ಈ ಬ್ರಹ್ಮಾಂಡದಲ್ಲಿ ಮಾನವನ ಬುದ್ಧಿವಂತಿಕೆ ಹಾಗೂ ಮಾನವೀಯ ಸಂಬಂಧಗಳಿಗೆ ಮಿಗಿಲಾದ ದೊಡ್ಡ ರಹಸ್ಯ ಯಾವುದೂ ಇಲ್ಲ. ಈ ಮನೋವಿಜ್ಞಾನದಲ್ಲಿ ಆಳವಾದ ಸಸ್ಪೆನ್ಸ್ ಹಾಗೂ ರೋಮಾಂಚನ ತುಂಬಿಕೊಂಡರೆ, ಬೆಳ್ಳಿ ತೆರೆಯ ಮೇಲೆ ಒಂದು ಅದ್ಭುತ ಜಾದೂ ನಡೆಯುತ್ತದೆ. ಕೆಲವು ಚಿತ್ರಗಳು ಪತ್ತೇದಾರಿಕೆ ಮೂಲ ಹೊಂದಿದ್ದರೂ, ಅದು ಅಪರಾಧಿಯ ಶೋಧಕ್ಕಷ್ಟೇ ಸೀಮಿತಲ್ಲ. ಅದು ಮಾನವೀಯ ನಂಬಿಕೆ, ಭರವಸೆ, ಪ್ರೀತಿ, ದ್ವೇಷ, ಮೋಸ, ಸೇಡು ಎಲ್ಲದರ ಸಂಗಮವಾಗಿರುತ್ತದೆ. ಈ ಸೈಕಾಜಿಕಲ್ ಗೇಮ್ ನ ಹಿಂದೆ ಅಡಗಿರುವ ವಾಸ್ತವತೆ, `ಒಂದು ಪರ್ಫೆಕ್ಟ್ ಕ್ರೈಂ‘ಗೆ ನಾಂದಿಯಾಗುತ್ತದೆ. ಹೀಗಾಗಿ ವೀಕ್ಷಕರನ್ನು ಇದು ಕೊನೆಯ ಕ್ಷಣದವರೆಗೂ ಕಟ್ಟಿಹಾಕುತ್ತದೆ. ಇಂಥ ಕುತೂಹಲಕಾರಿ ಸಸ್ಪೆನ್ಸ್, ಹಾರರ್‌, ಥ್ರಿಲ್ಲರ್‌ ಚಿತ್ರಗಳು ನೀಡುವ ಮಜವೇ ಬೇರೆ. ಈ ಎಲ್ಲಾ ಚಿತ್ರಗಳ ರಹಸ್ಯ ಭೇದಿಸುತ್ತಾ, ಅವುಗಳ ಸುತ್ತಾ ಹೆಣೆದಿರುವ ಮಾನವೀಯ ಸಂಬಂಧಗಳ ವಿಶ್ಲೇಷಣೆಯ ಒಂದು ಸಣ್ಣ ಪ್ರಯತ್ನವಿದು.

02-Kannada-film-Balaramana-Dinagalu

ಕನ್ನಡ :  ಬಲರಾಮನ ದಿನಗಳು

80ರ ದಶಕದಲ್ಲಿ ರೌಡಿ ಶೀಟರ್‌ ಬಲರಾಮ್ ಅಂದ್ರೆ ಇಡೀ ಬೆಂಗಳೂರು ಗಡಗಡ ನಡುಗುತ್ತಿತ್ತು, ಅಂಗಡಿ ಮುಂಗಟ್ಟು ತಂತಾನೇ ಮುಚ್ಚಿಕೊಳ್ಳುತ್ತಿದ್ದವು. ಆತ ಸೆಂಟ್ರಲ್ ಜೇಲಿನಲ್ಲಿ ಕೊಲೆಯಾಗಿ ಸುದ್ದಿಯಾದರು. ಈತನ ಕಥೆಯಾಧಾರಿತ ವಿನೋದ್‌ ಪ್ರಭಾಕರ್ ನಟಿಸಿರುವ, ಹಿಂದೆ `ಆ ದಿನಗಳು’ ಖ್ಯಾತಿಯ ಕೆ.ಎಂ. ಚೈತನ್ಯರ ದಕ್ಷ ನಿರ್ದೇಶನದಲ್ಲಿ, ಅವರದೇ ಮೂಲ ಕಥೆಯೊಂದಿಗೆ ಮೂಡಿಬಂದಿರುವ ಯಶಸ್ವೀ ಚಿತ್ರವೇ `ಬಲರಾಮನ ದಿನಗಳು.’

