ಸೋಲನ್ನು ಎಂದಿಗೂ ಮನಸ್ಸಿಗೆ ತೆಗೆದುಕೊಳ್ಳಬೇಡಿ, ಏಕೆಂದರೆ ಸೋಲು ಎಂಬುದು ಸ್ಪರ್ಧೆಯ ಒಂದು ಭಾಗ

ತಮ್ಮ ನೇರ ನುಡಿ, ಖಡಕ್‌ ಮಾತಿನ ಮೂಲಕ ಹೆಸರಾದ ಗೀತಾ ಕಪೂರ್‌ ಬಾಲಿವುಡ್‌ ನ ಹಲವು ಪ್ರಮುಖ ತಾರೆಯರ ನೃತ್ಯಕ್ಕೆ ಕೊರಿಯೋಗ್ರಫಿ ಮಾಡಿದ್ದಾರೆ. ಯಶಸ್ವಿ ಕೊರಿಯೋಗ್ರಾಫರ್‌ ಆಗಿರುವ ಇವರು ತಮ್ಮ ವೃತ್ತಿ ಜೀವನಕ್ಕಿಂತ ಹೆಚ್ಚಾಗಿ ವೈಯಕ್ತಿಕ ಜೀವನದ ಕಾರಣಕ್ಕಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ……

ರಿಯಾಲಿಟಿ ಆಧಾರಿತ ಡ್ಯಾನ್ಸ್ ಶೋಗಳಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಗೀತಾ ಕಪೂರ್‌ ಹೆಸರು ಟಿವಿ ಆನ್ ಮಾಡಿದ ತಕ್ಷಣ ಪ್ರತಿ ಮನೆಯಲ್ಲೂ ಕೇಳಿಬರುತ್ತದೆ. ಆದರೆ ಒಂದು ಕಾಲವಿತ್ತು, ಅವರು ಮುಂಬೈನ ಲೋಕಲ್ ಟ್ರೇನ್‌ ಮೂಲಕ ಫರಾಖಾನ್‌ ರ ತಂಡದಲ್ಲಿ ಬ್ಯಾಕ್‌ ಗ್ರೌಂಡ್‌ ಡ್ಯಾನ್ಸರ್‌ ಆಗಿ ಕೆಲಸ ಮಾಡಲು ಹೋಗುತ್ತಿದ್ದರು. 15ನೇ ವಯಸ್ಸಿನಲ್ಲಿ  `ಕುಚ್‌ಕುಚ್‌ಹೋತಾ ಹೈ’ ಮತ್ತು `ಕೋಯಿ ಮಿಲ್ ಗಯಾ’ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದಾಗ, ಅವರ ಕಣ್ಣುಗಳಲ್ಲಿ ಒಂದಲ್ಲ ಒಂದು ದಿನ ಇಡೀ ಸ್ಟೇಜ್‌ ನನ್ನದಾಗಲಿದೆ ಎಂಬ ಕನಸಿತ್ತು. ನಂತರ ಸಮಯ ಬದಲಾಯಿತು. ಅವರೂ ಸಹ ಕೊರಿಯೋಗ್ರಾಫರ್‌ ನಿಂದ ಮುಖ್ಯ ಕೊರಿಯೋಗ್ರಾಫರ್‌ ಆದರು. `ಫಿರ, ಅಶೋಕ, ಸಾಥಿಯಾ, ಹೇ ಬೇಬಿ, ತೇರೆ ನಾವಲ್ ಹೋ ಗಯಾ’ ಮುಂತಾದ ಚಿತ್ರಗಳ ಹಾಡುಗಳನ್ನು ಹಿಟ್‌ ಮಾಡಿದರು. ಆದರೆ ಅವರಿಗೆ ನಿಜವಾದ ಗುರುತು ಸಿಕ್ಕಿದ್ದು `ಡ್ಯಾನ್ಸ್ ಇಂಡಿಯಾ ಡ್ಯಾನ್ಸ್’ ರಿಯಾಲಿಟಿ ಶೋನ ತೀರ್ಪುಗಾರರ ಪೀಠದಿಂದ. ಅಲ್ಲಿ ಕುಳಿತಿದ್ದ ಗೀತಾ ಕಪೂರ್‌ ಯಾವಾಗ ಎಲ್ಲರ `ಗೀತಾ ಮಾ’ ಆದರೋ ಯಾರಿಗೂ ತಿಳಿಯಲೇ ಇಲ್ಲ. ಗದರುವಿಕೆಯಲ್ಲೇ ಮಮತೆ, ಪ್ರಶಂಸೆಯಲ್ಲಿ ಚಪ್ಪಾಳೆ ಮತ್ತು ಕಣ್ಣೀರಿನ ಸಾಂತ್ವನ ನೀಡುತ್ತಾ, ಅವರು ನೃತ್ಯವನ್ನು ಕೇವಲ ರಿಯಾಲಿಟಿ ಶೋನಿಂದ ಹೊರತಂದು ಪ್ರತಿ ಮನೆಯ ಲಿವಿಂಗ್‌ ರೂಮ್ ನ ಭಾವನೆಯನ್ನಾಗಿ ಮಾಡಿದರು.

ಇಂದು ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿರುವ ಗೀತಾ ಮಾರವರಿಗೆ ನೃತ್ಯ ಎನ್ನುವುದು ಕೇವಲ ಸ್ಟೆಪ್ಸ್ ಗಳಲ್ಲ, ಅದು ಬದುಕುವ ದಾರಿ. ಕ್ಯಾಮೆರಾ ಮುಂದೆ ಕಟ್ಟುನಿಟ್ಟಾದ ಜಜ್‌ ಹಾಗೂ ತೆರೆಯ ಹಿಂದೆ ಹೊಸಬರಿಗೆ ಅತ್ಯಂತ ದೊಡ್ಡ ಬೆಂಬಲ.

`ಪ್ರತಿಭೆ ವಯಸ್ಸು, ರೂಪ ಅಥವಾ ಹಿನ್ನೆಲೆಯನ್ನು ಅವಲಂಬಿಸಿರಬಾರದು. ಸ್ಟೇಜ್‌ ಎಲ್ಲರಿಗೂ ಸೇರಿದ್ದು,’ ಎಂದು ಹೇಳುವ ಇವರ ಎರಡು ದಶಕಗಳಿಗೂ ಹೆಚ್ಚಿನ ವೃತ್ತಿಜೀವನದಲ್ಲಿ ನೂರಾರು ಕೊರಿಯೋಗ್ರಾಫರ್‌ ಗಳು, ಸಾವಿರಾರು ಡ್ಯಾನ್ಸರ್‌ ಗಳು ಇವರ ತರಬೇತಿಯಿಂದ ರೂಪುಗೊಂಡಿದ್ದಾರೆ. ಆದರೆ ಇಂದಿಗೂ ಅವರು ರಿಹರ್ಸಲ್ ಹಾಲ್ ‌ಗೆ ಎಲ್ಲರಿಗಿಂತ ಮೊದಲು ಬರುತ್ತಾರೆ ಮತ್ತು ಎಲ್ಲರಿಗಿಂತ ಕೊನೆಯಲ್ಲಿ ಹೊರಡುತ್ತಾರೆ.

