ಕಥೆ – ಪದ್ಮಾ ಮೂರ್ತಿ
ಗಾಯತ್ರಿ ತಾನಾಗಿ ಮಾಡಿಕೊಂಡ ಆಕಸ್ಮಿಕ ಅಚಾತುರ್ಯದಿಂದ ದೊಡ್ಡದೊಂದು ಕಂಟಕಕ್ಕೆ ಸಿಲುಕುವಂತಾಯಿತು. ಆ ಅಪಘಾತದಿಂದ ಅವಳು ಪಾರಾದಳೇ……?
“ಗಾಯತ್ರಿ ನೀನು ಬೇಗ ಹೊರಟರೆ, ಸಂಜೆಯೊಳಗೆ ಊರು ಸೇರಿಕೊಳ್ಳಬಹುದು,” ಎಂದು ಪ್ರಭಾಕರ್ ಹೆಂಡತಿಗೆ ಹೇಳುತ್ತಿದ್ದ.
ಗಾಯತ್ರಿ ಮತ್ತು ಪ್ರಭಾಕರನ ಸಂಸಾರ ಮಾದರಿ ಸಂಸಾರ. ಅವರ ಒಬ್ಬಳೇ ಮಗಳಾದ ಮಾಧುರಿಯ ಮದುವೆ ಸದ್ಯದಲ್ಲೇ ಆಗಲಿತ್ತು. ಹಾಸನದವರಾದ ಅವರು ಬೆಂಗಳೂರಿನಲ್ಲಿ ನೆಲೆಸಿದ್ದರು. ತಿಂಗಳಿಗೊಮ್ಮೆ ಅರಸೀಕೆರೆ ಹತ್ತಿರ ಇರುವ ಬಾಣಾವರಕ್ಕೆ ಹೋಗಿ, ತಮ್ಮ ತೋಟ, ಮನೆ, ಆಸ್ತಿಪಾಸ್ತಿಗಳನ್ನು ನೋಡಿಕೊಂಡು ಬರುತ್ತಿದ್ದರು.
ಪ್ರಭಾಕರ್ ಸಿವಿಲ್ ಎಂಜಿನಿಯರ್ ಆಗಿದ್ದ ಕಾರಣ, 3-4 ವರ್ಷಗಳಿಗೊಮ್ಮೆ ವರ್ಗವಾಗುತ್ತಲೇ ಇರುತ್ತಿತ್ತು. ಈ ಕಾರಣ ವ್ಯವಹಾರನ್ನೆಲ್ಲಾ ಸ್ವಂತ ಊರಾದ ಬಾಣಾವರದಲ್ಲಿಯೇ ಇಟ್ಟುಕೊಂಡಿದ್ದರು. ಪ್ರಭಾಕರ್ ಬೆಂಗಳೂರಿಗೆ ಪಿಡಬ್ಲ್ಯೂಡಿ ಅಧಿಕಾರಿಯಾಗಿ ಬಂದು ಒಂದು ವರ್ಷವಾಗಿತ್ತು. ಒಬ್ಬ ಮಗ ಮತ್ತು ಒಬ್ಬಳು ಮಗಳ ಸುಂದರ ಸಂಸಾರ. ಮಗಳು ಮಾಧುರಿ ಎಂಜಿನಿಯರ್, ಮಗ ಮೆಡಿಕಲ್ ಓದುತ್ತಿದ್ದ. ಗಾಯತ್ರಿ ಮತ್ತು ಪ್ರಭಾಕರ್ ಹೆಚ್ಚಿನ ವ್ಯವಹಾರಗಳನ್ನು ತಮ್ಮ ಸ್ವಂತ ಊರಿನಲ್ಲೇ ಇಟ್ಟುಕೊಂಡಿದ್ದರು. ಆ ವ್ಯವಹಾರವನ್ನೆಲ್ಲಾ ಗಾಯತ್ರಿಯೇ ನೋಡಿಕೊಳ್ಳುತ್ತಿದ್ದುದು. ಮಾಧುರಿಯ ಮದುವೆ ಇನ್ನೆರಡು ತಿಂಗಳಲ್ಲಿ ನಡೆಯುವುದಾಗಿ ನಿಶ್ಚಯವಾಗಿತ್ತು. ಅದಕ್ಕಾಗಿ ದುಡ್ಡುಕಾಸಿನ ವ್ಯವಸ್ಥೆಗಾಗಿ ತಮ್ಮ ಬಾಣಾವರದಲ್ಲಿದ್ದ ತೋಟದ ಆದಾಯದ ಹಣ, ಬ್ಯಾಂಕಿನಲ್ಲಿ ಇಟ್ಟಿದ್ದ ಆದಾಯ ಮತ್ತು ಚಿನ್ನಾಭರಣಗಳನ್ನು ತರಬೇಕಿತ್ತು.
ಅದಕ್ಕಾಗಿಯೇ ಗಾಯತ್ರಿ ಮೂರು ದಿಸದ ಮಟ್ಟಿಗೆ ಬಾಣಾವರಕ್ಕೆ ಹೊರಟಿದ್ದಳು. ಅಲ್ಲಿ ಅವರದೇ ಆದ ಹಿರೀಕರ ಮನೆಯೂ ಇತ್ತು. ಉಳಿದುಕೊಳ್ಳಲು ಸಮಸ್ಯೆಯೇನೂ ಇರಲಿಲ್ಲ. ಮನೆಯನ್ನು ಸ್ವಲ್ಪ ರಿಪೇರಿ ಮಾಡಿಸಿ, ಕ್ಲೀನ್ ಸಹ ಮಾಡಿಸಬೇಕಿತ್ತು. ಮದುವೆ ಎಂದ ಮೇಲೆ ಊರಿಗೂ, ಬೆಂಗಳೂರಿಗೂ ಓಡಾಟ ಇದ್ದೇ ಇರುತ್ತಿತ್ತು. ಪ್ರಭಾಕರನಿಗೆ ರಜಾ ಸಿಗದ ಕಾರಣ, ಪತ್ನಿ ಗಾಯತ್ರಿಯೇ ಈ ವ್ಯವಹಾರಗಳಿಗೆ ಓಡಾಡುತ್ತಿದ್ದಳು.
ಗಾಯತ್ರಿ ಮಧ್ಯಾಹ್ನವೇ ಬಾಣಾವರಕ್ಕೆ ಹೊರಟುಬಿಟ್ಟಳು. ಅವಳು ಊರು ತಲುಪುವ ಹೊತ್ತಿಗೆ ಸಂಜೆಯಾಗಿತ್ತು. ಊರಿಂದ ಬರುವಾಗಲೇ ರಾತ್ರಿ ಊಟವನ್ನು ತಂದಿದ್ದ ಕಾರಣ ಸಮಸ್ಯೆಯಾಗಲಿಲ್ಲ. ಊರು ಈಗ ಚೆನ್ನಾಗಿ ಬೆಳೆದಿತ್ತು. ಹಾಗೆಯೇ ಇವರ ಆಸ್ತಿಪಾಸ್ತಿಗಳ ಆದಾಯ ಹೆಚ್ಚಿತ್ತು. ಗಾಯತ್ರಿ ಬೆಳಗಾದ ಕೂಡಲೇ ಮನೆಯನ್ನೆಲ್ಲಾ ಒಂದು ರೌಂಡ್ ಶುದ್ಧ ಮಾಡಿಕೊಂಡಳು. ನಂತರ ತಿಂಡಿ ತಿಂದು ತೋಟದ ಕಡೆ ಹೊರಟಳು.
