ಮಳೆಗಾಲದ ಈ ದಿನಗಳಲ್ಲಿ ಚಪಾತಿ, ಪೂರಿ ಇತ್ಯಾದಿಗಳಿಗೆ ಒಂದಿಷ್ಟು ಖಾರ ಖಾರವಾಗಿ ಏನಾದರೂ ಬೇಕೆನಿಸಿದಾಗ, ಆಂಧ್ರ ಮೂಲದ ಈ ಮೊಟ್ಟೆ ಗ್ರೇವಿ ಟ್ರೈ ಮಾಡಿ ನೋಡಿ!
ಎಗ್ ಪುಲುಸು
ಮೂಲ ಸಾಮಗ್ರಿ : ಅರ್ಧ ಸೌಟು ಎಣ್ಣೆ, ಒಂದಿಷ್ಟು ಮೆಂತ್ಯ, ಜೀರಿಗೆ, ಹೆಚ್ಚಿದ 3-4 ಈರುಳ್ಳಿ, ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ, 2-3 ಟೊಮೇಟೊ, ಅರಿಶಿನ, ಉಪ್ಪು, ಖಾರ, ಹುಣಿಸೆ ಕಿವುಚಿದ ರಸ, ಸಕ್ಕರೆ, ಬೇಯಿಸಿ ನಂತರ ಎಣ್ಣೆಯಲ್ಲಿ ಕರಿದ 10 ಮೊಟ್ಟೆ, ಕೊ.ಸೊಪ್ಪು, ಪುದೀನಾ.
ಮೊಟ್ಟೆ ಬೇಯಿಸಿ ಕರಿಯಲು ಸಾಮಗ್ರಿ : 10 ಬೆಂದ ಮೊಟ್ಟೆ, ತುಸು ಕರಿಬೇವು, ತುಸು ಉಪ್ಪು, ಖಾರ, ಕರಿಯಲು ಎಣ್ಣೆ.
ಮೊಟ್ಟೆ ಕರಿಯುವ ವಿಧಾನ : ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಬೆಂದ ಮೊಟ್ಟೆ ಹಾಕಿ ಕರಿಯಿರಿ. ಇದಕ್ಕೆ ಕರಿಬೇವು, ಉಪ್ಪು, ಖಾರ ಹಾಕಿ ಫ್ರೈ ಮಾಡಿ. 2 ನಿಮಿಷ ಬಿಟ್ಟು ಇನ್ನೆಲ್ಲ ತೆಗೆದು ಒಂದು ಬದಿಗಿಡಿ.
ಎಗ್ ಪುಲುಸುಗಾಗಿ ವಿಧಾನ : ಮೊದಲು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ನಂತರ ಇದಕ್ಕೆ ಮೆಂತ್ಯ ಹಾಗೂ ಹಿಂದೆ ತಿಳಿಸಿದಂತೆ ಒಂದೊಂದಾಗಿ ಎಲ್ಲಾ ಸಾಮಗ್ರಿ ಹಾಕಿ, ನಿಧಾನವಾಗಿ ಚೆನ್ನಾಗಿ ಬಾಡಿಸಬೇಕು. ಆಮೇಲೆ 1 ಕಪ್ ನೀರು, ಹುಣಿಸೆ ಕಿವುಚಿದ ರಸ, ಸಕ್ಕರೆ ಹಾಕಿ ಬೇಗ ಬೇಗ ಕೈಯಾಡಿಸಿ. 7-8 ನಿಮಿಷದ ನಂತರ ಮತ್ತೆ ಅರ್ಧ ಕಪ್ ನೀರು, ಕರಿದ ಮೊಟ್ಟೆ ಸೇರಿಸಿ, ಮಧ್ಯಮ ಉರಿಯಲ್ಲಿ ಬೇಯಲು ಬಿಡಿ. ಕೊನೆಯಲ್ಲಿ ಕೊ.ಸೊಪ್ಪು, ಪುದೀನಾ ಹಾಕಿ ಎಲ್ಲ ಬೆರೆತುಕೊಳ್ಳುವಂತೆ ಮಾಡಿ. ನಂತರ ಇದನ್ನು ಸರ್ವಿಂಗ್ ಡಿಶ್ ಗೆ ತೆಗೆದುಕೊಂಡು, ಕೊ.ಸೊಪ್ಪಿನಿಂದ ಅಲಂಕರಿಸಿ, ಬಿಸಿ ಬಿಸಿ ಅನ್ನದ ಜೊತಿ ಸವಿಯಿರಿ.
