ಹೆಂಗಸರ ಲೈಂಗಿಕ ಬಯಕೆಗಳ ಕುರಿತಾಗಿ ಪರಂಪರಾಗತ ರೂಢಿವಾದಿ ಆಲೋಚನೆಗಳನ್ನು ಹಿಂದಿಕ್ಕಲು, ಹೆಂಗಸರಲ್ಲಿ ಮುಕ್ತ ಮಾತುಕಥೆ ಅತ್ಯಗತ್ಯ ಅಲ್ಲವೇ……?
ಲೈಂಗಿಕ ಬಯಕೆ ಪ್ರತಿ ವ್ಯಕ್ತಿಯ ಸಹಜ, ಸ್ವಾಭಾವಿಕ, ಮೌಲಿಕ ಅಗತ್ಯವಾಗಿದೆ, ಅದು ಗಂಡು ಯಾ ಹೆಣ್ಣು ಯಾರೇ ಆಗಿರಬಹುದು. ಆದರೆ ನಮ್ಮ ಸಮಾಜದಲ್ಲಿ ಹೆಂಗಸರ ಲೈಂಗಿಕ ಬಯಕೆಗಳನ್ನು ಅನಾದಿ ಕಾಲದಿಂದಲೇ ಕಡೆಗಾಣಿಸಲಾಗಿದೆ. ಈ ವಿಷಯ ಎಷ್ಟು ವರ್ಜಿತ ಎಂದರೆ, ಬಹುತೇಕ ಕುಟುಂಬಗಳಲ್ಲಿ ಈಗಿನ ಆಧುನಿಕ ಕಾಲದಲ್ಲೂ ಸಹ, ಯಾರೂ ಮುಕ್ತವಾಗಿ ಈ ಬಗ್ಗೆ ಮಾತನಾಡಲು ಮುಂದೆ ಬರುವುದಿಲ್ಲ.
ಇಂದಿನ ಆಧುನಿಕ ಕಾಲದಲ್ಲೂ ಇದೆಂಥ ಕಂದಾಚಾರ?
ಹೆಂಗಸರ ಲೈಂಗಿಕ ಬಯಕೆಗಳ ಕುರಿತಾಗಿ ಸಹಜವಾಗಿ ಏಕೆ ಸ್ವೀಕರಿಸಬಾರದು? ಅದನ್ನು ಕೇವಲ ತಿಳಿದುಕೊಳ್ಳುವುದಷ್ಟೇ ಅಲ್ಲ, ಈ ಕುರಿತಾಗಿ ಹೆಂಗಸರು ತಮ್ಮ ತಮ್ಮಲ್ಲೇ ಮುಕ್ತವಾಗಿ ಚರ್ಚಿಸಬೇಕಾದ ಅಗತ್ಯವಿದೆ. ಇಂಥ ಮುಕ್ತ ಮಾತುಕಥೆಗಳಿಂದ ಮಾತ್ರ ಪ್ರತ್ಯೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಅಂದರೆ ಹೆಂಗಸರು ಈ ಮೂಲಕ ತಮ್ಮ ಸಂಗಾತಿ, ಕುಟುಂಬದ ಇತರ ಮಹಿಳೆಯರು, ಗೆಳತಿಯರ ಜೊತೆ ಈ ಬಗ್ಗೆ ನಿಸ್ಸಂಕೋಚವಾಗಿ ಚರ್ಚಿಸಿ, ಆ ವಿಷಯದಲ್ಲಿ ತಮಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಮುಕ್ತ ಮಾತುಕಥೆ ಏಕೆ ಅವಶ್ಯಕ? : ನಮ್ಮ ಸಮಾಜದಲ್ಲಿ ಇಂಥ ಯಾವುದೇ ಸಮಸ್ಯೆಯ ಬಗ್ಗೆ, ಆ ಕುರಿತು ಮಾಹಿತಿ ತಿಳಿದುಕೊಳ್ಳಬೇಕೆಂದರೆ, ಅದು ಲೈಂಗಿಕತೆಗೆ ಸಂಬಂಧಪಟ್ಟಿರುವುದರಿಂದ ಇನ್ನಷ್ಟು ಕ್ಲಿಷ್ಟಕರ ಕಗ್ಗಂಟಾಗುತ್ತದೆ. ಹೆಂಗಸರ ಈ ಲೈಂಗಿಕ ಬಯಕೆಗಳ ಕುರಿತಾಗಿ ಪರಂಪರಾಗತ ರೂಢಿವಾಡಿ ಆಲೋಚನೆಗಳನ್ನು ಹಿಂದಿಕ್ಕಲು, ಅನಾದಿ ಕಾಲದ ಕಂದಾಚಾರ ತೊರೆದು, ವೈಜ್ಞಾನಿಕ ನಿಲುವಿನಿಂದ ಗೆಳತಿಯರು, ಸಮಯಸ್ಕರ ನಡುವೆ ಮುಕ್ತ ಮಾತುಕಥೆ ಹಂಚಿಕೊಳ್ಳುವುದೇ ಸರಿ.