ಸುಂದರ ತೋಟವನ್ನು ಸುತ್ತಾಡುತ್ತಿದ್ದಂತೆ ರೋಮಾಂಚನ ಎನಿಸಿತು. ಆ ಪ್ರಕೃತಿ ಸೌಂದರ್ಯ, ಹಸಿರಿನ ಹಾಸು, ಆಹ್ಲಾದಕರ ಗಾಳಿ, ತೆಂಗು, ಕಂಗು, ಬಾಳೆ, ದಾಳಿಂಬೆ, ಸೀಬೆ, ಏಲಕ್ಕಿ ಇತ್ಯಾದಿಗಳ ವಿಶಿಷ್ಟ ಪರಿಮಳಗಳೆಲ್ಲಾ ಪಟ್ಟಣದಲ್ಲಿ ಎಲ್ಲಿ ಸಿಗಬೇಕು….? ಎಂದುಕೊಳ್ಳುತ್ತಾ ಕೆಲಸ ಮಾಡುತ್ತಿದ್ದ ಕೂಲಿಯಾಳುಗಳನ್ನು ಕರೆಸಿ, ತೆಂಗಿನಕಾಯಿಗಳನ್ನು ಕೀಳಿಸಿದಳು. ಸುಮಾರು ಸಾಯಂಕಾಲ 4 ಗಂಟೆಯವರೆಗೂ ತೋಟದ ಕೆಲಸದಲ್ಲಿಯೇ ಸಮಯ ಹೋಯಿತು. ಕಾಯಿಗಳನ್ನೆಲ್ಲಾ ಅಲ್ಲೇ ಇದ್ದೆ ತೋಟದ ಮನೆಗೆ ಹಾಕಿಸಿ, ವಾಪಸ್ಸು ಮನೆಗೆ ಬಂದಳು.
ನಾಳೆ ತೋಟಕ್ಕೆ ಗೊಬ್ಬರ ಹಾಕಿಸಬೇಕು ಎಂದುಕೊಳ್ಳುತ್ತಾ, ಗಂಡ, ಮಕ್ಕಳಿಗೆ ಫೋನ್ ಮಾಡಿ ತನ್ನ ಕಾರ್ಯಕ್ರಮದ ವರದಿಗಳನ್ನು ಹೇಳಿದಳು.
“ಒಬ್ಬಳೇ ಇದ್ದೀಯ ಹುಷಾರು….! ರಜಾ ಏನಾದರೂ ಸಿಕ್ಕಿದರೆ, ನಾನೂ ಬರುತ್ತೇನೆ,” ಎಂದ ಪ್ರಭಾಕರ್.
“ಬೇಡ….! ಬೇಡ…. ಅಲ್ಲಿ ಮಕ್ಕಳಿಬ್ಬರೇ ಆಗಿಬಿಡುತ್ತಾರೆ. ನೀವು, ಮಕ್ಕಳು ಹುಷಾರು. ನಾನು ಎಲ್ಲಾ ಕೆಲಸ ಮುಗಿಸಿಕೊಂಡು ಬಂದುಬಿಡುವೇ…. ನೀವು ಯೋಚಿಸಬೇಡಿ,” ಎಂದಳು.
`ನಾಳೆ ಅರಸೀಕರೆಗೆ ಹೋಗಿ ಗೊಬ್ಬರ ಖರೀದಿಸಿ, ತೋಟಕ್ಕೆ ಹಾಕಿಸಬೇಕು…. ಅಲ್ಲಿನ ಎಸ್.ಬಿ.ಎಂ ಬ್ಯಾಂಕ್ ನಿಂದ ಕ್ಯಾಶ್ ವಿತ್ ಡ್ರಾ ಮಾಡಿಕೊಳ್ಳಬೇಕು. ಮದುವೆಯ ಸಮಯದಲ್ಲಿ ಹಣದ ಕೊರತೆಯಾಗಬಾರದು,’ ಎಂದುಕೊಂಡು ಕಣ್ಮುಚ್ಚಿ ಮಲಗಿದಳು.
ಮರುದಿನ ಕೆಲಸ ಮುಗಿಸಿಕೊಂಡು, ಅರಸೀಕೆರೆಗೆ ಹೊರಟು ನಿಂತಾಗ, ಮಳೆಯೋ ಮಳೆ! ಯಾವ ಬಸ್ಸುಗಳೂ ಸಕಾಲಕ್ಕೆ ಸಿಗಲಿಲ್ಲ. ಇನ್ನೂ ತಡವಾಗಿ ಹೋದರೆ ಎಲ್ಲಾ ಕೆಲಸ ಮುಗಿಸಿ ಬರಲು ಸಂಜೆಯಾಗಿಬಿಡಬಹುದು ಎಂದು ಯೋಚಿಸಿ, ಅರಸೀಕೆರೆ ಇಲ್ಲೇ ಹತ್ತಿರ ತಾನೇ…. ಆಟೋದಲ್ಲಿ ಹೋಗಿಬಿಡುವುದು ಎಂದು ಯೋಚಿಸುತ್ತಾ ಅಲ್ಲೇ ಇದ್ದ ಒಂದು ಆಟೋ ಹತ್ತಿದಳು.
ಅಷ್ಟರಲ್ಲಿ ಫೋನ್ ರಿಂಗಾಯಿತು. ಪ್ರಭಾಕರ್ ಫೋನ್ ಮಾಡಿದ್ದ. ಅಯ್ಯೋ ರಾತ್ರಿ ಗಂಡನ ಜೊತೆ ಸರಿಯಾಗಿ ಮಾತನಾಡಲು ಆಗಲಿಲ್ಲ ಎಂದುಕೊಳ್ಳುತ್ತಾ, “ಹಲೋ….” ಎಂದಳು.
“ಊರಿಗೆ ಹೋಗಿ ನಾಲ್ಕು ದಿನಗಳಾಯಿತು. ನಾಳೆ ಹೊರಟು ಬಂದುಬಿಡುವ ಗಾಯತ್ರಿ…. ಅಲ್ಲಿಯ ಕೆಲಸವೆಲ್ಲಾ ಮುಗಿಯಿತೇ…. ಬ್ಯಾಂಕ್ ಕೆಲಸ ಏನಾಯಿತು….?” ಎಂದು ಪ್ರಭಾಕರ್ ವಿಚಾರಿಸಿದ.
“ನಾಳೆ ಮಧ್ಯಾಹ್ನ ಹೊರಟು ಬರುತ್ತೇನೆ. ಹೆಚ್ಚೂಕಡಿಮೆ ಕೆಲಸ ಮುಗಿದಂತಾಗಿದೆ. ಮೂರು ಬ್ಯಾಂಕಿನದು ಸೇರಿ 10 ಲಕ್ಷ ಇದೆ. ಎಲ್ಲವನ್ನೂ ಡ್ರಾ ಮಾಡಿಕೊಳ್ಳುತ್ತಿದ್ದೇನೆ. ಒಡವೆಗಳನ್ನೆಲ್ಲಾ ಲಾಕರ್ ನಿಂದ ತೆಗೆದಾಯ್ತು,” ಎಂದಳು.