ಎಂದಿನ ಮಾಮೂಲಿ ಪಲಾವ್, ಬಿರಿಯಾನಿಗಳಿಂದ ಬೇಸತ್ತಿದ್ದೀರಾ……? ಹಾಗಾದರೆ ಈ ಮಾನ್ ಸೂನ್ ಗಾಗಿ ಇಂಥ ಮೊಟ್ಟೆ ಬಿರಿಯಾನಿ ಮಾಡಿ ಏಕೆ ಸವಿಯಬಾರದು?

ಮೊಟ್ಟೆ ದಮ್ ಬಿರಿಯಾನಿ
ಅಕ್ಕಿ ಬೇಯಿಸಲು ಸಾಮಗ್ರಿ : 3-4 ಕಪ್ ಬಾಸುಮತಿ ಅಕ್ಕಿ (ಅರ್ಧ ಗಂಟೆ ನೆನೆಸಿಡಿ), ರುಚಿಗೆ ತಕ್ಕಷ್ಟು ಲವಂಗ, ಚಕ್ಕೆ, ಮೊಗ್ಗು, ಪಲಾವ್ ಎಲೆ, ಏಲಕ್ಕಿ, ತುಪ್ಪ.
ಮೊಟ್ಟೆ ಬಿರಿಯಾನಿಗಾಗಿ ಸಾಮಗ್ರಿ : ಸಣ್ಣಗೆ ಹೆಚ್ಚಿಕೊಂಡ 2 ಈರುಳ್ಳಿ, 2 ಆಲೂ, ಹಸಿ ಮೆಣಸು, ಶುಂಠಿ-ಬೆಳ್ಳುಳ್ಳಿ, ಕೊ.ಸೊಪ್ಪು, ಪುದೀನಾ, 2 ಲವಂಗದೆಲೆ, ತುಸು ಏಲಕ್ಕಿ, ಜಾಪತ್ರೆ, ಮ್ಯಾರಿನೇಟ್ ಮಾಡಿದ 3-4 ಬೆಂದ ಮೊಟ್ಟೆ, ಸುಮಾರಾಗಿ ಬೆಂದ 2 ಕಪ್ ಅನ್ನ, ಹಾಲಲ್ಲಿ ನೆನೆದ ಕೇಸರಿ, ಒಂದಿಷ್ಟು ಬಾಡಿಸಿದ ಈರುಳ್ಳಿ.
ಮ್ಯಾರಿನೇಶನ್ ಗಾಗಿ ಸಾಮಗ್ರಿ : 2 ಕಪ್ ಕಡೆದ ಹುಳಿ ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅರಿಶಿನ, ಧನಿಯಾ ಪುಡಿ, ಗರಂಮಸಾಲ, ಚಾಟ್ ಮಸಾಲ, ಬಾಡಿಸಿಕೊಂಡ ತುಸು ಈರುಳ್ಳಿ, ಹೆಚ್ಚಿದ ಹಸಿ ಮೆಣಸು, ಪುದೀನಾ, ಕೊ.ಸೊಪ್ಪು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, 10-12 ಬೆಂದ ಮೊಟ್ಟೆ.
ಮಸಾಲೆಗಾಗಿ ಸಾಮಗ್ರಿ : ಒಂದಿಷ್ಟು ಧನಿಯಾಬೀಜ, ಕಾಳುಮೆಣಸು, ಲವಂಗ, ಚಕ್ಕೆ, ಮೊಗ್ಗು, ಏಲಕ್ಕಿ, ಜಾಪತ್ರೆ, ಜೀರಿಗೆ, ಲವಂಗದ ಎಲೆ, ಏಲಕ್ಕಿ, ಉಪ್ಪು.
ಒಗ್ಗರಣೆ ಸಾಮಗ್ರಿ : 4-5 ಚಮಚ ಹಿಂದಿನಂತೆ ರೆಡಿ ಮಾಡಿದ ಮಸಾಲೆ, 4-5 ಚಮಚ ಫ್ರೆಶ್ ಕ್ರೀಂ, 1-2 ಈರುಳ್ಳಿ ಹೆಚ್ಚಿ ಬಾಡಿಸಿದ್ದು, ತುಸು ಕೇದಗೆ ಎಸೆನ್ಸ್, ಗುಲಾಬಿ ಜಲ.
