– ಭಾವನಾ ಬ್ರಿಜೇಶ್
ಕುಟುಂಬದ ಆರ್ಥಿಕ ವ್ಯವಸ್ಥೆ ನಮ್ಮ ಬದುಕಿನ ಅನಿವಾರ್ಯ ಭಾಗವಾಗಿದೆ. ಹಣ ಸಂಪಾದಿಸುವುದೇ ಮುಖ್ಯವಲ್ಲ. ನೀವು ಸಂಪಾದಿಸಿದ ಹಣವನ್ನು ಹೇಗೆ ವ್ಯವಸ್ಥಿತಗೊಳಿಸುವುದೆಂದು ತಿಳಿಯುವುದು ಮುಖ್ಯ. ಅದರಲ್ಲಿ ಹಲವಾರು ಮಾರ್ಗಗಳಿವೆ. ಅವುಗಳಲ್ಲಿ ಪ್ರವಾಸ, ಮದುವೆ ಮತ್ತು ಅಂತಹ ಅನೇಕ ವಿಶೇಷ ಉದ್ದೇಶಗಳಿಗಾಗಿ ಉಳಿತಾಯ ಮಾಡುವುದು, ಭವಿಷ್ಯಕ್ಕಾಗಿ ಹೂಡಿಕೆ, ತಮ್ಮ ಸಂಪನ್ಮೂಲಗಳಲ್ಲೇ ಜೀವನ ನಿರ್ವಹಣೆ, ಸಾಲ ತೀರಿಸುವಿಕೆ ಇತ್ಯಾದಿ ಸೇರಿವೆ. ಉದ್ದೇಶ ಯಾವುದೇ ಇರಲಿ, ಎಲ್ಲರಿಗೂ ಉಪಯುಕ್ತ ಯೋಜನೆ ಮಾಡಲು ಹಾಗೂ ಅದನ್ನು ಜಾರಿಗೊಳಿಸುವುದು ಅಗತ್ಯವಾಗಿದೆ.
ಮನೆಯ ಎಲ್ಲ ಸದಸ್ಯರೂ ಸಂಪಾದಿಸುತ್ತಿದ್ದಾಗ, ಪರಿಣಾಮಕಾರಿ ವಿಧಾನಗಳಿಂದ ಹಣದ ವ್ಯವಸ್ಥೆ ಮಾಡುವುದು ಕಠಿಣವಾಗುತ್ತದೆ. ಸಂಪಾದಿಸುವ ಪ್ರತಿಯೊಬ್ಬರಿಗೂ ತಮ್ಮ ತಮ್ಮ ಅಗತ್ಯಗಳು, ಇಷ್ಟಾನಿಷ್ಟಗಳು ಇರುತ್ತವೆ. ಅವರಿಗೆ ತಾವು ಸಂಪಾದಿಸುವ ಹಣವನ್ನು ಹೇಗೆ ಉಪಯೋಗಿಸಬೇಕೆಂದು ಹೇಳಲು ಸಂಪೂರ್ಣ ಅಧಿಕಾರವಿರುತ್ತದೆ. ಜೊತೆಗೆ ಕುಟುಂಬದ ಭಾರ ಹೊರಲು ಎಲ್ಲರೂ ಭಾಗಿಯಾಗುವ ಅಗತ್ಯವಿದೆ. ಅಂತಹ ಪರಿಸ್ಥಿತಿಯಲ್ಲಿ ಕುಟುಂಬದ ಖರ್ಚುಗಳನ್ನು ಉತ್ತಮ ರೀತಿಯಲ್ಲಿ ವ್ಯವಸ್ಥೆ ಮಾಡಲು ಹೆಚ್ಚು ಎಚ್ಚರಿಕೆ ವಹಿಸಬೇಕು. ಹಾಗೆ ಒಳ್ಳೆಯ ರೀತಿಯಲ್ಲಿ ಕುಟುಂಬದ ಆರ್ಥಿಕ ನಿರ್ವಹಣೆ ಮಾಡಲು ಈ ವಿಷಯಗಳ ಬಗ್ಗೆ ಗಮನಿಸಿಬೇಕು.
