– ಕೆ. ಮಾಳವಿಕಾ

ಕೀರ್ತನಾಳ ಮದುವೆಯ ದಿನ ಹತ್ತಿರಕ್ಕೆ ಬರುತ್ತಿದ್ದಂತೆ ಅವಳ ಚಿಂತೆಯೂ ಹೆಚ್ಚಾಗುತ್ತಿತ್ತು. ಹಿಂದೆ ಅನುಭವಿಸಿದ ಸುಂದರ ಕ್ಷಣಗಳು ಪದೇಪದೇ ಅವಳನ್ನು ಚುಚ್ಚುತ್ತಿದ್ದವು. ಮದುವೆ ದಿನದವರೆಗೆ ಅವಳು ಆ ಕ್ಷಣಗಳಿಂದ ಬಿಡುಗಡೆ ಪಡೆಯಲು ಬಯಸುತ್ತಿದ್ದಳು. ಶರತ್‌ನ ನೆನಪುಗಳು ಮರೆತುಹೋಗುವ ಬದಲು ದಿನದಿನಕ್ಕೂ ಇನ್ನಷ್ಟು ಗಾಢವಾಗುತ್ತಿತ್ತು. ಕಳೆದುಹೋದ ಕ್ಷಣಗಳು ಅವಳ ಹೃದಯವನ್ನು ಮುಳ್ಳಿನಂತೆ ಚುಚ್ಚುತ್ತಿದ್ದವು.

ಕೀರ್ತನಾಳ ತಂದೆತಾಯಿ ಕೂಡ ಅವಳ ಮನಸ್ಸಿನ ನೋವನ್ನು ಅರ್ಥ ಮಾಡಿಕೊಂಡಿದ್ದರು. ಆದರೆ ಅವರೆದುರು ಕೀರ್ತನಾಳ ಇನ್ನೊಂದು ಮದುವೆ ಹೊರತಾಗಿ ಬೇರೆ ದಾರಿ ಇರಲಿಲ್ಲ. ಅವಳ ವಯಸ್ಸು ಇನ್ನೂ 23 ವರ್ಷವಾಗಿತ್ತು. ಅವಳಿನ್ನೂ ಬದುಕಿನಲ್ಲಿ ಬಹಳ ದೂರ ಸಾಗಬೇಕಿತ್ತು. ಅವಳ ತಂದೆತಾಯಿ ತಾವು ಬದುಕಿರುವಾಗಲೇ ಅವಳ ಏಕಾಂಗಿತನ ದೂರ ಮಾಡಲು ಇಚ್ಛಿಸಿದ್ದರು. ಅವರು ಕೀರ್ತನಾಳಂತೆಯೇ ತನ್ನ ಸಂಗಾತಿಯನ್ನು ಕಳೆದುಕೊಂಡು ವಿರಹ ಅನುಭವಿಸುತ್ತಿದ್ದ ಒಬ್ಬ ವಿಧುರನೊಡನೆ ಅವಳ ಮದುವೆ ನಿಶ್ಚಯಿಸಿದರು.

ಮದುವೆ ಯಶಸ್ವಿಯಾಗಲಿಲ್ಲ

ಹಲವು ಸಂದರ್ಭಗಳಲ್ಲಿ ಮಹಿಳೆ ಇನ್ನೊಂದು ಮದುವೆಯಾಗಿಯೂ ತನ್ನ ಮೊದಲ ಗಂಡನೊಂದಿಗೆ ಸಂಬಂಧವನ್ನು ಸಂಪೂರ್ಣವಾಗಿ ತೊಡೆದುಹಾಕುವುದಿಲ್ಲ. ಎರಡನೆ ಬಾರಿ ವಿಚ್ಛೇದನಕ್ಕೆ ಬಲಿಯಾದ 32 ವರ್ಷದ ರಾಧಿಕಾ ಹೀಗೆ ಹೇಳುತ್ತಾರೆ, “ಇನ್ನೊಂದು ಮದುವೆ ನನ್ನ ಪಾಲಿಗೆ ಲೈಂಗಿಕ ಶೋಷಣೆ ಬಿಟ್ಟರೆ ಬೇರೇನೂ ಆಗಲಿಲ್ಲ. ನನ್ನ ಮೊದಲ ಮದುವೆ ಅಸಫಲವಾಗಲು ಕಾರಣ ನನ್ನ ಹಿಂದಿನ ಪತಿ ನಪುಂಸಕರಾಗಿದ್ದರು. ಸಂತಾನೋತ್ಪತ್ತಿ ಮಾಡಲು ಅಸಮರ್ಥರಾಗಿದ್ದರು.

“ಮದುವೆಯ ನಂತರ ನನ್ನ ಎರಡನೆಯ ಗಂಡನಿಗೆ ಸೆಕ್ಸ್ ಬಗ್ಗೆ ನನ್ನ ಬಲಹೀನತೆ ಹೇಗೆ ಗೊತ್ತಾಯಿತೋ ತಿಳಿಯಲಿಲ್ಲ. ಅವರು ಪುರುಷರ ಅಹಂ ತೋರಿಸಲು ನನ್ನ ಲೈಂಗಿಕ ಶೋಷಣೆ ಮಾಡತೊಡಗಿದರು. ಅದರಿಂದ ಅವರ ಅಹಂಗೆ ತೃಪ್ತಿಯಾಗಿರಬಹುದು. ಆದರೆ ಅವರು ನನಗೆ ಮಾನಸಿಕವಾಗಿ ಬಹಳ ಪೀಡಿಸತೊಡಗಿದರು.

