ಬಾಲಿಕಾ ವಧು ಈಗ ಭಾರತೀಯ ಪೊಲೀಸ್‌  `ಲೇಡಿ ಸಿಂಗಂ‘ ಐಪಿಎಸ್‌ ಅಧಿಕಾರಿ

ಅಂಬಿಕಾ ಎನ್‌. 14ನೇ ವಯಸ್ಸಿಗೆ ಮದುವೆ, 18ನೇ ವಯಸ್ಸಿನಲ್ಲಿ ಇಬ್ಬರು ಮಕ್ಕಳ ತಾಯಿ. ಆಕೆಯಲ್ಲಿ ಮೊಳಕೊಡೆದಿದ್ದ ಐಪಿಎಸ್ ಅಧಿಕಾರಿ ಆಗಬೇಕು ಎಂಬ ಕನಸನ್ನು ಕೇಳಿ ಸಮಾಜ ನಗುತ್ತಿದ್ದರೆ, ತಾನು ಐಪಿಎಸ್‌ ಅಧಿಕಾರಿಯಾಗಬೇಕು ಎಂಬ ನಿರ್ಧಾರ, ದೃಢಸಂಕಲ್ಪ, ಇಚ್ಛಾಶಕ್ತಿ ಆಕೆಯನ್ನು ಹಠಕ್ಕೆ ಬೀಳುವಂತೆ ಮಾಡುತ್ತದೆ…..!

ಜೀವನದ ಹೋರಾಟಗಳು ಕೆಲವರಿಗೆ ಕೆಲವು ರೂಪಗಳಲ್ಲಿ ಬರುತ್ತವೆ. ಕೌಟುಂಬಿಕ ಸಮಸ್ಯೆ, ಆರ್ಥಿಕ ಬಿಕ್ಕಟ್ಟು, ಸಂಬಂಧದ ಸಮಸ್ಯೆ, ವೃತ್ತಿ ಜೀವನದ ಉದ್ವಿಗ್ನತೆಗಳು ಹೀಗೆ ಒಂದೆರಡಲ್ಲ…. ನಮ್ಮಲ್ಲಿ ಹೆಚ್ಚಿನವರು ಈ ಹಿನ್ನೆಡೆಗಳನ್ನು ತಮ್ಮ ವೈಫಲ್ಯಗಳೆಂದು ದೂಷಿಸುತ್ತಾರೆ. ಆದರೆ ಕೆಲವೇ ಕೆಲವರು ಮಾತ್ರ ಬೂದಿಯಿಂದ ಎದ್ದು ವಜ್ರದಂತೆ ಪ್ರಕಾಶಮಾನವಾಗಿ ಕಂಗೊಳಿಸುವ ಧೈರ್ಯ ತೋರಿಸುತ್ತಾರೆ.

ಅಂತಹವರ ಸಾಲಿನಲ್ಲಿರುವವರು ಐಪಿಎಸ್‌ ಅಧಿಕಾರಿ ಎನ್‌. ಅಂಬಿಕಾ. ಬಾಲ್ಯ ವಿವಾಹಕ್ಕೆ ತಳ್ಳಲ್ಪಟ್ಟ ನಂತರ ಅವರು ತಮ್ಮ ಜೀವನ ಮತ್ತು ಕುಟುಂಬವನ್ನು ಎಂದಿಗೂ ದೂಷಿಸಲಿಲ್ಲ. ಜೀವನ ತನ್ನ ಮೇಲೆ ಎಸೆದ ಸವಾಲುಗಳನ್ನು ಮೆಟ್ಟಿನಿಂತು ನಾಗರಿಕ ಸೇವೆಗೆ ಪ್ರವೇಶಿಸಲು, ಘನತೆಯ ಜೀವನ ನಡೆಸಲು ಸತತ ಪ್ರಯತ್ನ ನಡೆಸಿದರು.

