ಇಂದು ಹೆಚ್ಚಿನ ದಂಪತಿಗಳು ಉದ್ಯೋಗದಲ್ಲಿದ್ದಾರೆ. ಇಂದಿನ ಧಾವಂತದ ಬದುಕಿನಲ್ಲಿ ಉದ್ಯೋಗ ಹಾಗೂ ಒತ್ತಡದಿಂದಾಗಿ ಅವರ ಮಧ್ಯೆ ಸಣ್ಣ ಪುಟ್ಟ ವಿಷಯಗಳಿಗಾಗಿ ಮನಸ್ತಾಪ ಉಂಟಾಗುತ್ತದೆ. ಈ ವಿವಾದಗಳನ್ನು ಒಟ್ಟಿಗೆ ಸೇರಿ ಬಗೆಹರಿಸಿಕೊಂಡರೆ ಬದುಕು ಸುಲಭವಾಗುತ್ತದೆ.
ನೀವು ಸಹ ಸಣ್ಣ ಪುಟ್ಟ ವಿಷಯಗಳಿಗೆ ಗಮನ ಕೊಟ್ಟು ಒಬ್ಬ ಸ್ಮಾರ್ಟ್ ಪಾರ್ಟ್‌ನರ್ ಆಗಬೇಕು. ಜೊತೆಗೆ ನಿಮ್ಮ ಸಂಗಾತಿಗೆ ಸಂತಸ ತುಂಬಿದ ಉಡುಗೊರೆ ಕಳಿಸಬಹುದು.
ಇಷ್ಟಾನಿಷ್ಟಗಳನ್ನು ಗಮನಿಸಿ
ಪ್ರೀತಿ ತುಂಬಿದ ಸಂಬಂಧಗಳಿಗೆ ಇದು ಬಹಳ ಅಗತ್ಯವಾಗಿದೆ. ನೀವು ನಿಮ್ಮ ಸಂಗಾತಿಯ ಇಷ್ಟಾನಿಷ್ಟಗಳನ್ನು ಗಮನಿಸಿ. ಒಂದುವೇಳೆ ಅವರಿಗೆ ನಿಮ್ಮ ಯಾವುದಾದರೊಂದು ವಿಷಯ ಇಷ್ಟವಾಗದಿದ್ದರೆ ಅದನ್ನು ಬದಲಿಸಲು ಪ್ರಯತ್ನಿಸಿ. ಹೀಗೆಯೇ ನಿಮ್ಮ ಸಂಗಾತಿಗೆ ಯಾವ ಯಾವ ವಿಷಯಗಳು ಚೆನ್ನಾಗಿರುತ್ತವೆ ಹಾಗೂ ನಿಮ್ಮ ಸಂಗಾತಿಯ ಮುಖದಲ್ಲಿ ಯಾವಾಗ ಮುಗುಳ್ನಗೆ ಮೂಡಿಸಬಹುದು ಎಂದು ತಿಳಿದುಕೊಳ್ಳಿ.
ಒಂದು ವೇಳೆ ನಿಮ್ಮ ಸಂಗಾತಿಗೆ ನೀವು ದುಂದುವೆಚ್ಚ ಮಾಡುವುದು ಹಿಡಿಸದಿದ್ದರೆ ಬೇಡದ ವಸ್ತುಗಳಿಗೆ ಹಣ ಹಾಳು ಮಾಡುವುದನ್ನು ನಿಲ್ಲಿಸಲು ಪ್ರಯತ್ನಿಸಿ. ಯಾವುದಾದರೂ ವಸ್ತು ಬೇಡವೆಂದು ಹೇಳಿದರೆ ಅದಕ್ಕಾಗಿ ಹಠ ಹಿಡಿಯಬೇಡಿ. ನಿಮ್ಮ ಸಂಗಾತಿ ನಿಮ್ಮ ಒಳ್ಳೆಯದಕ್ಕಾಗಿಯೇ ಬೇಡವೆಂದಿದ್ದಾರೆ ಎಂದು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.
ಪರಸ್ಪರ ಸ್ಪೇಸ್ ಕೊಡಿ
ಮದುವೆಗೆ ಮುಂಚೆ ನಿಮ್ಮ ಎಕ್ಸ್ಟ್ರಾ ಕೇರಿಂಗ್ ನೇಚರ್ ನಿಮ್ಮ ಸಂಗಾತಿಗೆ ಚೆನ್ನಾಗಿರುತ್ತದೆ. ಆದರೆ ಮದುವೆಯ ನಂತರ ಎಕ್ಸ್ಟ್ರಾ ಕೇರಿಂಗ್ ನೇಚರ್ ನಿಮ್ಮಿಬ್ಬರ ಮಧ್ಯೆ ವೈಮನಸ್ಯಕ್ಕೆ ಕಾರಣವಾಗುತ್ತದೆ. ಹೀಗಾಗಿ ಪರಸ್ಪರ ಸ್ಪೇಸ್ ಕೊಡಿ. ಪ್ರತಿ ವಿಷಯಕ್ಕೂ ಏನಾದರೂ ಕೇಳುತ್ತಿರಬೇಡಿ. ಆದರೆ ನಂಬಿಕೆ ಇಡುವುದನ್ನು ಕಲಿತುಕೊಳ್ಳಿ. ಪರಸ್ಪರರ ನಿರ್ಣಯಗಳನ್ನು ಗೌರವಿಸಿ.
