ಸಿಇಓ, ಪಾರ್ಲೆ ಆ್ಯಗ್ರೋ ಕಂಪನಿ

ತಮ್ಮ ಕೌಟುಂಬಿಕ ಉದ್ಯಮವನ್ನು ಅತ್ಯುನ್ನತ ಎತ್ತರಕ್ಕೆ ಏರಿಸಿರುವ ಶೌನಾ ಚೌಹಾಣ್‌, ಯಾವುದೇ ಕ್ಷೇತ್ರವಿರಲಿ, ಹೆಣ್ಣು ಅದರಲ್ಲಿ ಮುನ್ನೇರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ನಿರೂಪಿಸಿದ್ದಾರೆ…..!

22ರ ಕಿರಿಯ ವಯಸ್ಸಿನಲ್ಲೇ ಪಾರ್ಲೆ ಆ್ಯಗ್ರೋ ಕಂಪನಿಯ ಬೋರ್ಡ್‌ನಲ್ಲಿ ನಿರ್ದೇಶಕಿಯಾಗಿ ಸೇರಿದ ಶೌನಾ ಚೌಹಾಣ್‌, ಇದೀಗ ಈ ಕಂಪನಿಯ ಅತ್ಯುನ್ನತ ಹುದ್ದೆ ಸಿಇಓ ಆಗಿ ಅಲಂಕರಿಸಿದ್ದಾರೆ. ಈ ಕಂಪನಿಯ ಸಂಸ್ಥಾಪಕರಾದ ಪ್ರಕಾಶ್‌ ಚೌಹಾಣ್‌ರ ಹಿರಿಯ ಮಗಳಾದ ಈಕೆ ಬಿಸ್‌ನೆಸ್‌ನ ಎಲ್ಲಾ ವ್ಯವಹಾರಗಳನ್ನೂ ಸಂಭಾಳಿಸುತ್ತಾ, ಕಾಲಕ್ರಮೇಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಂಪನಿಯ ಉಪಸ್ಥಿತಿಯನ್ನು ಎರಡು ಪಟ್ಟು ಹೆಚ್ಚಿಸಿದ್ದಾರೆ. ತಮ್ಮ ಹುಟ್ಟು ಸ್ವಭಾವದಿಂದ ವರ್ಕೋಹಾಲಿಕ್‌ ಮತ್ತು ಆತ್ಮವಿಶ್ವಾಸಭರಿತರಾದ ಈಕೆ, ಮುಂದೆ ವಿವಾಹದ ಬಳಿಕ ತಮ್ಮ ಮಗ ಜಹಾನ್‌ಗಾಗಿ ಹೇಗೆ ಒಬ್ಬ ಮಮತಾಮಯಿ, ಆದರ್ಶ ತಾಯಿಯಾಗಿ ಹೊರಹೊಮ್ಮಿದರು ಎಂಬುದನ್ನು ಅವರ ಮಾತುಗಳಿಂದಲೇ ತಿಳಿಯೋಣವೇ?

ನಮ್ಮ ದೇಶದಲ್ಲಿ ಮಹಿಳಾ ಉದ್ಯಮಿಗಳ ಸ್ಥಿತಿ ಬಗ್ಗೆ ಏನು ಹೇಳಲು ಬಯಸುತ್ತೀರಿ?

ನಮ್ಮ ದೇಶದಲ್ಲಿ ಮಹಿಳೆಯರ ಕುರಿತಾಗಿ ಜನ ಬಹಳ ತಪ್ಪು ಅಭಿಪ್ರಾಯಗಳನ್ನು ಹೊಂದಿದ್ದಾರೆ. ಅದರಲ್ಲೂ ನೀವು ಉದ್ಯಮಿಗಳ ಕುರಿತಾಗಿ ಹೇಳುವುದಾದರೆ, ಸಾಮಾನ್ಯವಾಗಿ ಜನ ಗಂಡಸರ ಕಡೆಯೇ ಕೈ ಮಾಡುತ್ತಾರೆ. ಆದರೆ ಪರಿಸ್ಥಿತಿ ಈಗ ಹಿಂದಿನಂತಿಲ್ಲ. ಬೇಕಾದಷ್ಟು ಮಹಿಳೆಯರು ಉದ್ಯಮ ನಡೆಸುತ್ತಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.