ತಮಿಳುನಾಡಿನ ದಿಂಡಿಗಲ್ ಎಂಬ ಪುಟ್ಟ ಪಟ್ಟಣದ ಬಾಲಕಿ ಅಂಬಿಕಾ. 12-14 ವರ್ಷ ವಯಸ್ಸಿನಲ್ಲೇ ಬಾಲಕಿಯರಿಗೆ ಮದುವೆ ಮಾಡಿಸುವ ಸಮಾಜದಲ್ಲಿ ಬೆಳೆಯುತ್ತಾರೆ. ಸ್ವಾಭಾವಿಕವಾಗಿಯೇ, ಸಮಾಜದ ಒತ್ತಡದಿಂದಾಗಿ, ಅವರ ಕುಟುಂಬ ಈಕೆಯ 14ನೇ ವಯಸ್ಸಿನಲ್ಲಿ, ತಮಿಳುನಾಡು ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸ್‌ ಕಾನ್‌ ಸ್ಟೇಬಲ್ ಜೊತೆ ಅವರ ಮದುವೆ ಮಾಡಿಸುತ್ತದೆ. ಏನೂ ತೋಚದ ವಯಸ್ಸಿನಲ್ಲಿ ಮನೆಯವರ ಒತ್ತಾಯಕ್ಕೆ ಕಟ್ಟುಬಿದ್ದು ಪೊಲೀಸ್‌ ಕಾನ್‌ ಸ್ಟೇಬಲ್ ಒಬ್ಬರನ್ನು ಮದುವೆಯಾಗುವ ಅಂಬಿಕಾಗೆ ಅದೊಂದು ದಿನ ತನ್ನ ಜೀವನದ ಧ್ಯೇಯದ ಅರಿವಾಗುತ್ತದೆ.

Ambika---IPS-2

ಚಿಗುರೊಡೆದ ಕನಸು

ಗಂಡನೊಂದಿಗೆ ಗಣರಾಜ್ಯೋತ್ಸ ಪೆರೇಡ್‌ ವೀಕ್ಷಿಸಲು ಹೋದಾಗ, ಅಲ್ಲಿ ಐಪಿಎಸ್‌ ಅಧಿಕಾರಿಗಳಿಗೆ ಕೊಡುತ್ತಿದ್ದ ಗೌರವ ಕಂಡು ಆಕೆಗೆ ಅಚ್ಚರಿಯಾಗುತ್ತದೆ. ಕಾರ್ಯಕ್ರಮದ ಅತಿಥಿಗಳಲ್ಲಿ ಪೊಲೀಸ್‌ ಮಹಾನಿರ್ದೇಶಕರು ಮತ್ತು ಹಿರಿಯ ಗಣ್ಯರು ಇರುತ್ತಾರೆ. ಆ ಅಧಿಕಾರಿಗಳಿಗೆ ತನ್ನ ಪತಿ ಸೆಲ್ಯೂಟ್‌ ಹೊಡೆಯುವುದನ್ನು ಗಮನಿಸುತ್ತಾರೆ. ಈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಕುತೂಹಲ ಆಕೆಯಲ್ಲಿ ಮೂಡುತ್ತದೆ.

ಆಕೆಯ ಪತಿ ಮನೆಗೆ ಬಂದಾಗ, ಆ ಬಗ್ಗೆ ವಿಚಾರಿಸುತ್ತಾರೆ. ನೀವ್ಯಾಕೆ ಅವರಿಗೆ ಸೆಲ್ಯೂಟ್‌ ಮಾಡಿದಿರಿ? ಅವರು ಯಾರು ಎಂದು ತಿಳಿಯಲು ಆಕೆಯ ಮನಸ್ಸು ಹಾತೊರೆಯುತ್ತದೆ. ಅದೇ ರೀತಿಯ ಗೌರವ ಪಡೆಯಬೇಕೆಂಬ ತನ್ನ ಬಯಕೆಯನ್ನು ಪತಿಯ ಮುಂದೆ ವ್ಯಕ್ತಪಡಿಸುತ್ತಾರೆ. ಅದಕ್ಕೆ ಆಕೆಯ ಪತಿ, `ಅವರು ಐಪಿಎಸ್‌ ಅಧಿಕಾರಿಗಳು,’ ಎಂದು ಉತ್ತರಿಸುತ್ತಾರೆ.

