ಹೆರಿಗೆಯ ನಂತರ ಬಹಳ ಕಡಿಮೆ ಮಹಿಳೆಯರು ನಿಯಮಿತವಾಗಿ ವ್ಯಾಯಾಮ ಮಾಡುತ್ತಾರೆ. ಹೆಚ್ಚಿನ ಮಹಿಳೆಯರಿಗೆ ತಮ್ಮ ಶರೀರದ ಕ್ಯಾಲೋರಿ ಕಡಿಮೆ ಮಾಡಲು ಸಾಕಷ್ಟು ಸಮಯ ಹಾಗೂ ಪ್ರೋತ್ಸಾಹ ಸಿಗುವುದಿಲ್ಲ. ಏಕೆಂದರೆ ಅವರು ಹೆರಿಗೆಯ ನಂತರ ಮಗುವಿನ ಪಾಲನೆ ಪೋಷಣೆಯಲ್ಲಿ ಮತ್ತು ಸಾಮಾನ್ಯ ಸ್ಥಿತಿಗೆ ಮರಳುವ ಪ್ರಯತ್ನದಲ್ಲಿ ಇರುತ್ತಾರೆ. ಹೆಚ್ಚಿನ ತೂಕದಿಂದಾಗಿ ಶರೀರಕ್ಕೆ ಆ ಸಂದರ್ಭದಲ್ಲಿ ಸಾಕಷ್ಟು ಒತ್ತಡ ಬೀಳುತ್ತದೆ. ಕಾಲುಗಳು ಇಡೀ ಜೀವನ ನಮ್ಮ ಶರೀರದ ತೂಕ ಹೊರುತ್ತವೆ. ವಯಸ್ಸು ಹೆಚ್ಚಿದಂತೆಲ್ಲಾ ಶರೀರದ ಇತರ ಸಂದುಗಳಂತೆ ನಮ್ಮ ಮಂಡಿಗಳಲ್ಲೂ ತಿಕ್ಕಾಟ ಶುರುವಾಗುತ್ತದೆ. ಶರೀರದ ಹೆಚ್ಚಿನ ತೂಕದಿಂದಾಗಿ ಈ ಪ್ರಕ್ರಿಯೆ ಹೆಚ್ಚಿನ ವೇಗದಿಂದ ನಡೆಯುತ್ತದೆ. ಪುರುಷರಿಗೆ ಹೋಲಿಸಿದಲ್ಲಿ ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ ಹೆಚ್ಚು ಬೋನ್‌ ಡೆನ್ಸಿಟಿ ಕಳೆದುಕೊಳ್ಳುತ್ತಾರೆ. ಅವರಲ್ಲಿ ಆಸ್ಟಿಯೋಪೊರೋಸಿಸ್‌ನ ಸಾಧ್ಯತೆ ಹೆಚ್ಚು ಇರುತ್ತದೆ. ಆಸ್ಟಿಯೋಪೊರೋಸಿಸ್‌ ಮೂಳೆಗಳನ್ನು ತೆಳ್ಳಗೆ ಹಾಗೂ ದುರ್ಬಲಗೊಳಿಸುತ್ತದೆ. ಅದರಿಂದ ಮಹಿಳೆಯರ ದೇಹ ಸ್ಥಿತಿ ಹಾಳಾಗುತ್ತದೆ. ಆಧುನಿಕ ಲೈಫ್‌ಸ್ಟೈಲ್ ‌ನಲ್ಲಿ ಟೆಕ್ನಾಲಜಿಯ ಹೆಚ್ಚು ಉಪಯೋಗ ಮತ್ತು ಕನಿಷ್ಠ ಶಾರೀರಿಕ ಶ್ರಮ ಇದಕ್ಕೆ ಕಾರಣವಾಗಿದೆ.

