Sj*
ಕಮರ್ಷಿಯಲ್ ಚಿತ್ರಗಳ ಅಬ್ಬರದ ನಡುವೆಯೂ, ನೈಜ ಕಥಾವಸ್ತು ಮತ್ತು ಭಾವನಾತ್ಮಕ ನಿರೂಪಣೆಯನ್ನು ಹೊತ್ತು ಬಂದಿರುವ ಕನ್ನಡದ ‘ಭಾವಾಂತರ’ ಸಿನಿಮಾ ಪ್ರೇಕ್ಷಕರ ಮನಸ್ಸನ್ನು ಗಾಢವಾಗಿ ತಟ್ಟುವಲ್ಲಿ ಯಶಸ್ವಿಯಾಗಿದೆ. ಯುವ ಪ್ರತಿಭೆ ಕಾರ್ತಿಕ್ ಶರ್ಮಾ ಕಥೆ ಬರೆದು, ನಿರ್ದೇಶಿಸಿರುವ ಈ ಚಿತ್ರವು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ದಿನದಿಂದ ದಿನಕ್ಕೆ ಜನಮನ್ನಣೆ ಹೆಚ್ಚಿಸಿಕೊಳ್ಳುತ್ತಿದೆ.
ಭಾವತೀರಕ್ಕೆ ಕರೆದೊಯ್ಯುವ ಕಥಾಹಂದರ
ಯಾವುದೇ ರೆಗ್ಯುಲರ್ ಹೀರೋಯಿಸಂ ಅಥವಾ ಅಬ್ಬರದ ಸಾಹಸ ದೃಶ್ಯಗಳಿಲ್ಲದೆ, ಸಂಪೂರ್ಣ ಕಥೆ ಮತ್ತು ಸೂಕ್ಷ್ಮ ಸಂವೇದನೆಗಳನ್ನೇ ನಂಬಿ ರೂಪಿಸಲಾದ ಈ ಚಿತ್ರವು ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರನ್ನು ಮೌನವಾಗಿಸುತ್ತಿದೆ. ಶೋ ಮುಗಿದ ನಂತರ ಚಿತ್ರದ ಗಾಢ ಅನುಭವದಿಂದ ಹೊರಬರಲಾರದೆ ಭಾವುಕರಾದ ಪ್ರೇಕ್ಷಕರು, “ಸಿನಿಮಾ ನಮ್ಮನ್ನು ಕಾಡುತ್ತಿದೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಕಳುಹಿಸಿ ಚಿತ್ರತಂಡಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಮೌತ್ ಪಬ್ಲಿಸಿಟಿ ಮೂಲಕ ಚಿತ್ರಕ್ಕೆ ದಿನೇದಿನೆ ನೋಡುಗರ ಸಂಖ್ಯೆ ಹೆಚ್ಚುತ್ತಿದೆ.

ಮಂಗಳಮುಖಿಯರಿಂದ ಭಾವುಕ ಸ್ಪಂದನೆ
ಚಿತ್ರದ ಅತ್ಯಂತ ಮಹತ್ವದ ಹಾಗೂ ಸೂಕ್ಷ್ಮ ಕಥಾಭಾಗವನ್ನು ಮಂಗಳಮುಖಿಯರ ಕುರಿತಾಗಿ ಕಟ್ಟಿಕೊಡಲಾಗಿದೆ. ಅವರ ಸಮುದಾಯಕ್ಕಾಗಿ ಪ್ರತ್ಯೇಕವಾಗಿ ಆಯೋಜಿಸಲಾಗಿದ್ದ ವಿಶೇಷ ಪ್ರದರ್ಶನದಲ್ಲಿ ಚಿತ್ರತಂಡಕ್ಕೆ ಅದ್ಭುತ ಪ್ರತಿಕ್ರಿಯೆ ಲಭಿಸಿದೆ. ಸಮುದಾಯದ ಘನತೆಗೆ ಧಕ್ಕೆ ಬಾರದಂತೆ, ಅವರ ಬದುಕಿನ ನೈಜ ನೋವು-ನಲಿವುಗಳಿಗೆ ಪ್ರಾಮಾಣಿಕ ನ್ಯಾಯ ಒದಗಿಸಿರುವ ಮೊದಲ ಕನ್ನಡ ಚಿತ್ರವಿದು ಎಂದು ಮಂಗಳಮುಖಿಯರು ಕಣ್ಣೀರಿಟ್ಟು ನಿರ್ದೇಶಕರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ನಿರ್ದೇಶಕ ಕಾರ್ತಿಕ್ ಶರ್ಮಾ ಮಾತು
