ಇಂದಿರಾಗೆ ತಮ್ಮ ಮಗ ಗಣೇಶ್ ದ್ವಿತೀಯ ಪಿಯುಸಿ ಪಾಸ್ ಮಾಡಿದ್ದಕ್ಕೆ ಬಹಳ ಖುಷಿಯಾಗಿತ್ತು. ಅವನಿಗೆ ಒಳ್ಳೆಯ ಪರ್ಸೆಂಟೇಜ್ ಸಿಕ್ಕು ಒಳ್ಳೆಯ ಕಾಲೇಜಿನಲ್ಲಿ ಎಂಜಿನಿಯರಿಂಗ್ ಸೀಟ್ ಸಿಕ್ಕಿತ್ತು. ಆದರೆ ಗಣೇಶನ ಕಾಲೇಜ್ ಶುರುವಾದ ಕೂಡಲೇ ಅಮ್ಮ ಮಗನ ನಡುವೆ ಅಂತರ ಹೆಚ್ಚಾಗತೊಡಗಿತು. ಗಣೇಶ್ ಓದು ಹಾಗೂ ಕಾಲೇಜ್‌ನಲ್ಲಿ ವ್ಯಸ್ತನಾಗಿರುತ್ತಿದ್ದ. ಬಿಡುವಿನ ವೇಳೆಯಲ್ಲಿ ಗೆಳೆಯರೊಂದಿಗೆ ಮಾತಾಡುತ್ತಿದ್ದ ಅಥವಾ ಟಿ.ವಿ. ನೋಡುತ್ತಿದ್ದ. ಮನೆಯಲ್ಲಿ ತನ್ನ ಅಮ್ಮನೂ ಇದ್ದಾರೆಂದು ಮರೆತೇಬಿಟ್ಟಿದ್ದ.
ಮೊದಲು ಇಂದಿರಾ ಇಡೀ ದಿನ ಗಣೇಶನ ಕೆಲಸಗಳಲ್ಲಿ ವ್ಯಸ್ತರಾಗಿರುತ್ತಿದ್ದರು. ಆದರೆ ಈಗ ಖಾಲಿ ಕುಳಿತಿರುತ್ತಾರೆ. ಗಣೇಶ್ ಮನೆಯಲ್ಲಿದ್ದರೂ ಅವರು ಏಕಾಂಗಿತನ ಅನುಭವಿಸುತ್ತಿದ್ದಾರೆ. ಅವರು ಅವನೊಂದಿಗೆ ಮಾತಾಡಲೆಂದು ರೂಮಿಗೆ ಹೋದರೆ ಯಾವಾಗಲೂ ಒಂದೇ ಉತ್ತರ ಸಿಗುತ್ತಿತ್ತು. ಅಮ್ಮಾ ನಾನೀಗ ಕೊಂಚ ಬಿಜಿಯಾಗಿದ್ದೀನಿ, ಆಮೇಲೆ ಮಾತಾಡುತ್ತೇನೆ ಎಂದು.ಗಣೇಶನ ಮಾತುಗಳನ್ನು ಕೇಳಿ ಇಂದಿರಾ ಹಳೆಯ ವಿಷಯಗಳನ್ನು ನೆನಪು ಮಾಡಿಕೊಳ್ಳುತ್ತಿದ್ದರು. ಬೆಳಗ್ಗೆ ಬೇಗನೆ ಎದ್ದು ಅವನಿಗೆ ಟಿಫಿನ್ ಮಾಡಿಕೊಡುತ್ತಿದ್ದೆ. ಅವನ ಯೂನಿಫಾರಂ ಒಗೆದು, ಐರನ್ ಮಾಡಿಕೊಡುತ್ತಿದ್ದೆ. ಅವನಿಗೆ ಟಿಫಿನ್ ತಿನ್ನಿಸಿ, ಶೂ ಪಾಲಿಶ್ ಮಾಡಿ ಹಾಕುತ್ತಿದ್ದೆ. ಸ್ಕೂಲ್‌ಬ್ಯಾಗ್ ಹೊತ್ತು, ಸ್ಕೂಲ್ ವ್ಯಾನ್ ಹತ್ತಿಸಿ ಬರುತ್ತಿದ್ದೆ. ಸಂಜೆ ಅವನನ್ನು ಮನೆಗೆ ಕರೆದುಕೊಂಡು ಬಂದು ಅವನಿಗಿಷ್ಟವಾದ ತಿಂಡಿ ಮಾಡಿ ತಿನ್ನಿಸುತ್ತಿದ್ದೆ. ಸಂಜೆ ಇಬ್ಬರೂ ಕೂತು ಮಾತಾಡುತ್ತಿದ್ದೆವು. ಅವನ ಹೋಂವರ್ಕ್ ಹೇಳಿ ಕೊಟ್ಟು ಊಟದ ನಂತರ ಕಥೆ ಹೇಳಿ ಮಲಗಿಸುತ್ತಿದ್ದೆ. ಆದರೆ ಕಾಲ ಕಳೆದಂತೆ ಎಲ್ಲ ಬದಲಾಗಿಹೋಯ್ತು.
