ಕೌನ್ಸೆಲರ್‌ ಮತ್ತು ರೈಟರ್‌

10 ವರ್ಷಗಳ ತನಕ ಕೌಟುಂಬಿಕ ದೌರ್ಜನ್ಯವನ್ನು ಸಹಿಸಿಕೊಂಡ ಬಳಿಕ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ರಶ್ಮಿ ಆನಂದ್‌ ಅವರು ತಮ್ಮ 35ನೇ ವಯಸ್ಸಿನಲ್ಲಿ ಜೀವನವನ್ನು ಹೊಸ ರೀತಿಯಲ್ಲಿ ಆರಂಭಿಸುವ ನಿರ್ಧಾರ ಕೈಗೊಂಡರು. ಮುಂದೆ ಇವರು ಈ ಮಟ್ಟಕ್ಕೆ ಏರಿದ್ದು ಹೇಗೆ……?

9 ವರ್ಷದ ಮಗಳು ಮತ್ತು 5 ವರ್ಷದ ಮಗನ ಸಹಿತ ಅವರನ್ನು ಮನೆಯಿಂದ ಹೊರದಬ್ಬಲಾಗಿತ್ತು.

ನೋವು ಹಾಗೂ ಕಣ್ಣೀರಿನ ಪಯಣ ಮುಗಿಸಿದ ರಶ್ಮಿ ಈಗ ಕೌನ್ಸೆಲರ್‌ ಹಾಗೂ ಲೇಖಕಿಯಾಗಿ ತಮ್ಮ ಅಸ್ತಿತ್ವ ಕಂಡುಕೊಂಡಿದ್ದಾರೆ. ಅವರ ಮಕ್ಕಳೀಗ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಅವರು ಕೌಟುಂಬಿಕ ದೌರ್ಜನ್ಯದಿಂದ ನಲುಗಿಹೋಗುತ್ತಿರುವ ಮಹಿಳೆಯರಿಗೆ ಸರಿದಾರಿ ತೋರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ರಶ್ಮಿ ಅವರಿಗೆ ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ವಿಚ್ಛೇದನದ ಬಳಿಕ ಅವರು ಹಲವು ಪುಸ್ತಕಗಳನ್ನು ಬರೆದಿದ್ದಾರೆ.

ವಿಚ್ಛೇದನದ ಬಳಿಕ ಹೊಸ ಜೀವನ ಆರಂಭಿಸಿದ ನಿಮ್ಮ ಅನುಭವ ಹೇಗಿತ್ತು? ಈ ಅವಧಿಯಲ್ಲಿ ನೀವು ಯಾವ ಯಾವ ಸವಾಲುಗಳನ್ನು ಎದುರಿಸಬೇಕಾಗಿ ಬಂತು?

ನಾನು ಗಂಡನಿಂದ ಬೇರೆ ಆಗಬೇಕೆಂದು ನಿರ್ಧಾರ ಕೈಗೊಂಡಾಗ ಹತ್ತು ಹಲವು ಸವಾಲುಗಳು, ಸಂಕಷ್ಟಗಳು ನನ್ನ ಮುಂದಿದ್ದವು. ಆಗ ನನ್ನ ಬಳಿ ಹಣದ ಕೊರತೆ ಇತ್ತು. ಯಾವ ಉದ್ಯೋಗ ಕೂಡ ಮಾಡುತ್ತಿರಲಿಲ್ಲ. ಆಗ ನಾನು ಫ್ರೀಲಾನ್ಸ್ ರೈಟಿಂಗ್‌ ಮಾಡುತ್ತಿದ್ದೆ. ಅಪ್ಪ ಮತ್ತು ಅಣ್ಣನಿಗೆ ನನ್ನನ್ನು ಕಂಡರೆ ಆಗುತ್ತಿರಲಿಲ್ಲ. ಮಗ ಮೌನವಾಗಿರುತ್ತಿದ್ದ. ಮಗಳು ಖಿನ್ನತೆಗೆ ತುತ್ತಾಗಿದ್ದಳು. ಇಂತಹ ಸ್ಥಿತಿಯಲ್ಲಿ ನನ್ನ ಮುಂದೆ ಅಂಧಕಾರ ಆವರಿಸಿಕೊಂಡಿತ್ತು.

