ಹೀಗಿರಬೇಕು ದೇಶೀ ಅಭಿಮಾನ!

`ಇಶ್ಕ್’ ಚಿತ್ರದಿಂದ ಬಾಲಿವುಡ್‌ನಲ್ಲಿ ಡೆಬ್ಯು ಪಡೆದ ಅಮಾಯ್ರಾ ದಸ್ತೂರ್‌, ಪಕ್ಕಾ ದೇಶೀ ಹುಡುಗಿ. ಹೀಗಾಗಿಯೇ ಜಾಕಿಚಾನ್‌ ಜೊತೆ ನಟಿಸಿದ ನಂತರ ಆಕೆ ಜಾಕಿಯನ್ನು ಬಿಟ್ಟು ಸೋನು ಸೂದ್‌ನ ತಾರೀಫ್‌ ಮಾಡುತ್ತಿದ್ದಾಳೆ. ಜಾಕಿ ಮತ್ತು ಸೋನು ಸೂದ್‌ ಇಬ್ಬರ ಜೊತೆ ಅಮಾಯ್ರಾ `ಕುಂಗ್‌ ಫು ಯೋಗ’ ಚಿತ್ರದಲ್ಲಿ ನಟಿಸಿದ್ದಳು, ಅದರ ಶೂಟಿಂಗ್‌ ಚೀನಾದಲ್ಲೂ ಆಗಿತ್ತು. ಆದರೆ ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರ ಸಂಪೂರ್ಣ ತೋಪಾಗಿದ್ದರೂ, ದಿಶಾ ಪಟಾನಿ ಅಮಾಯ್ರಾರ ಜೊತೆ ಜಾಕಿ ಜೋಧ್‌ಪುರದ ಬಿರು ಬಿಸಿಲಲ್ಲಿ ಕುಣಿದದ್ದು ಮಾತ್ರ ಹಿಟ್‌ ಗೀತೆ ಎನಿಸಿದೆ.

ಸುಶಾಂತ್‌ನ ಲವ್ವಿಡವ್ವಿ ಸ್ಟೈನ್

ಧೋನಿ ಚಿತ್ರದ ಬಯೋಪಿಕ್‌ನಿಂದ ಎಲ್ಲರ ಮೆಚ್ಚುಗೆ ಗಳಿಸಿರುವ ಸುಶಾಂತ್‌ ಸಿಂಗ್‌, ಇತ್ತೀಚೆಗೆ `ರಾಬ್ತಾ’ ಚಿತ್ರದ ಶೂಟಿಂಗ್‌ಗಾಗಿ ಅಮೃತ್‌ಸರದಲ್ಲಿ ಬಿಝಿಯೋ ಬಿಝಿ! ರಮಣ್‌ ಶರ್ಮ ಜೊತೆ ಈತ ಒಂದು ಹಾಡಿನ ಶೂಟಿಂಗ್‌ನಲ್ಲಿದ್ದಾಗ, ಅಲ್ಲಿ ಈತನ ಅಭಿಮಾನಿಗಳು ಹುಚ್ಚೆದ್ದು ಒಮ್ಮಲೇ ಮುಗಿಬಿದ್ದರು. ಅಂತೂ ಪಂಜಾಬ್‌ ಪೊಲೀಸ್‌ ಬಂದು ಪರಿಸ್ಥಿತಿಯನ್ನು ಹತೋಟಿಗೆ ತರಬೇಕಾಯಿತು. ಇತ್ತೀಚೆಗಂತೂ ಪಂಜಾಬ್‌ ಬಾಲಿವುಡ್‌ನ ಎಲ್ಲಾ ಚಿತ್ರಗಳ ಹಾಟ್‌ ಸ್ಪಾಟ್‌ ಆಗುತ್ತಿದೆ. ಸುಲ್ತಾನ್‌, ದಬಂಗ್‌, ಅನುಷ್ಕಾ ಶರ್ಮಾಳ `ಫಿಲ್ಲೋರಿ’ ಸಹ ಇಲ್ಲೇ ಶೂಟ್‌ ಆಗಿದ್ದು.

ಆಮೀರ್‌ನ ಅಳಿಸಿದ ರೇಖಾ

ಇದನ್ನು ಕೇಳಲು ತುಸು ವಿಚಿತ್ರ ಎನಿಸಿದರೂ ಎವರ್‌ಗ್ರೀನ್‌ ಹೀರೋಯಿನ್‌ ಎನಿಸಿದ ರೇಖಾ, ಮಿ. ಪರ್ಫೆಕ್ಷನಿಸ್ಟ್ ಅನ್ನು ಅಳಿಸಿದ್ದು ದಿಟವಂತೆ. ನಡೆದದ್ದು ಇಷ್ಟೆ, `ದಬಂಗ್‌’ ಚಿತ್ರದ ಯಶಸ್ಸು ಕೊಂಡಾಡಲು ಆಮೀರ್‌ ರೇಖಾರನ್ನೂ ಕರೆದಿದ್ದ. ಆ ಪಾರ್ಟಿಯಲ್ಲಿ ರೇಖಾ ಆಮೀರ್‌ಗೊಂದು ಪತ್ರ ನೀಡಿದರು. ಅದರಲ್ಲಿ ಆಮೀರ್‌ ಪಾತ್ರವನ್ನು ಹೊಗಳಿ, ಹಲವು ಹೆಣ್ಣುಮಕ್ಕಳು ಹೃದಯಸ್ಪರ್ಶಿ ಮಾತುಗಳನ್ನು ವ್ಯಕ್ತಪಡಿಸಿದ್ದರು. ಹಾಗೆ ನೋಡಿದರೆ ರೇಖಾ ಆಮೀರ್‌ ಫ್ರೆಂಡ್ಸ್ ಏನಲ್ಲ. ಆಮೀರ್‌ ತಂದೆ ತಾಹೀರ್‌ ರೇಖಾರನ್ನು ನಾಯಕಿಯಾಗಿಸಿ ಚಿತ್ರ ಮಾಡಿದಾಗ, ಈಕೆ ಬಹು ನಖ್ರಾ ತೋರಿಸಿ ಅವರನ್ನು ಬಹಳ ಗೋಳು ಹೊಯ್ದುಕೊಂಡಿದ್ದರಂತೆ. ಬೀ ಟೌನ್‌ಗೆ ಬರುವೆನೆಂದು ಎಣಿಸಿರಲಿಲ್ಲ.