“ಆಯ್ತು ಆಯ್ತು….. ಹುಷಾರಾಗಿ ಬಾ…. ಇಲ್ಲದಿದ್ದರೆ ನಾನೇ ಬರೀ…?”
“ಬೇಡ ಬೇಡ….. ನಾನೇ ಕೇರ್ ಫುಲ್ ಆಗಿ ಬರ್ತೀನಿ. ನೀವೇನೂ ಯೋಚಿಸಬೇಡಿ.”
“ಹುಷಾರು….. ಒಡವೆ ವಸ್ತುಗಳಿರುತ್ತವೆ,” ಎಂದು ಪ್ರಭಾಕರ್ ಮತ್ತೊಮ್ಮೆ ಎಚ್ಚರಿಸಿದ. ಅಷ್ಟರಲ್ಲಿ ಅರಸೀಕೆರೆ ತಲುಪಿಯಾಗಿತ್ತು. ಆಟೋದಿಂದ ಇಳಿದವಳೇ ಸರಬರನೆ ಬ್ಯಾಂಕಿನ ಕಡೆ ನಡೆದಳು. ಎಲ್ಲಾ ಕೆಲಸ ಮುಗಿಯುವ ಹೊತ್ತಿಗೆ ಸಂಜೆ 4 ಗಂಟೆಯಾಯಿತು. ಬಸ್ ಸ್ಟಾಂಡ್ ಗೆ ಬಂದಾಗ ಬಸ್ಸು ಸಿದ್ಧವಾಗಿತ್ತು. ಎದುರಿಗೆ ಆಟೋ ಸ್ಟಾಂಡ್. ಆಟೋಗೆ ಒರಗಿಕೊಂಡು ತನ್ನನ್ನೇ ಗಮನಿಸುತ್ತಿದ್ದ ಒಬ್ಬ ವ್ಯಕ್ತಿಯನ್ನು ಅವಳು ಗುರುತಿಸಿದಾಗ, `ಅವರೇ…. ಈ ಆಟೋದವನೇ ಅಲ್ಲವೇ ತನ್ನನ್ನು ಬಾಣಾವರದಿಂದ ಕರೆದುಕೊಂಡು ಬಂದು ಆಟೋ ಡ್ರೈವರ್,’ ಎಂದುಕೊಂಡರೂ ಹೆಚ್ಚಿಗೆ ಏನೂ ತಲೆಕೆಡಿಸಿಕೊಳ್ಳದೆ ಬಸ್ಸಿನಲ್ಲಿ ಕುಳಿತಳು.
ಮನೆ ತಲುಪಿದಾಗ ಸಮಯ ಸಂಜೆ 6 ಆಗಿತ್ತು. ಬೆಳಗ್ಗೆ ಮಾಡಿ ಉಳಿದಿದ್ದ ತಿಂಡಿಯನ್ನೇ ತಿಂದು, ನಾಳೆಗೆ ಊರಿಗೆ ಹೋಗಬೇಕಾದ್ದರಿಂದ ಎಲ್ಲವನ್ನೂ ಪ್ಯಾಕ್ ಮಾಡಿಕೊಳ್ಳಲು ಆರಂಭಿಸಿದಳು. ಒಡವೆ, ಹಣವನ್ನೆಲ್ಲಾ ಭದ್ರವಾಗಿ ಒಂದು ಬ್ಯಾಗಿನಲ್ಲಿ ಇಟ್ಟುಕೊಂಡಳು.
`ಬೆಳಗ್ಗೆ ತೋಟಕ್ಕೆ ಹೋಗಿ ಆಳುಕಾಳುಗಳನ್ನು ಮತ್ತೊಮ್ಮೆ ಮಾತನಾಡಿಸಿ, ತೋಟವನ್ನು ಚೆನ್ನಾಗಿ ನೋಡಿಕೊಳ್ಳಿ. ನಿಮ್ಮ ಸಂಬಳ ಹೆಚ್ಚಿಸಿಕೊಡುವೆ ಎಂದು ಹೇಳಿ, ಬೆಂಗಳೂರು ಬಸ್ಸು ಹತ್ತಬೇಕು,’ ಎಂದುಕೊಳ್ಳುತ್ತಾ ಕಣ್ಮುಚ್ಚಿದವಳಿಗೆ ಬೇಗನೇ ನಿದ್ದೆ ಹತ್ತಿತು.
ಇದ್ದಕ್ಕಿದ್ದಂತೆ ದಡ್ ಎಂಬ ಶಬ್ದದಿಂದ ಗಾಯತ್ರಿಗೆ ಎಚ್ಚರವಾಯಿತು. ದಢಾರನೆ ಕಣ್ಣು ಬಿಟ್ಟು, ಪಕ್ಕದಲ್ಲೇ ಇದ್ದ ಟಾರ್ಚ್ ಆನ್ ಮಾಡಿ ನೋಡಿದಳು. ಏನೂ ಕಾಣಿಸಲಿಲ್ಲ. ಮತ್ತೆ ಕಣ್ಮುಚ್ಚಿದರೂ ಏಕೋ ಏನೋ…. ನಿದ್ದೆ ಹತ್ತಲಿಲ್ಲ. ಹಾಗೆ ಜೊಂಪಲ್ಲಿದ್ದವಳಿಗೆ, ಮತ್ತೆ ಅದೇ ಶಬ್ದ….. ಹಿಂಬಾಗಿಲಿನ ಚಿಲಕ ತೆಗೆಯುತ್ತಿರುವ ಶಬ್ದವಿದ್ದಂತೆ ಅನಿಸಿ, ಮೈ ಕಂಪಿಸಿತು. ಪಕ್ಕದ ಮನೆಯಲ್ಲಿ ಯಾರೂ ಇಲ್ಲ. ಇನ್ನೊಂದು ಪಕ್ಕದ ಮನೆಯವರು ವಯಸ್ಸಾದವರಿದ್ದರು.

`ಏನಿದು ಶಬ್ದ……! ನೋಡದೆ ನೆಮ್ಮದಿ ಇಲ್ಲ,’ ಎಂದುಕೊಂಡು ಹೆದರಿಕೆಯಿಂದಲೇ ಎದ್ದು ಲೈಟ್ ಆನ್ ಮಾಡಿ, ಸುತ್ತಲೂ ನೋಡಿದಳು. ಏಕೋ ಏನೋ ಅವಳ ಎದೆ ಹೊಡೆದುಕೊಳ್ಳಲಾರಂಭಿಸಿತು. ಪಕ್ಕದಲ್ಲೇ ಇದ್ದ ಫೋನ್ ತೆಗೆದುಕೊಂಡು ಗಂಡನಿಗೆ ಫೋನ್ ಮಾಡಲೇ ಎಂದುಕೊಂಡಳು. `ಛೇ…ಛೇ…! ಅರ್ಧರಾತ್ರಿಯಲ್ಲಿ ಫೋನ್ ಮಾಡಿ ಅವರನ್ನು ಗಾಬರಿಗೊಳಿಸುವುದು ಬೇಡ,’ ಎಂದು ಫೋನ್ ಇಟ್ಟುಬಿಟ್ಟಳು.