“ಇವರಿಗಿಂತ ನನ್ನ ಮೊದಲ ಗಂಡನೇ ಉತ್ತಮ ಅನಿಸತೊಡಗಿತು. ಅವರು ಸಂವೇದನಾಶೀಲರಂತೂ ಆಗಿದ್ದರು. ನನ್ನ ಮನಸ್ಸಿನ ನೋವು ಮತ್ತು ಸಂಕಟ ಅರ್ಥ ಮಾಡಿಕೊಳ್ಳುತ್ತಿದ್ದರು. ಮೊದಲ ಗಂಡನೊಡನೆ ವಿಚ್ಛೇದನ ಮತ್ತು ಎರಡನೆ ಮದುವೆ ಬಗ್ಗೆ ನನಗೆ ಬಹಳಷ್ಟು ಪಶ್ಚಾತ್ತಾಪ ಆಗುತ್ತಿತ್ತು.

“ಆದರೆ ಈಗ ನಾನೇನೂ ಮಾಡುವಂತಿರಲಿಲ್ಲ. ಇದರ ಮಧ್ಯೆ ಒಂದು ದಿನ ಶಾಪಿಂಗ್‌ ಮಾಡುವಾಗ ನನ್ನ ಮೊದಲ ಗಂಡನೊಂದಿಗೆ ಭೇಟಿಯಾಯಿತು. ವಿಚ್ಛೇದನದಿಂದಾಗಿ ಅವರು ಕುಗ್ಗಿಹೋಗಿದ್ದರು. ಅವರ ಈ ಪರಿಸ್ಥಿತಿಗೆ ನಾನೇ ಕಾರಣ ಅನ್ನಿಸತೊಡಗಿತು. ಹೀಗಾಗಿ ಅವರನ್ನು ಭೇಟಿಯಾಗತೊಡಗಿದೆ.

“ನನ್ನ ಎರಡನೆ ಗಂಡ ಸಂಶಯ ಸ್ವಭಾವದವರು, ಆದ್ದರಿಂದ ನನ್ನನ್ನು ಹಿಂಬಾಲಿಸತೊಡಗಿದರು ಅಥವಾ ಕಣ್ಣಿಡತೊಡಗಿದರು. ನನ್ನ ಗಂಡನ ವರ್ತನೆ ಯಾವ ಹಂತಕ್ಕೆ ಹೋಯಿತೆಂದರೆ ನಾನು ಮತ್ತೊಮ್ಮೆ ವಿಚ್ಛೇದನಕ್ಕಾಗಿ ಕೋರ್ಟಿನ ಮೆಟ್ಟಿಲು ಹತ್ತಬೇಕಾಯಿತು. ಮೂರನೆಯ ಮದುವೆ ಮಾಡಿಕೊಳ್ಳುವುದಿಲ್ಲ, ಇಡೀ ಜೀವನ ಒಂಟಿಯಾಗಿರುತ್ತೇನೆ ಎಂದು ಸಂಕಲ್ಪಿಸಿದ್ದೇನೆ.”

ಕುಮುದಾ ಹೀಗೆ ಹೇಳುತ್ತಾರೆ, “ನನ್ನ ಮರುಮದುವೆಯಲ್ಲಿ ಸಪ್ತಪದಿ ಹಂತ ಬಂದಾಗಲೂ ನನ್ನ ಮನಸ್ಸಿನಲ್ಲಿ ಈ ಮದುವೆಯ ಕುರಿತು ಉತ್ಸಾಹವಿರಲಿಲ್ಲ. ಹೂಗಳಿಂದ ಅಲಂಕೃತಗೊಡ ಮಂಚದಲ್ಲಿ ಕುಳಿತಾಗ ನಿರ್ಜೀವಿಯಂತಿದ್ದೆ. ಅವರು ಮೊದಲ ಬಾರಿ ನನ್ನನ್ನು ಸ್ಪರ್ಶಿಸಿದಾಗ ನನಗೆ ಬೇಡವೆಂದರೂ ರಾಜೀವರ ನೆನಪಾಗತೊಡಗಿತು. ಇನ್ನೊಬ್ಬ ಗಂಡನನ್ನು ಒಪ್ಪಿಕೊಳ್ಳಲು ನನಗೆ ಸಾಕಷ್ಟು ಸಮಯ ಬೇಕಾಯಿತು.”