ಒಬ್ಬಂಟಿ ಮಹಿಳೆಯಾಗಿ, ಸ್ವಂತ ಪರಿಶ್ರಮದಿಂದ ಮೇಲೆ ಬಂದು, ಲಕ್ಷಾಂತರ ಹುಡುಗಿಯರಿಗೆ ಮಾದರಿಯಾಗಿರುವ ಗೀತಾ ಕಪೂರ್‌, ಹಿಂದಿನ ಸಾಲಿನಿಂದ ಹೊರಬಂದು ಮುಖ್ಯ ವೇದಿಕೆಯಲ್ಲಿ ತಮಗಾಗಿ ಸ್ವಂತ ಕುರ್ಚಿಯನ್ನು ನಿರ್ಮಿಸಿಕೊಂಡು ತಮ್ಮದೇ ಆದ ಸ್ಥಾನ ಪಡೆದಿದ್ದಾರೆ.

ಗೀತಾ ಕಪೂರ್‌ ಮುಂಬೈನಲ್ಲಿ ಜನಿಸಿ, ಕೊಲಾಬಾದಲ್ಲಿ ವಾಸಿಸುತ್ತಿದ್ದರು. ಬಾಲ್ಯವೆಲ್ಲಾ ಅಲ್ಲಿಯೇ ಕಳೆಯಿತು. ತಮಗೆ ಜೀವನದಲ್ಲಿ ಇದಕ್ಕಿಂತ ಹೆಚ್ಚಿನದ್ದು ಏನೋ ಬೇಕು ಎಂಬುದು ಅವರ 14ನೇ ವಯಸ್ಸಿನಲ್ಲೇ ಅರ್ಥವಾಯಿತು. ನಂತರ ತಮ್ಮ 15ನೇ ವಯಸ್ಸಿನಲ್ಲಿ ಕೆಲಸ ಹುಡುಕಲು ಪ್ರಾರಂಭಿಸಿದರು. ಅವರಿಗೆ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಇದು ಅವರ ಒಂದು ಅಪೂರ್ಣ ಆಸೆಯಾಗಿಯೇ ಉಳಿದುಹೋಯಿತು. ಇಂದಿಗೂ ಸಹ ಅವರು ಸಾಕಷ್ಟು  ಪುಸ್ತಕಗಳನ್ನು ಓದುತ್ತಿರುತ್ತಾರೆ.

ಗೀತಾ ಕಪೂರ್‌ ರ ತಾಯಿ ಶಿಕ್ಷಕಿಯಾಗಿದ್ದು, ನರ್ಸಿಂಗ್‌ ಕೋರ್ಸ್‌ ಕೂಡ ಮಾಡಿದ್ದರು. ತಂದೆ ಗಲ್ಫ್ ನಲ್ಲಿ ಕೆಲಸ ಮಾಡುತ್ತಿದ್ದರು. ಜೊತೆಗೆ ಏರ್‌ ಲೈನ್ಸ್ ನಲ್ಲಿ ಗ್ರೌಂಡ್‌ ಸ್ಟಾಫ್‌ ಆಗಿದ್ದರು. 2008ರಲ್ಲಿ `ಡ್ಯಾನ್ಸ್ ಇಂಡಿಯಾ ಡ್ಯಾನ್ಸ್’ ಶೋಗೆ ಜಜ್‌ ಆಗಲು ಗೀತಾ ಕಪೂರ್‌ ಗೆ ಆಹ್ವಾನ ಬಂದಿತು. ಈಗ 18 ವರ್ಷಗಳು ಕಳೆದಿವೆ. ಇಂದಿಗೂ ಆಹ್ವಾನಗಳು ಬರುತ್ತಲೇ ಇವೆ.

ಗೀತಾ ಕಪೂರ್‌ ರಿಗೆ `ಗೀತಾ ಮಾ’ ಎಂಬ ಹೆಸರು ಹೇಗೆ ಸಿಕ್ಕಿತು?

`ಹಲವು ವರ್ಷಗಳ ಹಿಂದೆ ನಾನು `ಡ್ಯಾನ್ಸ್ ಇಂಡಿಯಾ ಡ್ಯಾನ್ಸ್’ ಶೋ ಮಾಡುತ್ತಿದ್ದಾಗ ನನಗೆ `ಗೀತಾ ಮಾ’ ಎಂಬ ಹೆಸರು ಸಿಕ್ಕಿತು. ನನ್ನ ತಂಡದಲ್ಲಿ ದಕ್ಷಿಣ ಭಾರತದ ಹಲವರು ಇದ್ದರು. ಅವರು ನನ್ನನ್ನು ಪ್ರೀತಿಯಿಂದ `ಮಾ, ನೀವು ಹೇಗಿದ್ದೀರಾ?’ ಎಂದು ಕೇಳುತ್ತಿದ್ದರು. ನಿಜ ಹೇಳಬೇಕೆಂದರೆ, ಅದು ಅವರು ಮಾತನಾಡುವ ಗೌರಯುತ ಶೈಲಿಯಾಗಿತ್ತು. ಇದನ್ನು ಕೇಳಿಸಿಕೊಂಡ `ಡ್ಯಾನ್ಸ್ ಇಂಡಿಯಾ ಡ್ಯಾನ್ಸ್’ ಕಾರ್ಯಕ್ರಮದ ಸ್ಪರ್ಧಿಗಳಾದ ಮಕ್ಕಳಿಗೆ, ಅವರು ನನಗೆ ತಾಯಿಯ ಸ್ಥಾನವನ್ನು ನೀಡಿ ಗೌರವಿಸುತ್ತಿದ್ದಾರೆ ಎಂದು ಅನ್ನಿಸಿತು. ಹಾಗಾಗಿ ಅವರೂ ಸಹ ನನ್ನನ್ನು `ಮಾ’ ಎಂದು ಕರೆಯಲು ಪ್ರಾರಂಭಿಸಿದರು. ನಂತರ ಶೋನಲ್ಲಿ ತಮಾಷೆಯಾಗಿ, `ಇವರನ್ನು ಎಲ್ಲರೂ ಮಾ ಎಂದು ಕರೆಯುತ್ತಾರೆ,’ ಎಂದು ಹೇಳಲಾಯಿತು. ಆ ತಮಾಷೆ ಮುಂದೆ ಅದೇ ಹೆಸರು ನಿಜವಾಗುವಂತಾಯಿತು.’