ಮಂಡಿಗಳ ಮೇಲೆ ದುಷ್ಪರಿಣಾಮ

ಸಂದುಗಳಲ್ಲಿ ತಿಕ್ಕಾಟ ಹೆಚ್ಚಾಗುವುದರಿಂದ ಆಸ್ಟಿಯೋ ಆರ್ಥರೈಟಿಸ್‌ನ ಸಮಸ್ಯೆಯಾಗುತ್ತದೆ. ಈ ಕಾರಣದಿಂದ ರಕ್ಷಣೆ ಕೊಡುವ ಕಾರ್ಟಿಲೇಜ್‌ನಲ್ಲೂ ಘರ್ಷಣೆ ಹೆಚ್ಚಾಗುತ್ತದೆ. ಸಂದುಗಳಲ್ಲಿ ಸೆಟೆಯುವಿಕೆ, ನೋವು ಮತ್ತು ಮಂಡಿಗಳ ಸಂದುಗಳಲ್ಲಿ ಲಾಕಿಂಗ್‌ ಸಮಸ್ಯೆ ಹೆಚ್ಚಾಗುತ್ತದೆ. ಹೆಚ್ಚು ತೂಕ, ಮಂಡಿಗಳ ಮೇಲೆ ಹೆಚ್ಚು ಒತ್ತಡ ಉಂಟುಮಾಡುವುದರಿಂದ ಕಾರ್ಟಿಲೇಜ್‌ ಮತ್ತು ಲಿಗಮೆಂಟ್‌ನಲ್ಲೂ ತಿಕ್ಕಾಟ ಹೆಚ್ಚಾಗುತ್ತದೆ. ಅದನ್ನು ಸಂದುಗಳ ಸಪೋರ್ಟ್‌ ಸಿಸ್ಟಮ್ ಎನ್ನುತ್ತಾರೆ. ಕಾರ್ಟಿಲೇಜ್‌ನಲ್ಲಿ ಬೇಗನೆ ತಿಕ್ಕಾಟ ಶುರುವಾಗುವುದರಿಂದ ರಕ್ಷಿಸಿಕೊಳ್ಳಲು ನಮ್ಮ ತೂಕ ನಿಯಂತ್ರಿಸಿಕೊಳ್ಳಬೇಕು.

ಸಮಸ್ಯೆ ಎದುರಿಸುವುದು ಹೇಗೆ?

ಗರ್ಭಿಣಿಯಾಗಿರುವಾಗ ನಿಧಾನವಾಗಿ ತೂಕ ಹೆಚ್ಚಾಗುವುದು ಒಂದು ಆರೋಗ್ಯಕರ ಮತ್ತು ಅನಿವಾರ್ಯ ಪ್ರಕ್ರಿಯೆ. ಹೈ ಕಾರ್ಬೋಹೈಡ್ರೇಟ್‌ ಆಹಾರ ಸೇವಿಸುವುದರಿಂದ, ಎಲ್ಲ ರೀತಿಯ ಶಾರೀರಿಕ ಶ್ರಮ ಕೈಬಿಡುವುದರಿಂದ ಮತ್ತು ಅನೇಕ ಬಾರಿ ಹಾರ್ಮೋನ್‌ ಅಸಮತೋಲನದಿಂದಾಗಿ ಕೆಲವು ಮಹಿಳೆಯರ ತೂಕ ಹೆಚ್ಚಾಗುತ್ತದೆ. ಗರ್ಭಾವಸ್ಥೆಯಲ್ಲಿ ಹೆಚ್ಚಿನ ತೂಕ ಹೈ ಬಿ.ಪಿ, ಡಯಾಬಿಟೀಸ್‌, ಗರ್ಭಧಾರಣೆಯ ಸಂಬಂಧವಾಗಿ ಅಸಹಜತೆ, ಅಲ್ಟ್ರಾಸೌಂಡ್‌ನ ಅಡ್ಡ ಪರಿಣಾಮ ಮತ್ತು ಸಮಯಕ್ಕೆ ಮುಂಚೆ ಪ್ರಸವವೇದನೆ ಮತ್ತು ಸಾಮಾನ್ಯಕ್ಕಿಂತ ಹೆಚ್ಚು ತೂಕದ ಮಕ್ಕಳು ಹುಟ್ಟುವುದು ಹೆಚ್ಚಾಗುತ್ತದೆ.