ಈ ಸಮಸ್ಯೆ ಬಹಳಷ್ಟು ಮಹಿಳೆಯರದು

ಈ ಸಮಸ್ಯೆ ಬರೀ ಕೀರ್ತನಾ, ರಾಧಿಕಾ ಮತ್ತು ಕುಮುದಾರದಲ್ಲ. ಆದರೆ ವೈಧವ್ಯದಿಂದಲೋ ಅಥವಾ ಗಂಡ ಬಿಟ್ಟುಹೋದದ್ದರಿಂದ ಮರುಮದುವೆಯಾದ ನೂರಾರು ಸಾವಿರಾರು ಮಹಿಳೆಯರದ್ದು. ಮೊದಲ ಮದುವೆ ಅವರ ಜೀವನದಲ್ಲಿ ಒಂದು ರೋಮಾಂಚನವನ್ನು ತರುತ್ತದೆ. ಕಿಶೋರಾವಸ್ಥೆಯಲ್ಲಿಯೇ ಮನದಲ್ಲಿ ಮೂಡುವ ಮದುವೆಯ ಕಲ್ಪನೆಯನ್ನು ಸಾಕಾರಗೊಳಿಸಲು ಅವರು ವರ್ಷಗಟ್ಟಲೇ ನಿರೀಕ್ಷೆಯಲ್ಲಿರುತ್ತಾರೆ. ಗಂಡ, ಅತ್ತೆಯಮನೆ ಮತ್ತು ಹೊಸಮನೆಯ ಬಗ್ಗೆ ಹಲವಾರು ಕನಸುಗಳನ್ನು ಕಾಣುತ್ತಿರುತ್ತಾರೆ. ಆದರೆ ವೈಧವ್ಯ ಮತ್ತು ವಿಚ್ಛೇದನದಿಂದ ಅವರ ಹೃದಯಕ್ಕೆ ಗಾಢವಾದ ಆಘಾತ ಉಂಟಾಗಿರುತ್ತದೆ. ಮರುಮದುವೆಯಂತೂ ಅವರಿಗೆ ಸುದೀರ್ಘವಾದ ಒಂಟಿ ಬದುಕನ್ನು ಒಬ್ಬ ನೂತನ ಸಂಗಾತಿಯೊಂದಿಗೆ ಕಳೆಯಲು ವಿವಶತೆಯಿಂದ ಮಾಡಿಕೊಂಡ ಒಪ್ಪಂದವಾಗಿದೆ. ಆದ್ದರಿಂದ ಎರಡನೆ ಗಂಡ, ಅವನ ಮನೆ ಮತ್ತು ಮನೆಯವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ವಿಧವೆ ಅಥವಾ ವಿಚ್ಛೇದಿತೆಗೆ ಬಹಳ ಕಷ್ಟವಾಗುತ್ತದೆ.

ಒಂದು ಸರ್ಕಾರಿ ಕಛೇರಿಯಲ್ಲಿ ಕೆಲಸ ಮಾಡುವ ವಿಮಲಾಗೆ ಗಂಡ ತೀರಿಕೊಂಡ ನಂತರ ಅನುಕಂಪದ ಆಧಾರದಲ್ಲಿ ಅವರ ಕೆಲಸ ಸಿಕ್ಕಿತ್ತು. “ಈ ಮದುವೆ ಮಾಡಿಕೊಳ್ಳಲು ನಾನು ಅಸಹಾಯಕಳಾಗಿದ್ದೆ. ಗಂಡನ ಆಫೀಸಿನವರು ನನಗೆ ಬಹಳ ತೊಂದರೆ ಕೊಡುತ್ತಿದ್ದರು. ಇದು ಸರ್ಕಾರ ನಿನಗೆ ದಾನವಾಗಿ ಕೊಟ್ಟಿರೋ ಭಕ್ಷೀಸು ಎಂದು ನನಗೆ ಹಾಗೂ ತೀರಿಕೊಂಡ ಗಂಡನನ್ನು ತಮಾಷೆ ಮಾಡುತ್ತಿದ್ದರು. ನನ್ನ ವೈಧವ್ಯ ಹಾಗೂ ಏಕಾಂಗಿಯಾದ ಕಾರಣದಿಂದ ಅವರು ನನ್ನನ್ನು ಬೇಕಾದಾಗ ಸಿಗುತ್ತಾಳೆ ಎಂದುಕೊಂಡು ಪ್ರಯತ್ನಿಸುತ್ತಿದ್ದರು.

“ಆದರೆ ನಾನು ಅವರಿಗೆ ಪ್ರೋತ್ಸಾಹಿಸದಿದ್ದಾಗ ಅವರು ತಮ್ಮೊಂದಿಗೆ ಅಥವಾ ಬೇರೆಯವರೊಂದಿಗೆ ನನಗೆ ಸಂಬಂಧ ಕಟ್ಟಿ ಮಾತಾಡುತ್ತಿದ್ದರು. ಆಫೀಸಿನಲ್ಲಿ ಯಾವುದಾದರೂ ನೆಪ ಹೇಳಿ ತಮ್ಮ ಕೆಲಸಗಳನ್ನು ನನ್ನ ಮೇಲೆ ಹೇರುತ್ತಿದ್ದರು. ನಾನು ಸರಿಯಾಗಿ ಕೆಲಸ ಮಾಡುವುದಿಲ್ಲ ಎಂದು ಬಾಸ್‌ ಬಳಿ ದೂರುತ್ತಿದ್ದರು. ಬಾಸ್‌ ಕೂಡ ಅವರ ಮಾತನ್ನೇ ಕೇಳುತ್ತಿದ್ದರು. ಆಗ ನನಗೆ ಇನ್ನೊಂದು ಮದುವೆಯಾದರೆ ಈ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದು. ಎನ್ನಿಸಿತು.

