ಗೌರವಧನ ಹೆಚ್ಚಳ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದ್ದು, ಈ ನಡುವೆ ಪ್ರತಿಭಟನೆ ಹಿಂಪಡೆಯುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡೆಸಿದ ಮನವೊಲಿಕೆ ಪ್ರಯತ್ನವೂ ಫಲ ನೀಡಿಲ್ಲ.

ಆಶಾ ಕಾರ್ಯಕರ್ತೆಯರ ಸಂಘದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಬೇಡಿಕೆಗಳನ್ನು ಸಚಿವ ಸಂಪುಟ ಹಾಗೂ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದರು. ಆದರೂ ಕಾರ್ಯಕರ್ತೆಯರು ಲಿಖಿತ ಆದೇಶ ನೀಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದೀಗ ಮತ್ತೊಮ್ಮೆ ಸೋಶಿಯಲ್​ ಮೀಡಿಯಾ ಮೂಲಕ ಭಾವನಾತ್ಮಕ ಮನವಿ ಮಾಡಿರುವ ಡಿಕೆಶಿ, ಪ್ರತಿಭಟನೆ ಕೈಬಿಡುವಂತೆ ಕೋರಿದ್ದಾರೆ.“ನೀವು ನನಗೆ ಕೇವಲ ಆಶಾ ಕಾರ್ಯಕರ್ತೆಯರಲ್ಲ, ಸಹೋದರಿಯರಿದ್ದಂತೆ” ಎಂದಿರುವ ಡಿಕೆಶಿ,ಆಶಾ ಸಹೋದರಿಯರಲ್ಲಿ ಸರ್ಕಾರದ ಪರವಾಗಿ ನನ್ನ ಕಳಕಳಿಯ ಮನವಿ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ನಿಮ್ಮ ಹೋರಾಟದ ನೋವು ಮತ್ತು ಸಂಕಷ್ಟ ನನಗೆ ಅರ್ಥವಾಗುತ್ತದೆ. ಕುಟುಂಬದವರನ್ನು ಬಿಟ್ಟು ಹಗಲು-ರಾತ್ರಿ ಎನ್ನದೆ ಹೋರಾಟ ಮಾಡುತ್ತಿರುವುದು ಮನಸ್ಸಿಗೆ ನೋವುಂಟು ಮಾಡಿದೆ. ನೀವು ನನಗೆ ಕೇವಲ ಆಶಾ ಕಾರ್ಯಕರ್ತೆಯರಲ್ಲ, ನನ್ನ ಸಹೋದರಿಯರಿದ್ದಂತೆ ಎಂದು ಭಾವನಾತ್ಮಕವಾಗಿ ಮನವಿ ಮಾಡಿದ್ದಾರೆ.

ಅಂಗನವಾಡಿಗಳ ಸ್ಥಾಪನೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆರಂಭ ಹಾಗೂ ಆಶಾ ಕಾರ್ಯಕರ್ತೆಯರ ಹುದ್ದೆಗಳ ಸೃಷ್ಟಿಯ ಮೂಲಕ ಮಹಿಳೆಯರಿಗೆ ಮತ್ತು ಆರೋಗ್ಯ ಕ್ಷೇತ್ರದ ಕಾರ್ಯಕರ್ತೆಯರಿಗೆ ಸೇವೆಯ ಅವಕಾಶ ಕಲ್ಪಿಸಿದ್ದು ಕಾಂಗ್ರೆಸ್ ಸರ್ಕಾರ ಎಂದು ತಮ್ಮ ಸರ್ಕಾರದ ಸಾಧನೆಗಳನ್ನು ಉಲ್ಲೇಖಿಸಿದ್ದಾರೆ.

ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಮುಂದಿನ ದಿನಗಳಲ್ಲಿ ಸಮಗ್ರ ಹಾಗೂ ಶಾಶ್ವತ ಪರಿಹಾರ ಒದಗಿಸಲು ಸರ್ಕಾರ ಚಿಂತನೆ ನಡೆಸಿದೆ. ಸಂಪುಟದ ಜೊತೆಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುವ ಅವರು, ಒಬ್ಬ ಅಣ್ಣನಾಗಿ ನನ್ನ ಮನವಿಗೆ ಸ್ಪಂದಿಸಿ ಹೋರಾಟ ಕೈಬಿಡಿ. ನಿಮ್ಮ ಸೇವೆ, ಶ್ರಮ ಮತ್ತು ತ್ಯಾಗವನ್ನು ಸರ್ಕಾರ ಗೌರವಿಸುತ್ತದೆ. ನಿಮ್ಮ ಬೇಡಿಕೆಗಳಿಗೆ ಸ್ಪಂದಿಸಿ ಸೂಕ್ತ ಪರಿಹಾರ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಆಶಾ ಕಾರ್ಯಕರ್ತೆಯರ ಪ್ರಮುಖ ಬೇಡಿಕೆಗಳಲ್ಲಿ ಮಾಸಿಕ 15 ಸಾವಿರ ರೂಪಾಯಿ ನಿಗದಿತ ಗೌರವಧನ, 5 ಲಕ್ಷ ರೂಪಾಯಿ ನಿವೃತ್ತಿ ಸೌಲಭ್ಯ ಹಾಗೂ ಸಮಸ್ತ ಆ್ಯಪ್ ಹಿಂಪಡೆಯುವ ಬೇಡಿಕೆಗಳೂ ಸೇರಿವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