ಬೇಸಿಗೆಯ ಉರಿಬಿಸಿಲಲ್ಲಿಯೂ ತುಟಿಗಳು ಒಣಗುವುದು ಅಥವಾ ಒಡೆಯುವುದು ಮಾಮೂಲಿ ವಿಷಯ. ಆದರೆ ಇವುಗಳನ್ನು ನಿಯಮಿತವಾಗಿ ನೋಡಿಕೊಂಡು, ಮನೆಮದ್ದು ನೀಡುತ್ತಿದ್ದರೆ ತುಟಿಗಳನ್ನು ಜೋಪಾನವಾಗಿ ಗಮನಿಸಿಕೊಳ್ಳಬಹುದು. ಆಗ ಅವು ತಾಜಾ ಆಗಿ ನಳನಳಿಸುತ್ತವೆ. ಎಲ್ಲಕ್ಕೂ ಮೊದಲು ನಾವು ತಿಳಿಯಬೇಕಾದುದು ಎಂದರೆ, ಈ ತುಟಿಗಳು ಒಡೆಯುವುದು ಏಕೆ? ತಜ್ಞರ ಪ್ರಕಾರ, ಬೇಸಿಗೆಯಲ್ಲಿ ಹೆಚ್ಚಿದ ಉಷ್ಣತೆ, ಬಿಸಿ ಗಾಳಿ, ಸನ್‌ಸ್ಟ್ರೋಕ್…. ಇತ್ಯಾದಿಗಳ ಕಾರಣ ತುಟಿಗಳು ಒಡೆಯುತ್ತವೆ, ಬಿರಿಯುತ್ತವೆ.
ಮತ್ತಿತರ ಕಾರಣಗಳು :
– ತುಟಿಗಳು ಒಣಗತೊಡಗಿದಂತೆ ನಾವು ಅವನ್ನು ನಾಲಿಗೆಯಿಂದ ಸರಿಕೊಳ್ಳುತ್ತಿದ್ದರೆ, ಜೊಲ್ಲು ತುಟಿಗಳ ಆರ್ದ್ರತೆಯನ್ನು ಹೀರಿಕೊಳ್ಳುತ್ತದೆ. ಇದರಿಂದ ತುಟಿಗಳು ಪದರ ಪದರವಾಗಿ ಬಿಟ್ಟುಕೊಳ್ಳುತ್ತವೆ. ಮೇಲಿನ ಪೊರೆ ಹೋದಂತೆ, ಕೆಳಪದರ ಮೇಲೆ ಬಂದು ಒಣಗುತ್ತದೆ. ಈ ರೀತಿ ತುಟಿಗಳು ಒಡೆಯುತ್ತಲೇ ಇರುತ್ತವೆ.
– ತುಟಿಗಳು ತಮ್ಮ ಆರ್ದ್ರತೆ ಕಳೆದುಕೊಳ್ಳದಿರಲು ಯಾವುದೇ ಗ್ರಂಥಿಗಳಿಲ್ಲ. ಬಿಸಿಗಾಳಿಯಲ್ಲಿ ಡ್ರೈನೆಸ್ ಅಂಶ ಹೆಚ್ಚಿರುತ್ತದೆ. ಅದರಿಂದಾಗಿ ತುಟಿ ಒಡೆಯುತ್ತದೆ. ಹೀಗೆ ತುಟಿಗಳು ಹೆಚ್ಚಾಗಿ ಒಡೆಯುತ್ತಿದ್ದರೆ ಅದು ದೇಹ ಡೀಹೈಡ್ರೇಶನ್‌ಗೆ ತಿರುಗುತ್ತಿದೆ ಎಂದರ್ಥ.
– ನೀವು ನಿಮ್ಮ ತುಟಿಗಳನ್ನು ಸರಿಯಾದ ಸನ್‌ಸ್ಕ್ರೀನ್ ಬಳಸಿ ರಕ್ಷಿಸಿಕೊಳ್ಳದಿದ್ದರೆ, ಆಗಲೂ ಅವು ಬಿರಿಯುತ್ತವೆ.
– ಬೇಸಿಗೆಯಲ್ಲಿ ಧೂಳು, ಮಣ್ಣು, ಪರಿಸರ ಮಾಲಿನ್ಯ ಇತ್ಯಾದಿ ಕಾರಣಗಳಿಂದಲೂ ತುಟಿ ಒಡೆಯುತ್ತದೆ.
– ನಾವು ಬಾಯಿಂದ ಉಸಿರಾಡುತ್ತಿದ್ದರೆ, ಆಗ ಬಿಸಿಗಾಳಿ ತುಟಿಗಳ ಮೇಲಿನಿಂದ ಹೊರಬರುತ್ತದೆ. ಆಗಲೂ ಅದು ತುಟಿ ಒಡೆಯಲು ಕಾರಣವಾಗುತ್ತದೆ.