“ಅದೃಷ್ಟವಶಾತ್‌ ನನಗೆ ಒಬ್ಬ ಒಳ್ಳೆಯ ವ್ಯಕ್ತಿ ಸಿಕ್ಕರು. ನನ್ನ ಹಿಂದಿನ ಕಥೆ ತಿಳಿದಿದ್ದರೂ ಸಂತೋಷದಿಂದ ನನ್ನನ್ನು ಸ್ವೀಕರಿಸಿದರು. ಇಬ್ಬರೂ ಕೋರ್ಟಿಗೆ ಹೋಗಿ ಅಗತ್ಯ ಮಾಹಿತಿಗಳನ್ನು ಕೊಟ್ಟು ಸಹಿ ಮಾಡಿ ಮನೆಗೆ ಹೊರಟೆವು. ನಾನೀಗ ವಿಧವೆಯಲ್ಲ, ಮುತ್ತೈದೆ ಎಂದು ನನಗೆ ಅನುಭವಾಯಿತು.

“ಆದರೆ ಮೊದಲ ರಾತ್ರಿಯ ರೋಮಾಂಚನವೇನೂ ಆಗಲಿಲ್ಲ. ಅಂದು ಹಗಲು ರಾತ್ರಿ ಎರಡೂ ರೋಮಾಂಚನಗೊಳಿಸಲಿಲ್ಲ. ಎಲ್ಲ ಸಾಮಾನ್ಯವಾಗಿತ್ತು. ಎಲ್ಲ ವಿವಾಹಿತ ದಂಪತಿಗಳ ರಾತ್ರಿಯಂತೆ. ಆದರೆ ಖುಷಿಯ ವಿಷಯವೆಂದರೆ ನಾನು ಒಬ್ಬಂಟಿಯಲ್ಲ. ಮನೆಯಲ್ಲಿ ಗಂಡಸು ಅನ್ನಿಸಿಕೊಳ್ಳುವ ಪತಿ ಇದ್ದಾರೆ. ಮದುವೆಯ ನಂತರ ಆಫೀಸಿನವರು ನನ್ನನ್ನು ರೇಗಿಸುವುದು ಇತ್ಯಾದಿ ತೊಂದರೆ ಕೊಡುತ್ತಿಲ್ಲ.”

ಮನೋವೈದ್ಯರು ಏನು ಹೇಳುತ್ತಾರೆ?

ಮನೋವೈದ್ಯ ಡಾ. ಗೌತಮ್ ಹೀಗೆ ಹೇಳುತ್ತಾರೆ, “ಅಂದಹಾಗೆ ಇನ್ನೊಂದು ಮದುವೆಗೆ ಮಾನಸಿಕವಾಗಿ ಪುರುಷರಾಗಲಿ, ಮಹಿಳೆಯರಾಗಲಿ ಸಿದ್ಧತೆ ಮಾಡಿಕೊಳ್ಳುವುದಿಲ್ಲ. ಇಬ್ಬರೂ ಅದನ್ನು ಹೊಸ ತುದಿಯಿಂದ ತಮ್ಮ ಮುರಿದು ಬಿದ್ದ ಕುಟುಂಬವನ್ನು  ನೆಲೆಗೊಳಿಸುವ ಒಂದು ಔಪಚಾರಿಕತೆಯೆಂದು ತಿಳಿಯುತ್ತಾರೆ. ಅದರ ಫಲವನ್ನು ಇಬ್ಬರೂ ಇಡೀ ಜೀವನ ಅನುಭವಿಸಬೇಕು.“

ಎರಡನೆ ಗಂಡನಿಗೆ ತನ್ನ ಪತ್ನಿಯ ಶರೀರವನ್ನು ಒಬ್ಬ ವ್ಯಕ್ತಿ ಅಂದರೆ ಅವಳ ಮೊದಲ ಗಂಡ ಅನುಭವಿಸಿಬಿಟ್ಟಿದ್ದಾನೆ. ಅವಳ ಶರೀರ ಹಾಗೂ ಮನಸ್ಸಿನ ಮೇಲೆ ಆಳ್ವಿಕೆ ನಡೆಸಿದ್ದಾನೆ. ತನ್ನ ಪತ್ನಿಯ ಶರೀರ ತಂಗಳು ಊಟದಂತೆ ನನಗೆ ಬಡಿಸಲಾಗಿದೆ ಎಂದು ಯಾವಾಗಲೂ ಚುಚ್ಚುತ್ತಿರುತ್ತದೆ. ಹೀಗಾಗಿ ಅಂತಹ ಬಹಳಷ್ಟು ಗಂಡಂದಿರು ಎರಡನೆ ಮದುವೆಯಾಗುವ ಪತ್ನಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದಿಲ್ಲ.”