ನಾಲ್ಕು ಗೋಡೆಯ ಮಧ್ಯೆ ಬದುಕುತ್ತಿದ್ದ ಆಕೆಗೆ ಅವರಂತೆ ತಾನೂ ಈ ಗೌರವಕ್ಕೆ ಅರ್ಹತೆ ಪಡೆಯಬೇಕು ಎಂದೆನಿಸುತ್ತದೆ. ತನ್ನ ಕನಸನ್ನು ಗಂಡನ ಮುಂದೆ ಹೇಳಿಕೊಳ್ಳುತ್ತಾರೆ. ತಾನೂ ಐಪಿಎಸ್‌ ಅಧಿಕಾರಿ ಆಗಬೇಕೆಂಬ ಬಯಕೆಯನ್ನು ವ್ಯಕ್ತಪಡಿಸುತ್ತಾರೆ.

ತನ್ನ ಹೆಂಡತಿಯ ಮಾತುಗಳನ್ನು ಕೇಳಿದ ಕಾನ್‌ ಸ್ಟೇಬಲ್, `ಅವರು ನಂ. ಒನ್‌ ರಾಂಕ್‌ ಅಧಿಕಾರಿಗಳು. ಅವರ ಮಟ್ಟಕ್ಕೆ ತಲುಪಲು ಮತ್ತು ಆ ರೀತಿಯ ಗೌರವ ಪಡೆಯಲು, ಇಡೀ ರಾಷ್ಟ್ರದಲ್ಲಿಯೇ ಅತ್ಯಂತ ಕಠಿಣವಾದ ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ಆಗ ಮಾತ್ರ ನಾಗರಿಕ ಸೇವೆಗೆ ಪ್ರವೇಶಿಸಲು ಮತ್ತು ಐಸಿಎಸ್‌ ಅಧಿಕಾರಿಯಾಗಲು ಸಾಧ್ಯವಾಗುತ್ತದೆ. ನಂತರ ಡಿಜಿಪಿ ಅಥವಾ ಐಜಿಪಿ ಆಗಲು ವರ್ಷಗಳ ಕಾಲ ಸೇವೆ ಸಲ್ಲಿಸಬೇಕಾಗುತ್ತದೆ,’ ಎಂದು ವಿವರಿಸುತ್ತಾರೆ.

ಪತಿಯ ಮಾತು ಕೇಳಿದಾಗ, ಅಂಬಿಕಾ ಅವರ ಕಣ್ಣುಗಳಲ್ಲಿ ಹೊಸ ಕನಸು ಹುಟ್ಟಿಕೊಳ್ಳುತ್ತದೆ.

`ಎರಡು ಮಕ್ಕಳ ತಾಯಿಯಾಗಿರುವ ನಿನಗೆ ಐಪಿಎಸ್‌ ಅಧಿಕಾರಿ ಆಗುವುದು ಅಷ್ಟು ಸುಲಭವಲ್ಲ, ಅದಕ್ಕೆ ಬಲವಾದ ಇಚ್ಛಾಶಕ್ತಿ ಆಗತ್ಯವಿದೆ,’ ಎಂದು ಪತಿ ಹೇಳುತ್ತಾರೆ.

ಎಸ್‌ಎಸ್‌ಎಲ್ಸಿಯನ್ನೂ ಪೂರ್ಣಗೊಳಿಸದ ಅಂಬಿಕಾ, ಐಪಿಎಸ್‌ ಅಧಿಕಾರಿ ಆಗುದು ಒಂದು ಕನಸಷ್ಟೇ ಎಂಬ ಭಾವನೆ ಅವರದ್ದಾಗಿರುತ್ತದೆ. ಆದರೆ, `ಅದೆಲ್ಲವನ್ನೂ ನಾನು ಮಾಡಬಲ್ಲೇ,’ ಎಂಬ ಅಂಬಿಕಾ ಛಲಕ್ಕೆ ಪತಿಯೂ ತಲೆಬಾಗುತ್ತಾರೆ.