ಅಕ್ಕಿ ಬೇಯಿಸಲು ವಿಧಾನ : ದಪ್ಪ ತಳದ ಪಾತ್ರೆಯಲ್ಲಿ ನೀರು ಕುದಿಸಿರಿ. ಇದಕ್ಕೆ ಹಿಂದೆ ತಿಳಿಸಿದ ಎಲ್ಲಾ ಸಾಮಗ್ರಿ ಹಾಕಿಡಿ. ಮುಚ್ಚಳ ಮುಚ್ಚಿರಿಸಿ 4-5 ನಿಮಿಷ ದೊಡ್ಡ ಉರಿಯಲ್ಲಿ ಬೇಯಿಸಿ. 60% ಅನ್ನ ಬೆಂದಿದೆ ಎನಿಸಿದಾಗ ಅರ್ಧದಷ್ಟನ್ನು ತೆಗೆದು ಪಕ್ಕಕ್ಕಿಡಿ. ಇನ್ನೂ ಸ್ವಲ್ಪ ಹೊತ್ತು ಬೇಯಿಸಿ, ಉಳಿದದ್ದನ್ನು ಸಹ ಬೇರೆಯಾಗಿ ಎತ್ತಿಡಿ.
ದಮ್ ಬಿರಿಯಾನಿಗಾಗಿ ವಿಧಾನ : ದೊಡ್ಡದಾದ ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ. ಇದಕ್ಕೆ ಹೆಚ್ಚಿದ ಈರುಳ್ಳಿ, ನಂತರ ಆಲೂ ಹಾಕಿ ಬಾಡಿಸಿ. ನಂತರ ಲವಂಗದ ಎಲೆ, ಮ್ಯಾರಿನೇಟೆಡ್ ಮೊಟ್ಟೆ ಸಹಿತ ಹಿಂದೆ ತಿಳಿಸಿದ ಎಲ್ಲಾ ಸಾಮಗ್ರಿ ಹಾಕಿ 10-12 ನಿಮಿಷ ಕೆದಕಬೇಕು. ಆಮೇಲೆ ಇದಕ್ಕೆ 60% ಬೆಂದ ಅನ್ನ ಹಾಕಿ ಮಿಶ್ರಗೊಳಿಸಿ. ಸ್ವಲ್ಪ ಹೊತ್ತು ಬಿಟ್ಟು ಉಳಿದ ಅನ್ನ ಸೇರಿಸಿ ಬೆರೆಸಿಡಿ. ಇದರ ಮೇಲೆ ಕೇಸರಿ ಹರಡಿರಿ. ಅದರ ಮೇಲೆ ಪುದೀನಾ, ಬಾಡಿಸಿಕೊಂಡ ಈರುಳ್ಳಿ, ಕೊ.ಸೊಪ್ಪು, ಹಸಿ ಮೆಣಸು ಎಲ್ಲಾ ಸೇರಿಸಿ. ಇದಕ್ಕೆ ಮುಚ್ಚಳ ಮುಚ್ಚಿರಿಸಿ, ಚಪಾತಿ ಹಿಟ್ಟಿನಿಂದ ಸೀಲ್ ಮಾಡಿಬಿಡಿ. ಮಂದ ಉರಿಯಲ್ಲಿ ಬೇಯಲಿ. ಈ ಮುಚ್ಚಳದ ಮೇಲೆ ನಿಗಿನಿಗಿ ಕೆಂಡ ಇರಿಸಿ. 2-3 ನಿಮಿಷ ಜೋರು ಉರಿ ಇರಲಿ. ನಂತರ ಮಂದ ಉರಿ ಮಾಡಿ 10-12 ನಿಮಿಷ ಹಾಗೇ ಬೇಯಿಸಿ. ನಂತರ ಇದನ್ನು ದೊಡ್ಡ ಬೇಸನ್ ಗೆ ರವಾನಿಸಿ. ಇದರ ಮೇಲೆ ಕೊ.ಸೊಪ್ಪು, ಪುದೀನಾ ಉದುರಿಸಿ. ರಾಯ್ತಾ ಜೊತೆ ಬಿಸಿಯಾಗಿ ಸವಿಯಲು ಕೊಡಿ.