ಅತ್ಯಧಿಕ ತೂಕದಿಂದಾಗಿ ಗರ್ಭಧಾರಣೆಗೆ ಸಂಬಂಧಿಸಿದ ಸಮಸ್ಯೆಗಳಲ್ಲದೆ ಮಂಡಿನೋವು ಕೂಡ ಹೆಚ್ಚುತ್ತದೆ. ಹೆಚ್ಚಿನ ಮಹಿಳೆಯರಿಗೆ ಈ ನೋವು ಅಸ್ಥಿರವಾಗಿರುತ್ತದೆ ಮತ್ತು ಹೆರಿಗೆಯ ನಂತರ ಕೊಬ್ಬು ಕಡಿಮೆ ಆಗುವ ಜೊತೆಗೆ ಈ ನೋವು ಮಾಯವಾಗುತ್ತದೆ. ಕೆಲವು ಮಹಿಳೆಯರಲ್ಲಿ ಇದು ಹೆಚ್ಚು ಸಮಯ ಇರಬಹುದು.

ಈ ಉಪಾಯಗಳನ್ನು ಅನುಸರಿಸಿ

ಮಹಿಳೆಯರು ಗರ್ಭಾವಸ್ಥೆಯ ಸಂದರ್ಭದಲ್ಲಿ ಮತ್ತು ಅದರ ನಂತರ ತಮ್ಮ ಮಂಡಿಗಳ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು.

ನಿಯಮಿತ ವಾಕಿಂಗ್

ಗರ್ಭಾವಸ್ಥೆಯಲ್ಲಿ ಮತ್ತು ನಂತರ ವಾಕಿಂಗ್‌ ಮಾಡಿದರೆ ಲಾಭಕಾರಿ. ಆರೋಗ್ಯಕರ ಜೀವನಕ್ಕೆ ವಾಕಿಂಗ್‌ ಅತ್ಯಂತ ಪ್ರಭಾಶಾಲಿ ವ್ಯಾಯಾಮವಾಗಿದೆ. ಅಂದಹಾಗೆ ವಾಕಿಂಗ್‌ ಮಾಡಿದರೆ ಮೂಳೆಗಳು ಗಟ್ಟಿಯಾಗುತ್ತವೆ. ಆರೋಗ್ಯದ ಸಮಸ್ಯೆಗಳಿಂದಾಗಿ ಯಾರು ಶ್ರಮಪಟ್ಟು ವ್ಯಾಯಾಮ ಮಾಡುವುದಿಲ್ಲವೋ ಅವರಿಗೆ 30 ನಿಮಿಷಗಳ ವಾಕಿಂಗ್‌ ಸಾಕು. ಗರ್ಭಿಣಿಯರಿಗೆ ವಾಕಿಂಗ್‌ ಉತ್ತಮ ವ್ಯಾಯಾಮವಾಗಿದೆ. ಅದರಿಂದ ಅವರ ತೂಕ ನಿಯಂತ್ರಣದಲ್ಲಿರುತ್ತದೆ ಮತ್ತು ಮಂಡಿಗಳೂ ಸಕ್ರಿಯವಾಗಿರುತ್ತವೆ.

ಸೂಕ್ತ ಆಹಾರ

ಗರ್ಭಿಣಿಯಾಗುವುದೆಂದರೆ ಹೆಚ್ಚು ಕ್ಯಾಲೋರಿ ಸೇವಿಸಿ ತೂಕ ಹೆಚ್ಚಿಸಿಕೊಳ್ಳುವುದಲ್ಲ. ನಿಮ್ಮ ನ್ಯೂಟ್ರಿಷನಿಸ್ಟ್ ರೊಂದಿಗೆ ಸಂಪರ್ಕದಲ್ಲಿರುವುದು ಅಗತ್ಯ. ಅವರು ನಿಮ್ಮ ಹಾಗೂ ಮಗುವಿನ ಆರೋಗ್ಯದ ಜೊತೆ ಜೊತೆ ತೂಕವನ್ನು ನಿಯಂತ್ರಿಸಲು ಅಗತ್ಯ ಪೌಷ್ಟಿಕಾಂಶಗಳು ಮತ್ತು ಆಹಾರ ಸೇವಿಸಲು ಸಲಹೆ ನೀಡುತ್ತಾರೆ.

