ಪುರುಷರಲ್ಲಿ ವೀರ್ಯಾಣುಗಳ ಕೊರತೆಗೆ ಕಾರಣಗಳು ಬದಲಾಗುತ್ತಲೇ ಇರುತ್ತವೆ. ಇಂತಹ ಸ್ಥಿತಿಯಲ್ಲಿ ಈ ಮಾಹಿತಿ ನಿಮ್ಮ ಸಮಸ್ಯೆ ನಿವಾರಣೆಗೆ ಅತ್ಯುಪಯುಕ್ತವಾಗಬಹುದು ಎಂಬುದನ್ನು ವಿವರವಾಗಿ ಗಮನಿಸಿ….
ಭಾರತದಲ್ಲಿ ಸಂತಾನ ಅಪೇಕ್ಷೆ ಇರುವ ದಂಪತಿಗಳಿಗೆ 2 ವರ್ಷಗಳಲ್ಲೂ ಮಗು ಆಗದೇ ಇದ್ದರೆ, ಅದಕ್ಕೆ ಮಹಿಳೆಯದೇ ಕಾರಣ ಎಂಬ ನಿರ್ಧಾರಕ್ಕೆ ಬರಲಾಗುತ್ತದೆ. ಮಹಿಳೊಬ್ಬಳು ತಾಯಿಯಾಗದೇ ಹೋದರೆ ಪುರುಷನ ಪುರುಷತ್ವದ ಮೇಲೂ ಸಂದೇಹ ಬರುತ್ತದೆ. ಪುರುಷ ಕೂಡ ಈ ನಿಟ್ಟಿನಲ್ಲಿ 50: 50 ಪಾಲುದಾರನಾಗಿರುತ್ತಾನೆ. ಈಗ ಈ ಕುರಿತಂತೆ ಸಾಕಷ್ಟು ಜಾಗರೂಕತೆ ಉಂಟಾಗಿದೆ.
ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ತನ್ನ ವೈಫಲ್ಯದ ಬಗ್ಗೆ ಪುರುಷ ಈಗ ಒಪ್ಪಿಕೊಳ್ಳಲು ಆರಂಭಿಸಿದ್ದಾನೆ. ಅದರ ಜೊತೆಗೆ ಚಿಕಿತ್ಸೆಗೂ ಮುಂದೆ ಬರುತ್ತಿದ್ದಾನೆ.
ಲಭ್ಯ ಅಂಕಿಅಂಶಗಳ ಪ್ರಕಾರ, ಮಕ್ಕಳಾಗದೇ ಇರುವ 3 ಪ್ರಕರಣಗಳಲ್ಲಿ 1 ಪ್ರಕರಣ ಪುರುಷರ ವೀರ್ಯಾಣು ಕೊರತೆಗೆ ಸಂಬಂಧಪಟ್ಟಿದೆ. ಉಳಿದ 2 ಪ್ರಕರಣಗಳಲ್ಲಿ 1 ಪ್ರಕರಣ ಸ್ತ್ರೀಯರಲ್ಲಿನ ಸಮಸ್ಯೆಗೆ ಕಾರಣವಾಗಿರುತ್ತದೆ. ಇನ್ನೊಂದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
ಕಾರಣಗಳು
