ಒಂದು ಪ್ರಶ್ನೆ… ಒಂದು ವಿಚಿತ್ರ ಮದುವೆ… ಒಂದು ಅದ್ಭುತ ಉತ್ತರ!
ಒಂದು ಕಾಲದಲ್ಲಿ ಒಬ್ಬ ವ್ಯಕ್ತಿಗೆ ಮರಣದಂಡನೆ ವಿಧಿಸಲಾಗಿತ್ತು. ಗಲ್ಲಿಗೇರಿಸುವ ದಿನ ಹತ್ತಿರ ಬಂದಿತ್ತು. ಕೊನೆಯ ಕ್ಷಣದಲ್ಲಿ ಮಹಾರಾಜ ಅವನನ್ನು ಕರೆಸಿ,
“ನಿನಗೊಂದು ಕೊನೆಯ ಅವಕಾಶ ಕೊಡುತ್ತೇನೆ. ನನ್ನ ಪ್ರಶ್ನೆಗೆ ಸರಿಯಾದ ಉತ್ತರ ನೀಡಿದರೆ ನಿನ್ನ ಪ್ರಾಣ ಉಳಿಸುತ್ತೇನೆ” ಎಂದ.
ಪ್ರಾಣಭಯದಲ್ಲಿದ್ದ ಆ ವ್ಯಕ್ತಿ ಕೈಮುಗಿದು,
“ಕೇಳಿ ಮಹಾರಾಜರೇ, ಉತ್ತರ ಗೊತ್ತಿದ್ದರೆ ಖಂಡಿತ ಹೇಳುತ್ತೇನೆ. ಈಗ ನನ್ನ ಪ್ರಾಣ ಉಳಿಯುವುದೊಂದೇ ಮುಖ್ಯ!” ಎಂದ.
ರಾಜ ಸ್ವಲ್ಪ ಮುಗುಳ್ನಕ್ಕು ಕೇಳಿದ.
“ಹೇಳು, ಹೆಣ್ಣು ನಿಜವಾಗಿ ಏನನ್ನು ಬಯಸುತ್ತಾಳೆ?”
ಪ್ರಶ್ನೆ ಕೇಳಿದ ವ್ಯಕ್ತಿ ಒಂದು ಕ್ಷಣ ದಂಗಾದ. ಯುದ್ಧದ ರಹಸ್ಯವಾಗಲಿ, ರಾಜ್ಯದ ಸಮಸ್ಯೆಯಾಗಲಿ ಆಗಿದ್ದರೆ ಏನಾದರೂ ಹೇಳಬಹುದಿತ್ತು. ಆದರೆ ಇದು ಹೆಣ್ಣಿನ ಮನಸ್ಸಿನ ಪ್ರಶ್ನೆ!
“ಮಹಾರಾಜರೇ, ಇದಕ್ಕೆ ಉತ್ತರ ಹುಡುಕಲು ಸ್ವಲ್ಪ ಕಾಲಾವಕಾಶ ಬೇಕು.”
ರಾಜ ಒಂದು ವರ್ಷದ ಗಡುವು ನೀಡಿದ.
ಆತ ಊರೂರು ಅಲೆದ. ಪಂಡಿತರನ್ನು, ಕವಿಗಳನ್ನು, ಅನುಭವಿಗಳನ್ನೆಲ್ಲ ಕೇಳಿದ.
ಒಬ್ಬ ಪಂಡಿತ, “ಹೆಣ್ಣು ಚಿನ್ನಾಭರಣ ಬಯಸುತ್ತಾಳೆ” ಎಂದ.
ಮತ್ತೊಬ್ಬ, “ಅಧಿಕಾರ ಮತ್ತು ಗೌರವ ಬಯಸುತ್ತಾಳೆ” ಎಂದ.
ಸಂಸಾರಿಯೊಬ್ಬ, “ಪ್ರೀತಿ, ಮಕ್ಕಳು, ಸುಖದ ಸಂಸಾರ ಬಯಸುತ್ತಾಳೆ” ಎಂದ.
ಎಲ್ಲರ ಮಾತು ಕೇಳಿದ ಮೇಲೆ ಅವನಿಗೆ ಒಂದು ಸಂದೇಹ ಉಳಿಯಿತು.