ಸಂದುಗಳ ನೋವು ಮತ್ತು ಮೂಳೆಗಳ ಬಲಹೀನತೆಗೆ ತೂಕ ಹೆಚ್ಚಾಗಿರುವುದಲ್ಲದೆ, ಶರೀರದಲ್ಲಿ ಕ್ಯಾಲ್ಶಿಯಂ ಮತ್ತು ವಿಟಮಿನ್‌ `ಡಿ’ಯ ಕೊರತೆಯೂ ಕಾರಣ. ಆದ್ದರಿಂದ ಸಮತೋಲಿತ ಆಹಾರದಲ್ಲಿ ಜಂಕ್‌ಫುಡ್‌ ಮತ್ತು ಕರಿದ ತಿಂಡಿಗಳನ್ನು ಸೇವಿಸಬಾರದು. ಏನನ್ನು ತಿನ್ನಬೇಕು?

ವಿಟಮಿನ್‌ `ಡಿ’ ಪರಿಪೂರ್ಣವಾಗಿರುವ ಪ್ರಾಕೃತಿಕ ಆಹಾರದಲ್ಲಿ ಫಿಶ್‌ ಆಯಿಲ್‌, ಫಿಶ್‌ ಲಿವರ್‌, ಮಶ್ರೂಮ್, ಚೀಸ್‌ ಮತ್ತು ಮೊಟ್ಟೆ ಸೇರಿದೆ. ಗರ್ಭಿಣಿಯರ ಮೂಳೆಗಳಿಗಾಗಿ ಅಗತ್ಯವಾದ ವಿಟಮಿನ್‌ `ಡಿ’ ಬಿಸಿಲಲ್ಲಿ ಕೊಂಚ ಹೊತ್ತು ನಿಂತರೂ  ಹೇರಳವಾಗಿ ದೊರೆಯುತ್ತದೆ.

ಹಾಲು, ಮೊಸರು, ಹಸಿರು ಸೊಪ್ಪುಗಳು, ತರಕಾರಿಗಳು, ಟೋಫು, ಬೆಂಡಕಾಯಿ, ಬ್ರೋಕ್ಲಿ ಮತ್ತು ಬಾದಾಮಿಯಂತಹ ಕ್ಯಾಲ್ಶಿಯಂ ಹೇರಳವಾಗಿರುವ ಆಹಾರದ ಜೊತೆಯೂ ಕ್ಯಾಲ್ಶಿಯಂ ಸಪ್ಲಿಮೆಂಟ್ಸ್ ಎಲ್ಲಾ ಮಹಿಳೆಯರಿಗೂ ಅತ್ಯಗತ್ಯ. ಅದರಲ್ಲೂ ವಿಶೇಷವಾಗಿ ಮಂಡಿ ನೋವಿನಿಂದ ನರಳುತ್ತಿರುವಂಥ ಚೊಚ್ಚಲು ತಾಯಂದಿರಿಗೆ ಇದು ಹೆಚ್ಚು ಅನ್ವಯ.

ಓಡುವಿಕೆ

ಹೆರಿಗೆ ನಂತರ ನಿಮ್ಮ ಎಂದಿನ ಸ್ವಾಭಾವಿಕ ಸಹಜ ರೂಪಕ್ಕೆ ಮರಳಲು ಯತ್ನಿಸಿ. ಸ್ವಸ್ಥ ದೇಹ ಮತ್ತು ಮಂಡಿಗಾಗಿ ಓಡುವಿಕೆ, ಜಾಗಿಂಗ್‌ ಉತ್ತಮ ವ್ಯಾಯಾಮ ಎನಿಸಿದೆ. ಇದರಿಂದ ದೇಹ ತೂಕ ಮಾತ್ರ ಕಂಟ್ರೋಲ್ ನಲ್ಲಿ ಇರುವುದಿಲ್ಲ, ಬದಲಿಗೆ ನಿಮ್ಮ ಹೃದಯ, ಸ್ವಸ್ಥವಾಗಿರುತ್ತದೆ. ಇದರಿಂದಾಗಿ ನಿಮ್ಮ ಮೂಳೆಗಳು, ಮಾಂಸಖಂಡಗಳೂ ಸಶಕ್ತಗೊಳ್ಳುತ್ತವೆ.

– ಡಾ. ರಜನೀ ಶರ್ಮ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