ಪುರುಷರ ಸಂತಾನೋತ್ಪತ್ತಿ ಸಾಮರ್ಥ್ಯ ಕ್ಷೀಣಿಸಲು ಮುಖ್ಯ ಕಾರಣ ವೀರ್ಯಾಣುಗಳ ಕೊರತೆ. ಅವುಗಳ ಚಲನೆ ಹಾಗೂ ಟೆಸ್ಟೊಸ್ಟೆರಾನ್ ಹಾರ್ಮೋನಿನ ಕೊರತೆ. ವೀರ್ಯಾಣುಗಳ ಕೊರತೆಯಿಂದ ಸಂತಾನೋತ್ಪತ್ತಿಯ ಸಾಧ್ಯತೆ ಕಡಿಮೆಯಾಗುತ್ತದೆ. ಒಂದು ವೇಳೆ ವೀರ್ಯಾಣುಗಳ ಚಲನೆ ಮಂದವಾಗಿದ್ದರೆ, ಅವು ವೇಗವಾಗಿ ಚಲಿಸಿ ಅಂಡಾಣುವಿನ ತನಕ ತಲುಪಿ, ಅದನ್ನು ಭ್ರೂಣವಾಗಿ ಪರಿವರ್ತಿಸುವಲ್ಲಿ ವಿಫಲವಾಗುತ್ತದೆ. ಟೆಸ್ಟೊಸ್ಟೆರಾನ್ ಒಂದು ಹಾರ್ಮೋನಾಗಿದ್ದು, ಅದು ವೀರ್ಯಾಣುಗಳನ್ನು ಉತ್ಪತ್ತಿ ಮಾಡಲು ಪ್ರಮುಖ ಪಾತ್ರವಹಿಸುತ್ತದೆ. ಸಮಸ್ಯೆಯ ಈ ಕಾರಣಗಳು ಬದಲಾಗುತ್ತಿರುತ್ತವೆ. ಇವುಗಳಲ್ಲಿ 1 ಕ್ಕಿಂತ ಹೆಚ್ಚು ಕಾರಣಗಳು ಒಬ್ಬ ಪುರುಷನಲ್ಲಿ ಇದ್ದರೆ ಅವನ ಸಂತಾನೋತ್ಪತ್ತಿ ಸಾಮರ್ಥ್ಯವೇ ಹೊರಟುಹೋಗುತ್ತದೆ.
ವೀರ್ಯಾಣುಗಳ ಸಂಖ್ಯೆ ಅಥವಾ ಗುಣಮಟ್ಟದಲ್ಲಿ ಕೊರತೆಗೆ ಹಲವು ಕಾರಣಗಳಿರಬಹುದು. ಉದಾಹರಣೆಗೆ ಆನುವಂಶಿಕ ಕಾರಣಗಳು, ಟೆಸ್ಟಿಕ್ಯೂಲರ್ (ಅಂಡಕೋಶ)ನ ಸಮಸ್ಯೆ, ಕ್ರಾನಿಕ್ ಪ್ರೋಸ್ಟೇಟ್‌ನ ಸೋಂಕು, ಸ್ಕ್ರೋಟಮ್ ನ ನರಗಳು ಉಬ್ಬಿರುವುದು ಮುಂತಾದ ಕಾರಣಗಳನ್ನು ಪಟ್ಟಿ ಮಾಡಬಹುದು.
ವೀರ್ಯಾಣು ಉತ್ಪತ್ತಿಗೆ ಬಾಧಕವಾಗಿರುವ ಇತರೆ ಕಾರಣಗಳೆಂದರೆ, ಕೆಲವು ವಿಶೇಷ ರಸಾಯನಗಳು, ವಿಷಕಾರಿ ಘಟಕಗಳ ಪ್ರಭಾವ, ಕ್ಯಾನ್ಸರ್‌ನ ಚಿಕಿತ್ಸೆ (ಅದರಲ್ಲಿ ಕೀಮೊಥೆರಪಿ) ಸೇರಿದೆ.
ಕೆಲವು ಸಾಮಾನ್ಯ ಅಪಾಯಗಳೂ ಇವೆ. ಅವುಗಳೆಂದರೆ ತಂಬಾಕು, ಮದ್ಯ ಸೇವನೆ. ಇವುಗಳಿಂದ ಪುರುಷನ ಗುಪ್ತಾಂಗದ ಉತ್ತೇಜನ ಶಕ್ತಿ ಹೊರಟುಹೋಗುತ್ತದೆ. ಅಷ್ಟೇ ಅಲ್ಲ, ವೀರ್ಯಾಣುಗಳ ಸಂಖ್ಯೆಯಲ್ಲೂ ಕೊರತೆ ಉಂಟಾಗುತ್ತದೆ.