“ಕಮರ್ಷಿಯಲ್ ಸಿನಿಮಾಗಳ ನಡುವೆ ಇಂಥದ್ದೊಂದು ಕಂಟೆಂಟ್-ಡ್ರಿವನ್ ಸಿನಿಮಾವನ್ನು ಜನ ಸ್ವೀಕರಿಸುತ್ತಾರಾ ಎಂಬ ಅಳುಕಿತ್ತು. ಅದರಲ್ಲೂ ಮಂಗಳಮುಖಿಯರ ಬದುಕನ್ನು ತೆರೆಯ ಮೇಲೆ ತರುವಾಗ ಅವರ ಭಾವನೆಗಳಿಗೆ ಎಲ್ಲಿಯೂ ಧಕ್ಕೆಯಾಗಬಾರದು ಎಂಬ ದೊಡ್ಡ ಜವಾಬ್ದಾರಿಯಿತ್ತು. ಆದರೆ ಇಂದು ಪ್ರತಿಯೊಬ್ಬ ಪ್ರೇಕ್ಷಕರಿಂದ ಬರುತ್ತಿರುವ ಅದ್ಭುತ ಸ್ಪಂದನೆ ಹಾಗೂ ಮಂಗಳಮುಖಿ ಸಮುದಾಯ ತೋರಿದ ಅಕ್ಕರೆ-ಪ್ರೀತಿ ನನ್ನಲ್ಲಿ ಹೊಸ ಚೈತನ್ಯ ಮೂಡಿಸಿದೆ. ಕಥೆಗಾರನಾಗಿ ಮತ್ತು ನಿರ್ದೇಶಕನಾಗಿ ನನ್ನ ಶ್ರಮ ಸಾರ್ಥಕವಾಯಿತು ಎಂಬ ತೃಪ್ತಿ ಸಿಕ್ಕಿದೆ” ಎಂದು ಭಾವುಕರಾಗಿ ಹಂಚಿಕೊಂಡಿದ್ದಾರೆ.
ನೈಜ ಘಟನೆಗಳಿಂದ ಪ್ರೇರಿತವಾಗಿ ಕಾರ್ತಿಕ್ ಶರ್ಮಾ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಕಾರ್ತಿಕ್ ಶರ್ಮಾ ಅವರಿಗೆ ಜೋಡಿಯಾಗಿ ಖ್ಯಾತ ನಟಿ ತನ್ವಿ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಜೊತೆಗೆ ಪ್ರಣವ್ ಶ್ರೀಧರ್, ಶ್ರೀವೈಷ್ಣವ್, ವೇದ ರಾವ್ ಮತ್ತು ಭಾನು ಮುಂತಾದ ಪ್ರತಿಭಾನ್ವಿತ ಕಲಾವಿದರು ನಟಿಸಿದ್ದು, ಸಾಗರ್ ಅತ್ಕರ್ ಛಾಯಾಗ್ರಹಣ ಹಾಗೂ ಆಶೀಷ್ ಹುಲಕುಂದ್ ಅವರ ಸಂಕಲನ ಈ ಚಿತ್ರಕ್ಕಿದೆ.
ಅರ್ಥಪೂರ್ಣ, ಹೊಸ ಬಗೆಯ ಸಿನಿಮಾ ಹುಡುಕಾಟದಲ್ಲಿರುವ ಕನ್ನಡಿಗರಿಗೆ ‘ಭಾವಾಂತರ’ ಒಂದು ವಿಶಿಷ್ಟ ಹಾಗೂ ಮರೆಯಲಾಗದ ಅನುಭವ ನೀಡುತ್ತಿದ್ದು, ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.