ರೆಮೋ ಡಿಸೋಜಾರ ಹೊಸ ಚಿತ್ರ

ಈ ಚಿತ್ರದ ಎರಡೂ ಭಾಗಗಳಲ್ಲಿ ಕೆಲಸ ಮಾಡಿರುವ ಅಮೆರಿಕನ್‌ ಸುಂದರಿ ಲಾರೆನ್‌ ಗಿಂಟ್‌ಲಿಬ್‌, ತನ್ನ ಕೆರಿಯರ್‌ನ್ನು ಡ್ಯಾನ್ಸ್ನಿಂದಲೇ ಶುರು ಮಾಡಿದ್ದಳು. ಆಕೆ ಪ್ರಕಾರ, ಒಂದು ಅಮೆರಿಕನ್‌ ಶೋನಿಂದ ಆಕೆಗೆ ಆ್ಯಕ್ಟಿಂಗ್‌ನ ಹುಚ್ಚು ಹಿಡಿಯಿತಂತೆ. ಮುಂದೆ ತಾನು ಭಾರತಕ್ಕೆ ಬಂದು ಬಾಲಿವುಡ್‌ನಲ್ಲಿ ತನ್ನ ಕೆರಿಯರ್‌ ರೂಪಿಸಿಕೊಳ್ಳುವೆನೆಂದು ಈಕೆ ಎಂದೂ ಎಣಿಸಿರಲಿಲ್ಲಂತೆ. ಆದರೆ ಈ ಚಿತ್ರದಲ್ಲಿ ಎಂಟ್ರಿ ಸಿಕ್ಕಿದಂತೆ, ಮುಂದೆ ಹಲವು ಚಿತ್ರಗಳಲ್ಲಿ ಐಟಂ ನಂಬರ್‌ ಸಿಗತೊಡಗಿತು. ಹೊರಗಿನಿಂದ ಬರುವವರಿಗೆ ಮಣೆ ಹಾಕುವುದು ಬಾಲಿವುಡ್‌ಗೆ ಮೊದಲಿನಿಂದಲೂ ರೂಢಿ.

ಬಾಲಿವುಡ್‌ನಲ್ಲಿ ದಾರಿ ತಪ್ಪಿದ ಯುವಜನತೆಯ ಕಥೆ

ಚಿತ್ರನಗರಿ ಸೇರಬೇಕೆಂಬ ಹುಚ್ಚಿನಲ್ಲಿ ಬಾಲಿವುಡ್‌ಗೆ ದೌಡಾಯಿಸುವ ಯುವಜನರಿಗೇನೂ ಕೊರತೆ ಇಲ್ಲ. ಅಂಥವರ ಜೀವನ ಸಂಘರ್ಷದ ಕುರಿತಾದುದೇ ಹೊಸ ಚಿತ್ರ `ಜಿಂದಗಿ ಮುಂಬೈ.’ ಇದರ ಶೂಟಿಂಗ್‌ ಭರದಿಂದ ನಡೆಯುತ್ತಿದೆ. ಇದರಲ್ಲಿ ನಟರಾಜ್‌ ಸಿಂಗ್‌, ಕಿರುತೆರೆ ನಟಿ ಸೌಮ್ಯಾ ಶರ್ಮ ಇದ್ದಾರೆ. ಇದರ ಮುಖ್ಯ ವೈಶಿಷ್ಟ್ಯ ಎಂದರೆ, ಇಂದಿನವರೆಗಿನ ಹಿಂದಿ ಸಿನಿಮಾದ ಎಲ್ಲಾ ಘಟಾನುಘಟಿಗಳ ಬಗ್ಗೆ ಅತ್ಯಧಿಕ ಮಾಹಿತಿ ಇಲ್ಲಿ ಸಿಗಲಿದೆಯಂತೆ!

ತಬ್ಬುಗಿಲ್ಲ ತಬ್ಬಿಬ್ಬು!

