ಬೇಸಿಗೆಯ ದಿನಗಳಲ್ಲಿ ದೇಹದಿಂದ ಹೆಚ್ಚೆಚ್ಚು ಬೆವರು ಹೊರಹೋಗುವ ಕಾರಣದಿಂದ ನೀರಿನಂಶ ಕಡಿಮೆಯಾಗುತ್ತದೆ. ದೇಹದಲ್ಲಿ ನೀರಿನ ಕೊರತೆಯಿಂದ ಅನೇಕ ಸಣ್ಣಪುಣ್ಣ ಸಮಸ್ಯೆಗಳು ತಲೆದೋರಬಹುದು. ಉದಾಹರಣೆಗೆ ರಕ್ತ ಪರಿಚಲನೆಯಲ್ಲಿ ಏರಿಳಿತ, ದೇಹದ ಉಷ್ಣಾಂಶ ಹೆಚ್ಚುವಿಕೆ, ಆಹಾರ ಸರಿಯಾಗಿ ಪಚನ ಆಗದೇ ಇರುವುದು. ಇದರ ಹೊರತಾಗಿ ನೀರಿನ ಕೊರತೆ ಮೂತ್ರಪಿಂಡ ಹಾಗೂ ಕರುಳಿನ ಮೇಲೂ ಅಡ್ಡ ಪರಿಣಾಮ ಬೀರಬಹುದು. ದೇಹದಲ್ಲಿ ನೀರಿನ ಕೊರತೆ ಚರ್ಮಕ್ಕೂ ಹಾನಿಯನ್ನುಂಟು ಮಾಡಬಹುದು. ಚರ್ಮದ ಮೇಲೆ ಮೊಡವೆ ಬೊಕ್ಕೆ ಹಾಗೂ ಕಪ್ಪು ಕಲೆಗಳು ಉಂಟಾಗಬಹುದು. ದೇಹಕ್ಕೆ ಎಷ್ಟು ಪ್ರಮಾಣದ ನೀರಿನ ಅಗತ್ಯವಿದೆ ಎಂಬುದು ಹಲವು ಸಂಗತಿಗಳನ್ನು ಅವಲಂಬಿಸಿರುತ್ತದೆ. ನೀವು ಏನು ಕೆಲಸ ಮಾಡುತ್ತೀರಿ, ಅದರಲ್ಲಿ ಎಷ್ಟು ಪ್ರಮಾಣದ ದೈಹಿಕ ಶ್ರಮದ ಅಗತ್ಯವಿದೆ, ನೀವು ಕೆಲಸ ಮಾಡುವ ಸ್ಥಳದಲ್ಲಿ ಉಷ್ಣಾಂಶ ಎಷ್ಟಿದೆ ಮುಂತಾದ ಸಂಗತಿಗಳು ಮಹತ್ವ ಪಡೆದುಕೊಳ್ಳುತ್ತವೆ. ಹವಾನಿಯಂತ್ರಿತ ವ್ಯವಸ್ಥೆಯಲ್ಲಿ ಕೆಲಸ ಮಾಡುವವರು ಕಡಿಮೆ ಪ್ರಮಾಣದಲ್ಲಿ ನೀರು ಕುಡಿಯುತ್ತಾರೆ. ಏಕೆಂದರೆ ಅವರಿಗೆ ನೀರಡಿಕೆ ಆಗುವುದಿಲ್ಲ. ಆದರೆ ಹವಾನಿಯಂತ್ರಿತ ವ್ಯವಸ್ಥೆಯಲ್ಲಿ ಹೆಚ್ಚು ಹೊತ್ತು ಕೆಲಸ ಮಾಡುವುದರಿಂದ ದೇಹ ನಿರ್ಜಲೀಕರಣಕ್ಕೆ ತುತ್ತಾಗುತ್ತದೆ. ಇದರ ಮತ್ತೊಂದು ದುಷ್ಪರಿಣಾಮವೆಂದರೆ, ದೇಹದಲ್ಲಿನ ಅತ್ಯವಶ್ಯಕ ಪೋಷಕಾಂಶಗಳು ಕೂಡ ಕಡಿಮೆಯಾಗುತ್ತವೆ.
ನಮ್ಮನ್ನು ನಾವು ಹೈಡ್ರೇಟ್ ಮಾಡಿಕೊಳ್ಳುವ ಒಂದು ಒಳ್ಳೆಯ ವಿಧಾನವೆಂದರೆ, ದಿನಕ್ಕೆ 8-10 ಗ್ಲಾಸ್ ನೀರನ್ನು ಅವಶ್ಯವಾಗಿ ಕುಡಿಯಬೇಕು. ನೀರಿನ ಹೊರತಾಗಿ ನಾವು ಇತರೆ ವಿಧಾನಗಳು ಅಂದರೆ ಆಹಾರ ಪದಾರ್ಥಗಳ ಮೂಲಕ ನೀರಿನ ಕೊರತೆಯನ್ನು ನೀಗಿಸಿಕೊಳ್ಳಬಹುದು.