ಆ ನರಕದಿಂದ ಹೊರಬಂದ ನಂತರ ನಾನು ಕೇವಲ ವರ್ತಮಾನದ ಬಗ್ಗೆ ಯೋಚಿಸುವುದಾಗಿ ನಿರ್ಧಾರ ಕೈಗೊಂಡೆ. ನಾನು ರಾತ್ರಿ ಹೊತ್ತು ಕುಳಿತುಕೊಂಡು ಬರೆಯುತ್ತಿದ್ದೆ ಹಾಗೂ ಹಗಲು ಹೊತ್ತು ಮಕ್ಕಳನ್ನು ಚಿಕಿತ್ಸೆಗೆಂದು ಕರೆದುಕೊಂಡು ಹೋಗುತ್ತಿದ್ದೆ. `ಕ್ರೈಮ್ ಫಾರ್‌ ವುಮನ್‌ ಸೆಲ್‌’ನ ಸಹಾಯದಿಂದ ಗಂಡನ ವಿರುದ್ಧ ಪ್ರಕರಣ ದಾಖಲಿಸಲಾಯಿತು. ದೆಹಲಿ ಪೊಲೀಸರು ನನಗೆ ಬಹಳಷ್ಟು ನೆರವು ನೀಡಿದರು. 2002ರಲ್ಲಿ ನನಗೆ ವಿಚ್ಛೇದನ ದೊರೆಯಿತು. ಬಳಿಕ ಮಕ್ಕಳ ಕಸ್ಟಡಿ ಕೂಡ ಸಿಕ್ಕಿತು. ಆದರೆ ನನಗೆ ಜೀವನಾಂಶ ದೊರೆಯಲಿಲ್ಲ. ಆಗ ನನಗೆ ಯಾವುದೇ ಬಗೆಯ ಆರ್ಥಿಕ ಸಹಾಯ ಇರಲಿಲ್ಲ. ಆಗ ಕೌಟುಂಬಿಕ ದೌರ್ಜನ್ಯ ಕಾನೂನು ಕೂಡ ಅಸ್ತಿತ್ವದಲ್ಲಿ ಇರಲಿಲ್ಲ. ಇಂತಹ ಸ್ಥಿತಿಯಲ್ಲಿ ನನ್ನ ಮಕ್ಕಳ ಉತ್ತಮ ಜೀವನಕ್ಕಾಗಿ ಬಹಳಷ್ಟು ಸಂಘರ್ಷ ಪಡಬೇಕಾಯಿತು.

ನಿಮ್ಮ ಒತ್ತಡಮಯ ವೈವಾಹಿಕ ಜೀವನದ ದುಷ್ಪರಿಣಾಮ ಮಕ್ಕಳ ಮೇಲೆ ಆಗಿತ್ತು. ಅದನ್ನು ನಿವಾರಿಸಲು ನೀವೇನು ಪ್ರಯತ್ನ ಮಾಡಿದಿರಿ?

ನಾನು ನನ್ನ ಮಕ್ಕಳಿಗೆ ನಗುವುದನ್ನು ಕಲಿಸಿಕೊಟ್ಟೆ. ನಮ್ಮಲ್ಲಿ (ನಾನು ಹಾಗೂ ನನ್ನ ಎರಡು ಮಕ್ಕಳಲ್ಲಿ) ಅದೆಷ್ಟು ಆತಂಕ ಆವರಿಸಿಕೊಂಡಿತ್ತೆಂದರೆ, ನಮಗೆ ಪ್ರತಿಯೊಂದು ಸಂಗತಿಯ ಬಗೆಗೂ ಭಯವಾಗುತ್ತಿತ್ತು. ಇಂತಹ ಸ್ಥಿತಿಯಲ್ಲಿ ನನ್ನನ್ನು ನಾನು ಸಂಭಾಳಿಸಿಕೊಳ್ಳುವುದು ಕಷ್ಟವಾಗಿತ್ತು. ನನ್ನನ್ನು ಗಟ್ಟಿಗೊಳಿಸುವುದು ಅಸಾಧ್ಯ ಎನಿಸುತ್ತಲಿತ್ತು. ನಾನು ಮಾತ್ರ ಧೃತಿಗೆಡದೆ, ನನ್ನನ್ನು ಗಟ್ಟಿಗೊಳಿಸುವ ನಿರ್ಧಾರಕ್ಕೆ ಬಂದೆ. ಎಲ್ಲಕ್ಕೂ ದೊಡ್ಡ ಶಕ್ತಿಯೆಂದರೆ ನಗುವುದೇ ಆಗಿತ್ತು. ಹಾಗೆಂದೇ ನಾನು ಅದನ್ನು ಮೊದಲು ನನ್ನ ಮಕ್ಕಳಿಗೆ ಕಲಿಸಿಕೊಟ್ಟೆ. ಯಾವ ಸಂಗತಿಗಳ ಬಗ್ಗೆ ನಮಗೆ ಭಯ ಅನಿಸುತ್ತಿತ್ತೊ, ನಾನು ಆ ಸಂಗತಿಗಳ ಬಗ್ಗೆ ಜೋಕ್ಸ್ ಮಾಡಲಾರಂಭಿಸಿದೆ. ಕೆಳಗೆ ಕುಸಿಯುವುದು ನಮಗೆ ಬೇಕಿರಲಿಲ್ಲ. ನನ್ನ ಮಕ್ಕಳು ಸೋಲುವುದು ಅಥವಾ ಛಿದ್ರ ಛಿದ್ರ ಆಗುವುದನ್ನು ನೋಡಲು ನನ್ನಿಂದ ಆಗುತ್ತಿರಲಿಲ್ಲ. ಅವರ ಕಣ್ಣುಗಳಲ್ಲಿ ಭಯ ಹಾಗೂ ತುಟಿಯಲ್ಲಿ ಮೌನ ಕಂಡು ನಾನು ಭಯಭೀತಳಾಗಿದ್ದೆ. ಹೀಗಾಗಿ ನಾನು ಈ ದಾರಿ ಆಯ್ದುಕೊಂಡೆ ಹಾಗೂ ಗಂಡನಿಂದ ಬೇರೆಯಾದೆ. ಹೊಸ ಮನೆಯಲ್ಲಿ ನಾವು ಮೂವರು ಸ್ನೇಹಿತರಂತೆ ಇದ್ದೇವೆ. ನಾನು ಅವರ ಮೇಲೆ ಎಂದೂ ಅಧಿಕಾರ ಚಲಾಯಿಸಲಿಲ್ಲ. ಅವರಿಗೆ ಎಲ್ಲ ಬಗೆಯ ಸ್ವಾತಂತ್ರ್ಯ ಕೊಟ್ಟೆ.

