ಕನ್ನಡ ಚಿತ್ರರಂಗದಲ್ಲಿ ‘ಜಟ್ಟ’, ‘ಮೈತ್ರಿ’ ಮೊದಲಾದ ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ ಬಿ. ಎಂ. ಗಿರಿರಾಜ ಈ ಬಾರಿ ‘ಕಲ್ಯಾಣಿ’ ಎಂಬ ಮತ್ತೊಂದು ವಿಭಿನ್ನ ಕಥಾಹಂದರವನ್ನು ತೆರೆಮೇಲೆ ತರುವ ತಯಾರಿಯಲ್ಲಿದ್ದಾರೆ. ಹೌದು, ಲೇಖಕ ಬಸವ ರೆಡ್ಡಿ ಅವರ ಕಥೆಗೆ ಬಿ. ಎಂ. ಗಿರಿರಾಜ ಸಿನಿಮಾ ರೂಪ ಕೊಟ್ಟು ಅದನ್ನು ‘ಕಲ್ಯಾಣಿ’ ಹೆಸರಿನಲ್ಲಿ ತೆರೆಗೆ ತರುತ್ತಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದ ಚಿತ್ರತಂಡ, ಇದೀಗ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ.
ಇತ್ತೀಚೆಗೆ ನಡೆದ ಸಮಾರಂಭದಲ್ಲಿ ನಟ ಡಾರ್ಲಿಂಗ್ ಕೃಷ್ಣ, ‘ಕಲ್ಯಾಣಿ’ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿದರು. ಇದೇ ವೇಳೆ ಮಾತನಾಡಿದ ನಟ ಡಾರ್ಲಿಂಗ್ ಕೃಷ್ಣ, ‘ಸಾಮಾನ್ಯವಾಗಿ ಸಿನಿಮಾದಲ್ಲಿರುವ ಒಳ್ಳೆಯ ದೃಶ್ಯಗಳನ್ನು ಕಟ್ ಮಾಡಿ ಟ್ರೇಲರ್ ಮಾಡಿರುತ್ತಾರೆ. ಟ್ರೇಲರ್ ನೋಡಿದವರಿಗೆ ಸಿನಿಮಾದ ಕಥೆ, ಶೈಲಿ ಎಲ್ಲದರ ಬಗ್ಗೆಯೂ ಮಾಹಿತಿ ಸಿಗುತ್ತದೆ. ಆದರೆ ‘ಕಲ್ಯಾಣಿ’ ಸಿನಿಮಾ ಟ್ರೇಲರ್ ನೋಡಿದಾಗ ಒಳ್ಳೆಯ ದೃಶ್ಯಗಳು ಕಂಡರೂ, ಸಿನಿಮಾದ ಕಥೆ, ಶೈಲಿ ಯಾವುದರ ಬಗ್ಗೆಯೂ ಗೊತ್ತಾಗುವುದಿಲ್ಲ. ಅಷ್ಟು ನಾಜೂಕಾಗಿ ನಿರ್ದೇಶಕರು ಟ್ರೇಲರ್ ಕಟ್ ಮಾಡಿದ್ದಾರೆ. ಸಿನಿಮಾದ ಟ್ರೇಲರ್ ನೋಡಿದಾಗ ಕನ್ನಡಕ್ಕೆ ಇದೊಂದು ವಿಭಿನ್ನ ಸಿನಿಮಾವಾಗುತ್ತದೆ ಎಂಬ ಭರವಸೆ ಮೂಡುತ್ತದೆ. ಚಿತ್ರ ಪ್ರೇಕ್ಷಕರ ಮನಗೆಲ್ಲಲಿ’ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ ಮಾಜಿ ಅಧ್ಯಕ್ಷ ಭಾ. ಮ. ಹರೀಶ್, ಹಿರಿಯ ನಿರ್ಮಾಪಕ ಎಂ. ಎನ್. ಕುಮಾರ್, ನಟ ರಾಕೇಶ್ ಅಡಿಗ, ರ್ಯಾಪರ್ ಅಲೋಕ್ (ಆಲ್ ಓಕೆ) ಹಾಜರಿದ್ದರು.