ಗೆಳತಿಯರೊಂದಿಗೆ ಮಾತುಕಥೆಯ ಅಗತ್ಯ : ಸಾಮಾನ್ಯವಾಗಿ ಮೈ ನೆರೆದ ಹೆಣ್ಣುಮಕ್ಕಳಿಗೆ, ಗಂಡಸರೆಂದರೆ ಅತಿ ಜೋಪಾನವಾಗಿರಬೇಕು, ಅವರೊಂದಿಗೆ ಸಲುಗೆ ಬೇಡವೇ ಬೇಡ ಎಂಬುದಷ್ಟೇ ಸಲಹೆಗಳನ್ನು ಕುಟುಂಬದ ಹಿರಿಯ ಹೆಂಗಸರು, ತರುಣಿಯರಿಗೆ ಹೇಳಿ ಸುಮ್ಮನಾಗಿಬಿಡುತ್ತಾರೆ. ಇಂದಿನ ಅತ್ಯಾಧುನಿಕ ಕಾಲದಲ್ಲಿ ಇಷ್ಟೆಲ್ಲ ಎಕ್ಸ್ ಪೋಶರ್ ಇರುವ ಹೆಣ್ಣುಮಕ್ಕಳಿಗೆ, ಲೈಂಗಿಕ ಬಯಕೆಗಳ ಕುರಿತಾಗಿ ಹಂಚಿಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಮನೆಯ ಹಿರಿಯ, ಸಮವಯಸ್ಕ ಹೆಂಗಸರ ಬಳಿ ಇದನ್ನು ಚರ್ಚಿಸಲು ಆಗದಿದ್ದ ಮೇಲೆ, ಮನವರಿಯುವ ಸಹಪಾಠಿ, ಗೆಳತಿಯರ ಬಳಿ ಇದನ್ನು ಚರ್ಚಿಸಿ ತಿಳಿಯಬಹುದಲ್ಲವೇ?
ಈ ಬಗ್ಗೆ ಮಾತನಾಡುವುದೇ ಒಂದು ಅಪರಾಧ, ಇದೆಲ್ಲ ಪೋಲಿ ಮಾತು, ಹಾಗೆ ನಡೆದುಕೊಳ್ಳುವುದು ಕುಸಂಸ್ಕಾರ ಎಂಬುದಷ್ಟೇ ನಮ್ಮ ತರುಣಿಯರಿಗೆ ಗೊತ್ತು. ಇದರ ಬದಲು ಗೆಳತಿಯರಿಂದ ಸ್ವಸ್ಥ ಲೈಂಗಿಕ ತಿಳಿವಳಿಕೆ ಪಡೆಯುವುದು ಎಷ್ಟೋ ಮೇಲು. ಹಾಗಾಗಿ ಅವರೊಂದಿಗೆ ಮುಕ್ತ ಮಾತುಕಥೆ ಅನಿವಾರ್ಯ.