ಜಯರಾಜ್‌, ಕೊತ್ವಾಲ್ ರಾಮಚಂದ್ರ, ಮುತ್ತಪ್ಪ ರೈರಂಥ ಘಟಾನುಘಟಿ ರೌಡಿಶೀಟರ್‌ ಗಳ ಕಥೆಯನ್ನು ಮುಂದಿಟ್ಟುಕೊಂಡು ಈ ಚಿತ್ರ ರೂಪುಗೊಂಡಿದೆ. ಅನ್ಯಾಯ ಕಂಡರೆ ಪ್ರತಿಭಟಿಸುವ ಬಲರಾಮ, ಈತನ ಪ್ರೇಯಸಿ ರೇವತಿ ಇವರ ಪ್ರೇಮದೊಂದಿಗೆ ಚಿತ್ರ ಮುಂದುವರಿಯುತ್ತದೆ. ಅವಳನ್ನು ಕಾಪಾಡಲು ಹೋಗಿ ಗೊತ್ತಿಲ್ಲದೆ ಅಚಾನಕ್‌ ಆಗಿ ರೌಡಿಯೊಬ್ಬನನ್ನು ಹತ್ಯೆ ಮಾಡುವ ಬಲರಾಮ, ಮುಂದೆ ಬೆಂಗಳೂರಿನ ಭೂಗತ ಜಗತ್ತಿಗೆ ಹೇಗೆ ಎಂಟ್ರಿ ಪಡೆದು ರೌಡಿಯಾದ, ದುಷ್ಟರ ಸಂಹಾರಕ್ಕೆ ಹೇಗೆ ಪಣ ತೊಟ್ಟ ಎಂಬ ಸಂಘರ್ಷವೇ ಚಿತ್ರದ ಉಳಿದಾರ್ಧ. ತನ್ನವರಿಂದಲೇ ಆತ ಮುಂದೆ ಸಾಯುವಂತಾಗುವುದೇ….? ಎಂಬುದೇ ಕ್ಲೈಮಾಕ್ಸ್.

ಈ ಚಿತ್ರದ ಮುಖ್ಯ ತಾರಾಗಣದಲ್ಲಿ ವಿ.ಪಿ. ಜೊತೆ ಪ್ರಿಯಾ ಆನಂದ್‌, ವಿನಯ್‌ ಗೌಡ, ಅತುಲ್ ಕುಲಕರ್ಣಿ, ಆಶಿಷ್‌ ವಿದ್ಯಾರ್ಥಿ, ಅವಿನಾಶ್‌, ರೇವತಿಯಂಥ ಘಟಾನುಘಟಿಗಳ ದಂಡೇ ಇದೆ. ಸಂಗೀತ ನಿರ್ದೇಶಕ ಸಂತೋಷ್‌ ನಾರಾಯಣ್‌ ರ ಈ ಚಿತ್ರದ ಪ್ಲಸ್ ಪಾಯಿಂಟ್‌.

