ಚುರಿಚುರಿ ಎನ್ನುವ ಬಿಸಿಲಿನ ಬೇಸಿಗೆ ಬಂದೇಬಿಟ್ಟಿತು! ಈ ಸಂದರ್ಭದಲ್ಲಿ ಟ್ಯಾನಿಂಗ್‌ನಿಂದ ಬಚಾವಾಗಲು ನೀವು ತ್ವಚೆಗೆ ಸುರಕ್ಷಾ ಕವಚ ತೊಡಿಸಲು ಸನ್‌ಸ್ಕ್ರೀನ್ ಬಳಸುತ್ತಿರಬಹುದು. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಬಳಸುತ್ತಿದ್ದೀರಾ? ಯಾವುದನ್ನು ಸುರಕ್ಷಾ ಕವಚ ಎಂದು ನೀವು ಭಾವಿಸಿದ್ದೀರೋ ಅದು ಸಮರ್ಪಕವಾಗಿ ಕುಳಿತಿದೆಯೇ? ಸನ್‌ಸ್ಕ್ರೀನ್ ಎಷ್ಟೇ ಉತ್ತಮ ಬ್ರ್ಯಾಂಡ್‌ನದಾಗಿರಲಿ, ಅದನ್ನು ನೀವು ಸರಿಯಾಗಿ ಬಳಸುವ ಕ್ರಮ ತಿಳಿದಿರದಿದ್ದರೆ ಅದು ನಿಮ್ಮ ಚರ್ಮಕ್ಕೆ ಯಾವ ಪರಿಣಾಮವನ್ನೂ ತರುವುದಿಲ್ಲ. ಹೀಗಿರುವಾಗ ನೀವು ನಿಮ್ಮ ಚರ್ಮವನ್ನು ಸೂರ್ಯನ ಯುವಿ ಕಿರಣಗಳಿಂದ ರಕ್ಷಿಸಲು ಬಯಸಿದರೆ ಈ ಕೆಳಗಿನ ಸಲಹೆಗಳನ್ನು ಅಗತ್ಯ ಗಮನಿಸಿ
ಸರಿಯಾದ ಸನ್‌ಸ್ಕ್ರೀನ್ ಆರಿಸಿ : ಮಾರುಕಟ್ಟೆಯಲ್ಲಿ ಇಂದು ಸನ್‌ಸ್ಕ್ರೀನ್ ಹಲವು ರೂಪಗಳಲ್ಲಿ ಲಭ್ಯ. ಅಂದರೆ ಪೌಡರ್, ಜೆಲ್, ಕ್ರೀಂ ಇತ್ಯಾದಿ. ಈ ಎಲ್ಲಾ ತರಹದ ಸನ್‌ಸ್ಕ್ರೀನ್‌ಗಳೂ ಮಾರುಕಟ್ಟೆಯಲ್ಲಿ ಸುಲಭವಾಗಿ ತರತರಹದ ಬ್ರ್ಯಾಂಡ್‌ಗಳಲ್ಲಿ ಲಭ್ಯ. ಆದರೆ ಅದನ್ನು ಖರೀದಿಸುವ ಮೊದಲು ನಿಮ್ಮ ಸ್ಕಿನ್ ಟೋನ್‌ನ್ನು ಗುರುತಿಸುವುದು ಅತಿ ಮುಖ್ಯ. ಅಸಲಿಗೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಲವು ಸನ್‌ಸ್ಕ್ರೀನ್‌ಗಳು ಚಾಕಿ ಎಫೆಕ್ಟ್ ನೀಡುವಂಥವು ಇವೆ. ಇಂಥ ಸನ್‌ಸ್ಕ್ರೀನ್ ಫೇರ್ ಕಾಂಪ್ಲೆಕ್ಷನ್ನಿನ ಮಹಿಳೆಯರಿಗೆ ಸುಲಭವಾಗಿ ಹೊಂದುತ್ತವೆ. ಆದರೆ ಶ್ಯಾಮಲ ಬಣ್ಣದವರಿಗೆ ಇದು ಗ್ರೇಯಿಶ್ ಎಫೆಕ್ಟ್ ನೀಡುತ್ತದೆ, ಅದು ಕೆಟ್ಟದಾಗಿ ಕಾಣುತ್ತದೆ. ಆದ್ದರಿಂದ ನಿಮ್ಮದು ನಸುಗಪ್ಪು ಬಣ್ಣವಾಗಿದ್ದರೆ, ನೀವು ಮೈಕ್ರೋನೈಸ್ಡ್ ಫಾರ್ಮುಲಾದ ಸನ್‌ಸ್ಕ್ರೀನ್ ಬಳಸಬೇಕು. ಇದರಲ್ಲಿ ಸನ್‌ಸ್ಕ್ರೀನ್ ಎಫೆಕ್ಟ್ ಕಡಿಮೆ ಇದ್ದು, ತ್ವಚೆಯ ಮೇಲೆ ಇದರ ಪದರ ಎದ್ದು ಕಾಣುವುದಿಲ್ಲ. ಆದರೂ ಇದು ಸೂರ್ಯನ ಯುವಿ ಕಿರಣಗಳಿಂದ ನಿಮ್ಮನ್ನು ಸುರಕ್ಷಿತವಾಗಿಡಬಲ್ಲದು. ಇಂಥ ತ್ವಚೆಯ ಮೇಲ್ಪದರದಲ್ಲಿ ನೀರಿನಂಶ ಬಹಳ ಕಡಿಮೆ ಇರುತ್ತದೆ. ಹೀಗಾಗಿ ಇಂಥ ತ್ವಚೆಗೆ ಹೆಚ್ಚು ಮಾಯಿಶ್ಚರೈಸರ್ ಫಾರ್ಮುಲಾದ ಕ್ರೀಂ ಸಹಾಯಕವಾಗುತ್ತದೆ.
ಸಮರ್ಪಕ ಕ್ರಮ ಅಗತ್ಯ : ಸಾಮಾನ್ಯವಾಗಿ ಮಹಿಳೆಯರು ಸನ್‌ಸ್ಕ್ರೀನ್‌ನ್ನು ಚರ್ಮದ ಮೇಲೆ ನೇರವಾಗಿಯೇ ಹಚ್ಚಿಕೊಳ್ಳುತ್ತಾರೆ, ಆದರೆ ಇದು ಸರಿಯಲ್ಲ. ಆದ್ದರಿಂದ ಮೊದಲು ಚರ್ಮಕ್ಕೆ ನೇರವಾಗಿ ಮಾಯಿಶ್ಚರೈಸರ್ ಹಚ್ಚಿಕೊಳ್ಳಬೇಕು. ಅದಾದ 20-30 ನಿಮಿಷಗಳ ನಂತರ, ಸನ್‌ಸ್ಕ್ರೀನ್ ಹಚ್ಚಬೇಕು. ಚರ್ಮ ಮೊದಲೇ ಮಾಯಿಶ್ಚರೈಸರ್‌ನ್ನು ಹೀರಿಕೊಂಡಿದ್ದರೆ ಸನ್‌ಸ್ಕ್ರೀನ್‌ಗೆ ಸರಾಗವಾಗಿ ಕೆಲಸ ಮಾಡಲು ಸಾಧ್ಯ.
ನೀವು ಮುಖಕ್ಕೆ ಮೇಕಪ್ ಮಾಡುತ್ತಿದ್ದರೆ, ಸನ್‌ಸ್ಕ್ರೀನ್ ಬಳಸಿದ ನಂತರ ಈ ಮೇಕಪ್ ಶುರು ಮಾಡಬೇಕು. ಒಂದು ಪಕ್ಷ ನೀವು ಮೇಕಪ್ ಮಾಡುವುದಿಲ್ಲವಾದರೆ, ಸನ್‌ಸ್ಕ್ರೀನ್ ನಿಮ್ಮ ಮುಖಕ್ಕೆ ಹಚ್ಚುವ ಕೊನೆಯ ಪ್ರಸಾಧನವಾಗುತ್ತದೆ.