ಸಮಾಜದ ದೃಷ್ಟಿಕೋನ ಬದಲಾಗಬೇಕಾದುದು ಅನಿವಾರ್ಯ : ನಮ್ಮ ಸಮಾಜ ಈ ಆಧುನಿಕ ಕಾಲದಲ್ಲಾದರೂ ಮಡಿವಂತಿಕೆ, ಕಂದಾಚಾರ ತೊರೆಯುವುದು ಲೇಸು. ಹೆಂಗಸರ ಲೈಂಗಿಕ ಬಯಕೆ ಸಹಜ, ನೈಸರ್ಗಿಕವಾದುದು. ಹೀಗಾಗಿ ಹೆಣ್ಣುಮಕ್ಕಳಿಗೆ ಪ್ರೌಢಶಾಲಾ ಮಟ್ಟದಿಂದಲೇ (ಈ ಹೊತ್ತಿಗೆ ಖಂಡಿತಾ ಅವರು ಪುಷ್ಪವತಿಯರಾಗಿ ಅದರ ಸಾಧಕ/ಬಾಧಕ, ಸಮಸ್ಯೆಗಳ ಬಗ್ಗೆ ಅರಿತಿರುತ್ತಾರೆ). ತಜ್ಞರಿಂದ ಸೂಕ್ತ ಲೈಂಗಿಕ ಶಿಕ್ಷಣ ಕೊಡಿಸಬೇಕಾದುದು ಅನಿವಾರ್ಯ. ಸಿನಿಮಾ, ಟಿವಿ ಧಾರಾವಾಹಿಗಳಲ್ಲಿ ಈ ವಿಷಯವನ್ನು ಅಶ್ಲೀಲವಾಗಿ ಪ್ರದರ್ಶಿಸು ಬದಲು, ಒಂದು ಸಹಜ ಸ್ವಾಭಾವಿಕ ಅಗತ್ಯದ ರೂಪದಲ್ಲಿ ತೋರಿಸಬೇಕು. ಗಂಡುಹೆಣ್ಣು ಇಬ್ಬರಿಗೂ ಸಮಾನ ರೂಪದಲ್ಲಿ ಈ ವಿಷಯದಲ್ಲಿ ಶಿಕ್ಷಣ ನೀಡಬೇಕಾಗಿದೆ.
ವಾಸ್ತವಿಕ ಉದಾಹರಣೆ : ಸಮಾಜದಲ್ಲಿ ಬದಲಾವಣೆ ತರುವಂಥ ಇಂಥ ಘಟನೆ ಗಮನಿಸೋಣ. ಆಧುನಿಕ ವಿಚಾರಧಾರೆಯುಳ್ಳ ತಾಯಿ ನೀತಾಳ ಮಗಳು ರೇಖಾ ಟೀನೇಜರ್. ಅವಳು ಮೊದಲ ಸಲ ಲೈಂಗಿಕ ಆಕರ್ಷಣೆಗೆ ಒಳಗಾದಾಗ, ತಾಯಿಯ ಬಳಿ ಬಂದು ಈ ಕುರಿತು ನೇರವಾಗಿ ತಿಳಿಸಿದಳು. ನೀತಾ ತನ್ನ ಮಗಳ ಮಾತು ಕೇಳಿ ಗದರುವ ಬದಲು, ಪ್ರೀತಿಯಿಂದ ಅವಳಿಗೆ ಸಲಹೆ ನೀಡಿದಳು. ಇದೊಂದು ನೈಸರ್ಗಿಕ ಅನುಭವ. ಈ ಭಾವನೆ ಎಲ್ಲರಿಗೂ ಮೂಡುವುದು ಸಹಜ, ಸ್ವಾಭಾವಿಕ. ಇದನ್ನು ತನ್ನ ದೌರ್ಬಲ್ಯ ಎಂದು ತಿಳಿಯಬಾರದು, ಎಂದು ಮಗಳಿಗೆ ತಿಳಿ ಹೇಳಿದಳು.
ಇನ್ನೊಂದು ಪ್ರಕರಣದಲ್ಲಿ ಒಬ್ಬ ಪತಿ, ತನ್ನ ಪತ್ನಿಯ ಈ ಭಾವನೆಗಳನ್ನು ಗುರುತಿಸಿ, ಗೌರವಿಸಿದವು. ರವಿ ಸೀಮಾರ ಮದುವೆಯಾಗಿ 7 ವರ್ಷ ಕಳೆದಿತ್ತು. ಆದರೆ ಸೀಮಾ ತನ್ನ ಲೈಂಗಿಕ ಆಸೆಗಳ ಕುರಿತಾಗಿ ಗಂಡನ ಬಳಿ ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಿದ್ದಳು. ಅದನ್ನು ಸೂಕ್ಷ್ಮವಾಗಿ ಗಮನಿಸಿದ ರವಿ, ಇದನ್ನು ಸಹಜ ರೀತಿಯಲ್ಲಿ ಒಪ್ಪಿಕೊಂಡು, ಸೀಮಾ ತನ್ನ ಮನದಾಳದ ಭಾವನೆ ಹಂಚಿಕೊಳ್ಳುವಂತೆ ಪ್ರೇರೇಪಿಸಿದ. ಇದರಿಂದಾಗಿ ಅವರ ದಾಂಪತ್ಯ, ಲೈಂಗಿಕ ಜೀವನ ಮೊದಲಿಗಿಂತಲೂ ಎಷ್ಟೋ ಹಸನಾಯಿತು.