ಬೊಜ್ಜು ಕೂಡ ವೀರ್ಯಾಣು ಕೊರತೆಗೆ ಪ್ರಮುಖ ಕಾರಣ. ಇದರಿಂದಾಗಿ ವೀರ್ಯಾಣುಗಳ ಸಂಖ್ಯೆ ಮತ್ತು ಟೆಸ್ಟೊಸ್ಟೆರಾನ್ ಮಟ್ಟ ಕುಸಿಯುತ್ತದೆ. ಇದರ ಹೊರತಾಗಿ ವ್ಯಾಯಾಮ ಮಾಡದೇ ಇರುವುದು ಅಥವಾ ಅತ್ಯಲ್ಪ ಪ್ರಮಾಣದಲ್ಲಿ ಮಾಡುವುದು ಕೂಡ ಕಾರಣವಾಗುತ್ತದೆ.
ಗಂಡಹೆಂಡತಿ ಇಬ್ಬರೂ ಮಕ್ಕಳಾಗಬೇಕೆಂದು ಗಂಭೀರವಾಗಿ ಪ್ರಯತ್ನ ನಡೆಸುವ ತನಕ ಬಹಳಷ್ಟು ಪುರುಷರಿಗೆ ತಾವು ನಪುಂಸಕರು ಎಂಬ ಸಂಗತಿ ತಿಳಿಯುವುದಿಲ್ಲ. ಇದಕ್ಕಾಗಿ ಗಂಡಹೆಂಡತಿ ಸ್ವಾಭಾವಿಕವಾಗಿ ಗರ್ಭ ಧರಿಸಲು 1 ವರ್ಷದ ಸಮಯವನ್ನಾದರೂ ತೆಗೆದುಕೊಳ್ಳಬೇಕು. ಆ ಬಳಿಕ ವೈದ್ಯರ ಸಲಹೆ ಪಡೆದುಕೊಳ್ಳಬೇಕು.
ಒಂದು ವೇಳೆ ಹೆಂಡತಿಯ ವಯಸ್ಸು 35 ಮೀರಿದ್ದಲ್ಲಿ, 6 ತಿಂಗಳ ಬಳಿಕ ವೈದ್ಯರ ಸಲಹೆಗೆ ಮುಂದಾಗಬೇಕು. ಪುರುಷರ ಪರೀಕ್ಷೆಗಳಲ್ಲಿ ವೀರ್ಯದ ವಿಶ್ಲೇಷಣೆ, ರಕ್ತ ಪರೀಕ್ಷೆ, ಅಲ್ಟ್ರಾಸೌಂಡ್ ಹಾಗೂ ಜೆನೆಟಿಕ್ ಟೆಸ್ಟ್ ಸೇರಿವೆ. ಸಮಸ್ಯೆಯ ಮೂಲದ ತನಕ ತಲುಪಲು ತಜ್ಞ ವೈದ್ಯರು 1 ಕ್ಕಿಂತ ಹೆಚ್ಚು ಪರೀಕ್ಷೆ ಮಾಡಲು ಸೂಚಿಸಬಹುದು.