`ಇದು ಗಂಭೀರವಾದ ನಂತರ ಈ ವಿಷಯ ಜನರವರೆಗೂ ತಲುಪಿತು. ಆಮೇಲೆ ಅದು ಯಾವಾಗ ಇಷ್ಟೊಂದು ದೊಡ್ಡದಾಯಿತೋ ಗೊತ್ತಿಲ್ಲ, ನಾನು ಇಡೀ ಭಾರತಕ್ಕೆ `ಮಾ’ ಆಗಿಬಿಟ್ಟೆ. ಆರಂಭದಲ್ಲಿ ನನಗೆ ಏನೂ ಅರ್ಥವಾಗಲಿಲ್ಲ. ಆದರೆ ಮುಂದೆ ಹೋಗುತ್ತಾ ಈ ಹೆಸರಿನೊಂದಿಗೆ ನನ್ನ ಮೇಲೊಂದು ದೊಡ್ಡ ಜವಾಬ್ದಾರಿ ಬಂದಿದೆ ಎಂಬ ಅರಿವಾಯಿತು. ಜೊತೆಗೆ ಆ ಜವಾಬ್ದಾರಿಯನ್ನು ನಿಭಾಯಿಸುವುದು ನನ್ನ ಕರ್ತವ್ಯವಾಯಿತು.’

ಈ ಕ್ಷೇತ್ರಕ್ಕೆ ಬರುವ ಹೊಸ ಪೀಳಿಗೆಯ ಮಕ್ಕಳಿಗೆ ನಿಮ್ಮ ಸಲಹೆ ಏನು?

`ಈಗ ಕೊರಿಯೋಗ್ರಫಿ ಕ್ಷೇತ್ರದಲ್ಲಿ ಮುಂದೆ ಬರುವುದು ಕಷ್ಟವೇನಲ್ಲ. ನಾವು ಆರಂಭಿಸಿದ ದಿನಗಳಲ್ಲಿ ನೃತ್ಯವನ್ನು ಒಂದು ವೃತ್ತಿ ಬದುಕಿನ ಆಯ್ಕೆಯಾಗಿ ಪರಿಗಣಿಸುತ್ತಿರಲಿಲ್ಲ. ಹಾಗಾಗಿ, ಇದರಿಂದಲೇ ನನ್ನ ಕುಟುಂಬ ನಡೆಯುತ್ತದೆ. ಇದನ್ನು ಒಂದು ವೃತ್ತಿಯಾಗಿ ಮಾಡಿಕೊಳ್ಳಬಹುದು ಎಂದು ಜನರಿಗೆ ಅರ್ಥ ಮಾಡಿಸುವುದು ಆಗಿನ ಕಾಲದಲ್ಲಿ ಕಷ್ಟವಾಗಿತ್ತು ಹಾಗೂ ಸವಾಲಿನದ್ದಾಗಿತ್ತು. ಆದರೆ ಇಂದು ನೃತ್ಯ ತಿಳಿದಿದ್ದರೆ, ಕೊರಿಯೋಗ್ರಾಫರ್‌ ಎಂಬ ಸ್ಥಾನವನ್ನು ಗಳಿಸುವುದು ಸುಲಭವಾಗಿದೆ.

`ಕೊರಿಯೋಗ್ರಾಫರ್‌ ಆಗಬೇಕೆಂದು ಬಯಸುವ ಹುಡುಗಿಯರಿಗೆ ನನ್ನ ಸಲಹೆ ಏನೆಂದರೆ, ನೃತ್ಯವನ್ನು ಚೆನ್ನಾಗಿ ಕಲಿತು ಅರ್ಥಮಾಡಿಕೊಳ್ಳಿ. ನಿರಂತರವಾಗಿ ಅಭ್ಯಾಸ ಮಾಡಿ ಹಾಗೂ ಯಾರಾದರೂ ಗುರುಗಳ ಮಾರ್ಗದರ್ಶನದಲ್ಲಿ ಇದ್ದುಕೊಂಡು ಅದರ ಸೂಕ್ಷ್ಮತೆಗಳನ್ನು ಕಲಿಯಿರಿ. ನೃತ್ಯದ ಬುನಾದಿ ಗಟ್ಟಿಯಾಗಿಲ್ಲದಿದ್ದರೆ, ಇಲ್ಲಿ ಹೆಚ್ಚು ಕಾಲ ಉಳಿದುಕೊಳ್ಳುವುದು ಬಹಳ ಕಷ್ಟವಾಗುತ್ತದೆ.

`ನೀವು ಬೇರೆಯವರ ಕೈಕೆಳಗೆ ಕೆಲಸ ಮಾಡಿದಾಗ ಮಾತ್ರ ಈ ಅನುಭವ ಸಿಗುತ್ತದೆ. ನೃತ್ಯದ ಶಾಸ್ತ್ರೀಯ ಪ್ರಕಾರಗಳಿಗೆ ಕಲಿಕೆಯ ತಂತ್ರ ಹಾಗೂ ಪದ್ಧತಿಯನ್ನು ಕಲಿಯುವುದು ಅತ್ಯಗತ್ಯ. ಸಿನಿಮಾದ ಕೊರಿಯೋಗ್ರಫಿಯೇ ಬೇರೆ, ಕೇವಲ ನೃತ್ಯದ ಕೊರಿಯೋಗ್ರಫಿಯೇ ಬೇರೆ. ಸಿನಿಮಾದಲ್ಲಿ ನೀವು ಕ್ಯಾಮೆರಾಗೆ ತಕ್ಕಂತೆ ತಾಂತ್ರಿಕವಾಗಿ ಪ್ರವೀಣರಾಗಿ ಇರಬೇಕಾಗುತ್ತದೆ. ಯಾವ ಶಾಟ್‌ ಗಳನ್ನು ಇಡಬೇಕು, ಹೇಗೆ ಇಡಬೇಕು ಯಾವ ಆ್ಯಂಗಲ್ ಕಲಾವಿದರಿಗೆ ಸೂಕ್ತವಾಗಿ ಕಾಣಿಸುತ್ತದೆ ಎಂಬುದೆಲ್ಲಾ ತಿಳಿದಿರಬೇಕು.’

ಉತ್ತಮ ಡ್ಯಾನ್ಸರ್‌ ಆಗಲು ಅಗತ್ಯವಿರು ಪ್ರಮುಖ ವಿಷಯಗಳೇನು?