ಈಗಾಗಲೇ 45 ವಸಂತಗಳನ್ನು ಕಂಡಿರುವ ತಬ್ಬು `ಫಿತೂರ್‌’ ಚಿತ್ರದಲ್ಲಿ ಬೇಗಂ ಖಾನ್‌ ಮತ್ತು `ಮಕ್ಬೂಲ್‌’ನಲ್ಲಿ ನಿಮ್ಮಿಯ ಪಾತ್ರ ವಹಿಸಿ, ತನ್ನ ಸೆಕೆಂಡ್‌ ಇನ್ನಿಂಗ್ಸ್ ಕೂಡ ಭಾರಿ ಧಮಾಕಾ ಮಾಡಲಿದೆ ಎಂದು ನಿರೂಪಿಸಿದ್ದಾಳೆ. ಹಿಂದೆ ತೆಲುಗು ಸೂಪರ್‌ಸ್ಟಾರ್‌ ನಾಗಾರ್ಜುನನ ಪ್ರೇಮದಲ್ಲಿ ಹುಚ್ಚಳಾಗಿದ್ದ ತಬ್ಬು, (ಈಕೆ ಹಿರಿಯ ನಟಿ ಶಬಾನಾ ಆಜ್ಮಿಯ ಅಣ್ಣನ ಮಗಳು) ಇದುವರೆಗೂ ಮದುವೆಯಾಗಿಲ್ಲ! ಇತ್ತೀಚೆಗೆ ಲ್ಯಾಕ್ಮೆ ಫ್ಯಾಷನ್‌ ವೀಕ್‌ ಸಂದರ್ಭದಲ್ಲಿ ಡಿಸೈನರ್‌ ಗೌರಾಂಗ್‌ ವಿನ್ಯಾಸಗೊಳಿಸಿದ ಡ್ರೆಸ್‌ ಧರಿಸಿ ತಬ್ಬು ಮಿಂಚಿದ್ದು ಹೀಗೇ! ಅವಳ ಈ ಅನಾರ್ಕಲಿ ಸೂಟ್‌ ಎಲ್ಲರ ಮೆಚ್ಚುಗೆ ಗಳಿಸಿತ್ತು.

ಸೂಪರ್‌ ಹೀರೋ ರಣಬೀರ್‌

ರಣಬೀರ್‌ ಕಪೂರ್‌ ಇದೀಗ ಅಯಾನ್‌ ಮುಖರ್ಜಿಯವರ `ಡ್ರಾಗನ್‌’ ಹೊಸ ಚಿತ್ರದಲ್ಲಿ ಸೂಪರ್‌ ಹೀರೋ ಆಗಲಿದ್ದಾನೆ. ಈ ಚಿತ್ರದಲ್ಲಿ ಆತ ಮೊದಲ ಸಲ ಆಲಿಯಾ ಅಮಿತಾರ ಜೊತೆ ನಟಿಸುತ್ತಿದ್ದಾನೆ. ಅಯಾನ್‌ರೊಂದಿಗೆ ಈತ ಈಗಾಗಲೇ `ಜಾನಿ ದಿವಾನಿ’ ಹಾಗೂ `ವೇಕ್‌ ಅಪ್‌ ಸಿದ್‌’ ಚಿತ್ರದಲ್ಲಿ ಕೆಲಸ ಮಾಡಿದ್ದಾನೆ. ಅಮಿತಾಭ್ರ ಜೊತೆ ಈಗಾಗಲೇ `ಭೂತನಾಥ್‌’ ಚಿತ್ರದಲ್ಲಿ ಕ್ಯಾಮಿಯೋ ಪಾತ್ರದಲ್ಲಿ ಬಂದುಹೋಗಿದ್ದ. ಈ ಚಿತ್ರದಲ್ಲಿ ಅಮಿತಾಭ್‌ರದ್ದು ವಿಶಿಷ್ಟ ಪಾತ್ರವಾಗಲಿದೆ.

ಪ್ರೇಮಿಯ ಹೆಸರು ಬೇಡ

ಬೇಬಿಗೆ ವರುಣ್‌ ಹೆಚ್ಚು ಇಷ್ಟವೋ ಅಥವಾ ಸಿದ್ಧಾರ್ಥನೋ….? ಈ ಪ್ರಶ್ನೆ ಆಲಿಯಾ ಭಟ್‌ಳೊಂದಿಗೆ ಅವಳು ಇವರಿಬ್ಬರೊಂದಿಗೂ ಕೂಡಿ ನಟಿಸಿದ ಮೊದಲ ಚಿತ್ರ `ಸ್ಟೂಡೆಂಟ್‌ ಆಫ್‌ ದಿ ಇಯರ್‌’ನಿಂದಲೇ ಥಳುಕು ಹಾಕಿಕೊಂಡಿದೆ. ತನ್ನ ಬರಲಿರುವ `ಬದರಿನಾಥ್‌ ಕೀ ದುಲ್ಹನಿಯಾ’ ಚಿತ್ರದ ಪ್ರಮೋಶನ್‌ ಸಂದರ್ಭದಲ್ಲಿ ಮೀಡಿಯಾವನ್ನು ಎದುರಿಸುವಾಗ ಆಲಿಯಾ ಮೊದಲೇ ಹೇಳಿಬಿಟ್ಟಳು, ನನ್ನ ಬಾಯಫ್ರೆಂಡ್‌ ಕುರಿತಾದ ವೈಯಕ್ತಿಕ ಪ್ರಶ್ನೆ ಕೇಳಲೇಬಾರದೂಂತ! ಈ ಸಲ ವ್ಯಾಲೆಂಟೈನ್‌ ಡೇನಂದೂ ಸಹ, ಈ ಬೇಬಿ ವರುಣ್‌ ಜೊತೆ ಚಿತ್ರದ ಪ್ರಮೋಶನ್‌ಗಾಗಿ ಸುತ್ತಿದ್ದೇ ಸುತ್ತಿದ್ದು…. ಆದರೆ ಸಂಜೆ ಮಾತ್ರ ಸಿದ್ಧಾರ್ಥನೊಂದಿಗೇ ಕಳೆದಳು. ಹಾಗಾದರೆ ನಿಜ ಏನು? ನಿಮ್ಮ  ಊಹೆಗೇ ಬಿಟ್ಟಿದ್ದು!

