ಹೆಮ್ಮಾರಿ ಕೊರೋನಾದ ಈ ಅವಧಿಯಲ್ಲಿ ಜೀವಿಸುವ ವಿಧಾನಗಳು ಬದಲಾಗಿವೆ. ಅದರ ಜೊತೆಗೆ ಹಲವು ಸವಾಲುಗಳನ್ನು ಎದುರಿಸಬೇಕಾದ ಸಂಬಂಧಗಳು ಬಂದಿವೆ. ಈ ಹೊಸ ಬದಲಾವಣೆಗಳು ಹಾಗೂ ಅವುಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ವಿಧಾನಗಳ ಬಗ್ಗೆ ತಿಳಿದುಕೊಳ್ಳಿ…….
ಕೊರೋನಾ ಎಂತಹ ಒಂದು ಅವಧಿಯೆಂದರೆ, ಅದರ ಬಗ್ಗೆ ಯಾರೊಬ್ಬರೂ ಕಲ್ಪನೆ ಕೂಡ ಮಾಡಿಕೊಂಡಿರಲಿಲ್ಲ. ಕೊರೋನಾ ವೈರಸ್ನ ಹಾವಳಿ ಪರಿಸ್ಥಿತಿಯನ್ನು ಹೇಗೆ ಮಾಡಿಬಿಟ್ಟಿದೆಯೆಂದರೆ, ಸಾಮಾಜಿಕ ಜೀವನ ಎಂದು ಕರೆಯಿಸಿಕೊಳ್ಳುವ ಮನುಷ್ಯ ಮನುಷ್ಯನನ್ನು ಅಸ್ಪೃಶ್ಯರಂತೆ ಕಾಣುವ ಹಾಗೆ ಮಾಡಿದೆ. ಇದು ಎಂತಹ ಒಂದು ಸಮಸ್ಯೆಯೆಂದರೆ, ಸಮಸ್ಯೆಗಳು ಹೊಸದಾಗಿದ್ದು, ಅದರ ಪರಿಹಾರ ಕೂಡ ಹೊಸದಾಗಿವೆ. ಕೊರೋನಾ ರೋಗದ ಹಾವಳಿ ಅಷ್ಟು ಬೇಗ ಹೋಗುವಂಥದ್ದು ಅಲ್ಲ. ಹೀಗಾಗಿ ಕೊರೋನಾ ಕಾಲಕ್ಕಾಗಿ ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಕೂಡ ನಮ್ಮೊಂದಿಗೆ ಬಹಳ ದಿನಗಳ ಕಾಲ ಹಾಗೆಯೇ ಉಳಿದುಕೊಳ್ಳಲಿವೆ.
ಬೇರೆ ಬೇರೆ ಕ್ಷೇತ್ರಗಳಲ್ಲಿ ಬರುತ್ತಿರುವ ಬದಲಾವಣೆಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಉಳಿಯಲಿದ್ದು ಅವುಗಳ ಮೇಲೊಮ್ಮೆ ಗಮನ ಹರಿಸೋಣ.
ಡಿಜಿಟಲ್ ಕ್ರಾಂತಿ ಲಾಕ್ಡೌನ್ ಸಮಯದಲ್ಲಿ ವಿಭಿನ್ನ ಕ್ಷೇತ್ರಗಳಲ್ಲಿ ಇಂಟರ್ನೆಟ್ನ ಅವಲಂಬನೆ ಬಹಳ ಹೆಚ್ಚಿನ ಪ್ರಮಾಣದಲ್ಲಿ ಆಯಿತು. ಕಂಪ್ಯೂಟರ್, ಲ್ಯಾಪ್ಟಾಪ್, ಮೊಬೈಲ್ ಫೋನ್ ಇವು ಜೀವನದ ಅವಿಭಾಜ್ಯ ಅಂಗಗಳಾಗಿಬಿಟ್ಟಿವೆ. ಒಂದು ವರದಿಯ ಪ್ರಕಾರ, ಭಾರತದಲ್ಲಿ ಲಾಕ್ಡೌನ್ ಸಮಯದಲ್ಲಿ ಇಂಟರ್ನೆಟ್ ಬಳಕೆಯ ಸಮಯ ಶೇ.13ರಷ್ಟು ಹೆಚ್ಚಳವಾಗಿರುವುದು ಕಂಡುಬಂದಿದೆ.