`ಎಲ್ಲಕ್ಕಿಂತಲೂ ಮೊದಲನೆಯದಾಗಿ ನೃತ್ಯ ಬರಬೇಕು. ಲಯದ ಜ್ಞಾನ ಬಹಳ ಮುಖ್ಯ. ಇದರೊಂದಿಗೆ ಭಾವನೆಗಳೂ ಇರಬೇಕು, ಏಕೆಂದರೆ ಭಾರತೀಯರಾದ ನಮ್ಮ ಹೃದಯವನ್ನು ತಲುಪಲು ಇದು ಅತ್ಯಂತ ಸುಲಭವಾದ ಮಾರ್ಗವಾಗಿದೆ. ಇವೆಲ್ಲವುಗಳ ಜೊತೆಗೆ ಒಬ್ಬ ಉತ್ತಮ ನೃತ್ಯಗಾರನಾಗಲು ತಮಗೇ ಆದ ಒಂದು ವಿಶಿಷ್ಟ ಗುರುತನ್ನು ಹೊಂದುವುದು ಬಹಳ ಅತ್ಯಗತ್ಯ. ನೀವು ನೃತ್ಯದಲ್ಲಿ ನಿಮ್ಮದೇ ಆದ ಶೈಲಿಯನ್ನು ಅಳವಡಿಸಿಕೊಂಡಾಗ, ಒಂದು ವಿಶಿಷ್ಟ ವ್ಯಕ್ತಿತ್ವ ಹಾಗೂ ಪ್ರತ್ಯೇಕ ಗುರುತನ್ನು ನಿರ್ಮಿಸಿಕೊಂಡಾಗ ಮಾತ್ರ ಯಾರಾದರೂ ಒಬ್ಬರು `ಬಚ್ಚನ್‌ ಸಾಹೇಬರು’ ಅಥವಾ `ರಾಜೇಶ್‌ ಖನ್ನಾ’ ಆಗಲು ಸಾಧ್ಯ. ಅವರಲ್ಲಿ ಒಂದು ವಿಭಿನ್ನವಾದ ಶೈಲಿ ಇತ್ತು. ಅದು ಅವರಿಗೆ ಒಂದು ಪ್ರತ್ಯೇಕ ಗುರುತನ್ನು ತಂದುಕೊಟ್ಟಿತು. ಇದರೊಂದಿಗೆ ನಿಮಗೆ ನೃತ್ಯದ ಮೇಲೆ ಅಪಾರ ಪ್ರೀತಿ ಮತ್ತು ಒಲವು ಇರಬೇಕಾದದ್ದು ಅತ್ಯಂತ ಅಗತ್ಯವಾಗಿದೆ.’

ಮಕ್ಕಳೊಂದಿಗೆ ಇರುವ ಭಾವನಾತ್ಮಕ ಬಂಧದ ಬಗ್ಗೆ ಹೇಳಿ.

`ಇಂಡಿಯಾಸ್‌ ಬೆಸ್ಟ್ ಡ್ಯಾನ್ಸರ್‌’ ಶೋನಲ್ಲಿ ಎಲಿಮಿನೇಟ್‌ ಆದ ಮಗು ಅತ್ತಾಗ, ನನ್ನ ಮನಸ್ಸು ಹೇಳುತ್ತದೆ, `ಅಳುವುದು ಪರವಾಗಿಲ್ಲ, ಆದರೆ ಈ ಸೋಲನ್ನು ಅಷ್ಟಾಗಿ ಹೃದಯಕ್ಕೆ ತೆಗೆದುಕೊಳ್ಳಬೇಡಿ, ಏಕೆಂದರೆ ಇದು ಸ್ಪರ್ಧೆಯ ಒಂದು ಭಾಗ. ಇಲ್ಲಿ ಒಬ್ಬರು ಗೆಲ್ಲುತ್ತಾರೆ, ಮತ್ತೊಬ್ಬರು ಸೋಲುತ್ತಾರೆ. ಆದರೆ ಸೋಲಿನಿಂದ ನಾವು ಏನನ್ನು ಕಲಿಯುತ್ತೇವೆ ಎಂಬುದು ಹೆಚ್ಚು ಮುಖ್ಯವಾಗುತ್ತದೆ. ಆದರೂ ಸಹ, ನನ್ನ ಮನಸ್ಸಿನ ಮೂಲೆಯಲ್ಲಿ ಎಲ್ಲೋ ಒಂದು ಕಡೆ ನೋವಾಗಿಯೇ ಆಗುತ್ತದೆ. ಏಕೆಂದರೆ ಇಷ್ಟು ವಾರಗಳ ಕಾಲ ಮಕ್ಕಳ ಜೊತೆ ಸಮಯ ಕಳೆಯುವುದರಿಂದ ಅವರ ಮೇಲೆ ಒಲವು ಮತ್ತು ಬಾಂಧವ್ಯ ಉಂಟಾಗುವುದು ಸಹಜ.’ ಆ ಮಗು ಶೋನಿಂದ ಹೊರಹೋಗುವಾಗ, `ಅಯ್ಯೋ, ಈ ಮಗು ಹೋಗಬಾರದಿತ್ತು’ ಎಂದು ಅನಿಸುತ್ತದೆ. ಏಕೆಂದರೆ ಕೊನೆಯಲ್ಲಿ ಪ್ರತಿಯೊಬ್ಬರೂ ಅಷ್ಟೊಂದು ಕಷ್ಟಪಟ್ಟಿರುತ್ತಾರೆ. ನಮ್ಮ ಕೈಯಲ್ಲಿದ್ದರೆ ನಾವು ಎಲ್ಲಾ ಮಕ್ಕಳನ್ನೂ ನಮ್ಮೊಂದಿಗೇ ಇಟ್ಟುಕೊಳ್ಳುತ್ತಿದ್ದೆವು ಮತ್ತು ಯಾರನ್ನೂ ಎಲಿಮಿನೇಟ್‌ ಮಾಡುತ್ತಿರಲಿಲ್ಲ,’ ಎಂದು ಗೀತಾ ಕಪೂರ್‌ ಹೇಳುತ್ತಾರೆ.

`ಹಲವು ವರ್ಷಗಳ ಹಿಂದೆ, ಮೊದಲ ಬಾರಿಗೆ ನನಗೆ ಒಂದು ಮಗುವಿನ ಬಗ್ಗೆ ಹೀಗೆ ಅನಿಸಿತ್ತು ಈ ಮಗುವಿಗಾಗಿ ಏನಾದರೂ ಮಾಡಬೇಕು ಮತ್ತು ಈ ಮಗು ಜೀವನದಲ್ಲಿ ತುಂಬಾ ಚೆನ್ನಾಗಿ ಬದುಕಲಿ ಎಂದು. ಅವನೊಂದಿಗೆ ನನಗೊಂದು ಆಳವಾದ ಬಂಧ ಬೆಸೆದುಕೊಂಡಿತ್ತು. ಅವನ ಹೆಸರು ಫೈಜ್‌. ಅತ್ಯಂತ ಮುದ್ದಾದ ಮಗು ಅವನಾಗಿದ್ದ. `ನನಗೊಂದು ಮಗು ಇರುವುದಾದರೆ ಅದು ಖಂಡಿತವಾಗಿಯೂ ಇವನಂತೆಯೇ ಇರಬೇಕು, ಇಲ್ಲದಿದ್ದರೆ ಬೇಡವೇ ಬೇಡ,’ ಎಂಬ ಭಾವನೆಯನ್ನು ಅವನು ಮೊದಲ ಬಾರಿಗೆ ನನ್ನಲ್ಲಿ ಮೂಡಿಸಿದ. ನನಗೆ ಆ ತರಹ ಅನ್ನಿಸಿದ್ದು ಅದೇ ಮೊದಲ ಮತ್ತು ಕೊನೆಯ ಬಾರಿ. ಆ ಮಗುವಿನಲ್ಲಿ ಏನಿತ್ತೋ ತಿಳಿಯದು, ಅವನು ತುಂಬಾ ಶಾಂತ ಸ್ವಭಾವದ ಹಾಗೂ ತುಂಬಾ ಚಿಕ್ಕವನಾಗಿದ್ದ. ಅಂದರೆ, ಸುಮಾರು 10-12 ವರ್ಷ ವಯಸ್ಸು ಇರಬಹುದು. ಆ ಮಗು ನನ್ನ ಹೃದಯನ್ನು ಸ್ಪರ್ಶಿಸಿಬಿಟ್ಟಿದ್ದ.’