Ambika-IPS-1

ಸ್ಛೂರ್ತಿದಾಯಕ ಪತಿ

ಅಂಬಿಕಾ ಶಾಲೆ ಬಿಟ್ಟವರು ಮತ್ತು ಎರಡು ಮಕ್ಕಳ ತಾಯಿ. ಮುಂದೆ ಇರುವುದು ಕಠಿಣ ಹಾದಿಯಾಗಿರುತ್ತದೆ. ಆದಾಗ್ಯೂ ಖಾಸಗಿ ತರಬೇತಿಯಿಂದ 10ನೇ ತರಗತಿ ಪೂರ್ಣಗೊಳಿಸುವ ಮೂಲಕ ತಮ್ಮ ಓದಿನ ಜೀವನವನ್ನು ಪ್ರಾರಂಭಿಸುತ್ತಾರೆ. ನಂತರ ದೂರ ಶಿಕ್ಷಣದ ಮೂಲಕ ಪದವಿಯನ್ನೂ ಪಡೆಯುತ್ತಾರೆ.

ಅಂಬಿಕಾ ಕನಸನ್ನು ನನಸಾಗಿಸುವ ಪ್ರಯಾಣದ ಪ್ರತಿ ಹೆಜ್ಜೆಯಲ್ಲೂ ಪತಿ ಆಕೆಗೆ ಬೆಂಬಲವಾಗಿ ನಿಲ್ಲುತ್ತಾರೆ. ಮೊದಲಿಗೆ ದೂರ ಶಿಕ್ಷಣದ ಮೂಲಕ ಎಸ್‌ಎಸ್‌ಎಲ್ಸಿ, ಪಿಯುಸಿ ಮತ್ತು ಪದವಿ ಶಿಕ್ಷಣವನ್ನು ಪೂರ್ಣಗೊಳಿಸಲು ಸಹಕರಿಸುತ್ತಾರೆ. ಅವರ ಊರಾದ ತಮಿಳುನಾಡಿನ ದಿಂಡಿಗಲ್ ನಲ್ಲಿ ಒಂದೇ ಒಂದು ಯುಪಿಎಸ್‌ಸಿ ತರಬೇತಿ ಕೇಂದ್ರ ಇರಲಿಲ್ಲ. ಇದರಿಂದ ಅವರಿಗೆ ಅಲ್ಪ ನಿರಾಸೆಯಾದರೂ ರಾಜಧಾನಿ ಚೆನ್ನೈಗೆ ಹೋಗಿ ತರಬೇತಿ ಪಡೆಯುವ ಮನಸ್ಸು ಮಾಡುತ್ತಾರೆ.

ಐಪಿಎಸ್‌ ತರಬೇತಿಗಾಗಿ ಚೆನ್ನೈಗೆ ಹೋಗಲು ಬಯಸಿದ್ದರಿಂದ ಸತಿ ವ್ಯವಸ್ಥೆ ಮಾಡಬಹುದೇ ಎಂದು ತಮ್ಮ ಪತಿಯನ್ನು ಕೇಳುತ್ತಾರೆ. ಅವರ ಪತಿ ಎಲ್ಲಾ ರೀತಿಯಲ್ಲೂ ಅವರಿಗೆ ಬೆಂಬಲ ನೀಡುತ್ತಾರೆ. ಚೆನ್ನೈನಲ್ಲಿ ಅವರಿಗೆ ಪಿಜಿ ವ್ಯವಸ್ಥೆ ಮಾಡುತ್ತಾರೆ. ಐಪಿಎಸ್‌ ತರಬೇತಿಗಾಗಿ ಎಲ್ಲಾ ಇತರ ವ್ಯವಸ್ಥೆಗಳನ್ನು ಮಾಡುತ್ತಾರೆ. ಮಕ್ಕಳನ್ನು ಬಿಟ್ಟು ಹೋಗುವುದು ಯಾವ ತಾಯಿಗಾದರೂ ಕಷ್ಟವೇ. ಆದರೆ ತಮ್ಮ ಕನಸಿನ ಮುಂದೆ ಅಂಬಿಕಾರಿಗೆ ಎಲ್ಲ ಗೌಣವಾಗಿತ್ತು. ಗಂಡನ ಬಳಿ ಮಕ್ಕಳನ್ನು ಬಿಟ್ಟು ಚೆನ್ನೈಗೆ ಹೋಗಿ ತರಬೇತಿ ಪಡೆಯುತ್ತಾರೆ.