ಹೊಸ ಧಾರಾವಾಹಿ ಕಂತುಗಳ ಶೂಟಿಂಗ್ ಆಗದೇ ಇದ್ದುದರಿಂದ ಟಿವಿಯಲ್ಲಿ ಅದೇ ಹಿಂದಿನ ಕಂತುಗಳನ್ನು ಮರುಪ್ರಸಾರ ಮಾಡಲಾಯಿತು. ಹೀಗಾಗಿ ಜನರು ಮನರಂಜನೆಗಾಗಿ ಇಂಟರ್ನೆಟ್ನ ಸಹಾಯ ಪಡೆಯುವಂತಾಯಿತು. ಸುಮಾರು 1.5 ಕೋಟಿ ಜನರು ನೆಟ್ಫ್ಲಿಕ್ಸ್ನ ಸಂಪರ್ಕ ಪಡೆದುಕೊಂಡಿರುವುದು ಇಂಟರ್ನೆಟ್ನ ಅವಲಂಬನೆಯನ್ನು ಬಿಂಬಿಸುತ್ತದೆ.
ಶಿಕ್ಷಣ ಕ್ಷೇತ್ರದಲ್ಲಿ ಈಗ ಆನ್ಲೈನ್ ಕ್ಲಾಸ್ಗಳದ್ದೇ ಮಾತು. ಉನ್ನತ ಶಿಕ್ಷಣದಲ್ಲಿ ಡಿಜಿಟಲ್ ಕ್ರಾಂತಿ ಈಗ ದೂರದ ಮಾತಾಗಿ ಉಳಿದಿಲ್ಲ. ಭವಿಷ್ಯದಲ್ಲಿ ಈಗ ವಿಚಾರ ವಿಮರ್ಶೆ ಮಾಡಿ ಶಿಕ್ಷಣದ ಕೆಲವು ಹಂತಗಳಲ್ಲಿ ಆನ್ಲೈನ್ನಲ್ಲಿಯೇ ಪಾಠ ಮಾಡಬಹುದಾಗಿದೆ.
ಈಗ ಬಹಳಷ್ಟು ಕಛೇರಿಗಳ ಹೆಚ್ಚಿನ ಉದ್ಯೋಗಿಗಳು ವರ್ಕ್ ಫ್ರಮ್ ಹೋಮ್’ ಮಾಡುತ್ತಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ವಲಯದ ಕಛೇರಿಗಳ ಮುಖ್ಯಸ್ಥರು ತಮ್ಮ ಉದ್ಯೋಗಿಗಳ ಜೊತೆ ಆನ್ಲೈನ್ನಲ್ಲಿಯೇ ಮೀಟಿಂಗ್ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡ ತನ್ನ ವಿಭಿನ್ನ ಇಲಾಖೆಗಳ ಮೇಲೆ ಆನ್ಲೈನ್ ಕಣ್ಗಾವಲು ಇಟ್ಟಿದೆ. ವಿಡಿಯೋ ಕಾನ್ಫ್ರೆನ್ಸಿಂಗ್ನ ಈ ವ್ಯವಸ್ಥೆಯನ್ನು ಮುಂಬರುವ ವರ್ಷಗಳಲ್ಲಿ ಒಂದು ಹಂತದ ತನಕ ಬಳಸಲಾಗುತ್ತದೆ.
ಸರ್ಕಾರಿ ಅಧಿಕಾರಿ ದೀಪಕ್ ಹೇಳುವುದೇನೆಂದರೆ, ಮುಂಬರುವ ದಿನಗಳಲ್ಲಿ ಮೀಟಿಂಗ್ಗಳು ಆನ್ಲೈನ್ ಆಗಬಹುದು. ಹಾಗಾಗಿ ಸಮಯ ಹಾಗೂ ಹಣ ಉಳಿತಾಯ ಆಗಬಹುದು.