ಸಲ್ಮಾನ್‌ನನ್ನೇ ಆಡಿಕೊಂಡಳಂತೆ!

ವ್ಯಾಲೆಂಟೈನ್‌ ಡೇ ದಿನ ಎಲ್ಲರಿಗೂ ತಮ್ಮ ಅಭಿಮಾನಿಗಳಿಂದ ಪ್ರೀತಿಭರಿತ ಸಂದೇಶಗಳು ಬರುತ್ತವೆ. ಆದರೆ ಬಾಲಿವುಡ್‌ನ ಬ್ಯಾಚುಲರ್‌ ಸಲ್ಮಾನ್‌ ಖಾನ್‌ಗೆ, ನೆರೆರಾಷ್ಟ್ರ ಪಾಕಿಸ್ತಾನದಿಂದ ಬಂದ ಸಂದೇಶವಂತೂ ಅಲ್ಲಾಡಿಸಿಬಿಟ್ಟಿದೆ. ಅಸಲಿಗೆ ನಡೆದದ್ದೇನು? ಸಬಾ ಒಂದು ಟಾಕ್‌ ಶೋನಲ್ಲಿ, ಸಲ್ಮಾನ್‌ ಒಬ್ಬ ದೊಡ್ಡ ಫ್ಲರ್ಟ್‌! ಅವನಿಗೆ ಡ್ಯಾನ್ಸ್ ಆಡಲಿಕ್ಕೂ ಬರಲ್ಲ ಎಂದಿದ್ದಾಳೆ. ಇದು ಆಕೆಯ ಫ್ರಸ್ಟ್ರೇಶನ್ನೋ ಅಥವಾ ಇನ್ನೇನೋ ಗೊತ್ತಾಗುತ್ತಿಲ್ಲ. ಇಷ್ಟರಲ್ಲಿ ಈಕೆ ಇರ್ಫಾನ್‌ ಜೊತೆ ಬೀ ಟೌನ್‌ ಚಿತ್ರಗಳಲ್ಲಿ ಕಾಣಿಸಲಿದ್ದಾಳೆ. ಈಕೆ ಇಷ್ಟೆಲ್ಲಾ  ಬಾಯಿ ಬಡುಕತನ ತೋರಿದರೆ, ಸಲ್ಮಾನ್‌ ಅಭಿಮಾನಿಗಳು ಇವಳ ಚಿತ್ರಗಳಿಗಿಲ್ಲಿ ಉಳಿಗಾಲ ನೀಡುತ್ತಾರೆಯೇ? ಕಾದು ನೋಡೋಣ.

 

ಬದಲಾದ ಕಂಗನಾಳ ಭಾವಲಹರಿ

ಒಮ್ಮೆ ಶಾಹಿದ್‌ ಜೊತೆ ಜಗಳದ ಕಾರಣ, ಮತ್ತೊಮ್ಮೆ  ಈವೆಂಟ್‌ ನಡುವೆ ಇದ್ದಕ್ಕಿದ್ದಂತೆ ತನಗಾದ ವೈಯಕ್ತಿಕ ನಂಬಿಕೆ ದ್ರೋಹದ ಕುರಿತು ಕಣ್ಣೀರುಗರೆಯುತ್ತಾ ವಿವರ ನೀಡುವ ಕಂಗನಾ, ಇತ್ತೀಚೆಗೆ ಬಿಡುಗಡೆಯಾದ ತನ್ನ `ರಂಗೂನ್‌’ ಚಿತ್ರದ ಸಹನಟರಾದ ಶಾಹಿದ್‌, ಸೈಫ್‌ರ ಕುರಿತು ಧಾರಾಳವಾಗಿ ಹೊಗಳಲು ಮರೆಯುವುದಿಲ್ಲ. ಆಕೆ ಹೇಳುತ್ತಾಳೆ, “ಈಗ ನಾನಂತೂ ಫುಲ್ ಖುಷ್‌’ ಇಂಥ ಅಪೂರ್ವ ಕಲಾವಿದರ ಜೊತೆ ಕೆಲಸ ಹಂಚಿಕೊಂಡದ್ದು ನನ್ನ ಭಾಗ್ಯ, ಅದೂ ವಿಶಾಲರ ನಿರ್ದೇಶನದಲ್ಲಿ! `ಓಂಕಾರ’ ಚಿತ್ರದಲ್ಲಿ ಸೈಫ್‌ರ ಕುಂಟ ತ್ಯಾಗಿಯ ಪಾತ್ರ ಹಾಗೂ `ಹೈದರ್‌’ನಲ್ಲಿ ಶಾಹಿದ್‌ರ ಪಾತ್ರ ಮರೆಯುವಂಥದ್ದಲ್ಲ.” ಈ ಅಮ್ಮಣ್ಣಿಯ ಮೂಡ್‌ ಯಾವಾಗ ಬದಲಾಗುತ್ತಿರುತ್ತದೋ ಹೇಳಲಾಗದು.