03-Malyalam-film-Balan---the-boy

ಮಲೆಯಾಳಂ : ಬಾಲನ್‌ ದಿ ಬಾಯ್‌

ಇದೊಂದು ಅದ್ಭುತ ಸೈಕಲಾಜಿಕ್‌ ಡ್ರಾಮಾ ಆಗಿದ್ದು, ಕೇರಳದಲ್ಲಿ ಎಲ್ಲೆಡೆ ಯಶಸ್ವಿ ಎನಿಸಿದೆ. ಒಬ್ಬ ಪುಟ್ಟ ಬಾಲಕ ಬಾಲನ್‌ ಹಾಗೂ ಅವನ ತಾಯಿ ಜೇಲಿನಿಂದ ಬಿಡುಗಡೆಗೊಂಡು, ಹೇಗೋ ತಲೆಮರೆಸಿಕೊಂಡು ಸಮಾಜದಲ್ಲಿ ತಮ್ಮ ಬದುಕು ಕಟ್ಟಿಕೊಳ್ಳಲು, ಹಿಂದಿನ ಗತ ಕಾಡದಂತೆ ಎಚ್ಚರವಹಿಸುತ್ತಾ ಬದುಕಬಯಸುತ್ತಾರೆ. ಕೆಳ ಮಧ್ಯಮ ವರ್ಗದ ಬದುಕುಬವಣೆಗಳ ವಾಸ್ತವ ಕಟ್ಟಿಕೊಡು ಈ ಚಿತ್ರ, ತನ್ನ ಭಾವಾಭಿನಯದ ಉತ್ತುಂಗದ ಕಾರಣ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ತಾಯಿ ಮಗನ ಬಾಂಧವ್ಯದ ಚಿತ್ರದ ಹೂರಣ. ಎಂದಿನಂತೆ ಮಾತೃ ವಾತ್ಸಲ್ಯದ ಹಿರಿಮೆ, ಮದರ್‌ ಸೆಂಟಿಮೆಂಟಾಗಿ ಜೆನ್‌ Z ಪೀಳಿಗೆಯನ್ನು ಸೆಳೆಯುತ್ತದೆ.

ಈ ಚಿತ್ರದ ನಿರ್ದೇಶಕರು ಚಿದಂಬರಂ. ಮೂಲಕಥೆ ಜೀತು ಮಾಧವನ್‌, ಸಂಗೀತ ಸುಶೀನ್‌ ಶ್ಯಾಮ್ ಹಾಗೂ ಮುಖ್ಯ ತಾರಾಗಣದಲ್ಲಿ ಕೆ.ಆರ್‌. ಆದಿಶೇಷನ್‌, ಫರ್ರನಾ ಪಾಲತ್ತಿಂಗ್‌, ಮುಹಮ್ಮದ್‌ ಝಿನಾನ್‌, ಟೋನಿಮೋ ಥಾಮಸ್‌, ಎ.ಡಿ. ಗಿರೀಶ್‌, ಜೀನ್‌ ಪಾಲ್ ‌ಮುಂತಾದವರಿದ್ದಾರೆ.