ತಂತ್ರಜ್ಞಾನದ ಹೊಸ ಪ್ರೋಗ್ರಾಂಗಳಿಂದ ಸಿನಿಮಾರಂಗ ಕೂಡ ಹಿಂದಿಲ್ಲ. ತಜ್ಞರ ಪ್ರಕಾರ, ಲಾಕ್ಡೌನ್ ಬಳಿಕ ಸಿನಿಮಾ ಹಾಗೂ ಟಿವಿ ಧಾರಾವಾಹಿಗಳ ಶೂಟಿಂಗ್ ಶುರುವಾಗಿದ್ದು, ಸಾಮಾಜಿಕ ಅಂತರದ ಬಗ್ಗೆ ಹೆಚ್ಚಿನ ಗಮನ ಕೊಡಲಾಗುತ್ತಿದೆ.
ಮಾಸ್ಕ್ ಬಳಕೆ
ಕೊರೋನಾ ವೈರಸ್ನಿಂದ ರಕ್ಷಣೆಗಾಗಿ ಮಾಸ್ಕ್ ಧರಿಸುವುದು ಈಗ ಅನಿವಾರ್ಯವಾಗಿದೆ. ಅದೀಗ ಬಹಳ ದಿನಗಳ ಕಾಲ ನಮ್ಮ ಸಂಗಾತಿಯಾಗಿರಲಿದೆ. ಕೆಟ್ಟ ಸಮಯದಲ್ಲೂ ಒಂದು ಸದವಕಾಶ ಎನ್ನುವ ರೀತಿಯಲ್ಲಿ ವಿಭಿನ್ನ ಪ್ರಕಾರದ ಮಾಸ್ಕ್ ಗಳು ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಪೇಂಟಿಂಗ್ ಮಾಸ್ಕ್ ಗಳು, ಪ್ರಿಂಟೆಡ್ ಮಾಸ್ಕ್ ಗಳು, ಸಂದೇಶ ಇರುವ ಮಾಸ್ಕ್ ಗಳು, ತುಟಿಯ ಚಲನೆ ಗುರುತಿಸುವ ಪಾರದರ್ಶಕ ಮಾಸ್ಕ್ ಗಳು, ಹತ್ತಿ ಬಟ್ಟೆಯ ಮೂರು ಪದರಿನ ಮಾಸ್ಕ್ ಗಳು ಈಗ ಲಭ್ಯವಿವೆ.
ಮಾಸ್ಕ್ ಧರಿಸುವುದರಿಂದ ವ್ಯಕ್ತಿಯೊಬ್ಬರ ಅರ್ಧ ಮುಖವಷ್ಟೇ ಕಂಡುಬರುತ್ತದೆ. ಅದರ ಪರಿಣಾಮ ಎಂಬಂತೆ ಆ ಮುಖವನ್ನು ಗುರುತಿಸುವುದು ಕಷ್ಟವಾಗುತ್ತದೆ. ಈ ಸಂಗತಿಯನ್ನು ಗಮನದಲ್ಲಿ ಇಟ್ಟುಕೊಂಡು ಕೇರಳದ ಕೊಟ್ಟಾಯಂ ಹಾಗೂ ಕೊಚ್ಚಿಯ ಕೆಲ ಡಿಜಿಟಲ್ ಸ್ಟುಡಿಯೋಗಳಲ್ಲಿ, ಮಾಸ್ಕ್ ನ ಹಿಂದೆ ಮುಚ್ಚಲ್ಪಟ್ಟ ಭಾಗವನ್ನು ಮಾಸ್ಕ್ ಮೇಲೆ ಪ್ರಿಂಟ್ ಮಾಡುವ ಕಾರ್ಯ ಶುರುವಾಗಿದೆ. ಮಾಸ್ಕ್ ಧರಿಸಿದರೂ ವ್ಯಕ್ತಿಯೊಬ್ಬನ ಮುಖವನ್ನು ಸುಲಭವಾಗಿ ಗುರುತಿಸಬಹುದು. ಈ ತಂತ್ರಜ್ಞಾನ ಈಗ ಬೇರೆ ಬೇರೆ ನಗರಗಳಿಗೂ ವ್ಯಾಪಿಸುತ್ತಿದೆ.