ಮ್ಯಾರಿನೇಶನ್ ಗಾಗಿ ವಿಧಾನ : ಒಂದು ಬಟ್ಟಲಿಗೆ ಮೊಸರು, ಹಿಂದೆ ತಿಳಿಸಿದಂತೆ ಬೆಂದ ಮೊಟ್ಟೆಗಳ ಸಮೇತ ಎಲ್ಲಾ ಸಾಮಗ್ರಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಒಂದು ಬದಿಗಿಟ್ಟುಕೊಂಡು ಬಳಸಿಕೊಳ್ಳಿ.
ಮಸಾಲೆ ರೆಡಿ ಮಾಡುವ ವಿಧಾನ : ಒಂದು ಪ್ಯಾನಿಗೆ ಹಿಂದೆ ತಿಳಿಸಿದ ಎಲ್ಲಾ ಸಾಮಗ್ರಿ ಹಾಕಿ 2-3 ನಿಮಿಷ ಹಾಗೇ ಹುರಿಯಿರಿ. ಕೆಳಗಿಳಿಸಿ ಆರಿದ ಮೇಲೆ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ, ಇದನ್ನು ನಂತರ ಬಳಸಿಕೊಳ್ಳಿ.
ಒಗ್ಗರಣೆಗಾಗಿ ವಿಧಾನ : ಒಂದು ಬಟ್ಟಲಿಗೆ ಹಿಂದೆ ತಿಳಿಸಿದಂತೆ ಎಲ್ಲಾ ಸಾಮಗ್ರಿ ಹಾಕಿಡಿ. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ ಒಂದು ಕಡೆಗಿಟ್ಟು ನಂತರ ಬಳಸಿರಿ.
ಇಡ್ಲಿ, ದೋಸೆ ಯಾ ಚಪಾತಿ ಮುಂತಾದವಕ್ಕೆ ಸ್ಪೆಷಲ್ ಆಗಿ ಡಿನ್ನರ್ ಗೆ ಈ ರೆಸಿಪಿಯನ್ನು ಟ್ರೈ ಮಾಡಿ ನೋಡಿ, ಮಕ್ಕಳು ಮತ್ತೆ ಮತ್ತೆ ಬಯಸುತ್ತಾರೆ!

ಬೇಸನ್ ಕಡಲೆಕಾಳಿನ ಗ್ರೇವಿ
ಸಾಮಗ್ರಿ : 1 ಕಪ್ ಕಡಲೆಕಾಳು, 2 ಕಪ್ ಹುಳಿ ಮೊಸರು, ಅರ್ಧ ಕಪ್ ಬೇಸನ್, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅರಿಶಿನ, ಇಂಗು, ಒಗ್ಗರಣೆಗೆ ಎಣ್ಣೆ, ಸಾಸುವೆ, ಜೀರಿಗೆ, ಕರಿಬೇವು, ಹಸಿಮೆಣಸು.
ವಿಧಾನ : ಹಿಂದಿನ ರಾತ್ರಿ ನೆನೆಹಾಕಿದ ಕಡಲೆಕಾಳನ್ನು ಮಾರನೇ ದಿನ ಕುಕ್ಕರ್ ನಲ್ಲಿ ಹದನಾಗಿ ಬೇಯಿಸಿ. ಇದರಲ್ಲಿ ಅರ್ಧ ಭಾಗವನ್ನು (ನೀರಿನ ಸಮೇತ) ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಇದನ್ನು ಸೋಸಿಕೊಂಡು ಅದರ ಸಿಪ್ಪೆ ಬೇರ್ಪಡಿಸಿ. ಇದಕ್ಕೆ ಬೇಸನ್, ಮೊಸರು ಬೆರೆಸಿಕೊಳ್ಳಿ. ಇನ್ನಷ್ಟು ನೀರು ಬೆರೆಸಿ ತೆಳುವಾಗಿಸಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಇದಕ್ಕೆ ಸಾಸುವೆ, ಜೀರಿಗೆಯ ಒಗ್ಗರಣೆ ಕೊಡಿ. ಅರಿಶಿನ ಬೆರೆಸಿರಿ. ನಂತರ ಹೆಚ್ಚಿದ ಟೊಮೇಟೊ ಹಾಕಿ ಬಾಡಿಸಿ. ಆಮೇಲೆ ಇದಕ್ಕೆ ಬೇಸನ್ ಮಿಶ್ರಣ, ಉಳಿದ ಬೆಂದ ಕಡಲೆಕಾಳು ಎಲ್ಲಾ ಸೇರಿಸಿ ಮಂದ ಉರಿಯಲ್ಲಿ ಕುದಿಸಬೇಕು. ಇದೀಗ ಗ್ರೇವಿ ರೆಡಿ. ಅನ್ನ, ರೊಟ್ಟಿ ಜೊತೆ ಬಿಸಿ ಬಿಸಿಯಾಗಿ ಸವಿಯಲು ಕೊಡಿ.