ಇದ್ದಕ್ಕಿದ್ದಂತೆ ಭಾರಿ ಶಬ್ದದೊಂದಿಗೆ ಹಿಂದಿನ ಬಾಗಿಲು ತೆರೆದುಕೊಂಡ ಸದ್ದಾಯಿತು. ಗಾಯತ್ರಿ ಬೆಚ್ಚಿ ಬೆದರಿದಳು. `ಮನೆಯಲ್ಲಿ ನಾನು ಒಂಟಿ ಹೆಂಗಸು. ಜೊತೆಗೆ ಲಕ್ಷಗಟ್ಟಳೆ ಕ್ಯಾಶ್, ಒಡವೆ ಇವೆ. ಏನು ಮಾಡಲಿ…..?’ ಎಂದು ಎಲ್ಲಾ ದೇವರನ್ನೂ ನೆನೆಸಿಕೊಂಡಳು. ಲೈಟ್ ಉರಿಯುತ್ತೀ ಇತ್ತು. `ಪಕ್ಕದ ಮನೆಯವರ ಫೋನ್ ನಂಬರ್ ಕೂಡ ಇಲ್ಲವಲ್ಲ…..’ ಎಂದು ಕೈ ಕೈ ಹಿಸುಕಿಕೊಂಡಳು.
ಇಷ್ಟೆಲ್ಲಾ ಆಗುವ ಹೊತ್ತಿಗೆ ಮುಖಕ್ಕೆ ಮಾಸ್ಕ್ ಹಾಕಿಕೊಂಡ ವ್ಯಕ್ತಿಯೊಬ್ಬ ಒಳಗೆ ನುಗ್ಗಿದಂತೆ ಭಾಸವಾಯಿತು. ಭಾಸವಾಯಿತು ಏನು…. ಆ ವ್ಯಕ್ತಿ ಒಳಗೆ ಬಂದಾಗಿತ್ತು. ಆ ಆಗಂತುಕನನ್ನು ನೋಡುತ್ತಿದ್ದಂತೆ ಗಾಯತ್ರಿಗೆ ಪ್ರಾಣವೇ ಹೋದಂತಾಯಿತು. ಆದರೂ ಧೈರ್ಯ ಬಿಡದೆ, “ಯಾರು ನೀನು…..? ತಡಿ ಪೊಲೀಸರಿಗೆ ಫೋನ್ ಮಾಡ್ತೀನಿ,” ಎಂದು ನಡುಗುತ್ತಲೇ ಫೋನ್ತೆಗೆದುಕೊಂಡಳು. ಫೋನ್ ಕಿತ್ತುಕೊಂಡ ಆ ಆಗಂತುಕ, “ಏಯ್…… ಮನೆಯಲ್ಲಿರುವ ನಿನ್ನ ಎಲ್ಲಾ ಹಣ, ಒಡವೆ ಕೊಟ್ಟು ಪ್ರಾಣ ಉಳಿಸಿಕೋ….. ಹಠ ಮಾಡಿದರೆ ಪ್ರಾಣ ತೆಗೆದು, ಎಲ್ಲವನ್ನೂ ದರೋಡೆ ಮಾಡಬೇಕಾಗುತ್ತದೆ,’ ಎಂದ.
`ಈ ಧ್ವನಿ ಎಲ್ಲೋ ಕೇಳಿದ ಹಾಗಿದೆಯಲ್ಲಾ….’ ಎಂದುಕೊಂಡವಳಿಗೆ ತಕ್ಷಣ, ಅದು ಬೆಳಗ್ಗೆ ತಾನು ಪ್ರಯಾಣಿಸಿದ ಆಟೋ ಡ್ರೈವರ್ಧ್ವನಿ ಎಂದು ಅವಳಿಗೆ ಹೊಳೆಯಿತು. ಅವಳ ಇಡೀ ದೇಹ ಕಂಪಿಸಿತು.
“ನೀನು ನನ್ನನ್ನು ಅರಸೀ….. ಅರಸೀಕೆರೆಗೆ ಕರೆದುಕೊಂಡು ಹೋದ ಆಟೋ ಡ್ರೈವರ್ ಅಲ್ಲವೇ…..? ಇಷ್ಟೊಂದು ಮೋಸಗಾರನಾ ನೀನು….? ನನ್ನ ಮನೆ ಪತ್ತೆ ಮಾಡಿ, ದರೋಡೆ ಮಾಡಲು ಬಂದಿರುವಿಯಾ….?” ಎಂದು ಕೇಳಿದಳು.
“ಓಹೋ…. ಮುಖ ಮುಚ್ಚಿಕೊಂಡಿದ್ದರೂ ನನ್ನನ್ನು ಗುರುತು ಹಿಡಿದೆಯಾ….? ಇನ್ನು ನಿನ್ನನ್ನು ಪ್ರಾಣಸಹಿತ ಬಿಟ್ಟರೆ, ನನಗೆ ಅಪಾಯ ತಪ್ಪಿದ್ದಲ್ಲ……” ಎನ್ನುತ್ತಾ ಜೇಬಿನಲ್ಲಿದ್ದ ಹರಿತವಾದ ಚಾಕು ತೆಗೆದು ಅವಳತ್ತ ಬಂದ.
ಅದನ್ನು ನೋಡುತ್ತಲೇ ಗಾಯತ್ರಿಗೆ ಜೀವವೇ ಬಾಯಿಗೆ ಬಂದ ಹಾಗಾಯಿತು ಆದರೂ ಸಾವರಿಸಿಕೊಂಡು, “ಅಪ್ಪ….. ನೀನು ಒಳ್ಳೆಯವನಂತೆ ಕಾಣಿಸ್ತೀಯಾ…. ನನ್ನ ಮಗಳ ಮದುವೆ ಇದೆ. ನನಗೆ ಏನೂ ಮಾಡಬೇಡ. ನಾನು ನಿನ್ನ ಮೇಲೆ ಕಂಪ್ಲೇಂಟ್ಕೊಡೋಲ್ಲ….. ಸ್ವಲ್ಪ ದುಡ್ಡು ಕೊಡ್ತೀನಿ. ನನ್ನನ್ನು ಬಿಟ್ಟುಬಿಡು,” ಎಂದು ಗೋಗರೆದಳು.
ಆಗ ನಡು ರಾತ್ರಿ ಎರಡು ಗಂಟೆಯಾಗಿತ್ತು. ಆ ಆಗಂತುಕ ಅವಳನ್ನೇ ನೋಡುತ್ತಾ, “ನೀನು ಕೊಡುವ ಪುಟಗೋಸಿ ಹಣ ಯಾರಿಗೆ ಬೇಕು….? ಬೆಳಗ್ಗೆ ಆಟೋದಲ್ಲಿ ಕುಳಿತು ನಿನ್ನ ಗಂಡನಿಗೆ ಫೋನ್ ಮಾಡಿದ್ಯಲ್ಲ….. ಅದನ್ನೆಲ್ಲಾ ನಾನು ಕೇಳಿಸಿಕೊಂಡೆ. ಬ್ಯಾಂಕಿನಿಂದ ಏನೇನು ತಂದಿದ್ದೀಯೋ ಅದನ್ನೆಲ್ಲಾ ಕೊಟ್ಟು, ಕೈಮುಗಿ. ಇಲ್ಲದಿದ್ದರೆ ಹಣದ ಜೊತೆಗೆ ನಿನ್ನ ಪ್ರಾಣ ಹೊರಟುಹೋಗುತ್ತದೆ!” ಎನ್ನುತ್ತಾ ಅವಳಿಗೂ ಇನ್ನೂ ಹತ್ತಿರ ಬರಲಾರಂಭಿಸಿದ.