ಹಣ್ಣು ಹಾಗೂ ತರಕಾರಿಗಳು ನೈಸರ್ಗಿಕ ರೀತಿಯಲ್ಲಿ ದೇಹಕ್ಕೆ ನೀರನ್ನು ಒದಗಿಸುತ್ತವೆ ಹಾಗೂ ದೇಹಕ್ಕೆ ಹಲವು ಮಹತ್ವದ ಪೋಷಕಾಂಶಗಳನ್ನು ನೀಡುತ್ತವೆ. ನೀರು ಹಾಗೂ ಪೋಷಕಾಂಶಗಳ ಹೊರತಾಗಿ ಹಣ್ಣು ಮತ್ತು ತರಕಾರಿಗಳು ನಾರಿನಂಶವನ್ನೂ ನೀಡುತ್ತವೆ.
ಇದರ ಹೊರತಾಗಿ ಹಲವು ಬಗೆಯ ಆಹಾರ ಪದಾರ್ಥಗಳು ನಮ್ಮ ದೇಹದಲ್ಲಿ ನೀರಿನ ಪ್ರಮಾಣವನ್ನು ಹೆಚ್ಚಿಸುತ್ತವೆ.
ಪಾನಕ
ಕಲ್ಲಂಗಡಿ, ಕರ್ಬೂಜ, ಕಿತ್ತಳೆ, ಮೂಸಂಬಿ, ಪಪ್ಪಾಯಿ, ದಾಳಿಂಬೆ, ಬೇಲದ ಹಣ್ಣುಗಳ ರಸ ದೇಹಕ್ಕೆ ತಂಪು ನೀಡುತ್ತವೆ. ಜೊತೆಗೆ ಹಲವು ಪೋಷಕಾಂಶಗಳನ್ನು ದೊರಕಿಸಿಕೊಡುತ್ತವೆ.
ಮಜ್ಜಿಗೆ/ಲಸ್ಸಿ
ಮೊಸರಿಗೆ ಸ್ವಲ್ಪ ಪ್ರಮಾಣದಲ್ಲಿ ನೀರು ಬೆರೆಸಿ ಮಜ್ಜಿಗೆ ತಯಾರಿಸಿ ಕುಡಿಯಬಹುದು ಅಥವಾ ಅದರಲ್ಲಿ ಸಕ್ಕರೆ ಹಾಗೂ ಇತರೆ ಕೆಲವು ಪದಾರ್ಥಗಳನ್ನು ಹಾಕಿ ಲಸ್ಸಿ ತಯಾರಿಸಬಹುದು. ಲಸ್ಸಿ ತಂಪಿನ ಅನುಭೂತಿ ನೀಡುತ್ತದೆ. ಮಜ್ಜಿಗೆ ನೀರಿನ ಅತ್ಯುತ್ತಮ ಮೂಲ. ಅದು ಮಲಬದ್ಧತೆಗೆ ಮುಕ್ತಿ ದೊರಕಿಸಿಕೊಡುತ್ತದೆ. ಇದು ಪಚನಕ್ರಿಯೆಯನ್ನು ಮತ್ತಷ್ಟು ತೀವ್ರಗೊಳಿಸುತ್ತದೆ.
ಸೂಪ್
ಕ್ಯಾರೆಟ್, ಟೊಮೇಟೊ, ಎಲೆಕೋಸು, ಅಣಬೆ ಮತ್ತು ಸ್ಪ್ರಿಂಗ್ ಆನಿಯನ್ ಮುಂತಾದವುಗಳನ್ನು ಸೇರಿಸಿ ತೆಳ್ಳನೆಯ ಸೂಪ್ ತಯಾರಿಸಬಹುದು. ಈ ಸೂಪ್ ನೀರು ಹಾಗೂ ಇತರೆ ಪೋಷಕಾಂಶಗಳನ್ನು ದೊರಕಿಸಿಕೊಡುವುದರ ಜೊತೆ ಜೊತೆಗೆ ಹೆಚ್ಚುವರಿ ಕ್ಯಾಲೋರಿಯಿಂದಲೂ ರಕ್ಷಿಸುತ್ತದೆ.
ಫ್ರೂಟ್ ಸ್ಮೂದಿ
ಹಣ್ಣು, ಹಾಲು, ಕಡಲೆಬೀಜ, ವೆನಿಲಾ ಎಸೆನ್ಸ್ ಇವನ್ನೆಲ್ಲ ಏಕಕಾಲಕ್ಕೆ ಬ್ಲೆಂಡ್ ಮಾಡಿ ಸ್ಮೂದಿ ತಯಾರಿಸಿಕೊಳ್ಳಬಹುದು. ಅದು ಕೇವಲ ತಂಪನ್ನಷ್ಟೇ ನೀಡುವುದಿಲ್ಲ, ಕ್ಯಾಲ್ಶಿಯಂ, ಪ್ರೋಟೀನ್, ವಿಟಮಿನ್‌ನ ಅತ್ಯುತ್ತಮ ಮೂಲ ಹೌದು.
– ಪಿ.ಕೆ. ಜಲಜಾ