ಬೀ ಟೌನ್‌ ಚಿತ್ರಗಳಲ್ಲಿ `ಹೋಳಿ’

ಯಾವುದೇ ಹಿಂದಿ ಚಿತ್ರವಿರಲಿ, ಹೋಳಿ ಹಾಡುಗಳ ಚಿತ್ರೀಕರಣವಿಲ್ಲದೆ ಅಪೂರ್ಣವೆನಿಸುತ್ತದೆ. ಅದರಲ್ಲೂ ಈ ಸಂದರ್ಭದಲ್ಲಿ ನಾಯಕಿಯನ್ನು ಛೇಡಿಸುವ ದೃಶ್ಯ ಅನಿವಾರ್ಯ. 1958ರ `ಮದರ್‌ ಇಂಡಿಯಾ’ ಚಿತ್ರದ ಹಾಡಿನಿಂದ ಹಿಡಿದು ಇಂದಿನ ಹೊಸ ಚಿತ್ರದವರೆಗೂ ಹೋಳಿ ಹಾವಳಿ ತಪ್ಪಿದ್ದಲ್ಲ. ಈ ಹೋಳಿ ಹಾಡುಗಳು ಇಂದಿಗೂ ಅಷ್ಟೇ ಜನಪ್ರಿಯ, ಅಭಿಮಾನಿಗಳು ಈ ಹಾಡುಗಳನ್ನು ಇಂದಿಗೂ ಗುನುಗುನಿಸುತ್ತಿರುತ್ತಾರೆ. ಬಾಲಿವುಡ್‌ನಲ್ಲಿ ಹೋಳಿಯ ರಂಗು ಕೇವಲ ಬೆಳ್ಳಿ ಪರದೆಗಷ್ಟೇ ಸೀಮಿತವಲ್ಲ. ಹೋಳಿಯ ಗುಲಾಲು ಎರಚಾಡುವ ಪರಂಪರೆ ಅಂದಿನ ಶೋಮ್ಯಾನ್‌ ರಾಜ್‌ಕಪೂರ್‌, ಅಮಿತಾಭ್‌ ಬಚ್ಚನ್‌ರ ಬಂಗಲೆಗೂ ತಲುಪಿದೆ. ಹಿಂದಿ ಚಿತ್ರರಂಗದ ಎಲ್ಲಾ ಹಿರಿಯ ಕಿರಿಯ ಕಲಾವಿದರೂ ಈ ಹೋಳಿ ಹಾಡುಗಳ ಸ್ಟೆಪ್ಸ್ ಹಾಕುತ್ತಾ ತಮ್ಮದೇ ಲೋಕದಲ್ಲಿ ಮುಳುಗಿಹೋಗುತ್ತಾರೆ. ಅಂದಿನ ಕಾಲದಲ್ಲಿ ಆರ್‌.ಕೆ. ಸ್ಟುಡಿಯೋಸ್‌ನಲ್ಲಿ ಒಂದು ಸಣ್ಣ ಕೃತಕ ಕೊಳ ನಿರ್ಮಿಸಿ, ಅದಕ್ಕೆ ಬಣ್ಣ ತುಂಬಿಸಿ ಚಿತ್ರದ ಎಲ್ಲಾ ಕಲಾವಿದರನ್ನೂ ಅದರಲ್ಲಿ ಮುಳುಗೇಳಿಸಲಾಗಿತ್ತು. ಹೋಳಿಯ ಈ ರಂಗಿನಲ್ಲಿ ಯಾವುದೇ ಭಂಗ ಬರದಂತೆ ಆರ್‌.ಕೆ. ಎಚ್ಚರ ವಹಿಸುತ್ತಿದ್ದರು. ಅಂದ್ರೆ ಹೆಣ್ಣುಮಕ್ಕಳಿಗೆ ಇದರಿಂದ ಯಾವ ಹಾನಿಯೂ ಆಗದಂತೆ ಜಾಗ್ರತೆ ವಹಿಸುತ್ತಿದ್ದರು. ಇಂದಿಗೂ ಹಲವಾರು ಕಲಾವಿದರು ಹೋಳಿಯ ಈ ಪರಂಪರೆ ಮುಂದುವರಿಸಿದ್ದಾರಾದರೂ, ಅಂದಿನ ಆ ಕಾಲದ ಗಮ್ಮತ್ತು ಇಂದಿನ ಯಾಂತ್ರಿಕ ದಿನಗಳಲ್ಲಿಲ್ಲ!

