ನೀವು ಸಹ ನಿಮ್ಮ ಫಿಟ್‌ ನೆಸ್‌ ಕುರಿತಾಗಿ ಟೆನ್ಶನ್‌ ನಲ್ಲಿದ್ದೀರಾ? ಆ ಕಾರಣಕ್ಕೆ ಹಬ್ಬ ಎಂಜಾಯ್‌ ಮಾಡದಿದ್ದರೆ ಹೇಗೆ? ಹಾಗಾದರೆ ಈ ಮಾತುಗಳನ್ನು ನೆನಪಿಡಿ…..

ಹಬ್ಬ ಆಚರಿಸುವ ಸಂಭ್ರಮದಲ್ಲಿ ನಿಮ್ಮ ಡಯೆಟ್‌ ಪ್ಲಾನ್‌ ಗೋವಿಂದಾ ಆದರೆ ಏನು ಗತಿ ಎಂದು ಬಹಳ ಟೆನ್ಶನಲ್ಲಿದ್ದೀರಾ? ಚಿಂತೆ ಬಿಡಿ, ತಜ್ಞರ ಸಲಹೆ ತಿಳಿಯಿರಿ.

ಕೆಲವು ಹೆಂಗಸರು ತಮ್ಮ ಫಿಟ್‌ ನೆಸ್‌ ಚಿಂತೆಯಲ್ಲಿ ಈ ಹಬ್ಬಗಳನ್ನು ಸರಿಯಾಗಿ ಎಂಜಾಯ್‌ ಮಾಡುವುದೇ ಇಲ್ಲ, ಏನೋ ಟೆನ್ಶನ್, ಚಿಂತೆಗಳಲ್ಲಿ ಹಬ್ಬವನ್ನು ಡಲ್ ಆಗಿ ಕಳೆದುಬಿಡುತ್ತಾರೆ. ಹಾಗೆ ಮಾಡುವುದು ಖಂಡಿತಾ ಸರಿಯಲ್ಲ. ಹಬ್ಬದ ಅಸಲಿ ಮಜಾ ಇರುವುದೇ, ಮನೆಮಂದಿ, ಬಂಧುಬಳಗ, ಸ್ನೇಹಿತರೆಲ್ಲ ಕೂಡಿ ಸುಗ್ರಾಸ ಭೋಜನ ಸವಿದು, ಮೋಜು ಮಸ್ತಿ ಮಾಡುವುದರಲ್ಲಿದೆ.

ಹೀಗಾಗಿ ಮುಂಬರುವ ಹಬ್ಬಗಳಲ್ಲಿ ನೀವು ಹಾಡು, ಹಸೆ, ಅಂತ್ಯಾಕ್ಷರಿ, ಇನ್ನಿತರ ಮೋಜು ಮಸ್ತಿಗಳ ಜೊತೆ ಧಾರಾಳವಾಗಿ ಸ್ವಾದಿಷ್ಟ ಹಬ್ಬದ ಅಡುಗೆ ಸೇವಿಸಿ, ಮನಸಾರೆ ಹಬ್ಬ ಎಂಜಾಯ್‌ ಮಾಡಿ. ಹಬ್ಬ ಮುಗಿದ ನಂತರ, ಫಿಟ್‌ ನೆಸ್‌ ಯೋಚನೆ ಮಾಡಿದರಾಯಿತು. ಹ್ಞಾಂ, ಒಂದಂತೂ ನಿಜ. ಗಡದ್ದಾಗಿ ಹಬ್ಬದ ಊಟತಿಂಡಿ ಮುಗಿಸಿದ ನಂತರ, ಅದು ಚೆನ್ನಾಗಿ ಜೀರ್ಣವಾಗುವಂತೆ ಬೇಕಾದ ವಾಕಿಂಗ್‌, ವ್ಯಾಯಾಮ, ಯೋಗ ಮಾಡಿದರಾಯಿತು. ಇದರಿಂದ ಹಬ್ಬದ ಮಜಾ ಸಿಕ್ಕಿತು, ಆರೋಗ್ಯ ಉಳಿಯುವಂತಾಯಿತು.