ಮಾಸ್ಕ್ ಕೂಡ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಎನ್ನುವುದು ಈಗ ಖಚಿತವಾಗುತ್ತಿದೆ. ಮಾಸ್ಕ್ ಧರಿಸುವುದು ಎಷ್ಟು ಅನಿವಾರ್ಯವಾಗಲಿದೆ ಎಂದರೆ, ಬೀಚ್ವೇರ್ ತಯಾರಿಸುವ ಇಟಲಿಯ ಡಿಸೈನರ್ ಒಬ್ಬರು ಬಿಕಿನಿಯ ಜೊತೆಗೆ ಮ್ಯಾಚಿಂಗ್ ಮಾಸ್ಕ್ ತಯಾರಿಸಿ ಮಾಡೆಲ್ ಒಬ್ಬರು ಧರಿಸಿರುವುದನ್ನು ತೋರಿಸಿದ್ದಾರೆ. ಅದಕ್ಕೆ `ಟ್ರೈಕಿನಿ’ ಎಂದು ಹೆಸರು ಕೊಟ್ಟಿದ್ದಾರೆ.
ಸ್ವಚ್ಛತೆಯ ಸಂಬಂಧ
ಕೊರೋನಾದ ಇಂದಿನ ವಿಷ ಗಳಿಗೆಯಲ್ಲಿ ಎಲ್ಲರೂ ಸ್ವಚ್ಛತೆಯ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ. ಮೇಲಿಂದ ಮೇಲೆ ಕೈ ಸ್ವಚ್ಛಗೊಳಿಸಿಕೊಳ್ಳುವುದು ಹಣ್ಣುತರಕಾರಿಗಳನ್ನು ಉಪ್ಪು ಬೆರೆಸಿದ ನೀರಿನಿಂದ ತೊಳೆಯುವುದು, ಮನೆಯ ಆಸುಪಾಸು ಸ್ಯಾನಿಟೈಸ್ ಮಾಡುವುದನ್ನು ಕಲಿತುಕೊಂಡಿದ್ದಾರೆ. ಸ್ವಚ್ಛತೆಯ ಈ ಅಭ್ಯಾಸ ಮುಂಬರುವ ದಿನಗಳಲ್ಲಿ ದೈನಂದಿನ ಅಭ್ಯಾಸಗಳಲ್ಲಿ ಒಂದಾಗಲಿದೆ.
ಅಲ್ಲಲ್ಲಿ ಉಗುಳುವ ಅಭ್ಯಾಸ ಹೊಂದಿರುವವರು ಈಗ ಅದನ್ನು ಬಿಡುತ್ತಿದ್ದಾರೆ. ಬೇರೆಯವರು ಹಾಗೆ ಮಾಡುತ್ತಿದ್ದರೆ, ಅವರು ಅದನ್ನು ತಡೆಯಲು ಪ್ರಯತ್ನಿಸುತ್ತಾರೆ.
ಬ್ಯಾಂಡು ಬಾಜಾ ಇಲ್ಲದ ವಿವಾಹ
ಲಾಕ್ಡೌನ್ ಅವಧಿಯಲ್ಲಿ ಬಹಳಷ್ಟು ಮದುವೆಗಳು ರದ್ದಾಗಿವೆ. ಕಲ್ಯಾಣ ಮಂಟಪಗಳು ತೆಗೆದುಕೊಂಡಿದ್ದ ಹಣನ್ನು ವಾಪಸ್ ಮಾಡಿವೆ. ಕೆಲವು ಜೋಡಿಗಳಂತೂ ರಿಜಿಸ್ಟರ್ಡ್ ಮದುವೆಯಾಗಿ ಹೊಸ ಪರಂಪರೆಗೆ ನಾಂದಿ ಹಾಡಿವೆ. ಇನ್ನು ಕೆಲವು ಜೋಡಿಗಳು ತಮ್ಮ ಮನೆಯೆದುರು ಕೆಲವೇ ಜನರ ಸಮ್ಮುಖದಲ್ಲಿ ಸುರಕ್ಷತೆಯೊಂದಿಗೆ ಮದುವೆಯಾದವು.
