ಮಾದಲ ಮಹಿಳಾ ಪಂಡ್ವಾಣಿ ಕಲಾವಿದೆ

ಛತ್ತೀಸ್‌ ಗಢ್ ರಾಜ್ಯದ ಪಂಡ್ವಾಣಿ ಜಾನಪದ ಗೀತೆಗಳ ನಾಟ್ಯಕ್ಕೆ ಹೆಸರಾದ ಪ್ರಥಮ ಮಹಿಳೆ ತೀಜನ್‌ ಬಾಯೀ. ದೇಶ ವಿದೇಶಗಳಲ್ಲಿ ಈಕೆ ತಮ್ಮ ಪ್ರತಿಭಾ ಕಲಾಪ್ರದರ್ಶನ ನೀಡಿದ್ದಾರೆ. ಭಾರತ ಸರ್ಕಾರ ಇವರಿಗೆ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳನ್ನಿತ್ತು ಸನ್ಮಾನಿಸಿದೆ. ಜೊತೆಗೆ ಸಂಗೀತ ನಾಟಕ ಅಕಾಡಮಿಯ ಪ್ರಶಸ್ತಿಯೂ ಸಂದಿದೆ. ಬಿಲಾಸ್‌ ಪುರ್‌ ವಿ.ವಿ. `ಡೀಲಿಟ್’ ಪದವಿ ನೀಡಿ ಗೌರವಿಸಿದೆ.

ಪರಂಪರೆ ಹಾಗೂ ಹೊಸ ಆರಂಭ :  ಪಂಡ್ವಾಣಿ ಎಂಬುದು ಉ.ಭಾರತದ ರಾಜ್ಯಗಳ ಜಾನಪದಗೀತೆಗಳ ಶೈಲಿ. ನಾಟಕೀಯ ಸಂವಾದ, ಪರಿಣಾಮಕಾರಿ ಸಂಜ್ಞೆಗಳ ಮೂಲಕ ಹಾಡು ಭರ್ಜರಿಯಾಗಿ ಸ್ಥಾಯಿಕಂಠದಲ್ಲಿ ಮುಂದುವರಿಯುತ್ತದೆ. ಮುಖ್ಯವಾಗಿ ಇದರಲ್ಲಿ ರಾಮಾಯಣ, ಮಹಾಭಾರತದ ಕಥಾವರ್ಣನೆ ಇರುತ್ತದೆ. ತಂಬೂರಿ, ಇನ್ನಿತರ ಗ್ರಾಮೀಣ ವಾದ್ಯಗಳ ಹಿನ್ನಲೆ ಇರುತ್ತದೆ. (ಕನ್ನಡದ ಲಾವಣಿ, ತೆಲುಗಿನ ಬುರ್ರಕಥಾ ಇದ್ದಂತೆ.) ಧ್ವನಿಯ ಮಾಡ್ಯುಲೇಶನ್‌, ದೈಹಿಕ ಅಭಿವ್ಯಕ್ತಿಗಳಿಂದ ಕಥೆಯನ್ನು ಸ್ವಾರಸ್ಯಕರಾಗಿ ಹೇಳುತ್ತಾರೆ. ಇದನ್ನೇ ತೀಜನ್‌ ಬಾಯೀ ಮುಂದೆ ತುಸು ಬದಲಾವಣೆ ಮಾಡಿಕೊಂಡರು.

ಈಕೆ ಮಹಾಭಾರತದ ಪ್ರಸಂಗಗಳನ್ನೇ ಮುಖ್ಯವಾಗಿ ಇಲ್ಲಿ ತಾರಕ ಸ್ಥಾಯಿಯಲ್ಲಿ, ಸಂಭಾಷಣೆ, ನಾಟಕೀಯ ಆಂಗಿಕ ಚಲನೆಗಳಿಂದ ಸೂಚಿಸುತ್ತಾರೆ. ಪುರುಷಪ್ರಧಾನ ಈ ಶೈಲಿಯು ಈಕೆಗೆ ನೈಸರ್ಗಿಕವಾಗಿ ಒಲಿದು ಬಂದಿದೆ. ಇದರ 2 ಮುಖ್ಯ ಶೈಲಿಗಳಾದ ವೇದಮತಿ, ಕಾಪಾಲಿಕ ಎರಡರಲ್ಲೂ ವಿಜಯ ಗಳಿಸಿದ್ದಾರೆ.