ಹಬ್ಬದ ಸಂದರ್ಭದಲ್ಲಿ ಸ್ಟ್ರಿಕ್ಟ್ ಡಯೆಟ್‌ ನ ಗೊಡವೆ ಬೇಡ : ಜಿಮ್ ಗೆಹೋಗುವವರಿಗೆ, ಹೆಚ್ಚು ಡಯೆಟ್‌ ಕಾನ್ಶಿಯಸ್‌ ಆದವರಿಗೆ, ಅದು ತಿನ್ನಬಾರದು ಇದು ತಿನ್ನಬಾರದೆಂಬ ಎಚ್ಚರಿಕೆಯ ಗಂಟೆ ವರ್ಷವಿಡೀ ಮೊಳಗುತ್ತಲೇ ಇರುತ್ತದೆ. ಆದರೆ ಹಬ್ಬದ ಸಂದರ್ಭದಲ್ಲಿ ಈ ಸ್ಟ್ರಿಕ್ಟ್ ಡಯೆಟ್‌ ನ ಗೊಡವೆ ಬೇಡ, ಇದರ ಎಲ್ಲಾ ರೂಲ್ಸ್ ‌ಮುರಿದು ಹಾಯಾಗಿ ತಿಂದುಂಡು ಮಜಾ ಮಾಡಿ. ಮನಸ್ಸಿಗೆ ತೋಚಿದ್ದನ್ನು ರುಚಿಯಾಗಿ ತಯಾರಿಸಿ, ಎಲ್ಲರೊಂದಿಗೆ ನೀವು ಸವಿಯಿರಿ. ಇವತ್ತು ಒಂದು ಚೂರು ಜಾಸ್ತಿ ತಿಂದರೂ ನಾಳೆ ಅತ್ಯಧಿಕ ವ್ಯಾಯಾಮ ಮಾಡಬೇಕಲ್ಲ ಎಂಬ ಟೆನ್ಶನ್‌ ಬೇಡ, ಹೀಗಾಗಿ ಹಬ್ಬಗಳಲ್ಲಿ ಹಾಯಾಗಿರಿ. ಜೀವನದಲ್ಲಿ ಬಿಂದಾಸ್ ಆಗಿರಲು ಹಬ್ಬಗಳು ಸುವರ್ಣಾವಕಾಶ ಒದಗಿಸುತ್ತವೆ.

ಹಬ್ಬ ಮುಗಿದ ನಂತರ ಬಾಡಿ ಡೀಟಾಕ್ಸ್ ಮಾಡಿದರಾಯಿತು : ಇದೀಗ ಎಲ್ಲರಿಗೂ ತಮ್ಮ ದೇಹವನ್ನು ಹೇಗೆ ಡೀಟಾಕ್ಸ್ ಮಾಡಿಕೊಳ್ಳಬೇಕೆಂಬುದು ಚೆನ್ನಾಗಿಯೇ ಗೊತ್ತಿದೆ. ಹೀಗಿರುವಾಗ ಹಬ್ಬ ಮುಗಿದ ಮೇಲೆ ಅದನ್ನು ಮತ್ತೊಮ್ಮೆ ಮಾಡಿಕೊಂಡರಾಯಿತು. ಹೀಗಾಗಿ ಯೋಚನೆ ಮಾಡದೆ, ಹಬ್ಬ ಎಂಜಾಯ್‌ ಮಾಡಿ. ನಂತರ ಉತ್ತಮ ವ್ಯಾಯಾಮದಿಂದ ಅದನ್ನು ಕರಗಿಸಿದರೆ ಆಯಿತು.