ಇದರ ಬಗ್ಗೆ ಮನೋವೈದ್ಯೆ ಡಾ. ಲತಾ ಹೀಗೆ ಹೇಳುತ್ತಾರೆ, “ನನ್ನ ಬಳಿ ಇಂತಹ ವಿಷಯಗಳು ಸಾಕಷ್ಟು ಬರುತ್ತವೆ. ಗಂಡ ಎರಡನೇ ಮದುವೆ ಮಾಡಿಕೊಂಡು ಹೆಂಡತಿಯನ್ನು ಮನಃಪೂರ್ವಕವಾಗಿ ಸ್ವೀಕರಿಸುವುದಿಲ್ಲ. ಅವನಿಗೆ ಯಾವಾಗಲೂ ತನ್ನ ಹೆಂಡತಿಯ ಬಗ್ಗೆ ಸಂದೇಹವಿರುತ್ತದೆ. ವಿಶೇಷವಾಗಿ ಅವಳು ವಿಚ್ಛೇದನ ಪಡೆದಿದ್ದರೆ. ತನ್ನನ್ನು ಮದುವೆ ಮಾಡಿಕೊಂಡ ಮೇಲೂ ಅವಳು ತನ್ನ ಹಿಂದಿನ ಗಂಡನೊಂದಿಗೆ ಗುಪ್ತವಾಗಿ ಸಂಬಂಧ ಇಟ್ಟುಕೊಂಡಿರಬಹುದು.

“ತಾನು ಮನೆಯಲ್ಲಿ ಇಲ್ಲದಿರುವಾಗ ಹೆಂಡತಿ ಹಳೆಯ ಗಂಡನನ್ನು ಭೇಟಿಯಾಗುತ್ತಿರುತ್ತಾಳೆ ಅನ್ನಿಸುತ್ತದೆ. ಅವನ ಅನುಮಾನ ಯಾವ ಹಂತ ಮುಟ್ಟುತ್ತದೆ ಎಂದರೆ ಅವಳ ಓಡಾಟದ ಮೇಲೆ ಕಣ್ಗಾವಲು ಇಡಿಸುತ್ತಾನೆ.”

ಡಾ. ಲಲಿತಾರ ಬಳಿ ಒಬ್ಬ ಮಾಡರ್ನ್‌ ಮಹಿಳೆ ಶಮಂತಾ ಬಂದಿದ್ದಳು. ಆಕೆ ಅದುವರೆಗೆ 4 ಮದುವೆಗಳನ್ನು ಮಾಡಿಕೊಂಡಿದ್ದು, ಈಗ 5ನೇ ಮದುವೆ ಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದಳು.

ಶಮಂತಾ ನಗುತ್ತಾ ಹೇಳಿದಳು, “ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ನನ್ನ ಮದುವೆ ನಡೆಯಿತು. ಆದರೆ ಒಂದೂವರೆ ವರ್ಷದ ನಂತರ ವಿಚ್ಛೇದನ ಆಯಿತು. ಎರಡನೆ ಗಂಡ ರಸ್ತೆ ಅಪಘಾತದಲ್ಲಿ ತೀರಿಹೋದರು. 3ನೇ ಹಾಗೂ 4ನೇ ಗಂಡಂದಿರೊಡನೆಯೂ ವಿಚ್ಛೇದನ ಉಂಟಾಯಿತು. ನಾಲ್ಕೂ ಗಂಡಂದಿರ ಜೊತೆಗೆ ನಾನು ಸ್ಮರಣೀಯವಾಗಿ ಸಮಯ ಕಳೆದೆ.

“ನನಗೆ ವಿಚ್ಛೇದನ ಕೊಟ್ಟ ಮೂರು ಗಂಡಂದಿರೊಡನೆ ಇಂದಿಗೂ ನನಗೆ ಒಳ್ಳೆಯ ಸ್ನೇಹ ಇದೆ. ನಾವು ಆಗಾಗ್ಗೆ ಭೇಟಿಯಾಗುತ್ತಿರುತ್ತೇವೆ. ಈಗ ನಾನು 5ನೇ ಗಂಡನನ್ನು ಹುಡುಕಿಕೊಂಡಿದ್ದೇನೆ. ನನ್ನ ಮನಸ್ಸಿನಲ್ಲಿ ಈ ಮದುವೆಯ ಬಗ್ಗೆ ಮೊದಲ ಮದುವೆಯ ಸಮಯದಲ್ಲಿ ಇದ್ದ ಉತ್ಸಾಹ, ರೋಮಾಂಚನ ಮತ್ತು ಉತ್ಸುಕತೆ ಇದೆ. ಈ ಬಾರಿ ಹನಿಮೂನ್‌ ಆಚರಿಸಲು ಸ್ವಿಟ್ಜರ್ಲೆಂಡ್‌ಗೆ ಹೋಗ್ತೀವಿ.”