– ಎಷ್ಟೋ ಸಲ ಕೆಲವು ಟೂಥ್‌ಪೇಸ್ಟ್ ಗಳು ತುಟಿಗಳ ತ್ವಚೆಗೆ ಹೊಂದುವುದೇ ಇಲ್ಲ. ಹಾಗಾದಾಗಲೂ ತುಟಿಗಳು ಒಡೆಯುವುದು ಸಾಮಾನ್ಯ.
– ಎಷ್ಟೋ ಸಲ ಹುಳಿ ಹಣ್ಣುಗಳು, ಜೂಸ್, ಸಾಸ್, ಕೆಚಪ್‌ಗಳು ತುಟಿಗಳಲ್ಲಿ ಅಲರ್ಜಿ ಹುಟ್ಟಿಸುತ್ತವೆ. ಆಗಲೂ ತುಟಿ ಒಡೆಯುವಿಕೆ ತಪ್ಪದು.
– ಕೆಲವು ಬಗೆಯ ಔಷಧಿಗಳ ಸೇವನೆಯಿಂದಲೂ ಹೀಗಾಗುತ್ತದೆ. ಆದ್ದರಿಂದ ಅಂಥ ಔಷಧಿಗಳ ಸೇವನೆ ಅನಿವಾರ್ಯವಾದಾಗ ಹೆಚ್ಚಿನ ಪ್ರಮಾಣದಲ್ಲಿ ನೀರು, ನೀರಾದ ಜೂಸ್, ನೀರು ಮಜ್ಜಿಗೆ, ಎಳನೀರು, ಬಾರ್ಲಿ, ಕಾದ ನೀರು ಇತ್ಯಾದಿ ಕುಡಿಯುತ್ತಿರಬೇಕು.
ಕೇವಲ ಬಿಸಿಲಿನಲ್ಲಿ ಓಡಾಡುವ ಮಹಿಳೆಯರಿಗೆ ಮಾತ್ರವೇ ತುಟಿ ಒಡೆಯುತ್ತದೆ ಅಂತಲ್ಲ. ಮನೆಯಲ್ಲೇ ಇರುವ ಮಹಿಳೆಯರಿಗೂ ಸಹ ಬಿಸಿ ಹಾಗೂ ಶುಷ್ಕ ಹವೆ ತಗಲುತ್ತಿದ್ದರೆ, ಅವರಿಗೂ ತುಟಿ ಒಡೆಯುತ್ತದೆ. ತುಟಿಗಳ ತ್ವಚೆ ಬಹಳ ಸಂವೇದನಾಶೀಲ ಆಗಿರುತ್ತದೆ. ಇದನ್ನು ಸರಿಯಾಗಿ ಲ್ಯೂಬ್ರಿಕ್ರೆಂಟ್ ಮಾಡದಿದ್ದರೆ, ತುಟಿ ಒಡೆಯುವುದು ತಪ್ಪದು.
ಇದಕ್ಕಾಗಿ ಪಾಲಿಸಬೇಕಾದ ಮನೆಮದ್ದು ಹೀಗಿದೆ :
– ಬೇಸಿಗೆಯಲ್ಲಿ ಆದಷ್ಟೂ ಹೆಚ್ಚು ಹೆಚ್ಚು ದ್ರವ ಪದಾರ್ಥ ಸೇವಿಸಿ. ಇದರಿಂದ ದೇಹದ ಮತ್ತು ತುಟಿಗಳ ಆರ್ದ್ರತೆಗಳೆರಡೂ ಹೆಚ್ಚುತ್ತವೆ.
– ಬೆಳಗ್ಗೆ ಬ್ರಶ್ ಮಾಡುವಾಗ, ತುಟಿಗಳು ಡ್ರೈ ಆಗಿವೆ ಎನಿಸಿದರೆ, ಲಿಪ್ ಬ್ರಶ್‌ನ್ನು ಲಘುವಾಗಿ ತುಟಿಗಳ ಮೇಲಾಡಿಸಿ. ನಂತರ ಲಿಪ್‌ಬಾಮ್ ತೀಡಿರಿ.
– ರಾತ್ರಿ ಹೊತ್ತು ಮಲಗುವ ಮುನ್ನ ಪೆಟ್ರೋಲಿಯಂ ಜೆಲ್ಲಿ, ಕೊಬ್ಬರಿ ಎಣ್ಣೆ ಅಥವಾ ಹಾಲಿನ ಕೆನೆ ಹಚ್ಚಬೇಕು. ಇದರಿಂದ ತುಟಿಗಳ ಒಳಭಾಗದ ಆರ್ದ್ರತೆ ಅಲ್ಲೇ ಉಳಿಯುತ್ತದೆ, ಹೊರಭಾಗ ಮೃದುವಾಗುತ್ತದೆ.