ನಿಷ್ಕರ್ಷೆ : ಹೆಂಗಸರ ಲೈಂಗಿಕ ಬಯಕೆಗಳ ಕುರಿತಾಗಿ ಒಪ್ಪಿಗೆ ನೀಡಿ, ಅದನ್ನು ಸಹಜವಾಗಿ ಮಾತುಕಥೆಯಿಂದ ಇತ್ಯರ್ಥಗೊಳಿಸುವುದು ಅತಿ ಅವಶ್ಯಕ. ಎಲ್ಲಿಯವರೆಗೆ ಈ ವಿಷಯ ವರ್ಜಿತ ಎಂದು ತಿಳಿಯಲಾಗುತ್ತದೋ, ಅಲ್ಲಿಯವರೆಗೂ ಹೆಂಗಸರು ಈ ಕುರಿತಾಗಿ ಅಜ್ಞಾತದಲ್ಲೇ, ಸಂಕೋಚದಿಂದ ಮುದುಡಿ ಹೋಗುತ್ತಾರೆ. ಹೀಗಾಗಿ ಕುಟುಂಬದ ಮಹಿಳೆಯರು, ಸಮಾಜದ ಗಣ್ಯರು ಈ ಕುರಿತಾಗಿ ಚರ್ಚಿಸಿ ಒಂದು ಸಹಜ ನಿರ್ಧಾರಕ್ಕೆ ಬರಬೇಕು.
ಹಿಂದೆ `ಎಡಕಲ್ಲು ಗುಡ್ಡದ ಮೇಲೆ’ ಚಿತ್ರದಲ್ಲಿ ಜಯಂತಿ ಪಾತ್ರವಾಗಲಿ, `ಪರಸಂಗದ ಗೆಂಡೆತಿಮ್ಮ’ ಚಿತ್ರದಲ್ಲಿ ನಾಯಕಿ ರೀಟಾ ಅಂಚನ್ ಪಾತ್ರವಾಗಲಿ, ಇಂಥ ಸದವಕಾಶದಿಂದ ವಂಚಿತರಾಗಿ, ಖಳನಾಯಕಿಯರಾಗಿಯೇ ಬಿಂಬಿಸಲ್ಪಟ್ಟಿದ್ದಾರೆ. `ಅನುಭವ’ ಚಿತ್ರದ ಉಮಾಶ್ರೀ ಪಾತ್ರ ಇದಕ್ಕೆ ಹೊರತಲ್ಲ.
ಆದ್ದರಿಂದ ಇಂಥ ಕ್ಲಿಷ್ಟಕರ ಪರಿಸ್ಥಿತಿ ಇಂದಿನ ಆಧುನಿಕ ತರುಣಿಯರಿಗೆ ಬರಬಾರದು. ಅವರು ಆತ್ಮವಿಶ್ವಾಸದಿಂದ ಇಂಥ ಮಾತುಗಳನ್ನು ಮುಕ್ತವಾಗಿ ಮಾತನಾಡಿ, ಸಂದೇಹ ಪರಿಹರಿಸಿಕೊಳ್ಳುವಂತೆ ಆಗಬೇಕು. ಆದ್ದರಿಂದ ಈ ನಿಟ್ಟಿನಲ್ಲಿ ಎಲ್ಲಾ ಹೆಂಗಸರೂ ಒಂದು ದಿಟ್ಟ ಹೆಜ್ಜೆ ಇಟ್ಟು ಮುಂದುವರಿಯುವುದೇ ಲೇಸು.
– ಉಪಾಸನಾ ರಾವ್