ತಾಯಿಯ ಪತ್ರಗಳು

ಜುಲೈ 5 ರಂದು ಗೀತಾ ಕಪೂರ್‌ ರ ಜನ್ಮದಿನ. `ಕಳೆದ 5 ವರ್ಷಗಳಿಂದ ನನ್ನ ಜನ್ಮದಿನದ ಅತ್ಯುತ್ತಮ ಉಡುಗೊರೆ ನನಗೆ ಸಿಗುತ್ತಿಲ್ಲ. ಆದರೆ ಅದಕ್ಕಿಂತ ಮೊದಲು, ಪ್ರತಿ ವರ್ಷ ನನ್ನ ಜನ್ಮದಿನದಂದು ನನ್ನ ತಾಯಿ ನನಗೆ ಒಂದು ಪತ್ರ ಬರೆಯುತ್ತಿದ್ದರು. ಆ ಪತ್ರಗಳು ನನಗೆ ತುಂಬಾ ಮುಖ್ಯವಾಗಿದ್ದವು. ಅವುಗಳೇ ಅತ್ಯುತ್ತಮ ಉಡುಗೊರೆಯಾಗಿರುತ್ತಿದ್ದವು. ಆ ಪತ್ರಗಳಿಂದ ನಾನು ಬಹಳಷ್ಟು ವಿಷಯಗಳನ್ನು ಕಲಿತಿದ್ದೇನೆ. ಈಗಲೂ ಸಹ ನನಗೆ ಅವರ ನೆನಪು ಬಂದಾಗ ಅಥವಾ ಪ್ರತಿ ಜನ್ಮದಿನದಂದು ನಾನು ಆ ಪತ್ರಗಳ ಸಂಗ್ರಹದಿಂದ ಯಾವುದಾದರೂ ಒಂದು ಪತ್ರನ್ನು ತೆಗೆದು ಓದುತ್ತೇನೆ. `ನನ್ನ ತಾಯಿ 2021ರಲ್ಲಿ ನಿಧನರಾದರು. ಅಂದಿನಿಂದ ಕೇವಲ ನೆನಪುಗಳು ಮಾತ್ರ ಉಳಿದಿವೆ. ಈ ಸುಂದರ ನೆನಪುಗಳು ತುಂಬಾ ಅಮೂಲ್ಯವಾದವು. ಆ ಪತ್ರಗಳಲ್ಲಿ ಜೀವನದ ತತ್ವಶಾಸ್ತ್ರ ಇರುತ್ತಿತ್ತು. ನಾನು ಏನು ಮಾಡಬೇಕು, ಹೇಗೆ ಬದುಕಬೇಕು, ನಾನು ಎಂತಹ ಮಗಳಾಗಿದ್ದೇನೆ, ನಾನು ಯಾವ ವಿಷಯಗಳನ್ನು ಅಳವಡಿಸಿಕೊಳ್ಳಬೇಕು, ಜೀವನದಲ್ಲಿ ಏನನ್ನು ಸಾಧಿಸಬೇಕು ಮತ್ತು ನನ್ನ ನಡವಳಿಕೆ ಹೇಗಿರಬೇಕು ಎಂಬ ಎಲ್ಲಾ ವಿಷಯಗಳನ್ನು ತಾಯಿ ಅದರಲ್ಲಿ ಬರೆಯುತ್ತಿದ್ದರು.

20260605442f

ತಾಯಿ ಮತ್ತು ಮಗಳ ಸಂಬಂಧ

`ಇತ್ತೀಚಿನ ದಿನಗಳಲ್ಲಿ ತಮ್ಮ ಹೆತ್ತವರನ್ನು ನೋಡಿಕೊಳ್ಳಲು ಅಥವಾ ಕುಟುಂಬವನ್ನು ಮುನ್ನಡೆಸಲು ಬಯಸಿ ಕೆಲಸ ಮಾಡುವ ಹೆಣ್ಣುಮಕ್ಕಳು, ಹಲವು ಬಾರಿ ಆ ಕೆಲಸದ ಒತ್ತಡದಲ್ಲಿ ಪೋಷಕರಿಗೂ ಸಮಯ ನೀಡಬೇಕು ಎಂಬುದನ್ನು ಮರೆತುಬಿಡುತ್ತಾರೆ. ಆ ಮಕ್ಕಳಿಗೆ ನನ್ನ ಸಲಹೆ ಏನೆಂದರೆ, ಕೆಲಸವನ್ನು ಖಂಡಿತವಾಗಿ ಮಾಡಿ, ಕುಟುಂಬವನ್ನು ಮುನ್ನಡೆಸಿ, ಆದರೆ ಸ್ವಲ್ಪ ಸಮಯವನ್ನು ನಿಮ್ಮ ಕುಟುಂಬಕ್ಕಾಗಿ ಮತ್ತು ನಿಮ್ಮ ತಾಯಿತಂದೆಗಾಗಿ ಖಂಡಿತವಾಗಿಯೂ ಮೀಸಲಿಡಿ. ಏಕೆಂದರೆ ನಾವು ಕೆಲಸದ ಗೊಂದಲಗಳಲ್ಲಿ ಎಷ್ಟು ಮುಳುಗಿಹೋಗುತ್ತೇವೆ ಎಂದರೆ, ನಮ್ಮ ಜೀವನದಲ್ಲಿ ಬರೀ ಕೆಲಸ ಮಾತ್ರ ಉಳಿದುಬಿಡುತ್ತದೆ.

`ಅವರೊಂದಿಗೆ ಸಮಯ ಕಳೆಯು ಸಂದರ್ಭ ಬಂದಾಗ, ನಾವು ಯಾರಿಗಾಗಿ ಈ ಎಲ್ಲಾ ಹೋರಾಟ, ಶ್ರಮ ಪಡುತ್ತಿದ್ದೇವೆಯೋ ಆ ಪೋಷಕರೇ ನಮ್ಮೊಂದಿಗೆ ಇರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನಿಮಗಾಗಿ ಮತ್ತು ನಿಮ್ಮ ಕುಟುಂಬಕ್ಕಾಗಿ ಸ್ವಲ್ಪ ಸಮಯ ಮೀಸಲಿಡುವುದು ಬಹಳ ಮುಖ್ಯ.’