ಪ್ರಸ್ತುತ ಪರಿಸ್ಥಿತಿಗೇ ಫರ್ಹಾನ್‌ ತಾನೇ ಹೊಣೆ

ಫರ್ಹಾನ್‌ ಅಖ್ತರ್‌ರ ಸದ್ಯದ ಆರ್ಥಿಕ ಪರಿಸ್ಥಿತಿ ದಿನೇದಿನೇ ಹದಗೆಡುತ್ತಿದೆ. ಈತ ರಿತೇಶ್‌ ಜೊತೆ ಕಲೆತು ಜಂಟಿ ಕಂಪನಿಯಾದ ಎಕ್ಸೆಲ್‌ ಎಂಟರ್‌ಟೇನ್‌ಮೆಂಟ್‌ ಮೂಲಕ 15 ವರ್ಷಗಳಲ್ಲಿ 16 ಚಿತ್ರಗಳನ್ನು ತಯಾರಿಸಿದ್ದಾರೆ. ಇದರಲ್ಲಿ ಸುಮಾರು 10 ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಕೋಟ್ಯಂತರ ನಷ್ಟ ಉಂಟು ಮಾಡಿವೆ. ಇತ್ತೀಚಿನ ಫರ್ಹಾನ್‌ ಚಿತ್ರ `ರಾಕ್‌ ಆನ್‌-2′ ಹೀನಾಯವಾಗಿ ನೆಲಕಚ್ಚಿತು. ಈ ಕಾರಣ ಇವರಿಬ್ಬರ ನಡುವೆ ಸ್ನೇಹ ಮುರಿದಂತಾಗಿದೆ. ನಂಬಲರ್ಹ ಮೂಲಗಳ ಪ್ರಕಾರ ಫರ್ಹಾನ್‌ ತಮ್ಮ ಕಂಪನಿಯಿಂದ ಪ್ರಸ್ತುತ 4 ಚಿತ್ರಗಳ ನಿರ್ಮಾಣ ಬಂದ್‌ ಮಾಡಿದ್ದಾರೆ. ಅಷ್ಟು ಮಾತ್ರವಲ್ಲ, ಬಿಗಡಾಯಿಸಿದ ಪರಿಸ್ಥಿತಿಯಿಂದಾಗಿ, ಮುಂಬೈನ ಸಾಂತಾಕ್ರೂಝ್ ನಲ್ಲಿರುವ ತಮ್ಮದೇ ಥಿಯೇಟರ್‌ `ಲೈಟ್‌ ಬಾಕ್ಸ್’ನ್ನೂ ಅನಿರ್ದಿಷ್ಟ ಕಾಲ ನಿಲ್ಲಿಸಿದ್ದಾರೆ. ಈತ ಚಿತ್ರ ನಿರ್ಮಾಣಕ್ಕೆ ತೊಡಗಿದಾಗಿನಿಂದ ಆತನ ಕಂಪನಿ ಕುಂಟುತ್ತಾ, ತೆವಳುತ್ತಾ ಸಾಗುತ್ತಿತ್ತು. ಆತನ ಪತ್ನಿ ಅಧುನಾ ಭಬಾನಿಯಿಂದ ಡೈವೋರ್ಸ್‌ ಪಡೆದ ಮೇಲೆ, ಅಚಾನಕ್‌ ಆತನ ಕೆರಿಯರ್‌ ಗ್ರಾಫ್‌ ತೀವ್ರ ಹಾಳಾಗತೊಡಗಿತು! ಅತ್ತ ಆಕೆ ಪ್ರಗತಿಪರ ಬಿಸ್‌ನೆಸ್‌ ನಡೆಸುತ್ತಿದ್ದಾಳೆ. ಬಾಲಿವುಡ್‌ ಪಂಡಿತರ ಪ್ರಕಾರ, ಈತ ಹೆಂಡತಿಯನ್ನು ಕಡೆಗಣಿಸಿ ಶ್ರದ್ಧಾ ಕಪೂರ್‌ಳತ್ತ ವಾಲತೊಡಗಿದಂತೆ, ಮಹಿಳಾ ಅಭಿಮಾನಿಗಳೆಲ್ಲರೂ ಥೂ ಥೂ ಎನ್ನುತಾ ದೂರ ಸರಿದರಂತೆ. ಮತ್ತೊಂದು ಕಾರಣ, ಪಿಆರ್‌ ಕಂಪನಿಯ ದೋಷವಂತೆ. ಪಿಆರ್‌ ಕಂಪನಿಯ ಆಗ್ರಹದ ಕಾರಣವೇ ಫರ್ಹಾನ್‌ `ರಾಕ್‌ ಆನ್‌-2′ ಮಾಡಲು ಮುಂದಾಗಿದ್ದಂತೆ. ಅಷ್ಟು ಹೊತ್ತಿಗೆ ಆತ ಶ್ರದ್ಧಾಳ ಜೊತೆ ಅಫೇರೋ ಅಫೇರಂತೆ! ಹೀಗಾಗಿ ಈತನ ಬಂಡವಾಳದ ಶೇ.10 ಕೂಡ ಹಿಂದಕ್ಕೆ ಬರಲಿಲ್ಲವಂತೆ. ಈ ಚಿತ್ರದ ಕುರಿತಾಗಿ ತಂದೆ ನೀಡಿದ ಸಲಹೆಯನ್ನೂ ಈತ ತಳ್ಳಿಹಾಕಿದ್ದ. ಈಗ ಲೈಟ್‌ ಬಾಕ್ಸ್ ಬಂದ್‌ ಆದ ನಂತರ ಈತನ ಲೈಫ್‌ನಲ್ಲಿ ಯಾವ ಲೈಟ್‌ ಮಿಂಚಲಿದೆಯೋ… ಕಾದು ನೋಡೋಣ!

ಮಕ್ಕಳ ಮೇಲೆ ಒತ್ತಡವಿಲ್ಲ

ತನ್ನ `ಕಾಬಿಲ್’ ಚಿತ್ರದಿಂದ ಈಗಲೂ ತಾನೆಂಥ ಸೂಪರ್‌ಸ್ಟಾರ್‌ ಎಂದು ಸಾಬೀತುಪಡಿಸಿರುವ ನಟ ಹೃತಿಕ್‌ ರೋಷನ್‌, ತನ್ನ ಮಕ್ಕಳ ಕುರಿತಾಗಿ ಸದಾ ಜಾಗೃತನಾಗಿರುತ್ತಾನೆ. ಮಕ್ಕಳ ಮೇಲೆ ಎಂದೂ ನಮ್ಮ ನಿರ್ಧಾರಗಳ ಒತ್ತಡ ಹೇರಬಾರದು, ಅವರು ತಾವೇ ತಮ್ಮ ನಿರ್ಣಯ ತೆಗೆದುಕೊಳ್ಳಲು ಅವಕಾಶ ಕೊಡಬೇಕು. ನನ್ನ ಮಕ್ಕಳು ತೆಗೆದುಕೊಳ್ಳುವ ಉತ್ತಮ ನಿರ್ಧಾರಗಳಿಗೆಂದೂ ಅಡ್ಡಿಪಡಿಸಲಾರೆ, ಎನ್ನುತ್ತಾನೆ.