ಅಂದಹಾಗೆ, ‘ಕಲ್ಯಾಣಿ’ ಚಿತ್ರಕ್ಕೆ ಲೇಖಕ ಬಸವ ರೆಡ್ಡಿ ಕಥೆ ಬರೆದಿದ್ದು ಬಿ. ಎಂ. ಗಿರಿರಾಜ ಚಿತ್ರಕಥೆ ಬರೆದು ನಿರ್ದೇಶನದ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸುಮಾರು ಮೂರು ದಶಕಗಳಿಂದ ಕಾರ್ಯಕಾರಿ ನಿರ್ಮಾಪಕರಾಗಿ 45ಕ್ಕೂ ಹೆಚ್ಚು ಸಿನಿಮಾಗಳಿಗೆ ಕೆಲಸ ಮಾಡಿದ ಅನುಭವವಿರುವ ಕುಮಾರಸ್ವಾಮಿ ಆರ್. ‘ಆರ್. ಕೆ. ಸಿನೆಮಾಸ್’ ಬ್ಯಾನರಿನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ರಂಗಭೂಮಿ ಪ್ರತಿಭೆ ಯುವ ನಟ ಸಾಮ್ರಾಟ್ ಶೆಟ್ಟಿ ‘ಕಲ್ಯಾಣಿ’ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಉತ್ತರ ಭಾರತದ ನಟಿ ಸಿಮ್ರನ್ ಕೌರ್, ರಾಹುಲ್ ಜೇಟ್ಲಿ, ಶಮಂತ್ ರಾವ್, ಪಿ. ಡಿ. ಸತೀಶ್ ಚಂದ್ರ, ಯಮುನಾ ಶ್ರೀನಿಧಿ, ವಿಜಯ್ ಚೆಂಡೂರು, ಶೈಲೇಂದ್ರ, ರಂಗು ಸಮರ್ಪಣ್ ಸೇರಿದಂತೆ ಅನೇಕ ಕಲಾವಿದರು ‘ಕಲ್ಯಾಣಿ’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

‘ಕಲ್ಯಾಣಿ’ ಚಿತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕ ಬಿ. ಎಂ. ಗಿರಿರಾಜ್, ‘ಇದೊಂದು ನವಿರಾದ ಒಲವಿನ ಕಥೆ ಮುನ್ನಲೆಯಾಗಿಟ್ಟುಕೊಂಡು ಮಾಡಿದ ಸಿನಿಮಾ. ನಂಬಿಕೆ, ಸ್ನೇಹ, ಐಡೆಂಟಿಟಿಯ ವಿಷಯಗಳ ಜೊತೆಗೆ ಸಂಸ್ಕೃತಿಗಳ ಮುಖಾಮುಖಿ ಈ ಸಿನಿಮಾದಲ್ಲಾಗುತ್ತದೆ. ಉತ್ತರ ಭಾರತದ ಹುಡುಗಿ ದಕ್ಷಿಣ ಭಾರತದ ಹುಡುಗನ ಎರಡು ಪಾತ್ರಗಳನ್ನು ಪ್ರಧಾನವಾಗಿ ಇಟ್ಟುಕೊಂಡು ಎರಡು ಸಂಸ್ಕೃತಿಗಳ ಅನಾವರಣವನ್ನು ಈ ಚಿತ್ರದಲ್ಲಿ ಮಾಡುವ ಪ್ರಯತ್ನ ಮಾಡಿದ್ದೇವೆ. ನಾನು ಇಲ್ಲಿಯವರೆಗೆ ಮಾಡಿರುವ ಸಿನಿಮಾಗಳಿಗಿಂತ ಸಂಪೂರ್ಣ ವಿಭಿನ್ನವಾಗಿರುವಂತ ಸಿನಿಮಾ ಇದಾಗಿದೆ’ ಎಂದಿದ್ದಾರೆ.

‘ಕಲ್ಯಾಣಿ’ ಚಿತ್ರದ ಹಾಡುಗಳಿಗೆ ಬಿ. ಜೆ. ಭರತ್ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಪ್ರಶಾಂತ ಸಾಗರ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ ಕಾರ್ಯವಿದೆ. ಭಟ್ಕಳ, ಬೆಂಗಳೂರು ಸುತ್ತಮುತ್ತ ಚಿತ್ರದ ಬಹುತೇಕ ಚಿತ್ರೀಕರಣ ಮಾಡಲಾಗಿದೆ. ಇದೇ ಡಿಸೆಂಬರ್ ವೇಳೆಗೆ ‘ಕಲ್ಯಾಣಿ’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ ಚಿತ್ರತಂಡ.