ಚಿಕಿತ್ಸೆ
ಈಗ ಚಿಕಿತ್ಸೆಗಾಗಿ ಹಲವು ಪರ್ಯಾಯ ಉಪಾಯಗಳಿವೆ. ಅದರಲ್ಲಿ ಒಂದು ಕೃತಕ ಗರ್ಭಧಾರಣೆ. ಈ ಪ್ರಕ್ರಿಯೆಯಲ್ಲೂ ಆಯ್ಕೆ ಮಾಡಿದ ವೀರ್ಯಾಣುವನ್ನು ನೇರವಾಗಿ ಗರ್ಭಕೋಶದಲ್ಲಿ ಸೇರಿಸಲಾಗುತ್ತದೆ. ಎರಡನೇ ಪ್ರಕ್ರಿಯೆಯೆಂದರೆ, ಇನ್‌ವಿಟ್ರೊಫರ್ಟಿಲೈಝೇಶನ್ (ಐವಿಎಫ್). ಈ ಪ್ರಕ್ರಿಯೆ ಪ್ರಯೋಗಾಲಯದಲ್ಲಿ ನಡೆಸುವಂಥದ್ದು. ಮಹಿಳೆಯ ಅಂಡಾಣುವನ್ನು ಪಡೆದುಕೊಂಡು ಅದನ್ನು ಒಂದು ಸುಸಜ್ಜಿತ ಲ್ಯಾಬ್‌ನಲ್ಲಿ ಪುರುಷನ ವೀರ್ಯಾಣುವಿನ ಜೊತೆ ಮಿಲನಗೊಳಿಸಲಾಗುತ್ತದೆ. ಬಳಿಕ ಮಹಿಳೆಯ ಗರ್ಭಕೋಶದಲ್ಲಿ ಸೇರಿಸಲಾಗುತ್ತದೆ.
ಇನ್ನೊಂದು ಬಗೆಯ ಚಿಕಿತ್ಸೆ ಎಂದರೆ ಇಂಟ್ರಾಮೈಟೊಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್ (ಐಸಿಎಸ್‌ಐ) ಬಳಕೆ. ಇದು ವಿಶಿಷ್ಟ ಪ್ರಕ್ರಿಯೆ. ವೀರ್ಯಾಣುಗಳ ಸಂಖ್ಯೆ ಅತ್ಯಂತ ಕಡಿಮೆ ಅಥವಾ ಏನೇನೂ ಇರುವುದಿಲ್ಲ ಅಂತಹ ಪುರುಷರಿಗೆ ಈ ಚಿಕಿತ್ಸೆ ಅನುಸರಿಸಲಾಗುತ್ತದೆ. ಪುರುಷನ ಅಸಹಜ ಗಾತ್ರದಲ್ಲಿರುವ ವೀರ್ಯಾಣುಗಳಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡಿ ನೇರವಾಗಿ ಲ್ಯಾಬ್‌ನಲ್ಲಿ ಅಂಡಾಣುವಿನಲ್ಲಿ ಸೇರಿಸಿ ಭ್ರೂಣ ಆಗುವಂತೆ ಮಾಡಲಾಗುತ್ತದೆ. ಇದು ಎಂತಹ ಒಂದು ಪ್ರಕ್ರಿಯೆ ಎಂದರೆ, ಇದರಲ್ಲಿ ವೀರ್ಯಾಣು ಚಲಿಸುತ್ತ ಅಂಡಾಣುವಿನತ್ತ ತಲುಪುವುದಾಗಲಿ ಅಂಡಾಣುವಿನ ಹೊರ ಕವಚವನ್ನು ಒಡೆದು ಒಳಗೆ ನುಗ್ಗುವ ಅವಶ್ಯಕತೆಯಾಗಲಿ ಇಲ್ಲ. ಇದರ ಪರಿಣಾಮವೆಂಬಂತೆ ಭ್ರೂಣ ಉತ್ಪತ್ತಿ ಪ್ರಕ್ರಿಯೆ ಸುಲಭವಾಗುತ್ತದೆ. ಈ ತಂತ್ರಜ್ಞಾನದ ಮುಖಾಂತರ ನಪುಂಸಕನಾಗಿರುವುದರ ಹೊರತಾಗಿ ಪುರುಷ ಜೈವಿಕವಾಗಿ ತನ್ನದೇ ಸಂತಾನದ ಪಿತೃ ಎನಿಸಿಕೊಳ್ಳಬಹುದು.