– ಮೇಕಪ್ ಮಾಡುವಾಗ ಲಿಪ್‌ಗ್ಲಾಸ್ ಬಳಸುವ ಬದಲು, ಯುವಿ ಕಿರಣಗಳನ್ನು ಸೆಳೆದುಕೊಳ್ಳುವ ಲಿಪ್‌ಬಾಮ್ ಹಚ್ಚಿರಿ. ಇದು ಉತ್ತಮ ಬ್ರ್ಯಾಂಡ್‌ನದೇ ಆಗಿರಬೇಕು.
– ತುಟಿಗಳು ಹೆಚ್ಚು ಒಡೆದಿದ್ದರೆ ಲಿಪ್ ಮಾಯಿಶ್ಚರೈಸರ್ ಮತ್ತು ಲಿಪ್‌ಬಾಮ್ ಎರಡನ್ನೂ ಪ್ರತಿದಿನ 3-4 ಸಲ ಹಚ್ಚಬೇಕು.
– ನಿಮ್ಮ ಆಹಾರದಲ್ಲಿ ಪೋಷಕಾಂಶಗಳು ಧಾರಾಳವಿರಲಿ. ವಿಟಮಿನ್ಸ್, ಹಸಿರು ತರಕಾರಿ, ಸೊಪ್ಪು, ಸೀಸನ್ ಫ್ರೂಟ್ಸ್ ಹೆಚ್ಚಾಗಿ ಬಳಸಬೇಕು.
– ಬೇಸಿಗೆಯಲ್ಲಿ ಎಳನೀರು, ಬಾರ್ಲಿ ನೀರು, ನೀರು ಮಜ್ಜಿಗೆ (ಗಟ್ಟಿ ಮೊಸರಿಗಿಂತಲೂ ಇದು ಉತ್ತಮ) ಇತ್ಯಾದಿ ಧಾರಾಳವಾಗಿ ಸೇವಿಸುತ್ತಿರಬೇಕು. ಇದು ತುಟಿಗಳಿಗೂ ಬಲು ಲಾಭಕಾರಿ.ಇಂದಿನ ಕಾಲದ ಹುಡುಗಿಯರು ಸ್ಲಿಮ್ ಟ್ರಿಮ್ ಆಗುವ ಹುಚ್ಚಿನಲ್ಲಿ, ತಮ್ಮ ಆಹಾರ ಅದರಲ್ಲಿ ಪೌಷ್ಟಿಕಾಂಶ ಇತ್ಯಾದಿ ಗಮನಿಸುವುದೇ ಇಲ್ಲ. ಸದಾ ಜಂಕ್‌ಫುಡ್, ಫಾಸ್ಟ್ ಫುಡ್‌ಗಳಿಗೆ ಮೊರೆಹೋಗುತ್ತಾರೆ. ಹೀಗಾದಾಗ ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳ ಕೊರತೆಯಿಂದ ತುಟಿಗಳು ಹಾಳಾಗುತ್ತವೆ. ಅಷ್ಟು ಮಾತ್ರವಲ್ಲ, ಧೂಮಪಾನ ಮಾಡುವವರ ತುಟಿಗಳ ಪಾಡಂತೂ ಇನ್ನೂ ಕಷ್ಟಕರ.
ತುಟಿಗಳನ್ನು ಸುಂದರವಾಗಿಸಲು ಸಲಹೆಗಳು :
– ತುಸು ಜೇನುತುಪ್ಪ, ಸಕ್ಕರೆ ಮತ್ತು ನಿಂಬೆರಸ ಬೆರೆಸಿದ ಪೇಸ್ಟನ್ನು ಫ್ರಿಜ್‌ನಲ್ಲಿರಿಸಿ. ಸಮಯ ಸಿಕ್ಕಾಗಲೆಲ್ಲ ಈ ಮಿಶ್ರಣವನ್ನು ತುಟಿಗಳಿಗೆ ಸವರಿಕೊಳ್ಳಿ. ಹೊರಗಿನ ಬಿಸಿಲಲ್ಲಿ ಓಡಾಡುವ ಮಹಿಳೆಯರಂತೂ ಇದನ್ನು ವ್ಯಾನಿಟಿ ಬ್ಯಾಗ್‌ನಲ್ಲಿ ಇರಿಸಿಕೊಂಡು ಆಗಾಗ ಸವರಿಕೊಳ್ಳಬೇಕು.
– ತುಟಿಗಳು ಹೆಚ್ಚು ಒಡೆದಿದ್ದರೆ, ಟೊಮೇಟೊ ಪೇಸ್ಟಿಗೆ ತುಪ್ಪ ಬೆರೆಸಿ, ಹಾಲಿನ ಕೆನೆ ಸೇರಿಸಿ ತುಟಿಗಳಿಗೆ ಆಗಾಗ ಸವರುತ್ತಿರಬೇಕು. ಆಗ ತುಟಿಗಳು ಬಲು ಮೃದುವಾಗುತ್ತವೆ. ವ್ಯಾಸಲೀನ್ ತೀಡಿ, ಸಹಜ ಹೊಳಪು ನೀಡಿ.
– ಜಿ. ಸುಮಾ