04-Gujarati-Film-KADAKNATH

ಗುಜರಾತಿ : ಖಡಕ್‌ ನಾಥ್‌

ಇದು ಭಯಂಕರ ಕ್ರೈಂಥ್ರಿಲ್ಲರ್‌ ಬ್ಲೆಂಡಿಂಗ್‌ ಟ್ರೈಬಲ್ ಪೇಕ್ಲೇರ್‌ ಚಿತ್ರವಾಗಿದ್ದು, ಅತಿಮಾನುಷ ಶಕ್ತಿಗಳ ವೈಭವೀಕರಣಕ್ಕೆ ಸಾಕ್ಷಿಯಾಗಿದೆ. ಒಬ್ಬ ಪೌಲ್ಟ್ರಿ ರೈತ, ಮಾಟಮಂತ್ರಗಳ ವಶೀಕರಣ ಬಳಸುತ್ತಾ ನಿಗೂಢವಾಗಿ ಹಲವು ಕೊಲೆಗಳನ್ನು ನಡೆಸುತ್ತಿರುತ್ತಾನೆ. ವಿಮರ್ಶಕರ ಮೆಚ್ಚುಗೆ ಗಳಿಸಿರುವ ಈ ಚಿತ್ರ ತನ್ನ ಕುತೂಹಲಕಾರಿ ಕಥಾಹಂದರ, ಸಿನಿಮಾಟೋಗ್ರಫಿ, ಕಲ್ಚರ್ ಗ್ರೌಂಡಿಂಗ್‌ ನಿಂದಾಗಿ ಪ್ರೇಕ್ಷಕರಿಗೂ ಪ್ರಿಯವಾಗಿದೆ. ಗುಜರಾತ್‌ ನ ಪಾಳುಬಿದ್ದ ಗ್ರಾಮವೊಂದರಲ್ಲಿ ನಡೆಯುವ ಈ ಬರ್ಬರ ಕಥೆ, ಮಾಟಗಾರ, ತಿಣುಕಾಡುವ ಪೊಲೀಸ್‌, ಸಾಮಾಜಿಕ ತಲ್ಲಣ…. ಇವೆಲ್ಲ ಸೇರಿ ಕನ್ನಡದ `ಕಾಂತಾರ’ದಿಂದ ಪ್ರೇರಣೆ ಪಡೆದಿದೆ ಎಂದು ನೇರವಾಗಿ ತಿಳಿಸುತ್ತದೆ. ಮೂಲಕಥೆ ಹಾಗೂ ಈ ಚಿತ್ರದ ನಿರ್ದೇಶಕರು ಕೌಶಿಕ್‌ ಗರಾಸಿಯಾ. ಸಂಗೀತ : ಕೇದಾರ್‌ಉಪಾಧ್ಯಾಯ್‌/ಭಾರ್ಗವ್ ಪುರೋಹಿತ್‌ ಹಾಗೂ ಮುಖ್ಯ ತಾರಾಗಣದಲ್ಲಿ ಅಭಿನವ್ ಬ್ಯಾಂಕರ್‌, ದೇನಿಶಾ ಘುಮ್ರಾ, ನೀರ್‌ಭಾಬೋರ್‌, ನಿಸರ್ಗ್‌ ತ್ರಿವೇದಿ, ಚೇತನ್‌ ದೈಯಾ ಮುಂತಾದವರು.

05-telugu-Singh--geetham

ತೆಲುಗು : ಸಿಂಗ್‌ ಗೀತಂ

ಭಾರತದ ಕೆಲವೇ ಕ್ಲಾಸಿಕ್‌ ನಿರ್ದೇಶಕರಲ್ಲಿ ಒಬ್ಬರೆನಿಸಿರುವ ಸಿಂಗ್ ಗೀತಂ ಶ್ರೀನಿವಾಸ ರಾವ್‌, ಆಧುನಿಕ ಕಾಲದಲ್ಲಿ ತಮ್ಮ  `ಪುಷ್ಪಕ ವಿಮಾನ’ ಮೂಕಿ ಚಿತ್ರದಿಂದ, ದಶಕಗಳ ಹಿಂದೆಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದರು. ಚಿತ್ರಕ್ಕೆ ಮೂಲಕ ಕಥೆ ಒದಗಿಸಿರುವ 94ರ ಈ ಹಿರಿಯ ನಿರ್ದೇಶಕ, ಇದೀಗ ಮತ್ತೊಂದು ಅಂಥದ್ದೇ ಪ್ರಯತ್ನದಲ್ಲಿ, ಮೆಗಾ ಫೋನ್‌ ಒಂದನ್ನು  ಆಧರಿಸಿ ಮಾಡಿರುವ ಚಿತ್ರವೇ `ಸಿಂಗ್‌ ಗೀತಂ.’ ತನ್ನ ಹಳ್ಳಿಗೆ ಹಿಂದಿರುಗುವ ನಾಯಕ, ಗತಿಸಿದ ತಂದೆಯ ಚಿನ್ನದ ಗಣಿ ತನಗೇ ಸೇರಬೇಕೆಂದು ಹೋರಾಡುತ್ತಾನೆ. ಇದಕ್ಕೆ ವಿರುದ್ಧವಾಗಿ ಮತ್ತೊಬ್ಬ ದುರಾಸೆಯ ವರ್ತಕ, ಅವನ ಮಗಳು ರೇಣು, ಇದನ್ನು ಅಕ್ರಮವಾಗಿ ತಮ್ಮದಾಗಿಸಿಕೊಳ್ಳಲು ಯತ್ನಿಸುತ್ತಾರೆ. ಇವರಿಬ್ಬರ ತಿಕ್ಕಾಟದಲ್ಲಿ ಅದು ಯಾರ ಪಾಲಾಯ್ತು ಎಂಬುದೇ ಮುಂದಿನ ಕಥಾಹಂದರ. ಇಲ್ಲಿನ ಬಹುತೇಕ ಸಂಭಾಷಣೆಗಳೆಲ್ಲ ಹಾಡಿನ ರೂಪದಲ್ಲಿದ್ದು, ಹಳೆಯ ಪೌರಾಣಿಕ ನಾಟಕಗಳನ್ನು ನೆನಪಿಸುತ್ತದೆ. ಹಾಲಿವುಡ್‌ ಚಿತ್ರಗಳಲ್ಲಿ ಈ ಪ್ರಯೋಗ ಈಗಲೂ ಜೀವಂತ. ಆ ಮಟ್ಟದಲ್ಲಿ ಇದು ಯಶಸ್ವೀ ಪ್ರಯೋಗಾತ್ಮಕ ಚಿತ್ರ.