Ambika-IPS-4

ಹೆಜ್ಜೆ ಹೆಜ್ಜೆಗೂ ವೈಫಲ್ಯಗಳು

ಒಂದು ವರ್ಷ ಪೂರ್ತಿ ತಯಾರಿ ನಡೆಸಿದ ಅಂಬಿಕಾ, ತಮ್ಮ ಮೊದಲ ಯುಪಿಎಸ್‌ಸಿ ಪರೀಕ್ಷೆ ಬರೆಯಲು ಹೋಗುತ್ತಾರೆ. ಎಷ್ಟೇ ಆತ್ಮವಿಶ್ವಾಸ ಹೊಂದಿದ್ದರೂ, ದುರಾದೃಷ್ಟವಶಾತ್‌ ಅವರು ಅದನ್ನು ಪಾಸು ಮಾಡಲು ಸಾಧ್ಯವಾಗುವುದಿಲ್ಲ. ಧೈರ್ಯ ಕಳೆದುಕೊಳ್ಳದೆ, ಎರಡನೇ ಬಾರಿಗೆ ಪ್ರಯತ್ನಿಸಿ ಮತ್ತೂ ವಿಫಲರಾಗುತ್ತಾರೆ.

ಮೂರನೇ ಪ್ರಯತ್ನದಲ್ಲೂ ಪಾಸಾಗದಿದ್ದಾಗ, ಅಂಬಿಕಾ ಪತಿ ಆಕೆಯನ್ನು ಸಮಾಧಾನಪಡಿಸಿ ಹಿಂದಿರುಗಿ ಮನೆಗೆ ಬರುವಂತೆ ಹೇಳುತ್ತಾರೆ. ಇದೊಂದು ಕೊನೆಯ ಸಲ ಪ್ರಯತ್ನಿಸಿ ಬರಲು ಅಂಬಿಕಾ ಸಮಯ ಕೇಳುತ್ತಾರೆ. ತಾನು ಪಾಸಾಗದಿದ್ದರೆ ಮನೆಗೆ ಹಿಂದಿರುಗುವುದಾಗಿ ಭರವಸೆ ನೀಡುತ್ತಾರೆ.

ಅತ್ಯಂತ ಪ್ರಸಿದ್ಧ ಪರೀಕ್ಷೆಗಳಲ್ಲಿ ಒಂದನ್ನು ಪಾಸಾಗಿಸಲು ಅವರು ನಡೆಸಿದ ಹೋರಾಟ, ಪರೀಕ್ಷೆಯಲ್ಲಿ ಪಾಸಾಗಲು ಸಾಧ್ಯವಾಗದಿದ್ದರೂ, ಕನಿಷ್ಠ ಶಿಕ್ಷಕಿಯಾಗಿ ಕೆಲಸ ಮಾಡಲು ಆಕೆಯನ್ನು ಸಮರ್ಥಳನ್ನಾಗಿ ಮಾಡಿದೆ ಎಂಬುದು ಅವರಿಗೆ ಅರಿವಾಗುತ್ತದೆ.

Ambika-IPS-5

ಕೈಗೆಟುಕಿದ ಯಶಸ್ಸು

ಇದು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕೊನೆಯ ಅವಕಾಶ ಎಂದು ತಿಳಿದಿದ್ದರಿಂದ, ಆಕೆ ತನ್ನೆಲ್ಲ ಪರಿಶ್ರಮವನ್ನೂ ನಾಲ್ಕನೇ ಪ್ರಯತ್ನದಲ್ಲಿ ಹಾಕುತ್ತಾರೆ. ಆಕೆಯ ಕಠಿಣ ಪರಿಶ್ರಮಕ್ಕೆ ಕೊನೆಗೆ ಫಲ ದೊರೆಯುತ್ತದೆ. ಅಂಬಿಕಾ ಐಪಿಎಸ್‌ ಪ್ರಿಲಿಮ್ಸ್ ಮಾತ್ರವಲ್ಲದೆ, ಮುಖ್ಯ ಪರೀಕ್ಷೆ ಮತ್ತು  ಸಂದರ್ಶನವನ್ನೂ ಸಹ ಪಾಸು ಮಾಡುತ್ತಾರೆ. 2008ರಲ್ಲಿ ಭಾರತೀಯ ಪೊಲೀಸ್‌ ಸೇವಾ ಅಧಿಕಾರಿಯಾಗುವ ಮೂಲಕ `ಮನಸ್ಸಿದ್ದರೆ ಮಾರ್ಗ’ ಎಂಬ ಮಾತನ್ನು ನಿಜ ಮಾಡುತ್ತಾರೆ.