‘ಇಷ್ಟೆಲ್ಲ ಹೇಳಿದರೂ ಹೆಣ್ಣಿನ ಮನಸ್ಸಿನ ನಿಜವಾದ ಆಸೆ ಯಾವುದೆಂದು ಯಾರಿಗೂ ಖಚಿತವಾಗಿ ಗೊತ್ತಿಲ್ಲವಲ್ಲ!’

ಕೊನೆಗೆ ಒಬ್ಬ ವೃದ್ಧ ಅವನಿಗೆ ಒಂದು ರಹಸ್ಯ ಹೇಳಿದ.
“ಮಗನೇ, ನಿನ್ನ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ದೂರದ ಕಾಡಿನಲ್ಲಿರುವ ಒಬ್ಬ ರಾಕ್ಷಸಿಯನ್ನು ಭೇಟಿಯಾಗಬೇಕು. ಅವಳಿಗೆ ಹೆಣ್ಣಿನ ಮನಸ್ಸಿನ ಸಂಪೂರ್ಣ ಅರಿವಿದೆ.”
ಸಾವಿನ ದಿನ ಹತ್ತಿರವಾಗುತ್ತಿದ್ದುದರಿಂದ ಆತ ಧೈರ್ಯ ಮಾಡಿ ಕಾಡಿಗೆ ಹೊರಟ.
ಅಲ್ಲಿ ಒಂದು ದೊಡ್ಡ ಮರದ ಕೆಳಗೆ ಭಯಂಕರ ರೂಪದ ರಾಕ್ಷಸಿ ಕುಳಿತಿದ್ದಳು.
“ಯಾರಯ್ಯ ನೀನು? ನನ್ನ ಕಾಡಿಗೆ ಏಕೆ ಬಂದಿದ್ದೀಯ?” ಎಂದು ಗರ್ಜಿಸಿದಳು.
ಆತ ನಡುಗುತ್ತಲೇ ತನ್ನ ಕಥೆಯನ್ನೆಲ್ಲ ಹೇಳಿದ.
ಅದನ್ನು ಕೇಳಿದ ರಾಕ್ಷಸಿ ಜೋರಾಗಿ ನಕ್ಕಳು.
“ಹಹ್ಹಾ! ಇಷ್ಟು ಸಣ್ಣ ಪ್ರಶ್ನೆಗೆ ಇಡೀ ವರ್ಷ ಅಲೆದಾಡುತ್ತಿದ್ದೀಯಾ? ಉತ್ತರ ನನಗೆ ಗೊತ್ತು. ಆದರೆ ಒಂದು ಷರತ್ತು ಇದೆ.”
“ಏನದು?” ಎಂದು ಆತ ಆತಂಕದಿಂದ ಕೇಳಿದ.
“ನೀನು ನನ್ನನ್ನು ಮದುವೆಯಾಗಬೇಕು!”
ಅವನಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಯಿತು.
ಒಂದೆಡೆ ರಾಜನ ಗಲ್ಲು, ಮತ್ತೊಂದೆಡೆ ರಾಕ್ಷಸಿಯ ಮದುವೆ!

‘ರಾಜನ ಕೈಯಲ್ಲಿ ಸಾಯುವುದಕ್ಕಿಂತ ಇವಳ ಜೊತೆ ಬದುಕಲು ಪ್ರಯತ್ನಿಸುವುದೇ ಮೇಲು’ ಎಂದುಕೊಂಡು ಅನಿವಾರ್ಯವಾಗಿ ಒಪ್ಪಿಕೊಂಡ.
ಮದುವೆಯೂ ನಡೆಯಿತು.
ಮೊದಲ ರಾತ್ರಿಯಂದು ರಾಕ್ಷಸಿ ಅವನ ಮುಂದೆ ಒಂದು ವಿಚಿತ್ರ ಪ್ರಸ್ತಾಪವಿಟ್ಟಳು.
“ನೋಡು ಪತಿರಾಯ, ನೀನು ನನ್ನನ್ನು ಮದುವೆಯಾದ ಸಂತೋಷಕ್ಕೆ ನಿನಗೊಂದು ವರ ಕೊಡುತ್ತೇನೆ. ನಾನು ದಿನದ ಹನ್ನೆರಡು ಗಂಟೆ ಸುಂದರ ದೇವಕನ್ಯೆಯಾಗಿರುತ್ತೇನೆ. ಉಳಿದ ಹನ್ನೆರಡು ಗಂಟೆ ಭಯಂಕರ ರಾಕ್ಷಸಿಯಾಗಿರುತ್ತೇನೆ. ಹೇಳು, ನಿನ್ನ ಇಷ್ಟದಂತೆ ಹಗಲಿನಲ್ಲಿ ರಾಕ್ಷಸಿಯಾಗಿರಬೇಕೋ, ರಾತ್ರಿಯಲ್ಲಿ ರಾಕ್ಷಸಿಯಾಗಿರಬೇಕೋ?”