ಅವರು ತಮ್ಮ ಮರುಮದುವೆಯ ಬಗ್ಗೆ ಹೀಗೆ ಹೇಳಿದರು, “ಮದುವೆ 2ನೇಯದಾಗಲಿ, 3ನೇಯದಾಗಲಿ, 4 ಅಥವಾ 5ನೆಯದು. ನೀವು ಮೊದಲ ಬಾರಿ ಮದುವೆಯಾಗುತ್ತಿದ್ದೀರಿ ಎಂಬಂತೆ ಸಿದ್ಧತೆ ಮಾಡಿಕೊಳ್ಳಿ. ನಿಮ್ಮ ಹೊಸ ಪತಿಗೆ ನೀವು ಹಲವಾರು ಮದುವೆಗಳ ಅನುಭವ ಹೊಂದಿದ್ದೀರಿ ಎಂದು ತಿಳಿಯದಂತೆ ನೋಡಿಕೊಳ್ಳಿ. ಅವರೆದುರು ನೂತನ ವಧುವಿನಂತೆ ಪ್ರಸ್ತುತಪಡಿಸಿಕೊಳ್ಳಬೇಕೆಂದು ಅವರು ಬಯಸುತ್ತಾರೆ.”

ಗಮನಿಸಬೇಕಾದ ವಿಷಯವೆಂದರೆ ಹುಡುಗಿಯರು ಚಿಕ್ಕ ವಯಸ್ಸಿನಿಂದಲೇ ತಮ್ಮ ಗಂಡ, ಅತ್ತೆಯ ಮನೆ ಹಾಗೂ ಮೊದಲ ರಾತ್ರಿಯ ಬಗ್ಗೆ ಕನಸುಗಳು ಹಾಗೂ ಕಲ್ಪನೆಗಳನ್ನು ಇಟ್ಟುಕೊಂಡಿರುತ್ತಾರೆ. ಅವು ಬಹಳ ರೋಮಾಂಚನಕಾರಿಯಾಗಿರುತ್ತವೆ. ಆದರೆ ಮದುವೆಯ ನಂತರ ವಿಚ್ಛೇದನ ಮತ್ತು ವೈಧವ್ಯದ ಆಘಾತದಿಂದ ಅವರು ಮರುಮದುವೆಯಾಗಬೇಕಾಗುತ್ತದೆ. ಅವರಿಗೆ ಮೊದಲ ಮದುವೆಯ ಉತ್ಸಾಹವಾಗಲೀ ರೋಮಾಂಚನವಾಗಲಿ ಇರುವುದಿಲ್ಲ.

ಹೀಗೇಕಾಗುತ್ತದೆ?

ಒಂದು ಟ್ರ್ಯಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುವ ಪ್ರಮೀಳಾ ಹೀಗೆ ಹೇಳುತ್ತಾರೆ, “15-16 ವರ್ಷದಿಂದಲೇ ಹುಡುಗಿಯರು ತಮ್ಮ ಗಂಡ ಹಾಗೂ ಮನೆಯ ಬಗ್ಗೆ ಕನಸು ಕಾಣಲು ಶುರು ಮಾಡುತ್ತಾರೆ. ಅವರು ಮೊದಲ ರಾತ್ರಿಯಂದು ತಮ್ಮ ಅಕ್ಷತ ಕೌಮಾರ್ಯವನ್ನು ಗಂಡನಿಗೆ ಉಡುಗೊರೆಯಾಗಿ ಕೊಡಲು ಇಚ್ಛಿಸುತ್ತಾರೆ. ಹೀಗಾಗಿ  ಹೆಚ್ಚಿನ ಹುಡುಗಿಯರು ತಮ್ಮ ಬಾಯ್‌ಫ್ರೆಂಡ್‌ ಅಥವಾ ಪ್ರೇಮಿಗೆ ಚುಂಬನದವರೆಗೆ ಮತ್ತು ತಮ್ಮ ದೇಹದ ಅಂಗಗಳನ್ನು ಸ್ಪರ್ಶಿಸಲು ಒಪ್ಪಿಗೆ ಕೊಡುತ್ತಾರೆ. ಆದರೆ ತಮ್ಮ ಕನ್ಯತ್ವಕ್ಕೆ ಭಂಗ ತರಿಸಲು ಒಪ್ಪಿಗೆ ಕೊಡುವುದಿಲ್ಲ. ಇವೆಲ್ಲ ನಿನ್ನವೇ. ಆದರೆ ಮದುವೆಯ ನಂತರವೇ ಮೊದಲ ರಾತ್ರಿಯಂದು ನಿನಗೆ ಒಪ್ಪಿಸುತ್ತೇನೆ ಎಂದು ಸ್ಪಷ್ಟವಾಗಿ ಹೇಳಿಬಿಡುತ್ತಾಳೆ.“

ಆದರೆ ಎರಡನೆ ಬಾರಿ ಮದುವೆಯಾಗಲು ಮಹಿಳೆಯ ಬಳಿ ಎರಡನೇ ಗಂಡನಿಗೆ ಕೊಡಲು ಅಂತಹ ಉಡುಗೊರೆ ಇರುವುದಿಲ್ಲ. ಎರಡನೇ ಗಂಡ ಬುದ್ಧಿವಂತನಾಗಿದ್ದರೆ ನಿನ್ನ ಹಳೆಯ ಜೀವನ ಹೇಗೇ ಇದ್ದರೂ ನನಗೆ ನಿನ್ನ ಪ್ರೀತಿಯೇ ಕೌಮಾರ್ಯದಂತೆ ಎಂದು ಅವಳಲ್ಲಿ ಆತ್ಮವಿಶ್ವಾಸ ಉಂಟುಮಾಡಬಹುದು.