ಗಾಯತ್ರಿ ಒಂದೇ ಸಮನೆ ಕಂಪಿಸುತ್ತಿದ್ದಳು. `ಎಂಥ ಅನಾಹುತ ಮಾಡಿಬಿಟ್ಟೆ. ಮೈಮೇಲೆ ಪ್ರಜ್ಞೆ ಇಲ್ಲದೇ, ದಡ್ಡತನದಿಂದ ಫೋನ್ ನಲ್ಲಿ ಮಾತನಾಡಿ ಬಿಟ್ಟೆನಲ್ಲ….. ಏನು ಮಾಡುವುದು….? ಜೀವಮಾನವಿಡೀ ಕೂಡಿಟ್ಟ ಹಣ, ಒಡವೆ…. ಎಲ್ಲವನ್ನೂ ಇವನಿಗೆ ಕೊಟ್ಟುಬಿಟ್ಟರೆ ಮಗಳ ಮದುವೆಗೆ ಕವಡೆಕಾಸೂ ಮನೆಯಲ್ಲಿ ಇರಲ್ಲ…. ಇಲ್ಲ…. ಹೇಗಾದರೂ ಇವನಿಂದ ತಪ್ಪಿಸಿಕೊಳ್ಳಬೇಕು,’ ಎಂದುಕೊಳ್ಳುತ್ತಾ…..
“ನೋಡಪ್ಪಾ….. ಪಕ್ಕದ ಮನೆಯಲ್ಲಿ ನನ್ನ ಚಿಕ್ಕಪ್ಪ ಇದ್ದಾರೆ. ಅವರು ಪೊಲೀಸ್ ಇಲಾಖೆಯಲ್ಲಿದ್ದಾರೆ. ಜೋರಾಗಿ ಕೂಗಿದರೆ ಸಾಕು ಬಂದುಬಿಡುತ್ತಾರೆ,” ಎಂದು ಏನೋ ಒಂದು ಸುಳ್ಳು ಹೇಳುತ್ತಾ, ಲ್ಯಾಂಡ್ ಲೈನ್ ನಿಂದ ಪೊಲೀಸ್ ಸಂಖ್ಯೆ 100ನ್ನು ಪ್ರೆಸ್ ಮಾಡಿದಳು.
ಆ ಆಗಂತುಕ ಅವಳನ್ನು ಹಿಂದಕ್ಕೆ ತಳ್ಳುತ್ತಾ, ಫೋನ್ ಕಿತ್ತೆಸೆದ. ಗಾಯತ್ರಿ ಅವನಿಂದ ತಪ್ಪಿಸಿಕೊಂಡು ಕೊನೆಯ ಪ್ರಯತ್ನವೆಂಬಂತೆ, ಜೋರಾಗಿ, “ಕಳ್ಳ….. ಕಳ್ಳ….” ಎಂದು ಕೂಗಿಕೊಳ್ಳುತ್ತಾ ಆಚೆಗೆ ಹೋಗಲು ಪ್ರಯತ್ನಿಸಿದಾಗ, ಅವನು ಅವಳನ್ನು ಎಳೆದು ಮೂಲೆಗೆ ಸೇರಿಸಿಕೊಂಡು, “ನೀನು ಬಡಪಟ್ಟಿಗೆ ಒಪ್ಪುತ್ತಿಲ್ಲ. ನೀನು ಜೀವಂತ ಇದ್ದರೆ ನನಗೇ ಕಷ್ಟ…..,” ಎಂದನೇ ಕೈಯಲ್ಲಿದ್ದ ಚಾಕುವಿನಿಂದ ಅವಳಿಗೆ ಎರಡು ಬಾರಿ ರಭಸವಾಗಿ ಚುಚ್ಚಿಯೇಬಿಟ್ಟ.
ಆ ಆಘಾತಕ್ಕೆ ಗಾಯತ್ರಿ ಕುಸಿದು ಬಿದ್ದಳು. ಅದನ್ನು ನೋಡಿದ ಆಗಂತುಕ, `ಈಕೆ ಜೋರಾಗಿ ಕಿರುಚಿದ ಶಬ್ದಕ್ಕೆ ಅಕ್ಕಪಕ್ಕದವರು ಬಂದುಬಿಟ್ಟರೆ ಸಿಕ್ಕಿಬಿಡ್ತೀನಿ. ಇಷ್ಟೊಂದು ರಕ್ತ ಹರಿತಿದೆ…. ಪ್ರಾಣ ಹೋಯಿತು ಅನ್ಸುತ್ತೆ. ಸಿಕ್ಕಿಕೊಂಡರೆ ನೇಣೇ ಗತಿ…..’ ಎಂದು ಯೋಚಿಸಿ, ಅಲ್ಲೇ ಪ್ಯಾಕ್ ಮಾಡಿಟ್ಟಿದ್ದ ಬ್ಯಾಗ್ ಗಳಲ್ಲಿ ಒಡವೆ, ಹಣ ಇದ್ದ ಬ್ಯಾಗನ್ನು ಹೆಗಲಿಗೆ ನೇತು ಹಾಕಿಕೊಂಡು ಬಂದ ದಾರಿಯಲ್ಲೇ ಹೊರಟುಬಿಟ್ಟ.