ಪೋಷಕರಲ್ಲಿ ಹೆಚ್ಚುತ್ತಿರುವ ಏಕಾಂಗಿತನ
ಇಂದು ಇಂದಿರಾರಂತೆ ಬಹಳಷ್ಟು ಪೋಷಕರು ಏಕಾಂಗಿತನದಲ್ಲಿ ಕಾಲ ಕಳೆಯುತ್ತಿದ್ದಾರೆ. ಇಂಟರ್‌ನೆಟ್ ಮೊಬೈಲ್ ಮತ್ತು ಸೋಶಿಯಲ್ ಮೀಡಿಯಾಗಳು ಯುವ ಜನರ ಜೀವನಶೈಲಿಯನ್ನು ಎಷ್ಟು ವ್ಯಸ್ತರನ್ನಾಗಿ ಮಾಡಿವೆ ಎಂದರೆ ಅವರಿಗೆ ತಮ್ಮ ತಂದೆ ತಾಯಿಯ ಜೊತೆ ಮಾತಾಡಲೂ ಸಹ ಸಮಯವೇ ಇರುವುದಿಲ್ಲ. ಅವರು ತಮ್ಮ ಕೆರಿಯರ್ ಹಾಗೂ ಸ್ನೇಹಿತರಲ್ಲಿ ಎಷ್ಟು ವ್ಯಸ್ತರಾಗಿರುತ್ತಾರೆಂದರೆ, ಅವರಿಗೆ ತಮ್ಮ ಪೋಷಕರ ಏಕಾಂಗಿತನದ ಬಗ್ಗೆ ಯಾವುದೇ ಚಿಂತೆ ಇರುವುದಿಲ್ಲ. ಹೀಗಿರುವಾಗ ಪೋಷಕರ ಬದುಕಿನಲ್ಲಿ ಹತಾಶೆ ಉಂಟಾಗುತ್ತದೆ.
ಬೆಂಗಳೂರಿನ ಲಲಿತಾ ಹೀಗೆ ಹೇಳುತ್ತಾರೆ, “ನನ್ನ ಪತಿ ಹಾಗೂ ಮಗನ ನಡುವಿನ ಅಂತರ ಎಷ್ಟು ಹೆಚ್ಚಾಯಿತೆಂದರೆ ಅವರಿಬ್ಬರೂ ಹಲವಾರು ದಿನಗಳವರೆಗೆ ಪರಸ್ಪರ ಮಾತಾಡುವುದಿಲ್ಲ. ಅರ್ಜುನ್ ಚಿಕ್ಕವನಾಗಿದ್ದಾಗ ಎಲ್ಲ ಚೆನ್ನಾಗಿತ್ತು. ಆದರೆ ಅವನು ಕಾಲೇಜಿಗೆ ಸೇರಿದ ಮೇಲೆ ಬಹಳ ಬಿಜಿಯಾಗಿಬಿಟ್ಟ. “ನಮಗಾಗಿ ಅವನ ಬಳಿ ಟೈಮೇ ಇರುತ್ತಿರಲಿಲ್ಲ. ಕಾಲೇಜಿನಿಂದ ಬಂದರೆ ತನ್ನ ಲ್ಯಾಪ್‌ಟಾಪ್ ಮತ್ತು ಫೋನಿನ ಜೊತೆಯಲ್ಲೇ ಸಮಯ ಕಳೆಯುತ್ತಿದ್ದ. ಸಂಜೆ ಸ್ನೇಹಿತರೊಂದಿಗೆ ಸುತ್ತಾಡಲು ಹೊರಡುತ್ತಿದ್ದ. ಇರಲಿ, ಭಾನುವಾರವಾದರೂ ಇಡೀ ದಿನ ನಮ್ಮ ಜೊತೆಗೆ ಕಳೀತಾನೆ ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದೆ. “ಆದರೆ ಭಾನುವಾರ ಅವನು ಏಳುತ್ತಿದ್ದುದೇ ಬಹಳ ಲೇಟಾಗಿ. ಎಲ್ಲಾದರೂ ಹೊರಡೋಣವೆಂದರೆ ಬರುತ್ತಿರಲಿಲ್ಲ. ಒಮ್ಮೊಮ್ಮೆ ಅವನ ಈ ವರ್ತನೆಯಿಂದ ನನ್ನ ಪತಿಗೆ ಬಹಳ ಸಿಟ್ಟು ಬಂದು ಅವನನ್ನು ಬೈಯುತ್ತಿದ್ದರು. ಅದರಿಂದ ಮನೆಯ ನೆಮ್ಮದಿ ಹಾಳಾಗುತ್ತಿತ್ತು.’
‘ಟೆಕ್ನಾಲಜಿಯಿಂದ ಹೆಚ್ಚಿದ ಅಂತರ : ಈಗ ನಾವು ಫೇಸ್ ಟು ಫೇಸ್ ಮಾತಾಡಲು ಇಚ್ಛಿಸುವುದಿಲ್ಲ. ಆದರೆ ನಮ್ಮ ಫೇಸ್‌ಬುಕ್‌ನಲ್ಲಿ ಟ್ಯಾಗ್ ಮಾಡಲು, ಪೋಸ್ಟ್ ಮತ್ತು ಲೈಕ್ ಮಾಡಲು ಅಭಿರುಚಿ ಇರುತ್ತದೆ. ಟೆಕ್ನಾಲಜಿ ನಮ್ಮನ್ನು ಜನರ ಬಳಿ ಒಯ್ದಿರಬಹುದು. ಆದರೆ ಅದು ನಮ್ಮನ್ನು ನಮ್ಮವರಿಂದ ದೂರ ಮಾಡಿದೆ. ನಾವು ಫೋನ್‌ನಲ್ಲಿ ಎಷ್ಟು ವ್ಯಸ್ತರಾಗಿರುತ್ತೇವೆ ಎಂದರೆ ಪೋಷಕರ ಬಳಿ ಮಾತಾಡಲೂ ಸಮಯ ಇರುವುದಿಲ್ಲ. ಈಗಂತೂ ಮಕ್ಕಳು ವಾಟ್ಸ್ಆ್ಯಪ್ ನಲ್ಲಿ ಅಮ್ಮನಿಗೆ ಮೆಸೇಜ್ ಮಾಡಿ ಅಡುಗೆ ಆಯ್ತಾ? ಆಗಿದ್ದರೆ ನನ್ನ ರೂಮಿಗೆ ತಗೊಂಡು ಬಾ ಅಂತಾರೆ. ಅಥವಾ ನಾನೇ ಬಂದು ತಗೋತೀನೀಂತ ಮೆಸೇಜ್ ಮಾಡ್ತಾರೆ. ಈ ಟೆಕ್ನಾಲಜಿಯಂತೂ ಈಗ ಒಟ್ಟಿಗೆ ಕೂತು ಊಟ ಮಾಡುವ ಪರಂಪರೆಯನ್ನು ಕೊನೆಗೊಳಿಸಿದೆ. ಈಗ ಮಕ್ಕಳು ತಮ್ಮ ಕೋಣೆಯಲ್ಲಿ ಲ್ಯಾಪ್‌ಟಾಪ್‌ನಲ್ಲಿ ಪಿಕ್ಚರ್ ನೋಡುತ್ತಾ ಇಲ್ಲವೇ ಫೇಸ್‌ಬುಕ್‌ನಲ್ಲಿ ಹರಟೆ ಹೊಡೆಯುತ್ತಾ ಊಟ ಮಾಡಲು ಇಚ್ಛಿಸುತ್ತಾರೆ. ಅವರಿಗೆ ಬೈದು ಬಲವಂತವಾಗಿ ಊಟ ತಿನ್ನಿಸಿದರೆ ಅವರು ಇಷ್ಟವಿಲ್ಲದೆ ತಿನ್ನುತ್ತಾರೆ. ಊಟದ ಟೇಬಲ್ ನಲ್ಲಿ ಮಾತಾಡದೆ ಮೌನವಾಗಿರುತ್ತಾರೆ. ಅವರು ಹಾಗೆ ಕುಳಿತಿದ್ದನ್ನು ಕಂಡು ಅಪ್ಪ, ಅಮ್ಮ ಅವರು ರೂಮಿನೊಳಗೇ ತಿಂದಿದ್ದರೆ ಚೆನ್ನಾಗಿತ್ತು ಅಂದುಕೊಳ್ಳುತ್ತಾರೆ.