ಅವನಿಗೆ ಈಗ ನಿಜವಾದ ಸಂಕಟ ಶುರುವಾಯಿತು!
‘ಹಗಲಿನಲ್ಲಿ ರಾಕ್ಷಸಿಯಾದರೆ ಊರಿನವರು ನನ್ನನ್ನು ನೋಡಿ ನಗುತ್ತಾರೆ. ರಾತ್ರಿಯಲ್ಲಿ ರಾಕ್ಷಸಿಯಾದರೆ ಮನೆಯಲ್ಲಿ ನೆಮ್ಮದಿಯಿಂದ ನಿದ್ದೆ ಮಾಡುವುದೂ ಸಾಧ್ಯವಿಲ್ಲ!’

ಸ್ವಲ್ಪ ಹೊತ್ತು ಯೋಚಿಸಿದ.
ನಂತರ ನಿಧಾನವಾಗಿ ಹೇಳಿದ.
“ನೋಡು, ನಿನ್ನ ರೂಪ ಹೇಗಿರಬೇಕು ಎಂದು ನಿರ್ಧರಿಸುವ ಹಕ್ಕು ನನಗೇಕೆ? ಯಾವಾಗ ದೇವಕನ್ಯೆಯಾಗಿರಬೇಕು ಅನಿಸುತ್ತದೋ ಆಗ ಹಾಗಿರು. ಯಾವಾಗ ರಾಕ್ಷಸಿಯಾಗಿರಬೇಕು ಅನಿಸುತ್ತದೋ ಆಗ ಹಾಗಿರು. ಅದು ನಿನ್ನ ಜೀವನ, ನಿನ್ನ ಆಯ್ಕೆ. ನಿನ್ನ ಇಷ್ಟದಂತೆ ಬದುಕು. ನಾನು ನಿನ್ನ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುವುದಿಲ್ಲ.”
ಈ ಮಾತು ಕೇಳಿದ ರಾಕ್ಷಸಿಯ ಕಣ್ಣುಗಳು ತೇವಗೊಂಡವು.
ಮರುಕ್ಷಣವೇ ಅವಳ ಭಯಂಕರ ರೂಪ ಬದಲಾಯಿತು. ಸುಂದರ ದೇವಕನ್ಯೆಯಾಗಿ ಅವನ ಮುಂದೆ ನಿಂತಳು.
“ನೀನು ನನ್ನ ರೂಪಕ್ಕಿಂತ ನನ್ನ ಮನಸ್ಸಿಗೆ ಗೌರವ ಕೊಟ್ಟೆ. ನನ್ನನ್ನು ಹೇಗಿರಬೇಕು ಎಂದು ನಿರ್ದೇಶಿಸುವ ಬದಲು, ನಾನೇ ನಿರ್ಧರಿಸುವ ಸ್ವಾತಂತ್ರ್ಯ ಕೊಟ್ಟೆ. ಅದಕ್ಕಾಗಿಯೇ ಇನ್ನು ಮುಂದೆ ನಾನು ಸದಾ ನಿನಗೆ ದೇವಕನ್ಯೆಯಾಗಿಯೇ ಇರುತ್ತೇನೆ.”
ಅವಳು ಮುಂದುವರಿಸಿದಳು.
“ರಾಜ ಕೇಳಿದ ಪ್ರಶ್ನೆಗೆ ಉತ್ತರ ಇದೇ. ಹೆಣ್ಣು ಚಿನ್ನವನ್ನಷ್ಟೇ ಬಯಸುವುದಿಲ್ಲ, ಅಧಿಕಾರವನ್ನೂ ಬಯಸುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಅಸ್ತಿತ್ವಕ್ಕೆ ಗೌರವ, ತನ್ನ ನಿರ್ಧಾರಗಳಿಗೆ ಮಾನ್ಯತೆ ಮತ್ತು ತನ್ನ ಇಷ್ಟದಂತೆ ಬದುಕುವ ಸ್ವಾತಂತ್ರ್ಯವನ್ನು ಬಯಸುತ್ತಾಳೆ.”