ನಮ್ಮಲ್ಲಿ ಅನೇಕ ಮಹಿಳಾ ಉದ್ಯಮಿಗಳು ಬಲು ಕಾರ್ಯಶೀಲ ಪ್ರವೃತ್ತಿಯವರು. ಅವರ ಬಳಿ ಅತ್ಯುನ್ನತ ಹುದ್ದೆ, ಅತ್ಯಧಿಕ ಹಣವಿದೆ, ಅಷ್ಟೇ ಖ್ಯಾತಿಯೂ ಇದೆ. ಯಾವ ಮಹಿಳೆಯೇ ಇರಲಿ, ತನ್ನ ಕೌಟುಂಬಿಕ ಉದ್ಯಮಕ್ಕೆ ಬರುತ್ತಾರೋ ಇಲ್ಲವೋ ಎಂಬುದು ಮಹತ್ವಪೂರ್ಣವಲ್ಲ….. ಅವರೇ ಬಂಡವಾಳ ಹೂಡಿ ಏನು ಸಾಧಿಸುತ್ತಾರೆ ಹಾಗೂ ಅವರ ಶಕ್ತಿ ಸಾಮರ್ಥ್ಯಗಳು ಕಡಿಮೆಯೇನಲ್ಲ ಎಂಬುದೇ ಮುಖ್ಯ. ವಾಸ್ತವದಲ್ಲಿ ಮಹಿಳೆಯರ ಕುರಿತಾಗಿ ನಮ್ಮ ವಿಚಾರಗಳನ್ನು ಬದಲಾಯಿಸಿಕೊಳ್ಳಬೇಕಾದ ಅಗತ್ಯವಿದೆ. ಮಹಿಳೆಯರೂ ಇತರರಿಗೆ ಮಾದರಿಯಾಗಿ ನಿಲ್ಲಬಲ್ಲರು ಎಂಬುದನ್ನು ನೋಡಿ! ಹೀಗಾಗಿ ಹೆಣ್ಣಿನ ಶಕ್ತಿಯನ್ನು ಕಡಿಮೆ ಎಂದು ಭಾವಿಸದಿರಿ!

ನಿಮ್ಮ ದೃಷ್ಟಿಯಲ್ಲಿ ಟೈಂ ಮ್ಯಾನೇಜ್‌ಮೆಂಟ್‌ ಎಷ್ಟು ಮಹತ್ವಪೂರ್ಣ ಎನಿಸುತ್ತದೆ?

ಜೀವನದ ಪ್ರತಿ ಕ್ಷೇತ್ರದಲ್ಲೂ ಯಶಸ್ಸಿಗಾಗಿ ಸಮಯದ ಮಹತ್ವ ಅರಿತುಕೊಳ್ಳುವುದಿದೆಯಲ್ಲ…. ಅದು ಪ್ರತಿಯೊಬ್ಬರಿಗೂ ಅತ್ಯಗತ್ಯ. ಸಮಯ ಹಾಳು ಮಾಡುವವರು ಮಾತ್ರವೇ ತಮ್ಮ ಐಡೆಂಟಿಟಿ ಮೂಡಿಸಲಾರರು. ಯೋಜನೆ ರೂಪಿಸುವಿಕೆ, ಉದ್ದೇಶ ಮತ್ತು ಗುರಿ ತಲುಪುವಿಕೆ, ಸಮಯದ ಮಿತಿ ನಿರ್ಧರಿಸುವಿಕೆ, ಕೆಲಸಗಳ ಪ್ರಾಥಮಿಕತೆ ನಿಗದಿಪಡಿಸುವಿಕೆ…. ಇತ್ಯಾದಿಗಳು ಕೆಲವು ಬೇಸಿಕ್‌ ನಿಯಮಗಳೆನಿಸುತ್ತವೆ. ಇವೆಲ್ಲವನ್ನೂ ಟೈಂ ಮ್ಯಾನೇಜ್‌ ಮಾಡಲು ನಾನು ಬಳಸಿಕೊಳ್ಳುತ್ತೇನೆ.

ನಮ್ಮ ಸಿಬ್ಬಂದಿಯರು ತಮ್ಮ ಟೈಂ ಮ್ಯಾನೇಜ್‌ ಮಾಡಲು ಸಹಾಯ ಸಿಗಲೆಂದೇ ನಾವು ಬೆಳಗ್ಗೆ 8.30ಕ್ಕೆ ಕೆಲಸ ಶುರು ಮಾಡುತ್ತೇವೆ ಹಾಗೂ ಸಂಜೆ 5 ಗಂಟೆಗೆ ಕೆಲಸ ಮುಗಿಸುತ್ತೇವೆ. ಆಗ ಸಂಜೆ ಅವರು ತಮ್ಮ ಕುಟುಂಬದೊಡನೆ ಒಂದಾಗಿರಲು ಅವಕಾಶ ಸಿಗುತ್ತದೆ.

ಮಗನ ಜೊತೆ ಎಷ್ಟು ಹೊತ್ತು ಕಳೆಯುತ್ತೀರಿ?