ಪಾವ್ ಖುಂಬ್
ಸಾಮಗ್ರಿ : 50-50 ಗ್ರಾಂ ಹೆಚ್ಚಿದ ಅಣಬೆ, ತುರಿದ ಪನೀರ್, ಹೆಚ್ಚಿದ 2-2 ಈರುಳ್ಳಿ, ಟೊಮೇಟೊ, ಕೊ.ಸೊಪ್ಪು, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅರಿಶಿನ, ತುಪ್ಪ, ರೆಡಿಮೇಡ್ ಪಾವ್ ಬನ್ಸ್.
ವಿಧಾನ : ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿಕೊಂಡು (ಬನ್ನು ಬಿಟ್ಟು) ಮೇಲಿನ ಎಲ್ಲಾ ಸಾಮಗ್ರಿ ಒಂದೊಂದಾಗಿ ಹಾಕುತ್ತಾ ಮಂದ ಉರಿಯಲ್ಲಿ ಬಾಡಿಸಿ, ಕೆಳಗಿಳಿಸಿ. ಬನ್ನನ್ನು ಗುಂಡಗೆ ಕತ್ತರಿಸಿ ಬೆಣ್ಣೆ ಸವರಿಡಿ. ಅದರ ಮಧ್ಯೆ ಈ ಮಿಶ್ರಣ ತುಂಬಿಸಿ, ತವಾ ಮೇಲೆ ತುಪ್ಪ ಹಾಕಿ ಪಾವ್ ಬನ್ನನ್ನು ಎರಡೂ ಕಡೆ ಬಿಸಿ ಮಾಡಿ, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.
ಡಿನ್ನರ್ ಗೆ ಏನಾದರೂ ಹೊಸತನ್ನು ಬಯಸುವವರಿಗಾಗಿ ಇಲ್ಲಿನ ಈ ಎರಡು ರೆಸಿಪೀಸ್ ನಿಜಕ್ಕೂ ಒಂದು ಸರ್ ಪ್ರೈಸ್ ಆಗಿರುತ್ತದೆ!

ಕ್ಯಾರೆಟ್ ಕ್ಯಾಬೇಜ್ ಫ್ರೈಸ್
ಸಾಮಗ್ರಿ : ತುರಿದ 12 ಕ್ಯಾರೆಟ್, 200 ಗ್ರಾಂ ಕ್ಯಾಬೇಜ್, ಅರ್ಧ ಸೌಟು ಎಣ್ಣೆ, ಒಂದಿಷ್ಟು ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, 3 ಬಗೆಯ ಕ್ಯಾಪ್ಸಿಕಂ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಚಿಲೀ ಫ್ಲೇಕ್ಸ್, ಟೊಮೇಟೊ ಸಾಸ್, ತುರಿದ ಮೊಜರೆಲಾ ಟೀಸ್, ರೆಡಿಮೇಡ್ ಫ್ರೆಂಚ್ ಫ್ರೈಸ್, ಸೋಯಾ ಗ್ರಾನ್ಯುಯೆಲ್ಸ್, ಕರಿಯಲು ಎಣ್ಣೆ.
ವಿಧಾನ : ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಮೇಲಿನ ಎಲ್ಲಾ ಸಾಮಗ್ರಿಗಳನ್ನೂ ಒಂದೊಂದಾಗಿ ಹಾಕುತ್ತಾ ಮಂದ ಉರಿಯಲ್ಲಿ ಬಾಡಿಸಬೇಕು. ನಂತರ ಇದಕ್ಕೆ ಉಪ್ಪು, ಮೆಣಸು ಸೇರಿಸಿ. ತುಸು ನೀರು ಬೆರೆಸಿ ಗ್ರೇವಿ ತರಹ ಕುದಿಸಿ. ಇದೀಗ ಸಾಸ್ ರೆಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಫ್ರೆಂಚ್ ಫ್ರೈಸ್ ಕರಿದು, ಟ್ರೇನಲ್ಲಿ ಹರಡಿರಿ. ಇದರ ಮೇಲೆ ಸಿದ್ಧಗೊಂಡ ಸಾಸ್ ಹರಡಿ, ಆಮೇಲೆ ಚೀಸ್ ಉದುರಿಸಿ. ಇದನ್ನು ಓವನ್ನಿನಲ್ಲಿ ಹದನಾಗಿ ಬೇಕ್ ಮಾಡಿ, ಗಾರ್ಲಿಕ್ ಬ್ರೆಡ್ ಜೊತೆ ಸವಿಯಿರಿ.