ಅಪರೂಪದ ವರ್ಷಾವಧಿ ಹಬ್ಬದ ದಿನ ಇಂಥ ಧೋರಣೆ ಮಹಾ ತಪ್ಪೇನೂ ಅಲ್ಲ : ಇಡೀ ವರ್ಷ ಡಯೆಟ್‌ ನೆಪದಲ್ಲಿ ನೀರಸ ಊಟತಿಂಡಿ ಸವಿದು ನಿಮ್ಮ ನಾಲಿಗೆ ಜಡ್ಡುಗಟ್ಟಿ ಹೋಗಿರುತ್ತದೆ ಅಲ್ಲವೇ? ಹೀಗಾಗಿ ಬದಲಾವಣೆ ಅನಿವಾರ್ಯ. ಶ್ರಾವಣ ಮಾಸದಿಂದ ಅನೇಕ ಹಬ್ಬಗಳು ಶುರು. ಹೀಗಿರುವಾಗ ನವರಾತ್ರಿ, ಆಯುಧಪೂಜೆ, ವಿಜಯದಶಮಿಗಳಂದು ಡಯೆಟ್‌ ಗೊಡವೆ ಏಕೆ? ಈ ತರಹ ತಿಂದುಂಡು, ಉಟ್ಟು ತೊಟ್ಟು, ಎಂಜಾಯ್‌ ಮಾಡಲು ತಾನೇ ನಾವು ಇಷ್ಟೆಲ್ಲ ಕಷ್ಟಪಟ್ಟು ಸಂಪಾದನೆ ಮಾಡುತ್ತಿರುವುದು? ಹೀಗಾಗಿ ದಸರಾ, ದೀಪಾವಳಿಯಂಥ ದೊಡ್ಡ ಹಬ್ಬಗಳಲ್ಲಿ ಈ ತರಹ ಎಂಜಾಯ್‌ ಮಾಡದಿದ್ದರೆ, ವರ್ಷವಿಡೀ ಇಷ್ಟೆಲ್ಲ ಕಷ್ಟಪಟ್ಟು ಗಳಿಸುವುದಾದರೂ ಏಕೆ?

ಹೀಗಾಗಿ ಹಬ್ಬಗಳಲ್ಲಿ ಎಂಜಾಯ್‌ ಮಾಡುವಾಗ ಕೆಲವು ಕಿವಿಮಾತುಗಳು ನೆನಪಿರಲಿ :

ಹಬ್ಬದ ದಿನವಿಡೀ ಧಾರಾಳ ನೀರು ಕುಡಿಯುತ್ತಿರಿ : ಹಬ್ಬದ ದಿನವಿಡೀ ಆಗಾಗ ಧಾರಾಳ ನೀರು ಕುಡಿಯುತ್ತಿರಿ. ಆಗ ಯಾವುದೇ ಆಹಾರ ಜೀರ್ಣವಾಗಲು ಬಹಳ ಸಹಕಾರಿ. ಇದು ಕ್ಲಿಷ್ಟಕರ ಆಹಾರ ಪದಾರ್ಥಗಳನ್ನು ಸಣ್ಣ ಕಣಗಳಾಗಿಸಿ, ಅನಗತ್ಯ ತ್ಯಾಜ್ಯ ಬೇರ್ಪಡಿಸುತ್ತದೆ.

ದೇಹವನ್ನು ಡೀಟಾಕ್ಸ್ ಗೊಳಿಸಲು, ನೀರು ಒಂದು ಅತ್ಯುತ್ತಮ ಮಾಧ್ಯಮ. ಇದು ದೇಹದ ವಿಷಯುಕ್ತ ಪದಾರ್ಥ ನಮ್ಮ ರಕ್ತದಲ್ಲಿ ವಿಲೀನವಾಗದಂತೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಮಲಮೂತ್ರ ವಿಸರ್ಜನೆಯ ವಿಷಯದಲ್ಲಿ ಎಚ್ಚರ ವಹಿಸುತ್ತದೆ. ನೀವು ನೀರಿನ ಬಾಟಲಿಗೆ ಗಿಡಮೂಲಿಕೆ, ಸೌತೆ, ಪುದೀನಾ ಇತ್ಯಾದಿ ಸೇರಿಸಿ ಕುಡಿಯ ಬಯಸಿದರೆ, ಅದು ಇನ್ನೂ ಉತ್ತಮ! ಇದರಿಂದ ಕೇವಲ ನೀರಿನ ಫ್ಲೇವರ್‌ ಹೆಚ್ಚುವುದು ಮಾತ್ರವಲ್ಲ, ರುಚಿ ಹೆಚ್ಚಿಸಿ ಪೋಷಕಾಂಶಗಳನ್ನು ಹೆಚ್ಚಿಸುವಲ್ಲಿ ನೆರವಾಗುತ್ತದೆ. ಹೀಗಾಗಿ ಹಬ್ಬಗಳಲ್ಲಿ ಹೆಚ್ಚು ನೀರು ಕುಡಿಯಲು ಮರೆಯದಿರಿ.