ಅಸಲಿಗೆ, ಸನ್‌ಸ್ಕ್ರೀನ್ ತ್ವಚೆಯ ಮೇಲೆ ಒಂದು ಸುರಕ್ಷಾ ಪದರ ಆಗಿರುತ್ತದೆ. ಇದರ ಮೇಲೆ ಮೇಕಪ್ ಅಲ್ಲದೆ ಬೇರೇನಾದರೂ ಹಚ್ಚಿದರೆ, ತ್ವಚೆಯ ಮೇಲೆ ಇದರ ಪ್ರಭಾವ ಕಡಿಮೆ ಆಗುತ್ತದೆ. ಅದೇ ತರಹ ಚರ್ಮದ ಮೇಲೆ ನೇರವಾಗಿ ಸನ್‌ಸ್ಕ್ರೀನ್ ಹಚ್ಚಿದರೆ, ಆಗಲೂ ಸನ್‌ಸ್ಕ್ರೀನ್ ತ್ವಚೆಯ ಮೇಲೆ ಉತ್ತಮ ಪ್ರಭಾವಶಾಲಿ ಸುರಕ್ಷಾಕವಚ ಎಂದೆನಿಸುವುದಿಲ್ಲ. ಆಗದು ಸೂರ್ಯನ ಯುವಿ ಕಿರಣಗಳಿಂದ ಸಂಪೂರ್ಣವಾಗಿ ರಕ್ಷಿಸುವಲ್ಲಿಯೂ ವಿಫಲವಾಗುತ್ತದೆ. ಕೆಲವು ಮಹಿಳೆಯರು ತಮ್ಮ ಮಾಯಿಶ್ಚರೈಸರ್‌ನಲ್ಲಿ ಸನ್‌ಸ್ಕ್ರೀನ್ ಲೋಶನ್ ಮಿಕ್ಸ್ ಮಾಡಿ ಹಚ್ಚಿಕೊಳ್ಳುತ್ತಾರೆ. ಈ ಕ್ರಮ ಕೂಡ ಸರಿಯಲ್ಲ. ಇದರಿಂದ ಸನ್‌ಸ್ಕ್ರೀನ್‌ನ ಪ್ರಭಾವವೆಲ್ಲ ಹೋಗಿಬಿಡುತ್ತದೆ.
ಸನ್‌ಸ್ಕ್ರೀನ್ ಹಚ್ಚಿ ಕೊಂಚ ತಡೆಯಿರಿ : ನೀವು ಕೆಮಿಕಲ್ ಬೇಸ್ಡ್ ಸನ್‌ಸ್ಕ್ರೀನ್ ಬಳಸುತ್ತಿರುವಿರಾದರೆ, ಅದನ್ನು ಹಚ್ಚಿದ 20-30 ನಿಮಿಷ ತಡೆದು ನಂತರವೇ ಬಿಸಿಲಿಗೆ ಹೋಗಿ. ಆಗ ಮಾತ್ರ ಕ್ರೀಮ್ ನ ಫಿಲ್ಟರ್ಸ್ ತ್ವಚೆಯ ಮೇಲಿನ ಸುರಕ್ಷಾ ಪದರವಾಗಿ ಪರ್ಫೆಕ್ಟ್ ಆಗಿ ಕೆಲಸ ಮಾಡಬಲ್ಲದು.
