ನಟಿ, ಉದ್ಯಮಿ
ಫಿಟ್ನೆಸ್ ಐಕಾನ್ ಶಿಲ್ಪಾ ತಮ್ಮ ಎರಡನೇ ಇನಿಂಗ್ಸ್ ನಲ್ಲಿ ಯಶಸ್ವೀ ಉದ್ಯಮಿ ಎನಿಸಿ, ಮದುವೆ ಆದಮಾತ್ರಕ್ಕೆ ಹೆಣ್ಣು ತನ್ನ ಅಸ್ತಿತ್ವ ಮುಗಿಯಿತು ಎಂದುಕೊಳ್ಳಬಾರದು ಎಂಬುದನ್ನು ಸಾಬೀತುಪಡಿಸಿದ್ದಾರೆ!
ಯಶಸ್ವೀ ನಟಿ, ಯಶಸ್ವೀ ಬಿಸ್ನೆಸ್ ವುಮನ್, ಬ್ಯೂಟಿಫುಲ್ ಲೈಫ್ ಜೊತೆ ಕೇರಿಂಗ್ ಮದರ್ ಅನಿಸಿರುವ ಶಿಲ್ಪಾಶೆಟ್ಟಿ ಕುಂದ್ರಾ ತಮ್ಮ ಫಿಟ್ನೆಸ್ ಗ್ಲಾಮರ್ನಿಂದ ಇಂದಿಗೂ ಬಾಲಿವುಡ್ನಲ್ಲಿ ಹೊಸ ನಟಿಯರಿಗೆ ಭಯ ಹುಟ್ಟಿಸುತ್ತಾರೆ. ಇತ್ತೀಚೆಗೆ ಈಕೆ ತಮ್ಮ ಫಿಟ್ನೆಸ್ ಚಾನೆಲ್ ಮೂಲಕ ಜನರಿಗೆ ಆರೋಗ್ಯ ಮತ್ತು ಆಹಾರದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಮಾಡೆಲಿಂಗ್ ನಂತರ 1993ರಲ್ಲಿ `ಬಾಝಿಗರ್’ ಚಿತ್ರದಿಂದ ಎಂಟ್ರಿ ಕೊಟ್ಟ ಈಕೆ, ಹಲವಾರು ಯಶಸ್ವೀ ಚಿತ್ರಗಳ ನಾಯಕಿ ಎನಿಸಿದ್ದಾರೆ. ಕನ್ನಡದಲ್ಲಿ `ಪ್ರೀತ್ಸೋದ್ ತಪ್ಪಾ, ಆಟೋ ಶಂಕರ್’ ಚಿತ್ರಗಳಲ್ಲಿ ಮಿಂಚಿದ್ದಾರೆ. ತಮಿಳು, ತೆಲುಗು ಚಿತ್ರಗಳಲ್ಲೂ ಈಕೆ ಹೆಸರುವಾಸಿ. ಮುಖ್ಯವಾಗಿ ಈಕೆ ಬ್ರಿಟಿಷ್ ಟಿ.ವಿ ಶೋ `ಬಿಗ್ ಬ್ರದರ್’ನಲ್ಲಿ (ನಮ್ಮಲ್ಲಿನ ಬಿಗ್ಬಾಸ್ನಂತೆ) ತನ್ನ ಕುರಿತಾಗಿ ವರ್ಣಭೇದ ನೀತಿ ತೋರಿದವರನ್ನು ಖಂಡಿಸಿ, ಅದರಲ್ಲಿ ವಿನ್ನರ್ ಆಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡರು. ಪಕ್ಕಾ ವಾಣಿಜ್ಯೋದ್ಯಮಿ ರಾಜ್ ಕುಂದ್ರಾರೊಂದಿಗೆ ಮದುವೆಯಾಗಿ, ಆಕೆ ಸಿನಿ ಪ್ರೊಡ್ಯೂಸರ್ ಮಾತ್ರವಲ್ಲದೆ, ವರೆಗೂ ತಮ್ಮ ನೈಪುಣ್ಯ ಪ್ರದರ್ಶಿಸಿದರು. ಈಕೆ ತಮ್ಮ 4 ವರ್ಷದ ಮಗ ವಿಯಾನ್ನ ಜವಾಬ್ದಾರಿ ಜೊತೆಗೆ ಫಿಟ್ನೆಸ್ ಬಿಸ್ನೆಸ್ ಹೇಗೆ ಸಂಭಾಳಿಸುತ್ತಾರೆ, ತಿಳಿಯೋಣ ಬನ್ನಿ.
ನೀವು ಯಶಸ್ವೀ ಉದ್ಯಮಿ ಎನಿಸಿದ್ದೀರಿ. ಬಿಸ್ನೆಸ್ಗೆ ನಿಮಗೆ ಎಲ್ಲಿಂದ ಪ್ರೇರಣೆ ಸಿಕ್ಕಿತು? ಇದನ್ನು ಹೇಗೆ ಆರಂಭಿಸಿದಿರಿ?