ಪೋರ್ಶನ್‌ ಕಂಟ್ರೋಲ್ ‌: ಹಬ್ಬಗಳು ಅಂದ ಮೇಲ ರಸಗವಳಕ್ಕೆ ಏನೂ ಕೊರತೆ ಇರುವುದಿಲ್ಲ. ಆದರೆ ಒಂದೇ ಸಲ ಗಡದ್ದಾಗಿ ತಿಂದು ತೇಗಲು ಹೋಗಬೇಡಿ, ಅದರಿಂದ ಹೊಟ್ಟೆಯ ಗಡಿಬಿಡಿ ತಪ್ಪಿದ್ದಲ್ಲ. ಯಾವ ಸ್ವೀಟ್‌ ಯಾವ ಪ್ರಮುಖ ಭಕ್ಷ್ಯವೇ ಇರಲಿ, ಸ್ವಲ್ಪವೇ ಪೋರ್ಶನ್‌ ಸೇವಿಸಿ. ಇದರಿಂದ ದೇಹಕ್ಕೆ ಅದನ್ನು ಚೆನ್ನಾಗಿ ಜೀರ್ಣಗೊಳಿಸಲು ಸುಲಭವಾಗುತ್ತದೆ. ಇದರಿಂದ ಬ್ಲಾಟಿಂಗ್ (ಹೊಟ್ಟೆ ಉಬ್ಬರ) ನ ತೊಂದರೆಯೂ ತಪ್ಪುತ್ತದೆ.

ಆಹಾರವನ್ನು ಚೆನ್ನಾಗಿ ಅಗಿದು ಸೇವಿಸಿ : ಹಬ್ಬಗಳ ಎಗ್ಸೈಟ್‌ ಮೆಂಟ್‌ ನಲ್ಲಿ, ಬೇಕಾದವರೊಡನೆ ಬೆರೆತಾಗ, ಊಟತಿಂಡಿ ವಿಷಯದಲ್ಲಿ ಉಲ್ಟಂಪಲ್ಟಾ ಆಗುವುದು ಸಹಜ. ಈ ಸಂದರ್ಭದಲ್ಲಿ ನಾವು ಆತುರಾತುರದಲ್ಲಿ ಹಬ್ಬದ ಭಕ್ಷ್ಯ ಸೇವಿಸಿದರೆ, ನಮ್ಮ ಹೊಟ್ಟೆ ಅದನ್ನು ಜೀರ್ಣಿಸಿಕೊಳ್ಳಲು ಅದೇ ವೇಗದಲ್ಲಿ ತಯಾರಿರುವುದಿಲ್ಲ. ಇದರ ದೆಸೆಯಿಂದ ನಮಗೆ ಅಜೀರ್ಣ, ಹೊಟ್ಟೆ ನುಲುಚುವಿಕೆ ಇತ್ಯಾದಿ ಮಾಮೂಲಿ ಆಗಿ, ಹುಳಿತೇಗು ಬಂದರೂ ಆಶ್ಚರ್ಯವಿಲ್ಲ.

ಹೀಗಾಗಿ ಹಬ್ಬದ ಯಾವುದೇ ತಿಂಡಿ ಇರಲಿ, ನಿಧಾನವಾಗಿ ಸ್ವಲ್ಪ ಸ್ವಲ್ಪವೇ ಸೇವಿಸಿ, ಚೆನ್ನಾಗಿ ಆಗಿದು ಸೇವಿಸಿ. ಹಬ್ಬಗಳಲ್ಲಿ ಮುಖ್ಯವಾಗಿ ನಾವು ಹೆವಿ ಊಟತಿಂಡಿ ಸೇವಿಸುವುದರಿಂದ, ಅದನ್ನು ಚೆನ್ನಾಗಿ ಅಗಿದು ತಿಂದಾಗ ಮಾತ್ರ ನಮಗೆ ಲಾಭ.