ಬಳಸುವಾಗ ಜಿಪುಣತನ ಬೇಡ : ಬಹಳಷ್ಟು ಮಹಿಳೆಯರು ಬಲು ಕಡಿಮೆ ಪ್ರಮಾಣದಲ್ಲಿ ಸನ್‌ಸ್ಕ್ರೀನ್ ಲೋಶನ್ ತೆಗೆದುಕೊಂಡು ಇಡೀ ಮುಖವನ್ನು ಉಜ್ಜಾಡುತ್ತಾರೆ. ಹೀಗೆ ಮಾಡುವುದರಿಂದ ಯಾವುದೇ ಲಾಭವಿಲ್ಲ. ಹೀಗೆ ಸನ್‌ಸ್ಕ್ರೀನ್ ಹಚ್ಚಿಕೊಳ್ಳುವುದು ವ್ಯರ್ಥವೇ ಸರಿ. ಸನ್‌ಸ್ಕ್ರೀನ್ ಹಚ್ಚಿಕೊಳ್ಳುವ ಸರಿಯಾದ ವಿಧಾನವೆಂದರೆ ಸಣ್ಣ ಚಮಚದ ಸುಮಾರು 1/4 ಭಾಗದಷ್ಟು ಸನ್‌ಸ್ಕ್ರೀನ್ ತೆಗೆದುಕೊಂಡು ಮುಖ ಮತ್ತು ಕುತ್ತಿಗೆಗೆ ಸಂಪೂರ್ಣ ಹಚ್ಚಿಕೊಳ್ಳಿ. ಒಂದು ವೇಳೆ ಬಹಳ ಥಿಕ್ ಆಗಿದ್ದರೆ, ಆಗ ಪ್ರಮಾಣವನ್ನು ತುಸು ತಗ್ಗಿಸಬಹುದು.
ನೀವು ಇಡೀ ದೇಹಕ್ಕೆ ಸನ್‌ಸ್ಕ್ರೀನ್ ಹಚ್ಚಬೇಕಿದ್ದರೆ, ಸುಮಾರು 2-3 ಚಮಚ ಸನ್‌ಸ್ಕ್ರೀನ್ ಲೋಶನ್ ಬಳಸಿಕೊಳ್ಳಿ. ಬಹುಶಃ ಇದು ನಿಮಗೆ ಜಾಸ್ತಿ ಅನ್ನಿಸಬಹುದು. ಆದರೆ ನಿಮ್ಮ ದೇಹದ ಮೇಲೆ ಸನ್‌ಸ್ಕ್ರೀನ್ ಲೋಶನ್ನಿನ ಒಂದು ದಪ್ಪ ಪದರ ಹರಡಿಕೊಳ್ಳುವವರೆಗೂ ನಿಮಗೆ ಅದರಿಂದ ಯಾವ ಲಾಭ ಸಿಗುವುದಿಲ್ಲ.
ಬಳಸುವ ವಿಧಾನ : ಸನ್‌ಸ್ಕ್ರೀನ್ ಲೋಶನ್‌ನ್ನು ತ್ವಚೆಗೆ ಬಳಸಬೇಕೆಂದರೆ, ಸಾಮಾನ್ಯ ಕ್ರೀಮುಗಳನ್ನು ಬಳಸುವ ವಿಧಾನಕ್ಕಿಂತ ತುಸು ಭಿನ್ನ. ಎಂದೂ ಸನ್‌ಸ್ಕ್ರೀನ್ ಹಾಕಿ ಮುಖ ಮೈ ಕೈ ಉಜ್ಜಬಾರದು. ಬದಲಿಗೆ ಕೈಗೆ ಹಾಕಿಕೊಂಡು ನಿಧಾನವಾಗಿ ಒಂದೇ ಬದಿಯಿಂದ ಸವರಬೇಕು. ಇದರಿಂದ ತ್ವಚೆಗೆ ಇರಿಟೇಶನ್ ಆಗದು. ಈ ರೀತಿ ಮಾಡುವುದರಿಂದ ಸನ್‌ಸ್ಕ್ರೀನ್ ತ್ವಚೆಯ ಮೇಲೆ ಸರಿಸಮಾನವಾಗಿ ಹರಡಿಕೊಳ್ಳುತ್ತದೆ. ಜೊತೆಗೆ ಮುಖಕ್ಕೆ ಸನ್‌ಸ್ಕ್ರೀನ್ ಸವರುವಾಗ ಅದು ಎಲ್ಲಾ ಭಾಗಗಳಿಗೂ ಸಮನಾಗಿ ಹರಡುತ್ತಿದೆ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ. ಯಾವುದೇ ಭಾಗ ಹಾಗೇ ಉಳಿದುಬಿಡಬಾರದು. ಇದನ್ನು ಎಂದೂ ಉಜ್ಜಿ ಉಜ್ಜಿ ಮೆತ್ತಬೇಡಿ, ಆಗ ಇದು ಒಂದು ಪದರವಾಗಿ ಕುಳಿತು, ಉದುರಿಹೋದೀತು.