ನಾನು ಕುಂದ್ರಾ ಆಗುವ ಮೊದಲು ಶೆಟ್ಟಿ, ಮಂಗಳೂರಿನವಳು! ನಮ್ಮಂಥ ಶೆಟ್ಟಿಯವರಿಗೆ ರಕ್ತದಲ್ಲೇ ಬಿಸ್ನೆಸ್ ಬೆರೆತಿರುತ್ತದೆ. ನನ್ನ ಅಪ್ಪ ಬಿಸ್ನೆಸ್ ಮ್ಯಾನ್, ಹಾಗಾಗಿ ಬಾಲ್ಯದಿಂದಲೇ ಆ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದೆ. ಸಿನಿಮಾಗೆ ಮುಂಚೆ ನಾನು ಮಾಡೆಲಿಂಗ್ ಮಾಡುತ್ತಿದ್ದೆ. ಆಗಲೇ ನಾನು ಮುಂದೆ ಬಿಸ್ನೆಸ್ಗೆ ಇಳಿಯಬೇಕೆಂದು ಐಡಿಯಾ ಹಾಕಿಕೊಂಡಿದ್ದೆ. ಒಬ್ಬ ಉದ್ಯಮಿಯ ಕೈಹಿಡಿದು, ನಾನೂ ಸೀರಿಯಸ್ ಆಗಿ ಈ ಕ್ಷೇತ್ರಕ್ಕೆ ಇಳಿಯಬೇಕೆನಿಸಿತು. ಹಾಗಾಗಿ ಶುರು ಮಾಡಿದೆ. ಕೇವಲ ಹಣಕ್ಕಾಗಿ ನಾನು ಬಿಸ್ನೆಸ್ ಮಾಡುತ್ತಿಲ್ಲ. ಯಾರಾದರೂ ಬಂದು ನನಗೆ ಈ ಹೊಸ ಪ್ರಾಜೆಕ್ಟ್ ನಲ್ಲಿ ಬೇಕಾದಷ್ಟು ಹಣ ಬರುತ್ತದೆ ಎಂದರೆ, ಅದು ನನಗೆ ಇಷ್ಟವಾಗದಿದ್ದ ಪಕ್ಷದಲ್ಲಿ, ಅದರಲ್ಲಿ ಕೋಟ್ಯಂತರ ಲಾಭ ಬಂದರೂ ಆ ಬಿಸ್ನೆಸ್ ನನಗೆ ಬೇಡ!
ರಾಜ್ ಹೇಳುವ ಪ್ರಕಾರ, ನನ್ನ ಮನಸ್ಸಿಗೆ ಬಹಳ ಒಪ್ಪಿದಂಥ ಕ್ಷೇತ್ರ ಆರಿಸಿಕೊಂಡೆ. ಹಾಗಾಗಿ ಸಿನಿಮಾ ನಿರ್ಮಾಣಕ್ಕೆ ಬಂದೆ. ಇದೇ ಇಂಡಸ್ಟ್ರಿಯಲ್ಲಿ ಮೊದಲಿನಿಂದ ಇದ್ದವಳು, ಇದರ ಆಗುಹೋಗುಗಳ ಪಕ್ಕಾ ಅರಿವಿದೆ. ನಟಿಸುವಾಗಿನಿಂದಲೇ ಮುಂದೆ ನಾನು ನಿರ್ಮಾಪಕಿ ಆಗಲೇಬೇಕೆಂಬ ಆಸಕ್ತಿ ಹೊಂದಿದ್ದೆ. ನನ್ನ ನಿರ್ಮಾಣದ ಮೊದಲ ಚಿತ್ರ ಅಷ್ಟೇನೂ ಹಿಟ್ ಎನಿಸಲಿಲ್ಲ. ಅದಾದ ಮೇಲೆ ನಾನು ಫಿಟ್ನೆಸ್ ದಂಧೆಗಿಳಿದೆ, ಫಿಟ್ನೆಸ್ ಚಾನೆಲ್ ಆರಂಭಿಸಿದೆ. ಹೆಲ್ತ್ ಬಗ್ಗೆ ಒಂದು ಬುಕ್ ಬರೆದೆ. ಆನ್ಲೈನ್ ಬಿಸ್ನೆಸ್ ಸಹ ನಡೀತಿದೆ, ಅಲ್ಲಿನ ರೆಸ್ಪಾನ್ಸ್ ಎಷ್ಟೋ ಉತ್ತಮ.
ನೀವು ಫಿಟ್ನೆಸ್ ಐಕಾನ್ ಆಗಿರುವಿರಿ. ಹಾಗಿರುವಾಗ ಉದ್ಯೋಗಸ್ಥ ವನಿತೆಯರಿಗೆ ಈ ಕುರಿತಾಗಿ ನಿಮ್ಮ ಸಲಹೆಗಳೇನು?