ನಾನು ಮಕ್ಕಳ ಜೊತೆ ಸದಾ ಸಂಪರ್ಕದಲ್ಲಿದ್ದೆ. ಅವರಿಂದ ಏನನ್ನೂ ಬಚ್ಚಿಡಲಿಲ್ಲ. ನಮ್ಮ ಬಳಿ ಹಣ ಇರಲಿಲ್ಲ. ಆದರೆ ಆ ಮನೆಯಿಂದ ಹೊರಬಂದು ನಮಗೆ ಖುಷಿ ಹಾಗೂ ಮನಶ್ಶಾಂತಿ ದೊರೆಯಿತು. ನಾನು ಮುಂದೆ ಮುಂದೆ ಸಾಗಿದೆ. ದುಃಖ, ಹಿಂದೆ ಸರಿಯಿತು.

ನಿಮ್ಮ ಬಳಿ ಕೌನ್ಸೆಲಿಂಗ್‌ಗಾಗಿ ಯಾವ ಮಹಿಳೆಯರು ಬರುತ್ತಾರೋ ಅವರು ಸಾಮಾನ್ಯವಾಗಿ ಯಾವ ಸಮಸ್ಯೆಯಿಂದ ಗ್ರಸ್ತರಾಗಿರುತ್ತಾರೆ?

ನಾನು ಕ್ರೈಮ್ ಹಾಗೂ ವುಮನ್‌ ಸೆಲ್‌ನಲ್ಲಿ 5 ವರ್ಷ ಕೌನ್ಸೆಲಿಂಗ್‌ ಮಾಡಿದೆ. ಬಳಿಕ ನನ್ನದೇ ಆದ ಒಂದು ಟ್ರಸ್ಟ್ ಶುರು ಮಾಡಿದೆ. ನನ್ನ ಬಳಿ ಬರುವವರು ಕೌಟುಂಬಿಕ ದೌರ್ಜನ್ಯಕ್ಕೆ ತುತ್ತಾದವರೇ. ಶ್ರೀಮಂತ ಅಥವಾ ಬಡ ಸಾಕ್ಷರ ಅಥವಾ ಅನಕ್ಷರಸ್ಥ, ಮಹಿಳೆ ಹಾಗೂ ಯಾರೇ ಆಗಲಿ ಕೌಟುಂಬಿಕ ದೌರ್ಜನ್ಯಕ್ಕೆ ತುತ್ತಾಗುತ್ತಾರೆ. ಪ್ರತಿಯೊಂದೂ ಭಾಗದಲ್ಲಿ, ಪ್ರತಿಯೊಂದು ಕಛೇರಿಯಲ್ಲೂ ಮಹಿಳೆಯರು ಶೋಷಣೆಗೆ ಒಳಗಾಗುತ್ತಿದ್ದಾರೆ.

– ಗಿರಿಜಾ ಶಂಕರ್‌

और कहानियां पढ़ने के लिए क्लिक करें...