ಕೆಲವು ಪ್ರಕರಣಗಳಲ್ಲಿ ಗಂಡಹೆಂಡತಿ ಇಬ್ಬರಿಂದಲೂ ಗರ್ಭಧಾರಣೆ ಪ್ರಕ್ರಿಯೆ ಸಾಧ್ಯವೇ ಇಲ್ಲ ಅಥವಾ ಅಂಥವರು ಯಾವುದಾದರೂ ಆನುವಂಶಿಕ ರೋಗಗಳಿಂದ ಬಳಲುತ್ತಿದ್ದಲ್ಲಿ, ತಮ್ಮ ಈ ರೋಗ ತಮಗೆ ಹುಟ್ಟುವ ಮಗುವಿಗೆ ತಗುಲಬಾರದೆಂದು ಯೋಚಿಸುತ್ತಾರೆ. ಅಂತಹ ಸಂದರ್ಭದಲ್ಲಿ ದಾನಿಯ ವೀರ್ಯಾಣು ಪಡೆದು ಗರ್ಭಧಾರಣೆಯ ಪ್ರಕ್ರಿಯೆ ನೆರವೇರಿಸಲಾಗುತ್ತದೆ. ಇದರ ಹೊರತಾಗಿ ದಾನಿಯ ಅಂಡಾಣು ಪಡೆದು ಪ್ರಕ್ರಿಯೆ ನೆರವೇರಿಸಬಹುದಾಗಿದೆ.
ಗರ್ಭಧಾರಣೆಗೆ ಸರೋಗಸಿ ಅಂದರೆ ಬಾಡಿಗೆ ತಾಯಿಯ ನೆರವು ಕೂಡ ಪಡೆಯಬಹುದಾಗಿದೆ. ಪ್ರಯೋಗಶಾಲೆಯಲ್ಲಿ ಸೃಷ್ಟಿಸಲಾದ ಭ್ರೂಣವನ್ನು ಬಾಡಿಗೆ ತಾಯಿಯ ಗರ್ಭಕೋಶದಲ್ಲಿ ಸೇರಿಸಲಾಗುತ್ತದೆ.
ಭಾರತದಲ್ಲಿ ಈಗ ಮಕ್ಕಳಿಲ್ಲದ ದಂಪತಿಗಳಿಗೆ ಚಿಕಿತ್ಸೆ ನೀಡಲು ವಿಶ್ವ ಮಟ್ಟದ ಆಸ್ಪತ್ರೆಗಳ ಬಹುದೊಡ್ಡ ಜಾಲವಿದೆ. ಹೀಗಾಗಿ ಅಂಥ ದಂಪತಿಗಳ ಬಾಳಿನಲ್ಲಿ ಮಗುವಿನ ನಗು ಕೇಳಿಬರುತ್ತಿದೆ.
ಇತ್ತೀಚಿನ ದಿನಗಳಲ್ಲಿ ಬಂಜೆತನದ ಚಿಕಿತ್ಸೆಗಾಗಿ ಸಾಕಷ್ಟು ದಂಪತಿಗಳು ಬರುತ್ತಲೇ ಇದ್ದಾರೆ. ಸಮಸ್ಯೆ ಯಾರಿಗಿದೆ ಎಂಬ ಸಂಕೋಚ ಬಿಟ್ಟು ಚಿಕಿತ್ಸೆ ಪಡೆಯಿರಿ. ಒಳ್ಳೆಯ ಫಲಿತಾಂಶ ಪಡೆಯಬಹುದು.
– ಡಾ. ಸುಜಾತಾ ಆರ್. ಕೃಷ್ಣ
ನಪುಂಸಕತೆಗೆ ಸಂಭಾವ್ಯ ಕಾರಣಗಳು
– ಹಾರ್ಮೋನ್ ಅಸಮತೋಲನ.
– ಎಪಿಡಿಮಸ್ ಸೋಂಕು ಅಥವಾ ಟೆಸ್ಟಿಕಲ್ಸ್ ನಲ್ಲಿ ಸೋಂಕು.
