ನನ್ನ ನಿನ್ನ ಪ್ರೇಮಗೀತೆ... ನಾ ನಿನ್ನ ಮರೆಯಲಾರೆ... ನೀನೇ ನನ್ನ ಜೀವ... ನೀನಿರದೆ ನಾನಿಲ್ಲ... ಹೀಗೆ ಅನೇಕ ಪ್ರೇಮಗೀತೆಗಳು ಪ್ರೀತಿಸುವವರ ಹೃದಯದಲ್ಲಿ ಪ್ರೀತಿಯ ಹೂವು ಅರಳಿಸುವ ಕೆಲಸ ಮಾಡುತ್ತವೆ.
ಫೆಬ್ರವರಿ ತಿಂಗಳು ಬರುತ್ತಿದ್ದಂತೆ ಪ್ರೀತಿಯ ಸಂಗಾತಿಗೆ ಒಂದು ಒಳ್ಳೆಯ ಉಡುಗೊರೆ ಕೊಡಬೇಕು. ಅದರ ಮೇಲೆ ಒಳ್ಳೊಳ್ಳೆಯ ಪ್ರೀತಿಯ ಸಾಲುಗಳನ್ನು ದಾಖಲಿಸಬೇಕೆಂದು ಕಾತುರದಿಂದ ಕಾಯುತ್ತಿರುತ್ತಾರೆ. ಏಕೆಂದರೆ ಅವರಿಗೆ ಆ ದಿನ ಖುಷಿ ಉತ್ಸಾಹ, ನಿರೀಕ್ಷೆಗಳನ್ನು ಹುಟ್ಟು ಹಾಕಿರುತ್ತದೆ. ನೀವು ಸ್ವಲ್ಪ ರೋಮಾಂಚಿತರಾಗಿ ಹಾಗೂ ವ್ಯಾಲೆಂಟೈನ್ ಡೇ ಅಂದರೇನು? ಅದು ಭಾರತಕ್ಕೆ ಹೇಗೆ ಪಾದಾರ್ಪಣೆ ಮಾಡಿ ಯುವಕ- ಯುವತಿಯರ ಹೃದಯವನ್ನು ತಟ್ಟಿತು ಎಂಬುದನ್ನು ತಿಳಿದುಕೊಳ್ಳಿ. ಈ ಪ್ರೀತಿಯ ಹಬ್ಬವನ್ನು ಆಚರಿಸುವ ರೀತಿನೀತಿಗಳು ರೋಚಕವಾಗಿವೆ. ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ ಇದು ವ್ಯಕ್ತಿಯೊಬ್ಬನ ಬಲಿದಾನದ ಕಥೆ ಎಂಬಂತೆ ಕಂಡುಬರುತ್ತದೆ. ಇಟಲಿಯ ವ್ಯಾಲೆಂಟೈನ್ ಎಂಬುವವನು ಪ್ರೀತಿಸಿದ. ಅವನು ಪ್ರೀತಿಸಿದವಳನ್ನು ಪಡೆಯಲು ಅಪಾರ ಪ್ರಯತ್ನ ಮಾಡಿದ. ಆದರೆ ಆಗ ರಾಜ್ಯಭಾರ ನಡೆಸುತ್ತಿದ್ದವನು ಕ್ಲೇಡಿಯಂ. ಅವನು ಅತ್ಯಂತ ಕ್ರೂರಿ ಹಾಗೂ ಯಾವುದಕ್ಕೂ ಜಗ್ಗದ ಸ್ವಭಾವದವನಾಗಿದ್ದ. ಅವನ ಕಾಲದಲ್ಲಿ ಸೈನಿಕರಿಗೆ ಇದ್ದ ಕಠೋರ ನಿಯಮವೆಂದರೆ, ಯಾರೊಬ್ಬರೂ ತಮ್ಮ ಪ್ರೇಯಸಿಯರನ್ನು ಭೇಟಿಯಾಗಿ ಮಾತನಾಡುವಂತಿರಲಿಲ್ಲ. ಮದುವೆ ಕೂಡ ಮಾಡಿಕೊಳ್ಳುವಂತೆ ಒತ್ತಡ ತರುವ ಹಾಗಿರಲಿಲ್ಲ. ಆದರೆ ವ್ಯಾಲೆಂಟೈನ್ ರಾಜನ ಇಚ್ಛೆಗೆ ವಿರುದ್ಧವಾಗಿ ಪ್ರೇಮಿಗಳನ್ನು ಕದ್ದುಮುಚ್ಚಿ ಮದುವೆಯಾಗಲು ಪ್ರೇರೇಪಿಸಿದ. ಪ್ರೇಮಿಗಳನ್ನು ಪರಸ್ಪರ ಒಗ್ಗೂಡಿಸಿದ ಖ್ಯಾತಿ ಅವನಿಗೆ ಸಲ್ಲುತ್ತದೆ. ಕ್ಲೇಡಿಯಂನಿಗೆ ಇದನ್ನು ಸಹಿಸಿಕೊಳ್ಳಲಾಗಲಿಲ್ಲ. ಹೀಗಾಗಿ ಅವನು ವ್ಯಾಲೆಂಟೈನ್‌ಗೆ ಗಲ್ಲು ಶಿಕ್ಷೆ ವಿಧಿಸಿದ. ಇದು ಫೆಬ್ರವರಿ 14, 269ರ ವಿಷಯ.