ಇತ್ತ ಕಡೆ ರಾತ್ರಿ ಪಾಳಿಯಲ್ಲಿದ್ದ ಪೊಲೀಸರಿಗೆ ಅನಾಮಧೇಯ ಕರೆ ಬಂದಿದ್ದರಿಂದ ಅವರು ಅಲರ್ಟ್ ಆದರು. ವಾಪಸ್ ಕರೆ ಮಾಡಿದರೆ, ಪ್ರತಿ ಉತ್ತರ ಬರದಿದ್ದಾಗ, ಏನೋ ಸಂದೇಹ ಬಂದು, ಕಾಲರ್ ಐಡಿಯಲ್ಲಿ ನೋಡಿದಾಗ ಗಾಯತ್ರಿ ಎಂದು ಗೊತ್ತಾಯಿತು. ಈ ಅಪರ ರಾತ್ರಿಯಲ್ಲಿ ಒಬ್ಬ ಹೆಂಗಸಿನಿಂದ ಕರೆ ಬಂದಿದೆ ಎಂದರೆ ಏನೋ….. ಅವಘಡ ಸಂಭವಿಸಿರಬೇಕು ಎಂದುಕೊಳ್ಳುತ್ತಾ…. ಒಂದು ಕ್ಷಣ ತಡಮಾಡದೆ, ಹೆಡ್ ಕಾನ್ ಸ್ಟೇಬಲ್ ಮಹದೇವಪ್ಪ ಮತ್ತು ಪಿ.ಸಿ. ಮಂಜುನಾಥ್ ತಕ್ಷಣವೇ ಜೀಪ್ ಹತ್ತಿ ಹೊರಟರು. ಅದು ಸಣ್ಣ ಊರಾದರೂ ಎಲ್ಲಿ ಎಂದು ಹುಡುಕುವುದು….? ಗಾಯತ್ರಿ ಮನೆ ಇದ್ದ ಬೀದಿಯಲ್ಲೇ ಎರಡೆರಡು ಬಾರಿ ಗಸ್ತು ಹೊಡೆದರೂ ಅವರಿಗೆ ಏನೂ ಗೊತ್ತಾಗಲಿಲ್ಲ. ಆದರೆ ಜೊತೆಯಲ್ಲಿದ್ದ ಪಿ.ಸಿ. ಮಂಜುನಾಥ್ ಸಂದೇಹದಿಂದ, “ಸರ್….. ಅಲ್ನೋಡಿ ಆ ಮನೆಯ ಲೈಟು ಇಷ್ಟು ಹೊತ್ತಾದರೂ ಉರಿಯುತ್ತಿದೆ. ನನಗೆ ಯಾಕೋ ಡೌಟ್…. ಒಂದ್ಸಲ ಹೋಗಿ ನೋಡೋಣ ಸರ್…..” ಎಂದಾಗ, ಇಬ್ಬರೂ ಜೀಪಿನಿಂದ ಇಳಿದು ಆ ಮನೆ ಬಳಿ ಬಂದು ಮನೆಯನ್ನು ಒಂದು ಸುತ್ತು ಹಾಕಿದರು.
ಆಗ ಅವರ ಗಮನಕ್ಕೆ ತೆರೆದಿದ್ದ ಹಿಂಬಾಗಿಲು ಕಂಡಿತು. ತಕ್ಷಣವೇ ಬಾಗಿಲನ್ನು ತಳ್ಳಿ ಒಳಗೆ ನುಗ್ಗಿದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಹೆಂಗಸು. ಮೂಗಿನ ಬಳಿ ಬೆರಳಿಟ್ಟು ನೋಡಿದಾಗ, ಮಂದಗತಿಯಲ್ಲಿ ಉಸಿರಾಡುತ್ತಿರುವುದು ಗೊತ್ತಾಯಿತು. ನಾಡಿ ಬಡಿತ ಸಣ್ಣದಾಗಿತ್ತು. ತಕ್ಷಣವೇ ತಮ್ಮ ಪೊಲೀಸ್ ಜೀಪ್ ನಲ್ಲಿಯೇ ಗಾಯತ್ರಿಯನ್ನು ಮಲಗಿಸಿಕೊಂಡು, ಆಸ್ಪತ್ರೆಗೆ ಕರೆತಂದರು.
ಡ್ಯೂಟಿಯಲ್ಲಿದ್ದ ಡಾಕ್ಟರ್, ಗಾಯತ್ರಿಯನ್ನು ಪರೀಕ್ಷಿಸುತ್ತಾ, “ತುಂಬಾ ರಕ್ತ ಹೋಗಿದೆ. ತಕ್ಷಣವೇ ರಕ್ತ ಕೊಡಬೇಕು. ಇವರದ್ದು ಬಿ ಪಾಸಿಟಿವ್….. ಇಲ್ಲದಿದ್ದರೆ ಪ್ರಾಣಕ್ಕೆ ಅಪಾಯ,” ಎಂದರು.
ಜೊತೆಯಲ್ಲಿದ್ದ ಯುವ ಪೊಲೀಸ್ ಮಂಜುನಾಥ್ ತಕ್ಷಣವೇ, “ಡಾಕ್ಟರ್…. ಅವರ ಪ್ರಾಣ ಉಳಿಸಿ. ನನ್ನದೂ ಬಿ ಪಾಸಿಟಿವ್! ನೀ ನನ್ನ ರಕ್ತ ತೆಗೆದುಕೊಳ್ಳಬಹುದು,” ಎಂದ.
ಡಾಕ್ಟರ್ ಮಂಜುನಾಥ್ ನ ರಕ್ತದ ಸ್ಯಾಂಪಲ್ ಟೆಸ್ಟ್ ಮಾಡಿಕೊಂಡು, ಇಮ್ಮಿಡಿಯೆಟ್ ಆಗಿ, ಗಾಯತ್ರಿಗೆ ಬ್ಲಡ್ ಟ್ರಾನ್ಸ್ ಫರ್ಮಾಡಿದ್ದರಿಂದ ಗಾಯತ್ರಿಯ ಪಲ್ಸ್ ರೇಟ್ ಸಾಮಾನ್ಯ ಸ್ಥಿತಿಗೆ ಬರಲಾರಂಭಿಸಿತು.
ಈ ಮಧ್ಯೆ ಪೊಲೀಸರು ಅವಳ ಫೋನ್ ವಶಪಡಿಸಿಕೊಂಡು, ಪ್ರಭಾಕರನಿಗೆ ಫೋನ್ ನಲ್ಲಿ ಎಲ್ಲಾ ವಿಚಾರಗಳನ್ನೂ ತಿಳಿಸಿ, “ಮನೆಯಲ್ಲಿ ಏನೇನು ಕಳ್ಳತನವಾಗಿದೆ ಎಂದು ಗಾಯತ್ರಿ ಎಚ್ಚರಗೊಂಡ ಮೇಲೆ ತಿಳಿಯಬೇಕು,” ಎಂದು ಹೇಳಿದರು.
ಗಾಬರಿಗೊಂಡ ಪ್ರಭಾಕರ್, ತಕ್ಷಣವೇ ಬೆಂಗಳೂರಿನಿಂದ ಹೊರಟುಬಂದ. ಹೆಂಡತಿಯ ಸ್ಥಿತಿಯನ್ನು ನೋಡಿ ಕಣ್ಣೀರು ಸುರಿಸಿದ. ಅಷ್ಟೊಂದು ಹಣಕಾಸು, ಒಡವೆ ವಸ್ತುಗಳನ್ನು ತರಲು ಒಬ್ಬಳನ್ನೇ ಕಳಿಸಿ ತಪ್ಪು ಮಾಡಿಬಿಟ್ಟೆ ಎಂದು ಪಶ್ಚಾತ್ತಾಪಪಟ್ಟ.