ಕೊರೋನಾ ಲಾಕ್ಡೌನ್ 3.0ರಲ್ಲಿ ಗೃಹ ಸಚಿವಾಲಯ ಜಾರಿಗೊಳಿಸಿದ ಮಾರ್ಗಸೂಚಿಗಳ ಪ್ರಕಾರ ಒಂದು ಮದುವೆಯಲ್ಲಿ ಕೇವಲ 50 ಜನರು ಮಾತ್ರ ಪಾಲ್ಗೊಳ್ಳಬಹುದು ಎಂದು ತಿಳಿಸಲಾಯಿತು. ಕೆಲವು ರಾಜ್ಯಗಳು ಈ ಸಂಖ್ಯೆಯನ್ನು ಇನ್ನಷ್ಟು ಕಡಿಮೆಗೊಳಿಸಿದವು. ಸಾಮಾಜಿಕ ಅಂತರದ ದೃಷ್ಟಿಯಿಂದ ಇದು ಒಳ್ಳೆಯದೇ. ಕೊರೋನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವವರೆಗೆ ಈ ರೀತಿಯ ನಿರ್ಬಂಧಗಳು ಮುಂದುವರಿಯಬಹುದು. ಇದರಿಂದ ಆಗುವ ಮತ್ತೊಂದು ಲಾಭವೆಂದರೆ ವ್ಯರ್ಥ ಖರ್ಚುಗಳಿಗೆ ಕಡಿವಾಣ ಹಾಕಬಹುದು. ಆರ್ಥಿಕ ಸಂಕಷ್ಟದಲ್ಲಿ ಇದು ಒಳ್ಳೆಯ ನಿರ್ಧಾರ ಅನಿಸಲಿದೆ.
ಮದುವೆಯಷ್ಟೇ ಅಲ್ಲ, ನಾಮಕರಣ, ಸೀಮಂತದಂತಹ ಕಾರ್ಯಕ್ರಮಗಳು ಈಗ ಸರಳವಾಗುತ್ತಿರುವುದು ಒಳ್ಳೆಯ ಬೆಳವಣಿಗೆಯೇ ಹೌದು.
ನೀವಿದ್ದರೆ ನಾವು……
ಕೊರೋನಾ ವಿರುದ್ಧದ ಹೋರಾಟದಲ್ಲಿ ವೈದ್ಯರು, ಇತರೆ ಆರೋಗ್ಯ ಸಿಬ್ಬಂದಿಗಳು, ಪೊಲೀಸರು ಹಾಗೂ ಪೌರ ಕಾರ್ಮಿಕರು ಮಹತ್ವದ ಪಾತ್ರ ನಿಭಾಯಿಸುತ್ತಿದ್ದಾರೆ. ಸಮಾಜಕ್ಕೆ ಅವರ ಮಹತ್ವದ ಅರಿವು ಆಗುತ್ತಿದೆ. ಅವರನ್ನು ಗೌರವಿಸುವ ಸುದ್ದಿಗಳು ಬರುತ್ತಿವೆ. ಈವರೆಗೆ ಸಮಾಜದಿಂದ ದೂರವೇ ಇರುತ್ತಿದ್ದ ಅವರ ಮಹತ್ವ ಈಗ ನಾಗರಿಕರಿಗೆ ಗೊತ್ತಾಗಿದೆ. ಅವರ ಅನುಪಸ್ಥಿತಿ ತೊಂದರೆಗೆ ಕಾರಣವಾಗುತ್ತದೆ ಎನ್ನುವುದು ಕೂಡ ತಿಳಿಯುತ್ತಿದೆ.