ಅಮ್ಮನ ಮಾತುಗಳು ಬೇಸರ ತರಿಸುತ್ತವೆ : ಮಕ್ಕಳು ಶಾಲೆ, ಕಾಲೇಜುಗಳಿಗೆ ಸೇರಿಕೊಂಡಾಗ ಅಮ್ಮನ ಮಾತುಗಳು ಅವರಿಗೆ ಬೇಸರ ತರಿಸುತ್ತವೆ. ಇದ್ಯಾಕೋ ಈ ಶರ್ಟ್ ಹಾಕ್ಕೊಂಡಿದ್ದೀಯಾ, ಬೇರೆ ಹಾಕ್ಕೋ, ನಿನ್ನ ಬರ್ಥ್‌ಡೇಗೆ ಕೊಡಿಸಿದ್ದು ಹಾಕ್ಕೊ ಎಂದಾಗ ಅವನು ಅಮ್ಮಾ, ನಿಮಗೆ ಈಗಿನ ಫ್ಯಾಷನ್ ಅರ್ಥವಾಗಲ್ಲ. ಅಂಥಾ ಶರ್ಟ್ ಹಾಕ್ಕೊಂಡು ಕಾಲೇಜಿಗೆ ಯಾರು ಹೋಗುತ್ತಾರೆ ಎನ್ನುತ್ತಾನೆ.
ಇದಂತೂ ಏನೂ ಇಲ್ಲ. ಅಮ್ಮ ಒಂದು ವೇಳೆ ಮನೆಯಿಂದ ಹೊರಟಾಗ ಟಿಫಿನ್ ಪ್ಯಾಕ್ ಮಾಡಿ ಕೊಟ್ಟರೆ ಕೂಡಲೇ ಕೋಪದಿಂದ ನಾನೀಗ ದೊಡ್ಡವನಾಗಿದ್ದೇನೆ ಎನ್ನುತ್ತಾರೆ. ಅಮ್ಮನಿಗೆ ಯಾವಾಗಲೂ ಮಾಡರ್ನ್ ಕಾಲದ ಬಗ್ಗೆ ಹೇಳುತ್ತಾ ಇದು ನಿಮ್ಮ ಕಾಲ ಅಲ್ಲ. ಮಾಡರ್ನ್ ಯುಗ. ನಿಮ್ಮ ಕಾಲದ ವಸ್ತುಗಳೆಲ್ಲಾ ಹಳತಾಗಿಬಿಟ್ಟಿವೆ. ಈಗಂತೂ ಹೈಟೆಕ್ ಯುಗ ಬಂದಿದೆ. ಈಗ ಫೋನು ಹಾಗೂ ವಾಟ್ಸ್ಆ್ಯಪ್‌ನಲ್ಲಿ ಓದ್ತೀವಿ. ನಿಮ್ಮ ಕಾಲದ್ದನ್ನು ನಮಗೆ ಹೇಳೋಕೆ ಬರಬೇಡಿ ಅಂತಾರೆ.
ಸಮವಯಸ್ಕರು ಹಿಡಿಸುತ್ತಾರೆ : ಎಷ್ಟೋ ಬಾರಿ ಅವರಿಗೆ ಸಮಯಸ್ಕರು ಹಿಡಿಸುತ್ತಾರೆ. ಯಾವಾಗಲೂ ಅವರೊಂದಿಗೇ ವ್ಯಸ್ತರಾಗಿರುತ್ತಾರೆ. ಪೋಷಕರನ್ನೇ ಮರೆತುಬಿಡುತ್ತಾರೆ. ಮನೆಗೆ ಬಂದ ಮೇಲೂ ಅವರ ಜೊತೆಯೇ ಫೋನ್‌ನಲ್ಲಿ ಮಾತಾಡುತ್ತಾರೆ. ಅವರ ಬಗ್ಗೆಯೇ ಯೋಚಿಸುತ್ತಿರುತ್ತಾರೆ.