“ನನ್ನ ಎರಡನೇ ಗಂಡ ಪ್ರಕಾಶ್‌ ಅದನ್ನೇ ಮಾಡಿದರು. ಅವರು ಬೇಕೆಂದೇ ಮದುವೆಯನ್ನು 6 ತಿಂಗಳು ಮುಂದೂಡಿದರು. ಆ ಸಮಯದಲ್ಲಿ ನನ್ನ ಬಗ್ಗೆ ತಮ್ಮ ಪ್ರೀತಿಯನ್ನು ಗಾಢಗೊಳಿಸತೊಡಗಿದರು. ನಾವು ಆಗಾಗ್ಗೆ ಡೇಟಿಂಗ್‌ಗೆ ಹೋಗುತ್ತಿದ್ದೆವು. ಅವರು ನನ್ನೊಂದಿಗೆ ಪ್ರೇಮಿಯಂತೆ ವರ್ತಿಸುತ್ತಿದ್ದರು. ಆದರೆ ದೈಹಿಕ ಸಂಪರ್ಕದ ವಿಷಯ ಎತ್ತುತ್ತಿರಲಿಲ್ಲ. ಹೀಗಾಗಿ ನನಗೆ ಒಮ್ಮೊಮ್ಮೆ ಅವರ ಪುರುಷತ್ವದ ಬಗ್ಗೆ ಸಂದೇಹ ಹುಟ್ಟಿಕೊಳ್ಳುತ್ತಿತ್ತು.

“ಅವರಿಗೆ ನನ್ನ ಸಂದೇಹ ತಿಳಿಯಿತೆಂದು ಕಾಣುತ್ತದೆ. ಅವರು ಒಂದು ದಿನ ನನ್ನನ್ನು ಗೋವಾಗೆ ಕರೆದುಕೊಂಡು ಹೋದರು. ಸಮುದ್ರ ತೀರದಲ್ಲಿ ನಾವು ಪ್ರೇಮಿಗಳಂತೆ ಪರಸ್ಪರ ಪ್ರೀತಿಸತೊಡಗಿದೆವು. ಅವರು ಹೇಳಿದರು, “ಪ್ರಮೀಳಾ, ನಾನೀಗ ನಿನ್ನೊಂದಿಗೆ ಏನು ಬೇಕಾದರೂ ಮಾಡಬಹುದು. ನೀನು ತಡೆಯಲೂ ಆಗುವುದಿಲ್ಲ. ಆದರೆ ಮದುವೆಗೆ ಮೊದಲು ನೀನು ನಿನ್ನ ಮೊದಲ ಮದುವೆಯಲ್ಲಿ ಇದ್ದ ಸ್ಥಿತಿಯಲ್ಲೇ ಬರುತ್ತೇನೆ.“

ಪ್ರಕಾಶ್‌ರ ಈ ಮಾತು ನನ್ನ ಆತ್ಮವಿಶ್ವಾಸ ಹೆಚ್ಚಿಸಿತು. ಮಹಿಳೆ ಯಾವಾಗಲೂ ತನ್ನ ಪತಿಯ ಬಗ್ಗೆ ತನುಮನದಿಂದ ಸಮರ್ಪಿತಳಾಗಿರುತ್ತಾಳೆ. ಏಕೆಂದರೆ ಮದುವೆಯ ನಂತರ ಅವಳ ಸಂಬಂಧ ಬರೀ ಅವಳ ಪತಿಯೊಂದಿಗಿರುತ್ತದೆ. ಪ್ರಕಾಶ್‌ ನಿಜಕ್ಕೂ 6 ತಿಂಗಳಲ್ಲಿ ನನ್ನ ಮನಸ್ಸನ್ನು ವಿಚ್ಛೇದಿತೆಗೆ ಬದಲಾಗಿ ಕುಮಾರಿಯಾಗಿ ಮಾಡಿಬಿಟ್ಟಿದ್ದರು. ಮೊದಲ ರಾತ್ರಿಯಂದು ನಾನು ನನ್ನ ಕನ್ಯತ್ವವನ್ನು ಯಾರಿಗೋ ಉಡುಗೊರೆಯಾಗಿ ಕೊಟ್ಟಿದ್ದೆ. ಆದರೆ ಪ್ರಕಾಶ್‌ರೊಂದಿಗೆ ಎಲ್ಲ ಹೊಸ ಹೊಸದಾಗಿ ಮತ್ತು ರೋಮಾಂಚಕಾರಿಯಾಗಿ ಕಾಣುತ್ತಿತ್ತು.”

