ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ಸಮೀಪ ಸ್ಫೋಟ ಸಂಭವಿಸಿ ರೈಲು ಹಳಿಗೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಅನುಪ್‌ಗಢ ಮತ್ತು ಸೂರತ್‌ಗಢ ನಡುವಿನ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಅನುಪ್‌ಗಢ-ಸೂರತ್‌ಗಢ ರೈಲು ಮಾರ್ಗದ 50 ಜಿಬಿ ಪ್ರದೇಶದ ಸಮೀಪ ಸ್ಫೋಟ ಸಂಭವಿಸಿದ್ದು, ಹಳಿಗೆ ಆಧಾರವಾಗಿದ್ದ ಎರಡು ಕಾಂಕ್ರೀಟ್ ಕಂಬಗಳಿಗೆ ಹಾನಿಯಾಗಿದೆ. ಅಲ್ಲದೆ, ರೈಲು ಹಳಿಯ ಕೆಲವು ಸ್ಲೀಪರ್‌ಗಳಿಗೂ (ಹಳಿಗೆ ಆಧಾರವಾಗಿರುವ ಕಾಂಕ್ರೀಟ್ ರಚನೆಗಳು) ಹಾನಿಯಾಗಿದೆ.

ಕಳೆದ ರಾತ್ರಿ ಸುಮಾರು 9 ಗಂಟೆಗೆ ಅನುಪ್‌ಗಢದಿಂದ ಸೂರತ್‌ಗಢಕ್ಕೆ ತೆರಳುತ್ತಿದ್ದ ರೈಲು ಈ ಪ್ರದೇಶವನ್ನು ದಾಟಿದ ಸುಮಾರು 45 ನಿಮಿಷಗಳ ಬಳಿಕ ಸ್ಫೋಟ ಸಂಭವಿಸಿದೆ.ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಅದರ ಸದ್ದು ಸುಮಾರು 200 ಮೀಟರ್ ದೂರದವರೆಗೂ ಕೇಳಿಸಿದೆ ಎನ್ನಲಾಗಿದೆ. ಸ್ಫೋಟದ ಪರಿಣಾಮ ರೈಲು ಹಳಿಯ ಕೆಳಭಾಗದಲ್ಲಿ ಸುಮಾರು ಎರಡು ಅಡಿ ಆಳದ ಕುಳಿ ನಿರ್ಮಾಣವಾಗಿದೆ.

ಘಟನೆಯ ಬೆನ್ನಲ್ಲೇ ಭಯೋತ್ಪಾದನಾ ನಿಗ್ರಹ ದಳ (ATS), ಅಪರಾಧ ತನಿಖಾ ಇಲಾಖೆ (CID), ಶ್ವಾನದಳ, ಭದ್ರತಾ ಸಂಸ್ಥೆಗಳು ಹಾಗೂ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ನಸುಕಿನ 2 ಗಂಟೆ ಸುಮಾರಿಗೆ ಭದ್ರತಾ ಸಿಬ್ಬಂದಿಯ ತಂಡ ಸ್ಥಳಕ್ಕೆ ಆಗಮಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅನುಪ್‌ಗಢ ಮತ್ತು ಸೂರತ್‌ಗಢ ನಡುವಿನ ರೈಲು ಸಂಚಾರವನ್ನು ಬೆಳಗ್ಗೆ 9 ಗಂಟೆಯವರೆಗೆ ಸ್ಥಗಿತಗೊಳಿಸಲಾಗಿದೆ.

ಶ್ರೀಗಂಗಾನಗರದ ಪೊಲೀಸ್ ವರಿಷ್ಠಾಧಿಕಾರಿ ಹರಿಶಂಕರ್ ಮಾತನಾಡಿ, ಅನುಪ್‌ಗಢ-ಸೂರತ್‌ಗಢ ರೈಲು ಮಾರ್ಗದ 50 ಜಿಬಿ ಗ್ರಾಮದ ಸಮೀಪ ಸಂಭವಿಸಿದ ಶಂಕಿತ ಸ್ಫೋಟದಲ್ಲಿ ರೈಲು ಹಳಿಗೆ ಆಧಾರವಾಗಿದ್ದ ಎರಡು ಸಿಮೆಂಟ್ ಕಂಬಗಳಿಗೆ ಹಾನಿಯಾಗಿದೆ. ಸಾಕ್ಷ್ಯಾಧಾರಗಳ ಪರಿಶೀಲನೆಗೆ ವಿಧಿವಿಜ್ಞಾನ ಪ್ರಯೋಗಾಲಯದ (FSL) ತಂಡವನ್ನು ಸ್ಥಳಕ್ಕೆ ಕರೆಸಲಾಗುತ್ತಿದೆ. ಗಡಿ ಪ್ರದೇಶದಲ್ಲಿ ಇತ್ತೀಚೆಗೆ ವಶಪಡಿಸಿಕೊಳ್ಳಲಾದ 7.5 ಕೆ.ಜಿ. ಆರ್‌ಡಿಎಕ್ಸ್‌ಗೂ ಈ ಘಟನೆಗೂ ಯಾವುದೇ ಸಂಬಂಧವಿರುವುದು ದೃಢಪಟ್ಟಿಲ್ಲ ಎಂದು ತಿಳಿಸಿದ್ದಾರೆ.

ಇದೇ ವೇಳೆ, ಸ್ಫೋಟದಿಂದ ಸೂರತ್‌ಗಢ-ಅನುಪ್‌ಗಢ ರೈಲು ಮಾರ್ಗದ ಹಳಿಗೂ ಹಾನಿಯಾಗಿದೆ. ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿ ಹಾಗೂ ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಎರಡು ರೈಲು ಸ್ಲೀಪರ್‌ಗಳು ಹಾನಿಗೊಳಗಾಗಿರುವುದು ಕಂಡುಬಂದಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