ಶಾಲೆ ಮುಗಿಸಿಕೊಂಡು ನನ್ನ ಮಗ ಜಹಾನ್‌ ಸೀದಾ ನಮ್ಮ ಆಫೀಸ್‌ಗೆ ಬರುತ್ತಾನೆ, ಅಲ್ಲಿಯೇ ಅವನ ಆಟಪಾಠಗಳು, ಮೋಜು ಮಸ್ತಿ ನಡೆಯುತ್ತದೆ. ಸಂಜೆ ಹೊತ್ತು ನಾನು ಮಗನ ಜೊತೆಯಲ್ಲೇ ಇರುತ್ತೇನೆ. ವೀಕೆಂಡ್ಸ್ ಅವನಿಗಾಗಿ ಮೀಸಲು. ಆ ಸಮಯದಲ್ಲಿ ನನ್ನಲ್ಲಿ ಅಡಗಿರುವ ಬಾಲ್ಯ ಹೊರಬರುತ್ತದೆ. ನಾವು ಪ್ರತಿ ಸಲ ಏನಾದರೊಂದು ಹೊಸತನ್ನು ಮಾಡುತ್ತಲೇ ಇರುತ್ತೇವೆ. ಎಷ್ಟೋ ಸಲ ಸ್ವಿಮ್ಮಿಂಗ್‌ ಅಥವಾ ಔಟಿಂಗ್ಸ್ ಹೊರಡುತ್ತೇವೆ. ಕೆಲವೊಮ್ಮೆ ಪಿಕ್‌ನಿಕ್‌ಗೆಂದು ದೂರದ ರೆಸಾರ್ಟ್ಸ್ ಗೆ ಹೋಗುವುದುಂಟು.

ಇದರಲ್ಲಿ ನಿಮ್ಮ ಪತಿಯ ಸಹಕಾರವೆಷ್ಟು?

ನನ್ನ ಪತಿ ನನ್ನ ಬೆಸ್ಟ್ ಫ್ರೆಂಡ್‌ ಸಪೋರ್ಟರ್‌ ಕೂಡ. ಅವರು ನನ್ನ ಎಲ್ಲಾ ಕೆಲಸಗಳಲ್ಲೂ ಸದಾ ನನಗೆ ಸಹಕಾರ ನೀಡುತ್ತಾರೆ. ನಾವಿಬ್ಬರೂ ನಮ್ಮ ಕೆಲಸದ ಕುರಿತಾಗಿ ಬಹಳ ಡೀಪ್‌ ಆಗಿ ಇನ್‌ವಾಲ್ವ್‌ ಆಗುತ್ತೇವೆ. ನಮಗೆ ನಮ್ಮ ಕೆಲಸವೇ ಬಹಳ ಮಹತ್ವಪೂರ್ಣದ್ದು. ಅದಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡಬೇಕೆಂದು ಭಾವಿಸುತ್ತೇವೆ. ಇದೇ ಅರಿವು ನಮ್ಮನ್ನು ಕೆರಿಯರ್‌ ಫ್ಯಾಮಿಲಿ ನಡುವೆ ಬ್ಯಾಲೆನ್ಸ್ ಮೇಂಟೇನ್‌ ಮಾಡಲು ಸಹಕರಿಸುತ್ತದೆ. ಕೆಲಸದ ಒತ್ತಡದಿಂದಾಗಿ ನಾನು ಅಥವಾ ಅವರು ಏನನ್ನೇ ಮರೆತಿದ್ದರೂ, ಅದನ್ನು ಜವಾಬ್ದಾರಿಯುತ ದಂಪತಿಗಳಾಗಿ ಸಮರ್ಪಕವಾಗಿ ನಿಭಾಯಿಸುತ್ತೇವೆ.

ನಿಮ್ಮ ಕನಸುಗಳೇನಾದರೂ ಇನ್ನೂ ಅಪೂರ್ಣವೇ?

ನಾನು ನನ್ನ ಮಗನಿಗೆ ಬಿಸ್‌ನೆಸ್‌ ಕುರಿತಾಗಿ ಹೆಚ್ಚಿನ ಪ್ರೇರಣೆ ನೀಡಲು ಬಯಸುತ್ತೇನೆ. ನನ್ನ ಕನಸು ಎಂದರೆ ಮುಂದೆ ಅವನ ಸಹಕಾರದೊಂದಿಗೆ ನಮ್ಮ ಮನೆತನದ ಬಿಸ್‌ನೆಸ್‌ ಬೆಳೆಸುವಾಸೆ!

ನಿಮ್ಮ ಜೀವನದ ಅತಿ ಸುಂದರ ಕ್ಷಣಗಳು…..?

ಬಾಲ್ಯದಲ್ಲಿ ನಾನು ಡ್ಯಾಡಿ ಜೊತೆ ಮಾಥೆರಾನ್‌ನಲ್ಲಿ ಹಾರ್ಸ್‌ ರೈಡಿಂಗ್‌ಗಾಗಿ ಹೋಗಿದ್ದು ಮರೆಯಲಾಗದು. ಅಲ್ಲಿನ `ಒನ್‌ ಟ್ರೀ ಹಿಲ್‌’ವರೆಗೂ ಕುದುರೆ ಸವಾರಿ ಮಾಡುತ್ತಿದ್ದೆ. ನನ್ನ ತಂದೆ ಜೊತೆ ಕಳೆದ ಪ್ರಕೃತಿಯ ಆ ರಮ್ಯ ಪರಿಸರವನ್ನು ಎಂದೂ ಮರೆಯಲಾರೆ.

– ಪಿ. ಗಿರಿಜಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