“ನಿಮ್ಮ ಪುಣ್ಯ ಚೆನ್ನಾಗಿತ್ತು ಸರ್…. ನಿಮ್ಮ ಹೆಂಡತಿ ಬದುಕಿಕೊಂಡಿದ್ದಾರೆ. ನೋಡಿ ಇವರೇ ನಮ್ಮ ಪಿ.ಸಿ. ಮಂಜುನಾಥ್. ಅರ್ಧ ರಾತ್ರಿಯಲ್ಲಿ ನಿಮ್ಮ ಹೆಂಡತಿಯನ್ನು ಆಸ್ಪತ್ರೆಗೆ ಸೇರಿಸಿ, ರಕ್ತ ಕೊಟ್ಟು, ನಿಮ್ಮ ಮನೆಯವರನ್ನು ಉಳಿಸಿದ ಮಹಾನುಭಾವ. ಏಕೆ ಹೀಗಾಯಿತು…? ಎಂಬುದನ್ನು ನೀವೇ ಹೇಳಬೇಕು. ನಾವು ಎಫ್.ಐ.ಆರ್ ಮಾಡಿಕೊಳ್ಳಬೇಕಿದೆ. ನಿಮ್ಮ ಪತ್ನಿಗೆ ಇವನ ಜ್ಞಾನ ಬಂದಿಲ್ಲ. ಒಂದು ಹತ್ತು ನಿಮಿಷ ಸ್ಟೇಷನ್ ಗೆ ಬನ್ನಿ,” ಎಂದು ದಫೇದಾರ್ ಮಹಾದೇವಪ್ಪ, ಪ್ರಭಾಕರ್ ನನ್ನು ಕರೆದುಕೊಂಡು ಬಂದರು.
ಪ್ರಭಾಕರ್ ಮಗಳ ಮದುವೆಯ ವಿಚಾರ, ಅದಕ್ಕಾಗಿ ಗಾಯತ್ರಿ ಇಲ್ಲಿಗೆ ಬಂದು ಹಣ, ಒಡವೆ ಎಲ್ಲವನ್ನೂ ತೆಗೆದುಕೊಂಡ ವಿಚಾರ ಎಲ್ಲವನ್ನೂ ಸವಿಸ್ತಾರವಾಗಿ, ಪೊಲೀಸರ ಮುಂದೆ ತೋಡಿಕೊಂಡ. ಅಲ್ಲಿ ಪೊಲೀಸರ ಜೊತೆಯಲ್ಲೇ ಗಾಯತ್ರಿ ಉಳಿದುಕೊಂಡಿದ್ದ ಮನೆಗೆ ಬಂದಾಗ, ಒಡವೆ, ಹಣದ ಬ್ಯಾಗ್ ಕಾಣಲಿಲ್ಲ.
“ಆ ಕಳ್ಳನಿಗೆ ನನ್ನ ಪತ್ನಿ ಬ್ಯಾಂಕ್ ನಿಂದ ತಂದ ಹಣ, ಒಡವೆ ವಿಚಾರ ಹೇಗೆ ಗೊತ್ತಾಯ್ತೋ ನನಗೆ ತಿಳಿಯದು. ದುಡ್ಡು, ಒಡವೆ ಹೋದರೆ ಹೋಗಲಿ, ನನ್ನ ಹೆಂಡತಿ ಗಾಯತ್ರಿ ಜೀವ ಉಳಿಯಿತಲ್ಲ…. ನಿಮ್ಮನ್ನು ಎಷ್ಟು ಅಭಿನಂದಿಸಿದರೂ ಸಾಲದು! ನಿಮ್ಮ ಋಣ ಹೇಗೆ ತೀರಿಸಲಿ?” ಎಂದು ಕಣ್ಣೀರು ಹಾಕುತ್ತಾ ಅವರ ಕೈ ಹಿಡಿದು ಕಣ್ಣಿಗೊತ್ತಿಕೊಂಡ.
ದಫೇದಾರ್ ಮಹಾದೇಪ್ಪ, “ಇದರಲ್ಲಿ ಋಣ ಏನು ಬಂತು…..? ನಮ್ಮ ಕೆಲಸವನ್ನು ನಾವು ಸಿನ್ಸಿಯರ್ ಆಗಿ ಮಾಡಿದ್ದೇವೆ. ನಿಮ್ಮ ಪತ್ನಿಯ ಸಮಯ ಸ್ಛೂರ್ತಿಯನ್ನು ಮೆಚ್ಚಬೇಕಾದ್ದೆ. ಆ ಗಾಬರಿಯಲ್ಲೂ, ಸ್ಟೇಷನ್ ಗೆ ಫೋನ್ ಮಾಡಿ, ನಮಗೆ ಸೂಚನೆಯನ್ನು ಕೊಡದಿದ್ದರೆ ಏನಾಗುತ್ತಿತ್ತು….. ಕಲ್ಪಿಸಿಕೊಳ್ಳಿ? ಹೆದರಬೇಡಿ…. ನಡೀರಿ ಈಗ ಆಸ್ಪತ್ರೆಗೆ. ನಿಮ್ಮ ಪತ್ನಿಗೆ ಪ್ರಜ್ಞೆ ಬಂದಿದ್ದರೆ, ಅವರಿಂದ ಎಲ್ಲಾ ವಿವರವನ್ನೂ ಕಲೆಕ್ಟ್ ಮಾಡಿಕೊಂಡು, ಅವನನ್ನು ಹಿಡಿಯುವ ಕೆಲಸ ಮಾಡುತ್ತೇವೆ. ಬನ್ನಿ ಈಗ…..” ಎನ್ನುತ್ತಾ ತಮ್ಮ ಪೊಲೀಸ್ ವ್ಯಾನ್ ನಲ್ಲೇ ಪ್ರಭಾಕರ್ ನನ್ನು ಕರೆದುಕೊಂಡು ಆಸ್ಪತ್ರೆಗೆ ಬಂದರು.
ಆಗಷ್ಟೇ ಗಾಯತ್ರಿಗೆ ಜ್ಞಾನ ಬಂದಿತ್ತು. ವೈದ್ಯರು ಇನ್ನೂ 2-3 ಗಂಟೆ ಕಾಲ ಅವರನ್ನು ಯಾವುದೇ ವಿಚಾರ ಕೇಳಲು ಹೋಗಬೇಡಿ ಎಂದು ಎಚ್ಚರಿಸಿದರು.
ಪ್ರಭಾಕರ್ ಪಕ್ಕದಲ್ಲೇ ಇದ್ದ ಕುರ್ಚಿಯಲ್ಲಿ ಕುಳಿತು, ಹೆಂಡತಿಯನ್ನು ನೋಡುತ್ತಾ ಪಶ್ಚಾತ್ತಾಪ ಪಡತೊಡಗಿದ. `ನಾನು ಕೆಲಸ ಕೆಲಸ ಎಂದು ಹೊರಗಿರುವುದೇ ಜಾಸ್ತಿ ಆಯ್ತು. ಪಾಪ! ಗಾಯತ್ರಿ….. ಮಕ್ಕಳ ವಿದ್ಯಾಭ್ಯಾಸ, ಮನೆಯ ಜವಾಬ್ದಾರಿ ಎಲ್ಲವನ್ನೂ ನಿಭಾಯಿಸಿಕೊಂಡು, ಮನೆಯನ್ನು ಒಂದು ಹಂತಕ್ಕೆ ತಂದಳು. ಈಗ ಇಷ್ಟೊಂದು ದೊಡ್ಡ ಜವಾಬ್ದಾರಿ ಕೊಟ್ಟು ಒಬ್ಬಳನ್ನೇ ಕಳುಹಿಸಬಾರದಿತ್ತು. ಇವಳಿಗೇನಾದರೂ ಹೆಚ್ಚು ಕಡಿಮೆಯಾಗಿದ್ದರೆ ನನ್ನ ಪಾಡು ಏನಾಗುತ್ತಿತ್ತು….? `ಮಕ್ಕಳ ಗತಿ ಅಬ್ಬಾ…..! ನೆನೆಸಿಕೊಂಡರೆ ಮೈ ಕಂಪಿಸುತ್ತದೆ. ದುಡ್ಡು, ಕಾಸು ಹೋದರೆ ಹೋಗಲಿ. ಸಾಲ ಮಾಡಿ ಮದುವೆ ಮಾಡಬಹುದು. ನನ್ನ ಜೀವದ ಜೀವವಾಗಿದ್ದ ಹೆಂಡತಿಯನ್ನು ಭಗವಂತ ನೀನು ಉಳಿಸಿಕೊಟ್ಟೆಯಲ್ಲಾ…. ನನಗೆ ಅಷ್ಟೇ ಸಾಕು,’ ಎಂದು ಬಿಕ್ಕಳಿಸತೊಡಗಿದ.
