ ಸೇರಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಉತ್ತಮ ಸಿನಿಮಾಗಳನ್ನು ನಿರ್ಮಾಣ ಮಾಡುವ ಕನಸುಕಂಡಿರುವ ರಂಗಸ್ಥಳ ಸ್ಟುಡಿಯೋ ಶಂಕರಾಭರಣ ಮೂಲಕ ಮೊದಲ ಹೆಜ್ಜೆ ಇಟ್ಟಿದೆ.
ಇನ್ನೂ ಸಿನಿಮಾದ ನಾಯಕಿ ಪಾತ್ರದಲ್ಲಿ ತನ್ವಿ ರಾಮ್ ಕಾಣಿಸಿಕೊಂಡಿದ್ದಾರೆ. ಮಲಯಾಳಂನಲ್ಲಿ 17ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ತನ್ವಿ ರಾಮ್ ಇದೀಗ ಶೈನ್ ಜೊತೆ ಶಂಕರಾಭರಣ ಬಸ್ ಏರಿ ಕನ್ನಡಕ್ಕೆ ಬಂದಿದ್ದಾರೆ. ಇನ್ನು ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಪತ್ನಿ ಕೃತಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಚರಣ್ ರಾಜ್ ಶಂಕರಾಭರಣ ಸಿನಿಮಾಗೆ ಸಂಗೀತ ನೀಡಿದ್ದಾರೆ.