ದೇವಿ ಪ್ರಸಾದ್‌ ರ ಸಂಗೀತವಿದ್ದು, ಮುಖ್ಯ ತಾರಾಗಣದಲ್ಲಿ ಅಯ್ಯನ್‌ ಖಾನ್‌, ಶಾಲಿನಿ ಕೊಂಡೆಪುಡಿ, ಅಹಲ್ಯಾ ಮುಂತಾದವರಿದ್ದಾರೆ.

01-Bengali-Movie_Abhiman_for-GS-August-2026

ಬಂಗಾಳಿ : ಅಭಿಮಾನ್‌

ಇದೊಂದು ಅಪ್ಪಟ ಸಾಂಸಾರಿಕ ಚಿತ್ರವಾಗಿದ್ದು, ನಶಿಸಿ ಹೋಗುತ್ತಿರುವ ಮಾನವೀಯ ಬಾಂಧವ್ಯಗಳಿಗೆ ತೇಪೆ ಹಾಕುವ ಯತ್ನ ನಡೆಸಲಾಗಿದೆ. ಹಿಂದೊಮ್ಮೆ ಸುಪ್ರಸಿದ್ಧ ನಟನಾಗಿದ್ದ ಆಕಾಶ್‌ ಚಟರ್ಜಿ, ವೃದ್ಧಾಪ್ಯದಲ್ಲಿ ಕುಟುಂಬದವರೊಂದಿಗೆ ಹೆಣಗುವ ಕರುಣಾಜನಕ ಕಥೆ ಇದು. ವರ್ತಮಾನಕ್ಕೆ ಆತನ ಅತೀತ ಕ್ಲಾಶ್‌ ಆಗುತ್ತಿದ್ದು, ಮನೆ ಬಿಟ್ಟು ಹೋಗಿದ್ದ ಮಗ ಮರಳಿದಾಗ, ಮೂಡುವ ಹೊಸ ಸಂಘರ್ಷಗಳು ಚಿತ್ರದ ಬೆಳವಣಿಗೆಗೆ ಪೂರಕ. ಇವರಿಬ್ಬರ ನಡುವೆ ಬೇಯುವ ತಾಯಿ ಪಾತ್ರ, ಸಾಂಸಾರಿಕ ಬಾಂಧವ್ಯ ಉಳಿಸಿಕೊಳ್ಳುವಲ್ಲಿ ಹೆಣಗುತ್ತದೆ. ಇಲ್ಲಿನ ಭಾವನಾತ್ಮಕ ಸಂಬಂಧದ ಎಳೆ ಮನ ಕಲಕುತ್ತದೆ. 80ರ ದಶಕದ ಕೌಟುಂಬಿಕ ಕಥಾಹಂದರ ಮೆಚ್ಚಿಕೊಳ್ಳುವ ಪ್ರೇಕ್ಷಕರಿಗೆ, ಇದು ಮನಸ್ಸಿಗೆ ತಟ್ಟುವಂತಿದೆ.