– ಇಮ್ಯುನಿಟಿಯ ಸಮಸ್ಯೆಗಳು ಅಥವಾ ಸೋಂಕುಗಳು.
– ವೀರ್ಯಸ್ಖಲನದ ಸಮಸ್ಯೆಗಳು
– ಸ್ಯಾಲಿಪಿಕ್ ಡಿಸೀಸ್ ಅದು ಗ್ಲೂಟೇನ್ ಕುರಿತಂತೆ ಹೈಪರ್ ಸೆನ್ಸಿಟಿವ್ ಆಗಿರುತ್ತವೆ. ಗ್ಲೂಟೆನ್ ಫ್ರೀ ಆಹಾರಗಳನ್ನು ಬಳಸುವುದರಿಂದ ಬಹಳಷ್ಟು ಉಪಯೋಗ ಆಗುತ್ತದೆ.
– `ವೆರಿಕೋಸಿವ್’ ಎಂಬುದು ಸ್ಕ್ರೋಟಮ್ ನಲ್ಲಿ ನರಗಳು ಉಬ್ಬಿಕೊಂಡಿರುತ್ತವೆ. ಶಸ್ತ್ರಚಿಕಿತ್ಸೆ ಮುಖಾಂತರ ಇದನ್ನು ಸರಿಪಡಿಸಬಹುದಾಗಿದೆ.
– ಕ್ಯಾನ್ಸರ್ ಮತ್ತು ನಾನ್ ಮ್ಯಾಲಿಗ್ನಂಟ್ ಟ್ಯೂಮರ್.
ಔಷಧೋಪಚಾರ : ಟೆಸ್ಟೊಸ್ಟೆರಾನ್ ಬದಲಿಸುವ ಚಿಕಿತ್ಸೆ, ದೀರ್ಘಕಾಲದ ಅನಾಬೊಲಿಕ್ ಸ್ಟೆರಾಯ್ಡ್, ಕ್ಯಾನ್ಸರ್‌ನ ಔಷಧಿಗಳು ಆ್ಯಂಟಿಫಂಗಲ್ ಔಷಧಿಗಳು ಹಾಗೂ ಅಲ್ಸರ್‌ಗೆ ಉಪಯೋಗಿಸುವ ಔಷಧಿಗಳು.
ಜೀವನಶೈಲಿಯಲ್ಲಿ ಏರುಪೇರು : ಬೊಜ್ಜು, ಪರಿಸರ ಮಾಲಿನ್ಯ, ಔದ್ಯೋಗಿಕ ರಸಾಯನಿಕಗಳು, ವಾಯು ಮಾಲಿನ್ಯ, ಧೂಮಪಾನ, ದೀರ್ಘಕಾಲದಿಂದ ಒತ್ತಡದಲ್ಲಿರುವುದು ನಪುಂಸಕತೆಗೆ ಕಾರಣವಾಗಬಹುದು.
ಸ್ಖಲನದಲ್ಲಿ ವೀರ್ಯಾಣು ಇಲ್ಲದೆ ಇದ್ದಾಗ ಈ ಸಮಸ್ಯೆಯನ್ನು ಅಜುಸ್ಪರ್ಮಿಯಾ ಎಂದು ಹೇಳಲಾಗುತ್ತದೆ. ಇದು 2 ಪ್ರಕಾರದ್ದಾಗಿರುತ್ತದೆ.