ತಂದೆ ತಾಯಿಯ ಕರ್ತವ್ಯ

ಮನೋವೈದ್ಯೆ ಲತಾ ಹೀಗೆ ಹೇಳುತ್ತಾರೆ, “ಮಹಿಳೆ 2 ಬಾರಿ ಮದುವೆಯಾಗಬಹುದು ಅಥವಾ 3 ಬಾರಿ, ಅಸಲಿ ವಿಷಯ ಆ ಪರಿಸ್ಥಿತಿಯದ್ದು. ಅದರಲ್ಲಿ ಆಕೆ 2ನೇ ಬಾರಿ ಅಥವಾ 3ನೇ ಬಾರಿ ಮದುವೆಯ ನಂತರ ಬದುಕು ಸಾಗಿಸಬೇಕಾಗಿರುತ್ತದೆ. ಮೊದಲ ಪತ್ನಿಯ ಸಿಹಿ ಮತ್ತು ಕಹಿ ನೆನಪುಗಳೊಂದಿಗೆ ಅವಳು ತನ್ನ ಎರಡನೇ ಮದುವೆಯ ಸಮಯದಲ್ಲಿ ತನ್ನನ್ನು ಸ್ವತಂತ್ರಳು ಅಂದುಕೊಳ್ಳುವಂತಿಲ್ಲ. “ಹೀಗಿರುವಾಗ ಅವಳ ತಂದೆತಾಯಿಯ ಕರ್ತವ್ಯವೇನೆಂದರೆ ಇನ್ನೊಂದು ಮದುವೆಗೆ ಮೊದಲೇ ಅವರು ಅವಳನ್ನು ಮಾನಸಿಕ ರೂಪದಲ್ಲಿ ಸಿದ್ಧಗೊಳಿಸಬೇಕು. ಮದುವೆಯ ಬಗ್ಗೆ ಅವಳ ಮನಸ್ಸಿನಲ್ಲಿ ಉತ್ಸಾಹ ಹುಟ್ಟಿಸಬೇಕು. ಆದರೆ ಅಂತಹ ಪರಿಸ್ಥಿತಿಗಳಲ್ಲಿ ತಂದೆ ತಾಯಿ ಮತ್ತು ಕುಟುಂಬದ ಇತರರು ಮೊದಲಿನಿಂದಲೇ ಅವಳ ಮನೆ ನೆಲೆಸುವಂತಾಗಲಿ. ಅವಳು ಒಂಟಿ ಬದುಕು ಸಾಗಿಸದೇ ಇರಲಿ ಎನ್ನುವಂತೆ ಮಾಡುತ್ತಾರೆ. ಅದರಿಂದ ಅವಳ ಮನಸ್ಸಿನಲ್ಲಿ ನಿರಾಶೆ ಉಂಟಾಗುತ್ತದೆ.”

ಎರಡನೇ ಮೂರನೇ ಮದುವೆ ವೈಧವ್ಯದಿಂದಾಗಲೀ, ವಿಚ್ಛೇದನದಿಂದಾಗಲೀ ಆಗುತ್ತದೆ. ಮನೆಯವರು ಮಗಳ ಮರುಮದುವೆಯ ಮೊದಲು ಹಾಗೂ ನಂತರ ಅವಳೊಂದಿಗೆ ಸ್ನೇಹಪೂರ್ಣವಾಗಿಯೇ ವರ್ತಿಸಬೇಕು. ಅವರು ತಮ್ಮ ಮಗಳ ಹೊರೆಯನ್ನು ಹಗುರ ಮಾಡುತ್ತಿಲ್ಲ. ಸಮಾಜದ ಒಬ್ಬರಿಗೆ, ಒಂದು ಕುಟುಂಬಕ್ಕೆ ಪ್ರತಿಷ್ಠಿತ ಸದಸ್ಯರನ್ನು ಕೊಡುತ್ತಿದ್ದೇವೆ ಎಂದು ತಿಳಿಯಬೇಕು.

ಇಂತಹ ವಿಷಯಗಳಲ್ಲಿ ಸಂಬಂಧಿಗಳು ಮತ್ತು ಪರಿಚಿತರ ಕರ್ತವ್ಯವೇನೆಂದರೆ, ಅವರು ಮರುಮದುವೆಯ ಮೂಲಕ ಸೇರಿಕೊಳ್ಳುವ ಪತಿಪತ್ನಿಯರ ಬಗ್ಗೆ ಉಪೇಕ್ಷೆಯ ಭಾವನೆ ಇಟ್ಟುಕೊಳ್ಳದೆ ಸಾಧ್ಯವಾದಷ್ಟು ರಚನಾತ್ಮಕವಾಗಿ ತಮ್ಮ ಪಾತ್ರವನ್ನು ನಿಭಾಯಿಸಬೇಕು. ವಿಧವೆ ಅಥವಾ ವಿಚ್ಛೇದಿತೆಯ ಮರುಮದುವೆ ಈಗಿನ ಕಾಲದ ಅಗತ್ಯವಾಗಿದೆ. ಅದರಿಂದ ಮಹಿಳೆಗೆ ಸಾಮಾಜಿಕ ಮತ್ತು ಆರ್ಥಿಕವಾಗಿ ರಕ್ಷಣೆ ಸಿಗುತ್ತದೆ. ಜೊತೆಗೆ ಅವಳು ಬಯಸಿದರೆ ಹಿಂದಿನದನ್ನು ಮರೆತು ತನ್ನಲ್ಲಿ ಸಂತಸದ ಭಾವನೆ ಉತ್ಪತ್ತಿ ಮಾಡಿಕೊಂಡು ಮರುಮದುವೆಯನ್ನೂ ಮೊದಲ ಮದುವೆಯಂತೆಯೇ ಉತ್ಸಾಹದಿಂದ ತುಂಬಿಸಬಹುದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