ಹಲವು ಸಲ ಹಚ್ಚಿರಿ : ಸಾಮಾನ್ಯವಾಗಿ ಮಹಿಳೆಯರು ಬೆಳಗ್ಗೆ ಮನೆಯಿಂದ ಹೊರಡುವಾಗ, ಸನ್‌ಸ್ಕ್ರೀನ್ ಹಚ್ಚಿಕೊಳ್ಳುತ್ತಾರೆ ಹಾಗೂ ಇಡೀ ದಿನ ಅದನ್ನೇ ಆಧರಿಸಿ ಇದ್ದುಬಿಡುತ್ತಾರೆ. ಆದರೆ ಹೀಗೆ ಮಾಡುವುದು ಸರಿಯಲ್ಲ. ಸನ್‌ಸ್ಕ್ರೀನ್ ಲೋಶನ್‌ನ್ನು ಪ್ರತಿ 2 ಗಂಟೆಗಳಿಗೊಮ್ಮೆ ಹಚ್ಚುತ್ತಿರಬೇಕು. ಅದರಲ್ಲೂ ಮುಖ್ಯವಾಗಿ ನಿಮ್ಮ ಕೆಲಸ ಇಡೀ ದಿನ ಹೊರಗಡೆ ಬಿಸಿಲಲ್ಲಿ ಸುತ್ತಾಡುವಂತಾಗಿದ್ದರೆ ಮತ್ತು ನೀವು ಹೆಚ್ಚು ಬೆವರುವವರಾಗಿದ್ದರೆ….. ಇದನ್ನು ಮರೆಯಬೇಡಿ.
ವ್ಯಾಯಾಮ ಮತ್ತು ಈಜಿಗೆ ಮೊದಲೂ ಸಹ ಅಗತ್ಯ ಸನ್‌ಸ್ಕ್ರೀನ್ ಹಚ್ಚಿರಿ. ಇಷ್ಟು ಮಾತ್ರವಲ್ಲ, ನೀವು ವೆಟ್ ಟಿಶ್ಯೂ ಬಳಸುತ್ತೀರಾದರೆ, ಆಗಲೂ ಸಹ ಮರೆಯದೆ ಸನ್‌ಸ್ಕ್ರೀನ್ ಬಳಸಬೇಕು. ಏಕೆಂದರೆ ಇದರಿಂದ ತ್ವಚೆಯ ಮೇಲೆ ಹಚ್ಚಿದ ಸನ್‌ಸ್ಕ್ರೀನ್ ಹೋಗಿಬಿಡುತ್ತದೆ ಹಾಗೂ ಸೂರ್ಯನ ಸಂಪರ್ಕದಿಂದ ತ್ವಚೆ ಡ್ಯಾಮೇಜ್ ಆಗಬಲ್ಲದು.
ನೀವು ಬಿಸಿಲಿನಲ್ಲಿ ಹೆಚ್ಚು ಓಡಾಡದಿದ್ದರೆ ಹಾಗೂ ದಿನವಿಡೀ ಮನೆಯಲ್ಲೇ ಇರುವವರಾದರೆ, ಆಗ ಮನೆಯಲ್ಲೇ ಕನಿಷ್ಠ 2-3 ಸಲ ಸನ್‌ಸ್ಕ್ರೀನ್ ಹಚ್ಚಿಕೊಳ್ಳಿ. ಆಗ ಮಾತ್ರವೇ ನಿಮ್ಮ ಚರ್ಮ ಸುರಕ್ಷಿತ ಎನ್ನಬಹುದು.
– ಕೆ. ತೃಪ್ತಿ