ಸಲಹೆ ನೀಡಿ, ಆದರೆ ಹೇರಬೇಡಿ
ಅನೇಕ ಬಾರಿ ಗಂಡ ಏನಾದರೂ ವಸ್ತುವನ್ನು ಖರೀದಿಸಲು ಪ್ಲ್ಯಾನ್ ಮಾಡಿದರೆ ಹೆಂಡತಿ ಅದಕ್ಕೆ ತನ್ನ ಸಲಹೆ ಕೊಡುವ ಬದಲು ತನ್ನ ತೀರ್ಮಾನವನ್ನು ಹೇರತೊಡಗುತ್ತಾಳೆ. ಹಾಗೆ ಮಾಡಬೇಡಿ. ಬದಲಿಗೆ ಅವರಿಗೆ ಆರ್ಥಿಕವಾಗಿ ಸಹಾಯ ಮಾಡಲು ಪ್ರಯತ್ನಿಸಿ.
ಟೆಕ್ನೋ ಫ್ರೆಂಡ್ಲಿ ಆಗಿ
ನೀವು ಉದ್ಯೋಗಸ್ಥೆಯಾಗಿರಿ ಅಥವಾ ಗೃಹಿಣಿಯಾಗಿರಿ, ಹೆಚ್ಚು ಟೆಕ್ನಾಲಜಿ ಉಪಯೋಗಿಸಿ. ಅದರಿಂದ ನೀವು ಎಲ್ಲ ವಿಷಯಕ್ಕೂ ನಿಮ್ಮ ಪತಿಯನ್ನು ಅವಲಂಬಿಸಬೇಕಾಗಿಲ್ಲ. ನಿಮ್ಮ ಪತಿಗೆ ಬಹಳಷ್ಟು ಕೆಲಸಗಳಿರುತ್ತವೆ. ನೀವು ಅವರ ಮೇಲೆ ಅವಲಂಬಿತರಾಗಿದ್ದರೆ ಅದರಿಂದ ನಿಮ್ಮಿಬ್ಬರ ಮಧ್ಯೆ ಚುಚ್ಚು ಮಾತುಗಳು ಪ್ರಯೋಗವಾಗುತ್ತವೆ. ಆದ್ದರಿಂದ ಮನೆಯ ಸಣ್ಣ ಪುಟ್ಟ ಕೆಲಸಗಳಿಗೆ ಟೆಕ್ನಾಲಜಿಯ ಸಹಾಯದಿಂದ ಮಾಡಬಹುದಾದ್ದನ್ನು ನೀವೇ ಮಾಡಿ. ಹೀಗೆ ಮಾಡಿದಾಗ ನೀವು ಸ್ಮಾರ್ಟ್ ವುಮನ್ ಆಗುವುದಲ್ಲದೆ, ನಿಮ್ಮ ಅಮೂಲ್ಯ ಸಮಯನ್ನೂ ಉಳಿಸಬಹುದು.
ಪಾರ್ಟ್‌ನರ್ ಅಭಿಪ್ರಾಯ ಅತ್ಯಗತ್ಯ
ನೀವು ಮನೆ, ಕಾರು ಮತ್ತು ಇನ್‌ವೆಸ್ಟ್ ಮೆಂಟ್ ಪ್ಲಾನಿಂಗ್ ಮಾಡುತ್ತಿದ್ದರೆ ನಿಮ್ಮ ಸಂಗಾತಿಯ ಅಭಿಪ್ರಾಯ ಅಗತ್ಯವಾಗಿ ಕೇಳಿ. ಹೆಂಡತಿಯನ್ನೇನು ಕೇಳುವುದು? ಅವರಿಗೆ ಈ ವಿಷಯ ಏನು ತಿಳಿದಿರುತ್ತದೆ ಎಂದು ಬಹಳಷ್ಟು ಗಂಡಂದಿರು ಯೋಚಿಸುತ್ತಾರೆ. ಆದರೆ ನಿಮ್ಮ ಸಂಗಾತಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇದ್ದು ಅವರು ನಿಮಗೆ ಸರಿಯಾಗಿ ಗೈಡ್ ಮಾಡಬಹುದು.