ಗ್ರೂಪ್‌ ಡ್ಯಾನ್ಸರ್‌ ಕೊರಿಯೋಗ್ರಾಫರ್‌

`ನೋಡಿ, ಗ್ರೂಪ್‌ ಡ್ಯಾನ್ಸರ್ಸ್‌ ಹಂತದಿಂದ ನೃತ್ಯ ಸಂಯೋಜನೆಗೆ ತಲುಪುವ ಪ್ರಯಾಣ ಕಷ್ಟಕರವಲ್ಲ. ಏಕೆಂದರೆ ನೀವು ಸಿದ್ಧರಾದಾಗ, `ಈಗ ನಾನು ನೃತ್ಯ ಸಂಯೋಜಕಿ/ಜಕನಾಗಲು ಸಾಧ್ಯವಿದೆ’ ಎಂಬುದು ನಿಮಗೇ ತಿಳಿಯುತ್ತದೆ. ಇದು ಕಲಿಯುವ ಒಂದು ಪ್ರಕ್ರಿಯೆಯಾಗಿದೆ. ನೀವು ಇದನ್ನು ಆನಂದಿಸಿ ಮಾಡಿದರೆ, ನಿಮ್ಮ ಕೆಲಸ ಕಷ್ಟವೆನಿಸುವುದಿಲ್ಲ. ಆದರೆ, ನೀವು ನಿಜವಾಗಿಯೂ ನೃತ್ಯ ಸಂಯೋಜಕರಾಗಲು ಸಿದ್ಧರಿದ್ದರೂ ಆ ಅವಕಾಶ ಸಿಗದೇ ಹೋದಾಗ ಅದು ಕಷ್ಟವೆನಿಸುತ್ತದೆ. ಅವಕಾಶಗಳು ಬರಬೇಕಾದಾಗ ಖಂಡಿತವಾಗಿಯೂ ಬರುತ್ತವೆ. ಆದರೆ ಹೌದು, ಇಂದಿನ ದಿನಗಳಲ್ಲಿ ಕೆಲಸ ಸಿಗುವುದು ಕೊಂಚ ಕಷ್ಟವೇ ಸರಿ, ಏಕೆಂದರೆ ಸ್ಪರ್ಧೆಯಲ್ಲಿ ನೃತ್ಯ ಸಂಯೋಜಕರು ತುಂಬಾ ಹೆಚ್ಚಾಗಿದ್ದಾರೆ.

`ಹಿಂದೆ ಇಷ್ಟೊಂದು ಕಷ್ಟಕರವಾಗಿರಲಿಲ್ಲ. ನಾವು ಎಲ್ಲಿ ಕೆಲಸ ಮಾಡುತ್ತಿದ್ದೇವೋ, ಅಲ್ಲಿನವರೇ ನಮಗೆ `ಈಗ ನೀನು ಸಿದ್ಧನಾಗಿ/ಳಾಗಿದ್ದೀಯಾ’ ಎಂದು ಹೇಳುತ್ತಿದ್ದರು. ನನ್ನ ಗುರು ಫರಾಹ್‌ ಜೀಯರೇ ಖುದ್ದಾಗಿ, `ಈಗ ನೀನು ರೆಡಿಯಾಗಿದ್ದೀಯ. ಹಾಗಾಗಿ ನಿನ್ನ ಸ್ವಂತ ಕೆಲಸವನ್ನು ನೀನೇ ಆರಂಭಿಸಬೇಕು,’ ಎಂದು ಹೇಳಿದ್ದರು. ಅವರ ಬಳಿ ಸಮಯವಿಲ್ಲದಿದ್ದಾಗ, ಅವರು ನನಗೆ ನೃತ್ಯ ಸಂಯೋಜನೆಯ ಕೆಲಸವನ್ನು ನೀಡುತ್ತಿದ್ದರು. ನನ್ನ ಮೇಲೆ ಯಾವಾಗಲೂ ನಂಬಿಕೆ ಇಟ್ಟಂತಹ ಒಬ್ಬ ಉತ್ತಮ ಬಾಸ್‌ ಮತ್ತು ಗುರು ನನಗೆ ಸಿಕ್ಕಿದ್ದಕ್ಕಾಗಿ ನಾನು ಸದಾ ಕೃತಜ್ಞಳಾಗಿದ್ದೇನೆ. ಅದು ನನ್ನ ವೃತ್ತಿ ಜೀವನಕ್ಕೆ ತುಂಬಾ ಒಳ್ಳೆಯದಾಯಿತು.’

ನೃತ್ಯ ಸಂಯೋಜಕಿಯಾಗಿ ಸವಾಲುಗಳು

`ಇತ್ತೀಚಿನ ದಿನಗಳಲ್ಲಿ ಅಷ್ಟೊಂದು ಸವಾಲುಗಳೇನೂ ಇಲ್ಲ. ಆದರೆ ನಾನು ಈ ಕ್ಷೇತ್ರಕ್ಕೆ ಬಂದ ಆರಂಭದಲ್ಲಿ ಮತ್ತು ಅದಕ್ಕೂ ಮೊದಲು ನೃತ್ಯ ಸಂಯೋಜನೆ ಮಾಡುತ್ತಿದ್ದ ಮಹಿಳೆಯರು ಸಾಕಷ್ಟು ಸಂಘರ್ಷ ಎದುರಿಸಬೇಕಾಗಿತ್ತು. ಏಕೆಂದರೆ ಆ ಸಮಯದಲ್ಲಿ ಪುರುಷ ನೃತ್ಯ ಸಂಯೋಜಕರೇ ಹೆಚ್ಚಾಗಿದ್ದರು. ಅವರ ನಡುವೆ ತಮಗೊಂದು ಸ್ವಂತ ಸ್ಥಾನವನ್ನು ಕಂಡುಕೊಳ್ಳುವುದು ದೊಡ್ಡ ಸವಾಲಾಗಿತ್ತು. ಅವರಿಗೆ ಸಾಕಷ್ಟು ತೊಂದರೆಗಳು ಎದುರಾಗುತ್ತಿದ್ದವು. ಆದರೆ ಅವರ ಆ ಹೋರಾಟ ಶ್ರಮದ ಕಾರಣದಿಂದಾಗಿಯೇ ಇಂದು ನಮ್ಮ ಹಾದಿ ಸುಲಭವಾಗಿದೆ. ಇನ್ನು ಮುಂದೆ ಈ ಕ್ಷೇತ್ರಕ್ಕೆ ಬರುವ ಮಕ್ಕಳಿಗೆ ಇದು ಮತ್ತಷ್ಟು ಸುಲಭವಾಗಲಿದೆ.’