ಬಾಯ್‌ಫ್ರೆಂಡ್‌ಗೆ ನನ್ನನ್ನು ಹೀಗೆ ನೋಡುವುದೇ ಇಷ್ಟ!

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಜನ ಬೇಕೆಂದೇ ತಮ್ಮ ಪಬ್ಲಿಸಿಟಿಗಾಗಿ ಎಂಥ ಫೋಟೋ ಹಾಕಲಿಕ್ಕೂ ರೆಡಿ! ಇತ್ತೀಚೆಗೆ ಝೀ ಟಿ.ವಿ.ಯ `ಛೋಟಿ ಬಹೂ’ ಧಾರಾವಾಹಿಯಿಂದ ಜನಪ್ರಿಯಳಾದ ನಟಿ ರುಬೀನಾ ತನ್ನ ಬೋಲ್ಡ್ ಬಿಕಿನಿ ಅವತಾರದ ಫೋಟೋಗಳನ್ನು ಇನ್‌ಸ್ಟಾಗ್ರಾಮ್ನಲ್ಲಿ ಶೇರ್‌ ಮಾಡಿಕೊಂಡಳು. ಅದಾದ ಮೇಲೆ ಆಕೆಗೆ ಈ ಫೋಟೋ ಕುರಿತಾಗಿ ಟ್ರೋಲ್‌ ಮಾಡಲಾಯಿತು. ಆಗ ರುಬೀನಾ ಸುಮ್ಮನಿದ್ದಾಳೆಯೇ? ತಕ್ಷಣ ಸೀರೆಯುಟ್ಟ ತನ್ನ ಫೋಟೋ ಹಾಕಿ ಜವಾಬು ನೀಡಿದಳು. ಬಟ್ಟೆ ಬದಲಿಸಿದ ಮಾತ್ರಕ್ಕೆ ನೋಡುಗರ ದೃಷ್ಟಿ ಏಕೆ ಬದಲಾಗಬೇಕು ಎನ್ನುತ್ತಾಳೆ. ಬಿಕಿನಿಯ ಅವತಾರದ ಬಗ್ಗೆ ಕೇಳಿದರೆ, ಅದಕ್ಕೆ ತನ್ನ ಬಾಯ್‌ಫ್ರೆಂಡ್‌ ಅಭಿನವ್ ಗೆ ಅಂಥದೇ ಫೋಟೋ ಇಷ್ಟ ಅಂತಾಳೆ!

ನಚ್‌ಬಲಿಯೇದ ಹೊಸ ತಂಡ ರೆಡಿ!

ಸ್ಟಾರ್‌ ಪ್ಲಸ್‌ನ ಹೊಸ ಶೋ `ನಚ್‌ಬಲಿಯೇ ಸೀಸನ್‌ 8′ ಇಷ್ಟರಲ್ಲೇ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದೆ. ಶ್ಯಾಮಕ್‌ ಡಾರ್‌ ಮತ್ತು ಕರಣ್‌ ಸಿಂಗ್‌ ಗ್ರೋವರ್‌ ಈ ಶೋಗೆ ಜಡ್ಜ್ ಆಗಿರುತ್ತಾರೆ. ಮಿಹಿಕಾ ವರ್ಮ ಆನಂದ್‌, ದಿವ್ಯಾಂಕಾ ತ್ರಿಪಾಠಿ ವಿವೇಕ್‌ ದಹಿಯಾ, ರಾಹುಲ್‌ ದೇವ್ ‌ಮುಗ್ಧಾ ಗೋಡ್ಸೆ ಜೋಡಿಗಳ ನಂತರ ಇದೀಗ ಮತ್ತೊಂದು ಹೊಸ ಜೋಡಿ ಎಂದರೆ `ಬಿಗ್‌ಬಾಸ್‌-10’ರ ಮೋನಾಲಿಸಾ ವಿಕ್ರಾಂತ್‌ ರಜಪೂತ್‌ರದು. ಇವರಿಬ್ಬರೂ ಬಿಗ್‌ಬಾಸ್‌ ಶೋನಲ್ಲೇ ಪ್ರೇಮಿಸಿ ಮದುವೆ ಆದದ್ದಂತೆ!ಹೊಸ ಆಲೋಚನೆ ವಿಚಾರಗಳ ಶೋ ಸ್ಟಾರ್‌ ಇಂಡಿಯಾ  ಟೆಡ್‌ ಜೊತೆಗೂಡಿ ಒಂದು ಹೊಸ ಶೋ `ಟೆಡ್‌ ಟಾಕ್ಸ್ ಇಂಡಿಯಾ ನಯೀ ಸೋಚ್‌’ ಪ್ರಸ್ತುತಪಡಿಸಲಿದೆ, ಇದರಲ್ಲಿ ವಿಶ್ವಾದ್ಯಂತ ಪ್ರೇರಣಾದಾಯಕ ಎನಿಸುವ ವಕ್ತಾರರ ವಿಚಾರಗಳಿರುತ್ತವೆ. ಇದರ ನಿರೂಪಕ ಶಾರೂಕ್‌ ಖಾನ್‌ ಆಗಲಿದ್ದಾನೆ. ಈ ಶೋ ಭಾರತವಿಡೀ ಅನೇಕ ವಿಚಾರಗಳಿಗೆ ಪ್ರೇರಣೆ ನೀಡಲಿರುವುದರಿಂದ ತಾನಿದರ ಭಾಗವಾಗಿದ್ದೇನೆ ಎನ್ನುತ್ತಾಳೆ ನೀತಾ. ಇಂದಿನ ಮೀಡಿಯಾ ಮಾತ್ರವೇ ಪರಿವರ್ತನೆಯ ಸುಳಿಗಾಳಿ ಬೀಸಬಲ್ಲದು ಎನ್ನುತ್ತಾನೆ ಶಾರೂಕ್‌.