ಗೆಳೆಯರಿಗೆ ಟೈಂ ಇದೆ. ತಂದೆ ತಾಯಿಗೆ ಇಲ್ಲ: ದಿನವಿಡೀ ಗೆಳೆಯರೊಂದಿಗೆ ಇದ್ದರೂ ಮನೆಗೆ ಬಂದ ಮೇಲೂ ತಂದೆತಾಯಿಯರೊಂದಿಗೆ ಮಾತಾಡುವ ಬದಲು ಗೆಳೆಯರಿಗೆ ಫೋನ್ ಮಾಡುತ್ತಿರುತ್ತಾರೆ. ತಡರಾತ್ರಿಯವರೆಗೆ ಗೆಳೆಯರೊಂದಿಗೆ ಚ್ಯಾಟ್ ಮಾಡುತ್ತಿರುತ್ತಾರೆ. ಬೆಳಗ್ಗೆ ತಡವಾಗಿ ಏಳುತ್ತಾರೆ. ನಂತರ ಬೇಗನೆ ರೆಡಿಯಾಗಿ ಕಾಲೇಜಿಗೆ ಓಡುತ್ತಾರೆ. ಅಮ್ಮ ಏನಾದರೂ ಹೇಳಿದರೆ ಅಮ್ಮ, ಈಗ ಟೈಮಿಲ್ಲ, ಸಂಜೆ ಮಾತಾಡೋಣ ಅಂತಾರೆ. ತಂದೆ ತಾಯಿಯರಿಗೆ ಆ ಸಂಜೆ ಯಾವಾಗ ಬರುತ್ತೋ ಅವರಿಗೇ ಗೊತ್ತು. ಈ ಏಕಾಂಗಿತನಕ್ಕೆ ಯುವಜನತೆಯೇ ಜವಾಬ್ದಾರರು ಅಂತೇನಿಲ್ಲ. ತಂದೆ ತಾಯಿಯರೂ ಇಂತಹ ಸಣ್ಣಪುಟ್ಟ ತಪ್ಪುಗಳನ್ನು ಮಾಡುತ್ತಾರೆ. ಅದರಿಂದಾಗಿ ಅವರ ನಡುವೆ ಅಂತರ ಹೆಚ್ಚಾಗುತ್ತದೆ. ನಾವು ಅವರಂತೆ ವರ್ತಿಸಿದರೆ, ಅವರನ್ನು ಅರ್ಥ ಮಾಡಿಕೊಂಡರೆ ಮಕ್ಕಳೂ ಸಮೀಪ ಇರಬಹುದು.
ಎಂದೂ ಹೋಲಿಸಬೇಡಿ : ತಂದೆ ತಾಯಿ ತಮ್ಮ ಮಕ್ಕಳ ಬಳಿ ಆಗಾಗ್ಗೆ ನಾವು ನಿಮ್ಮ ವಯಸ್ಸಿನವರಾಗಿದ್ದಾಗ ಎಲ್ಲ ಕೆಲಸಗಳನ್ನೂ ಒಬ್ಬರೇ ಮಾಡುತ್ತಿದ್ದೆ ಎಂದು ಹೇಳುತ್ತಿರುತ್ತಾರೆ. ಹಾಗೆಲ್ಲ ಹೇಳಬೇಡಿ. ನಿಮ್ಮ ಕಾಲ ಬೇರೆ. ಈಗಿನ ಕಾಲ ಬೇರೆ. ಹೀಗೆ ಹೋಲಿಸುವುದರಿಂದ ಮಕ್ಕಳು ನಿಮ್ಮಿಂದ ದೂರವಾಗುತ್ತಾರೆ. ಅವರು ನಿಮ್ಮ ಮಾತು ಕೇಳುವುದಿಲ್ಲ. ಯಾವಾಗಲೂ ತಮ್ಮ ಲೋಕದಲ್ಲಿ ಮುಳುಗಿರುತ್ತಾರೆ. ಅವರ ಈ ವರ್ತನೆಯಿಂದ ನಿಮಗೆ ಏಕಾಂಗಿತನದ ಅನುಭವವಾಗುತ್ತದೆ.