ಸ್ಪೆಷಲ್ ಸ್ಯಾಂಡ್ ವಿಚ್
ಸಾಮಗ್ರಿ : ಅರ್ಧ ಕಪ್ ಬೆಣ್ಣೆ, ತುಪ್ಪದಲ್ಲಿ ಹುರಿದ ಒಂದಿಷ್ಟು ಗೋಡಂಬಿ, ದ್ರಾಕ್ಷಿ, ಬಾದಾಮಿ ಚೂರು, ರುಚಿಗೆ ತಕ್ಕಷ್ಟು ಮಾಗಿದ ಬಾಳೆಹಣ್ಣಿನ ಚೂರು, ಕಾಳು ಮೆಣಸಿನ ಪುಡಿ, ಚಕ್ಕೆ ಪುಡಿ, 5-6 ಬ್ರೆಡ್ ಸ್ಲೈಸ್, ಅಲಂಕರಿಸಲು ತುಪ್ಪದಲ್ಲಿ ಹುರಿದ ಬಾದಾಮಿ.
ವಿಧಾನ : ಬಾದಾಮಿ ಇತ್ಯಾದಿ ಮಿಕ್ಸಿಯಲ್ಲಿ ತರಿಯಾಗಿಸಿ, ಅದಕ್ಕೆ ಉಳಿದೆಲ್ಲ ಸಾಮಗ್ರಿ ಸೇರಿಸಿ ಮಿಶ್ರಣ ಮಾಡಿ, ಮತ್ತೊಮ್ಮೆ ಮಿಕ್ಸಿ ಚಲಾಯಿಸಿ. ಎಲ್ಲಾ ಬ್ರೆಡ್ ಸ್ಲೈಸ್ ಗೂ ಬೆಣ್ಣೆ ಸವರಿಡಿ. ಒಂದು ಸ್ಲೈಸ್ ಮೇಲೆ ಗೋಡಂಬಿ ಮಿಶ್ರಣ, ಅದರ ಮೇಲೆ ಬಾಳೆಹಣ್ಣಿನ ಚೂರು, ಬಾದಾಮಿ ತರಿ ಇರಿಸಿ, ಮೇಲೆ ಇನ್ನೊಂದು ಸ್ಲೈಸ್ ಇರಿಸಿ, ಲಘುವಾಗಿ ಟೋಸ್ಟ್ ಮಾಡಿ ಸವಿಯಲು ಕೊಡಿ.
ಒಂದೇ ತರಹದ ವ್ಯಂಜನಗಳಿಂದ ಬೇಸತ್ತಿದ್ದೀರಾ…..? ಅದಕ್ಕಾಗಿ ತುಸು ಬದಲಾವಣೆ ಮಾಡಿಕೊಂಡು ಇಲ್ಲಿನ ಈ ರೆಸಿಪೀಸ್ ಟ್ರೈ ಮಾಡಿ ನೋಡಿ!

ಅಕ್ಕಿಹಿಟ್ಟಿನ ಶಂಕರಪೋಳಿ
ಸಾಮಗ್ರಿ : 1-1 ಕಪ್ ಅಕ್ಕಿಹಿಟ್ಟು, ಬೆಲ್ಲದ ಪುಡಿ, ಅರ್ಧ ಕಪ್ ಕೊಬ್ಬರಿ ತುರಿ (ನುಣುಪಾಗಿರಲಿ), ತುಪ್ಪದಲ್ಲಿ ಹುರಿದ ಒಂದಿಷ್ಟು ಗೋಡಂಬಿ, ಬಾದಾಮಿ ಚೂರು, ಎಳ್ಳು, ಕರಿಯಲು ಎಣ್ಣೆ, ತುಸು ತುಪ್ಪ.