ತಿಂದುಂಡ ತಕ್ಷಣ ಹಾಯಾಗಿ ಮಲಗಬೇಡಿ : ಇತ್ತೀಚಿನ ದಿನಗಳಲ್ಲಿ ಯಾರೂ ಈ ಸಂದರ್ಭದಲ್ಲಿ ಊಟತಿಂಡಿ ಬಗ್ಗೆ ಕಂಟ್ರೋಲ್ ಇಟ್ಟುಕೊಳ್ಳುವುದಿಲ್ಲ. ಇದರ ಅರ್ಥ ನೀವು ಬಿಲ್ ‌ಕುಲ್ ‌ಸೋಮಾರಿ ಆಗಿಬಿಡಬಾರದು. ಗಡದ್ದಾಗಿ ಹಬ್ಬದ ಊಟ ಮುಗಿಸಿದ ತಕ್ಷಣ, ಜೋರಾಗಿ ತೇಗಿ, ಸಿಕ್ಕಿದ ಜಾಗದಲ್ಲಿ ಉರುಳಿಕೊಳ್ಳಬೇಡಿ. ಇದರಿಂದ ತಿಂದ ಆಹಾರ ಖಂಡಿತಾ ಜೀರ್ಣ ಆಗುವುದಿಲ್ಲ. ಊಟತಿಂಡಿ ಆದಮೇಲೆ, ಎದ್ದು ನೀವೇ ನಿಮ್ಮ ಪ್ಲೇಟ್‌ ಲೋಟ ತೊಳೆದಿಡಿ. ಮನೆಯಲ್ಲೇ ಅಲ್ಲಿ ಇಲ್ಲಿ ಓಡಾಡಿಕೊಂಡು ಸಣ್ಣಪುಟ್ಟ ಕೆಲಸ ಮಾಡುತ್ತಿರಿ, ನಂತರ ಮಲಗುವುದೇ ಸರಿ. ಇದರಿಂದ ಗ್ರಾಂಡ್‌ ಊಟತಿಂಡಿಯ ಆಹಾರ ಜೀರ್ಣವಾಗಲು ದಾರಿಯಾಗುತ್ತದೆ. ಇದರಿಂದ ನಿಮ್ಮ ಮನಸ್ಸಿಗೂ ಕಿರಿಕಿರಿ ಹೆಚ್ಚಿ, ಅನಗತ್ಯವಾಗಿ ಹಬ್ಬದ ಅಡುಗೆಯನ್ನು ತೆಗಳಬೇಡಿ. ಇದರ ದೋಷ ವಿಶೇಷ ತಿಂಡಿತಿನಿಸುಗಳದ್ದಲ್ಲ. ತಿಂದುಂಡು ತಕ್ಷಣ ಮಲಗುವ ನಿಮ್ಮ ಅಭ್ಯಾಸದ್ದು!

ಊಟತಿಂಡಿ ನಂತರ ಪಚನಕ್ಕೆ ಪೂರಕ ಟೀ ಸೇವಿಸಿ : ಹಬ್ಬಗಳಲ್ಲಿ ಗಡದ್ದಾಗಿ ತಿಂದು ಮುಗಿಸಿದಾಗ, ಅಸಿಡಿಟಿ, ಹೊಟ್ಟೆ ಉಬ್ಬರ, ಮಲಬದ್ಧತೆ ತಪ್ಪಿದ್ದಲ್ಲ. ಇವುಗಳಿಂದ ದೂರಾಗಲು, ಊಟತಿಂಡಿ ನಂತರ ಅಗತ್ಯವಾಗಿ ಪಚನಕ್ಕೆ ಪೂರಕವಾಗುವಂಥ ಶುಂಠಿ ಟೀ, ಸೋಂಪಿನ ಟೀ, ಓಮ ಲವಂಗ ಬೆರೆತ ಟೀ ಇತ್ಯಾದಿ ಸೇವಿಸಲು ಮರೆಯದಿರಿ. ಇವು ನಿಮ್ಮ ಹೆವಿ ಆಹಾರದ ಬಾಧೆ ತಪ್ಪಿಸಿ, ಅದರಲ್ಲಿನ ಕಿಣ್ವಗಳಿಂದಾಗಿ, ನಿಮ್ಮ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ.

– ಶೀಲಾ ಜೈನ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