ಜೀವನದಲ್ಲಿ ಕುಟುಂಬದ ಮಹತ್ವ ಎಷ್ಟೆಂಬುದು ಲಾಕ್ಡೌನ್ ಸಮಯದಲ್ಲಿ ಅರಿವಿಗೆ ಬಂತು. ಬೆಂಗಳೂರಿನ ಲತಾ ಆಫೀಸ್ ಒಂದರಲ್ಲಿ ಕೆಲಸ ಮಾಡುತ್ತಾರೆ. ಅವರು ಹೇಳುತ್ತಾರೆ, “ದೈನಂದಿನ ಧಾವಂತದಲ್ಲಿ ನನಗೆ ಮಕ್ಕಳ ಜೊತೆ ಕಾಲ ಕಳೆಯಲು ಅವಕಾಶವೇ ಸಿಗುತ್ತಿರಲಿಲ್ಲ. ಅವರ ಜೊತೆ ನೆಮ್ಮದಿಯಿಂದ ಊಟ ಮಾಡುತ್ತಿರಲಿಲ್ಲ. ಆದರೆ ಲಾಕ್ಡೌನ್ ಸಮಯದಲ್ಲಿ ನಾನು ಕುಟುಂಬದವರೆಲ್ಲ ಜೊತೆ ಜೊತೆಗೆ ಕಾಲ ಕಳೆಯಲು ಅವಕಾಶ ದೊರೆಯಿತು. ಅದರ ಖುಷಿ ಈಗ ನನಗೆ ಅರಿವಾಯಿತು. ಅದರಿಂದ ಪರಸ್ಪರ ಹೊಂದಾಣಿಕೆಯ ಮಹತ್ವ ತಿಳಿಯಿತು. ಕುಟುಂಬ ಸದಸ್ಯರ ನಡುವಿನ ಅನುಬಂಧ ಹೆಚ್ಚಾಗುತ್ತ ಹೋಗಬೇಕು, ಇದು ಸಮಯದ ಬೇಡಿಕೆಯಾಗಿದೆ.
ಎಲ್ಲಾ ಸ್ಥಿತಿಯಲ್ಲೂ ಖುಷಿ
ಲಾಕ್ಡೌನ್ನಲ್ಲಿ ಸಾಮಾಜಿಕ ಅಂತರದ ಪಾಲನೆ ಮಾಡುತ್ತಾ ಜೀವನನ್ನು ಸುಖಮಯವಾಗಿಸುವ ಪ್ರಯತ್ನಗಳು ಸಾಕಷ್ಟು ಮಟ್ಟಿಗೆ ಆದವು. ಮೊದಲ ಲಾಕ್ಡೌನ್ನಲ್ಲಿ ತಮ್ಮನ್ನು ತಾವು ಚಿಂತಾಮುಕ್ತರಾಗಿಸಿ ಮನಸ್ಸನ್ನು ಖುಷಿಯಿಂದಿಡಲು ಹಲವು ತೆರನಾದ ಪ್ರಯತ್ನಗಳು ನಡೆದವು. ಕೆಲವು ಮನೆಗಳಲ್ಲಿ ಹಲವು ಬಗೆಯ ರೆಸಿಪಿಗಳು ತಯಾರಾಗಿ ಸದಸ್ಯರನ್ನು ಖುಷಿಯಿಂದಿಡುವ ಪ್ರಯತ್ನಗಳು ನಡೆದವು. ಮನೆಯ ಸದಸ್ಯರು ಹಳೆಯ ಹವ್ಯಾಸಗಳಿಗೆ ಗಮನಕೊಟ್ಟರು. ಮತ್ತೆ ಕೆಲವು ಸದಸ್ಯರು ಹೊಸ ಹವ್ಯಾಸಗಳಿಗೆ ಮೊರೆ ಹೋದರು.
ಮೈಸೂರು ನಿವಾಸಿ ಸುಹಾಸ್ ಎಂದೂ ಅಡುಗೆ ಮನೆಗೆ ಕಾಲಿಡುತ್ತಿರಲಿಲ್ಲ. ಆದರೆ ಲಾಕ್ಡೌನ್ ಸಂದರ್ಭದಲ್ಲಿ ಅವನು ತನ್ನ ಹೆಂಡತಿಯಿಂದ ಅನೇಕ ಬಗೆಯ ಅಡುಗೆ ಮಾಡುವುದನ್ನು ಕಲಿತ.