ಪ್ರತಿಕ್ರಿಯೆಯಿಂದ ಪರಿಸ್ಥಿತಿ ಬಿಗಡಾಯಿಸುತ್ತದೆ : ಮಕ್ಕಳು ತಪ್ಪು ಮಾಡಿದಾಗ ತಂದೆ ತಾಯಿ ಕೂಡಲೇ ಪ್ರತಿಕ್ರಿಯಿಸುತ್ತಾರೆ. ಅವರನ್ನು ಬೈಯತೊಡಗುತ್ತಾರೆ. ನೀವು ಅವಸರದಲ್ಲಿ ಹೀಗೆಲ್ಲಾ ಮಾಡಬೇಡಿ. ಪ್ರೀತಿಯಿಂದ ತಿಳಿ ಹೇಳಿ. ನೀವು ಅವರೊಂದಿಗೆ ಕಠೋರವಾಗಿ ವರ್ತಿಸಿದರೆ ಅವರು ನಿಮ್ಮಿಂದ ದೂರವಾಗುತ್ತಾರೆ.
ಕೊಂಚ ಸ್ವಾತಂತ್ರ್ಯ ಕೊಡಿ : ಮಕ್ಕಳಿಗೆ ಸ್ವಾತಂತ್ರ್ಯಕೊಟ್ಟರೆ ಅವರು ಹಾಳಾಗುತ್ತಾರೆಂದು ತಂದೆ ತಾಯಿ ಯೋಚಿಸುತ್ತಾರೆ. ಆದರೆ ಹಾಗೇನೂ ಇಲ್ಲ. ನೀವು ಅವರನ್ನು ನಿಯಂತ್ರಿಸಿದಷ್ಟೂ ಅವರು ನಿಮ್ಮಿಂದ ದೂರಾಗುತ್ತಾರೆ.
ನಿಮ್ಮನ್ನು ಬದಲಿಸಿಕೊಳ್ಳಿ : ಇಂದು ಪ್ರತಿಯೊಂದೂ ವೇಗವಾಗಿ ಬದಲಾಗುತ್ತಿದೆ. ಹೀಗಾಗಿ ನೀವು ಕೊಂಚ ಬದಲಾಗಲು ಪ್ರಯತ್ನಿಸಿ. ನಿಮ್ಮ ಮಕ್ಕಳು ಯಾವುದರಲ್ಲಿ ಸುಧಾರಣೆ ತರಲು ಹೇಳುತ್ತಾರೋ ಅದರಲ್ಲಿ ಕೊಂಚ ಬದಲಾವಣೆ ತನ್ನಿ. ಮಕ್ಕಳಿಗೆ ಖುಷಿಯಾಗುತ್ತದೆ. ಮನೆಗೆ ಮಕ್ಕಳ ಸ್ನೇಹಿತರು ಬಂದಾಗ ತಂದೆತಾಯಿ ಯಾವ ಡ್ರೆಸ್‌ನಲ್ಲಿದ್ದರೆ ಅದರಲ್ಲಿ ಅವರೆದುರಿಗೆ ಹೋಗಿಬಿಡುತ್ತಾರೆ. ನೀವು ಮನೆಯಲ್ಲಿ ಯಾವ ರೀತಿಯ ಡ್ರೆಸ್‌ನ್ನಾದರೂ ಧರಿಸಿ. ಆದರೆ ಮಕ್ಕಳ ಗೆಳೆಯರ ಮುಂದೆ ಒಳ್ಳೆಯ ಬಟ್ಟೆಗಳನ್ನೇ ಧರಿಸಿ. ಅನೇಕ ಬಾರಿ ನೀವು ಕೂಡ ಅವರ ಗೆಳತಿಯರ ತಾಯಿಯಂತೆ ಜೀನ್ಸ್ ಧರಿಸಬೇಕೆಂದು ಇಚ್ಛಿಸುತ್ತಾರೆ. ಒಂದುವೇಳೆ ನೀವು ದಪ್ಪಗಿದ್ದರೆ ನಿಮಗೆ ವೆಸ್ಟರ್ನ್ ಉಡುಪು ಸರಿಹೊಂದುವುದಿಲ್ಲ.
ಮಕ್ಕಳ ಪಾತ್ರವೇನು?