ಈ ಚಿತ್ರದ ನಿರ್ದೇಶಕರು ಇಂದ್ರದೀಪ್‌ ದಾಸ್‌ ಗುಪ್ತಾ, ಮೂಲ ಕಥೆ : ಜಿಶ್ಶು ಸೇನ್‌ ಗುಪ್ತಾ, ನಿರ್ದೇಶಕರೇ ಇಲ್ಲಿ ಸಂಗೀತದ ಜವಾಬ್ದಾರಿ ಹೊತ್ತಿದ್ದು, ಉಳಿದ ಸೌಂಡ್‌ ಟ್ರಾಕ್‌ ಶ್ರೀಜೀತ್‌ ಮುಖರ್ಜಿ. ಮುಖ್ಯ ತಾರಾಗಣದಲ್ಲಿ ಪ್ರೊಸನ್ನಜೀತ್‌ ಚಟರ್ಜಿ, ಶುಭಶ್ರೀ ಗಂಗೂಲಿ, ಜಿಶ್ಶು, ಸೌರವ್ ದಾಸ್‌, ಚಿತ್ರಾಂಗದಾ, ಟೋಟಾ ರಾವ್‌ ಮುಂತಾದವರಿದ್ದಾರೆ.

07-Marathi-Ghabadkund

ಮರಾಠಿ : ಘಬಾಡ್‌ ಕುಂಡ್‌

ಇದೊಂದು ಅಪ್ಪಟ ಜಾನಪದ ಕಥಾಶೈಲಿಯ ಚಿತ್ರ. ಭಯ, ಕುತೂಹಲ, ಹಾರರ್‌ ಗಳ ಮಿಶ್ರಣವಿದೆ. ನಿರ್ಜನ ಪ್ರದೇಶದ ಕುಗ್ರಾಮವೊಂದರ ಪಾಳುಬಿದ್ದ ಬಾವಿಯೇ ಈ ಚಿತ್ರಕ್ಕೆ ಕಥಾಹಂದರ. ಇದರಲ್ಲಿ ಅಪಾರ ನಿಧಿ ಅಡಗಿದೆ ಎಂಬುದು ಅಲ್ಲಿನವರ ನಂಬಿಕೆ. ಇದರ ಶಾಪಗ್ರಸ್ತ ಮೂಲ, ಇದನ್ನು ದಕ್ಕಿಸಿಕೊಳ್ಳಬೇಕೆಂಬ ದುರಾಸೆ ಚಿತ್ರವನ್ನು ಮುಂದುವರಿಸುತ್ತದೆ. ಆಕಸ್ಮಿಕವಾಗಿ ಈ ಬಾವಿ ಬಳಿ ಬರುವ ನಾಯಕ, ಅಲ್ಲಿನ ಚಿತ್ರವಿಚಿತ್ರ ಸದ್ದಿಗೆ ಕುತೂಹಲಗೊಂಡು ಅದರ ರಹಸ್ಯ ಭೇದಿಸ ಬಯಸುತ್ತಾನೆ. ಇದನ್ನು ನಿಯಂತ್ರಿಸುವ ಬಾಬಾ, ನಾಯಕನ ಗೆಳೆಯ ಪೊಲೀಸ್‌ ಅಧಿಕಾರಿ, ಮೂಢನಂಬಿಕೆಗಳ ಬಲೆಯಲ್ಲಿ ಚಿತ್ರ ವಿಚಿತ್ರ ತಿರುವು ಕಾಣುತ್ತದೆ. ನಿಧಿ ಯಾರಿಗೆ ದಕ್ಕಿತು ಎಂಬುದೇ ಉಳಿದಾರ್ಧ. ಚಿತ್ರದ ಪ್ರಯೋಗಗಳೇ ಇದರ ಹೈಲೈಟ್‌.

ಈ ಚಿತ್ರಕ್ಕೆ ಮೂಲಕಥೆ ಒದಗಿಸಿ ನಿರ್ದೇಶಿಸಿದವರು ಪ್ರೀತಂ ಪಾಟೀಲ್‌, ಸಂಗೀತ ವಿಜಯ್‌/ಋಗ್ವೇದ್‌/ಬಾಜಿ ಅಮಿತ್‌. ಮುಖ್ಯ ತಾರಾಗಣದಲ್ಲಿ ಸಂದೀಪ್‌ ಪಾಠಕ್‌, ಎನ್‌. ದೇವದತ್ತ, ಕುಶಾಲ್‌, ಬದ್ರಿಕೆ, ಶಶಾಂಕ್‌ ಶಿಂಧೆ, ಪ್ರಾಜಕ್ತಾ ಹಣಮಘರ ಮುಂತಾದವರಿದ್ದಾರೆ.