ಇಡೀ ಕುಟುಂಬದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಪಾಲುದಾರಿಕೆ ತಿಳಿದುಕೊಳ್ಳಿ : ಎಲ್ಲಕ್ಕೂ ಮೊದಲು ಪ್ರತಿ ಸದಸ್ಯರೂ ಮನೆಯ ಆರ್ಥಿಕ ಪರಿಸ್ಥಿತಿಯ ಪಾಲುದಾರಿಕೆ ಅರ್ಥ ಮಾಡಿಕೊಳ್ಳಬೇಕು. ಅದರಲ್ಲಿ ಹೋಮ್ ಲೋನ್ ಕಟ್ಟುವಿಕೆ, ಮಕ್ಕಳ ಶಿಕ್ಷಣದ ಖರ್ಚು, ಫೋನ್ ಬಿಲ್ ಇತರ ಖರ್ಚುಗಳು ಮತ್ತು ಮನೆಯ ಖರ್ಚು ಸೇರಿವೆ. ಕುಟುಂಬದ ಒಟ್ಟು ಆದಾಯದೊಂದಿಗೆ ಕುಟುಂಬದ ಒಟ್ಟು ಮಾಸಿಕ ಖರ್ಚು ಹೊಂದುವಂತಿರಬೇಕು.
ಕುಟುಂಬದ ಆರ್ಥಿಕ ನಿರ್ವಹಣೆಯ ಹೊಣೆಗಾರಿಕೆಯನ್ನು ಯಾರಾದರೂ ಒಬ್ಬ ವ್ಯಕ್ತಿಗೆ ಒಪ್ಪಿಸುವುದು : ಸಾಧಾರಣವಾಗಿ ಇದು ಹೆಚ್ಚು ಸಂಪಾದನೆ ಮಾಡುವವರಿಗೆ ಸಿಗುತ್ತದೆ. ಒಬ್ಬರಿಗೆ ಆರ್ಥಿಕ ನಿರ್ವಹಣೆಯ ಜವಾಬ್ದಾರಿ ಒಪ್ಪಿಸಿದರೆ ಆರ್ಥಿಕ ಯೋಜನೆಯನ್ನು ಸೊಗಸಾಗಿ ಜಾರಿಗೆ ತರಬಹುದು.
ದೊಡ್ಡ ಖರ್ಚುಗಳಿಗೆ ಬೇರೆ ಕೋಶ : ಇದರ ನಂತರದ ಪ್ರಕ್ರಿಯೆಗಾಗಿ ಕುಟುಂಬದಲ್ಲಿ ಸಾಲದ ಕಂತು, ಶಿಕ್ಷಣದ ವೆಚ್ಚ, ವಿಮೆಯ ವೆಚ್ಚ ಇತ್ಯಾದಿ ದೊಡ್ಡ ಖರ್ಚುಗಳಿಗೆ ಬೇರೊಂದು ಕೋಶದ ವ್ಯವಸ್ಥೆ ಮಾಡುವುದು ಅಗತ್ಯ. ಸಂಪಾದನೆ ಮಾಡುವ ಸದಸ್ಯರಿಗಾಗಿ ಮನೆಯಲ್ಲಿನ ಈ ಖರ್ಚುಗಳನ್ನು ಸಮಾನವಾಗಿ ಹಂಚಿಕೊಳ್ಳುವುದು ಒಂದು ಆರೋಗ್ಯಕರ ಪ್ರಕ್ರಿಯೆ. ಇದರಿಂದ ಕುಟುಂಬದಲ್ಲಿ ಪರಸ್ಪರ ಹೊಂದಾಣಿಕೆ ಸದೃಢವಾಗುತ್ತದೆ ಹಾಗೂ ಒಟ್ಟು ಕುಟುಂಬದಲ್ಲಿನ ಖರ್ಚುಗಳ ಬಗ್ಗೆ ಪ್ರತಿ ಸದಸ್ಯರಿಗೂ ಜವಾಬ್ದಾರಿಯ ಭಾವನೆಯೂ ಉಂಟಾಗುತ್ತದೆ.
