–  ರಾಘವೇಂದ್ರ ಅಡಿಗ ಎಚ್ಚೆನ್.  

ಸಾರ್ವಜನಿಕ ಸಮಾರಂಭಗಳು, ದೇವಾಲಯಗಳು, ಮದುವೆ ಮಂಟಪಗಳು ಹಾಗೂ ಇತರ ನಟರ ಕಾರ್ಯಕ್ರಮಗಳಲ್ಲಿ ‘ಡಿ-ಬಾಸ್’ ಹೆಸರಿನಲ್ಲಿ ಕೆಲ ಅಭಿಮಾನಿಗಳು ಮಾಡುತ್ತಿರುವ ಅತಿರೇಕದ ವರ್ತನೆಗೆ ಕಡಿವಾಣ ಹಾಕಲು ನಟ ದರ್ಶನ್ ಅವರ ಅಧಿಕೃತ ಬಳಗ ಮುಂದಾಗಿದೆ. ಇತರ ನಟರು ಮತ್ತು ಗಣ್ಯರ ಕಾರ್ಯಕ್ರಮಗಳಲ್ಲಿ ಅನಗತ್ಯವಾಗಿ ‘ಡಿ-ಬಾಸ್’ ಎಂದು ಕೂಗಿ ಮುಜುಗರ ಸೃಷ್ಟಿಸಬಾರದು ಎಂದು ‘ಡಿ ಕಂಪನಿ’ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿದೆ.

ಕಳೆದ ಭಾನುವಾರ ಮಂಡ್ಯದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ನಟ ಧ್ರುವ ಸರ್ಜಾ ಹಾಗೂ ಶಾಸಕ ರವಿ ಗಣಿಗ ವೇದಿಕೆಯಲ್ಲಿದ್ದರು. ಈ ವೇಳೆ ಕೆಲವರು ಅನಗತ್ಯವಾಗಿ ‘ಡಿ-ಬಾಸ್’ ಎಂದು ಕೂಗಿ ಗದ್ದಲ ಸೃಷ್ಟಿಸಿದ್ದರು. ಇದರಿಂದ ಅಸಮಾಧಾನಗೊಂಡ ಶಾಸಕ ರವಿ ಗಣಿಗ, ಅಭಿಮಾನಿಗಳ ಅತಿರೇಕದ ವರ್ತನೆಯಿಂದಲೇ ದರ್ಶನ್ ಇಂದು ಜೈಲು ಸೇರುವಂತಾಯಿತು ಎಂದು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಇದಕ್ಕೂ ಮೊದಲು ರಾಮನಗರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲೂ ಕೆಲವರು ಇದೇ ರೀತಿ ಘೋಷಣೆ ಕೂಗಿದ್ದರು. ಆಗ ಡಿಕೆಶಿ ವೇದಿಕೆಯಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದರು.

ಮದುವೆ ಸಮಾರಂಭವೊಂದರಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕಾಣಿಸಿಕೊಂಡಾಗಲೂ ಅಭಿಮಾನಿಗಳು ‘ಡಿ-ಬಾಸ್’ ಎಂದು ಕೂಗಿದ್ದರು. ಈ ವೇಳೆ ವಿಜಯಲಕ್ಷ್ಮಿ ಕೂಡ ಬೇಸರ ವ್ಯಕ್ತಪಡಿಸಿ, ದಯವಿಟ್ಟು ಹೀಗೆ ಕೂಗಬೇಡಿ. ಇಂತಹ ವರ್ತನೆಗಳಿಂದಲೇ ಅವರಿಗೆ ತೊಂದರೆಯಾಗುತ್ತಿದೆ ಎಂದು ಅಭಿಮಾನಿಗಳಿಗೆ ತಿಳಿಹೇಳಿದ್ದರು.

ಇದೀಗ ಮಂಡ್ಯದಲ್ಲಿ ನಡೆದ ಘಟನೆಯ ಬೆನ್ನಲ್ಲೇ ದರ್ಶನ್ ಅವರ ಅಧಿಕೃತ ಡಿಜಿಟಲ್ ವೇದಿಕೆಯಾದ ‘ಡಿ ಕಂಪನಿ’ ವಿಜಯಲಕ್ಷ್ಮಿ ಅವರ ಹಿಂದಿನ ಮನವಿಯನ್ನು ಮತ್ತೊಮ್ಮೆ ಪುನರುಚ್ಚರಿಸಿದೆ. ಬೇರೆ ನಟರ ವೇದಿಕೆ, ಸಿನಿಮಾ ಕಾರ್ಯಕ್ರಮಗಳು ಅಥವಾ ಸಾರ್ವಜನಿಕ ಸಭೆಗಳಲ್ಲಿ ದರ್ಶನ್ ಹೆಸರನ್ನು ಅನಗತ್ಯವಾಗಿ ಕೂಗಬಾರದು. ನೆಚ್ಚಿನ ನಟನ ಮೇಲಿನ ಪ್ರೀತಿ ಮತ್ತು ಅಭಿಮಾನವನ್ನು ತಾಳ್ಮೆ ಹಾಗೂ ಶಿಸ್ತಿನಿಂದ ತೋರಿಸಬೇಕು ಎಂದು ಮನವಿ ಮಾಡಿದೆ.

ಜೊತೆಗೆ ದರ್ಶನ್ ಅವರ ಪ್ರಸ್ತುತ ಕಾನೂನು ಪರಿಸ್ಥಿತಿಯನ್ನು ಪ್ರತಿಯೊಬ್ಬ ಅಭಿಮಾನಿಯೂ ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕು ಎಂದು ಸಂದೇಶ ನೀಡಿದೆ. ಡಿ ಕಂಪನಿಯ ಈ ಮನವಿಯ ಬಳಿಕವಾದರೂ ಇತರರ ಕಾರ್ಯಕ್ರಮಗಳಲ್ಲಿ ಘೋಷಣೆ ಕೂಗಿ ಮುಜುಗರ ಸೃಷ್ಟಿಸುವ ವರ್ತನೆಗೆ ಕಡಿವಾಣ ಬೀಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