ಜೀವನದ ಪಾಠ

`ನನ್ನ ಗುರಗಳಾದ ಫರಾಹ್‌ ಜೀ ನನಗೆ ಜೀವನದ ಒಂದು ಪಾಠವನ್ನು ಕಲಿಸಿದ್ದಾರೆ. ಅದೇನೆಂದರೆ ಜೀವನದಲ್ಲಿ ತಾಳ್ಮೆ ಮತ್ತು ನಿರ್ಭಯತೆ ಅತ್ಯಂತ ಮುಖ್ಯ. ಭಯವಿಲ್ಲದೆ ಕೆಲಸ ಮಾಡುವುದು ತುಂಬಾ ಅವಶ್ಯಕ. ಏಕೆಂದರೆ ನೀವು ಹೆದರಿದರೆ ಮುಂದೆ ಸಾಗಲು ಸಾಧ್ಯವಿಲ್ಲ. ಯಾವುದೇ ಕೆಲಸವನ್ನು ಕೈಗೆತ್ತಿಕೊಳ್ಳಲು ಹಿಂಜರಿಯಬಾರದು. ಯಾವುದೇ ಕೆಲಸವನ್ನು ಮಾಡಲು ಹೆದರಬಾರದು. ಇದೇ ಅತ್ಯಂತ ದೊಡ್ಡ ಜೀವನದ ಪಾಠ. ಹೆಚ್ಚೆಂದರೆ ಏನಾಗಬಹುದು? ಆ ಕೆಲಸ ಅಂದುಕೊಂಡಷ್ಟು ಚೆನ್ನಾಗಿ ಬಾರದೇ ಇರಬಹುದು, ಅಷ್ಟೇ ತಾನೇ? ಅದು ಏಕೆ ಚೆನ್ನಾಗಿ ಆಗಲಿಲ್ಲ ಎಂಬುದರಿಂದ ನೀವು ಕಲಿಯಬೇಕು ಮತ್ತು ಮುಂದಿನ ಬಾರಿ ಅದನ್ನು ಹೇಗೆ ಉತ್ತಮವಾಗಿ ಮಾಡಬೇಕೆಂದು ತಿಳಿಯಬೇಕು. ಅಷ್ಟೇ ಹೊರತು, ಯಾವುದೇ ಕಾರಣಕ್ಕೂ ಹೆದರಬಾರದು.

‘ಉದ್ಯಮದಲ್ಲಿ ಹೆಣ್ಣುಮಕ್ಕಳ ಸುರಕ್ಷತೆ`

ಕ್ಷೇತ್ರ ಯಾವುದೇ ಇರಲಿ, ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ಯೋಚಿಸಿಯೇ ಯೋಚಿಸುತ್ತಾರೆ ಮತ್ತು ಯೋಚಿಸೀಬೇಕು,’ ಎಂದು ಗೀತಾ ಕಪೂರ್‌ ಹೇಳುತ್ತಾರೆ. ಕೆಲಸಕ್ಕಾಗಿ ಹೊರಗಡೆ ಹೋಗುವ ಮಕ್ಕಳು ತಮ್ಮ ಸುರಕ್ಷತೆಯ ಬಗ್ಗೆ ಗಮನಹರಿಸಬೇಕು. ಪೋಷಕರು ಸಹ ತಮ್ಮ ಮಕ್ಕಳಿಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದು ಎಂಬುದನ್ನು ತಿಳಿಸಿಕೊಡಬೇಕು. ಯಾವುದಕ್ಕೂ ಹೆದರಬಾರದು. ಸಾಮಾನ್ಯವಾಗಿ ಮಕ್ಕಳು ಪೋಷಕರೊಂದಿಗೆ ಮತ್ತು ಪೋಷಕರು ಮಕ್ಕಳೊಂದಿಗೆ ಮಾತನಾಡಲು ಕೊಂಚ ಹಿಂಜರಿಯುತ್ತಾರೆ. ಪೋಷಕರು, `ಇನ್ನೂ ಮಗು, ಇವರ ಹತ್ತಿರ ಮಾತನಾಡಬೇಕೋ ಬೇಡವೋ,’ ಎಂದು ಯೋಚಿಸುತ್ತಾರೆ. ಅದೇ ರೀತಿ ಮಕ್ಕಳೂ ಸಹ ಪೋಷಕರೊಂದಿಗೆ ಮುಕ್ತಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ. ಆದರೆ ಸುರಕ್ಷತೆ ಎಂದರೇನು? ಅದು ಎಷ್ಟು ಮುಖ್ಯ ಎಂಬುದನ್ನು ತಿಳಿದುಕೊಳ್ಳಲು ಪರಸ್ಪರ ಮುಕ್ತವಾಗಿ ಮಾತನಾಡುವುದು ಅತ್ಯಂತ ಅವಶ್ಯಕವಾಗಿದೆ.`

ವಿಶೇಷವಾಗಿ ಹೆಣ್ಣುಮಕ್ಕಳು ತಮ್ಮ ಪೋಷಕರೊಂದಿಗೆ ಮಾತನಾಡುವುದು ತುಂಬಾ ಮುಖ್ಯ. ಅವರನ್ನು ನಿಮ್ಮ ಸ್ನೇಹಿತರನ್ನಾಗಿ ಮಾಡಿಕೊಳ್ಳಿ. ಏಕೆಂದರೆ ಜೀವನದಲ್ಲಿ ದೊಡ್ಡ ತಪ್ಪು, ಸಮಸ್ಯೆಗಳು ಎದುರಾಗುವುದು ನೀವು ನಿಮ್ಮ ಸ್ವಂತ ಜನರೊಂದಿಗೆ ಮಾತನಾಡಲು ಸಾಧ್ಯವಾಗದೇ ಇದ್ದಾಗ ಮಾತ್ರ. ನಿಮ್ಮ ಅತ್ಯಂತ ದೊಡ್ಡ ಸುರಕ್ಷಾ ಕವಚ ಎಂದರೆ ಅದು ನಿಮ್ಮ ಕುಟುಂಬದವರೇ ಆಗಿರುತ್ತಾರೆ. ನಾನು ಪ್ರತಿಯೊಬ್ಬ ಹೆಣ್ಣುಮಗಳಿಗೂ ಹೇಳಲು ಬಯಸುವುದೇನೆಂದರೆ, ನಿಮ್ಮ ಪೋಷಕರನ್ನು ನಿಮ್ಮ ಸ್ನೇಹಿತರನ್ನಾಗಿ ಮಾಡಿಕೊಳ್ಳಿ. ನೀವು ಎಲ್ಲೇ ಹೋದರೂ ಖಂಡಿತವಾಗಿಯೂ ಮನೆಯಲ್ಲಿ ತಿಳಿಸಿ ಹೋಗಿ.