ಗಾಯತ್ರಿ ಮೆಲ್ಲನೆ ಕಣ್ಣು ತೆರೆದಳು. ಪಕ್ಕದಲ್ಲಿ ಪ್ರಭಾಕರ ಕುಳಿತಿದ್ದ. ಅವಳಿಗೆ ನಡೆದುದ್ದೆಲ್ಲಾ ಒಂದೊಂದಾಗಿ ನೆನಪಾಗತೊಡಗಿತು. ಮೆಲ್ಲನೆ ನರಳಿದಳು. ಥಟ್ಟನೆ ತಿರುಗಿ ನೋಡಿದ ಪ್ರಭಾಕರ, ಗಾಯತ್ರಿ ಕಣ್ಣು ಬಿಟ್ಟಿದ್ದನ್ನು ನೋಡಿ, ಹತ್ತಿರ ಬಂದು ಅವಳ ತಲೆ ನೇವರಿಸುತ್ತಾ, “ಗಾಯತ್ರಿ ಹೇಗಿದ್ದೀಯಾ……? ಚಿಂತಿಸಬೇಡ ನಾನಿದ್ದೇನೆ. ದುಡ್ಡು ಕಾಸು ತಾನೇ…. ಹೋದರೆ ಹೋಗಲಿ. ದೇವರ ದಯೆ! ನಿನಗೇನು ಆಪತ್ತು ಆಗಲಿಲ್ಲವಲ್ಲ. ನಿನಗೆ ಹೆಚ್ಚು ಕಡಿಮೆಯಾಗಿದ್ದರೆ ನನ್ನ ಮತ್ತು ಮಕ್ಕಳ ಗತಿ ಏನಾಗುತ್ತಿತ್ತು….?” ಎನ್ನುತ್ತಾ ಅವಳ ತಲೆ ನೇವರಿಸತೊಡಗಿದ.
ಗಾಯತ್ರಿ ಅವನ ಕೈ ಹಿಡಿದುಕೊಂಡು ನಡುಗುತ್ತಾ, “ರೀ….. ಜೀವನ ಪೂರ್ತಿ ಸಂಪಾದಿಸಿದ ಹಣ, ಬಂಗಾರವೆಲ್ಲಾ ಹೊರಟುಹೋಯಿತು,” ಎಂದು ಬಿಕ್ಕಳಿಸತೊಡಗಿದಳು.
“ಆ ಚಿನ್ನ ಹೋದರೂ…. ದೇವರು ಈ ನನ್ನ ಬಂಗಾರವನ್ನು ಉಳಿಸಿಕೊಟ್ಟಿದ್ದಾನೆ! ಇದಕ್ಕಿಂತ ಬೇರೆ ಭಾಗ್ಯ ಬೇಕಾ ಹೇಳು…. ಯೋಚಿಸಬೇಡ, ನಾನಿದ್ದೇನೆ ನೋಡಿಕೊಳ್ತೀನಿ….” ಎನ್ನುತ್ತಿದ್ದಂತೆ, ಅಲ್ಲಿಗೆ ವೈದ್ಯರ ಜೊತೆಯಲ್ಲಿ ಪೊಲೀಸರ ಆಗಮನವಾಯಿತು.
ಪ್ರಭಾಕರ್ ಡಾಕ್ಟರ್ ಕೈಹಿಡಿದು ಆತ್ಮೀಯ ಅಭಿನಂದನೆಗಳನ್ನು ಕೋರಿದ. ಗಾಯತ್ರಿಯನ್ನು ಪರೀಕ್ಷಿಸಿದ ಅವರು, “ನಿಮ್ಮ ಪುಣ್ಯ ಚೆನ್ನಾಗಿತ್ತು. ಆ ಪೊಲೀಸರು ಸಕಾಲಕ್ಕೆ ಕರೆದುಕೊಂಡು ಬಂದು ಸೇರಿಸಿ, ರಕ್ತ ನೀಡದಿದ್ದರೆ, ನೀವು ನಿಮ್ಮ ಹೆಂಡತಿಯನ್ನು ಕಳೆದುಕೊಳ್ಳುತ್ತಿದ್ರಿ. ನಿಮ್ಮ ಅಭಿನಂದನೆಯನ್ನು ಅವರಿಗೆ ಸಲ್ಲಿಸಿ. ಇವತ್ತು ಒಂದು ದಿನ ಇಲ್ಲೇ ಇರಲಿ, ನಾಳೆ ಡಿಸ್ಚಾರ್ಜ್ಮಾಡುತ್ತೇನೆ. ಇನ್ನು ಮುಂದಾದರೂ ಯಾರೇ ಆಗಲಿ, ಜೊತೆಗೆ ಹಣ, ಒಡವೆ ವಸ್ತು ಇಟ್ಟುಕೊಂಡು ಒಬ್ಬರೇ ಇರುವಾಗ, ಪ್ರಯಾಣ ಮಾಡುವಾಗ ಎಚ್ಚರಿಕೆಯಾಗಿರಬೇಕು. ಎಚ್ಚರ ತಪ್ಪಿದರೆ, ಪ್ರಾಣಕ್ಕೆ ಕುತ್ತು ಎಂಬುದಕ್ಕೆ ಇದೊಂದು ನಿದರ್ಶನ! ಒಡವೆ, ವಸ್ತು ಕಳೆದು ಹೋದರೆ ಸಿಕ್ಕಿದರೂ ಸಿಗಬಹುದು. ಆದರೆ ಜೀವ ಹೋದರೆ….? ಇನ್ನು ಮುಂದಾದರೂ ಹುಷಾರಾಗಿರಿ,” ಎನ್ನುತ್ತಾ ಅಲ್ಲಿಂದ ಹೊರಟರು.
ದಫೇದಾರ್ ಮಹಾದೇಪ್ಪ ತಮ್ಮ ತನಿಖೆಯ ಅನುಕೂಲಕ್ಕೋಸ್ಕರ ನಿಧಾನವಾಗಿ ಗಾಯತ್ರಿಯಿಂದ ಆ ರಾತ್ರಿ ನಡೆದ ಘಟನೆಗಳನ್ನು ಕೇಳುತ್ತಾ, ಬರೆದುಕೊಳ್ಳಲಾರಂಭಿಸಿದರು.





