– ರಾಘವೇಂದ್ರ ಅಡಿಗ ಎಚ್ಚೆನ್.
ನಟ ಧನ್ವೀರ್‌ಗೆ ಸದ್ಯ ಸಂಕಷ್ಟಗಳ ಸರಮಾಲೆ ಎದುರಾಗಿದೆ. ಒಂದು ಕಡೆ ವಿಜಯಲಕ್ಷ್ಮಿ ಜೊತೆಗಿನ ಜಟಾಪಟಿ ಪ್ರಕರಣದ ವಿಚಾರಣೆಗೆ ಹಾಜರಾಗಬೇಕಿದೆ. ಮತ್ತೊಂದೆಡೆ ಪರಪ್ಪನ ಅಗ್ರಹಾರ ಜೈಲಿನ ಕೈದಿಗಳಿಗೆ ರಾಜಾತಿಥ್ಯ ನೀಡಿದ ವಿಡಿಯೋ ವೈರಲ್ ಪ್ರಕರಣದಲ್ಲೂ ಅವರ ಮೊಬೈಲ್ ಬಗ್ಗೆ ಮಹತ್ವದ ಮಾಹಿತಿ ಸಿಸಿಬಿ ಪೊಲೀಸರ ಕೈ ಸೇರಿದೆ.
ಮೊದಲಿಗೆ ವಿಜಯಲಕ್ಷ್ಮಿ ಮತ್ತು ಧನ್ವೀರ್ ನಡುವಿನ ಜಟಾಪಟಿ ಪ್ರಕರಣದ ವಿಚಾರಣೆ ವಿಚಾರಕ್ಕೆ ಬರೋಣ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನಿಗದಿತ ಸಮಯದಲ್ಲಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಧನ್ವೀರ್ ಪೊಲೀಸರಿಗೆ ಪತ್ರ ಬರೆದು ಹೆಚ್ಚಿನ ಕಾಲಾವಕಾಶ ಕೋರಿದ್ದರು. ಈ ಮನವಿಯನ್ನು ಪರಿಗಣಿಸಿರುವ ಪೊಲೀಸರು ವಿಚಾರಣೆಗೆ ಹೊಸ ದಿನಾಂಕ ನಿಗದಿಪಡಿಸಿದ್ದಾರೆ.
ಈ ಹಿಂದೆ ನವೆಂಬರ್ 11ರೊಳಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಇದೀಗ ನವೆಂಬರ್ 12ರಂದು ವಿಚಾರಣೆಗೆ ಹಾಜರಾಗುವಂತೆ ಎರಡನೇ ನೋಟಿಸ್ ನೀಡಲಾಗಿದೆ.
ಇನ್ನು ಜೈಲಿನ ವಿಡಿಯೋ ವೈರಲ್ ಪ್ರಕರಣ ಧನ್ವೀರ್‌ಗೆ ಮತ್ತಷ್ಟು ತಲೆನೋವಾಗಿ ಪರಿಣಮಿಸಿದೆ. ವಿಡಿಯೋ ವೈರಲ್ ಮಾಡಲು ಧನ್ವೀರ್ ಅವರ ಮೊಬೈಲ್ ಬಳಸಲಾಗಿದೆ ಎಂಬ ಆರೋಪದ ಕುರಿತು ಸಿಸಿಬಿ ಪೊಲೀಸರು ಪರಿಶೀಲನೆ ನಡೆಸಿದ್ದರು.
ವಿಚಾರಣೆ ವೇಳೆ ಧನ್ವೀರ್ ಅವರ ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿದಾಗ ವಿಡಿಯೋಗಳು ಪತ್ತೆಯಾಗಿರಲಿಲ್ಲ. ಹೀಗಾಗಿ ಅಳಿಸಲಾದ ಮಾಹಿತಿಯನ್ನು ಮರುಪಡೆಯಲು ಮೊಬೈಲ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
ಇದೀಗ ಮೊಬೈಲ್ ರಿಟ್ರೀವ್ ವರದಿ ಸಿಸಿಬಿ ಪೊಲೀಸರ ಕೈ ಸೇರಿದೆ. ವರದಿಯಲ್ಲಿ ಧನ್ವೀರ್ ಅವರ ಮೊಬೈಲ್‌ನಿಂದ ವಿಡಿಯೋ ವೈರಲ್ ಆಗಿರುವುದಕ್ಕೆ ಸಾಕ್ಷ್ಯ ಸಿಕ್ಕಿದೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ಬಂಧನ ವಾರಂಟ್ ಪಡೆಯಲು ಸಿಸಿಬಿ ಮುಂದಾಗಿದೆ.
ಒಟ್ಟಿನಲ್ಲಿ, ಒಂದು ಪ್ರಕರಣದಲ್ಲಿ ವಿಚಾರಣೆಗೆ ಹೊಸ ದಿನಾಂಕ ನಿಗದಿಯಾಗಿದ್ದರೆ, ಮತ್ತೊಂದು ಪ್ರಕರಣದಲ್ಲಿ ಮೊಬೈಲ್ ವರದಿ ಧನ್ವೀರ್‌ಗೆ ಹೊಸ ಸಂಕಷ್ಟ ತಂದಿದೆ.