ಮಹಿಳೆಯರ ಸೂಪರ್‌ ಪವರ್‌

`ನಮ್ಮೊಳಗೆ ಇರುವ ಸೂಪರ್‌ ಪವರ್‌ ಗಳನ್ನು ನಾವು ಗುರುತಿಸಬೇಕು ಮತ್ತು ಅವುಗಳನ್ನು ಉಳಿಸಿಕೊಳ್ಳಬೇಕು. ಏಕೆಂದರೆ ಇದನ್ನು ಬೇರೆ ಯಾರೂ ನಮಗೆ ನೀಡಲು ಸಾಧ್ಯವಿಲ್ಲ. ನೀವು ಜನಿಸಿದಾಗ ಇವು ಈಗಾಗಲೇ ನಿಮ್ಮೊಳಗೆ ಇದ್ದವು. ಆ ಸೂಪರ್ ಪವರ್‌ ಗಳೆಂದರೆ ಸಹನಶೀಲತೆ, ಧೈರ್ಯ ಮತ್ತು ನಿರ್ಭಯತೆ. ಇವುಗಳನ್ನು ಹೊರಹೊಮ್ಮಲು ಬಿಡಿ. ವಿನಾಕಾರಣ ವಿಷಯಗಳಿಗಲ್ಲ, ಆದರೆ ಎಲ್ಲಿ ಅಗತ್ಯವಿದೆಯೋ ಅಲ್ಲಿ ನಿಮ್ಮ ಧ್ವನಿಯನ್ನು ಖಂಡಿತವಾಗಿಯೂ ಎತ್ತಬೇಕು.

ಲೈವ್ ‌ಶೋಗಳೆಂದರೆ ಹೆಚ್ಚು ಇಷ್ಟ

ಗೀತಾ ಕಪೂರ್‌ ರ ಪ್ರಕಾರ, `ನನ್ನ ವೃತ್ತಿಜೀವನ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಡುವುದರೊಂದಿಗೆ ಪ್ರಾರಂಭವಾಯಿತು. ನಾನು ಮೊದಲು ಶೋಗಳಲ್ಲಿ ಬ್ಯಾಕ್‌ ಗ್ರೌಂಡ್‌ ಡ್ಯಾನ್ಸರ್‌ ಆಗಿ ಕೆಲಸ ಮಾಡುತ್ತಿದ್ದೆ. ನನಗೆ ಯಾವಾಗಲೂ ಲೈವ್ ‌ಶೋಗಳನ್ನು ಮಾಡುವುದು ಹೆಚ್ಚು ಇಷ್ಟ. ಏಕೆಂದರೆ ಅಲ್ಲಿ ನಿಮಗೆ ತಕ್ಷಣವೇ ಜನರ ಪ್ರತಿಕ್ರಿಯೆ ಮತ್ತು ಮೆಚ್ಚುಗೆ ಸಿಕ್ಕಿಬಿಡುತ್ತದೆ. ಜನರು ಚಪ್ಪಾಳೆ ತಟ್ಟಿದಾಗ ನಮ್ಮ ಕೆಲಸ ಚೆನ್ನಾಗಿದೆಯೇ ಅಥವಾ ಇಲ್ಲವೇ ಎಂಬುದು ನಮಗೆ ತಕ್ಷಣ ತಿಳಿಯುತ್ತದೆ. ಅದೇ ಜನರು ಬೇಸರಗೊಂಡು, ಚಪ್ಪಾಳೆ ತಟ್ಟದೆ ಎದ್ದು ಹೋದರೆ ನಮ್ಮ ಪ್ರದರ್ಶನ ಚೆನ್ನಾಗಿಲ್ಲ ಎಂದರ್ಥ. ಈ ತಕ್ಷಣದ ಮೆಚ್ಚುಗೆ ನನಗೆ ಲೈವ್‌ ಶೋಗಳಿಂದ ಸಿಗುತ್ತದೆ, ಇದು ನನಗೆ ತುಂಬಾ ಇಷ್ಟ. ಆದರೆ, ರಿಯಾಲಿಟಿ ಶೋಗಳ ನೃತ್ಯ ಸಂಯೋಜನೆ ತುಂಬಾ ಕಷ್ಟಕರವಾಗಿರುತ್ತದೆ.

`ಇತ್ತೀಚಿನ ದಿನಗಳಲ್ಲಿ  ಮಕ್ಕಳು ಮಾಡುವ ನೃತ್ಯ ಪ್ರದರ್ಶನಗಳು ತುಂಬಾ ಕಷ್ಟದಾಯಕವಾಗಿರುತ್ತವೆ. ಜನರಿಗೆ ಅದು ಕೇವಲ ಎರಡೂವರೆ ನಿಮಿಷದ ಅಥವಾ ಎರಡು ನಿಮಿಷದ ಹಾಡು, ಹಾಗಾಗಿ ತುಂಬಾ ಸುಲಭ ಇರಬಹುದು ಎನಿಸುತ್ತದೆ. ಆದರೆ ಅದರ ಹಿಂದೆ ಅಪಾರ ಶ್ರಮವಿರುತ್ತದೆ. ನಮ್ಮ ನೃತ್ಯ ಸಂಯೋಜಕರು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಆ ಕೆಲಸ ಸುಲಭವಲ್ಲ, ಏಕೆಂದರೆ ನಿಮ್ಮ ಮೇಲೆ ಒಂದು ಮಗುವಿನ ಜವಾಬ್ದಾರಿ ಇರುತ್ತದೆ. ಆ ಮಗುವಿನ ಭವಿಷ್ಯ ಮತ್ತು ವೃತ್ತಿಜೀವನ ನಿಮ್ಮ ಕೈಯಲ್ಲಿರುತ್ತದೆ.’

ಗ್ರೂಪ್‌ ಡ್ಯಾನ್ಸಿಂಗ್‌ ನಿಂದ ಕೊರಿಯೋಗ್ರಫಿವರೆಗಿನ ಪ್ರಯಾಣ ಕಷ್ಟಕರವಲ್ಲ, ಏಕೆಂದರೆ ನೀವು ಸಿದ್ಧರಾದಾಗ, ಈಗ ನಾನು ನೃತ್ಯ ಸಂಯೋಜಕಿ/ಜಕನಾಗಲು ಸಾಧ್ಯವಿದೆ ಎಂದು ನಿಮಗೆ ತಿಳಿಯುತ್ತದೆ. ಇದು ಕಲಿಯುವ ಒಂದು ಪ್ರಕ್ರಿಯೆಯಾಗಿದೆ. ನೀವು ಇದನ್ನು  ಆನಂದಿಸಿದರೆ, ನಿಮ್ಮ ಕೆಲಸ ಕಷ್ಟವೆನಿಸುವುದಿಲ್ಲ…..

– ಗರಿಮಾ ಪಂಕಜ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