06-Tamil-film-Dark

ತಮಿಳು : ಡಾರ್ಕ್‌

ಇತ್ತೀಚೆಗೆ ಬಿಡುಗಡೆಯಾದ ಈ ಹಾರರ್‌ ಚಿತ್ರ ಹಿರಿಯ ನಟ ದಿವಂಗತ ಭಾಗ್ಯರಾಜ್‌ ರ ಕೊನೆಯ ಚಿತ್ರ. ಹೊಸ ಮನೆಗೆ ಶಿಫ್ಟ್ ಆಗುವ ನಾಯಕ,  ಅದು `ದೆವ್ವದ ಮನೆ’ ಎಂಬುದಕ್ಕೆ ಮಹತ್ವ ಕೊಡದೆ ಮಾಮೂಲಿ ಇರುತ್ತಾರೆ. ನಂತರ ಅಲ್ಲಿ ನಡೆಯುವ ಭಯಂಕರ ಘಟನೆಗಳು ಅವರನ್ನು ಬೆಚ್ಚಿ ಬೀಳಿಸುತ್ತವೆ. ಇದಕ್ಕೆ ಮುಂಚೆ ಈ ಮನೆಯಲ್ಲಿದ್ದ ಮೂವರು ಬ್ಯಾಚುಲರ್ಸ್‌, ಯಾವುದೋ ಜಗಳಕ್ಕೆ, ಒಬ್ಬಾತ ಉಳಿದ ಇಬ್ಬರನ್ನು ಕೊಂದು, ತಾನೂ ಬೆಂಕಿಗೆ ಹಾರುತ್ತಾನೆ. ಮುಂದೆ ಈ ಸುದ್ದಿ ತಿಳಿದ ನಾಯಕ ಅಜಯ್ ಹಾಗೂ ಭಾಗ್ಯರಾಜ್‌ ಸಹ ಸಾಯುತ್ತಾರೆ. ಇದರ ಇನ್‌ ವೆಸ್ಟಿಗೇಶನ್‌ ಗೆ ಬಂದ ಪೊಲೀಸರ ಮುಂದೆ ಅಜಯ್‌ ಮೇಲಿನಿಂದ ಕೆಳಗೆ ಬಿದ್ದಾಗ, ಅವನು ಸತ್ತಿಲ್ಲ ಎಂದು ಖಾತ್ರಿಯಾಗುತ್ತದೆ. ಮುಂದೆ ಆ ಮನೆಯಲ್ಲಿ ಏನಾಯಿತು? ಏಕೆ ಹಾಗೆ ನಡೆಯುತ್ತಿದೆ? ನಾಯಕನ ಕಥೆ ಏನಾಯಿತು ಎಂಬುದೇ ಉಳಿದಾರ್ಧ. ಚಿತ್ರದ ಸಸ್ಪೆನ್ಸ್ ಬಹಳ ಥ್ರಿಲ್ಲಿಂಗ್‌ ಆಗಿದೆ.

ಈ ಚಿತ್ರದ ನಿರ್ದೇಶಕರು ಕಲ್ಯಾಣ್‌ ಕೆ. ಜಗನ್‌. ಮೂಲಕಥೆ : ಕೆ. ಗಣೇಶ್‌, ಸಂಗೀತ : ಮನು ರಮೇಶನ್‌. ಪ್ರಮುಖ ತಾರಾಗಣದಲ್ಲಿ ಅಜಯ್‌ ಕಾರ್ತಿ, ಅಂಚನಾ ನೇತ್ರನ್‌, ಕೆ. ಭಾಗ್ಯರಾಜ್‌, ಸಿಬಿ ಚಕ್ರವರ್ತಿ, ವಿಟಿವಿ ಗಣೇಶ್‌ ಮುಂತಾದವರಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