ನಡೆದು ಬಂದ ದಾರಿ : 1956ರಲ್ಲಿ ಆದಿವಾಸಿ ಪರಿವಾರದಲ್ಲಿ ಜನಿಸಿದ ಈಕೆ, ಬಾಲ್ಯದಿಂದಲೇ ಈ ಕಲೆಯಲ್ಲಿ ನಿಷ್ಣಾತರಾದರು. ಗುರು ಉಮ್ಮೇದ್‌ ಸಿಂಗ್‌ ನೇತೃತ್ವದಲ್ಲಿ ಈ ಕಲೆ ಕರಗತ ಮಾಡಿಕೊಂಡರು. ಈ ಕಾಲಕ್ಕೆ ಹೆಂಗಸರು ಈ ಕಲೆ ರೂಢಿಸಬಾರದು ಎಂಬ ವಿರೋಧದ ನಡುವೆಯೂ ಯಶಸ್ವೀ ಎನಿಸಿದವರು.

ಆ ನಂತರ ಪ್ರಸಿದ್ಧ ಥಿಯೇಟರ್‌ ಆರ್ಟಿಸ್ಟ್ ಹಬೀಬ್‌ ತನ್ವೀರ್‌ ಇವರ ಈ ಕಲೆಗೆ ವೇದಿಕೆ ಒದಗಿಸಿ, ಸಾವಿರಾರು ಪ್ರೇಕ್ಷಕರು ಮೆಚ್ಚುವಂತೆ ಮಾಡಿದರು. ಗ್ರಾಮೀಣ ಮಟ್ಟದ ಪ್ರದರ್ಶನದಿಂದ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಪ್ರದರ್ಶನಕ್ಕೆ ಇವರ ಖ್ಯಾತಿ ಹರಡಿತು.

ತಮ್ಮ ಪ್ರಭಾವಶಾಲಿ ಪ್ರದರ್ಶನಗಳು, ಅಭಿವ್ಯಂಜಕ ಕಥನಗಳು,ತತ್ಕಾಲೀನ ರಚನೆಗಳೊಂದಿಗೆ ತೀಜನ್‌ ಬಾಯೀ ಪಂಡ್ವಾಣಿಯನ್ನು ಗ್ರಾಮೀಣ ಪರಿಸರದಿಂದ ಅಂತಾರಾಷ್ಟ್ರೀಯ ವೇದಿಕೆ ಮಟ್ಟಕ್ಕೆ ಬೆಳೆಸಿದ್ದಾರೆ!

ಪ್ರಶಸ್ತಿ ಪುರಸ್ಕಾರಗಳು : ಭಾರತ ಸರ್ಕಾರದಿಂದ 1987ರಲ್ಲಿ ಪದ್ಮಶ್ರೀ ಪ್ರಶಸ್ತಿ. ಸಂಗೀತ ನಾಟಕ ಅಕಾಡಮಿಯಿಂದ 1995ರಲ್ಲಿ ಗೌರವ ಸನ್ಮಾನ. 2003ರಲ್ಲಿ ಪದ್ಮಭೂಷಣ ಪ್ರಶಸ್ತಿ ವಿಭೂಷಿತೆ! 2018ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಸಹ! ಮ.ಪ್ರ. ಸರ್ಕಾರದಿಂದ ದೇವಿ ಅಹಲ್ಯಾ ಪ್ರಶಸ್ತಿ. ಜಾನಪದ ಕಲೆಯ ಬೆಳವಣಿಗೆಗಾಗಿ ಹಾಗೂ ಈ ಗೀತೆಗಳ ಪ್ರಚಾರಕ್ಕಾಗಿ ಗೌರವ ಡಾಕ್ಟರೇಟ್‌ ಪ್ರಶಸ್ತಿ ಸಹ ಲಭಿಸಿದೆ.

ಪ್ರಭಾವ : ಪುರುಷಪ್ರಧಾನ ಪಂಡ್ವಾಣಿ ಕಲೆಯ ಕೈಗೂಡಿಸಿಕೊಂಡು, ಹೆಣ್ಣು ಗ್ರಾಮೀಣ ಮಟ್ಟದಲ್ಲೂ ಸಬಲೆ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಇಂದು ಪಂಡ್ವಾಣಿ ಗೀತೆಗಳಿಗೆ ಜಾಗತಿಕ ಮಟ್ಟದ ಐಡೆಂಟಿಟಿ ಒದಗಿಸಿಕೊಟ್ಟಿದ್ದಾರೆ. ಛತ್ತೀಸ್‌ ಗಢದ ಪೌರಾಣಿಕ ಪರಂಪರೆಗೆ ವಿಶಾಲ ಮಾಧ್ಯಮ ಒದಗಿಸಿಕೊಟ್ಟ ಕೀರ್ತಿ ಇವರದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