ಒಂದು ವೇಳೆ ನೀವು ಓದಲೆಂದು ಬೇರೆ ನಗರದಲ್ಲಿದ್ದರೆ ನಿಮ್ಮ ಹಾಗೂ ನಿಮ್ಮ ಮನೆಯವರ ನಡುವೆ ಹೆಚ್ಚು ಅಂತರವಿರಬಾರದು. ನೀವು ಅವರಿಂದ ದೂರವಿದ್ದರೆ ಏನಾಯ್ತು? ಅವರೊಡನೆ ಫೋನ್‌ನಲ್ಲಿ ಮಾತಾಡುತ್ತಿರಿ. ಅನೇಕ ಯುವಕರು ಕೆರಿಯರ್‌ನ ಟೆನ್ಶನ್‌ನಲ್ಲಿ ಎಷ್ಟು ಚಿಂತಿಸುತ್ತಿರುತ್ತಾರೆಂದರೆ ತಂದೆ ತಾಯಿಯರೊಂದಿಗೆ ಅವರ ಸಂಬಂಧ ಕಡಿಮೆಯಾಗುತ್ತದೆ. ಅವರು ಯಾವಾಗಲೂ ತಮ್ಮ ಕೆರಿಯರ್ ಬಗ್ಗೆ ಚಿಂತಿಸುತ್ತಿರುತ್ತಾರೆ. ನೀವು ಅರ್ಥ ಮಾಡಿಕೊಳ್ಳಬೇಕಾದ್ದೆಂದರೆ ಕೆರಿಯರ್ ತನ್ನ ಪಾಡಿಗೆ ತನ್ನ ಜಾಗದಲ್ಲಿರುತ್ತದೆ ಮತ್ತು ಮನೆಯವರು ತಮ್ಮ ಜಾಗದಲ್ಲಿರುತ್ತಾರೆ. ರಜೆಯಲ್ಲಿ ಮನೆಗೆ ಬಂದ ಮಕ್ಕಳು ಆಗಲೂ ಗೆಳೆಯರ ಜೊತೆಯಲ್ಲಿ ವ್ಯಸ್ತರಾಗಿರುತ್ತಾರೆ. ಆದರೆ ನೀವು ಹಾಗೆ ಮಾಡಬೇಡಿ. ನೀವು ತಂದೆ ತಾಯಿಯ ಜೊತೆ ಹೆಚ್ಚು ಸಮಯ ಕಳೆಯಿರಿ. ಅವರೊಂದಿಗೆ ಮಾತಾಡಿ, ಶಾಪಿಂಗ್ ಮಾಡಿ. ಅವರಿಗೆ ಸರ್‌ಪ್ರೈಸ್ ಪ್ಲ್ಯಾನ್ ಮಾಡಿ.
ಒಂದು ವೇಳೆ ಮನೆಯಲ್ಲಿ ನಿಮ್ಮ ತಂದೆ ತಾಯಿಯರೊಂದಿಗೆ ಇದ್ದರೆ ನಿಮ್ಮ ಓದು, ಗೆಳೆಯರು ಮತ್ತು ಕಾಲೇಜಿನಿಂದ ಸ್ವಲ್ಪ ಬಿಡುವು ಪಡೆದು ನಿಮ್ಮ ಮನೆಯರೊಂದಿಗೆ ಕಳೆಯಿರಿ. ಕಾಲೇಜಿನಲ್ಲಿ ಇದ್ದರೆ ಒಮ್ಮೆ ಫೋನ್ ಮಾಡಿ ಅವರನ್ನು ವಿಚಾರಿಸಿ. ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಆಗಾಗ್ಗೆ ಸಿನಿಮಾ ನೋಡುತ್ತಿರಿ. ಎಂದಾದರೂ ತಂದೆ ತಾಯಿಯನ್ನು ಅವರಿಗಿಷ್ಟವಾದ ಸಿನಿಮಾಗೆ ಕರೆದುಕೊಂಡು ಹೋಗಿ. ಹೀಗೆ ಮಾಡುವುದರಿಂದ ತಂದೆ ತಾಯಿ ಹಾಗೂ ಮಕ್ಕಳ ನಡುವೆ ಅಂತರ ಇರುವುದಿಲ್ಲ ಮತ್ತು ಸಂಬಂಧಗಳಲ್ಲಿ ಸಿಹಿ ಇರುತ್ತದೆ.
– ಜಿ.ಕೆ. ಮಂಗಳಾ