ಅಬ್‌ಸ್ಟ್ರಕ್ಟಿವ್ ಅಜುಸ್ಪರ್ಮಿಯಾ : ಟೆಸ್ಟಿಸ್‌ನಲ್ಲಿ ವೀರ್ಯಾಣುಗಳೇನೊ ಉತ್ಪತ್ತಿಯಾಗುತ್ತಿರುತ್ತವೆ. ಆದರೆ ಅವನ್ನು ಸಾಗಿಸುವ ನಾಳ ಮುಚ್ಚಿಕೊಂಡಿರುವ ಕಾರಣದಿಂದ ಅವು ವೀರ್ಯದ ಜೊತೆ ಹೋಗುವುದಿಲ್ಲ. ಇಂತಹ ವ್ಯಕ್ತಿಗಳಿಗೆ ಶಸ್ತ್ರಚಿಕಿತ್ಸೆಯ ಮೂಲಕ ನೇರವಾಗಿ ವೀರ್ಯಾಣು ಪಡೆದು ಐವಿಎಫ್ ಪ್ರಕ್ರಿಯೆ ನೆರವೇರಿಸಲಾಗುತ್ತದೆ.
ನಾನ್ ಅಬ್‌ಸ್ಟ್ರಕ್ಟಿವ್ ಅಜುಸ್ಪರ್ಮಿಯಾ : ಟೆಸ್ಟಿಸ್‌ನಲ್ಲಿ ವೀರ್ಯಾಣುಗಳು ಉತ್ಪತ್ತಿ ಆಗುವುದೇ ಇಲ್ಲ. ಆಧುನಿಕ ಚಿಕಿತ್ಸೆಯಿಂದ ಗರ್ಭಧಾರಣೆ ಪ್ರಕ್ರಿಯೆ ನೆರವೇರಿಸಬಹುದು. ಆದರೆ ಗರ್ಭ ನಿಲ್ಲುವ ಸಾಧ್ಯತೆ ಕಡಿಮೆ.
ನಪುಂಸಕತೆಗೆ ಚಿಕಿತ್ಸೆ ಹಿಸ್ಟರಿ : ಕೌಟುಂಬಿಕ ಇತಿಹಾಸ ಅಂದರೆ ವ್ಯಕ್ತಿಯೊಬ್ಬನ ಸಮಸ್ಯೆಯ ಮೂಲ, ಈ ಮುಂಚೆ ಶಸ್ತ್ರಚಿಕಿತ್ಸೆ ಏನಾದರೂ ಆಗಿತ್ತಾ, ಬಳಸಿದ ಔಷಧಿಗಳ ಪಟ್ಟಿಯನ್ನು ಕಾಯ್ದಿಡಬೇಕು.
ದೈಹಿಕ ಪರೀಕ್ಷೆ : ದೈಹಿಕ ಸಮಸ್ಯೆಗಳ ಪರೀಕ್ಷೆ.
ರಕ್ತ ಪರೀಕ್ಷೆ : ಟೆಸ್ಟೊಸ್ಟೆರಾನ್ ಮತ್ತು ಎಫ್‌ಎನ್‌ಎಚ್ ಹಾರ್ಮೋನ್ ಮಟ್ಟದ ಪರೀಕ್ಷೆ.
ವೀರ್ಯ ವಿಶ್ಲೇಷಣೆ : ವೀರ್ಯದಲ್ಲಿರುವ ಸ್ಪರ್ಮಾಟಾರೋಲ್ಸ್ ಗಳ ಸಂಖ್ಯೆ
ಚಲನೆ : ವೀರ್ಯಾಣುಗಳ ರಚನೆ ಆಕಾರದ ವಿಶ್ಲೇಷಣೆ.
ಒಂದು ವೇಳೆ ವೀರ್ಯದಲ್ಲಿ ವೀರ್ಯಾಣುಗಳೇ ಇಲ್ಲದ್ದಿದ್ದ ಪಕ್ಷದಲ್ಲಿ ವೀರ್ಯವನ್ನು ಹೆಚ್ಚುವರಿ ವಿಶ್ಲೇಷಣೆಗೆ ಒಳಪಡಿಸಲಾಗುತ್ತದೆ. ಅದನ್ನು `ಪಿಲ್ಯಾಟ್ ಅನಾಲಿಸಿಸ್’ ಎಂದು ಹೇಳಲಾಗುತ್ತದೆ.