ವ್ಯಾಲೆಂಟೈನ್‌ಗೂ ಒಬ್ಬ ಗೆಳತಿ ಇದ್ದಳು. ಆಕೆ ಜೈಲರ್‌ನ ಮಗಳು. ತನಗೆ ಗಲ್ಲುಶಿಕ್ಷೆ ವಿಧಿಸುವ ಮುನ್ನ ಅವನು ಆಕೆಗೆ ಒಂದು ಪತ್ರ ಬರೆದಿದ್ದ. ಆ ಬಳಿಕ ಪ್ರತಿವರ್ಷ ಫೆಬ್ರವರಿ 14 ರಂದು ವ್ಯಾಲೆಂಟೈನ್ ದಿನ ಆಚರಣೆ ಆರಂಭವಾಯಿತು. ಅದಕ್ಕಾಗಿ `ವ್ಯಾಲೆಂಟೈನ್ ಡೇ' ಎಂಬ ನಾಮಕರಣ ಆಯಿತು.
ಆರಂಭದಲ್ಲಿ ಜನರು ಪ್ರೀತಿ ತುಂಬಿದ ಪತ್ರ ಕೊಡುತ್ತಿದ್ದರು. ಬಳಿಕ ಪತ್ರದ ಜೊತೆ ಉಡುಗೊರೆ ಕೊಡಲು ಆರಂಭಿಸಿದರು. ಈಗಂತೂ ಮಾರುಕಟ್ಟೆ ತುಂಬಾ ನೂರಾರು ಉಡುಗೊರೆಗಳು ದೊರೆಯುತ್ತವೆ. ಈ ಸಂದರ್ಭಕ್ಕೆ ಯಾವ ಯಾವ ಉಡುಗೊರೆಗಳು ಸೂಕ್ತ ಎನ್ನುವುದನ್ನು ತಿಳಿದುಕೊಳ್ಳಬೇಕು.
ಗುಲಾಬಿ : ಪ್ರೀತಿಯನ್ನು ವ್ಯಕ್ತಪಡಿಸಲು ಗುಲಾಬಿ ಅತ್ಯಂತ ಸೂಕ್ತ ವಿಧಾನವಾಗಿದೆ. ಆದರೆ ಒಂದು ಸಂಗತಿ ನೆನಪಿನಲ್ಲಿರಲಿ. ಪ್ರೇಮಿ ಅಥವಾ ಪ್ರೇಯಸಿಗೆ ಕೊಡುವ ಗುಲಾಬಿ ಹೂವುಗಳ ಸಂಖ್ಯೆ ಕೂಡ ಬಹಳಷ್ಟು ವಿಷಯಗಳನ್ನು ತಿಳಿಸುತ್ತದೆ.
ಪ್ರೀತಿಯನ್ನು ವ್ಯಕ್ತಪಡಿಸಲು ಗುಲಾಬಿ ಹೂವೇ ಸಾಕು. ಕೃತಜ್ಞತೆ ವ್ಯಕ್ತಪಡಿಸಲು ಕೂಡ ಒಂದೇ ಗುಲಾಬಿ ಹೂವು ಕೊಟ್ಟರೂ ಸಾಕು. ಅಭಿನಂದನೆಗೆ 25 ಗುಲಾಬಿ ಹೂವುಗಳನ್ನೊಳಗೊಂಡ ಗುಚ್ಛ, ಯಾವುದೇ ಷರತ್ತುರಹಿತ ಪ್ರೀತಿಗೆ 50 ಗುಲಾಬಿ ಹೂಗಳಿರುವ ಗುಚ್ಛ ಕೊಡಬೇಕು. ಇದರಲ್ಲಿರುವ ಷರತ್ತು ಏನೆಂದರೆ, ಲವರ್ಸ್ ನಾಟ್‌ನಲ್ಲಿ ಕಟ್ಟಿ ಕೊಡಿ.