Ambika-IPS-3

`ಲೇಡಿ ಸಿಂಗಂ‘

ಮೊದಲು ಮಹಾರಾಷ್ಟ್ರಕ್ಕೆ ನಿಯೋಜನೆಗೊಳ್ಳುವ ಅವರು, ತಮ್ಮ ನಿರ್ಭೀತ ಕೆಲಸದ ಮೂಲಕ ಜನರಿಂದ `ಲೇಡಿ ಸಿಂಗಂ’ ಎಂದೇ ಕರೆಸಿಕೊಳ್ಳುತ್ತಾರೆ. 2019ರಲ್ಲಿ ಮಹಾರಾಷ್ಟ್ರದಲ್ಲಿ ಪೊಲೀಸ್‌ ಉಪಆಯುಕ್ತರಾಗಿದ್ದಾಗ, `ಲೋಕಮತ ಮಹಾರಾಷ್ಟ್ರ’ ಪ್ರಶಸ್ತಿಗೂ ಭಾಜನರಾಗುತ್ತಾರೆ.

ತಮ್ಮ ಬಾಲ್ಯ ವಿವಾಹಕ್ಕೆ ತಮ್ಮ ಹೆತ್ತವರನ್ನು ಅಥವಾ ತಮ್ಮ ಅದೃಷ್ಟವನ್ನು ದೂಷಿಸುವ ಬದಲು, ಅಂಬಿಕಾ ಛಲವನ್ನು ಬಿಡದೆ, ಯಶಸ್ಸಿನ ಹಾದಿ ತುಳಿಯುತ್ತಾರೆ.

ತಮ್ಮ ಪತಿಯ ಬೇಷರತ್ತಾದ ಬೆಂಬಲದೊಂದಿಗೆ, ಅವರು ಮಾಹಾರಾಷ್ಟ್ರದಲ್ಲಿ ಖ್ಯಾತಿ ಪಡೆದಿದ್ದಾರೆ. ಪ್ರಸ್ತುತ ಮುಂಬೈನಲ್ಲಿ  ಉಪ ಪೊಲೀಸ್‌ ಆಯುಕ್ತರಾಗಿ (ಡಿಸಿಪಿ) ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಂಬಿಕಾ ಜೀವನದ ಪಯಣ ಅನೇಕ ಮಹಿಳೆಯರಿಗೆ ಸ್ಛೂರ್ತಿಯಾಗಿದೆ. ಬಾಲ್ಯ ವಿವಾಹದ ಸಂತ್ರಸ್ತೆಯಾಗಿದ್ದರೂ, ವ್ಯವಸ್ಥೆಯನ್ನು ದೂಷಿಸುತ್ತಾ ಕುಳಿತುಕೊಳ್ಳದ ಅಂಬಿಕಾ, ವ್ಯವಸ್ಥೆಯನ್ನು ಬದಲಿಸಲು ಮತ್ತು ಸಾವಿರಾರು ಜನರ ಜೀವನವನ್ನು ಸುಧಾರಿಸಲು ಶ್ರಮಿಸಿದ್ದಾರೆ. ಧೈರ್ಯದಿಂದ ಹೋರಾಡಿದರೆ ಯಾವುದೇ ಕಷ್ಟವನ್ನೂ ಗೆಲ್ಲಬಹುದು ಎಂಬುದಕ್ಕಿ ಅಂಬಿಕಾ ಸಾಕ್ಷಿಯಾಗಿದ್ದಾರೆ.

– ಸುನೀತಾ ಬಿ.ಎಂ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