ವಿಧಾನ : ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ, ಬೆಲ್ಲ ಹಾಕಿ. ಅರ್ಧ ಕಪ್ ನೀರು ಬೆರೆಸಿ ಬೆಲ್ಲ ಕರಗಿಸಿ, 1 ನಿಮಿಷ ಬಿಟ್ಟು ಕೆಳಗಿಳಿಸಿ. ಆರಿದ ನಂತರ ಇದನ್ನು ಸೋಸಿಕೊಂಡು, ಮೇಲೆ ಹೇಳಿದ ಎಲ್ಲಾ ಸಾಮಗ್ರಿ ಬೆರೆಸಿ ಮಿಶ್ರಣ ಕಲಸಿ, ತುಪ್ಪದಲ್ಲಿ ನಾದಿಕೊಳ್ಳಿ. ನಂತರ ಇದನ್ನು ಸಣ್ಣ ಉಂಡೆಗಳಾಗಿಸಿ, ಚಿತ್ರದಲ್ಲಿರುವಂತೆ ಚಪ್ಪಟೆ ಆಗಿಸಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಗಾಳಿಯಾಡದ ಡಬ್ಬಕ್ಕೆ ತುಂಬಿರಿಸಿ, ಮಕ್ಕಳು ಬಯಸಿದಾಗ ಸವಿಯಲು ಕೊಡಿ.
ಕಡಲೆ ಹಿಟ್ಟಿನಿಂದ ಬೋಂಡಾ, ಪಕೋಡಾ, ಬಜ್ಜಿ ಇತ್ಯಾದಿ ಮಾಮೂಲಿ ಸ್ನ್ಯಾಕ್ಸ್ ಇದ್ದದ್ದೇ. ಹೀಗಾಗಿ ವಿಭಿನ್ನತೆ ಬಯಸುವ ಮಕ್ಕಳಿಗಾಗಿ ಇದನ್ನು ಮಾಡಿ ಅವರ ಮೆಚ್ಚುಗೆ ಗಳಿಸಿರಿ!

ಬೇಸನ್ ಕಾಯಿನ್ಸ್
ಸಾಮಗ್ರಿ : 2 ಕಪ್ ಕಡಲೆಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಈರುಳ್ಳಿ ಪೇಸ್ಟ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಲೈಟ್ ಪೆಪ್ಪರ್, ಧನಿಯಾಪುಡಿ, ತುಪ್ಪ, ಮೊಸರು, ಚಾಟ್ ಮಸಾಲ, ಕರಿಯಲು ಎಣ್ಣೆ.
ವಿಧಾನ : ಒಂದು ಬಟ್ಟಲಿಗೆ ಕಡಲೆಹಿಟ್ಟಿನ ಜೊತೆ ಮೇಲಿನ ಎಲ್ಲಾ ಸಾಮಗ್ರಿ ಹಾಕಿ ಟೈಟಾಗಿ ಬೆರೆಸಿಕೊಳ್ಳಿ. ಒಂದು ಪಾತ್ರೆಯಲ್ಲಿ ನೀರು ಕುದಿಸಿರಿ. ಟೈಟ್ ಮಿಶ್ರಣವನ್ನು ದೊಡ್ಡ ಸುರುಳಿಯಾಗಿಸಿ ಈ ಕುದಿನೀರಿಗೆ ಹಾಸಿ ಬೇಯಿಸಿ. ಮಂದ ಉರಿಯಲ್ಲಿ 10 ನಿಮಿಷ ಬೇಯಿಸಿ. ಬೆಂದಾಗ ಅದೇ ನೀರಲ್ಲಿ ಮೇಲೆ ತೇಲುತ್ತದೆ. ನಂತರ ಇದನ್ನು ಹೊರತೆಗೆದು ಆರಲು ಬಿಡಿ. ಆಮೇಲೆ ಇದರಿಂದ ಚಿತ್ರದಲ್ಲಿರುವಂತೆ ಬಿಲ್ಲೆ ಕತ್ತರಿಸಿ, ತುಸು ಆರಲು ಬಿಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಈ ಬಿಲ್ಲೆಗಳನ್ನು ಅದರಲ್ಲಿ ಕರಿಯಿರಿ. ನಂತರ ಇವನ್ನು ಟ್ರೇನಲ್ಲಿ ಜೋಡಿಸಿಕೊಂಡು, ಮೇಲೆ ಚಾಟ್ ಮಸಾಲ ಉದುರಿಸಿ. ಪುದೀನ ಚಟ್ನಿ, ಟೊಮೇಟೊ ಸಾಸ್ ಜೊತೆ ಸವಿಯಲು ಕೊಡಿ.