ನೋರಾಳಿಗೆ ವಾಸ್ತವತೆಯ ಅರಿವಿದೆ

ಮಾರ್ಕನ್‌ ಸುಂದರಿ ನೋರಾ ಫತೇಹಿ ಇದೀಗ ಬಾಲಿವುಡ್‌ನ ವಾಸ್ತವತೆಯನ್ನು ಚೆನ್ನಾಗಿ ಅರಿತಿದ್ದಾಳೆ. ತನ್ನ ಬೇಳೆ ಇಲ್ಲಿ ಸುಲಭವಾಗಿ ಬೇಯದೆಂದು ಅರಿವಾಗಿದೆ. `ಟೈಗರ್ಸ್‌ ಆಫ್‌ ದಿ ಸುಂದರ್‌ ಬನ್ಸ್’ ಚಿತ್ರದಿಂದ ಬಿ ಟೌನ್‌ ಚಿತ್ರಗಳಿಗೆ ಎಂಟ್ರಿ ಪಡೆದ ಈಕೆಗೆ `ಬಿಗ್‌ ಬಾಸ್‌’ ವೆಲ್ವೆ‌ಟ್‌ನ ಮಣೆ ಹಾಕಿತ್ತು. ಹಲವಾರು ದಿನಗಳಿಂದ ಕೈ ಖಾಲಿ ಮಾಡಿಕೊಂಡು ಕುಳಿತಿರುವ ನೋರಾ, ಇದೀಗ ಮತ್ತೊಂದು ಟಿ.ವಿ. ಶೋನಲ್ಲಿ ಕಾಣಿಸಲಿದ್ದಾಳಂತೆ. ಮೀಡಿಯಾ ಎದುರು, ತಾನು ಇಂಥದೇ ಕ್ಷೇತ್ರಕ್ಕೆ ಸೀಮಿತ ಎಂದು ತೋರಿಸಿಕೊಳ್ಳಲು ಇಷ್ಟವಿಲ್ಲ. ಒಳ್ಳೆಯ ಕಾನ್ಸೆಪ್ಟ್ ದೊರಕಿದರೆ ಟಿ.ವಿ.ಗೆ ವಾಪಸ್‌ ಬರುತ್ತೇನೆ ಎಂದು ಬುರುಡೆ ಬಿಡುತ್ತಾಳೆ.

ಇಂದಿಗೂ ಹೆಣ್ಣು ಇದ್ದಲ್ಲೇ ಇದ್ದಾಳೆ!

ಸೋನಿ ಟಿ.ವಿ.ಯ `ಪೇಶ್ವಾ ಬಾಜಿರಾವ್‌’ನಲ್ಲಿ ಮರಾಠ ಸಾಮ್ರಾಜ್ಞಿಯಾಗಿ ಮೆರೆಯುತ್ತಿರುವ ತಾರಾಬಾಯಿ ಪಾತ್ರದ ಪಲ್ಲವಿ ಜೋಶಿ, ಲೈಂಗಿಕ ಸಮಾನತೆಯ ಕುರಿತಾಗಿ ಹೇಳುತ್ತಾಳೆ. ಇಂದಿಗೂ ಹೆಣ್ಣಿನ ಸ್ಥಿತಿ ಎಲ್ಲಿ ಹಾಸಿದ ಕಂಬಳಿ ಅಲ್ಲೇ ಬಿದ್ದಿದೆ ಅಂತಾರಲ್ಲ, ಹಾಗೆ ಅಲ್ಲೇ ಇದೆ. ಇಂದಿಗೂ ಹೆಣ್ಣು 300 ವರ್ಷಗಳ ಹಿಂದೆ ಎದುರಿಸುತ್ತಿದ್ದ ಅದೇ ಸಮಸ್ಯೆಗಳನ್ನು ಹೊಸ ರೀತಿಯಲ್ಲಿ ಎದುರಿಸುತ್ತಿದ್ದಾಳಷ್ಟೆ. ತನ್ನ ಪಾತ್ರದ ಕುರಿತಾಗಿ ಈಕೆ, “ತಾರಾಬಾಯಿ ಒಬ್ಬ ಬಹದ್ದೂರ್‌ ಮಹಿಳೆ. ಆಕೆ ಮರಾಠ ಸಾಮ್ರಾಜ್ಯದ ರಕ್ಷಣೆಗಾಗಿ ಮೊಘಲರ ವಿರುದ್ಧ ಸಿಡಿದೆದ್ದಳು. ಆದರೆ ಆಗಲೂ ಆಕೆಯನ್ನು ಒಬ್ಬ ಹೆಣ್ಣು ಎಂದೇ ನಿರ್ಲಕ್ಷಿಸಲಾಗಿತ್ತು. ಇಂದಿಗೂ ಹೆಣ್ಣಿನ ಸ್ಥಿತಿ ಹಾಗೆ ಇದೆಯಲ್ಲವೇ?” ಎನ್ನುತ್ತಾಳೆ .

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