ಮರುದಿನ ಆತ ರಾಜನ ಆಸ್ಥಾನಕ್ಕೆ ತೆರಳಿ ನಡೆದ ಸಂಗತಿಯನ್ನೆಲ್ಲ ವಿವರಿಸಿ ಉತ್ತರ ನೀಡಿದ.
ರಾಜ ಸಂತೋಷದಿಂದ,
“ನೀನು ನನ್ನ ಪ್ರಶ್ನೆಗೆ ಉತ್ತರ ಕಂಡುಕೊಂಡಿದ್ದೀಯ. ಮಾತು ಉಳಿಸಿಕೊಂಡಂತೆ ನಿನ್ನ ಪ್ರಾಣವೂ ಉಳಿಯಿತು!” ಎಂದು ಅವನನ್ನು ಬಿಡುಗಡೆ ಮಾಡಿದ.
ಕೊನೆಯ ಮಾತು…
ಈ ಕಥೆಯನ್ನು ಕೇಳಿದ ಒಬ್ಬ ಹಿರಿಯ ಗಂಡಸು ತನ್ನ ಸ್ನೇಹಿತನಿಗೆ ಹೇಳಿದನಂತೆ:
“ಮದುವೆಯಾದ ಹೊಸತರಲ್ಲಿ ಹೆಂಡತಿಯ ಮುಖದಲ್ಲಿ ದೇವಕನ್ಯೆಯನ್ನೇ ಕಾಣುತ್ತೇವೆ. ಕೆಲವು ವರ್ಷಗಳ ನಂತರ ಅದೇ ಮುಖದಲ್ಲಿ ರಾಕ್ಷಸಿಯ ದರ್ಶನವಾಗುವುದೇಕೆ ಗೊತ್ತಾ?”
ಸ್ನೇಹಿತ ಕುತೂಹಲದಿಂದ ಕೇಳಿದ.
“ಏಕೆ?”
“ಆರಂಭದಲ್ಲಿ ಅವಳ ಇಷ್ಟಕ್ಕೆಲ್ಲಾ ತಲೆದೂಗುತ್ತೇವೆ. ನಂತರ ಅವಳ ಪ್ರತಿಯೊಂದು ಇಷ್ಟಕ್ಕೂ ಅಡ್ಡಗಾಲು ಹಾಕಲು ಶುರುಮಾಡುತ್ತೇವೆ. ದೇವಕನ್ಯೆಯನ್ನು ರಾಕ್ಷಸಿಯನ್ನಾಗಿ ಮಾಡುವ ನಮ್ಮ ಪ್ರಯತ್ನವೇ ಅದು!”
ಇಬ್ಬರೂ ಜೋರಾಗಿ ನಕ್ಕರಂತೆ!
ಆದರೆ ಆ ನಗುವಿನ ಹಿಂದೆ ಒಂದು ಗಂಭೀರ ಸತ್ಯವೂ ಅಡಗಿದೆ.
ಸಂಸಾರವೆಂದರೆ ಒಬ್ಬರು ಇನ್ನೊಬ್ಬರನ್ನು ತಮ್ಮ ಇಷ್ಟದಂತೆ ಬದಲಾಯಿಸುವುದಲ್ಲ; ಇಬ್ಬರೂ ಪರಸ್ಪರರ ಇಷ್ಟ, ಸ್ವಭಾವ ಮತ್ತು ಸ್ವಾತಂತ್ರ್ಯವನ್ನು ಗೌರವಿಸುತ್ತಾ ಬದುಕುವುದು.
ಹೆಣ್ಣಿಗೆ ಬೇಕಾಗಿರುವುದು ಸದಾ ತನ್ನ ಮಾತೇ ನಡೆಯಬೇಕೆಂಬ ಹಠವಲ್ಲ; ತನ್ನ ಮಾತಿಗೂ ಬೆಲೆ ಇರಬೇಕೆಂಬ ಆಸೆ.
ಗಂಡನಿಗೂ ಇದೇ ಗೌರವ ಅನ್ವಯಿಸುತ್ತದೆ.
ಏಕೆಂದರೆ ಸುಂದರ ಸಂಸಾರ ನಿರ್ಮಾಣವಾಗುವುದು ಅಧಿಕಾರದಿಂದಲ್ಲ, ಪರಸ್ಪರ ಗೌರವದಿಂದ!
ಸತ್ಯನಾರಾಯಣ ರಾವ್