ಫಿಟ್ನೆಸ್ನಿಂದ ಮಾತ್ರ ನಿಮ್ಮ ಸೌಂದರ್ಯ, ಗ್ಲಾಮರ್ ಎದ್ದು ತೋರುತ್ತದೆ ಎಂದು ನಾನು ನಂಬುತ್ತೇನೆ. ಆದರೆ ನಿಮ್ಮ ಚರ್ಮ ಹೆಚ್ಚಿನ ಗ್ಲೋ ಪಡೆಯಲು ನೀವು ಆಂತರಿಕ ಆರೋಗ್ಯ ಕಾಪಾಡಿಕೊಳ್ಳಲೇಬೇಕು. ನಿಮ್ಮ ದೈನಂದಿನ ವ್ಯಾಯಾಮದ ಜೊತೆ ಆಹಾರದ ಅಭ್ಯಾಸಗಳೂ ಪರ್ಫೆಕ್ಟ್ ಆದಾಗ ಮಾತ್ರ ಇದು ಸಾಧ್ಯ. ಸಮಯದ ಕೊರತೆ ಯಾರಿಗಿಲ್ಲ ಹೇಳಿ, ಹಾಗೇಂತ ಯಾವುದೋ ಸಮಯದಲ್ಲಿ ಏನೋ ಒಂದಷ್ಟು ತಿಂದು ಹಸಿವೆ ಹಿಂಗಿಸುವುದಲ್ಲ. ನ್ಯೂಟ್ರಿಷನಿಸ್ಟ್ ರ ಸಲಹೆ ಪಡೆಯಿರಿ, ಅದರಂತೆ ನಡೆದುಕೊಳ್ಳಿ. ಆಗಾಗ ಇಂಟರ್ನೆಟ್ ಪರೀಕ್ಷಿಸುತ್ತಿರಿ. ನಿಮಗೆ ಬೇಕಾದಷ್ಟು ಮಾರ್ಗದರ್ಶನ ಸಿಗುತ್ತದೆ. ಇದು ತುಸು ಕಷ್ಟ, ಆದರೆ ಅಸಾಧ್ಯವೇನಲ್ಲ. ಒಂದೆಡೆ ಈ ವಸ್ತು ತಿಂದರೆ ಇಷ್ಟು ಲಾಭ ಎಂದಿದ್ದರೆ, ಇನ್ನೊಂದೆಡೆ ಅದರಿಂದ ಇಷ್ಟು ಹಾನಿ ಎಂದು ಸಹ ಇರುತ್ತದೆ. ಹೀಗಾಗಿ ಜನ ಇಂಥದ್ದು ಕಂಡು ಗೊಂದಲಗೊಳ್ಳುತ್ತಾರೆ. ಇದನ್ನೇ ಗಮನದಲ್ಲಿರಿಸಿಕೊಂಡು ನನ್ನ ಆರೋಗ್ಯ ಪುಸ್ತಕದಲ್ಲಿ ವಿವರಣೆ ನೀಡಿದ್ದೇನೆ.
ತಾಯಿ ಆದ ನಂತರ ನೀವು ಹೇಗೆ ಇಷ್ಟು ಫಿಟ್ ಆಗಿದ್ದೀರಿ?
ನನ್ನ ಮಗ ಹುಟ್ಟಿದ ನಂತರ ನಾನು ಎಷ್ಟೋ ಎಮೋಶನ್ ಆಗಿಬಿಟ್ಟಿದ್ದೆ, ಕಾರಣ ಆಗ ನನ್ನ ತೂಕ ಎಂದಿಗಿಂತ 32 ಕಿಲೋ ಹೆಚ್ಚಾಗಿತ್ತು. ಹೆಲ್ದಿ ಫಿಟ್ ದೇಹಕ್ಕಾಗಿ 70% ಡಯೆಟ್ 30% ವ್ಯಾಯಾಮ ಅತ್ಯಗತ್ಯ. ನಾನು ಕೇವಲ ಶಿಸ್ತುಬದ್ಧ ವ್ಯಾಯಾಮದಿಂದಲೇ ನನ್ನ ಹೆಚ್ಚಿನ ತೂಕ ಕರಗಿಸಿದೆ. ಜೊತೆಗೆ ಕಟ್ಟುನಿಟ್ಟಾದ ಡಯೆಟ್ ಫಾಲೋ ಮಾಡಿದೆ.
ಒಮ್ಮೊಮ್ಮೆ ಏನೇನೋ ಕಾರಣಗಳಿಂದ ಕೆಲವು ದಿನ ವ್ಯಾಯಾಮ ಮಾಡಲಾಗದು. ಹಾಗಿರುವಾಗ ನೀವು ಕಟ್ಟುನಿಟ್ಟಾಗಿ ಡಯೆಟ್ ಫಾಲೋ ಮಾಡಿದರೆ, ಈ ಕೊರತೆಯ ನಷ್ಟ ತುಂಬಿಸಬಹುದು. ನಾನು ಬೆಳಗ್ಗೆ ಎದ್ದಾಗ 2 ಗ್ಲಾಸ್ ಬಿಸಿ ನೀರಿಗೆ ಶುಂಠಿರಸ, ನಿಂಬೆ, ಜೇನುತುಪ್ಪ ಬೆರೆಸಿ ಕುಡಿಯುತ್ತೇನೆ.
– ದೀಪಾ ನಾರಾಯಣ