ಖರ್ಚಿಗೆ ಮುಂಚೆ ಉಳಿತಾಯದ ಕಡೆ ಗಮನ : ಮುಂದಿನ ಹೆಜ್ಜೆ ಸಂಪಾದನೆ ಮಾಡುವ ಮತ್ತು ಸಂಪಾದನೆ ಮಾಡದಿರುವ ಪ್ರತಿ ಸದಸ್ಯರ ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುವುದು. ಅಗತ್ಯಗಳನ್ನು ಅರ್ಥ ಮಾಡಿಕೊಳ್ಳುವುದೆಂದರೆ ಅವರ ವೈಯಕ್ತಿಕ ಖರ್ಚಿಗಾಗಿ ಏನು ಅಗತ್ಯವಿದೆ? ಯಾವ ಕಾರಣಕ್ಕಾಗಿ ಅವರು ತಮಗೆ ಬೇರೆ ಹಣ ಬಯಸುತ್ತಾರೆ ಎಂದು ತಿಳಿದುಕೊಳ್ಳಬೇಕು. ಈ ಅಗತ್ಯಗಳನ್ನು ತಿಳಿದುಕೊಂಡು ಕುಟುಂಬದ ಎಲ್ಲ ಸದಸ್ಯರಿಗೂ ಹಣ ಖರ್ಚು ಮಾಡುವುದಕ್ಕೆ ಮೊದಲು ಉಳಿತಾಯದ ಮಹತ್ವವನ್ನು ತಿಳಿಸಬೇಕು. ಸಂಪಾದನೆಯ ಕೊಂಚ ಭಾಗವನ್ನು ಉಳಿತಾಯಕ್ಕಾಗಿ ಪ್ರತ್ಯೇಕವಾಗಿ ಇಡಬೇಕೆಂದು ಹೇಳಬೇಕು. ಆಗ ಅವರು ತಮ್ಮ ವೈಯಕ್ತಿಕ ಅಗತ್ಯಗಳಿಗೆ ಖರ್ಚು ಮಾಡಬಹುದು. ಆದ್ದರಿಂದ ಮೊದಲು ಉಳಿತಾಯದ ಕಡೆ ಗಮನ ಕೊಡಿ. ಇಡೀ ಸಂಪಾದನೆಯನ್ನು ಉಡಾಯಿಸಬೇಡಿ.
ಖರ್ಚಿನ ಸಾಮಾನ್ಯ ನಿಯಮಗಳನ್ನು ಪಾಲಿಸಿ : ಖರ್ಚಿನ ವಿಷಯ ಬಂದಾಗ ಕೊಂಚ ಪಾಲುದಾರಿಕೆ ಅರ್ಥ ಮಾಡಿಕೊಂಡು ಹಣ ಹೇಗೆ ಖರ್ಚು ಮಾಡಬೇಕೆಂಬುದರ ಬಗ್ಗೆ ಸಹಮತ ವ್ಯಕ್ತಪಡಿಸಬೇಕು. ಕ್ಷಣಿಕ ಸುಖಕ್ಕಾಗಿ ಪರಿಶ್ರಮದ ಸಂಪಾದನೆಯನ್ನು ಉಡಾಯಿಸಬಾರದೆಂದು ತಿಳಿಯಬೇಕು. ಉದಾಹರಣೆಗೆ ಹೊಸ ಬ್ರ್ಯಾಂಡ್‌ನ ಉಡುಪುಗಳಿಗೆ, ಶೆಲ್ಪ್ ಅಲಂಕರಿಸಲು ಹೊಸ ಪುಸ್ತಕಗಳ ಖರೀದಿ ಇತ್ಯಾದಿ. ಯಾವುದೋ ಹುರುಪಿನಲ್ಲಿ ಖರ್ಚು ಮಾಡಲು ನಿರ್ಧಾರ ತಳೆಯುವ ಮುಂಚೆ ಖರ್ಚಿನ ಮಹತ್ವ ಮತ್ತು ಅಗತ್ಯದ ಬಗ್ಗೆ ಯೋಚಿಸಬೇಕು. ಇದರ ಬಗ್ಗೆ ಕುಟುಂಬದ ಎಲ್ಲ ಸದಸ್ಯರಿಗೂ ಶಿಕ್ಷಣ ಕೊಡುವ ಜವಾಬ್ದಾರಿ ಕುಟುಂಬದ ಮುಖ್ಯಸ್ಥರದು.
ಇವೆಲ್ಲ ಹೆಜ್ಜೆಗಳು ಕುಟುಂಬದ ಖರ್ಚನ್ನು ನಿಯಂತ್ರಿಸುವಲ್ಲಿ ಖಂಡಿತಾ ಹೆಚ್ಚು ಸಹಾಯ ಮಾಡುತ್ತದೆ.