ಧಾರವಾಡದಲ್ಲಿರುವ ನಂದಿತಾ ಮದುವೆಗೂ ಮುಂಚೆ ಬ್ಯೂಟಿಷಿಯನ್ ಕೋರ್ಸ್ ಮಾಡಿದ್ದಳು. ತನ್ನ ಆ ಹವ್ಯಾಸ ಉಪಯೋಗಕ್ಕೆ ಬಾರದ ಬಗ್ಗೆ ಆಕೆಗೆ ನಿರಾಶೆ ಆಗುತ್ತಿತ್ತು. ಆದರೆ ಲಾಕ್ಡೌನ್ ಸಮಯದಲ್ಲಿ ಸೆಲೂನ್ಗಳು ತೆರೆಯದ್ದರಿಂದ ಆಕೆ ಪತಿ ಹಾಗೂ ತನ್ನ ಮಗನ ಕೂದಲನ್ನು ಕಟ್ ಮಾಡಿದಾಗ ಕಲಿತ ವಿದ್ಯೆ ಯಾವತ್ತೂ ವ್ಯರ್ಥ ಅಲ್ಲ ಎನ್ನುವುದು ಕೂಡ ಅವಳ ಅರಿವಿಗೆ ಬಂತು.
ಯುವ ಜನಾಂಗ ಲಾಕ್ಡೌನ್ ಸಂದರ್ಭದಲ್ಲಿ ಜಂಕ್ಫುಡ್ಗಳಿಂದ ದೂರ ಇದ್ದು ಸಂಗೀತ ಆಲಿಸುತ್ತಾ, ವೆಬ್ ಸೀರೀಸ್ ನೋಡುತ್ತಾ ಸಮಯ ಕಳೆದರು.
ಕೋವಿಡ್-19 ಬಹುಬೇಗ ನಮ್ಮನ್ನು ಬಿಟ್ಟು ಹೋಗುವುದಿಲ್ಲ ಎನ್ನುವುದು ಸತ್ಯ. ಸಿನಿಮಾ, ಪಾರ್ಟಿ, ರೆಸ್ಟೋರೆಂಟ್, ರಜೆದಿನಗಳಂದು ಜನನಿಬಿಡ ಪ್ರದೇಶಗಳಲ್ಲಿ ಸುತ್ತಾಡಬೇಕೆನ್ನುವುದು ಇನ್ನೂ ದೂರದ ಕನಸು. ಇಂತಹ ಸ್ಥಿತಿಯಲ್ಲಿ ಮನೆಯಲ್ಲಿದ್ದುಕೊಂಡೇ ನಮ್ಮ ಖುಷಿಯ ಮನಸ್ಥಿತಿಯನ್ನು ಕಾಯ್ದುಕೊಂಡು ಹೋಗಬೇಕಿದೆ. ಕೊರೋನಾ ಜೊತೆ ಜೊತೆಗೆ ಖಿನ್ನತೆ ನಿರಾಶೆಯಿಂದ ದೂರ ಇರುವುದರ ಮೂಲಕ ಜೀವನ ಸಾಗಿಸಬೇಕಾದ ಅನಿವಾರ್ಯತೆ ಇದೆ.
ಕೊರೋನಾ ಅವಧಿಯು ಎಲ್ಲರಿಗೂ ಜೀವಿಸುವ ವಿಭಿನ್ನ ದಾರಿಯನ್ನು ತೋರಿಸಿಕೊಟ್ಟಿದೆ. ದಾರಿ ಹೊಸದಾದರೂ ಅದರ ಸಾಲುಗಳು ಕೂಡ ವಿಭಿನ್ನವಾಗಿವೆ. ವೈಯಕ್ತಿಕ, ಸಾಮಾಜಿಕ ಹಾಗೂ ಆರ್ಥಿಕ ಜೀವನದಲ್ಲಿ ಸಮಸ್ಯೆಗಳೊಂದಿಗೆ ಹೋರಾಡುತ್ತ ಭವಿಷ್ಯವನ್ನು ಮತ್ತಷ್ಟು ಉತ್ತಮಗೊಳಿಸಿಕೊಳ್ಳುವ ಪ್ರಯತ್ನಗಳು ಸಾಗಿವೆ. ಅದಕ್ಕಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳಲಾಗುತ್ತಿದೆ. ಅದಕ್ಕಾಗಿ ನಮ್ಮನ್ನು ನಾವು ಸನ್ನದ್ಧುಗೊಳಿಸಿಕೊಳ್ಳುವ ಅವಶ್ಯಕತೆ ಇದೆ.
– ಮಧು ಅನಂತ್